ಸ್ವಾತಂತ್ರ್ಯ - ನಿರ್ಬಂಧದ ನಡುವೆ ಮಾದ್ಯಮ

ಹಿಂದೆಯೂ ಈಗಲೂ ಪತ್ರಕರ್ತರ ವಿರುದ್ಧವೇ ಇರುವ ಸರ್ಕಾರ, ಪೊಲೀಸ್ ಮತ್ತು ರಾಜಕಾರಣಿಗಳು  

ಸ್ವಾತಂತ್ರ್ಯ - ನಿರ್ಬಂಧದ ನಡುವೆ ಮಾದ್ಯಮ

ಹಿಂದೆಯೂ ಈಗಲೂ ಪತ್ರಕರ್ತರ ವಿರುದ್ಧವೇ ಇರುವ ಸರ್ಕಾರ, ಪೊಲೀಸ್ ಮತ್ತು ರಾಜಕಾರಣಿಗಳು

ನಾನು 1988ರ ಮೊದಲ ಭಾಗದಲ್ಲಿ  ಉತ್ತರಾಖಂಡದಲ್ಲಿ ಸಂಶೋಧನೆ ನಡೆಸುತ್ತಿದ್ದಾಗ ಆ ಪ್ರದೇಶದ ದಿಟ್ಟ ಯುವ ಪತ್ರಕರ್ತರೊಬ್ಬರ ಹತ್ಯೆ ಸುದ್ದಿಯಾಗಿತ್ತು.

ಉಮೇಶ್ ದೊಭಾಲ್ ಎಂಬ ಈ ಪತ್ರಕರ್ತ ಮದ್ಯ ಮಾಫಿಯಾ, ಪೊಲೀಸ್, ಅಬಕಾರಿ ಇಲಾಖೆ ಮತ್ತು ಸ್ಥಳೀಯ ರಾಜಕಾರಣಿಗಳ ನಡುವಣ ಸಂಬಂಧದ ಬಗ್ಗೆ ಸರಣಿ ಲೇಖನಗಳನ್ನು ಪ್ರಕಟಿಸಿದ್ದರು. ಅಬಕಾರಿ ಗುತ್ತಿಗೆದಾರರು ಬಾಡಿಗೆ ಹಂತಕರ ಮೂಲಕ ಈ ಪತ್ರಕರ್ತನನ್ನು ಹತ್ಯೆ ಮಾಡಿದ್ದರು.

1988ರ ದ್ವಿತೀಯಾರ್ಧದಲ್ಲಿ ನಾನು ದೆಹಲಿಯಲ್ಲಿ ನೆಲೆಸಿ ಕೆಲಸ ಮಾಡುತ್ತಿದ್ದೆ. ಆ ಸಂದರ್ಭದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಹೊಸ ಮಸೂದೆಯೊಂದು ಲೋಕಸಭೆಯಲ್ಲಿ ಅಂಗೀಕಾರವಾಗಿ ದೊಡ್ಡ ವಿವಾದ ಸೃಷ್ಟಿಯಾಗಿತ್ತು.

ಬೊಫೋರ್ಸ್ ಹಗರಣವೂ ಸೇರಿದಂತೆ ಉನ್ನತ ಹಂತಗಳಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರದ ಬಗ್ಗೆ ಪ್ರಕಟವಾಗುತ್ತಿದ್ದ ಸರಣಿ ವರದಿಗಳಿಗೆ ಪ್ರತಿಕ್ರಿಯೆಯಾಗಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಮಸೂದೆಯನ್ನು ರೂಪಿಸಿತ್ತು.

‘ಮಾನಹಾನಿ’ಗೆ ಅತ್ಯಂತ ಜಿಗುಟು ವ್ಯಾಖ್ಯಾನ ನೀಡಿದ್ದ ಈ ಮಸೂದೆ, ಭ್ರಷ್ಟಾಚಾರ ಅಥವಾ ಇತರ ಅಪರಾಧ ಕೃತ್ಯಗಳ ಆರೋಪ ಹೊತ್ತಿರುವವರು ತಮ್ಮ ವಿರುದ್ಧದ ವರದಿ ಪ್ರಕಟವಾಗುವುದನ್ನು ತಡೆಯಲು ಸಾಧ್ಯವಾಗುವಂತೆ ಮಾಡುವ ಉದ್ದೇಶ ಹೊಂದಿತ್ತು.

ಪ್ರಕಟವಾದ ವರದಿಗೆ ಸಂಬಂಧಿಸಿ ವರದಿಗಾರರೊಬ್ಬರ ವಿರುದ್ಧ ದೂರು ದಾಖಲಾದರೆ ಆ ವರದಿಗಾರ ಮಾತ್ರವಲ್ಲದೆ ಪತ್ರಿಕೆಯ ಸಂಪಾದಕ, ಪ್ರಕಾಶಕ ಮತ್ತು ಮುದ್ರಕ ನ್ಯಾಯಾಲಯದಲ್ಲಿ ಹಾಜರಾಗುವಂತೆ ಮಾಡುವ ಹೊಸ ನಿಯಮವನ್ನು ಈ ಮಸೂದೆ ಹೊಂದಿತ್ತು.

ಉಮೇಶ್ ದೊಭಾಲ್ ಅವರ ಹಂತಕರನ್ನು ಬಂಧಿಸಿ ಕಾನೂನು ಕ್ರಮಕ್ಕೆ ಒಳಪಡಿಸಲಿಲ್ಲ. ಇದಕ್ಕೆ ಒಂದು ಕಾರಣ: ಹಾಗೆ ಮಾಡಲು ಪೊಲೀಸರು ಮತ್ತು ರಾಜಕಾರಣಿಗಳಿಗೆ ಆಸಕ್ತಿಯೇ ಇರಲಿಲ್ಲ. ಆದರೆ ರಾಜೀವ್ ಗಾಂಧಿ ನೇತೃತ್ವದ ಸರ್ಕಾರ ಲೋಕಸಭೆಯಲ್ಲಿ ಅಂಗೀಕರಿಸಿದ ಪತ್ರಿಕಾ ಮಸೂದೆಗೆ ಭಾರಿ ವಿರೋಧ ವ್ಯಕ್ತವಾಯಿತು. ದೇಶದಾದ್ಯಂತ ಪ್ರತಿಭಟನೆಗಳು ನಡೆದವು. ಹಾಗಾಗಿ ರಾಜ್ಯಸಭೆಯಲ್ಲಿ ಮಂಡಿಸುವುದಕ್ಕೆ ಮುನ್ನವೇ ಈ ಮಸೂದೆಯನ್ನು ವಾಪಸ್ ಪಡೆಯಲಾಯಿತು.

ಈ ಹೊತ್ತಿಗಾಗಲೇ ನಾನು ಪತ್ರಿಕೆಗಳಲ್ಲಿ ಬರೆಯಲು ಆರಂಭಿಸಿದ್ದರಿಂದ ಈ ಎಲ್ಲ ಘಟನೆಗಳು ನನಗೆ ಅತ್ಯಂತ ಸ್ಪಷ್ಟವಾಗಿ ನೆನಪಿವೆ. ಇವು ಈಗ ಮತ್ತೆ ನೆನಪಾಗಲು ಕಾರಣ ಒಂದರ ನಂತರ ಒಂದರಂತೆ ನಡೆದ ಎರಡು ಘಟನೆಗಳು: ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಪತ್ರಕರ್ತರೊಬ್ಬರ ಹತ್ಯೆಯಾಗಿದೆ ಮತ್ತು ಕೇಂದ್ರ ಗೃಹ ಸಚಿವಾಲಯದ ಸೂಚನೆಯಂತೆ (ಸಾಮಾನ್ಯವಾಗಿ ಹಾಗೆಯೇ ಆಗುತ್ತದೆ) ದೆಹಲಿ ಪೊಲೀಸರು ಇನ್ನೊಬ್ಬ ಪತ್ರಕರ್ತನನ್ನು ಬಂಧಿಸಿದ್ದಾರೆ.

ಮೊದಲನೆಯ ಪ್ರಕರಣ ಉಮೇಶ್ ದೊಭಾಲ್ ಅವರ ಹತ್ಯೆ ಪ್ರಕರಣದಂತೆಯೇ ಇದೆ. ರಾಜದೇವ್ ರಂಜನ್ ಎಂಬ ಪತ್ರಕರ್ತ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಬಾಡಿಗೆ ಹಂತಕರು ಅವರನ್ನು ಗುಂಡಿಟ್ಟು ಕೊಂದಿದ್ದಾರೆ.

ಬಿಹಾರದ ಈ ಭಾಗದಲ್ಲಿ ಪಾತಕಿಗಳು, ಪೊಲೀಸರು ಮತ್ತು ರಾಜಕಾರಣಿಗಳ ನಡುವಣ ನಂಟು ಎಷ್ಟು ನಿಕಟವಾಗಿದೆ ಎಂದರೆ ಹಂತಕರು ಪತ್ತೆಯಾಗುವ ಅಥವಾ ಬಂಧನಕ್ಕೆ ಒಳಗಾಗುವ ಸಾಧ್ಯತೆ ಇಲ್ಲವೇ ಇಲ್ಲ.

ಎರಡನೇ ಪ್ರಕರಣ ರಾಜೀವ್ ಗಾಂಧಿ ಅವರ ಪತ್ರಿಕಾ ಮಸೂದೆಯೊಂದಿಗೆ ಸಾಮ್ಯತೆ ಹೊಂದಿದೆ. ಇದು ಸರ್ಕಾರದ ಸೇಡಿನ ಮನೋಭಾವವನ್ನು ತೋರಿಸುವ ಪ್ರಕರಣ. ಆಯುಷ್ ಸಚಿವಾಲಯವನ್ನು ವಿಮರ್ಶಿಸಿ ವರದಿಯೊಂದನ್ನು ಈ ಪತ್ರಕರ್ತ ಪ್ರಕಟಿಸಿದ್ದರು.

ವರದಿಯನ್ನು ಪ್ರಕಟಿಸಿದ್ದ ಪತ್ರಿಕೆಯು ವರದಿಗೆ ಸಂಬಂಧಿಸಿದಂತೆ ಸ್ಪಷ್ಟೀಕರಣವನ್ನು ನೀಡುವಂತೆ ಸಚಿವಾಲಯಕ್ಕೆ ತಿಳಿಸಿತ್ತು. ಅದನ್ನು ಪೂರ್ತಿಯಾಗಿ ಪ್ರಕಟಿಸಲಾಗುವುದು ಎಂಬ ಭರವಸೆಯನ್ನೂ ನೀಡಿತ್ತು. ಆದರೆ, ವರದಿಗೆ ಸ್ಪಷ್ಟೀಕರಣ  ನೀಡದೇ ಅಥವಾ ಪತ್ರಕರ್ತ ಮತ್ತು ಪತ್ರಿಕೆಯ ವಿರುದ್ಧ ನ್ಯಾಯಾಲಯಕ್ಕೆ ಹೋಗುವ ಬದಲಿಗೆ ವರದಿಗಾರನನ್ನು ಬಂಧಿಸುವ ಕ್ರಮವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಇಷ್ಟು  ಮಾತ್ರವಲ್ಲದೆ, ಕೇಂದ್ರ ಸರ್ಕಾರ, ಅದರ ಸಚಿವಾಲಯಗಳು ಅಥವಾ ಅದರ ಸಚಿವರನ್ನು ವಿಮರ್ಶಿಸಿ ವರದಿಗಳನ್ನು ಬರೆಯಲು ಯೋಚನೆ ಮಾಡುತ್ತಿರುವ ಎಲ್ಲ ಪತ್ರಕರ್ತರಲ್ಲಿ ಭೀತಿ ಮೂಡಿಸುವುದು ಬಂಧನದ ಹಿಂದಿನ ಉದ್ದೇಶ ಎಂಬುದು ಸ್ಪಷ್ಟ.

ಭಾರತದಲ್ಲಿ ಪತ್ರಿಕೆ ಯಾವತ್ತೂ ಸಂಪೂರ್ಣ ಸ್ವಾತಂತ್ರ್ಯವನ್ನು ಹೊಂದಿರಲಿಲ್ಲ. ಕಳೆದ ಒಂದೆರಡು ದಶಕಗಳ ಅವಧಿಯಲ್ಲಿ ಮಾಧ್ಯಮ ಹೆಚ್ಚು ಹೆಚ್ಚು ನಿರ್ಬಂಧಗಳಿಗೆ ಒಳಗಾಗುತ್ತಿದೆ. ಕಳೆದ ತಿಂಗಳು ಪ್ರಕಟವಾದ ಜಾಗತಿಕ ಮಾಧ್ಯಮ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ 180 ದೇಶಗಳ ಪೈಕಿ ಭಾರತ 133ನೇ ಸ್ಥಾನ ಪಡೆದುಕೊಂಡಿದೆ.

ನಾವು ಪೂರ್ತಿ ಮೂರು ಸ್ಥಾನ ಮೇಲಕ್ಕೇರಿದ್ದೇವೆ (ಕಳೆದ ವರ್ಷ ಭಾರತದ ಸ್ಥಾನ 136 ಆಗಿತ್ತು) ಎಂದೂ, ಅತಿ ರಾಷ್ಟ್ರೀಯವಾದಿಗಳು ಅತಿಯಾಗಿ ದ್ವೇಷಿಸುವ ಪಾಕಿಸ್ತಾನ ಮತ್ತು ಚೀನಾ ನಮಗಿಂತಲೂ ಕೆಳಗಿವೆ ಎಂದೂ ಅಬ್ಬರದ ರಾಷ್ಟ್ರೀಯವಾದಿಗಳು ಖುಷಿ ಪಡುತ್ತಿರಬಹುದು. ಆದರೆ ಉಳಿದವರಿಗೆ ಈ ವಿಷಾದನೀಯ ಸ್ಥಾನ ಅಂತಹ ಖುಷಿಯನ್ನೇನೂ ನೀಡದು.

‘ಇತ್ತೀಚಿನ ತಿಂಗಳಲ್ಲಿ ಪತ್ರಕರ್ತರು ವಿಶೇಷವಾಗಿ ಬಲಪಂಥೀಯ ಗುಂಪುಗಳಿಂದ ಹಲವು ಬೆದರಿಕೆಗಳು ಮತ್ತು ದೈಹಿಕ ದಾಳಿಗಳಿಗೆ ಒಳಗಾಗಿದ್ದಾರೆ. ಈಗಿನ ಹಿಂದೂ ರಾಷ್ಟ್ರೀಯವಾದಿ ಸರ್ಕಾರದ ಆಡಳಿತದಲ್ಲಿ ಮಾಧ್ಯಮ ಸ್ವಾತಂತ್ರ್ಯದ ಬಗೆಗಿನ ಅನುಮಾನವನ್ನು ಇದು ಇನ್ನಷ್ಟು ಹೆಚ್ಚಿಸಿದೆ’ ಎಂದು ಭಾರತಕ್ಕೆ ಈ ಸ್ಥಾನ ನೀಡಿದ ವರದಿ ಹೇಳಿದೆ.

‘ಪ್ರಧಾನಿ ನರೇಂದ್ರ ಮೋದಿ ಅವರು ಈ ಬೆದರಿಕೆಗಳು ಮತ್ತು ಸಮಸ್ಯೆಗಳ ಬಗ್ಗೆ ಅಸಡ್ಡೆ ಹೊಂದಿದ್ದಾರೆ ಮತ್ತು ಪತ್ರಕರ್ತರನ್ನು ರಕ್ಷಿಸಲು ಯಾವುದೇ ವ್ಯವಸ್ಥೆ ಇಲ್ಲ’ ಎಂಬುದರತ್ತಲೂ ವರದಿ ಬೊಟ್ಟು ಮಾಡಿದೆ.

ನರೇಂದ್ರ ಮೋದಿ ಅವರು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆ ರಾಜ್ಯದಲ್ಲಿ ನೆಲೆಸಿದ್ದವರು ಅಥವಾ ಭೇಟಿ ನೀಡಿದ್ದವರಿಗೆ ಇದು ಅಚ್ಚರಿಯ ಸಂಗತಿಯಂತೆ ಕಾಣಿಸದು. ಮೋದಿ ಅವರ  ಆಗಿನ ಗೃಹ ಸಚಿವ ಮತ್ತು ಆಡಳಿತಾರೂಢ ಬಿಜೆಪಿಯ ಈಗಿನ ಅಧ್ಯಕ್ಷ ಅಮಿತ್ ಷಾ ಅವರು ಪತ್ರಕರ್ತರು ಎದುರಿಸುತ್ತಿರುವ ಬೆದರಿಕೆಗಳ ಬಗ್ಗೆ ಮೋದಿ ಅವರಿಗಿಂತಲೂ ಹೆಚ್ಚು ಅಸಡ್ಡೆ ಹೊಂದಿದ್ದಾರೆ ಮತ್ತು ಮಾಧ್ಯಮ ಸ್ವಾತಂತ್ರ್ಯಕ್ಕೆ ಇನ್ನೂ ಕಡಿಮೆ ಬದ್ಧತೆ ಹೊಂದಿದ್ದಾರೆ.

ನಿಜ ಹೇಳಬೇಕೆಂದರೆ ಇತರ ಪಕ್ಷಗಳು ಇದಕ್ಕಿಂತ ಉತ್ತಮ ಏನಲ್ಲ. ಈ ನಿಟ್ಟಿನಲ್ಲಿ ರಾಜೀವ್ ಗಾಂಧಿ ಅವರ ದಾಖಲೆಯನ್ನು ನಾನು ಈಗಾಗಲೇ ಇಲ್ಲಿ ಪ್ರಸ್ತಾಪಿಸಿದ್ದೇನೆ; ಅವರ ತಾಯಿ ಇಂದಿರಾ ಗಾಂಧಿ ಮಾಧ್ಯಮದ ಬಗ್ಗೆ ಹೊಂದಿದ್ದ ಅಸಡ್ಡೆ ಎಲ್ಲರಿಗೂ ತಿಳಿದಿರುವ ವಿಚಾರ (ಅದು ವ್ಯಾಪಕ ಪ್ರಚಾರ ಪಡೆದುಕೊಂಡ ವಿಚಾರವೂ ಹೌದು).

ಭಾರತ ಇನ್ನೂ ಬ್ರಿಟಿಷ್ ಆಡಳಿತದಲ್ಲೇ ಇದ್ದಾಗ ವಸಾಹತುಶಾಹಿ ವಿರುದ್ಧದ ಹೋರಾಟದ ಮುಂಚೂಣಿಯಲ್ಲಿದ್ದ ಕಾಂಗ್ರೆಸ್, ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ನಿರಂತರ ಹೋರಾಟ ನಡೆಸಿತ್ತು.

ಕಾಂಗ್ರೆಸ್‌ನ ಶ್ರೇಷ್ಠ ನಾಯಕರಾದ ತಿಲಕ್, ಗಾಂಧಿ, ನೆಹರೂ ಮತ್ತು ಇತರರು ಸ್ವತಃ ಸಂಪಾದಕರೂ, ಪತ್ರಕರ್ತರೂ ಆಗಿದ್ದರು. ಆದರೆ 1947ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ, ಅದರಲ್ಲೂ ವಿಶೇಷವಾಗಿ 1966ರಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾದ ನಂತರ, ಮುಕ್ತ ಮತ್ತು ಚಲನಶೀಲವಾದ ಪತ್ರಿಕಾ ರಂಗದ ಬದಲಿಗೆ ಹೇಳಿದಂತೆ ಕೇಳುವ ಮತ್ತು ರಾಜಿ ಸ್ವಭಾವದ ಪತ್ರಿಕಾ ರಂಗವನ್ನು ಬೆಳೆಸಲು ಪಕ್ಷ ಬಯಸಿತು.

ನಮ್ಮ ಪ್ರಾದೇಶಿಕ ಪಕ್ಷಗಳು ಈ ಬಗ್ಗೆ ಹೊಂದಿರುವ ಇತಿಹಾಸ ಇನ್ನೂ ಕೆಟ್ಟದಾಗಿದೆ. ಉಮೇಶ್ ದೊಭಾಲ್, ರಾಜದೇವ್ ರಂಜನ್ ಮತ್ತು ಅವರಂತಹ ಇತರ ಹಲವರ ಹತ್ಯೆಗಳಿಗೆ ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ ಮತ್ತು ಹತ್ಯೆ ಮಾಡುವ ಶಕ್ತಿಗಳೊಂದಿಗೆ ಸರ್ಕಾರಗಳ ಶಾಮೀಲಾಗುವಿಕೆಯೇ ಕಾರಣ. ಕಾನೂನು ಮತ್ತು ಸುವ್ಯವಸ್ಥೆ ರಾಜ್ಯದ ಪಟ್ಟಿಯಲ್ಲಿರುವ ವಿಷಯ. ಪತ್ರಕರ್ತರ ಮೇಲೆ ದಾಳಿ ನಡೆಸಿದವರನ್ನು ರಾಜ್ಯ ಮಟ್ಟದ ರಾಜಕಾರಣಿಗಳೇ ರಕ್ಷಿಸುತ್ತಾರೆ.

ಜಾಹೀರಾತು ನೀಡುವ ಮತ್ತು ನೀಡದಿರುವ ಅವಕಾಶ ಮಾಧ್ಯಮವನ್ನು ನಿಯಂತ್ರಿಸಲು ರಾಜ್ಯ ಸರ್ಕಾರಗಳು ವ್ಯಾಪಕವಾಗಿ ಬಳಸುವ ಒಂದು ಅಸ್ತ್ರ. ಪ್ರಾದೇಶಿಕ ಪತ್ರಿಕೆಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಮುಖ್ಯವಾಗಿ ಸರ್ಕಾರ ನೀಡುವ ನೇಮಕಾತಿ, ಅಭಿವೃದ್ಧಿ ಕಾಮಗಾರಿ ಟೆಂಡರ್ ಮುಂತಾದ ಜಾಹೀರಾತುಗಳನ್ನು ಅವಲಂಬಿಸಿವೆ.

ಈ ಪತ್ರಿಕೆಗಳು ರಾಜ್ಯ ಸರ್ಕಾರದ ಕೆಲಸಗಳ ಬಗ್ಗೆ ವಿಮರ್ಶಾತ್ಮಕವಾಗಿದ್ದರೆ, ಅದು ನ್ಯಾಯಬದ್ಧವಾಗಿದ್ದಾಗ ಕೂಡ ಈಗಾಗಲೇ ಪ್ರಕಟವಾಗಿರುವ ಜಾಹೀರಾತುಗಳ ಹಣ ಪಾವತಿಸಲು ವಿಳಂಬ ಮಾಡುವುದು ಅಥವಾ ಹೊಸ ಜಾಹೀರಾತುಗಳನ್ನು ನಿರಾಕರಿಸುವಂತಹ ಕ್ರಮಕ್ಕೆ ಒಳಗಾಗುತ್ತವೆ.

ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯ ಸರ್ಕಾರ ಮತ್ತು ಸರ್ಕಾರದ ಹೊರಗಿನವರಿಂದ ಬೆದರಿಕೆಗೆ ಒಳಗಾಗುತ್ತಲೇ ಬಂದಿದೆ. ಭಿನ್ನಮತ ಮತ್ತು ಮುಕ್ತ ಅಭಿವ್ಯಕ್ತಿಯನ್ನು ಹತ್ತಿಕ್ಕಲು ಸರ್ಕಾರ ಪುರಾತನ ಕಾಲದ ವಸಾಹತುಶಾಹಿ ಯುಗದ ಕಾನೂನುಗಳನ್ನು ಬಳಕೆ ಅಥವಾ ದುರ್ಬಳಕೆ ಮಾಡಿಕೊಳ್ಳುತ್ತದೆ.

ಭೂಗತ ಪಾತಕಿಗಳು, ಗಣಿ ಮಾಲೀಕರು, ಅಬಕಾರಿ ಗುತ್ತಿಗೆದಾರರು ಮತ್ತು ನಿರ್ಮಾಣ ಗುತ್ತಿಗೆದಾರರು ತಮ್ಮ ಅಪರಾಧ ಕೃತ್ಯಗಳು ಮತ್ತು ಕಾನೂನುಬಾಹಿರ ಕೆಲಸಗಳ ಬಗೆಗಿನ ವರದಿ ಪ್ರಕಟವಾಗದಂತೆ ನೋಡಿಕೊಳ್ಳಲು ಬೆದರಿಕೆ ಮತ್ತು ಹಿಂಸೆಯನ್ನು ಬಳಸುತ್ತಾರೆ. ಪೊಲೀಸ್ ಮತ್ತು ರಾಜಕೀಯ ವರ್ಗ ತಮ್ಮ ಬೆಂಬಲಕ್ಕಿವೆ ಎಂಬ ಧೈರ್ಯದಲ್ಲಿ ಅವರು ಇದನ್ನು ಮಾಡುತ್ತಾರೆ.

ಮಾಧ್ಯಮ ಸ್ವಾತಂತ್ರ್ಯವನ್ನು ನಿರಂತರವಾಗಿ ಹತ್ತಿಕ್ಕಲಾಗುವ ಸನ್ನಿವೇಶದಲ್ಲಿ ಇಂಗ್ಲಿಷ್ ಭಾಷಾ ಮಾಧ್ಯಮ ಸಾಮಾನ್ಯವಾಗಿ ತನಗೇನೂ ಆಗಿಲ್ಲ ಎಂಬ ನೆಮ್ಮದಿಯಲ್ಲಿರುತ್ತದೆ ಮತ್ತು ಕೆಲವೊಮ್ಮೆ ಅದರೊಂದಿಗೆ ಶಾಮೀಲಾಗುವುದೂ ಇದೆ.

ದೆಹಲಿ ಮತ್ತು ಮುಂಬೈಗಳಲ್ಲಿನ ಹವಾನಿಯಂತ್ರಿತ ಸ್ಟುಡಿಯೊಗಳ ಒಳಗಿರುವ ಸಂಪಾದಕರು ಮತ್ತು ನಿರೂಪಕರಿಗೆ ಭಾರತದಲ್ಲಿ ದಿನನಿತ್ಯ ಅನುಭವಿಸಬೇಕಾಗಿರುವ ಕಾಠಿಣ್ಯ ಮತ್ತು ಕ್ರೌರ್ಯದ ಅರಿವು ಇರುವುದಿಲ್ಲ.

ಭಾರತೀಯ ಭಾಷೆಗಳ ಮಾಧ್ಯಮಗಳಿಗಾಗಿ ಕೆಲಸ ಮಾಡುವ ತಮ್ಮ ಸಹೋದ್ಯೋಗಿಗಳು ಎದುರಿಸುವ ತೀವ್ರ ಕಷ್ಟಗಳು ಅವರಿಗೆ ಅರ್ಥವಾಗುವುದೂ ಇಲ್ಲ, ಅದನ್ನು ಅರ್ಥ ಮಾಡಿಕೊಳ್ಳಲು ಅವರು ಬಯಸುವುದೂ ಇಲ್ಲ.

ಬಸ್ತಾರ್‌ನಂತಹ ಸಂಘರ್ಷಪೀಡಿತ ಪ್ರದೇಶಗಳಲ್ಲಿನ ಪತ್ರಕರ್ತರು ಎದುರಿಸುವ ಕಿರುಕುಳ, ಆಯುಷ್ ಸಚಿವಾಲಯವನ್ನು ಟೀಕಿಸಿದ ಪತ್ರಕರ್ತನನ್ನು ಬಂಧಿಸಿದ ಸೇಡಿನ ಕ್ರಮ, ಜಾಗತಿಕ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ ಪಡೆದಿರುವ ಅತ್ಯಂತ ಕೆಳಗಿನ ಸ್ಥಾನ ಮತ್ತು ಇಂತಹ ಇತರ ವಿಚಾರಗಳು ಸುದ್ದಿ ವಾಹಿನಿಗಳ ‘ಪ್ರೈಮ್ ಟೈಮ್’ ಸುದ್ದಿಯಲ್ಲಿ ಯಾವತ್ತೂ ಜಾಗ ಪಡೆಯುವುದೇ ಇಲ್ಲ.

ಭಾರತದ ಪ್ರಜಾಪ್ರಭುತ್ವದ ಭವಿಷ್ಯದ ಬಗ್ಗೆ ಕಾಳಜಿಯುಳ್ಳವರಿಗೆ ಮಾತ್ರ ಇದು ಅತ್ಯಂತ ಕಳವಳದ ವಿಚಾರ. ಒಂದು ದೇಶ ಮತ್ತು ಅದರ ಪ್ರಜೆಗಳ ಭದ್ರತೆ, ಸಮೃದ್ಧಿ ಮತ್ತು ಸಂತಸಕ್ಕೆ ಮಾಧ್ಯಮ ಸ್ವಾತಂತ್ರ್ಯ ಅತ್ಯಂತ ಅಗತ್ಯ. ಭಾರತ ಕಂಡ ಮೊದಲ ಶ್ರೇಷ್ಠ ಉದಾರವಾದಿ ರಾಮ್‌ಮೋಹನ್ ರಾಯ್ 1824ರಷ್ಟು ಹಿಂದೆಯೇ ಪತ್ರಿಕಾ ಸ್ವಾತಂತ್ರ್ಯದ ಮೇಲೆ ಹೇರಲಾದ ನಿರ್ಬಂಧಗಳನ್ನು ಖಂಡಿಸಿ ಬಂಗಾಳ ಸರ್ಕಾರಕ್ಕೆ ದೂರು ನೀಡಿದ್ದರು.

‘ಮಾನವನ ಅಪರಿಪೂರ್ಣತೆ ಮನವರಿಕೆ ಆಗಿರುವ ಮತ್ತು ಜಗತ್ತಿನ ಶಾಶ್ವತ ಆಡಳಿತಗಾರನ ಬಗ್ಗೆ ಗೌರವ ಇರುವ ಪ್ರತಿಯೊಬ್ಬ ಉತ್ತಮ ಆಡಳಿತಗಾರನೂ ವಿಸ್ತಾರವಾದ ಸಾಮ್ರಾಜ್ಯವನ್ನು ನೋಡಿಕೊಳ್ಳುವಾಗ ಉಂಟಾಗಬಹುದಾದ ದೊಡ್ಡ ತಪ್ಪುಗಳ ಬಗ್ಗೆ ಅರಿವು ಹೊಂದಿರಬೇಕು;

ಹಾಗಾಗಿಯೇ ಮಧ್ಯಪ್ರವೇಶ  ಎಲ್ಲೆಲ್ಲಿ ಅಗತ್ಯ ಇದೆ ಎಂಬುದನ್ನು ಲಭ್ಯವಿರುವ ಮಾರ್ಗಗಳ ಮೂಲಕ ಗಮನಕ್ಕೆ ತರುವ ಪ್ರತಿ ವ್ಯಕ್ತಿಯ ಬಗ್ಗೆ ಕಾತರನಾಗಿರಬೇಕು. ಈ ಮಹತ್ವದ ಉದ್ದೇಶವನ್ನು ಈಡೇರಿಸಲು ಬಳಸಿಕೊಳ್ಳಬಹುದಾದ ಏಕೈಕ ಅತ್ಯಂತ ಪರಿಣಾಮಕಾರಿ ಸಾಧನವೇ ಅನಿರ್ಬಂಧಿತ ಪ್ರಕಟಣಾ ಸ್ವಾತಂತ್ರ್ಯ’ ಎಂದು ರಾಯ್ ಬರೆದಿದ್ದರು.

ಭಾರತ ಈಗ ಸ್ವತಂತ್ರ ಗಣರಾಜ್ಯ. ಜನರಿಂದ ಚುನಾಯಿತರಾದ ಪ್ರತಿನಿಧಿಗಳು ಈ ದೇಶವನ್ನು ಆಳುತ್ತಾರೆಯೇ ಹೊರತು ನಾಮಕರಣಗೊಂಡವರಲ್ಲ. ಹಾಗಾಗಿಯೇ ರಾಯ್ ಅವರ ಎಚ್ಚರಿಕೆ ಈಗ ಇನ್ನೂ ಹೆಚ್ಚು ಪ್ರಸ್ತುತವಾಗುತ್ತದೆ. ಮಮತಾ ಬ್ಯಾನರ್ಜಿ ಅವರು ತಮ್ಮ ಟೇಬಲಿನ ಮೇಲೆ ರಾಯ್ ಅವರ ಮಾತುಗಳನ್ನು ಚೌಕಟ್ಟು ಹಾಕಿಸಿ ಇರಿಸಬೇಕಿತ್ತು. ಇತರ ಎಲ್ಲ ಮುಖ್ಯಮಂತ್ರಿಗಳು ಮತ್ತು ಪ್ರಧಾನಿ ಕೂಡ ಹಾಗೆಯೇ ಮಾಡಬೇಕಿತ್ತು.

Comments
ಈ ವಿಭಾಗದಿಂದ ಇನ್ನಷ್ಟು
ಲೆನಿನ್‍ ಬದಲಿಗೆ ಭಗತ್‍ ಸಿಂಗ್‍ ಯಾಕಾಗದು?

ಗುಹಾಂಕಣ
ಲೆನಿನ್‍ ಬದಲಿಗೆ ಭಗತ್‍ ಸಿಂಗ್‍ ಯಾಕಾಗದು?

16 Mar, 2018
ಪ್ರಸಿದ್ಧಿಯ ಜತೆಗೇ ಇದೆ ವಿಶ್ವಾಸಾರ್ಹತೆಯ ಹೊಣೆ

ಗುಹಾಂಕಣ
ಪ್ರಸಿದ್ಧಿಯ ಜತೆಗೇ ಇದೆ ವಿಶ್ವಾಸಾರ್ಹತೆಯ ಹೊಣೆ

2 Mar, 2018
‘ಜೋಳಿಗೆದಾಸ’ ಅರ್ಥಶಾಸ್ತ್ರಜ್ಞನ ಜತೆಗೊಂದು ದಿನ

ಗುಹಾಂಕಣ
‘ಜೋಳಿಗೆದಾಸ’ ಅರ್ಥಶಾಸ್ತ್ರಜ್ಞನ ಜತೆಗೊಂದು ದಿನ

16 Feb, 2018
ಬುಡಕಟ್ಟು ಬದುಕಿಗಾಗಿ ಸೆಣಸಿದ ಆದಿವಾಸಿ

ಗುಹಾಂಕಣ
ಬುಡಕಟ್ಟು ಬದುಕಿಗಾಗಿ ಸೆಣಸಿದ ಆದಿವಾಸಿ

2 Feb, 2018
ಕೊಹ್ಲಿ: ಶ್ರೇಷ್ಠತೆ ಮೇಲೆ ಸೊಕ್ಕಿನ ನೆರಳು

ಗುಹಾಂಕಣ
ಕೊಹ್ಲಿ: ಶ್ರೇಷ್ಠತೆ ಮೇಲೆ ಸೊಕ್ಕಿನ ನೆರಳು

19 Jan, 2018