ಅವಮಾನ, ಸ್ವಾಭಿಮಾನ ಮತ್ತು ಆತ್ಮಹತ್ಯೆ

‘ಕಿಲಾಡಿ ಹುಡುಗರ ಒಂದಿಡೀ ತಂಡ ಪ್ರತಿದಿನವೂ ನನ್ನನ್ನು ಛೇಡಿಸಿ ಅವಮಾನ ಮಾಡುತ್ತಿದೆ. ನನ್ನಿಂದ ಇನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂಬ ಅರ್ಥದ ಚೀಟಿಯೊಂದು ಅವನ ಬ್ಯಾಗಿನಲ್ಲಿತ್ತು. ಇನ್ನು, ಡಿವೈಎಸ್‌ಪಿ ಕಲ್ಲಪ್ಪ ಹಂಡೀಬಾಗ ಮತ್ತು ಇನ್ನೊಬ್ಬ ಡಿವೈಎಸ್‌ಪಿ ಎಂ.ಕೆ.ಗಣಪತಿ ಕೂಡ ತಮ್ಮ ಆತ್ಮಹತ್ಯೆಗೆ ಯಾವ ಸಂದರ್ಭಗಳು ಕಾರಣ ಎಂಬುದರ ದಾಖಲೆ ಉಳಿಸಿಯೇ ನೇಣಿಗೆ ತಲೆ ಕೊಟ್ಟಿದ್ದಾರೆ.

ಅವಮಾನ, ಸ್ವಾಭಿಮಾನ ಮತ್ತು ಆತ್ಮಹತ್ಯೆ

ಕಳೆದ ಎರಡು ವಾರಗಳಲ್ಲಿ ಸಂಭವಿಸಿದ ನಾಲ್ಕೂ ಆತ್ಮಹತ್ಯೆಗಳಲ್ಲಿ ಕಂಡುಬಂದ ಒಂದು ಸಮಾನ ಅಂಶ ಏನು ಗೊತ್ತೆ? ಅಪಮಾನ. ಹದಿನಾಲ್ಕರ ಹರೆಯದ ಹೈಸ್ಕೂಲ್ ವಿದ್ಯಾರ್ಥಿ ರೌನಕ್ ಬ್ಯಾನರ್ಜಿ ಶಾಲೆಯಿಂದ ಬಂದವನೇ 19ನೇ ಅಂತಸ್ತಿನ ತನ್ನ ಮನೆಯ ಬಾಲ್ಕನಿಯಿಂದ ಕೆಳಕ್ಕೆ ಜಿಗಿದು ಪ್ರಾಣ ಕಳೆದುಕೊಂಡ.

‘ಕಿಲಾಡಿ ಹುಡುಗರ ಒಂದಿಡೀ ತಂಡ ಪ್ರತಿದಿನವೂ ನನ್ನನ್ನು ಛೇಡಿಸಿ ಅವಮಾನ ಮಾಡುತ್ತಿದೆ. ನನ್ನಿಂದ ಇನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂಬ ಅರ್ಥದ ಚೀಟಿಯೊಂದು ಅವನ ಬ್ಯಾಗಿನಲ್ಲಿತ್ತು. ಇನ್ನು, ಡಿವೈಎಸ್‌ಪಿ ಕಲ್ಲಪ್ಪ ಹಂಡೀಬಾಗ ಮತ್ತು ಇನ್ನೊಬ್ಬ ಡಿವೈಎಸ್‌ಪಿ ಎಂ.ಕೆ.ಗಣಪತಿ ಕೂಡ ತಮ್ಮ ಆತ್ಮಹತ್ಯೆಗೆ ಯಾವ ಸಂದರ್ಭಗಳು ಕಾರಣ ಎಂಬುದರ ದಾಖಲೆ ಉಳಿಸಿಯೇ ನೇಣಿಗೆ ತಲೆ ಕೊಟ್ಟಿದ್ದಾರೆ.

ರೌನಕ್ ಮಾದರಿಯಲ್ಲಿ ತನಗೆ ಅಪಮಾನವಾಗಿದೆ ಎಂದು ನೇರವಾಗಿ ಹೇಳಿಲ್ಲವಾದರೂ ಮೇಲಿನವರ ಎದುರು ತನಗೆ ಮುಖಭಂಗವಾಗಿದೆ, ತನ್ನ ವ್ಯಕ್ತಿತ್ವದ ಅವಹೇಳನವಾಗಿದೆ ಎಂಬುದರ ಬಗ್ಗೆ ಧಾರಾಳ ಸಾಕ್ಷ್ಯಗಳನ್ನು ಬಿಟ್ಟು ಹೋಗಿದ್ದಾರೆ.

ಈ ಘಟನೆಗಳ ಕುರಿತು ಚರ್ಚೆ ನಡೆಯುತ್ತಿದ್ದಾಗಲೇ, ಬೆಂಗಳೂರಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಓದುತ್ತಿದ್ದ 23ರ ಯುವತಿ ಸೋಫಿಯಾ ಜುಲೈ 10ರಂದು ತನ್ನ ಹಾಸ್ಟೆಲಿನಲ್ಲಿ ನೇಣು ಹಾಕಿಕೊಂಡಳು. ಅವಳು ತರಗತಿಗೆ ಸರಿಯಾಗಿ ಹಾಜರಾಗುತ್ತಿಲ್ಲ ಎಂಬ ಸಂಗತಿ ಅಮ್ಮನಿಗೆ ಗೊತ್ತಾಗಿತ್ತು.

ಮಾಧ್ಯಮಗಳ ವರದಿಯ ಪ್ರಕಾರ, ಮಗಳ ಶಿಕ್ಷಣ ಶುಲ್ಕವನ್ನು ಕಟ್ಟಲೆಂದು ಎರಡು ದಿನಗಳ ಹಿಂದೆ ಕಾಲೇಜಿಗೆ ಬಂದ ಅಮ್ಮ ಎಲ್ಲ ವಿದ್ಯಾರ್ಥಿನಿಯರ ಎದುರು ಸೋಫಿಯಾಗೆ ಬೈದಿದ್ದಳು. ಅದನ್ನೇ ಮನಸ್ಸಿಗೆ ಹಚ್ಚಿಕೊಂಡ ಯುವತಿ ಅದೆಷ್ಟು ಹಿಂಸೆಪಟ್ಟಳೊ, ಇಹಲೋಕ ತ್ಯಜಿಸಿದಳು. ಅಪಮಾನ ಎಂಬುದು ಅಷ್ಟೊಂದು ತೀವ್ರವಾಗಿ ಮನಸ್ಸನ್ನು ಘಾಸಿ ಮಾಡುತ್ತದೆಯೆ?

ಎಚ್ಚರವಿದ್ದಷ್ಟು ಹೊತ್ತೂ ನಮ್ಮ ಮನಸ್ಸು ನಾನಾ ಘಟನೆಗಳನ್ನು ಮೆಲುಕು ಹಾಕುತ್ತಿರುತ್ತದೆ. ಸಂತಸ, ಉದ್ವೇಗ, ಜಿಗುಪ್ಸೆ, ಕಾತರ, ಶಂಕೆ, ಚಿಂತೆ, ಉಮ್ಮಳ, ಅಪಮಾನ, ಹೆಮ್ಮೆ, ನಾಚಿಕೆ, ದುಃಖ, ಭಯ, ಅಸೂಯೆ, ಲಜ್ಜೆ, ಕೋಪ, ಹತಾಶೆ, ಸಂತೃಪ್ತಿ ಹೀಗೆ ನಾನಾ ಬಗೆಯ ಭಾವನೆಗಳು ಮಿದುಳಿನಲ್ಲಿ ಮೂಡುತ್ತಿರುತ್ತವೆ. ಕೆಲವು ಮೂಡುತ್ತವೆ, ಮತ್ತೆ ಹಾಗೇ ಮಾಯವಾಗುತ್ತವೆ.

ಕೆಲವು ಘಟನೆಗಳನ್ನು ಮನಸ್ಸು ಮತ್ತೆ ಮತ್ತೆ ಮಥಿಸುತ್ತಿರುತ್ತದೆ. ಮನೋವಿಜ್ಞಾನಿಗಳ ಪ್ರಕಾರ ಈ ಹತ್ತು ಹಲವು ಭಾವನೆಗಳಲ್ಲಿ ಅಪಮಾನವೇ ಎಲ್ಲಕ್ಕಿಂತ ಹೆಚ್ಚು ಹೊತ್ತು ಮನಸ್ಸಿನಲ್ಲಿ ಕೂತಿರುತ್ತದೆ. ಮತ್ತೆ ಮತ್ತೆ ಮನಸ್ಸನ್ನು ಕಲಕುತ್ತಿರುತ್ತದೆ, ಕಾಡುತ್ತಿರುತ್ತದೆ. ಪ್ರತೀಕಾರಕ್ಕೆ ಹಪಹಪಿಸುತ್ತದೆ. ಅದಕ್ಕೆ ಅವಕಾಶ ಇಲ್ಲದ ಸಂದರ್ಭದಲ್ಲಿ ಮನಸ್ಸು ಇಡೀ ದೇಹವನ್ನೇ ದಂಡಿಸುತ್ತದೆ. ಆತ್ಮಘಾತುಕ ಕೃತ್ಯಕ್ಕೆ ದೇಹವನ್ನು ತಳ್ಳುತ್ತದೆ.

ಅದನ್ನು ವಿಜ್ಞಾನಿಗಳೇ ಹೇಳಬೇಕೆಂದೇನಿಲ್ಲ. ನಾಲ್ಕು ಜನರ ಎದುರಿಗೆ ಆಗುವ ಅವಮಾನದ ನೋವು ಎಷ್ಟೆಂಬುದು ನಮಗೂ ಗೊತ್ತಿದೆ. ವೈರಿಯ ದೇಹಕ್ಕೆ ಗಾಯ ಮಾಡುವುದಕ್ಕಿಂತ ಆತನ/ಆಕೆಯ ಮನಸ್ಸಿಗೆ ಗಾಯ ಮಾಡಿದರೇ ಹೆಚ್ಚು ನೋವಾಗುತ್ತದೆ ಎಂಬುದು ಎಲ್ಲ ಸಮಾಜದ ಎಲ್ಲರಿಗೂ ಗೊತ್ತಿದೆ.

ವೈರಿಯ ದೇಹವನ್ನು ಇರಿಯಲು ಬಳಸುವ ಶಸ್ತ್ರಾಸ್ತ್ರಗಳಿಗಿಂತ ಅದೆಷ್ಟೋ ಪಟ್ಟು ವೈವಿಧ್ಯಮಯ ಶಸ್ತ್ರಗಳು ಬೈಗುಳಗಳ ರೂಪದಲ್ಲಿ ವಿಕಾಸಗೊಂಡಿವೆ (ಅದನ್ನು ನಾವು ಈಗಿನ ವಿಧಾನ ಸಭೆಯ ಅಧಿವೇಶನದಲ್ಲಿ, ಅದರಲ್ಲೂ ಆತ್ಮಹತ್ಯೆಗಳ ಮೇಲಿನ ಚರ್ಚೆಯ ಸಂದರ್ಭದಲ್ಲೇ ನೋಡುತ್ತಿದ್ದೇವೆ).

ಮುಕ್ತ ಸಮಾಜದಲ್ಲಿ ಅಂಥ ‘ಹರಿತ ನಾಲಗೆ’ಗೆ ಪೂರಕವಾಗಿ ಚಪ್ಪಲು, ಮಸಿ, ಮೂತ್ರ, ಅರೆಮುಂಡನ, ಕತ್ತೆ ಮೆರವಣಿಗೆಯೇ ಮುಂತಾದ ಅಷ್ಟೇನೂ ದೇಹಕ್ಕೆ ಅಪಾಯಕಾರಿಯಲ್ಲದ, ಆದರೆ ಆತ್ಮಗೌರವವನ್ನು ಕ್ರೂರವಾಗಿ ಘಾಸಿಗೊಳಿಸಬಲ್ಲ ನಾನಾ ಬಗೆಯ ಶಸ್ತ್ರಗಳು ರೂಪುಗೊಂಡಿವೆ.

ಈಗೀಗಂತೂ ವರದಿಯಾಗುವ ಬಹಳಷ್ಟು ಆತ್ಮಹತ್ಯೆ ಪ್ರಕರಣಗಳಿಗೆ ಅವಮಾನವೇ ಮುಖ್ಯ ಕಾರಣ ಇದ್ದೀತೆಂದು ಯಾರೂ ತರ್ಕಿಸಬಹುದಾಗಿದೆ. ವರದಕ್ಷಿಣೆ ಪೀಡನೆಯಿಂದ ಹೆಣ್ಣುಮಗಳೊಬ್ಬಳು ಬೆಂಕಿ ಹಚ್ಚಿಕೊಂಡು ಸಾವಪ್ಪಿದಳೆಂದು ದಾಖಲಾದರೂ ಯಾವುದೋ ಕ್ಷಣದಲ್ಲಿ ತನ್ನ ತವರಿನ ಪ್ರತಿಷ್ಠೆಗೆ ಧಕ್ಕೆ ಬಂತೆಂದೋ, ತನ್ನ ಪ್ರೀತಿಯ ಅಪ್ಪನಿಗೆ ಅಪಮಾನ ಮಾಡಿದರೆಂದೋ ಮನಸ್ಸು ತೀರಾ ಘಾಸಿಗೊಂಡಿರುತ್ತದೆ.

ರೈತರ ಆತ್ಮಹತ್ಯೆಯಲ್ಲೂ ಸಾಲದ ಹೊರೆಯೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದರೂ ಸ್ವಯಂ ಪ್ರತಿಷ್ಠೆಗೆ, ಸ್ವಾಭಿಮಾನಕ್ಕೆ ಧಕ್ಕೆ ಬರುವಂಥ ಎಂಥದ್ದೋ ಮಾತು ಯಾರದ್ದೋ ಬಾಯಿಂದ ಬಂದಿದ್ದೇ ಮುಖ್ಯ ಕಾರಣ ಇದ್ದೀತು. ಇಷ್ಟಕ್ಕೂ ಅಪಮಾನ ಬೇರೆಯವರಿಂದಲೇ ಆಗಬೇಕಿಲ್ಲ. ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗಳಲ್ಲಿ ಕೆಲವರು ತಮ್ಮ ಆತ್ಮಗೌರವವನ್ನು ತಾವೇ ಅಪಮೌಲ್ಯಗೊಳಿಸಿಕೊಳ್ಳುತ್ತಾರೆ. ಆತ್ಮಹತ್ಯೆಯ ದಾರಿ ಹುಡುಕುತ್ತಾರೆ.

ಕಳೆದ ಮಾರ್ಚ್ 1ರಂದು, ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ ನೇಹಾ ರೆಡ್ಡಿ ಎಂಬ ಯುವತಿ ತನ್ನ ಬಾಯ್‌ಫ್ರೆಂಡ್ ಭೇಟಿಗೆ ಹೋಗಿ ಅದೆಂಥ ಅವಮಾನವಾಯಿತೊ, ಆತನ ಮನೆಯ ಛಾವಣಿಯಿಂದ ಕೆಳಕ್ಕೆ ಧುಮುಕಿ ಆತ್ಮಾರ್ಪಣೆ ಮಾಡಿಕೊಂಡಳು. ಅದೇ ತಿಂಗಳು 30ರಂದು ಬೆಂಗಳೂರಿನ ಕೇಂಬ್ರಿಜ್ ಸ್ಕೂಲಿನಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದ ಪಾರ್ಥಿಬನ್ ಎಂಬ ಹುಡುಗ ಮನೆಗೆ ಬಂದವನೇ ನೇಣು ಹಾಕಿಕೊಂಡ. 

‘ನಿಮ್ಮ ಮಗನಿಗೆ ಬೇರೆ ಯಾವುದಾದರೂ ಶಾಲೆಯನ್ನು ನೋಡಿಕೊಳ್ಳಿ. ಇಷ್ಟೊಂದು ವಿಷಯಗಳಲ್ಲಿ ಫೇಲ್ ಆಗುವ ಆತ ನಮಗೆ ಬೇಡ’ ಎಂದು ಶಾಲೆಯವರು ಪಾಲಕರಿಗೆ ಬರೆದಿದ್ದ ಪತ್ರ ಆತನ ಚೀಲದಲ್ಲಿತ್ತು.   

ಇವೆಲ್ಲ ಅವಮಾನದ ಮೇಲ್ನೋಟಗಳಾದವು. ಆದರೆ ಅವಮಾನಿತ ಮಿದುಳಲ್ಲಿ ಏನಾಗುತ್ತದೆ ಎಂಬ ಚಿತ್ರಣ ಬೇಕಲ್ಲ? ಅವಮಾನವೇ ಅತಿ ಕ್ರೂರ ಮನೋದಂಡನೆ ಹೌದೆ ಅಲ್ಲವೇ ಎಂಬುದನ್ನು ಅಳೆದು ನೋಡಬೇಕಲ್ಲ? ಆಮ್‌ಸ್ಟರ್ಡಾಮ್ ವಿಶ್ವವಿದ್ಯಾಲಯದ ಇಬ್ಬರು ಮನೋವಿಜ್ಞಾನಿಗಳು ಅದನ್ನು ಅಳೆಯಲು ಹೊರಟರು.

ಪ್ರಯೋಗಕ್ಕೆ ತಲೆಯೊಡ್ಡಲು ಬಂದ ಯುವಕ, ಯುವತಿಯರ ತಲೆಗೆ ಇಇಜಿ ಬಿಲ್ಲೆಗಳನ್ನು ಅಂಟಿಸಿ ಕೈಗೆ ಕತೆ ಪುಸ್ತಕ ಕೊಟ್ಟರು. ಕತೆಯಲ್ಲಿ ಬರುವ ವ್ಯಕ್ತಿ ತಾನೇ ಎಂದು ಪರಿಗಣಿಸಿ ಮನಸ್ಸು ಕೊಟ್ಟು ಓದಲು ಹೇಳಿದರು. ದುಃಖ, ನಿರಾಸೆ, ಅವಮಾನ, ಕೋಪ ಬರುವಂಥ ವಿವಿಧ ಸನ್ನಿವೇಶಗಳು ಕತೆಗಳಲ್ಲಿದ್ದವು.

ಉದಾ: ಅಂತರ್ಜಾಲದಲ್ಲಿ ಪರಿಚಯಗೊಂಡು ಪರಸ್ಪರ ಪ್ರೇಮಿಗಳಾದ ಇಬ್ಬರು ಕೊನೆಗೂ ಭೇಟಿಯಾಗುತ್ತಾರೆ. ಮೊದಲ ನೋಟದಲ್ಲೇ ನಿರಾಸೆಯಾಗಿ ಮುಖ ತಿರುಗಿಸಿ, ಒಂದೂ ಮಾತಾಡದೆ ಹಠಾತ್ ಆತ ಹೊರಟು ಹೋದಾಗ ಇವಳಿಗೆ ತೀವ್ರ ಮುಖಭಂಗವಾಗುತ್ತದೆ.

ಅದು ಒಂದು ಕತೆಯಾದರೆ, ಅಮ್ಮನಿಗೆ ಬೈದು ಊಟವನ್ನು ಅರ್ಧಕ್ಕೇ ಬಿಟ್ಟು ಏಳುವಾಗ ಅಮ್ಮ ಹಠಾತ್ತಾಗಿ ಅಳುವ ಕತೆ ಇನ್ನೊಂದು. ಹೀಗೆ ತನ್ಮಯರಾಗಿ ಕತೆ ಓದುತ್ತಿದ್ದವರ ಮಿದುಳಿನಲ್ಲಿ ಉಕ್ಕುವ ವಿದ್ಯುತ್ ಕಾಂತೀಯ ತರಂಗಗಳನ್ನು ವಿಜ್ಞಾನಿಗಳು ಆಲೇಖದ ರೂಪದಲ್ಲಿ ದಾಖಲಿಸಿಕೊಳ್ಳುತ್ತಿದ್ದರು. ಕೊನೆಯಲ್ಲಿ ಇಇಜಿ ಸ್ಕ್ಯಾನ್‌ನಲ್ಲಿ ಮೂಡಿದ ರೇಖೆಗಳನ್ನು ವಿಶ್ಲೇಷಣೆ ಮಾಡಿದರು. ಅವಮಾನದ ಸಂದರ್ಭಗಳಲ್ಲೇ ಮಿದುಳು ಎಲ್ಲಕ್ಕಿಂತ ತೀವ್ರ ವಿಹ್ವಲತೆಯನ್ನು ದಾಖಲಿಸಿತ್ತು.

ಏಕೆ ಹೀಗಾಗುತ್ತದೆ? ದೇಹಕ್ಕೆ ಗಾಯವಾದರೆ ಅದರ ನೆನಪು ಆಗಾಗ ಬರುತ್ತದೆ ನಿಜ; ಆದರೆ ಹಳೆಯ ನೋವು ಮರುಕಳಿಸುವುದಿಲ್ಲ. ಆದರೆ ಅವಮಾನದ ವಿಷಯ ಹಾಗಲ್ಲ.ಅದರ ನೆನಪು ಹಸಿಯಾಗಿದ್ದಷ್ಟು ಹೊತ್ತೂ ನೋವಿನ ತೀವ್ರತೆ ಅಷ್ಟೇ ಇರುತ್ತದೆ. ಅಥವಾ ಅಂಥದ್ದೇ ಬೇರೆ ಘಟನೆಗಳನ್ನು ತಳಕು ಹಾಕಿಕೊಂಡು ನೋವು ಹೆಚ್ಚಲೂಬಹುದು.

ವಿದ್ಯಾರ್ಥಿ ರೌನಕ್‌ಗೆ ಇಂದಿನ ಅವಮಾನದ ಜೊತೆ ನಿನ್ನೆಯ, ಮೊನ್ನೆಯ ಅವಮಾನಗಳೂ ಒಟ್ಟಾಗಿ ನುಗ್ಗಿ ತೀವ್ರತೆಯನ್ನು ಹೆಚ್ಚಿಸಿದ ಹಾಗೆ. ದೈಹಿಕ ಗಾಯದಲ್ಲಿ ಹೀಗಾಗುವುದಿಲ್ಲ. ಅಗಲಿಕೆಯ ದುಃಖದಲ್ಲೂ ಹೀಗಾಗುವುದಿಲ್ಲ ಏಕೆಂದರೆ ಅಲ್ಲಿ ಸ್ವಯಂ ಪ್ರತಿಷ್ಠೆಯ ಪ್ರಶ್ನೆ ಬರುವುದಿಲ್ಲ. ಮಿದುಳು ತನ್ನ ವ್ಯಕ್ತಿತ್ವದ ಒಂದು ಬಿಂಬ
ವನ್ನು ತಾನೇ ಸೃಷ್ಟಿ ಮಾಡಿಕೊಂಡಿರುತ್ತದೆ.

ಬದುಕುಳಿಯುವ ಹೋರಾಟದಲ್ಲಿ, ಪೈಪೋಟಿಯಲ್ಲಿ ಆತ್ಮಪ್ರತಿಷ್ಠೆಯ ಈ ಬಿಂಬವೇ ದೇಹ ಮತ್ತು ಮನಸ್ಸಿಗೆ ಸೂಕ್ತ ಚಾಲನೆ ಕೊಡುತ್ತಿರುತ್ತದೆ. ಅವಮಾನ ಆದಾಗ ಈ ಬಿಂಬಕ್ಕೇ ಧಕ್ಕೆ ಬರುತ್ತದೆ. ಕೆಲವು ಮಿದುಳುಗಳು ಸೇಡಿನ ಕಿಡಿ ಹೊಮ್ಮಿಸಿ, ಫೂಲನ್ ದೇವಿಯ ಹಾಗೆ ಸಡ್ಡು ಹೊಡೆಯಬಹುದು. ಅಳ್ಳೆದೆಯ ನತದೃಷ್ಟರ ಮಿದುಳು ಮಾತ್ರ ಈ ಬಿಂಬವನ್ನೇ ಹೊಸಕಿ ಹಾಕಲು ಸಜ್ಜಾಗುತ್ತದೆ.

ಹಾಗಿದ್ದರೆ ದಿನದಿನವೂ ಅವಮಾನಕ್ಕೆ ತುತ್ತಾಗುವ ದಲಿತರು, ಮಾಣಿಗಳು, ಪೇದೆಗಳು, ಅಷ್ಟೇಕೆ- ರಾಜಕೀಯ ಮುಖಂಡರು ಹೇಗೆ ಏಗುತ್ತಾರೆ? ಅವರೆಲ್ಲ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಅಥವಾ ಬಂಡೆದ್ದು ಹೋರಾಡುವುದೂ ಇಲ್ಲ; ಏಕೆಂದರೆ ಅವರು ಅವಮಾನವನ್ನು ಅಂತರ್ಗತ ಮಾಡಿಕೊಳ್ಳುವುದಿಲ್ಲ. ಅಂದರೆ, ಅಪಮಾನ
ವನ್ನು ತಟ್ಟಿಸಿಕೊಳ್ಳುವುದಿಲ್ಲ ಅಥವಾ ಬಯ್ಗುಳಗಳು ಅವಮಾನಕಾರಿ ಎಂದು ಅವರಿಗೆ ಅನ್ನಿಸುವುದೇ ಇಲ್ಲ.

ಏಕೆಂದರೆ ತನ್ನ ಅಸ್ತಿತ್ವಕ್ಕೆ ಧಕ್ಕೆ ಬರುವಷ್ಟರಮಟ್ಟಿಗೆ ಅವರ ಪ್ರತಿಷ್ಠೆಯ ಬಿಂಬ ಪೆಡಸಾಗಿರುವುದಿಲ್ಲ. ಆದರೆ ಕುಸುಮ ಕೋಮಲವಾಗಿ ತಮ್ಮ ಬಿಂಬವನ್ನು ಕಾಪಾಡಿಕೊಂಡು ಬರುವವರ ಸ್ಥಿತಿ ಹಾಗಿರುವುದಿಲ್ಲ. ಅಂಥ ಸೂಕ್ಷ್ಮ ಸಂವೇದನೆ ಇರುವವರು ಹೇಗೆ ಅವಮಾನವನ್ನು ಎದುರಿಸಬೇಕು ಎಂಬುದರ ಬಗ್ಗೆ ಹತ್ತಾರು ಉಪಾಯಗಳನ್ನು ಮನೋ
ವಿಜ್ಞಾನಿಗಳು ಸೂಚಿಸುತ್ತಾರೆ.

ಮೋಹನದಾಸ ಗಾಂಧಿಗೆ ಯಾರೂ ಸೂಚಿಸಿರಲಿಲ್ಲ. ದಕ್ಷಿಣ ಆಫ್ರಿಕದಲ್ಲಿ ರೈಲಿನಿಂದ ದಬ್ಬಿಸಿಕೊಂಡ ಆ ಘಟನೆ ಭಾರತದಲ್ಲಿ ಬ್ರಿಟಿಷರ ಆಧಿಪತ್ಯದ ಶವ ಪೆಟ್ಟಿಗೆಗೆ ಬಿದ್ದ ಮೊದಲ ಮೊಳೆ ಎನ್ನಿಸಿಕೊಂಡಿತು. ಇಂದಿರಾ ಗಾಂಧಿಯವರನ್ನು ಪ್ರಧಾನಿ ಪಟ್ಟಕ್ಕೆ ಅರ್ಹಳಲ್ಲದ ‘ಗೂಂಗಿ ಗುಡಿಯಾ’ (ಮೊದ್ದು ಬೊಂಬೆ) ಎಂದು ಯಾರೆಲ್ಲ ಹಂಗಿಸಿದರು. ಅಂಥ ಅವಮಾನವನ್ನೇ ಯಶಸ್ಸಿನ ಮೆಟ್ಟಿಲಾಗಿ ಮಾಡಿಕೊಂಡವರ ಚೇತೋಹಾರಿ ಕತೆಗಳು ಎಷ್ಟೊಂದಿಲ್ಲ?ಅವಮಾನ, ಹೆಮ್ಮೆ, ಆತ್ಮಗೌರವ ಎಂಬುದು ವ್ಯಕ್ತಿಗಷ್ಟೇ ಸೀಮಿತವಾಗಿಲ್ಲ.

ಒಂದೊಂದು ಸಮುದಾಯಕ್ಕೂ ಅದರದ್ದೇ ಪ್ರತಿಷ್ಠೆಯ ಬಿಂಬಗಳಿರುತ್ತವೆ. ಒಂದು ಗ್ರಾಮ, ಒಂದು ಕೋಮು, ಒಂದು ಭಾಷೆ, ಒಂದು ಧರ್ಮ, ಒಂದು ದೇಶ ಏಕತ್ರವಾಗಿ ತನ್ನ ಬಿಂಬವನ್ನು ರೂಪಿಸಿಕೊಂಡಿರುತ್ತದೆ.

ಖಾಪ್ ಪಂಚಾಯತ್ ಎನ್ನಿ, ‘ಮರಾಠಿ ಮಾನುಸ್’ ಎನ್ನಿ, ‘ರಾಜಪೂತ್ ರಕ್ತ’ ಎನ್ನಿ, ಅಂಥ ಅಭಿಮಾನವನ್ನು ಪೋಷಿಸುವ, ಅದಕ್ಕಾಗಿ ರಕ್ತ ಹರಿಸುವ, ಸಮೂಹ ಸನ್ನಿ ಸೃಷ್ಟಿಸುವ, ಅಂಥ ಬಿಂಬಕ್ಕೆ ಘಾಸಿಯಾದಾಗ ಯುದ್ಧ ಸಾರಿ, ಪ್ರತೀಕಾರಕ್ಕೆ ಹೊರಟು ಅಮಾಯಕರನ್ನು ಬಲಿಹಾಕಿದ ಸಂದರ್ಭಗಳು ಚರಿತ್ರೆಯ ಪುಟಗಳಲ್ಲಿ ಅದ್ದಿಬಿದ್ದಿವೆ.

ಅವಮಾನ ನುಂಗಿಕೊಳ್ಳುವುದೂ ಒಂದು ಕಲೆಯೇ. ಚೀನೀಯರು ತಮಗಿಂತ ಕೆಳಗಿನವರ ಜೊತೆ ವ್ಯವಹರಿಸುವಾಗ ಕೆಳಗಿನವರು ತಗ್ಗಿನಲ್ಲಿ ಕೂತಿರಬೇಕು. ಸಮಬಲರು ಮಾತ್ರ ಸಮಾನ ಎತ್ತರದಲ್ಲಿ ಕೂತಿರಬೇಕು. ಇದು ಅಲ್ಲಿನ ಸಂಪ್ರದಾಯ. ಕ್ರಿ.ಶ. 1900ರಲ್ಲಿ ಚೀನೀಯರು ಪಾಶ್ಚಾತ್ಯರ ವಿರುದ್ಧ ದಂಗೆ ಎದ್ದು ಕೊನೆಗೆ ತಾವೇ ಸೋತು ಸುಣ್ಣವಾಗಿ ದಾಳಿಕೋರರ ಜೊತೆಗೆ ಒಂದು ಒಪ್ಪಂದಕ್ಕೆ ಬರುತ್ತಾರೆ.

ಅದು ‘ಬಾಕ್ಸರ್ ದಂಗೆ’ ಎಂತಲೇ ಪ್ರಸಿದ್ಧಿ ಪಡೆದಿದೆ. ಭಾರೀ ಅವಮಾನಕಾರಿ ಎನಿಸುವ ಒಪ್ಪಂದಕ್ಕೆ ಸಹಿ ಹಾಕಲೇಬೇಕಾದ ಅನಿವಾರ್ಯತೆ ಚೀನೀಯರಿಗೆ ಬರುತ್ತದೆ. ಆದರೆ ಚೀನಾದವರು ಮಾತ್ರ ತಾವೇ ಗೆದ್ದೆವೆಂದು ಹೇಳುತ್ತಾರೆ. ಏಕೆಂದರೆ ಆ ಒಪ್ಪಂದಕ್ಕೆ ಸಹಿ ಮಾಡುವಾಗ ವಿದೇಶಿಯರು ಕೂರಬೇಕಾದ ಆಸನಗಳ ಕಾಲುಗಳ ತಳಭಾಗವನ್ನು ಅವರಿಗೆ ಗೊತ್ತಾಗದಂತೆ ಗರಗಸದಲ್ಲಿ ಅರ್ಧ ಇಂಚು ಕತ್ತರಿಸಿದ್ದರಂತೆ.

ತಗ್ಗಿನಲ್ಲಿ ಕೂತು ಒಪ್ಪಂದಕ್ಕೆ ಸಹಿ ಹಾಕಿದ್ದರಿಂದ ವಿದೇಶೀಯರದ್ದೇ ಮರ್ಯಾದೆ ಹೋಯಿತೆಂದು ಚೀನೀಯರು ಈಗಲೂ ಭಾವಿಸುತ್ತಾರೆ. ಮೊನ್ನೆ ಚೀನೀಯರಿಗೆ ಮತ್ತೆ ಅಪಮಾನವಾಗಿದೆ. ದಕ್ಷಿಣ ಚೀನಾ ಸಮುದ್ರದ ಭೂಭಾಗದ ಮೇಲೆ ಅವರಿಗೆ ಹಕ್ಕಿಲ್ಲ ಎಂದು ಅಂತರರಾಷ್ಟ್ರೀಯ ನ್ಯಾಯಾಲಯ ಹೇಳಿದೆ. ಈಗ ಚೀನೀಯರು ಮತ್ತೆ ಅದೆಂಥ ಗರಗಸ ಹುಡುಕುತ್ತಾರೊ ನೋಡಬೇಕು. 

ವೈಯಕ್ತಿಕ ಅವಮಾನದ ವಿಷಯ ಚರ್ಚೆಗೆ ಬಂದಾಗ, ರಾಜಕೀಯ ಮನೋವಿಜ್ಞಾನ ತಜ್ಞ ಆಶಿಶ್ ನಂದಿ ತಮ್ಮ ಅಪ್ಪನ ಕುರಿತು ಒಂದು ಚಂದದ ಕತೆ ಹೇಳುತ್ತಾರೆ. ಅವರ ಅಪ್ಪ (ಕ್ರಿಶ್ಚಿಯನ್ ಆಗಿದ್ದರೂ) ಸಂಸ್ಕೃತ ಭಾಷೆಯನ್ನು ಚೆನ್ನಾಗಿ ಬಲ್ಲವರಾಗಿದ್ದರು. ಅವರು ಶಾಲೆಯಲ್ಲಿ ಓದುತ್ತಿದ್ದಾಗ ಮೇಷ್ಟ್ರು ಕೇಳಿದ ಪ್ರಶ್ನೆಗೆ ಬೇರೆ ಯಾರೂ ಉತ್ತರಿಸದಿದ್ದಾಗ ‘ಹೇ ಮ್ಲೇಚ್ಛಾ ನೀನೇ ಹೇಳು!’ ಎಂದು ನಂದಿಗೆ ಆಜ್ಞಾಪಿಸುತ್ತಿದ್ದರಂತೆ.

‘ಮ್ಲೇಚ್ಛ’ ಎಂದರೆ ಭಾರೀ ಅಪಮಾನಕರ ಬೈಗುಳ ಆಗಿದ್ದರೂ ಈ ಹುಡುಗ ತುಸುವೂ ಬೇಸರಿಸದೆ ಸರಿಯಾದ ಉತ್ತರವನ್ನು ಹೇಳುತ್ತಿದ್ದರಂತೆ. ಬೈದವನೂ ಖುಷ್, ಬೈಸಿಕೊಂಡವನೂ ಖುಷ್. ಶಾಲಾ ಮಕ್ಕಳಿರಲಿ, ಪೊಲೀಸ್ ಅಧಿಕಾರಿಯಿರಲಿ, ತೀರ ಅವಮಾನದ ಸಂದರ್ಭದಲ್ಲಿ ಹೇಗೆ ತಮ್ಮನ್ನು ತಾವೇ ನಿಭಾಯಿಸಬೇಕು ಎಂಬ ಬಗ್ಗೆ ಪಠ್ಯಗಳಲ್ಲಿ, ಸೇವಾ ನಿಯಮಗಳಲ್ಲಿ ಸೂಕ್ತ ಮನೋವೈಜ್ಞಾನಿಕ ಸೂತ್ರಗಳನ್ನು ಅಳವಡಿಸಬೇಕು. ಅಳವಡಿಸಬೇಕೆಂದು ಮೇಲಿನವರಿಗೆ ಸಲಹೆ ಕೊಡುವವರು ಕೂಡ ಎಂಥ ಬೈಗುಳವನ್ನೂ ಅವಮಾನವನ್ನೂ ಸಹಿಸಲು ಸಮರ್ಥರೇ ಆಗಿರಬೇಕು.

Comments
ಈ ವಿಭಾಗದಿಂದ ಇನ್ನಷ್ಟು
ಗಂಗೇಚ ಯಮುನೇಚೈವ ಗೋದಾವರಿ ಇದೇನ್ ಗತಿ?

ವಿಜ್ಞಾನ ವಿಶೇಷ
ಗಂಗೇಚ ಯಮುನೇಚೈವ ಗೋದಾವರಿ ಇದೇನ್ ಗತಿ?

22 Mar, 2018
ಅವಳ ದೇಹದಲ್ಲಿ ರೂಪುಗೊಂಡ ಅಮರ ಕೋಶ

ವಿಜ್ಞಾನ ವಿಶೇಷ
ಅವಳ ದೇಹದಲ್ಲಿ ರೂಪುಗೊಂಡ ಅಮರ ಕೋಶ

8 Mar, 2018
ಕಾರ್ಬನ್ ಮಸಿಯಲ್ಲೇ ಮಿನುಗುವ ವಜ್ರ

ವಿಜ್ಞಾನ ವಿಶೇಷ
ಕಾರ್ಬನ್ ಮಸಿಯಲ್ಲೇ ಮಿನುಗುವ ವಜ್ರ

22 Feb, 2018
ಹಸುರಿನ ಲೋಕದಲ್ಲಿ ಪ್ರಜ್ಞೆಯ ಪ್ರಶ್ನೆ

ವಿಜ್ಞಾನ ವಿಶೇಷ
ಹಸುರಿನ ಲೋಕದಲ್ಲಿ ಪ್ರಜ್ಞೆಯ ಪ್ರಶ್ನೆ

8 Feb, 2018
ಧರ್ಮಕ್ಷೇತ್ರಕ್ಕೆ ಕಾಲಿಟ್ಟ ಮಂಗನ ಕಾಯಿಲೆ

ವಿಜ್ಞಾನ ವಿಶೇಷ
ಧರ್ಮಕ್ಷೇತ್ರಕ್ಕೆ ಕಾಲಿಟ್ಟ ಮಂಗನ ಕಾಯಿಲೆ

25 Jan, 2018