193 ಪ್ರದರ್ಶನ ಪೂರೈಸಿದ ದತ್ತಮೂರ್ತಿ ಭಟ್ಟರ ‘ಜಗಜ್ಯೋತಿ ಬಸವೇಶ್ವರ ಚರಿತೆ’

ಯಕ್ಷಗಾನ ಪ್ರಸಂಗಗಳಿಗೆ ವಚನಗಳ ಬೆಸುಗೆ

ಶಿವಮೊಗ್ಗ ನಗರದ ಡಿವಿಎಸ್ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕ ವಿದ್ವಾನ್‌ ದತ್ತಮೂರ್ತಿ ಭಟ್ ಅವರು ಸಮಾನತೆಯ ಹರಿಕಾರ ಬಸವಣ್ಣನವರ ಜೀವನ ಚರಿತ್ರೆ, ವಚನ ಮಾಲಿಕೆ, ಬಸವತತ್ವ ಒಳಗೊಂಡ ವಿಚಾರಗಳನ್ನು ಯಕ್ಷಗಾನ ಪ್ರಸಂಗಕ್ಕೆ ಅಳವಡಿಸಿ, ನಾಡಿನ ಮೂಲೆ ಮೂಲೆಯಲ್ಲೂ ಪ್ರದರ್ಶನ ನೀಡಿದ್ದಾರೆ.

ಯಕ್ಷಗಾನ ಪ್ರಸಂಗಗಳಿಗೆ ವಚನಗಳ ಬೆಸುಗೆ

ಶಿವಮೊಗ್ಗ: ನಗರದ ಡಿವಿಎಸ್ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕ ವಿದ್ವಾನ್‌ ದತ್ತಮೂರ್ತಿ ಭಟ್ ಅವರು ಸಮಾನತೆಯ ಹರಿಕಾರ ಬಸವಣ್ಣನವರ ಜೀವನ ಚರಿತ್ರೆ, ವಚನ ಮಾಲಿಕೆ, ಬಸವತತ್ವ ಒಳಗೊಂಡ ವಿಚಾರಗಳನ್ನು ಯಕ್ಷಗಾನ ಪ್ರಸಂಗಕ್ಕೆ ಅಳವಡಿಸಿ, ನಾಡಿನ ಮೂಲೆ ಮೂಲೆಯಲ್ಲೂ ಪ್ರದರ್ಶನ ನೀಡಿದ್ದಾರೆ.

ಅಂತಹ ಅಪರೂಪದ ಪ್ರಸಂಗ 193 ಪ್ರದರ್ಶನ ಪೂರೈಸಿ, ದ್ವಿಶತಕದತ್ತ ಸಾಗಿದೆ. ‘ಎತ್ತಣ ಮಾಮಾರ, ಎತ್ತಣ ಕೋಗಿಲೆ, ಸಮುದ್ರದ ಉಪ್ಪು–ಬೆಟ್ಟದ ನೆಲ್ಲಿ, ಎತ್ತಣದಿಂದೆತ್ತ  ಸಂಬಂಧವಯ್ಯ...’

ಎನ್ನುವಂತೆ ಮಲೆನಾಡು–ಕರಾವಳಿ ಭಾಗದ ಜನಪ್ರಿಯ ಯಕ್ಷಗಾನಕ್ಕೂ, ಉತ್ತರ ಕರ್ನಾಟಕದಲ್ಲಿ ಸಮಾನತೆಯ ಕಹಳೆ ಮೊಳೆಗಿಸಿದ 12ನೇ ಶತಮಾನದ ಕ್ರಾಂತಿಪುರುಷ ಬಸವಣ್ಣನ ವಚನ ಸಾಹಿತ್ಯಕ್ಕೂ ಎಲ್ಲಿಯ ಸಂಬಂಧ. ಆದರೂ, ಇಂತಹ ಸಂಬಂಧ ಬೆಸೆದವರು ನಗರದ ನಾಟ್ಯಶ್ರೀ ಕಲಾ ತಂಡದ ದತ್ತಮೂರ್ತಿ ಭಟ್‌.

12 ವರ್ಷಗಳಿಂದ ಯಕ್ಷಗಾನ ರಂಗಭೂಮಿಯಲ್ಲಿ ತಮ್ಮದೇ ಆದ ಧ್ಯೇಯೋದ್ದೇಶ ಇಟ್ಟುಕೊಂಡುಹಲವು ವಿಶಿಷ್ಟ ಪ್ರಯೋಗಗಳನ್ನು ಮಾಡಿದ್ದಾರೆ. ದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಇವರ ಅಭಿನಯದ ಯಕ್ಷಗಾನ ಪ್ರದರ್ಶನ ಕಂಡಿದೆ.

ದಶಾವತಾರದ ನಂತರದ ಪ್ರಯೋಗ ಗಳು: ಯಕ್ಷಗಾನ ಎಂದರೆ ಆರಂಭದ ದಿನಗಳಲ್ಲಿ ರಾಮಾಯಣ, ಮಹಾ ಭಾರತ, ಪೌರಾಣಿಕ ಕಥಾ ಪ್ರಸಂಗಗಳಿಗೆ ಸೀಮಿತವಾಗಿತ್ತು. ಕಾಲಾಂತರದಲ್ಲಿ ಕಾಲ್ಪನಿಕ ಕಥೆಗಳು ಸ್ಥಾನ ಪಡೆದವು. ಏಸುಕ್ರಿಸ್ತನ ಮಹಾತ್ಮೆಯೂ ಯಕ್ಷಗಾನ ಪ್ರಸಂಗವಾದುದು ಆಧುನಿಕ ಕಾಲ ಘಟ್ಟದ ಪರಿಣಾಮಕಾರಿ ಪ್ರಯೋಗ.
ಇಂತಹ  ವಿಭಿನ್ನ ಪ್ರಯೋಗಗಳಿಗೆ ಯಕ್ಷಗಾನ ರಂಗಭೂಮಿ ತೆರೆದುಕೊಳ್ಳು ವಾಗಲೇ ದತ್ತಮೂರ್ತಿ ಭಟ್ಟರು, ಬಸವಣ್ಣನ ವಚನ ಕ್ರಾಂತಿಯಿಂದ ಆಕರ್ಷಿತರಾದರು.

ಹೊಸತೋಟದ ಮಂಜುನಾಥ ಭಾಗವತರು ಅದಾಗಲೇ ಬಸವಣ್ಣನವರ ಪ್ರಸಂಗ ಬರೆದಿದ್ದರು. ಭಟ್ಟರು ಅದನ್ನು ಮಾರ್ಪಡಿಸಿ ರಂಗದ ಮೇಲೆ ತಂದು ಯಶಸ್ವಿಯಾದರು.
ಬೀದರ್‌ನಿಂದ ಬೆಂಗಳೂರಿನವರೆಗೆ: ಬಸವಣ್ಣನ ಬಾಲ್ಯ, ವಿದ್ಯಾಭ್ಯಾಸ, ಲಿಂಗ ಧಾರಣಾ ಶ್ರೇಷ್ಠತೆ, ಸ್ತ್ರೀ ಸಮಾನತೆ, ದಾಸೋಹ ಮಹತ್ವ, ಶಿವಾನುಭವ, ಜಾತಿ ನಾಶ ಕುರಿತ ‘ಜಗಜ್ಯೋತಿ ಬಸವೇಶ್ವರ ಚರಿತೆ’ ಬೀದರ್‌ನ ಬಾಲ್ಕಿಯಲ್ಲಿ ಮೊದಲ ಪ್ರದರ್ಶನ ಕಂಡಿತ್ತು. ಮೈಸೂರು, ಬೆಂಗಳೂರು, ಶಿವಮೊಗ್ಗ, ಕರಾವಳಿ ಸೇರಿ ದಂತೆ ರಾಜ್ಯದ ಎಲ್ಲ  ಮೂಲೆ ಮೂಲೆ ಗಳಲ್ಲೂ ಪ್ರದರ್ಶನ  ಕಂಡಿದೆ. ಮಹಾರಾಷ್ಟ್ರದಲ್ಲೂ ಪ್ರದರ್ಶನ ಕಂಡ ಹೆಗ್ಗಳಿಕೆಯಿದೆ.

ನಾಡಿನ ಗಣ್ಯರ ಮೆಚ್ಚುಗೆ: ಸಾಹಿತಿ ಎಂ.ಎಂ.ಕಲಬುರ್ಗಿ, ಸಾಣೆಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ, ನಾಗ ನೂರು ರುದ್ರಾಕ್ಷಿ ಮಠದ ಸಿದ್ದರಾಮ ಸ್ವಾಮೀಜಿ ಮತ್ತಿತರರು ಪ್ರೋತ್ಸಾಹ ನೀಡಿದ ಕಾರಣ ಈ ಬಸವ ಯಕ್ಷಗಾನ ಉತ್ತರ ಕರ್ನಾಟಕದ ಮನೆಮಾತಾಗಿದೆ.

ಪುರೋಹಿತಶಾಹಿ ಕುಡಿಯ ಸಾಮಾಜಿಕ ತುಡಿತ: ಜಿಲ್ಲೆಯ ತಾಳಗುಪ್ಪ ಸಮೀಪದ ಬಂಜಿಗಾರುವಿನ ಪುರೋಹಿತಶಾಹಿ ಕುಟುಂಬದ ದತ್ತಮೂರ್ತಿ ಅವರು ಬಾಲ್ಯದಲ್ಲಿ ವೇದಮಂತ್ರ ಕಲಿತರು. ಶಾಲೆ ಮಟ್ಟಿಲು ಏರುವ ಮುನ್ನವೇ ತಂದೆ ಲಕ್ಷ್ಮಿನಾರಾಯಣ ಭಟ್ಟರು  ಮೃತ ಪಟ್ಟ ಕಾರಣ ಪರಿಚಯಸ್ಥರ ಮನೆಗಳಲ್ಲಿ ವಾರಾನ್ನ ಮಾಡಿಕೊಂಡು ಬೆಳೆದ ದತ್ತಮೂರ್ತಿ ಸಮಾಜದ ಅನುಕಂಪ ಹಾಗೂ ತಾತ್ಸಾರಗಳ ಗೊಂದಲಗಳನ್ನೇ ಛಲವಾಗಿಸಿಕೊಂಡು ಬೆಳೆದರು. ಅದೇ ಮುಂದೆ ಬಸವಣ್ಣನವರ ವಿಚಾರಧಾರೆ ಗಳತ್ತ ಆಕರ್ಷಿತವಾಗಲು ಕಾರಣವಾ ಯಿತು. ಸ್ವತಃ ಅವರೇ ಬಸವಣ್ಣನ ಪಾತ್ರ ಹಾಕಿದರು. ಉಳಿದ ಕಲಾವಿದರು ಸಾಥ್‌ ನೀಡಿದರು. ಭಾಗವತರಾದ ಕೊಳಗಿ ಕೇಶವ ಹೆಗಡೆ ಅವರು ಧ್ವನಿಯ ಧಾರೆ ಎರೆದರು.

ಆರಂಭದ ತೊಡಕುಗಳ ನಿವಾರಣೆ: ವಚನಗಳು ಯಕ್ಷಗಾನದ ಪ್ರಸಂಗ ಗಳಾದಾಗ ಉತ್ತರ ಕರ್ನಾಟಕದ ಜನರಿಗೆ ಸುಲಭವಾಗಿ ಅರ್ಥವಾಗಲಿಲ್ಲ. ಬರುಬರುತ್ತಾ ಸಣ್ಣಪುಟ್ಟ ಬದಲಾವಣೆ ಮಾಡುತ್ತಲೇ ಬದಲಾಗುತ್ತಾ ನಡೆದ ಯಕ್ಷಗಾನ ವೀಕ್ಷಿಸಲು ಜನ ಕಿಕ್ಕಿರಿದು  ಸೇರತೊಡಗಿದರು. ಮಠಗಳು, ಸಂಘ– ಸಂಸ್ಥೆಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡಿದ ಸಣ್ಣ ಆರ್ಥಿಕ ಸಹಾಯ ಬಳಸಿಕೊಂಡು ಪ್ರದರ್ಶನ ಮುಂದುವರಿದಿದೆ. ಯಕ್ಷಗಾನ ಮೋಹಕ್ಕೆ ಬಿದ್ದ ಭಟ್ಟರು ಸಾಕಷ್ಟು ಆರ್ಥಿಕ ನಷ್ಟವನ್ನೂ ಅನುಭವಿಸಿದ್ದಾರೆ. ದುಡಿದ ಸಂಬಳವನ್ನೂ ಪ್ರಸಂಗಗಳಿಗೇ ಸುರಿದಿದ್ದಾರೆ.

ಆರಂಭದಲ್ಲಿನ ಪ್ರಸಂಗಗಳಲ್ಲಿ ಬಸವಣ್ಣ ಬಿಜ್ಜಳನ ಎದುರಿಗೆ ಶಿರಬಾಗಿ ನಮಿಸುತ್ತಿದ್ದ ದೃಶ್ಯಕ್ಕೆ, ಗಣಪನ ಪೂಜೆಗಳಿಗೆ ಬಸವ ಅನುಯಾಯಿಗಳು ಆಕ್ಷೇಪ ಸಲ್ಲಿಸಿದ್ದರು. ನಂತರ ಕೆಲವು ಬದಲಾವಣೆಗಳಾದವು. ಗಣೇಶ ಸ್ತುತಿಯ ಜತೆಗೆ ‘ಬಸವಂ ಭಕ್ತಿಗೆ ಮೂಲ’ ಹಾಡುಗಳೂ ಸೇರ್ಪಡೆ ಆದವು’ ಎಂದು ಅವರು ಸ್ಮರಿಸುತ್ತಾರೆ.

ಇಷ್ಟೆಲ್ಲ ಸಾಧನೆ ಮಾಡಿದ ಭಟ್ಟರಿಗೆ ಕೆಲ ಮಠಗಳು, ಸಂಘಸಂಸ್ಥೆಗಳು ಕರೆದು ಸನ್ಮಾನಿಸಿವೆ. ಆದರೆ, ಸರ್ಕಾರ ಸೇರಿದಂತೆ ಯಾವುದೇ ಸಂಘ–ಸಂಸ್ಥೆ ಗಳಿಂದ ಅಧಿಕೃತ ಪ್ರಶಸ್ತಿ, ಪುರಸ್ಕಾರ ದೊರೆತಿಲ್ಲ.

‘ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ನಡೆಸುವ ಕಾಯಕ ಇದು. ಯಕ್ಷಗಾನ ನನ್ನ ಉಸಿರು. ಪ್ರಶಸ್ತಿ ಸೇರಿದಂತೆ ಯಾವುದರ ಬೆನ್ನು ಹತ್ತಿಲ್ಲ. ನಿರೀಕ್ಷೆ  ಮಾಡುವುದೂ ಇಲ್ಲ. ಜನರ ಪ್ರೀತಿ, ಪ್ರೋತ್ಸಾಹವೇ ನನಗೆ ಪ್ರಶಸ್ತಿ’ ಎನ್ನುತ್ತಾರೆ ದತ್ತಮೂರ್ತಿ ಭಟ್ಟರು.

ಸಾಧಕರಿಗೆ ಪ್ರಶಸ್ತಿಯ ಗೌರವ
ಯಕ್ಷಗಾನ ಹಾಗೂ ಶರಣರ ಚಿಂತನೆಗಳನ್ನು ಸಮಾಜಕ್ಕೆ ತಲುಪಿಸುವ ಕಾರ್ಯದಲ್ಲಿ ನಿರತರಾದ ಸಾಧಕರಿಗೆ ದತ್ತಮೂರ್ತಿ ಭಟ್ಟರೇ ಪ್ರತಿ ವರ್ಷ ‘ಯಕ್ಷ ಬಸವ’ ಪ್ರಶಸ್ತಿ ನೀಡುತ್ತಿದ್ದಾರೆ. ಪ್ರಶಸ್ತಿ ಫಲಕ ಹಾಗೂ ₹ 10 ಸಾವಿರ ನಗದು ಒಳಗೊಂಡಿದೆ.

‘ಯಕ್ಷ ಬಸವ’ ಪ್ರಶಸ್ತಿ ಪಡೆದವರು
* ಏಣಗಿ ಬಾಳಪ್ಪ
* ಭದ್ರಗಿರಿ ಅಚ್ಯುತ ದಾಸ
* ಕೆ.ಎಸ್‌.ಎಲ್‌.ಸ್ವಾಮಿ
* ಚಿಟ್ಟಾಣಿ ರಾಮಚಂದ್ರ ಹೆಗಡೆ
* ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀ
* ಉಡುಪಿ ಯಕ್ಷಗಾನ ಕೇಂದ್ರ

Comments
ಈ ವಿಭಾಗದಿಂದ ಇನ್ನಷ್ಟು

ಶಿಕಾರಿಪುರ
ಮೇ 5ಕ್ಕೆ ನರೇಂದ್ರ ಮೋದಿ ಶಿವಮೊಗ್ಗಕ್ಕೆ

ಚುನಾವಣೆಯಲ್ಲಿ 50 ಸಾವಿರ ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸಲು ಕಾರ್ಯತಂತ್ರ ರೂಪಿಸಬೇಕು ಎಂದು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕರೆ ನೀಡಿದರು. ...

26 Apr, 2018
 ಮತದಾರರಿಗೆ ಪ್ರೇರಣೆ ನೀಡುವ ಗೋಡೆ ಬರಹಗಳು

ಶಿವಮೊಗ್ಗ
ಮತದಾರರಿಗೆ ಪ್ರೇರಣೆ ನೀಡುವ ಗೋಡೆ ಬರಹಗಳು

26 Apr, 2018
ಇತಿಹಾಸ ನಿರ್ಮಿಸಲಿದೆ ಬಾದಾಮಿ ಫಲಿತಾಂಶ

ಶಿವಮೊಗ್ಗ
ಇತಿಹಾಸ ನಿರ್ಮಿಸಲಿದೆ ಬಾದಾಮಿ ಫಲಿತಾಂಶ

26 Apr, 2018
ನಾಮಪತ್ರ ಹಿಂಪಡೆಯಲು 27 ಕಡೆ ದಿನ

ಶಿವಮೊಗ್ಗ
ನಾಮಪತ್ರ ಹಿಂಪಡೆಯಲು 27 ಕಡೆ ದಿನ

25 Apr, 2018
ದೇವರ ಹೆಸರಿನಲ್ಲಿ ಮುಗ್ಧರನ್ನು ತುಳಿಯುವ ಪ್ರಯತ್ನ

ಶಿವಮೊಗ್ಗ
ದೇವರ ಹೆಸರಿನಲ್ಲಿ ಮುಗ್ಧರನ್ನು ತುಳಿಯುವ ಪ್ರಯತ್ನ

25 Apr, 2018