ಹತ್ತು ಸಾವಿರ ಲಾರಿಗಳ ಬಸವಕಲ್ಯಾಣ!

ಇಲ್ಲಿನ ಆರ್ಥಿಕತೆ ಲಾರಿಗಳ ಸುತ್ತಲೇ ಗಿರಕಿ ಹೊಡೆಯುತ್ತದೆ. ಈ ವ್ಯವಹಾರ ಇಳಿಮುಖವಾದರೆ ರಂಜಾನ್‌, ದೀಪಾವಳಿ ಮಂಕಾಗುತ್ತವೆ. ಹೊಸ ಬೈಕ್‌, ಕಾರು, ಟಿವಿ, ವಾಷಿಂಗ್‌ಮಷಿನ್‌, ಒಡವೆ ಕೊಳ್ಳುವುದು ಕಡಿಮೆ ಆಗುತ್ತದೆ. ಮದುವೆ ದಿಬ್ಬಣ ರಂಗು ಕಳೆದುಕೊಳ್ಳುತ್ತದೆ. ಬೀದರ್‌ ಜಿಲ್ಲೆ ಬಸವಕಲ್ಯಾಣ ತಾಲ್ಲೂಕು ‘ಎಂಜಿನ್‌’ ತೆಗೆದ ಲಾರಿಯಂತೆ ಸ್ತಬ್ಧವಾಗುತ್ತದೆ. ಏಕೆಂದರೆ ಇಡೀ ‘ಕಲ್ಯಾಣ’ ಇದೇ ವ್ಯವಹಾರದೊಂದಿಗೆ ಮಿಳಿತವಾಗಿದೆ.

ಹತ್ತು ಸಾವಿರ ಲಾರಿಗಳ ಬಸವಕಲ್ಯಾಣ!

ಇಲ್ಲಿನ ಆರ್ಥಿಕತೆ ಲಾರಿಗಳ ಸುತ್ತಲೇ ಗಿರಕಿ ಹೊಡೆಯುತ್ತದೆ.
ಈ ವ್ಯವಹಾರ ಇಳಿಮುಖವಾದರೆ ರಂಜಾನ್‌, ದೀಪಾವಳಿ ಮಂಕಾಗುತ್ತವೆ. ಹೊಸ ಬೈಕ್‌, ಕಾರು, ಟಿವಿ, ವಾಷಿಂಗ್‌ಮಷಿನ್‌, ಒಡವೆ ಕೊಳ್ಳುವುದು ಕಡಿಮೆ ಆಗುತ್ತದೆ. ಮದುವೆ ದಿಬ್ಬಣ ರಂಗು ಕಳೆದುಕೊಳ್ಳುತ್ತದೆ. ಬೀದರ್‌ ಜಿಲ್ಲೆ ಬಸವಕಲ್ಯಾಣ ತಾಲ್ಲೂಕು ‘ಎಂಜಿನ್‌’ ತೆಗೆದ ಲಾರಿಯಂತೆ ಸ್ತಬ್ಧವಾಗುತ್ತದೆ. ಏಕೆಂದರೆ ಇಡೀ ‘ಕಲ್ಯಾಣ’ ಇದೇ ವ್ಯವಹಾರದೊಂದಿಗೆ ಮಿಳಿತವಾಗಿದೆ.

‘ಕಲ್ಯಾಣ’ದ ಈ ಉದ್ಯಮ ಕೇಂದ್ರ ‘ಸಸ್ತಾಪುರ ಬಂಗ್ಲಾ’. ಇದು ಹೈದರಾಬಾದ್‌–ಪೂನಾ ರಾಷ್ಟ್ರೀಯ ಹೆದ್ದಾರಿ ಮಗ್ಗುಲಲ್ಲಿದೆ. ಸಸ್ತಾಪುರದ ಬಳಿ ಹೈದರಾಬಾದ್‌ ನಿಜಾಮರು ಬಂಗ್ಲೆಯನ್ನು ನಿರ್ಮಿಸಿದ್ದರು. ಹೀಗಾಗಿ ಈ ಸ್ಥಳಕ್ಕೆ ‘ಸಸ್ತಾಪುರ ಬಂಗ್ಲಾ’ ಎಂದು ಹೆಸರು ಬಂದಿದೆ. ಇಲ್ಲಿಂದ ‘ಕಲ್ಯಾಣ’ಕ್ಕೆ ಆರು ಕಿಲೊಮೀಟರ್‌ಗಳು.

ಇದೇ ಉದ್ಯಮದಲ್ಲಿರುವ ಅಶೋಕ ರೆಡ್ಡಿ ಅವರ ಪ್ರಕಾರ ಬಸವಕಲ್ಯಾಣದಲ್ಲಿ ಅಂದಾಜು ಹತ್ತು ಸಾವಿರ ಲಾರಿಗಳಿವೆ.

ಶಿವರಾಜ ಜಮಾದಾರ ಎನ್ನುವರು ‘ನಮ್ಮೂರಲ್ಲಿ ಚಹಾ, ತರಕಾರಿ, ಪಾನ್‌ ಮಾರುವವರ ಬಳಿಯೂ ಲಾರಿಗಳಿವೆ’ ಎಂದವರು ಚಹಾ ಅಂಗಡಿಯೊಂದಕ್ಕೆ ಕರೆದುಕೊಂಡು ಹೋದರು.

ಇಕ್ಬಾಲ್‌ ಅವರ ಅಂಗಡಿಗೆ ಚಹಾ ಕುಡಿಯಲು ಬರುವವರು ಲಾರಿ ವ್ಯವಹಾರದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು. ತಾವೂ ಮಾಲೀಕರಾಗಬೇಕು ಎನ್ನುವ ಆಸೆ ಹುಟ್ಟಿತು. ಇಷ್ಟರಲ್ಲಿ ತಂಗಿಗೆ ಮದುವೆ ಆಯಿತು. ಭಾವನ ಬಳಿಯೂ ಲಾರಿಗಳಿದ್ದವು. ವ್ಯವಹಾರ ಸಲೀಸಾಯಿತು.

‘ಬಸವಕಲ್ಯಾಣ’ ದಿನ ಬೆಳಗಾಗುವುದರೊಳಗಾಗಿ ‘ಲಾರಿಗಳ ಕಲ್ಯಾಣ’ವಾಗಿ ಬದಲಾಗಲಿಲ್ಲ. ಇದರ ಬೇರು ಅರವತ್ತು ವರ್ಷಗಳ ಹಿಂದಿನಷ್ಟು ಆಳದಲ್ಲಿದೆ.

ಸಿದ್ರಾಮಪ್ಪ ಖೂಬಾ ಅವರು ಮೊದಲಿಗೆ ಎರಡು ಲಾರಿಗಳನ್ನು ಖರೀದಿಸಿದರು. ‘ಕಲ್ಯಾಣ’ದಿಂದ ಹೈದರಾಬಾದ್‌ ಮತ್ತು ಕಲಬುರ್ಗಿಗೆ ರೈತರ ಉತ್ಪನ್ನಗಳನ್ನು ಸಾಗಿಸುತ್ತಿದ್ದರು. ವ್ಯವಹಾರ ಚೆನ್ನಾಗಿ ಕುದುರಿತು. ಇದನ್ನು ನೋಡಿದ ವೈಜನಾಥಪ್ಪ ಹೊಳಕುಂಡೆ ಅವರೂ ಎರಡನ್ನು ಖರೀದಿಸಿದರು. ಅವುಗಳು ಕೈ ಹಿಡಿದವು. ವರ್ಷದಿಂದ ವರ್ಷಕ್ಕೆ ಸಂಖ್ಯೆ ಹೆಚ್ಚಾಗುತ್ತಲೇ ಹೋಯಿತು. ಈ ವ್ಯವಹಾರ ‘ಸಂಪತ್ತು’ ತಂದು ಕೊಡುತ್ತಿರುವುದು ದಾಯಾದಿಗಳು, ಬಂಧು–ಮಿತ್ರರನ್ನು ಸೆಳೆಯಿತು. ಅವರೂ ಮಾಲೀಕರಾದರು. ಜೊತೆಗೇ ಚಾಲಕರು, ಕ್ಲೀನರ್‌ಗಳೂ ಹೆಚ್ಚಾದರು.

ಗ್ಯಾರೇಜುಗಳು, ಬಿಡಿಭಾಗ ಮಾರುವವರು, ಟೈರ್‌ ಷೋರೂಂ, ಮೋಟಾರ್‌ ಕಂಪೆನಿಗಳು, ಬುಕ್ಕಿಂಗ್‌ ಏಜೆಂಟರು, ಸಾಲ ಕೊಡುವ ಬ್ಯಾಂಕುಗಳು, ಲೇವಾದೇವಿ ಮತ್ತು ಹಣಕಾಸು ಸಂಸ್ಥೆಗಳು ಹುಟ್ಟಿಕೊಂಡವು. ‘ಕಲ್ಯಾಣ’ದವರ ಈ ವ್ಯವಹಾರ ಪೂನಾ, ಮುಂಬೈ, ಗುಜರಾತ್‌, ಹೈದರಾಬಾದ್‌ ಗಳಲ್ಲಿ ಹೆಸರಾಯಿತು.

ಹಿಂದೆ ಹಣವಂತರು ಮಾತ್ರ ಮಾಲೀಕರಾ ಗಿದ್ದರು. ಬಡವರು ಚಾಲಕರು, ಕ್ಲೀನರ್‌ಗಳು, ಹಮಾಲಿಗಳಾಗುತ್ತಿದ್ದರು. ಅವರ ಆದಾಯ ಕುಟುಂಬ ನಿರ್ವಹಣೆಗೆ ಖರ್ಚಾಗಿ ಹೋಗುತ್ತಿತ್ತು. ವ್ಯವಹಾರದ ಅನುಭವವಿದ್ದರೂ ಮಾಲೀಕರಾಗು ವುದು ಅಸಾಧ್ಯವಾಗಿತ್ತು.

ಹತ್ತು ವರ್ಷಗಳ ಹಿಂದೆ ಖಾಸಗಿ ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳು ಹೊಸ ಯೋಜನೆಯನ್ನು ರೂಪಿಸಿದವು. ಚಾಲನಾ ಪರವಾನಗಿ ಹೊಂದಿರುವವರಿಗೆ ಸುಲಭವಾಗಿ ಸಾಲ ಕೊಡಲು ಮುಂದಾದವು. ಒಂದು ಲಕ್ಷ ರೂಪಾಯಿ ಬಂಡವಾಳ ಇದ್ದರೂ ಸಾಕು, ಅಂಥವರಿಗೆ ಲಾರಿ ಕೊಡುತ್ತಿದ್ದವು. ಇದರಿಂದಾಗಿ ಅರ್ಧದಷ್ಟು ಚಾಲಕರು ಮಾಲೀಕರಾದರು.

ಸೈಯದ್‌ ಫರೂಕ್‌ ಅಲಿ ಇಪ್ಪತ್ತು ವರ್ಷಗಳಿಂದ ಚಾಲಕರಾಗಿ ಕೆಲಸ ಮಾಡುತ್ತಿ ದ್ದರು. ಲಾರಿ ಖರೀದಿಸುವ ಕನಸು ಹಾಗೇ ಉಳಿದಿತ್ತು. ಹಣಕಾಸು ಸಂಸ್ಥೆ ಸಾಲ ಕೊಡಲು ಮುಂದಾದಾಗ ಉಳಿತಾಯವನ್ನು ಇಡುಗಂಟು ಮಾಡಿ ಕನಸನ್ನು ಸಾಕಾರಗೊಳಿಸಿಕೊಂಡರು.

ವೈಜನಾಥಪ್ಪ ತೊಂಡಾರೆ ಅವರೊಂದಿಗೆ ಮಾತನಾಡುವಾಗ ‘ಈಗ ವ್ಯವಹಾರ ಕೈಹಿಡಿಯುತ್ತಿಲ್ಲ. ಡ್ರೈವರ್‌, ಕ್ಲೀನರ್‌ಗಳು ಹಣ ಮಾಡುತ್ತಿದ್ದಾರೆ. ನಮ್ಮ ಕೈಗೆ ಹಣದ ಬದಲು ಲೆಕ್ಕದ ಚೀಟಿಯನ್ನು ಇಡುತ್ತಿದ್ದಾರೆ. ಈ ವ್ಯವಹಾರ ಏನಿದ್ದರೂ ಆಳು–ಅರಸ ಒಬ್ಬರೇ ಆದವರಿಗೆ ಮಾತ್ರ’ ಎಂದು ಬೇಸರದಿಂದಲೇ ಹೇಳಿದರು.

‘ಸಸ್ತಾಪುರ ಬಂಗ್ಲಾ’ದ ಗ್ಯಾರೇಜ್‌ ಮುಂದೆ ಹಿರಿಯರೊಬ್ಬರು ಗಡಿಬಿಡಿಯಿಂದ ಓಡಾಡುತ್ತಾ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು. ಕ್ಷೌರ ಮಾಡಿಸದ ಮುಖ. ಬಿಳಿ ಅಂಗಿ ಮತ್ತು ಹರಿದ ಧೋತ್ರ ಕೊಳಕಾಗಿದ್ದವು. ಕಾಲಲ್ಲಿ ಹವಾಯಿ ಚಪ್ಪಲಿ ಇತ್ತು.

ನನ್ನ ಜೊತೆಯಲ್ಲಿದ್ದವರೊಬ್ಬರು ‘ಅವರು ಯಾರಿರಬಹುದು ಊಹಿಸಿ’ ಎಂದರು. ‘ಹಮಾಲಿ ಇರಬಹುದು’ ಎಂದೆ. ‘ಅದೆಲ್ಲ ಇತಿಹಾಸ. ಈಗ ಅವರು ಎರಡು ಲಾರಿಗಳ ಮಾಲೀಕ’ ಎಂದರು.

ವ್ಯಕ್ತಿಯೊಬ್ಬರು ಸಹೋದರನ ಬಳಿ ಸಾಲ ಮಾಡಿ ಲಾರಿ ಖರೀದಿಸಿದರು. ಅದು ಅಪಘಾತಕ್ಕೆ ಒಳಗಾಗಿತು. ಆದಾಯ ಬರುವುದು ನಿಂತಿತು. ಸಾಲ ಬೆಳೆಯತೊಡಗಿತು. ಚಿಂತೆ ಹೆಚ್ಚಾಯಿತು. ಅನಾರೋಗ್ಯಕ್ಕೆ ಒಳಗಾಗಿ ಜೀವ ಬಿಟ್ಟರು. ಕುಟುಂಬ ಸಂಕಷ್ಟಕ್ಕೆ ಸಿಲುಕಿಕೊಂಡಿತು.

ಆ ಹಳ್ಳಿಯ ಯುವಕ ಮನೆಯನ್ನು ಅಡವಿಟ್ಟು ಲಾರಿ ಕೊಂಡುಕೊಂಡನು. ಹಣ ಕೈ ಸೇರುತ್ತಿದ್ದಂತೆ ಚಟಗಳು ಹೆಚ್ಚಾದವು. ಸಾಲ ಬೆಳೆಯಿತು. ಬಳಿಕ ತಲೆ ಮರೆಸಿಕೊಂಡನು.

ರೈತರೊಬ್ಬರು ಹೆದ್ದಾರಿ ಪಕ್ಕದಲ್ಲಿದ್ದ ಹೊಲ ಮಾರಿ ಇದೇ ವ್ಯವಹಾರಕ್ಕೆ ಮುಂದಾದರು. ಅವರಿಗೆ ಇದರ ಆಳ ಅಗಲವೇ ತಿಳಿಯಲಿಲ್ಲ. ವರ್ಷ ಕಳೆಯುವಷ್ಟರಲ್ಲಿ ದಿವಾಳಿಯಾದರು.

‘ವ್ಯವಹಾರ ತಿಳಿಯದವರು ನಷ್ಟ ಅನುಭವಿಸುತ್ತಾರೆ. ನನ್ನನ್ನು ನೋಡಿ; ನಾಲ್ಕು ವರ್ಷಗಳಲ್ಲಿ ಐದು ಲಾರಿಗಳನ್ನು ಮಾಡಿದ್ದೇನೆ’ ಎಂದು ಇಪ್ಪತ್ತಾರು ವರ್ಷದ ಸೈಯದ್‌ ನವಾಜ್‌ ಕಜ್ಮಿ ಉತ್ಸಾಹದಿಂದ ಹೇಳಿದರು.

‘ಕಲ್ಯಾಣ’ದಲ್ಲಿ ಮಾತಿಗೆ ಸಿಕ್ಕವರೆಲ್ಲರೂ ‘ನಮ್ಮೂರಿನ ಲಾರಿ ಬಿಸಿನೆಸ್‌ ನಲವತ್ತು ಸಾವಿರಕ್ಕೂ ಹೆಚ್ಚು ಸ್ಥಳೀಯರಿಗೆ ಉದ್ಯೋಗ ನೀಡಿದೆ. ನಮಗೆ ಇದನ್ನು ಬಿಟ್ಟು ಬೇರೆ ಉದ್ಯೋಗವೇ ಗೊತ್ತಿಲ್ಲ’ ಎನ್ನುತ್ತಿದ್ದರು.

ಸಸ್ತಾಪುರ ಬಂಗ್ಲಾದ ನೂರೈವತ್ತು ಎಕರೆ ಯಲ್ಲಿ ಇನ್ನೂರರಷ್ಟು ಗ್ಯಾರೇಜುಗಳಿವೆ. ಆದರೆ ಮೂಲ ಸೌಕರ್ಯಗಳದೇ ಕೊರತೆ. ಸರ್ಕಾರ ಸುಸಜ್ಜಿತ ‘ಆಟೊ ನಗರ’ವನ್ನು ರೂಪಿಸಿದರೆ ಇನ್ನೂ ಸಾವಿರಾರು ಮಂದಿಗೆ ಸ್ವಯಂ ಉದ್ಯೋಗ ಸಿಗುತ್ತದೆ.

ಕಣ್ಣಿಗೆ ಕಾಣಿಸುವ ಯಶಸ್ಸು ಮತ್ತು ಪ್ರಗತಿ ಹಿಂದೆ ಹಲವು ವರ್ಷಗಳ ಕನಸು, ಬೆವರು, ಸೋಲು, ನೋವು ಇರುತ್ತದೆ. ಬೀಜ ಮೊಳಕೆ ಯೊಡೆದು ಸಸಿಯಾಗಿ, ಗಿಡವಾಗಿ, ಮರವಾಗಿ, ಹೆಮ್ಮರವಾಗುವುದು ವಿಕಾಸ.

ಯಾವುದೋ ಊರಿನ ತುಂಬ ಮೇಸ್ಟ್ರು ಗಳು, ಸೈನಿಕರು, ಸರ್ಕಾರಿ ನೌಕರರು, ದುಬೈನಲ್ಲಿ ಕೆಲಸ ಮಾಡುವವರು ಇರುವುದು ಹಲವು ವರ್ಷಗಳ ಪ್ರಕ್ರಿಯೆ ಆಗಿರುತ್ತದೆ.

ನಿನ್ನೆ ಕರೆ ಮಾಡಿದ್ದ ಸೈಯದ್‌ ನವಾಜ್‌–‘ಸರ್‌, ನಮ್ಮೂರಿಗೆ ಇವತ್ತು ಇನ್ನೆರಡು ಹೊಸ ಲಾರಿಗಳು ಬಂದವು’ ಎಂದು ಖುಷಿಯಿಂದಲೇ ಹೇಳಿದರು.

Comments
ಈ ವಿಭಾಗದಿಂದ ಇನ್ನಷ್ಟು
ಕಾವೇರಿಯಷ್ಟೇ ಜೀವನದಿಯೇ? ಕೃಷ್ಣಾ ಅಲ್ಲವೇ?

ಈಶಾನ್ಯ ದಿಕ್ಕಿನಿಂದ
ಕಾವೇರಿಯಷ್ಟೇ ಜೀವನದಿಯೇ? ಕೃಷ್ಣಾ ಅಲ್ಲವೇ?

8 Dec, 2017
ಕೂಡಿ ಬಾಳುವುದನ್ನು ಕಲಿಸಿದ ಸಂಕರ ಭಾಷೆಗಳು

ಈಶಾನ್ಯ ದಿಕ್ಕಿನಿಂದ
ಕೂಡಿ ಬಾಳುವುದನ್ನು ಕಲಿಸಿದ ಸಂಕರ ಭಾಷೆಗಳು

24 Nov, 2017
ಹಾ.ಮಾ.ನಾಯಕ ಮತ್ತು ರಾಜ್ಯೋತ್ಸವ ಪ್ರಶಸ್ತಿ

ಈಶಾನ್ಯ ದಿಕ್ಕಿನಿಂದ
ಹಾ.ಮಾ.ನಾಯಕ ಮತ್ತು ರಾಜ್ಯೋತ್ಸವ ಪ್ರಶಸ್ತಿ

10 Nov, 2017
ಕೊಟ್ರೇಶಿ ಮಾಸ್ತರರ ಸಮುದಾಯಮುಖಿ ಪರಸಂಗ

ಈಶಾನ್ಯ ದಿಕ್ಕಿನಿಂದ
ಕೊಟ್ರೇಶಿ ಮಾಸ್ತರರ ಸಮುದಾಯಮುಖಿ ಪರಸಂಗ

27 Oct, 2017
ಬಹುಭಾಷೆ, ಸಂಸ್ಕೃತಿಗಳ ಸಂಗಮ ‘ಔರಾದ್‌’

ಈಶಾನ್ಯ ದಿಕ್ಕಿನಿಂದ
ಬಹುಭಾಷೆ, ಸಂಸ್ಕೃತಿಗಳ ಸಂಗಮ ‘ಔರಾದ್‌’

28 Sep, 2017