ಕಿರುತೆರೆಗೆ ಹೊಸ ತೊರೆ

ಕನ್ನಡದ ಕಿರುತೆರೆ ಪ್ರೇಕ್ಷಕರನ್ನು ರಂಜಿಸಲು ಮತ್ತೊಂದು ವಾಹಿನಿ ಸಿದ್ಧವಾಗಿದೆ. ‘ಕಲರ್ಸ್ ಕನ್ನಡ ವಾಹಿನಿ’ಯ ಯಶಸ್ಸಿನ ಬಳಿಕ ‘ವಯಾಕಾಂ–18’ ಸಂಸ್ಥೆಯು ‘ಕಲರ್ಸ್ ಸೂಪರ್‌’ ಎಂಬ ಮನರಂಜನಾ ಚಾನಲ್‌ ಅನ್ನು ಜುಲೈ 24ರಿಂದ ಆರಂಭಿಸುತ್ತಿದೆ. ​

ಎಚ್‌.ಎಸ್. ವೈಷ್ಣವಿ, ಪರಮೇಶ್ವರ ಗುಂಡ್ಕಲ್‌, ರವೀಶ್‌ಕುಮಾರ್‌

ಕನ್ನಡದ ಕಿರುತೆರೆ ಪ್ರೇಕ್ಷಕರನ್ನು ರಂಜಿಸಲು ಮತ್ತೊಂದು ವಾಹಿನಿ ಸಿದ್ಧವಾಗಿದೆ. ‘ಕಲರ್ಸ್ ಕನ್ನಡ ವಾಹಿನಿ’ಯ ಯಶಸ್ಸಿನ ಬಳಿಕ ‘ವಯಾಕಾಂ–18’ ಸಂಸ್ಥೆಯು ‘ಕಲರ್ಸ್ ಸೂಪರ್‌’ ಎಂಬ ಮನರಂಜನಾ ಚಾನಲ್‌ ಅನ್ನು ಜುಲೈ 24ರಿಂದ ಆರಂಭಿಸುತ್ತಿದೆ.

ಹೊಸ ವಾಹಿನಿ ಆರಂಭಿಸುವ ಮಾಹಿತಿಯನ್ನು ಹಂಚಿಕೊಳ್ಳಲು ಸಂಸ್ಥೆ ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಮುಖಾಮುಖಿಯಾದ ಸಂಸ್ಥೆಯ ಪ್ರಾದೇಶಿಕ ಯೋಜನೆಗಳ ಮುಖ್ಯಸ್ಥ ರವೀಶ್‌ಕುಮಾರ್‌– ‘ಕಲರ್ಸ್ ಕನ್ನಡ’ದಂತೆ ‘ಕಲರ್ಸ್ ಸೂಪರ್’ ಸಹ ಹೊಸ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡಲಿದೆ’ ಎಂದು ಹೇಳಿದರು.

‘ಕಲರ್ಸ್ ಕನ್ನಡ’ ವಾಹಿನಿಯನ್ನು ಕನ್ನಡಿಗರು ಒಪ್ಪಿಕೊಂಡಿದ್ದು, ಅದನ್ನು ನಂಬರ್ ಒನ್‌ ಪಟ್ಟಕ್ಕೇರಿಸಿದ್ದಾರೆ. ಕಲರ್ಸ್‌ ಸೂಪರ್‌ ಸಹ ವೀಕ್ಷಕರಿಗೆ ಇಷ್ಟವಾಗಲಿದೆ ಎನ್ನುವ ವಿಶ್ವಾಸ ಅವರದು.

ವಾಹಿನಿಯ ಬಿಜಿನೆಸ್ ಹೆಡ್‌ ಪರಮೇಶ್ವರ ಗುಂಡ್ಕಲ್‌, ‘2000 ಇಸವಿಯಲ್ಲಿ  ಆರಂಭವಾದ ಈ–ಟಿವಿ ಕನ್ನಡ ವಾಹಿನಿ, ಮಾಲೀಕರು ಬದಲಾದ ನಂತರ ಕಲರ್ಸ್ ಕನ್ನಡ ಎಂದು ಹೆಸರು ಬದಲಿಸಿಕೊಂಡಿತು. ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಗ್ನಿಸಾಕ್ಷಿ, ಪುಟ್ಟಗೌರಿ ಮದುವೆ, ಲಕ್ಷ್ಮಿ ಬಾರಮ್ಮ ಧಾರಾವಾಹಿಗಳು ಹಾಗೂ ರಿಯಾಲಿಟಿ ಶೋಗಳು ವೀಕ್ಷಕರ ಮನಗೆದ್ದಿವೆ’ ಎಂದರು.

‘ಒಂದು ಯಶಸ್ವಿ ಚಾನಲ್ ಇರುವಾಗ ಮತ್ತೊಂದನ್ನು ಆರಂಭಿಸುವ ಅಗತ್ಯ ಇದೆಯೇ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ನಮ್ಮ ಹೊಸ ಪ್ರಾಜೆಕ್ಟ್‌ಗಳು, ಕಾರ್ಯಕ್ರಮಗಳನ್ನು ಕಲರ್ಸ್ ಕನ್ನಡದಲ್ಲಿ ತರಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಚಾನಲ್‌ ಆರಂಭಿಸುತ್ತಿದ್ದೇವೆ. ಕಲರ್ಸ್ ಸೂಪರ್‌ನಲ್ಲಿ ಹೊಸ ರೀತಿಯ, ವಿಭಿನ್ನವಾದ ಹಾಗೂ ಕನ್ನಡದ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳು ಇರಲಿವೆ ಎಂದವರು ಹೇಳಿದರು.

‘ತಂತ್ರಜ್ಞರು ಮೂರ್ನಾಲ್ಕು ತಿಂಗಳ ಪರಿಶ್ರಮದಿಂದ ಈ ಕಾರ್ಯಕ್ರಮಗಳನ್ನು ಸಿದ್ಧಪಡಿಸಿದ್ದಾರೆ. ಪೌರಾಣಿಕ, ರೊಮ್ಯಾಂಟಿಕ್ ಕಾಮಿಡಿ ತರಹದ ಕಾರ್ಯಕ್ರಮಗಳು ಹೊಸ ವಾಹಿನಿಯಲ್ಲಿ ಪ್ರಸಾರವಾಗಲಿವೆ’ ಎಂದು ವಾಹಿನಿಯ ಕಾರ್ಯಕ್ರಮ ವಿಭಾಗದ ಮುಖ್ಯಸ್ಥೆ ಎಚ್‌.ಎಸ್. ವೈಷ್ಣವಿ ತಿಳಿಸಿದರು.

‘ಪ್ರತಿದಿನ ಧಾರಾವಾಹಿಗಳು ಜನರನ್ನು ರಂಜಿಸಿದರೆ, ವಾರಾಂತ್ಯದಲ್ಲಿ ರಿಯಾಲಿಟಿ ಶೋಗಳು ಪ್ರಸಾರವಾಗಲಿವೆ. ಹೊಸ ಚಲನಚಿತ್ರಗಳನ್ನೂ ‘ಸೂಪರ್’ನಲ್ಲಿ ಪ್ರಸಾರ ಮಾಡಲಾಗುವುದು.

ಇದಕ್ಕಾಗಿ ಈಗಾಗಲೇ ಕೆಲವು ಚಲನಚಿತ್ರಗಳನ್ನು ಖರೀದಿಸಲಾಗಿದೆ.‘ಕಲರ್ಸ್ ಸೂಪರ್‌’ನಲ್ಲಿ ಪ್ರಸಾರವಾಗುವ ಕಾರ್ಯಕ್ರಗಳು ರೀಮೇಕ್ ಅಲ್ಲ. ಬೇರೆ ಭಾಷೆಯ ಕಾರ್ಯಕ್ರಮಗಳಿಂದ ಸ್ಫೂರ್ತಿ ಪಡೆದು ರೂಪಿಸಿಲ್ಲ. ಕನ್ನಡದ ತಂತ್ರಜ್ಞರು ಅವುಗಳನ್ನು ಸಿದ್ಧಪಡಿಸಿದ್ದಾರೆ. ಕಾರ್ಯಕ್ರಮಗಳಲ್ಲಿ ಕಥೆಗೆ ಒತ್ತು ಕೊಡಲಾಗಿದೆ’ ಎಂದವರು ಹೇಳಿದರು.

ಅಂದಹಾಗೆ, ನಾಯಕ ನಟ ಯಶ್ ಅವರು ಹೊಸ ವಾಹಿನಿಯ ಪ್ರಚಾರ ರಾಯಭಾರಿಯಾಗಿದ್ದಾರೆ.

Comments