ರಸಾಸ್ವಾದ

ಮಾವಿನ ಹಣ್ಣಿನ ಬಗೆಬಗೆ ಖಾದ್ಯಗಳು

‘ಖಾಂದಾನಿ ರಾಜಧಾನಿ’ ಥಾಲಿ ರೆಸ್ಟೊರೆಂಟ್‌ ಮಾವಿನ ಋತುವಿಗಾಗಿ ವಿಶೇಷ ಆಹಾರ ಮೇಳವನ್ನು ಆಯೋಜಿಸಿದೆ. ಜೂನ್‌ 15ರವರೆಗೆ ನಗರದಲ್ಲಿರುವ ‘ಖಾಂದಾನಿ ರಾಜಧಾನಿ’ ರೆಸ್ಟೊರೆಂಟ್‌ನ ಏಳು ಶಾಖೆಗಳಲ್ಲಿ ಮಾವಿನ ಬಗೆಬಗೆ ಖಾದ್ಯಗಳು ಲಭ್ಯವಿರುತ್ತವೆ.

ಖಾಂದಾನಿ ಥಾಲಿ

‘ಖಾಂದಾನಿ ರಾಜಧಾನಿ’ ಥಾಲಿ ರೆಸ್ಟೊರೆಂಟ್‌ ಮಾವಿನ ಋತುವಿಗಾಗಿ ವಿಶೇಷ ಆಹಾರ ಮೇಳವನ್ನು ಆಯೋಜಿಸಿದೆ. ಜೂನ್‌ 15ರವರೆಗೆ ನಗರದಲ್ಲಿರುವ ‘ಖಾಂದಾನಿ ರಾಜಧಾನಿ’ ರೆಸ್ಟೊರೆಂಟ್‌ನ ಏಳು ಶಾಖೆಗಳಲ್ಲಿ ಮಾವಿನ ಬಗೆಬಗೆ ಖಾದ್ಯಗಳು ಲಭ್ಯವಿರುತ್ತವೆ.

ಮಲ್ಲೇಶ್ವರದಲ್ಲಿನ ಮಂತ್ರಿಮಾಲ್‌ನ ಕೊನೆ ಅಂತಸ್ತಿನಲ್ಲಿನ ಗಿಜಿಗುಡುವ ಫುಡ್‌ಕೋರ್ಟ್‌ಗೆ ಅಡಿಯಿಟ್ಟಾಗ ನಡು ಮಧ್ಯಾಹ್ನ. ಹೊಟ್ಟೆ ಚುರುಗುಟ್ಟುತ್ತಿತ್ತು.
ಬಲಭಾಗದಲ್ಲಿರುವ  ‘ಖಾಂದಾನಿ ರಾಜಧಾನಿ’ ಹೋಟೆಲ್‌ ಒಳಹೊಕ್ಕಾಗ ಗುಲಾಬಿ ಪಕಳೆಯಿಂದ ಅಲಂಕಾರಗೊಂಡ ದೀಪ ಸ್ವಾಗತಿಸಿತು.

ಹೊರಗಡೆಯ ಗದ್ದಲಗಳಿಗಿಂತ ಹೋಟೆಲ್‌ ಒಳಗಿನ ವಾತಾವರಣ ತುಂಬ ಭಿನ್ನವಾಗಿತ್ತು. ಆಕರ್ಷಕ ಒಳಾಂಗಣ ವಿನ್ಯಾಸ ಕಣ್ಣಿಗೆ ಆಹ್ಲಾದಕರವಾಗಿದ್ದರೆ ಮೆಲುವಾಗಿ ತೇಲಿಬರುತ್ತಿದ್ದ ಪಾಶ್ಚಾತ್ಯ ಸಂಗೀತ ಕಿವಿಗೆ ಖುಷಿ ಕೊಡುತ್ತಿತ್ತು. ಅದಾಗಲೇ ಎಲ್ಲಾ ಟೇಬಲ್‌ಗಳು ಭರ್ತಿ ಆಗಿದ್ದವು.

ಕಾಯ್ದಿರಿಸದ ಟೇಬಲ್‌ ಮೇಲೆ ಕುಳಿತಾಗ ಅಲ್ಲಿನ ಮ್ಯಾನೇಜರ್‌ ಮಾಲತೇಶ್‌ ಅವರು ಬಂದು ‘ಜೈನ್‌ ಥಾಲಿ ಅಥವಾ ನಾನ್‌ ಜೈನ್‌ ಥಾಲಿಯಾ?’  ಎಂದು ಕೇಳಿದರು. ‘ನಾನ್‌ ಜೈನ್‌ ಥಾಲಿ’ ಆಯ್ದುಕೊಂಡಿದ್ದಾಯ್ತು.

ಎರಡು ನಿಮಿಷಗಳಲ್ಲಿ ಅಗಲವಾದ ಮೊಟ್ಟೆಯಾಕಾರದ ತಟ್ಟೆಯನ್ನು ತಂದಿಟ್ಟು ಸ್ಟಾರ್ಟರ್ಸ್‌ ಬಡಿಸಲು ಆರಂಭಿಸಿದರು. ಮಾವಿನಕಾಯಿಯ ಉಪ್ಪಿನಕಾಯಿ, ಮಾವು ಕೆಂಪು ಚಟ್ನಿ, ಮಾವು ಹಸಿ ಚಟ್ನಿ ಹೀಗೆ ರಾಜಸ್ತಾನಿ ಶೈಲಿಯ ಮೂರು- ನಾಲ್ಕು ಬಗೆಯ ಚಟ್ನಿಗಳ ರುಚಿ ವಿಭಿನ್ನವಾಗಿತ್ತು.

ಬಳಿಕ ಆಲೂಗಡ್ಡೆ, ಹಸಿರು ಮಾವಿನ ಚಟ್ನಿ, ಕಾಶ್ಮೀರ ಕೆಂಪು ಮೆಣಸು ಮಿಶ್ರಣ ಹಾಕಿ ಮಾಡಿದ ಬೋಂಡಾ ಕೇರಿ ತಿರಂಗಾ ಪ್ಯಾಟಿಕ್‌ ಅನ್ನು ಮಾವು ಸಾಸ್‌ ಹಾಗೂ ಮಾವಿನ ಕಾಯಿ ಸಮೋಸವನ್ನು  ಕೆಂಪು ಚಟ್ನಿ ಹಾಗೂ ಹಸಿ ಚಟ್ನಿ ಜೊತೆ ತಿನ್ನುತ್ತಿದ್ದರೆ ಅವು ಖಾಲಿಯಾಗಿದ್ದೇ ತಿಳಿಯಲಿಲ್ಲ.
ಅದಾದ ಮೇಲೆ ಸವಿದಿದ್ದು ಮಾವಿನ ರಸಾಯನ ಹಾಗೂ ಮಾವಿನ ಸಾಸ್‌ ಮಿಶ್ರಣದ ಮಾವು ಫಿಜ್ಜಾ ಡೋಕ್ಲಾ.

ಮುಖ್ಯ ಮೆನುವಿನಲ್ಲಿ ರಾಜಸ್ತಾನದ ಪ್ರಸಿದ್ಧ ಖಾದ್ಯ ಜೈಪುರಿ ಘಟ್ಟ (ಗೋಧಿ ಹಿಟ್ಟನ್ನು ತುಪ್ಪದಲ್ಲಿ ಹುರಿದು, ಬಳಿಕ ಉಂಡೆ ಮಾಡಿ ಮಸಾಲಾದಲ್ಲಿ ಬೇಯಿಸಿದ ಖಾದ್ಯ) ಜೊತೆ ಜೋಳದ ಪರೋಟ, ಪೂರಿ ಕಾಂಬಿನೇಷನ್‌ ಚೆನ್ನಾಗಿತ್ತು. ಪುಲ್ಕ, ಪೂರಿ ಜೊತೆಗೆ ಬಟರ್‌ ಪನೀರ್‌ ಮಸಾಲಾ, ಮಾವಿನ ಹಣ್ಣು ಮಸಾಲಾ, ಸಿಹಿ ಮಾವು ಖಾದ್ಯಗಳ ರುಚಿ ಹೊಸತೆನ್ನಿಸಿತು. 

ಬಳಿಕ ತಂದಿಟ್ಟ ರಾಜಸ್ತಾನದ ಕೋಬಾ ರೊಟ್ಟಿ ಜೊತೆಗೆ ಆಮ್‌ಕಾ ನುಂಜಿ (ಮತ್ತೊಂದು ಬಗೆಯ ಮಾವು ಖಾದ್ಯ) ಹಾಗೂ ಹೆಸರು ಬೇಳೆ ಮತ್ತು  ಅಕ್ಕಿಯಿಂದ ತಯಾರಿಸಿದ ಕಟಿಯವಾಡಿ ಕಚಡಿಗೆ ಫಿಜಿಟೊ (ಮಾವಿನ ಕಾಯಿಯ ಡಾಲ್), ಶ್ರುತಿ ಡಾಲ್‌ (ಮಾವಿನ ಹಣ್ಣಿನ ಸಿಹಿ ಡಾಲ್‌) ಉತ್ತಮ ಕಾಂಬಿನೇಷನ್‌. ಕೇರಿ ಮಾಲ್ಪುವಾವನ್ನು ಮ್ಯಾಂಗೊ ರಬ್ಡಿ  ಜೊತೆ ತಿನ್ನುವಾಗ ಅದು ವಿಶೇಷ ರುಚಿಯಿಂದ ಇಷ್ಟವಾಗುತ್ತದೆ.

ಇನ್ನು ಡ್ರಿಂಕ್ಸ್‌ನಲ್ಲಿ ಮಾವು ಲಸ್ಸಿ, ಮಾವಿನ ಕಾಯಿಯನ್ನು ಬೇಯಿಸಿ ಅದರ ತಿರುಳಿನಿಂದ ಹಿಚುಕಿ ಪುದೀನಾ, ಮಸಾಲಾ ಹಾಕಿದ ‘ಕೇರಿ ಪನ್ನಾ’ವನ್ನು ಮತ್ತೆ ಮತ್ತೆ ಕುಡಿಯಬೇಕೆನಿಸಿಸುತ್ತದೆ.

ಮಾವು ಅಡುಗೆ ಮೇಳದಲ್ಲಿ ಮಾವಿನ ಸೀಕರಣೆ, ಶ್ರೀಕಂಡ, ಪನೀರ್‌ ಕುರುಕುರೆ, ಮಾವಿನ ಕಾಯಿ ಹಲ್ವಾ ಬಾಯಿ ರುಚಿಯನ್ನು ಹೆಚ್ಚು ಮಾಡುತ್ತದೆ.  ರಾಜಸ್ತಾನದ ವಿಶೇಷಗಳಾದ ಮಾವಿನ ಸಹಿ ತುಕಡ್ಡ, ಆಮ್‌ರಸ, ಮ್ಯಾಂಗೊ ಜಿಲೇಬಿ, ಬಾದಾಮ್‌ ಹಲ್ವಾ,  ಕೇರಿ ಚನ್ನಾ ದಾಲ್ ಡೋಕ್ಲಾ, ಕೇರಿ ಸಮೋಸ ಸಬ್ಜಿ, ಮ್ಯಾಂಗೊ ಕೊಪ್ತ ಪಲಾವ್‌, ಮಲಬಾರಿ ಮ್ಯಾಂಗೊ ಕಢಿ, ಮಾವು ಪಚಡಿ, ಮಾವು ರೈತ, ಅಮ್ರಖಂಡಗಳ ಹೊಸರುಚಿಗಳನ್ನು ಸವಿಯಬಹುದು.

ಮಾವಿನ ಹಣ್ಣುಗಳ ವಿವಿಧ ತಿನಿಸುಗಳನ್ನು ಆಗಲೇ ಸವಿದದ್ದರಿಂದಲೋ ಏನೋ ಥಾಲಿಯಲ್ಲಿ ಕೊನೆಯಲ್ಲಿ ಬಂದ ಅನ್ನ, ಮೂಂಗ್‌ ಡಾಲ್‌ ಹಾಗೂ  ಕಾಳುಗಳ ಪಲ್ಯ ಅಷ್ಟೊಂದು ರುಚಿಸಲಿಲ್ಲ. ಅನ್ನ ರಸಂ, ಸಾಂಬಾರ್‌ ನಿರೀಕ್ಷಿಸಿದ್ದ ನಮಗೆ ಇದರಿಂದ ನಿರಾಶೆಯಾಯಿತು.

ಈ ಹೋಟೆಲ್‌ನಲ್ಲಿ ಗ್ರಾಹಕರ ಏಕಾಂತಕ್ಕೆ ಭಂಗ ಬರಬಾರದೆಂದು ಮ್ಯಾನೇಜರ್‌, ಬಡಿಸುವವರು ಪರಸ್ಪರ ಕೈ ಸನ್ನೆ ಮೂಲಕ ಸಂಜ್ಞೆ ಮಾಡಿಕೊಂಡು ಆರ್ಡರ್‌ ನೀಡುತ್ತಾರೆ.  ಕೈ ಬೆರಳುಗಳ ತೋರಿಸಿ ಥಾಲಿ, ಡ್ರಿಂಕ್ಸ್, ಸ್ವೀಟ್‌ ಎಂದು ಗುರುತಿಸಿಕೊಂಡು ಆಯಾ ಟೇಬಲ್‌ ಮುಂದೆ ಹಾಜರಾಗುತ್ತಾರೆ. ಹೋಟೆಲ್‌ನ ಮ್ಯಾನೇಜರ್‌ ಪ್ರತಿ ಟೇಬಲ್‌ ಗ್ರಾಹಕರ ಬಳಿ ಹೋಗಿ ಭಕ್ಷ್ಯಗಳ ವಿಶೇಷತೆಯನ್ನು ವಿವರಿಸುತ್ತಾರೆ.

ಪ್ರತಿ ಮಂಗಳವಾರ ಹ್ಯಾಪಿನೆಸ್‌ ಥಾಲಿಯನ್ನು ಖಾಂದಾನಿ ಪರಿಚಯಿಸಿದ್ದು. ಇದು ಒಬ್ಬರಿಗೆ ₹ 250. ಈ ಥಾಲಿಯು ಪ್ರತಿದಿನದ ಥಾಲಿಯಂತೆ ಇರುತ್ತದೆ. ಆದರೆ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಬೆಲೆ ಕಡಿಮೆ ಮಾಡಲಾಗಿದೆ ಎಂದು ಮಾಲತೇಶ್‌ ವಿವರಿಸಿದರು.

ಈ ಅಡುಗೆ ಮೇಳ ಜೂನ್‌ 15ರ ತನಕ ನಗರದಲ್ಲಿನ ಎಲ್ಲಾ ರಾಜಧಾನಿ ಖಾಂದಾನಿ ಶಾಖೆಗಳಲ್ಲಿ ನಡೆಯಲಿದೆ. ಪ್ರತಿದಿನ ಮೆನು ಬದಲಾವಣೆ  ಮಾವು ಅಡುಗೆ ಮೇಳದ ವಿಶೇಷತೆ. ದಮಾವಿನ 15ಕ್ಕೂ ಹೆಚ್ಚು ಭಕ್ಷ್ಯಗಳು ಥಾಲಿಯಲ್ಲಿರುತ್ತವೆ. 

ಮಂತ್ರಿಮಾಲ್‌ನಲ್ಲಿನ ‘ರಾಜಧಾನಿ ಖಾಂದಾನಿ’ಯಲ್ಲಿ ಅನುಭವಿ ಬಾಣಸಿಗ ಹೇಮ್‌ ಜೀ ಅವರು ಪ್ರತಿದಿನ ವಿಭಿನ್ನ ಭಕ್ಷ್ಯಗಳನ್ನು ಪರಿಚಯಿಸಲಿದ್ದಾರೆ. ಆದರೆ ಇಲ್ಲಿ ಬಹುತೇಕ ಖಾದ್ಯಗಳು ರಾಜಸ್ತಾನಿ ಶೈಲಿಯಾಗಿದ್ದರಿಂದ ಮುಖ್ಯ ಮೆನುವಿನಲ್ಲಿನ ಕೆಲ ಭಕ್ಷ್ಯಗಳು ದಕ್ಷಿಣ ಕರ್ನಾಟಕದವರಿಗೆ ರುಚಿಸದೇ ಇರಬಹುದು. ಅಲ್ಲದೇ ಎಲ್ಲ ಖಾದ್ಯಗಳೂ ಮಾವಿನ ಹಣ್ಣುಗಳದ್ದೇ ಆಗಿರುವುದರಿಂದ ಕೊನೆ ಕೊನೆಗೆ ನಾಲಿಗೆಯ ರುಚಿಗೆಟ್ಟಂತಾಗುವುದೂ ಸುಳ್ಳಲ್ಲ. 

ರೆಸ್ಟೊರೆಂಟ್‌: ಖಾಂದಾನಿ ರಾಜಧಾನಿ
ಖಾಂದಾನಿ ರಾಜಧಾನಿ ಇರುವ ಇತರ ಸ್ಥಳಗಳು: ಒರಾಯನ್‌ ಮಾಲ್‌, ಇಂದಿರಾ ನಗರ, ಜೆ.ಪಿ. ನಗರ, ರಾಯಲ್‌ ಮೀನಾಕ್ಷಿ ಮಾಲ್‌,ಫೋರಂ ಮಾಲ್‌, ಫೋರಂ ವ್ಯಾಲ್ಯೂ ಮಾಲ್, ಫಿನಿಕ್ಸ್‌ ಮಾರ್ಕೆಟ್‌ ಸಿಟಿ.

Comments
ಈ ವಿಭಾಗದಿಂದ ಇನ್ನಷ್ಟು
ಸಿಂಪಲ್ಲಾಗಿ ರವೆ ಇಡ್ಲಿ ಮಾಡಿ ನೋಡಿ!

ಪ್ರಜಾವಾಣಿ ರೆಸಿಪಿ
ಸಿಂಪಲ್ಲಾಗಿ ರವೆ ಇಡ್ಲಿ ಮಾಡಿ ನೋಡಿ!

19 Jul, 2017
ಬಿಸಿ ಬಿಸಿ ಈರುಳ್ಳಿ ದೋಸೆ !

ಪ್ರಜಾವಾಣಿ ರೆಸಿಪಿ
ಬಿಸಿ ಬಿಸಿ ಈರುಳ್ಳಿ ದೋಸೆ !

14 Jul, 2017
ರಾಗಿ ಮುದ್ದೆಗೆ ಬೇಕು ಎಲೆಕೋಸಿನ ಬಸ್ಸಾರು!

ಪ್ರಜಾವಾಣಿ ರೆಸಿಪಿ
ರಾಗಿ ಮುದ್ದೆಗೆ ಬೇಕು ಎಲೆಕೋಸಿನ ಬಸ್ಸಾರು!

12 Jul, 2017
ಬಾಯಲ್ಲಿ ಕರಗುವ ತರಕಾರಿ ಕಲ್ಮಿ ಕಬಾಬ್‌

ಪ್ರಜಾವಾಣಿ ರೆಸಿಪಿ
ಬಾಯಲ್ಲಿ ಕರಗುವ ತರಕಾರಿ ಕಲ್ಮಿ ಕಬಾಬ್‌

7 Jul, 2017
ಮುದ್ದೆಗೂ ಸೈ, ಅನ್ನಕ್ಕೂ ಸೈ ಮಜ್ಜಿಗೆ ಹುಳಿ!

ಪ್ರಜಾವಾಣಿ ರೆಸಿಪಿ
ಮುದ್ದೆಗೂ ಸೈ, ಅನ್ನಕ್ಕೂ ಸೈ ಮಜ್ಜಿಗೆ ಹುಳಿ!

4 Jul, 2017