ಧರ್ಮ ಸಂಕಟ ಹಾಗೂ ಬಲಪಂಥೀಯ ‘ಮಿಶ್ರಣ’

ಬಲಪಂಥವೆಂಬುದು ಒಂದು ನಿರ್ದಿಷ್ಟ ತಾತ್ವಿಕತೆಯೇ ಅಲ್ಲ. ಅದೊಂದು ಪ್ರತಿಕ್ರಿಯೆ ಅಷ್ಟೆ, ಸಿಟ್ಟಿನ ಪ್ರತಿಕ್ರಿಯೆ!

ಧರ್ಮ ಸಂಕಟ ಹಾಗೂ ಬಲಪಂಥೀಯ ‘ಮಿಶ್ರಣ’

ಬಲಪಂಥವೆಂಬುದು ಒಂದು ನಿರ್ದಿಷ್ಟ ತಾತ್ವಿಕತೆಯೇ ಅಲ್ಲ. ಅದೊಂದು ಪ್ರತಿಕ್ರಿಯೆ ಅಷ್ಟೆ, ಸಿಟ್ಟಿನ ಪ್ರತಿಕ್ರಿಯೆ!

ಧರ್ಮ ಮತ್ತು ರಾಜಕಾರಣಗಳ ನಡುವಣ ಸಂಬಂಧವನ್ನು ಸಮಕಾಲೀನ ಯುಗವು ವಿಭಿನ್ನ ರೀತಿಗಳಲ್ಲಿ ನಿರ್ವಹಿಸಿರುವುದನ್ನು ಕಾಣಬಹುದಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ, ಸಮತಾವಾದಿ ವ್ಯವಸ್ಥೆ, ಬಲಪಂಥೀಯ ವ್ಯವಸ್ಥೆ ಎಂದು ಇವುಗಳನ್ನು ಕರೆಯುವ ವಾಡಿಕೆಯಿದೆ.

ಬಲಪಂಥವು ಧರ್ಮ ಮತ್ತು ರಾಜಕಾರಣಗಳನ್ನು ಬೆರೆಸಿ ಬಳಸಲು ಬಯಸುತ್ತದೆ. ಎಡಪಂಥವು ಧರ್ಮವನ್ನು ದೂರ ಇಡಲು ಬಯಸುತ್ತದೆ. ಪ್ರಜಾಪ್ರಭುತ್ವವು ಮಧ್ಯಮ ಮಾರ್ಗವನ್ನು ಬಯಸುತ್ತದೆ.

ನಾವು, ಭಾರತೀಯರು ಪ್ರಜಾಪ್ರಭುತ್ವವನ್ನು ಮಾನ್ಯ ಮಾಡಿದೆವು. ಧರ್ಮ ಹಾಗೂ ರಾಜಕಾರಣಗಳ ನಡುವಿನ ಸಂಬಂಧದ ಸಮರ್ಥ ನಿರ್ವಹಣೆಗೆ ಪ್ರಜಾಪ್ರಭುತ್ವ ಸೂಕ್ತವಾದ ವ್ಯವಸ್ಥೆ ಎಂಬುದರಲ್ಲಿ ಎರಡು ಮಾತಿಲ್ಲ. ದುರಂತವೆಂದರೆ, ನಮ್ಮ ರಾಜಕೀಯ ವ್ಯವಸ್ಥೆಯೇ ಕುಸಿಯತೊಡಗಿದೆ.

ಪ್ರಜೆಗಳ ಪ್ರಭುತ್ವವಾಗಬೇಕಿದ್ದದ್ದು, ಭ್ರಷ್ಟ ರಾಜಕಾರಣಿಗಳು ಲಾಭಬಡುಕ ಕೈಗಾರಿಕೋದ್ಯಮಿಗಳು ಹಾಗೂ ಹೃದಯಹೀನ ಮಾರುಕಟ್ಟೆ ಶಕ್ತಿಗಳ ಜಂಟಿ ನಿರ್ವಹಣೆಯಲ್ಲಿ ಸಿಲುಕಿಕೊಂಡು ಅದು ಶಿಥಿಲವಾಗತೊಡಗಿದೆ.

ಇತ್ತ ಭಾರತೀಯ ಕಮ್ಯೂನಿಸ್ಟರು- ತಮ್ಮ ಜನಪರ ನಿಲುವಿನ ನಂತರವೂ ಧರ್ಮ ಭಾಷೆ ಸಂಸ್ಕೃತಿಗಳ ವಿಷಯದಲ್ಲಿ ಹಾಗೂ ಹಿಂಸೆಯ ವಿಷಯದಲ್ಲಿ ಡೋಲಾಯಮಾನ ನಿಲುವು ತಳೆದು ಜನರಿಂದ ದೂರವಾಗತೊಡಗಿದ್ದಾರೆ.

ಬಲಪಂಥವು ಪ್ರಜಾಪ್ರಭುತ್ವ ವ್ಯವಸ್ಥೆಯ ಒಳನುಸುಳಲು ಇದು ಹೇಳಿಮಾಡಿಸಿದ ಸಂದರ್ಭವಾಗಿದೆ. ಏನಿದು ಬಲಪಂಥವೆಂದರೆ? ಅದೇಕೆ ನುಸುಳಬಾರದು ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ? ಹಾಗೆ ನೋಡಿದರೆ, ಬಲಪಂಥವೆಂಬುದು ಒಂದು ನಿರ್ದಿಷ್ಟ ತಾತ್ವಿಕತೆಯೇ ಅಲ್ಲ.

ಅದೊಂದು ಪ್ರತಿಕ್ರಿಯೆ ಅಷ್ಟೆ, ಸಿಟ್ಟಿನ ಪ್ರತಿಕ್ರಿಯೆ! ಅಥವಾ ಪ್ರತಿಕ್ರಿಯೆಯನ್ನೇ ಸಂಘಟಿಸಿ ರೂಪಿಸಿದ ಒಂದು ರಾಜಕೀಯ ಪಕ್ಷ. ಹಾಗೆಂದೇ, ಬಲಪಂಥೀಯರನ್ನು ಪ್ರತಿಕ್ರಿಯಾವಾದಿಗಳು ಅಥವಾ ರಿಯಾಕ್ಷನರೀಸ್ ಎಂದು ಲೋಕ ಕರೆಯುವುದು.

ಹುಡುಕಿದರೆ ಪ್ರತಿಕ್ರಿಯೆಗೂ ಒಂದು ನಿಲುವಿದೆ. ಧಾರ್ಮಿಕ ಹಾಗೂ ಜನಾಂಗೀಯ ಪರಿಶುದ್ಧತೆಯ ಭ್ರಮೆಯನ್ನೇ ಒಂದು ತಾತ್ವಿಕ ನಿಲುವು ಎಂದು ಕರೆಯಬಹುದಾದರೆ, ಬಲಪಂಥವೂ ಒಂದು ತಾತ್ವಿಕ ನಿಲುವು ಉಳ್ಳದ್ದು ಎಂದು ಮಾನ್ಯ ಮಾಡಬಹುದಾಗಿದೆ. ಮಿಕ್ಕಂತೆ, ಅವರೂ ಸಹ ಯಂತ್ರನಾಗರಿಕರೇ ಹೌದು.

ಬಲಪಂಥವು ವೈರುಧ್ಯಗಳನ್ನು ನಿಗ್ರಹಿಸುವ ಬದಲು ಸಲಹುತ್ತದೆ. ಅನೇಕ ಬಾರಿ ಪ್ರೇರೇಪಿಸುತ್ತದೆ. ಉದಾಹರಣೆಗೆ, ನಮ್ಮ ದೇಶದ ಹಿಂದೂ– ಮುಸಲ್ಮಾನ ಜಗಳವನ್ನೇ ತೆಗೆದುಕೊಳ್ಳಿ. ಜಗಳವಿದೆ ನಿಜ. ಬಹಳ ಕಾಲದಿಂದಲೂ ಇದೆ ನಿಜ.

ಆದರೆ, ಪರಿಹಾರವಿರದ ಜಗಳವಿದು. ಒಟ್ಟಿಗೆ ಬದುಕಲೇಬೇಕಾದ ಅತ್ತೆ ಸೊಸೆಯರಂತೆ, ಅಣ್ಣ ತಮ್ಮಂದಿರಂತೆ, ಅಕ್ಕಪಕ್ಕದ ಮನೆಯವರಂತೆ, ಇದೂ ಸಹ ಪರಿಹಾರವಿರದ ಜಗಳ. ಜಗಳವಾಡದಿರುವುದೇ ಇಂತಹ ಜಗಳಗಳಿಗಿರುವ ಏಕಮಾತ್ರ ಪರಿಹಾರ. ಆದರೆ ಜಗಳಗಳು ಬಲಪಂಥೀಯರಿಗೆ ತುರಿಕೆಯಿದ್ದಂತೆ, ತುರಿಸದಿರಲಾಗದು!

ಮನುಷ್ಯರು ಬೇಕೆಂದೇ ಜಗಳವಾಡುತ್ತಾರೆಯೇ? ಹಾಗೆನ್ನಲಾರೆ. ತಿಳಿವಳಿಕೆಯಿರದೆ ಮಾಡುವ ಅಧ್ವಾನವಿದು. ಜರ್ಮನಿಯ ಕ್ರೈಸ್ತರು, ಲಕ್ಷ ಲಕ್ಷ ಯಹೂದ್ಯರ ಹತ್ಯೆಯನ್ನು ತಿಳಿದೂ ತಿಳಿದೂ ಮಾಡಿದರೇ? ಹಾಗೇನಿಲ್ಲ. ತಿಳಿವಳಿಕೆ ತಪ್ಪಿದರೆ, ನಾವೂ ಸಹ ಇಷ್ಟೇ ಘೋರವಾದ ಅಂತರ್‌ಧರ್ಮೀಯ ಹತ್ಯೆಗಳನ್ನು ಮಾಡಬಲ್ಲೆವು.

ಹೌದು! ಬಲಪಂಥೀಯ ಸಂಘಟನೆಯೆಂದರೆ ಹಳೆಯ ಜಗಳವೊಂದರ ಹೊಸ ಸಂಘಟನೆಯೇ ಸರಿ. ಸಂಘಟಿತ ಜಗಳಗಳು ಅಪಾಯಕಾರಿ. ಇಷ್ಟಕ್ಕೂ ಅವು ಸುಮ್ಮನೆ ಸಂಘಟನೆಯಾಗುವುದಿಲ್ಲ. ಅದರ ಹಿಂದೊಂದು ಆರ್ಥಿಕ ಕಾರಣವಿರುತ್ತದೆ.

ಅಥವಾ ಆರ್ಥಿಕ ಕುಸಿತದ ಕಾರಣವಿರುತ್ತದೆ. ಜೊತೆಗೆ, ಒಬ್ಬ ನಾಯಕನಿರುತ್ತಾನೆ. ಅಕರ್ಷಕ ಬಾಯಿಬಡುಕ! ಹೀಗೆ, ಎಲ್ಲವೂ ಕೂಡಿಬಂದಾಗ, ಶುದ್ಧ ಪರಂಪರೆಯೊಂದರಲ್ಲಿ ನಂಬಿಕೆಯುಳ್ಳ ಸುಲಭ ಜೀವಿಗಳು,

ಅವರನ್ನು ಮಧ್ಯಮ ವರ್ಗ ಎಂದು ಕೂಡ ಕರೆಯಲಾಗುತ್ತದೆ, ತಿಳಿದೂ ತಿಳಿದೂ ಕೊಲೆಗಡುಕರಾಗುತ್ತಾರೆ. ಆರಾಮ ಕುರ್ಚಿಗಳಲ್ಲಿ ಕುಳಿತು, ಕೈ ಕೊಳೆ ಮಾಡಿಕೊಳ್ಳದೆ, ಕೊಲೆಗಯ್ಯುತ್ತಾರೆ.

ಭಾರತವೂ ಸಹ ಕೊಲೆಗಡುಕ ರಾಷ್ಟ್ರವಾಗಬಲ್ಲುದೇ? ಯಾರು ಆರಂಭಿಸಿದರು, ಈ ದೇಶದಲ್ಲಿ ಬಲಪಂಥೀಯ ಪ್ರಕ್ರಿಯೆಯನ್ನು? ಪ್ರಜಾಪ್ರಭುತ್ವ ವ್ಯವಸ್ಥೆ ಶಿಥಿಲಗೊಳ್ಳುವ ಪ್ರಕ್ರಿಯೆಯು ಕಾಂಗ್ರೆಸ್ ಯುಗದ ಉತ್ತರಾರ್ಧದಲ್ಲಿಯೇ ಶುರುವಾಯಿತು. ಈಗ ಭಾರತೀಯ ಜನತಾ ಪಕ್ಷದ ಆಳ್ವಿಕೆಯಲ್ಲಿ ಅದು ಪಕ್ವಗೊಂಡಿದೆ ಹಾಗೂ ಬಲದತ್ತ ವಾಲಿಕೊಂಡಿದೆ.

ಮೇಲ್ಜಾತಿ ಮೇಲ್ವರ್ಗಗಳ ಸುಸಂಸ್ಕೃತರು, ಸನ್ಯಾಸಿಗಳು, ಮುಲ್ಲಾಗಳು, ಮಠಾಧೀಶರು, ಕೋರೆದಾಡೆಗಳನ್ನು ಪ್ರದರ್ಶಿಸತೊಡಗಿದ್ದಾರೆ. ಉದ್ಯಮಿಗಳು ಜಗಳದ ಸಂಘಟನೆಗೆ ಹಣದ ಹೊಡಿಕೆ ಮಾಡಿದ್ದಾರೆ.

ಬಲಪಂಥೀಯ ವಿಚಾರಗಳು ಸರಳೀಕರಿಸಿದ ವಿಚಾರಗಳು. ಒಂದಾನೊಂದು ಕಾಲದಲ್ಲಿ ದೇಶ ಹೀಗಿರಲಿಲ್ಲ, ಇಷ್ಟು ಹಾಳಾಗಿರಲಿಲ್ಲ, ಎಂಬ ಸರಳ ಹಳಹಳಿಕೆಯಂತೆ ಶುರುವಾಗುವ ಈ ವಿಚಾರಗಳು ಕಾಲ್ಪನಿಕ ಒಳಿತೊಂದರ ಸೃಷ್ಟಿಗೆ ಎಡೆಮಾಡಿಕೊಡುತ್ತವೆ.

ಒಂದಾನೊಂದು ಕಾಲದಲ್ಲಿ, ನಮ್ಮ ಧರ್ಮದಲ್ಲಿ ಹಾಗೂ ನಮ್ಮ ರಾಜ್ಯದಲ್ಲಿ ಒಳ್ಳೆಯ ರಾಜನಿದ್ದ, ಒಳ್ಳೆಯ ವ್ಯಾಪಾರಿಯಿದ್ದ ಹಾಗೂ ಒಳ್ಳೆಯ ಮಠಾಧೀಶನಿದ್ದ. ಮೂವರೂ ಸೇರಿ, ಜನಪ್ರಿಯ ಸಿನಿಮಾಗಳ ಮಾದರಿಯಲ್ಲಿ, ಒಳ್ಳೆಯ ಸಮಾಜವೊಂದನ್ನು ರೂಪಿಸಿದ್ದರು. ಈಗ ಸಾಬರೋ ಸಿಂಗರೋ ಯಹೂದ್ಯರೋ, ಯಾರೋ ಒಬ್ಬರು ಬಂದು, ಎಲ್ಲ ಹಾಳುಗೆಡವಿದರು ಎಂದು ಕಲ್ಪಿಸಿಕೊಳ್ಳಲಾಗುತ್ತದೆ.

ಸಾಬರೋ ಸಿಂಗರೋ ಯಹೂದ್ಯರೋ ಬರುವ ಮೊದಲೂ ಕೂಡ, ಒಂದಕ್ಕಿಂತ ಹೆಚ್ಚಿನ ಮಠಗಳು, ಒಂದಕ್ಕಿಂತ ಹೆಚ್ಚಿನ ನಂಬಿಕೆಗಳು, ಒಂದಕ್ಕಿಂತ ಹೆಚ್ಚಿನ ವ್ಯಾಪಾರಸ್ಥರು ಇದ್ದರು. ಅವರ ನಡುವೆ ಪೈಪೋಟಿಯಿತ್ತು.

ರಾಜ ಜಾಣನಿದ್ದರೆ, ಎಲ್ಲ ಮತ ಧರ್ಮ ಹಾಗೂ ವ್ಯಾಪಾರಿ ಆಸಕ್ತಿಗಳನ್ನು ಸಮಾನವಾಗಿ ನಿರ್ವಹಿಸುತ್ತಿದ್ದ. ದಡ್ಡನಿದ್ದರೆ, ತನ್ನ ಧರ್ಮ, ತನ್ನ ಮತ ಹಾಗೂ ತನ್ನ ವ್ಯಾಪಾರಿ ಆಸಕ್ತಿಗಳನ್ನು ಬಲವಂತದಿಂದ ಇತರರ ಮೇಲೆ ಹೇರಿ ಜಗಳ ತಂದಿಡುತ್ತಿದ್ದ.

ಈ ಸರಳ ಸತ್ಯವನ್ನು ನಾವು ಮರೆತು ಬಿಡುತ್ತೇವೆ. ಉದಾಹರಣೆಗೆ, ಬುದ್ಧನ ಅನುಯಾಯಿ ರಾಜ ಬಿಂಬಸಾರನನ್ನು ಅವನ ಮಗ ಅಜಾತಶತ್ರು ಕೊಲ್ಲಿಸಿದ, ವಿಕಾರ ರೀತಿಯಿಂದ ಕೊಲ್ಲಿಸಿದ. ಕಡೆಗೊಮ್ಮೆ ತನಗೇ ಹುಚ್ಚು ಹಿಡಿಯುವಂತಾದಾಗ, ಅಜಾತಶತ್ರು ಬಂದು ಬುದ್ಧನ ಕಾಲಿಗೆ ಬಿದ್ದ.

ಹಿಂದೂ ದೊರೆ ದುರ್ಯೋಧನನು, ಅಣ್ಣತಮ್ಮಂದಿರಿಂದ ರಾಜ್ಯ ಕಸಿದುಕೊಂಡು ತಾನೂ ನಾಶವಾದ ತನ್ನ ಪ್ರಜೆಗಳನ್ನೂ ನಾಶಮಾಡಿದ. ಮುಸಲ್ಮಾನ ದೊರೆ, ಆತ ಧರ್ಮಿಷ್ಟ ದೊರೆ, ಔರಂಗಜೇಬನು ಅಣ್ಣನನ್ನು ಹಿಂಸಿಸಿ ಕೊಂದ. ಇವೂ ಪುರಾಣದೊಳಗಿನ ಸತ್ಯಗಳೇ ಸರಿ. ಆದರೆ ಅಪ್ರಿಯ ಸತ್ಯಗಳನ್ನು ನಾವು ಮರೆತುಬಿಡುತ್ತೇವೆ.

ಗಾಂಧೀಜಿ ನೆನಪಾಗುತ್ತಾರೆ! ಧರ್ಮ ಮತ್ತು ರಾಜಕಾರಣಗಳ ನಡುವೆ ಸಂಬಂಧವಿದೆ ಎಂದು ಮಾನ್ಯ ಮಾಡಿದ್ದರು ಅವರು. ತಾನು ಸನಾತನಿ ಹಿಂದೂ ಎಂದು ಘೋಷಿಸಿಕೊಂಡೇ ರಾಜಕೀಯಕ್ಕಿಳಿದಿದ್ದರು. ಆದರೆ ತಿಳಿವಳಿಕೆಯ ಮಾತನ್ನಾಡಿದರು.

ಅವರ ಅಹಿಂಸೆ ಹಾಗೂ ಪರಧರ್ಮಸಹಿಷ್ಣುತೆಯ ತತ್ವಗಳು ಸರಳ ತಿಳಿವಳಿಕೆಯೇ ಆಗಿತ್ತು. ಎಲ್ಲರೂ ಒಟ್ಟಾಗಿ ಇರಲೇಬೇಕೆಂದಾದಾಗ ಈಶ್ವರನಲ್ಲಿಯೇ ಅಲ್ಲಾಹುವನ್ನೂ, ಕ್ರಿಸ್ತನನ್ನೂ, ಎಲ್ಲ ಸಂತರನ್ನೂ ಕಾಣು ಎಂದರು ಅವರು. ಎಲ್ಲ ಧರ್ಮಗಳೊಳಗೆ ಸಮಾನ ಸತ್ಯಗಳಿವೆ ಎಂದರು ಅವರು. ಕೆಲವು ಚಾರಿತ್ರಿಕ ಅಸಮಾನತೆಗಳು ಇದ್ದರೂ ಅವುಗಳನ್ನು ತಾಳಿಕೊಳ್ಳಬೇಕು ಎಂದರು.

ಸಾಮಾನ್ಯ ತಿಳಿವಳಿಕೆಯಿಂದ ಶುರುವಾಗುವ ಗಾಂಧಿ ಅವರ ರಾಜಕೀಯ ವಿಶ್ಲೇಷಣೆಯು, ನಿಧಾನವಾಗಿ ಮೈತೆರೆದುಕೊಳ್ಳುತ್ತ ಸಮಗ್ರವಾಗುತ್ತ ಹೋಗುತ್ತದೆ. ಉದಾಹರಣೆಗೆ, ‘ಹಿಂದ್ ಸ್ವರಾಜ್’ ಪುಸ್ತಕದಲ್ಲಿ ಅವರು ಸ್ವರಾಜ್ಯದ ವಿಶ್ಲೇಷಣೆ ಮಾಡುತ್ತಾರೆ. ಸ್ವರಾಜ್ಯವೆಂದರೆ ಹೋಂ-ರೂಲ್ ಹೌದು, ಜೊತೆಗೆ ಸ್ವ-ರಾಜ್ಯವೂ ಹೌದು ಎನ್ನುತ್ತಾರೆ. ಅರ್ಥಾತ್ ಆತ್ಮನಿಗ್ರಹವೂ ಹೌದು ಎನ್ನುತ್ತಾರೆ.

ಹೀಗೆ ಹೇಳಿ, ಧರ್ಮಕ್ಕೂ ರಾಜಕಾರಣಕ್ಕೂ ನಡುವೆ ಇರಬೇಕಾದ ಗುಣಾತ್ಮಕ ಸಂಬಂಧವನ್ನು ದೃಢೀಕರಿಸುತ್ತಾರೆ. ಹೋಂ-ರೂಲಿನ ಗಳಿಕೆಯು ರಾಜಕಾರಣವಾದರೆ, ಆತ್ಮನಿಗ್ರಹದ ಗಳಿಕೆಯು ಧರ್ಮಕಾರಣ ಎಂದೆನ್ನಬಹುದು ತಾನೆ? ಇವೆರಡೂ ಜೊತೆಜೊತೆ ಹೆಜ್ಜೆಯಿಕ್ಕಿ ನಡೆಯಬೇಕು ಎನ್ನುತ್ತಾರೆ ಗಾಂಧೀಜಿ. ಮುಂದುವರೆದು,

ಹಕ್ಕು-ಬಾಧ್ಯತೆ, ಆಳುವವರು-ಆಳಿಸಿಕೊಳ್ಳುವವರು, ಬಡವರು-ಶ್ರೀಮಂತರು, ಇವುಗಳ ನಡುವಿನ ಗುಣಾತ್ಮಕ ಸಂಬಂಧವನ್ನು ಕೂಡ ದೃಢೀಕರಿಸುತ್ತಾರೆ. ಆತ್ಮನಿಗ್ರಹವೆಂಬುದು ಒಬ್ಬ ದಲಿತನಿಗೂ ಇರಬೇಕು, ಆದರೆ ಬಹಳವಾಗಿ ಇರಬೇಕಾದದ್ದು ಆಳುವ ವರ್ಗಗಳಿಗೆ, ಶ್ರೀಮಂತರಿಗೆ ಎಂದವರು ಸಾರುತ್ತಾರೆ. ಇದು ಬುದ್ಧ ಹೇಳಿದ ಮಾರ್ಗ ಕೂಡ.

ರಾಜಕೀಯ ಹೋರಾಟದ ಜೊತೆಗೆ ಸರ್ವೋದಯ ಕಾರ್ಯಕ್ರಮ ಜೋಡಿಸುತ್ತಾರೆ. ಬ್ರಿಟಿಷರನ್ನು ದೇಶದಿಂದ ಓಡಿಸುವಷ್ಟೆ ಮುಖ್ಯವಾದದ್ದು ಗ್ರಾಮ ಸ್ವರಾಜ್ಯ, ಪಾನನಿರೋಧ, ಖಾದಿ ಕಾರ್ಯಕ್ರಮ, ದಲಿತರ ದೇವಸ್ಥಾನ ಪ್ರವೇಶ,

ಮಹಿಳೆಯರ ಹಕ್ಕುಸಾಧನೆ, ಇತ್ಯಾದಿಗಳು ಎಂದವರು ಸಾಧಿಸುತ್ತಾರೆ. ಜನರು ಒಪ್ಪಿಕೊಂಡಿದ್ದ ಜೋಡಣೆಯಿದು. ಹಾಗಾಗಿ ಅವಸರದಲ್ಲಿದ್ದ ಅನೇಕ ಯುವ ಕಾಂಗ್ರೆಸ್ಸಿಗರು ಸಹ ಅರೆಮನಸ್ಸಿನಿಂದ ಈ ಜೋಡಣೆಯನ್ನು ಒಪ್ಪಿಕೊಳ್ಳುತ್ತಾರೆ.

ಪ್ರಜಾಪ್ರಭುತ್ವ ವ್ಯವಸ್ಥೆ ಗ್ರಾಮಸ್ವರಾಜ್ಯವಾಗಿ ಮಾತ್ರವೇ ಸಾಧಿತವಾಗಬಲ್ಲದು ಎಂದು ಗಾಂಧೀಜಿ ನಂಬಿದ್ದರು. ಪ್ರಜಾಪ್ರಭುತ್ವವೇ ಏಕೆ, ಧರ್ಮವು ಕೂಡ ಸಾಧಿತವಾಗಬೇಕೆಂದರೆ ಗ್ರಾಮಸ್ವರಾಜ್ಯ ಬೇಕು ಎಂದವರು ನಂಬಿದ್ದರು. ಬಲಪಂಥೀಯ ನಾಯಕರಲ್ಲಿ ಈ ಗಾಢ ನಂಬಿಕೆಯಿಲ್ಲ, ಎಡಬಿಡಂಗಿತನವಿದೆ.

ಧರ್ಮವೆಂದರೆ ಸ್ವಧರ್ಮ, ಸ್ವರಾಜ್ಯವೆಂದರೆ ಸ್ವಧರ್ಮ-ರಾಜ್ಯ, ಸ್ವದೇಶಿಯೆಂದರೆ ಸ್ವಧರ್ಮಿ-ಯಂತ್ರನಾಗರಿಕತೆ ಎಂದು ಸರಳೀಕರಿಸುವ ಬಲಪಂಥೀಯರು, ಸಾಂಸ್ಥಿಕ ಸ್ವಧರ್ಮವೂ ಇರಲಿ ಸ್ಮಾರ್ಟ್‌ಸಿಟಿಯೂ ಇರಲಿ ಎನ್ನುತ್ತಾರೆ. ಮಾಲಟೋವಾ ಕಾಕ್‌ಟೇಲ್ ಎಂಬ ಹೆಸರಿನ ಆಸ್ಫೋಟಕದಂತೆ ಇದೆ ಈ ಬಲಪಂಥೀಯ ಮಿಶ್ರಣ!

ಗಾಂಧಿಯವರ ಧಾರ್ಮಿಕ ನಿಲುವು ಸರಳವ್ಯಾಖ್ಯೆಗೆ ಒಳಪಡುವಂತಹದ್ದಲ್ಲ. ಒಮ್ಮೆ ಒಬ್ಬ ಹಿಂದೂ ಸನ್ಯಾಸಿ ಗಾಂಧಿಯವರ ಬಳಿಗೆ ಬರುತ್ತಾನೆ. ಆಗಷ್ಟೇ ಆರಂಭವಾಗಲಿದ್ದ ಒಂದು ರಾಷ್ಟ್ರೀಯ ಚಳವಳಿಯಲ್ಲಿ ತಾನೂ ಭಾಗವಹಿಸುವ ಆಸಕ್ತಿ ವ್ಯಕ್ತಪಡಿಸುತ್ತಾನೆ.

ಗಾಂಧೀಜಿ, ‘ಕಾಷಾಯವಸ್ತ್ರ ಕಳಚಿ ಬಾ’ ಎನ್ನುತ್ತಾರೆ. ಕಾಷಾಯ ವಸ್ತ್ರ ತೆಗೆದಿಡಲಾಗದೆ ಆತ ಹಿಂದೆ ಸರಿಯುತ್ತಾನೆ. ಗಾಂಧಿಯವರ ಧಾರ್ಮಿಕತೆ, ಸರಳ ಬದುಕು, ಸತ್ಯನುಡಿ, ಅಪರಿಗ್ರಹ ಆತ್ಮನಿಗ್ರಹ ಇತ್ಯಾದಿ ‘ಮೂಲ’ ಆಶಯಗಳನ್ನು ಮಾತ್ರವೇ ಹೆಕ್ಕಿ ರೂಪಿಸಿಕೊಂಡದ್ದು ಹಾಗೂ ರಾಜಕೀಯ ಉಪಕರಣವಾಗಿ ಬಳಸಿಕೊಂಡದ್ದು.

ಗಾಂಧಿಯವರು ಧರ್ಮಕಾರಣಕ್ಕಾಗಿ ರಾಜಕಾರಣವನ್ನು ಬಳಸಿದರು. ಬಲಪಂಥೀಯರಂತೆ ರಾಜಕಾರಣಕ್ಕಾಗಿ ಧರ್ಮಕಾರಣವನ್ನು ಬಳಸಲಿಲ್ಲ. ಸರಳವಾಗಿ ಹೇಳಬೇಕೆಂದರೆ, ಮುಲ್ಲಾಗಳು ಪಾದ್ರಿಗಳು ಪೂಜಾರಿಗಳು ಮಾಡಲಾಗದ್ದನ್ನು ಒಬ್ಬ ರಾಜಕೀಯ ಕಾರ್ಯಕರ್ತ ಮಾಡಬೇಕೆಂದು ಅವರು ಬಯಸಿದರು. ಮುಲ್ಲಾ ಪಾದ್ರಿ ಪೂಜಾರಿಗಳಿಗಾದರೋ ಸಾಂಸ್ಥಿಕ ಧರ್ಮವೆಂಬ ಬೇಲಿ ಅಡ್ಡ ಬರುತ್ತದೆ.

ಬೇಲಿಯೊಳಗಿರುವುದು ಮಾತ್ರವೇ ಅವರ ಪಾಲಿನ ಸಮಾಜವಾಗಿರುತ್ತದೆ. ನಿಜವಾದ ರಾಜಕೀಯ ಕಾರ್ಯಕರ್ತನಿಗೆ ಯಾವ ಬೇಲಿಯೂ ಅಡ್ಡ ಬಾರದು, ಪಕ್ಷವೆಂಬ ಬೇಲಿಯೂ ಸೇರಿದಂತೆ, ಎಂದವರು ನಂಬಿದ್ದರು.

ರಚನಾತ್ಮಕ ಕಾರ್ಯಕ್ರಮಗಳ ಮೂಲಕ ವಿಧಾನಸೌಧ, ಪಾರ್ಲಿಮೆಂಟು, ಜಿಲ್ಲಾ ಕಚೇರಿ, ತಾಲ್ಲೂಕು ಕಚೇರಿ,  ಪೊಲೀಸ್‌ ಠಾಣೆಗಳಲ್ಲಿ ದೇವರನ್ನು ಸ್ಥಾಪಿಸಬಯಸಿದರು ಗಾಂಧೀಜಿ. ಬಲಪಂಥೀಯ ರಾಜಕಾರಣಿಗಳು ಮಠಾಧಿಪತಿಗಳನ್ನು ತೊಡೆಯಮೇಲೆ ಕೂರಿಸಿಕೊಂಡರು. ಇತ್ತ ತೊಡೆಯೂ ಗಲೀಜಾಯಿತು, ಅತ್ತ ತೊಡೆಯೇರಿದವರೂ ಗಲೀಜಾದರು!

Comments
ಈ ವಿಭಾಗದಿಂದ ಇನ್ನಷ್ಟು
ರಾಮಾಯಣವೆಂಬುದು ಎಡಪಂಥ

ಸಂಭಾಷಣೆ
ರಾಮಾಯಣವೆಂಬುದು ಎಡಪಂಥ

15 Mar, 2018
ವರ್ಗ ಸಂಘರ್ಷ ಹಾಗೂ ಧರ್ಮ

ಸಂಭಾಷಣೆ
ವರ್ಗ ಸಂಘರ್ಷ ಹಾಗೂ ಧರ್ಮ

1 Mar, 2018
ಇದು ಧರ್ಮಯುದ್ಧ... ಸಭ್ಯ ಸಂಸ್ಕೃತಿ

ಸಂಭಾಷಣೆ
ಇದು ಧರ್ಮಯುದ್ಧ... ಸಭ್ಯ ಸಂಸ್ಕೃತಿ

15 Feb, 2018
ಮಂಟೇಸ್ವಾಮಿಗಳ ಸಮಕಾಲೀನ ಮಹತ್ವ

ಸಂಭಾಷಣೆ
ಮಂಟೇಸ್ವಾಮಿಗಳ ಸಮಕಾಲೀನ ಮಹತ್ವ

1 Feb, 2018
ಕೈ ಉತ್ಪನ್ನಗಳ ಪರವಾದ ಚಳವಳಿ ಏಕೆ ಬೇಕು?

ಸಂಭಾಷಣೆ
ಕೈ ಉತ್ಪನ್ನಗಳ ಪರವಾದ ಚಳವಳಿ ಏಕೆ ಬೇಕು?

18 Jan, 2018