ಬಡತನ ನಿಜಕ್ಕೂ ನಿರ್ಮೂಲನೆ ಆದೀತೆ?

ನಾವು ನಿವಾರಿಸಬೇಕಿರುವುದು ಶ್ರೀಮಂತಿಕೆಯ ಅಟ್ಟಹಾಸವನ್ನು, ಜಾರಿಗೆ ತರಬೇಕಿರುವುದು ಸರಳವಾದ ಮತ್ತು ಸಣ್ಣದಾದ ಸಭ್ಯತೆಗಳನ್ನು. ಬಡತನದ ಹೆಸರಿನಲ್ಲಿ ನಿವಾರಿಸಲ್ಪಡುತ್ತಿರುವ ಸರಳಬದುಕು ರೋಗ ಖಂಡಿತಾ ಅಲ್ಲ.

ಬಡತನ ನಿಜಕ್ಕೂ ನಿರ್ಮೂಲನೆ ಆದೀತೆ?

ಬಡತನವನ್ನು ನಿಜಕ್ಕೂ ನಿರ್ಮೂಲನೆ ಮಾಡಲಾದೀತೆ?  ಖಂಡಿತ ಇಲ್ಲ. ಆಧುನಿಕ ಯುಗ ಪ್ರತಿಪಾದಿಸುತ್ತಿರುವ ಅತಿದೊಡ್ಡ ಸುಳ್ಳು, ಬಡತನ ನಿರ್ಮೂಲನೆ. ನಾವು ನಿವಾರಿಸಬೇಕಿರುವುದು ಶ್ರೀಮಂತಿಕೆಯ ಅಟ್ಟಹಾಸವನ್ನು, ಜಾರಿಗೆ ತರಬೇಕಿರುವುದು ಸರಳವಾದ ಮತ್ತು ಸಣ್ಣದಾದ ಸಭ್ಯತೆಗಳನ್ನು. ಬಡತನದ ಹೆಸರಿನಲ್ಲಿ ನಿವಾರಿಸಲ್ಪಡುತ್ತಿರುವ ಸರಳಬದುಕು ರೋಗ ಖಂಡಿತಾ ಅಲ್ಲ. ಬಡತನವೆಂಬ ರೋಗಿಷ್ಟ ದೇಹದ ಒಳಗಿರುವ ಗಟ್ಟಿಮುಟ್ಟಾದ ಜೀವ ಅದು. ದೇಹಕ್ಕೆ ಅಲ್ಲಲ್ಲಿ ರೋಗ ತಗುಲಿದೆ ನಿಜ, ಆದರೆ ಜೀವಕ್ಕೆ ತಗುಲಿಲ್ಲ.

ಬಡತನವನ್ನು ನಿವಾರಿಸುತ್ತೇವೆ ಎಂದು ಬೊಗಳೆ ಬಿಡುತ್ತಿದ್ದೇವೆ ನಾವು. ಸರ್ಕಾರಗಳಂತೂ ಚಿತ್ರ ವಿಚಿತ್ರವಾದ ಕಸರತ್ತುಗಳನ್ನು ನಡೆಸುತ್ತಿವೆ. ಬಡತನ ಹಾಗೂ ತತ್‌ಸಂಬಂಧಿ ಕಾಯಿಲೆಗಳ ನಿವಾರಣೆಗೆಂದು ಅವು, ಕಾಲಕಾಲಕ್ಕೆ ಕಾರ್ಯಕ್ರಮಗಳನ್ನು ಘೋಷಣೆ ಮಾಡಿ, ಅಪಾರ ಹಣ ಖರ್ಚು ಮಾಡುತ್ತವೆ. ಹೊಟ್ಟೆ ತುಂಬಿದ ರಾಜಕಾರಣಿಗಳು ಹೊಟ್ಟೆ ತುಂಬಿದ ಅಧಿಕಾರಿಗಳನ್ನು ಹಚ್ಚಿ, ನಿಗದಿತ ಸಮಯದಲ್ಲಿ ಹಾಗೂ ನಿರ್ದಿಷ್ಟ ಹೂಡಿಕೆಯ ಮೂಲಕ ಕಾರ್ಯಕ್ರಮ ನಡೆಸಿ, ನಿಗದಿ ಮುಗಿದ ದಿನವೇ ಯಶಸ್ಸನ್ನು ಘೋಷಿಸಿಬಿಡುತ್ತವೆ; ಬಡತನ, ಅನಕ್ಷರತೆ, ಅನಾರೋಗ್ಯ, ಜೀತಪದ್ಧತಿ, ಜಾತಿಪದ್ಧತಿ, ಬಯಲುಶೌಚ ಇತ್ಯಾದಿ ಪಿಡುಗುಗಳೆಲ್ಲವೂ ನಿವಾರಣೆಯಾಯಿತೆಂದು. ನಿವಾರಣೆಯಾಗುವುದು ಸತ್ಯ ಸರಳತೆ ನೈತಿಕತೆ ಮಾತ್ರ.

ಬಯಲು ಶೌಚವನ್ನೇ ತೆಗೆದುಕೊಳ್ಳಿ. ಬಯಲು ಶೌಚವು ಸಮಸ್ಯೆಯಾಗಿರುವುದು ಇಂದು. ಶತ ಶತಮಾನಗಳಿಂದ ಹಕ್ಕಿಪಕ್ಷಿಗಳು ಮೀನುಪ್ರಾಣಿಗಳು ಹಾಗೂ ರೈತರು ಬಯಲಿನಲ್ಲಿಯೇ ಶೌಚ ಮಾಡಿಕೊಂಡು ಬಂದಿದ್ದಾರೆ, ಲಾಭದಾಯಕವಾಗಿ ಮಾಡಿಕೊಂಡು ಬಂದಿದ್ದಾರೆ. ಹಾಗೆ ಮಾಡಿದ್ದರಿಂದಾಗಿ ಕೊಕ್ಕರೆಯ ಬಿಳುಪು ಕಡಿಮೆಯಾಗಲಿಲ್ಲ ಅಥವಾ ರೈತನು ಕೊಳಕನಾಗಲಿಲ್ಲ. ಈಗ, ಆಧುನಿಕ ಯುಗದಲ್ಲಿ ಬಯಲುಗಳೆಲ್ಲ ಸ್ಲಮ್ಮುಗಳಾಗಿರುವಾಗ ಅಥವಾ ಘೆಟ್ಟೋಗಳು ಅಥವಾ ಗುಜರಿಗಳು ಆಗಿರುವಾಗ ಅಥವಾ ಹಳ್ಳಿಗಳು ದಾರಿದ್ರ್ಯದ ಕೊಂಪೆಗಳಾಗಿರುವಾಗ, ಜನಸಂಖ್ಯೆಯೆಂಬುದು ಮಿತಿಮೀರಿ ಬೆಳೆಯುತ್ತಿರುವಾಗ, ಸಹಜವಾಗಿಯೇ ನಾವು ಮಾಡಿದ ಶೌಚವು ನಮ್ಮ ಕಾಲಿಗೇ ಅಥವಾ ನಾವು ಕುಡಿಯುವ ನೀರಿಗೇ ಅಡರಿಕೊಳ್ಳುತ್ತಿದೆ. ವಿಷಾಣುಗಳನ್ನು ಸಲುಹುತ್ತಿದೆ. ಶೌಚಕ್ಕೆ ಕುಳಿತ ಹೆಂಗಸರನ್ನು ರೇಪು ಮಾಡುವಷ್ಟು ಕ್ಷುದ್ರ ಮನಸ್ಥಿತಿ ನಮಗಂಟಿಕೊಂಡಿದೆ.

ನಿಮಗೆ ಗೊತ್ತಿದೆಯೋ ಇಲ್ಲವೋ ಕಾಣೆ, ಈಚಿನ ವರ್ಷಗಳಲ್ಲಿ ಬಯಲುಶೌಚ ನಿವಾರಣೆಗೆಂದು ಘನ ಸರ್ಕಾರಗಳು ಲಕ್ಷ ಲಕ್ಷ ಕೋಟಿ ಖರ್ಚು ಮಾಡಿ ಕಟ್ಟಿಸಿರುವ ಶೌಚಾಲಯಗಳಲ್ಲಿ ಅರ್ಧಕ್ಕರ್ಧ ಬಳಕೆಯೇ ಆಗಿಲ್ಲವಂತೆ! ಬಡತನ ನಿವಾರಣೆಗೊಂದು ಗಮ್ಮತ್ತಿದೆ. ಬಡತನವನ್ನು ನಿವಾರಿಸುತ್ತೇವೆ ಎಂದು ಹೊರಟವರೆಲ್ಲ ಶ್ರೀಮಂತರಾಗುತ್ತಾರೆ. ಹೇಸಿಗೆ ಬರುವಷ್ಟು ಶ್ರೀಮಂತರಾಗುತ್ತಾರೆ.

ವ್ಯಕ್ತಿಗಳು ಪಕ್ಷಗಳು ಸಂಸ್ಥೆಗಳು ಮಠಮಾನ್ಯಗಳು ಎಲ್ಲವೂ ನಿವಾರಣೆಗೆ ಕೈಹಚ್ಚಿದ್ದೇ ತಡ ಶ್ರೀಮಂತವಾಗುತ್ತವೆ. ಈತ ಸಿನಿಕ, ಪ್ರಾಮಾಣಿಕರನ್ನೆಲ್ಲ ಕಳ್ಳರೆಂದು ಕರೆಯುವ ಚಟವಿದೆ ಈತನಿಗೆ ಎಂದು ನಿಮಗನ್ನಿಸುತ್ತಿರಬಹುದು. ಹಾಗೇನಿಲ್ಲ. ಬಡತನ ನಿವಾರಣೆಗೆ ಕೈಹಚ್ಚುವ ಹೆಚ್ಚಿನವರು ಪ್ರಾಮಾಣಿಕರೇ, ಆರಂಭದಲ್ಲಂತೂ ಹೌದು. ಆದರವರ ಮಾರ್ಗ ಸರಿಯಿರಲ್ಲ. ದುರ್ಬೀನು ತಿರುಗಾಮುರುಗ ಹಿಡಿದು ಸಮಸ್ಯೆಯತ್ತ ನೋಡುತ್ತಿದ್ದೇವೆ ನಾವು. ನಮಗೆ ಕಾಣುತ್ತಿರುವ ಹೇಸಿಗೆ ನಾವೇ ಆಗಿದ್ದೇವೆ, ಬಡವರಲ್ಲ.

ಯಂತ್ರನಾಗರಿಕತೆಯ ಸಮಸ್ಯೆಯಿದು. ಈ ಸಮಸ್ಯೆ ಎರಡು ರೀತಿಯಲ್ಲಿ ವ್ಯಕ್ತವಾಗುತ್ತದೆ. ಯಂತ್ರಗಳ ಸಹಾಯ ಪಡೆದರೆ ಸಾಮಾಜಿಕ ಸಮಸ್ಯೆಗಳು, ಅದೆಷ್ಟೇ ಜಟಿಲವಿರಲಿ, ಪರಿಹಾರವಾಗಿ ಬಿಡುತ್ತವೆ ಎಂದು ನಾವು ತಪ್ಪಾಗಿ ತಿಳಿಯುತ್ತೇವೆ. ಗುಡ್ಡವನ್ನೇ ಕಡಿದುರುಳಿಸಬಲ್ಲ ಯಂತ್ರ, ಬಡತನವೆಂಬ ಸಾಮಾಜಿಕ ಗುಡ್ಡವನ್ನು ನಿರಾಯಾಸವಾಗಿ ಕಡಿದುರುಳಿಸುತ್ತದೆ ಎಂದು ತಿಳಿಯುತ್ತೇವೆ. ಹಾಗಾಗುತ್ತಿಲ್ಲ. ಬೆರಳೆಣಿಕೆಯ ಶ್ರೀಮಂತರಿಗೆ ಯಂತ್ರಗಳಿಂದಾಗಿ ಮತ್ತಷ್ಟು ಶ್ರೀಮಂತಿಕೆ ಬರುತ್ತದೆ ಅಷ್ಟೆ.

ಇನ್ನೊಂದು ಸಮಸ್ಯೆ ಆತ್ಮನಿಗ್ರಹದ್ದು. ಆತ್ಮನಿಗ್ರಹವೆಂದರೆ ಮೂಢನಂಬಿಕೆ ಎಂದು ನಾವು, ಆಧುನಿಕರು ತಿಳಿಯತೊಡಗಿದ್ದೇವೆ. ಹಾಗೆ ತಿಳಿಯುವಂತೆ ಮಾಡಲಾಗಿದೆ. ಪ್ರಳಯದಂತೆ ಬಂದು ನಮ್ಮ ಮೇಲೆ ಎರಗಿರುವ ಮಾರುಕಟ್ಟೆಯು ಎಲ್ಲ ನೈತಿಕ ಕಟ್ಟುಪಾಡುಗಳನ್ನು ಹರಿದು ತಿಪ್ಪೆಗೆಸೆದಿದೆ. ಮಜ ಮಾಡುವುದೇ ಜೀವನ, ಸಾಲಮಾಡಿ ತುಪ್ಪ ತಿನ್ನುವುದೇ ಜಾಣತನ ಎಂದು ಮಾರುಕಟ್ಟೆಯು ಪ್ರತಿದಿನ ಸಾವಿರಾರು ಜಾಹೀರಾತುಗಳ ಮೂಲಕ ಪ್ರಚುರಪಡಿಸುತ್ತಿದೆ. ಮಾರುಕಟ್ಟೆಯ ದಾಸನಾಗಿರುವ, ಆದರೆ ಪ್ರಜಾಪ್ರಭುತ್ವವೆಂಬ ಸುಳ್ಳು ಹೆಸರಿನಿಂದ ಕರೆಸಿಕೊಳ್ಳುವ ಇಂದಿನ ರಾಜಕೀಯ ವ್ಯವಸ್ಥೆಗಳು, ಮಾರುಕಟ್ಟೆಯ ಈ ಸೈದ್ಧಾಂತಿಕ ದಾಳಿಗೆ ಯಾವುದೇ ರೀತಿಯ ಪ್ರತಿರೋಧವನ್ನೂ ಒಡ್ಡುತ್ತಿಲ್ಲ, ಬದಲಿಗೆ ಬೆಂಬಲವನ್ನೇ ನೀಡುತ್ತಿವೆ.

ಆತ್ಮನಿಗ್ರಹ ಜಾರಿಯಲ್ಲಿದ್ದರೆ ಮಾಲು ಮಾರಾಟವಾಗುವುದಿಲ್ಲ. ಮಾಲುಗಳು ಮಾರಾಟವಾಗಿ ಲಾಭದಾಯಕತೆಯು ಜ್ವರದಂತೆ ಏಕಪ್ರಕಾರವಾಗಿ ಏರುತ್ತಲೇ ಹೋಗಲಿ ಎನ್ನುವುದು ಮಾರಾಟಗಾರರ ಆಶಯ. ಪ್ರಜೆಗಳ ಆಶಯವಲ್ಲ. ಮಾರಾಟಗಾರರ ಆಸೆಬುರುಕುತನವನ್ನು ಸಮಾಜದ ಎಲ್ಲ ಕ್ಷೇತ್ರಗಳಿಗೂ ವಿಸ್ತರಿಸಲಾಗಿದೆ. ಆತ್ಮನಿಗ್ರಹವನ್ನು ಸಾಯಿಸಿ ಶವಪೆಟ್ಟಿಗೆಯಲ್ಲಿಡಲಾಗಿದೆ. ಈ ಸಾಂಕೇತಿಕತೆಯನ್ನು ದೇವರ ಹೆಸರಿನಲ್ಲಿ ಜಗಳ ಹಚ್ಚಿಡಲಿಕ್ಕೆಂದು ಬಳಸಲಾಗುತ್ತಿದೆ. ರಾಮನನ್ನು ಬಳಸಿ ಅಲ್ಲಾಹುವನ್ನೂ, ಅಲ್ಲಾಹುವನ್ನು ಬಳಸಿ ಏಸುಕ್ರಿಸ್ತನನ್ನೂ ಕೊಲ್ಲಲಾಗುತ್ತಿದೆ. ಶ್ರೀಮಂತರನ್ನು ಬಿಡಿ, ಬಡವರು ಸ್ತ್ರೀಯರು ರೈತರೂ ಸಹ ಮಾರುಕಟ್ಟೆಯ ಈ ಅಸ್ಥಿರ ನಂಬಿಕೆಗೆ ಬಲಿಯಾಗತೊಡಗಿದ್ದಾರೆ. ಶೌಚ ಮಾಡುವ ಹೆಂಗಸನ್ನು ಹಿಡಿದು ರೇಪು ಮಾಡುವ ಅವಸರ ಪ್ರವೃತ್ತಿ ಇದೇ ಅಸ್ಥಿರ ಮನಸ್ಥಿತಿಯ ದ್ಯೋತಕವಾಗಿದೆ.

ಒಂದೇ ಒಂದು ಮರವಿಲ್ಲದ, ಕೆರೆಗಳೆಲ್ಲವೂ ಹೇಲಿನ ಗುಂಡಿಗಳಾಗಿರುವ ಅಥವಾ ಶ್ರೀಮಂತರ ಹೊಲಸಿನ ನಾಲೆಗಳಾಗಿರುವ ಪರಿಸ್ಥಿತಿಯಲ್ಲಿ ಬಡವರನ್ನು ತಂದು ತುರುಕಲಾಗುತ್ತದೆ. ಅಥವಾ, ನೀರು ನೆರಳು ಇಲ್ಲದ ಗುಡ್ಡಗಳ ತುದಿಗಳ ಮೇಲೆ ತರುಬಲಾಗುತ್ತದೆ. ಬಡವರೂ ಎಷ್ಟೆಂದು ಸಹಿಸಿಯಾರು. ಬಂಡೇಳುತ್ತಾರೆ. ಆಗ ಶುರುವಾಗುತ್ತದೆ ನೋಡಿ, ಬಡತನ ನಿರ್ಮೂಲನೆಯೆಂಬ ಪ್ರಹಸನ! ಬಡವರಿಗೇನಾದರೂ ಈ ಕಾರ್ಯಕ್ರಮಗಳ ಕೊಡುಗೆ ಇದ್ದಿದ್ದೇ ಆದರೆ, ಅದು ಅವರನ್ನು ಭಿಕ್ಷುಕರನ್ನಾಗಿಸುವುದು ಮಾತ್ರ. ಸರ್ವತಂತ್ರ ಸ್ವತಂತ್ರ ಪಕ್ಷಿಗಳಂತಿದ್ದವರನ್ನು ಹಿಡಿದು ತಂದು, ಸ್ಲಮ್ಮುಗಳಲ್ಲಿ ಲಕ್ಷ ಲಕ್ಷಗಟ್ಟಲೆ ಬಂಧಿಸಿಟ್ಟು, ಗಲಾಟೆ ಮಾಡಿದಾಗ ಕಾಳೆಸೆಯುತ್ತೇವೆ ನಾವು.

ಸಮಾಜವಾದಿಗಳೂ ಎಡವಿದ್ದಾರೆ. ತಿಳಿದೂ ತಿಳಿದೂ ಎಡವಿದ್ದಾರೆ. ಸಮಾಜವಾದವೆಂದರೆ ಬಡತನ ನಿವಾರಣೆಯಲ್ಲ ಶ್ರೀಮಂತಿಕೆಯ ನಿವಾರಣೆ ಎಂಬ ಅರಿವು ಅವರಿಂದ ದೂರವಾಗಿದೆ. ಹಾಗಾಗಿ, ಸುಲಭ ಬದುಕಿನ ಲಾಲಸೆ ಮುಂದೊತ್ತಿ, ಸುಲಭವಾಗಿಯೇ ಮಾರುಕಟ್ಟೆಯು ಸಮಾಜವಾದಿಗಳನ್ನು ಮಣಿಸಿತು. ಈಗ ಪ್ರಕೃತಿಮಾತೆ, ಆಡಂಬರದ ಬದುಕನ್ನು ಕಡಿಮೆ ಮಾಡಿ ಎಂದು ಗದರಿಸಿ ಹೇಳತೊಡಗಿದ್ದಾಳೆ. ಮಳೆ ಗಾಳಿ ಬಿಸಿಲು ಭೂಮಿಗಳನ್ನು ಏರುಪೇರಾಗಿಸಿ ಎಚ್ಚರಿಕೆ ನೀಡುತ್ತಿದ್ದಾಳೆ. ಬಡತನ ನಿವಾರಣೆಯೆಂಬ ಸುಲಭ ಲಂಚ ಅವಳ ಮುಂದೆ ನಡೆಯದು.

ನಲ್ಲಿಯಲ್ಲಿ ನೀರಿದೆ, ವಿದ್ಯುತ್ತಿನಲ್ಲಿ ದೀಪವಿದೆ, ಅಣುಶಕ್ತಿಯಲ್ಲಿ ಶಕ್ತಿಯಿದೆ, ವಿಮಾನದಲ್ಲಿ ಹಾರಾಟವಿದೆ, ಪೊಟ್ಟಣಗಳಲ್ಲಿ ಹಾಲಿದೆ, ಹಣ್ಣಿದೆ, ಊರತುಂಬ ಪಂಚ ತಾರಾ ಹೋಟೆಲುಗಳಿವೆ, ಇವು ಸಹಜವಾಗಿ ಹಾಗೂ ಸಮೃದ್ಧವಾಗಿ ಇರುತ್ತವೆ, ಎಂದೆಂದಿಗೂ ಇರುತ್ತವೆ ಎಂದು ನಾವು ಭ್ರಮಿಸುತ್ತೇವೆ. ಈ ಭ್ರಮೆಯ ಆಧಾರದ ಮೇಲೆ ಸಮಾಜ ವ್ಯವಸ್ಥೆಯೊಂದರ ಮರುನಿರ್ಮಾಣ ಮಾಡು ತ್ತೇವೆ. ಮರುನಿರ್ಮಾಣದ ಕೂಲಿಗಳಾಗಿ ಗ್ರಾಮೀಣ ಬಡವ ರನ್ನು ಪೇಟೆಗೆ ಕರೆತರುತ್ತೇವೆ. ಹಾಗೆ ಕರೆತಂದ ಕೂಲಿಗಳು, ತಮಗೂ ಇವೆಲ್ಲ ಸೌಲಭ್ಯಗಳು ಬೇಕು, ಶ್ರಮದ ಬದುಕು ಬೇಡ ಎಂದು ಗಲಾಟೆ ಮಾಡುತ್ತಾರೆ. ಗಲಾಟೆಗೆ ಹೆದರಿದ ರಾಜಕಾರಣಿಗಳು ಸರ್ವೀಸನ್ನು ಮುಫತ್ತಾಗಿ ಎಲ್ಲರಿಗೂ ವಿಸ್ತರಿಸುತ್ತೇವೆ ಎಂದು ಬೊಗಳೆ ಬಿಡುತ್ತಾರೆ.

ರಾಜಕಾರಣಿಗಳ ಬೊಗಳೆಯ ಲಾಭ ಬಂಡವಾಳಶಾಹಿ ಉತ್ಪಾದಕನಿಗೆ! ರಾಜಕಾರಣಿಗೆ ಕಮಿಷನ್ನು! ಅದರೆ ಸರ್ವೀಸಿನ ಬೆಲೆ ತೆರುವ ವರಾರು? ಸರ್ಕಾರಗಳೇಕೆ ತೆರಬೇಕು ಬಂಡವಾಳಶಾಹಿಯ ದುಬಾರಿ ಬೆಲೆಯನ್ನು? ಅಥವಾ ಪ್ರಕೃತಿ ಏಕೆ ತೆರಬೇಕು? ಹಳ್ಳಿಯಲ್ಲಿಯೂ ನೀರಿತ್ತು ದೀಪವಿತ್ತು ಹಾಲಿತ್ತು ಮನೆ ಯಿತ್ತು. ಜೊತೆಗೆ ಶ್ರಮವಿತ್ತು. ಪ್ರಕೃತಿಮಾತೆ ಪ್ರೀತಿಯಿಂದ ಹಾಗೂ ಮುಫತ್ತಾಗಿ ಕೊಟ್ಟಿದ್ದಳು, ಶ್ರಮಕ್ಕೆ ಬದಲಾಗಿ ಈ ಎಲ್ಲವನ್ನು. ಶ್ರಮವನ್ನು ನಿವಾರಿಸಬೇಕಿತ್ತು ನಮಗೆ! ಬಡ ತನವನ್ನು ನಿವಾರಿಸುತ್ತೇವೆ ಎಂದು ಸುಳ್ಳಾಡಿದೆವು ಅಷ್ಟೆ!

ಬಡತನ ನಿವಾರಣೆಯ ಹಿಂದೆ ಭ್ರಷ್ಟತೆಯಿದೆ. ಆದರೆ ನಾನು ಭ್ರಷ್ಟತೆಯ ಪ್ರಸ್ತಾಪವನ್ನು ಇದುವರೆಗೆ ಮುಂದಕ್ಕೆ ಹಾಕುತ್ತ ಬಂದೆ. ಕಾರಣವಿಷ್ಟೆ. ಅದು ಕೆಸರಿನಂತೆ. ಕಾಲಿಟ್ಟೊಡನೆ ಕಾಲು ಹೂತು ಕೊಳ್ಳುತ್ತದೆ. ಭ್ರಷ್ಟರ ಕಾಲೂ ಸರಿ, ಭ್ರಷ್ಟತೆಯ ಬಗ್ಗೆ ಮಾತನಾಡುವವರ ಕಾಲೂ ಸರಿ ಹೂತುಕೊಳ್ಳುತ್ತದೆ. ಇಷ್ಟಕ್ಕೂ, ನಿವಾರಿಸಬೇಕಾದದ್ದು ಭ್ರಷ್ಟತೆಯನ್ನಲ್ಲ ವ್ಯವಸ್ಥೆಯನ್ನು, ಅತಿಯಾಗಿ ರೂಪಿಸಲಾಗಿರುವ ವ್ಯವಸ್ಥೆಯನ್ನು.

ಡಬ್ಬದೊಳಗೆ ಡಬ್ಬಗಳನ್ನು ಇಡುವ ವ್ಯವಸ್ಥೆಯಿದು. ಪಂಡಿತ ರಾಜೀವ ತಾರಾನಾಥರು ಬಹಳ ಹಿಂದೆ, ಸಮುದಾಯ ರಂಗತಂಡಕ್ಕೆಂದು ಖ್ಯಾತ ನಿರ್ದೇಶಕ ಎಂ.ಎಸ್. ಸತ್ಯು ಅವರ ನಿರ್ದೇಶನದಲ್ಲಿ ಕುರಿ ಎಂಬ ಹೆಸರಿನ ರಾಜಕೀಯ ಪ್ರಹಸನವೊಂದರ ಸಲುವಾಗಿ ಹಾಡೊಂದನ್ನು ರಚಿಸಿ ರಾಗ ಸಂಯೋಜನೆ ಮಾಡಿದ್ದರು. ಅದರ ಆರಂಭಿಕ ಸಾಲುಗಳು ಇಂತಿವೆ: ಡಬ್ಬದೊಳಗೆ ಡಬ್ಬ! ಡಬ್ಬದೊಳಗೆ ಡಬ್ಬ, ಡಬ್ಬದಲಿ ಮುರಬ್ಬ... ಇತ್ಯಾದಿ. ಡಬ್ಬಗಳೇ ಭ್ರಷ್ಟತೆಗೆ ಕಾರಣ, ಮುರಬ್ಬವಲ್ಲ ಎಂದು ಈ ಹಾಡು ಸಮರ್ಥವಾಗಿ ಸೂಚಿಸುತ್ತಿದೆ. ಬಡತನ ನಿವಾರಣೆಯೆಂದರೆ ಡಬ್ಬಗಳ ನಿವಾರಣೆಯೇ ಆಗಿದೆ. ಮುರಬ್ಬ ಪ್ರಾಕೃತಿಕ ಪದಾರ್ಥವಾದ್ದರಿಂದ, ಶ್ರಮವಹಿಸಿದರೆ, ಶ್ರಮವಹಿಸಿದವರಿಗೆ ಸಿಕ್ಕೇ ಸಿಕ್ಕುತ್ತದೆ.

ಕಡೆಯದಾಗಿ ಮತ್ತೊಂದು ಉದಾಹರಣೆ ಕೊಟ್ಟು ಲೇಖನವನ್ನು ಮುಗಿಸುತ್ತೇನೆ ಅಥವಾ ಇದೇ ಸತ್ಯವನ್ನು ಮತ್ತೊಂದು ದಿಕ್ಕಿನಿಂದ ಕಾಣಿಸುವ ಪ್ರಯತ್ನ ಮಾಡುತ್ತೇನೆ! ನೀವು ಚಪ್ಪಲಿ ಹಾಕಿದ್ದೀರಿ ಎಂದಿಟ್ಟುಕೊಳ್ಳಿ! ಚಪ್ಪಲಿ ಹಾಕಿರದ ಒಬ್ಬ ವ್ಯಕ್ತಿ ನಿಮ್ಮ ಮುಂದೆ ನಿಂತಿದ್ದಾನೆ. ನಿಮಗೆ ನಾಚಿಕೆಯಾಗುತ್ತದೆ. ಹಾಗಾದಾಗ,  ನಿಮ್ಮೆದುರಿಗಿರುವ ವ್ಯಕ್ತಿಗೆ ಚಪ್ಪಲಿ ತೊಡಿಸುವ ಅವಸರದ ನಿರ್ಧಾರಕ್ಕೆ ಬರ ಬೇಡಿ. ನೀವು ಹಾಕಿರುವ ಚಪ್ಪಲಿಯತ್ತ ಮತ್ತೊಮ್ಮೆ ನೋಡಿ ಕೊಳ್ಳಿ. ಈ ಚಪ್ಪಲಿ ನಿಮಗೆ ಅಗತ್ಯವೇ? ಚಪ್ಪಲಿಯಿರದೆ ನೀವು ನಡೆಯಬಲ್ಲಿರೇ? ನಿಲ್ಲಬಲ್ಲಿರೇ? ನಿಮ್ಮೆದುರಿಗಿರುವ ವ್ಯಕ್ತಿ ಚಪ್ಪಲಿಯಿರದೆ ನಿಂತಿದ್ದಾನೆ ತಾನೆ? ನಡೆದಿದ್ದಾನೆ ತಾನೆ? ನೀವೂ ಏಕೆ ಚಪ್ಪಲಿಯಿರದೆ ನಡೆಯಬಾರದು... ಇತ್ಯಾದಿ. ಚಪ್ಪಲಿ ಭಿಕ್ಷೆಯಿಂದಾಗಿ ನಿಮ್ಮೆದುರಿಗೆ ನಿಂತಿರುವ ವ್ಯಕ್ತಿಯ ಕೀಳರಿಮೆ ಜಾಸ್ತಿ ಮಾಡದಿರಿ. ನಿಮ್ಮದೇ ಚಪ್ಪಲಿ ಕಳಚಿ. ಹಾಗೆ ಮಾಡಿ ನಿಮ್ಮ ಮೇಲರಿಮೆ ಕಳಚಿಕೊಳ್ಳಿ.

ಒಂದೊಮ್ಮೆ ಚಪ್ಪಲಿ ಅಗತ್ಯವಿದೆ ಎಂದು ನಿಮಗನ್ನಿಸಿತೆಂದಿಟ್ಟುಕೊಳ್ಳಿ. ಆಗಲೂ ನಿಮ್ಮ ಚಪ್ಪಲಿ ಕಳಚಿಡಿ. ನಿಮ್ಮೆದುರಿಗಿರುವವನಿಗೆ ಮೊದಲು ಚಪ್ಪಲಿ ತೊಡಿಸಿ. ನೆನಪಿಡಿ, ಈ ಜಗತ್ತಿನಲ್ಲಿ ಚಪ್ಪಲಿ ತೊಟ್ಟಿರುವವರು ಕೆಲವರಾದರೆ, ತೊಡದೆ ಇರುವವರು ಬಹಳಷ್ಟು ಮಂದಿ! ಅವರೆಲ್ಲರೂ ಚಪ್ಪಲಿ ತೊಟ್ಟ ನಂತರ ನೀವು ತೊಡಿರಿ. ಇಷ್ಟಕ್ಕೂ, ಪ್ರಕೃತಿಮಾತೆ ಒಂದು ನಿಯಮವನ್ನು ಮಾಡಿದ್ದಾಳೆ. ಪ್ರಾಣಿಗಳು ಚಪ್ಪಲಿ ಧರಿಸದೆ ನಡೆಯುತ್ತವೆ.

ಪ್ರಕೃತಿ ನಿಯಮವನ್ನು ಪಾಲಿಸದೆ ಇರುವುದು ತಪ್ಪಲ್ಲ. ಅದರೆ ಧಿಕ್ಕರಿಸುವುದು ತಪ್ಪು. ಬಡವರು ಅನಿವಾರ್ಯ ಕಾರಣಕ್ಕೇ ಇರಲಿ, ಪ್ರಕೃತಿಮಾತೆಗೆ ಹತ್ತಿರದವರು. ಆದರೆ, ರಾಜಕಾರಣಿಗಳು ಮಠಾಧಿಪತಿಗಳು ಹಾಗೂ ಸಕಲ ಶ್ರೀಮಂತರು, ಪ್ರಕೃತಿ ನಿಯಮ ಮೀರಿದ್ದಾರೆ ಮಾತ್ರವಲ್ಲ, ಚಪ್ಪಲಿಯನ್ನು ಸಾಂಕೇತಿಕ ಮಜಲಿಗೆ ಕೊಂಡೊಯ್ದಿದ್ದಾರೆ. ತಮ್ಮ ಸರಳ ಚಪ್ಪಲಿಗಳ ಜೊತೆಗೆ- ಮಠಾಧಿಪತಿಗಳಾದರೆ ಮರದ ಚಪ್ಪಲಿ ಜೊತೆಗೆ ಕಾರನ್ನೇರಿದ್ದಾರೆ. ಹಾಗಾಗಿ ಅವರ ಕಾಲುಗಳಿಗೆ ಕಾರುಗಳೇ ನಿಜವಾದ ಚಪ್ಪಲಿ. ಅಥವಾ  ವಿಮಾನ, ಅಥವಾ ರಾಜರಸ್ತೆಗಳು. ಹಾಗೂ ಸೇವಕರು, ಸೈನಿಕರು,  ಧರ್ಮದರ್ಶಿಗಳು, ಸಲಹೆಗಾರರು, ಸ್ನೇಹಿತರು, ವೇಶ್ಯೆಯರು, ಬುದ್ಧಿಜೀವಿಗಳು, ಹೆಂಡಿರು, ಮಕ್ಕಳು, ಜಾತಿಬಂಧುಗಳು... ಎಲ್ಲರೂ ಚಪ್ಪಲಿಗಳೇ.

ಚಪ್ಪಲಿಗಳನ್ನು ನಿರ್ಮೂಲನೆ ಮಾಡಿಬಿಟ್ಟರೆ ಬಡತನ ನಿರ್ಮೂಲನೆಯ ಅಗತ್ಯವೇ ಬೀಳುವುದಿಲ್ಲ. ಬಡತನ ನಿರ್ಮೂಲನೆಯ ಆಟ ಮುಗಿಯುತ್ತ ಬಂದಿದೆ. ಹಾಗೆಂದು ಪ್ರಕೃತಿಮಾತೆ ಹೇಳಿದ್ದಾಳೆ. ಒಂದೊಮ್ಮೆ ನೀವು, ಬಡವರ ನಾಯಕನಾಗಬಯಸಿದರೆ, ಬಡವನೇ ಆಗಿ ನಾಯಕತ್ವ ನೀಡಬೇಕಾದ ಅನಿವಾರ್ಯ ನಿಮಗೆ ಬರಲಿದೆ. ಯುವಕರು ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕು.

Comments
ಈ ವಿಭಾಗದಿಂದ ಇನ್ನಷ್ಟು
ರಾಮಾಯಣವೆಂಬುದು ಎಡಪಂಥ

ಸಂಭಾಷಣೆ
ರಾಮಾಯಣವೆಂಬುದು ಎಡಪಂಥ

15 Mar, 2018
ವರ್ಗ ಸಂಘರ್ಷ ಹಾಗೂ ಧರ್ಮ

ಸಂಭಾಷಣೆ
ವರ್ಗ ಸಂಘರ್ಷ ಹಾಗೂ ಧರ್ಮ

1 Mar, 2018
ಇದು ಧರ್ಮಯುದ್ಧ... ಸಭ್ಯ ಸಂಸ್ಕೃತಿ

ಸಂಭಾಷಣೆ
ಇದು ಧರ್ಮಯುದ್ಧ... ಸಭ್ಯ ಸಂಸ್ಕೃತಿ

15 Feb, 2018
ಮಂಟೇಸ್ವಾಮಿಗಳ ಸಮಕಾಲೀನ ಮಹತ್ವ

ಸಂಭಾಷಣೆ
ಮಂಟೇಸ್ವಾಮಿಗಳ ಸಮಕಾಲೀನ ಮಹತ್ವ

1 Feb, 2018
ಕೈ ಉತ್ಪನ್ನಗಳ ಪರವಾದ ಚಳವಳಿ ಏಕೆ ಬೇಕು?

ಸಂಭಾಷಣೆ
ಕೈ ಉತ್ಪನ್ನಗಳ ಪರವಾದ ಚಳವಳಿ ಏಕೆ ಬೇಕು?

18 Jan, 2018