ಉದ್ಯೋಗ ಖಾತರಿ ಮತ್ತು ತೆನಾಲಿರಾಮಕೃಷ್ಣನ ಬೆಕ್ಕು...

ಶ್ರೀಕೃಷ್ಣದೇವರಾಯ ತನ್ನ ಆಸ್ಥಾನದ ಎಲ್ಲ ಮಂತ್ರಿಗಳಿಗೂ ಒಂದೊಂದು ಬೆಕ್ಕು, ಅದರ ಜೊತೆಗೆ ಹಸುವನ್ನು ಕೊಡುತ್ತೇನೆ. ಎಲ್ಲರೂ ಒಂದು ತಿಂಗಳು ಬೆಕ್ಕು ಸಾಕಬೇಕು. ಯಾರದು ದಷ್ಟಪುಷ್ಟವಾಗಿರುತ್ತದೆಯೋ ಅವರಿಗೆ ಬಹುಮಾನ ಕೊಡುವುದಾಗಿ ಘೋಷಿಸುತ್ತಾನೆ.

ಉದ್ಯೋಗ ಖಾತರಿ ಮತ್ತು ತೆನಾಲಿರಾಮಕೃಷ್ಣನ ಬೆಕ್ಕು...

ಶ್ರೀಕೃಷ್ಣದೇವರಾಯ ತನ್ನ ಆಸ್ಥಾನದ ಎಲ್ಲ ಮಂತ್ರಿಗಳಿಗೂ ಒಂದೊಂದು ಬೆಕ್ಕು, ಅದರ ಜೊತೆಗೆ ಹಸುವನ್ನು ಕೊಡುತ್ತೇನೆ. ಎಲ್ಲರೂ ಒಂದು ತಿಂಗಳು ಬೆಕ್ಕು ಸಾಕಬೇಕು. ಯಾರದು ದಷ್ಟಪುಷ್ಟವಾಗಿರುತ್ತದೆಯೋ ಅವರಿಗೆ ಬಹುಮಾನ ಕೊಡುವುದಾಗಿ ಘೋಷಿಸುತ್ತಾನೆ.

ಆ ದಿನ ಬರುತ್ತದೆ. ಎಲ್ಲರ ಬೆಕ್ಕುಗಳು ಹುಲಿಮರಿಯಂತಿರುತ್ತವೆ. ತೆನಾಲಿ ರಾಮಕೃಷ್ಣನ ಬೆಕ್ಕು ಮಾತ್ರ ಮೂಳೆ ಚಕ್ಕಳ! ಇದನ್ನು ಗಮನಿಸಿದ ರಾಜ ‘ತೆನಾಲಿಯವರೇ, ಬೆಕ್ಕಿಗೆ ಕೊಡಬೇಕಾದ ಹಾಲನ್ನು ತಾವೇ ಕುಡಿದಿರುವಂತಿದೆ’ ಎಂದು ತಮಾಷೆ ಮಾಡುತ್ತಾನೆ. ‘ನೀವು ನನಗೆ ಹಾಲು ಕುಡಿಯದ ಬೆಕ್ಕು ಕೊಟ್ಟಿದ್ದೀರಿ’ ತೆನಾಲಿ ದೂರುತ್ತಾನೆ. ಹಾಲಿನಬಟ್ಟಲನ್ನು ತರುವಂತೆ ರಾಜನು ಸೇವಕನಿಗೆ ಸೂಚಿಸುತ್ತಾನೆ. ಆತ ಹಾಲಿನಬಟ್ಟಲನ್ನು ತಂದು ಬೆಕ್ಕಿನ ಮುಂದೆ ಇಡುತ್ತಾನೆ. ಬಟ್ಟಲನ್ನು ಕಂಡೊಡನೆ ಬೆಕ್ಕು ಛಂಗನೆ ಹಾರಿ ಮಾಯವಾಗುತ್ತದೆ!

ಬೆಕ್ಕು ಹಾಲಿನ ಬಟ್ಟಲನ್ನು ನೋಡುತ್ತಲೇ ಓಡಿ ಹೋಗುವಂತೆ ಮಾಡಿದ್ದು ಇದೇ ತೆನಾಲಿ. ಮೊದಲ ದಿನವೇ ಬೆಕ್ಕಿಗೆ ಕುಡಿಯಲು ಬಿಸಿಹಾಲನ್ನು ಇಟ್ಟಿರುತ್ತಾನೆ!

ಕಲಬುರ್ಗಿ ಜಿಲ್ಲೆಯ ಹಳ್ಳಿಗಳನ್ನು ಸುತ್ತಾಡುತ್ತಾ ಉದ್ಯೋಗ ಖಾತರಿ ಯೋಜನೆಯ ಕೂಲಿ ಕಾರ್ಮಿಕರೊಂದಿಗೆ ಒಡನಾಡುವಾಗ ಈ ಕತೆ ನೆನಪಾಯಿತು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ, ಅಧ್ಯಕ್ಷರು, ಸದಸ್ಯರು, ಊರಿನ ಪ್ರಭಾವಿಗಳು ತೆನಾಲಿರಾಮಕೃಷ್ಣನಂತೆಯೂ, ಕೂಲಿ ಕಾರ್ಮಿಕರು ಬೆಕ್ಕಿನಂತೆಯೂ ಭಾಸವಾಗತೊಡಗಿದರು.

ಬಹುಶಃ ರಾಜ್ಯದ ತುಂಬ ಇಂತಹದೇ ಕತೆಗಳು ಸಿಗಬಹುದು. ಯಾವ ಊರಿಗೆ ಹೋದರೂ ಕೂಲಿ ವಂಚಿಸಿದ್ದು, ಅವಶ್ಯ ಇರುವವರಿಗೆ ಉದ್ಯೋಗ ಸಿಗದಂತೆ ‘ಪಟ್ಟಭದ್ರರು’ ನೋಡಿಕೊಂಡಿದ್ದನ್ನು ಕತೆಯಾಗಿಸಿ ಹೇಳುತ್ತಿದ್ದರು.

ವೃದ್ಧೆಯೊಬ್ಬರು ‘ನೋಡ್ರಿ, ಇವೇ ಕೈಗಳಿಂದ ದುಡಿದಿದ್ದೇವು. ಒಂದುಡ್ಡೂ ಕೊಡಲಿಲ್ಲ’ ಎಂದು ಎರಡೂ ಕೈಗಳನ್ನು ತೋರಿಸುತ್ತಾ ಹತಾಶೆಯಿಂದ ಹೇಳಿದರು.
ಕಲಬುರ್ಗಿ ತಾಲ್ಲೂಕು ಕುಮಸಿ ಗ್ರಾಮ ಪಂಚಾಯಿತಿಯಲ್ಲಿ ಜನರು ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ಮಾಡಲು ಮುಂದೆ ಬರುತ್ತಿಲ್ಲ ಎಂದು ವರದಿ ನೀಡಲಾಗಿತ್ತು. ಆದರೆ, ಅಲ್ಲಿ ಮೊದಲು ಮಾಡಿದ ಕೆಲಸಕ್ಕೇ ಕೂಲಿ ಕೊಟ್ಟಿರಲಿಲ್ಲ.

‘ನನ್‌ ಅಕೌಂಟಿಗೆ ಬಾರಾ ಹಜಾರ್ (ಹನ್ನೆರಡು ಸಾವಿರ) ಹಾಕ್ಯಾರ.  ಹಾಕಿದವರೇ ಬಂದು ರೊಕ್ಕ ಕೊಡು ಅಂತ ಕೇಳ್ಯಾರ. ಗುಲ್ಲ ಮಾಡಬ್ಯಾಡ. ಮಷಿನ್‌ನಿಂದ ಕೆಲಸ ಮಾಡ್ಸಿವಿ. ಸರಕಾರದಾಗ ಮಷಿನ್ನಿಗಿ ರೊಕ್ಕ ಕೊಡಂಗಿಲ್ಲ. ಅದಕ್ಕ ನೀ ನಮ್ಮಾಂವಂತ ನಿನ್‌ ಅಕೌಂಟಿಗೆ ರೊಕ್ಕ ಹಾಕ್ಸಿನಿ.

ತೆಗೆದುಕೊಡು ಎಂದು ಗಂಟು ಬಿದ್ದಾಂವ ನಮ್ಮೂರ ದೊಡ್‌ ಮನುಷ್ಯ’–ಹೀಗೆಂದು ಆಳಂದ ತಾಲ್ಲೂಕು ಲಾಡ ಚಿಂಚೋಳಿಯ ಯುವಕನೊಬ್ಬ ಹಳೆಯ ಘಟನೆಯನ್ನು ನೆನಪು ಮಾಡಿಕೊಳ್ಳುತ್ತಾನೆ.

ಇವೆಲ್ಲ ಕಾರಣಗಳಿಂದಾಗಿ ‘ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ ಅನುಷ್ಠಾನವು ಹೋರಾಟವಿಲ್ಲದೆ ಒಂದು ಹೆಜ್ಜೆಯೂ ಮುಂದಕ್ಕೆ ಹೋಗುವುದಿಲ್ಲ ಎಂದು ಕಲಬುರ್ಗಿಯ ಕೆಲವು ಪ್ರಜ್ಞಾವಂತರಿಗೆ ಅನಿಸಿತು. ಅವರೆಲ್ಲ ಜೊತೆಯಾಗಿ ‘ಉದ್ಯೋಗ ಖಾತರಿ’ ಅನುಷ್ಠಾನಕ್ಕಾಗಿ ‘ಜಾಗೃತಿ ಅಭಿಯಾನ’ ರೂಪಿಸಿದರು.

ಜನಮುಖಿ ಹೋರಾಟಗಾರರ, ಉಪನ್ಯಾಸಕರ, ಶಿಕ್ಷಕರ, ಸಾಹಿತಿಗಳ, ಪ್ರಗತಿಪರ ಸಂಘಟನೆಗಳ ಸದಸ್ಯರನ್ನು ಒಳಗೊಂಡ ಎರಡು ತಂಡಗಳು ರಚನೆಯಾದವು. ಈ ತಂಡಗಳು ಮೊದಲೇ ಗುರುತು ಮಾಡಿದ ಹಳ್ಳಿಗಳತ್ತ ತೆರಳುತ್ತಿದ್ದವು. ಒಂದು ತಂಡ ಜನರನ್ನು ಸಂಘಟಿಸಿ ಉದ್ಯೋಗ ಪಡೆದುಕೊಳ್ಳುವ ದಿಕ್ಕಿನತ್ತ ಪ್ರೇರೇಪಿಸುತ್ತಿತ್ತು. ಇನ್ನೊಂದು ತಂಡದ ಕೆಲವರು ಉದ್ಯೋಗ ಮತ್ತು ಉದ್ಯೋಗ ಚೀಟಿಗಾಗಿ ಅರ್ಜಿಗಳನ್ನು ಭರ್ತಿ ಮಾಡುತ್ತಿದ್ದರು. ಒಂದಿಬ್ಬರು ವಾಹನದಿಂದ ಜೆರಾಕ್ಸ್‌ ಯಂತ್ರವನ್ನು ತೆಗೆದು ದಾಖಲೆಗಳ ಪ್ರತಿಯನ್ನು ನಕಲು ಮಾಡಿಕೊಡುತ್ತಿದ್ದರು.

ಈ ತಂಡಗಳು ಆರು ತಿಂಗಳಲ್ಲಿ ಕಲಬುರ್ಗಿ ಜಿಲ್ಲೆಯ ಆಳಂದ, ಅಫಜಲಪುರ, ಕಲಬುರ್ಗಿ ತಾಲ್ಲೂಕಿನ ಐವತ್ತಾರು ಹಳ್ಳಿಗಳಲ್ಲಿ ಸಂಚರಿಸಿದವು. ಹೀಗಾಗಿ ಇಪ್ಪತ್ಮೂರು ಕೆರೆಗಳಲ್ಲಿ ಹೂಳು ಎತ್ತಲಾಗಿದೆ. ಹತ್ತಾರು ಕೃಷಿ ಹೊಂಡಗಳು, ಚೆಕ್‌ ಡ್ಯಾಂಗಳು, ಬದುಗಳು ನಿರ್ಮಾಣವಾಗಿವೆ.

ಅಭಿಯಾನದ ಪರಿಣಾಮವಾಗಿ ಇದೇ ಏಪ್ರಿಲ್‌–ಮೇ ತಿಂಗಳಲ್ಲಿ ಕಲಬುರ್ಗಿ ಜಿಲ್ಲೆ ರಾಜ್ಯದಲ್ಲಿ ಅತೀ ಹೆಚ್ಚು ‘ಮಾನವ ದಿನ’ಗಳನ್ನು ಸೃಷ್ಟಿಸಿತು! ಸರ್ಕಾರ ಈ ತಿಂಗಳುಗಳಲ್ಲಿ ಮೂರು ಲಕ್ಷ ಮಾನವ ದಿನಗಳನ್ನು ಸೃಷ್ಟಿಸುವ ಗುರಿ ನೀಡಿತ್ತು. ಆದರೆ, ಸಾಧನೆಯಾಗಿದ್ದು ಒಂಬತ್ತೂವರೆ ಲಕ್ಷ! ಮೂವತ್ತೊಂದು ಸಾವಿರ ಕುಟುಂಬಗಳ ಎರಡೂಕಾಲು ಲಕ್ಷ ಜನರು ಕೆಲಸ ಮಾಡಿದ್ದಾರೆ.

‘ಅಭಿಯಾನವನ್ನು ವಿಸ್ತರಿಸುವ ನಮ್ಮ ನಿರ್ಧಾರಕ್ಕೆ ಮುಖ್ಯ ಕಾರಣ ಭೀಕರ ಬರ. ಜೊತೆಗೆ ಉದ್ಯೋಗ ಖಾತರಿ ಯೋಜನೆಯು ನಮ್ಮ ಹೃದಯದೊಂದಿಗೆ ಬೆಸೆದುಕೊಂಡಿತ್ತು’ ಎಂದು ಶಿಕ್ಷಕ ರವೀಂದ್ರ ರುದ್ರವಾಡಿ ಅಭಿಮಾನ ಪಡುತ್ತಾರೆ.

ಎಲ್ಲಿ ಹೋರಾಟ ಇರುವುದಿಲ್ಲವೋ ಅಲ್ಲಿ ಚಲನೆ ಕಡಿಮೆ. ಜನರ ಮಧ್ಯೆ ತಳಮಟ್ಟದಿಂದ ಕೆಲಸ ಮಾಡುವ ಸಾಮಾಜಿಕ ಬದ್ಧತೆಯುಳ್ಳ ಸಂಘಟನೆಗಳು, ಜನರ ಸಂಕಷ್ಟಕ್ಕೆ ಮಿಡಿಯುವ ಅಧಿಕಾರಿಗಳು, ಸಿಬ್ಬಂದಿ ಇಲ್ಲದೇ ಹೋದರೆ ಸಮಸ್ಯೆಗಳಿಗೆ ಪರಿಹಾರ ದೊರಕುವುದು ಇನ್ನೂ ಕಷ್ಟ. ಆದರೆ, ಕಲಬುರ್ಗಿ ಜಿಲ್ಲಾ ಪಂಚಾಯಿತಿ ಸಿಇಒ ಅನಿರುದ್ಧ ಶ್ರವಣ್‌ ಮತ್ತವರ ಸಿಬ್ಬಂದಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಮೆಚ್ಚಬೇಕು.

‘ಉದ್ಯೋಗ ಖಾತರಿ ಯೋಜನೆ ಜಾಗೃತಿ ಅಭಿಯಾನ ಇಲ್ಲಿಗೆ ಮುಗಿದಿಲ್ಲ. ಮುಗಿಯುವುದೂ ಇಲ್ಲ. ಏಕೆಂದರೆ ಇದೊಂದು ಆಂದೋಲನ’ ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷೆ ಕೆ.ನೀಲಾ ಹೇಳುತ್ತಾರೆ.

ಉದ್ಯೋಗ ಖಾತರಿ ಯೋಜನೆ ಕಾಮಗಾರಿ ನಡೆಯುವ ಸ್ಥಳದಲ್ಲಿ ಮಾತಿಗೆ ಕುಳಿತರೆ ಎಲ್ಲ ಜಾತಿಯ ಬಡವರೂ ಸಿಗುತ್ತಾರೆ. ಈ ಕಾರಣದಿಂದಾಗಿಯೇ  ಉದ್ಯೋಗ ಖಾತರಿ ಯೋಜನೆಯನ್ನು ‘ಮಾನವೀಯ’ ಮತ್ತು ‘ಆರ್ಥಿಕ ನೆಲೆ’ಯಲ್ಲಿ ನೋಡಬೇಕು. ಮನೆ ಪಕ್ಕದ ಬಡ ಕುಟುಂಬವೊಂದು ಕೆಲಸವಿಲ್ಲದೇ ಅಭದ್ರತೆಯಿಂದ ಚಡಪಡಿಸುವುದು ಹೃದಯವನ್ನು ಕಲಕಬೇಕು. ರೊಕ್ಕ ಇಲ್ಲ ಎನ್ನುವ ಕಾರಣಕ್ಕಾಗಿ ಕೂಸನ್ನು ವೈದ್ಯರ ಬಳಿ ಕರೆದುಕೊಂಡು ಹೋಗಲು ಆಗದ ತಾಯಿಯ ಸಂಕಟ ನಮ್ಮದೂ ಆಗಬೇಕು. ಕೆಲಸಕ್ಕಾಗಿ ವಲಸೆ ಹೋಗುವವರ ಅನಾಥ ಭಾವ ತಟ್ಟಬೇಕು.

ಬದಲಾಗಿ, ಇದು ಸರ್ಕಾರದ ಯೋಜನೆ; ಅನುಷ್ಠಾನ ಅಧಿಕಾರಿಗಳ ಜವಾಬ್ದಾರಿ ಎಂದು ಸಮಾಜ ಸುಮ್ಮನೆ ಕುಳಿತರೆ ‘ಪಟ್ಟಭದ್ರರು’ ಲಾಭವನ್ನು ಉಣ್ಣುತ್ತಾರೆ. ಬಡವರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಬೀಳುತ್ತದೆ.

ಅಭಿಯಾನದ ತಂಡ ಆಳಂದ ತಾಲ್ಲೂಕು ಸಂಗೊಳಗಿ ಸಿ. ಗ್ರಾಮಕ್ಕೆ ಭೇಟಿ ನೀಡಿತು. ವಿಷಯ ತಿಳಿದ ತರುಣನೊಬ್ಬ ತಮ್ಮೂರಿನಲ್ಲಿ ನಡೆಯುತ್ತಿರುವ ಉದ್ಯೋಗ ಖಾತರಿ ಕಾಮಗಾರಿಯನ್ನು ವೀಕ್ಷಿಸುವಂತೆ ಆಹ್ವಾನಿಸಿದ. ತಂಡದ ಸದಸ್ಯರು ‘ಕೆಲಸವನ್ನು ಯಾವಾಗ, ಹೇಗೆ ಆರಂಭಿಸಿದಿರಿ’ ಎಂದು ಕೇಳಿದರು. ‘ನೀವು ಅಭಿಯಾನ ನಡೆಸುತ್ತಿರುವ ಸುದ್ದಿ ಪತ್ರಿಕೆಗಳಿಂದ ತಿಳಿಯಿತು. ನಮ್ಮೂರಾಗನೂ ಯಾಕ್‌ ಕೆಲಸ ಚಾಲು ಮಾಡಬಾರದು ಅನಿಸಿ ಫಾರಂ ತುಂಬಿದೆವು. ಈಗ ಚೆಕ್‌ ಡ್ಯಾಂ ಕೆಲಸ ನಡದದ’ ಎಂದು ಖುಷಿಯಿಂದಲೇ ಹೇಳಿದ.

ಕೆರೆಯಂಬಲಗಾ ಗ್ರಾಮದ ದ್ಯಾಮಣ್ಣ ಮತ್ತು ನಾಗಮ್ಮ ದಂಪತಿಗೆ ಮೂವತ್ತು ಎಕರೆ ಜಮೀನಿದೆ. ಒಮ್ಮೆಯೂ ಕೂಲಿಗೆ ಹೋದವರಲ್ಲ. ಆದರೆ, ತಮ್ಮೂರಿನಲ್ಲಿ ಉದ್ಯೋಗ ಖಾತರಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎನ್ನುವ ಹಟದಿಂದ ಅಭಿಯಾನಕ್ಕೆ ಕೈ ಜೋಡಿಸಿದರು. ಕೂಲಿ ಕಾರ್ಮಿಕರಿಗೆ ‘ನೈತಿಕ ಸ್ಥೈರ್ಯ’ ತುಂಬುವ ಸಲುವಾಗಿ ತಾವೂ ‘ಕೂಲಿ’ಗಳಾಗಿ ದುಡಿದರು. ಇವರಿಂದಾಗಿ ಆ ಊರಿನಲ್ಲಿ ಹಲವು ಕೈಗಳಿಗೆ ಕೆಲಸ ಸಿಕ್ಕಿತು.

ಅಭಿಯಾನವು ಹಳ್ಳಿಗಳಲ್ಲಿ ಗರಿಕೆಬಳ್ಳಿಯಂತೆ ಹಬ್ಬುತ್ತಿದೆ. ಈ ಪರಿಯನ್ನು ಗಮನಿಸಿದರೆ, ಮುಂದಿನ ದಿನಗಳಲ್ಲಿ ಬಡವರ ಮುಖದ ಮೇಲೂ ಮಾಸದ ನಗು ಕಾಣಬಹುದು. ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಅನಿಸುತ್ತದೆ.

Comments
ಈ ವಿಭಾಗದಿಂದ ಇನ್ನಷ್ಟು
ಕಾವೇರಿಯಷ್ಟೇ ಜೀವನದಿಯೇ? ಕೃಷ್ಣಾ ಅಲ್ಲವೇ?

ಈಶಾನ್ಯ ದಿಕ್ಕಿನಿಂದ
ಕಾವೇರಿಯಷ್ಟೇ ಜೀವನದಿಯೇ? ಕೃಷ್ಣಾ ಅಲ್ಲವೇ?

8 Dec, 2017
ಕೂಡಿ ಬಾಳುವುದನ್ನು ಕಲಿಸಿದ ಸಂಕರ ಭಾಷೆಗಳು

ಈಶಾನ್ಯ ದಿಕ್ಕಿನಿಂದ
ಕೂಡಿ ಬಾಳುವುದನ್ನು ಕಲಿಸಿದ ಸಂಕರ ಭಾಷೆಗಳು

24 Nov, 2017
ಹಾ.ಮಾ.ನಾಯಕ ಮತ್ತು ರಾಜ್ಯೋತ್ಸವ ಪ್ರಶಸ್ತಿ

ಈಶಾನ್ಯ ದಿಕ್ಕಿನಿಂದ
ಹಾ.ಮಾ.ನಾಯಕ ಮತ್ತು ರಾಜ್ಯೋತ್ಸವ ಪ್ರಶಸ್ತಿ

10 Nov, 2017
ಕೊಟ್ರೇಶಿ ಮಾಸ್ತರರ ಸಮುದಾಯಮುಖಿ ಪರಸಂಗ

ಈಶಾನ್ಯ ದಿಕ್ಕಿನಿಂದ
ಕೊಟ್ರೇಶಿ ಮಾಸ್ತರರ ಸಮುದಾಯಮುಖಿ ಪರಸಂಗ

27 Oct, 2017
ಬಹುಭಾಷೆ, ಸಂಸ್ಕೃತಿಗಳ ಸಂಗಮ ‘ಔರಾದ್‌’

ಈಶಾನ್ಯ ದಿಕ್ಕಿನಿಂದ
ಬಹುಭಾಷೆ, ಸಂಸ್ಕೃತಿಗಳ ಸಂಗಮ ‘ಔರಾದ್‌’

28 Sep, 2017