ಮಿಂಚಿನ ವೇಗದ ಸಂಚಾರಕ್ಕೆ ಹೈಪರ್ ಬಂಡಿ

‘ಭವಿಷ್ಯದ ದಂತಕತೆ’ ಈಲಾನ್ ಮಸ್ಕ್‌ನ ಕನಸುಗಳಲ್ಲಿ ಇಡೀ ಮನುಕುಲದ ಕ್ಷೇಮಚಿಂತನೆ ಕಾಣುತ್ತದೆ

ಮಿಂಚಿನ ವೇಗದ ಸಂಚಾರಕ್ಕೆ ಹೈಪರ್ ಬಂಡಿ

‘ಭವಿಷ್ಯದ ದಂತಕತೆ’ ಈಲಾನ್ ಮಸ್ಕ್‌ನ ಕನಸುಗಳಲ್ಲಿ ಇಡೀ ಮನುಕುಲದ ಕ್ಷೇಮಚಿಂತನೆ ಕಾಣುತ್ತದೆ

ಬಸ್ ಚಾಲಕರ ಮುಷ್ಕರದಿಂದ ಕಂಗೆಟ್ಟಿದ್ದೀರಾ? ನಿಲ್ಲಿ, ಇದೀಗ ತಾನೆ ಸ್ವಿತ್ಸರ್ಲೆಂಡಿನಲ್ಲಿ ಸ್ವಯಂಚಾಲಿತ ಬಸ್‌ಗಳ ಓಡಾಟ ಆರಂಭವಾಗಿದೆ. ನಾಳೆ ನಮ್ಮಲ್ಲಿಗೂ ಬರಬಹುದು. ಅವಕ್ಕೆ ಚಾಲಕರೂ ಬೇಡ, ನಿರ್ವಾಹಕರೂ ಬೇಡ. ಅಂಥ ಬಸ್ ತಂತಾನೆ ನಿಗದಿತ ಮಾರ್ಗದಲ್ಲಿ ಚಲಿಸುತ್ತದೆ.

ನಿಲ್ಲಬೇಕಾದಲ್ಲಿ ನಿಲ್ಲುತ್ತದೆ. ಪ್ರಯಾಣಿಕರನ್ನು ಇಳಿಸಿ, ಹತ್ತಿಸಿಕೊಳ್ಳುತ್ತದೆ. ಅವರೊಂದಿಗೆ ಮಾತಾಡುತ್ತದೆ ಕೂಡ! ತನ್ನ ಡ್ಯೂಟಿ ಮುಗಿದ ಮೇಲೆ ಡಿಪೋಕ್ಕೆ ಹೋಗುತ್ತದೆ. ಅಲ್ಲಿ ಬ್ಯಾಟರಿ ಬ್ಯಾಂಕ್‌ನಿಂದ ಸೌರಶಕ್ತಿಯನ್ನು ತಂತಾನೆ ತುಂಬಿಸಿಕೊಂಡು ಮುಂದಿನ ಆಜ್ಞೆಗಾಗಿ ಕಾಯುತ್ತ ನಿಲ್ಲುತ್ತದೆ. ನಾವೂ ಅಂಥ ಬಸ್‌ಗಾಗಿ ಕಾಯೋಣ.

ಬಸ್ ಸಹವಾಸವೇ ಬೇಡ ಎಂದಿದ್ದರೆ ಬಿಡಿ. ಆದರೂ ಎಲ್ಲಿಗಾದರೂ ಹೋಗಬೇಕು ಎಂದಿದ್ದರೆ ನಿಮ್ಮ ಸ್ಮಾರ್ಟ್‌ಫೋನ್‌ನ ಬಟನ್ ಒತ್ತಿದರೆ ಸಾಕು, ಸುಸಜ್ಜಿತ ಕಾರೊಂದು ಕೆಲವೇ ನಿಮಿಷಗಳಲ್ಲಿ ನೀವಿದ್ದಲ್ಲಿಗೆ ಬಂದು ನಿಲ್ಲುತ್ತದೆ.

ದಿಲ್ಲಿಯಲ್ಲಿ ಈಗ ಟ್ಯಾಕ್ಸಿ ಚಾಲಕರ ಮುಷ್ಕರ ನಡೆಯುತ್ತಿದೆ; ಇಲ್ಲೂ ಹೀಗಾದರೆ ಹೇಗೆ ಎಂಬ ಚಿಂತೆ ಬೇಡ. ಈಗ ನಿಮ್ಮೆದುರು ಬಂದು ನಿಂತ ಕಾರಿನಲ್ಲಿ ಚಾಲಕನೇ ಇರುವುದಿಲ್ಲ. ನಿಮಗೆ ಎಲ್ಲಿಗೆ ಹೋಗಬೇಕೊ ಆ ಸ್ಥಳವನ್ನು ನಕ್ಷೆಯ ಮೇಲೆ ಬೆರಳಿಟ್ಟು ತೋರಿಸಿದರೆ ಸಾಕು. ಕಾರು ಚಲಿಸುತ್ತದೆ.

ಬಸ್ಸೂ ಬೇಡ, ಕಾರೂ ಬೇಡ, ನನಗೆ ಬೇಕೆನಿಸಿದ್ದು ನಾನಿದ್ದಲ್ಲಿಗೇ ಬಂದರೆ ಸಾಕು ಎನ್ನುವವರಿಗೂ ಒಂದು ಆಯ್ಕೆ ಇದೆ: ಈಚೆಗಷ್ಟೆ ಅಮೆರಿಕದ ನೆವಾಡಾ ರಾಜ್ಯದ ಹಾಥೋರ್ನ್ ಪಟ್ಟಣದ ಒಂದು ಮನೆಗೆ ಬೆಳಗಿನ ತಿಂಡಿ, ಬಿಸಿ ಕಾಫಿ, ತಂಪು ಐಸ್‌ಕ್ರೀಮ್ ಎಲ್ಲ ತುಂಬಿರುವ ಡಬ್ಬಿ ಬಂದಿಳಿಯಿತು.

ಡ್ರೋನ್ ಎಂಬ ಪುಟ್ಟ, ಮೊರದಗಲದ ಪಳಪಳ ಹಾರುತಟ್ಟೆಯೊಂದರಲ್ಲಿ ತಿಂಡಿ ಬಂತು. ಅದು ಜಗತ್ತಿನ ಮೊತ್ತ ಮೊದಲ ನಗರಮುಖಿ ಡ್ರೋನ್ ಡೆಲಿವರಿ ಎಂದು ಫ್ಲರ್ಟೀ ಕಂಪನಿ ಕೊಚ್ಚಿಕೊಂಡಿತು.

ಭವಿಷ್ಯ ಬಹುಶೀಘ್ರವಾಗಿ, ಬಹುದಿಕ್ಕಿನಿಂದ ನಮ್ಮತ್ತ ಸಾಗಿ ಬರುತ್ತಿದೆ. ಈಗಾಗಲೇ ಗೂಗಲ್, ಅಮೆಝಾನ್ ಕಂಪನಿಗಳು ಅಗತ್ಯ ವಸ್ತುಗಳ ಪುಟ್ಟ ಪೆಟ್ಟಿಗೆಗಳನ್ನು ದುರ್ಗಮ ಜಾಗಗಳಿಗೆ ಸಾಗಿಸುತ್ತಿವೆ. ಹಡಗು ಮತ್ತು ನೆಲದ ಮಧ್ಯೆ ಡ್ರೋನ್ ಸಂಚಾರ ಆರಂಭವಾಗಿದೆ. ಕಳೆದ ಐದಾರು ವರ್ಷಗಳಿಂದ ಗೂಗಲ್ ಕಂಪನಿಯ ನೂರಾರು ಕಾರುಗಳು ವಿವಿಧ ದೇಶಗಳಲ್ಲಿ ಪರೀಕ್ಷಾರ್ಥ ಓಡಾಟ ನಡೆಸುತ್ತಿವೆ.

ಚಾಲಕನಿಲ್ಲದ ಈ ಕಾರುಗಳು ಪ್ರಯಾಣಿಕರನ್ನು ಕೂರಿಸಿಕೊಂಡು ಎಲ್ಲ ಬಗೆಯ ಕ್ಲಿಷ್ಟ ಸಂದಣಿಯಲ್ಲೂ ಘಟ್ಟದ ಇಕ್ಕಟ್ಟುಗಳಲ್ಲೂ ಸಲೀಸಾಗಿ ಚಲಿಸಿವೆ. ಕೆಲವು ಚಿಕ್ಕಪುಟ್ಟ ಅಪಘಾತಗಳಾಗಿವೆ ಆದರೆ ಗೂಗಲ್ ಕಂಪನಿಯ ಕಳೆದ ತಿಂಗಳಿನ ವರದಿಯ ಪ್ರಕಾರ ಒಂದು ಚಿಕ್ಕ ಅಪಘಾತದಲ್ಲಿ ಮಾತ್ರ ಕಂಪನಿಯ ಕಾರಿನದೇ ತಪ್ಪಾಗಿದ್ದು ಬಿಟ್ಟರೆ ಇತರೆಲ್ಲ ಸಂದರ್ಭಗಳಲ್ಲೂ ಬೇರೆ ವಾಹನಗಳ ಚಾಲಕರ ತಪ್ಪಿನಿಂದಾಗಿಯೇ ಅಪಘಾತಗಳಾಗಿವೆ.

ಅಂಥ ಸ್ವಯಂಚಲಿ ಕಾರುಗಳು ಮನುಷ್ಯರು ಓಡಿಸುವ ವಾಹನಗಳಿಗಿಂತ ಸುರಕ್ಷಿತವೆಂದು ಅನಿಸಿದ್ದರಿಂದ ಅಮೆರಿಕದ ವಿವಿಧ ರಾಜ್ಯಗಳು ವಾಹನ ಚಾಲನಾ ನಿಯಮಗಳಲ್ಲಿ ತಿದ್ದುಪಡಿ ಮಾಡುತ್ತಿವೆ. ಚಾಲಕರಿಲ್ಲದ (ಆಟೊನೊಮಸ್) ಕಾರುಗಳಿಗೆ ಓಡಾಡಲು ಅನುಮತಿ ನೀಡುತ್ತಿವೆ.

ಸ್ವಯಂಚಾಲಿತ ಬಸ್‌ಗಳನ್ನು ಅನೇಕ ಕಂಪನಿಗಳು ಜಗತ್ತಿನ ಅನೇಕ ನಗರಗಳಲ್ಲಿ ಓಡಾಡಿಸುತ್ತಿವೆ. ಈಝಿಟೆನ್ ಕಂಪನಿ ಕ್ಯಾಲಿಫೋರ್ನಿಯಾದಲ್ಲಿ, ನಾವಿಯಾ ಕಂಪನಿ ಸಿಂಗಪುರದಲ್ಲಿ, ಒಲ್ಲಿ ಎಂಬ ಕಂಪನಿ ಅಮೆರಿಕದ ವಾಷಿಂಗ್ಟನ್‌ನಲ್ಲಿ ಅಂಥ ಬಸ್‌ಗಳನ್ನು ಓಡಾಟಕ್ಕೆ ಬಿಟ್ಟಿವೆ. ಸದ್ಯಕ್ಕೆ ಅವು ನಗರದ ಅಂಚುಗಳಲ್ಲಿ ಮೆಲ್ಲಗೆ, ಹುಷಾರಾಗಿ ಚಲಿಸುತ್ತಿವೆ.

ಮೆಲ್ಲಗೆ ಹೋಗುತ್ತಿದ್ದರೆ ಅದೇನು ಮಹಾ, ನಮಗೆ ಈಗಿಗಿಂತ ಇನ್ನೂ ಫಾಸ್ಟಾಗಿ ಹೋಗುವ ವಾಹನಗಳು ಬೇಕು ತಾನೆ? ಅದಕ್ಕೂ ಸಿದ್ಧವಾಗುತ್ತಿದೆ ‘ಹೈಪರ್ ಲೂಪ್’ ಎಂಬ ಕೊಳವೆ ಮಾರ್ಗ. ಬುಲೆಟ್ ಟ್ರೇನಿಗಿಂತ, ಕಾಂಕಾರ್ಡ್ ವಿಮಾನಕ್ಕಿಂತ, ರಾಕೆಟ್‌ನಂತೆ ಗಂಟೆಗೆ 1200 ಕಿಲೊಮೀಟರ್ ವೇಗದಲ್ಲಿ ಸರಕುಗಳನ್ನೂ ಮನುಷ್ಯರನ್ನೂ ಸಾಗಿಸುವ ವಿನೂತನ ವ್ಯವಸ್ಥೆ ಇದು.

ಕಳೆದ ಮೇ ತಿಂಗಳಲ್ಲಿ ಅಮೆರಿಕದ ನೆವಾಡಾ ಮರುಭೂಮಿಯಲ್ಲಿ ಇದರ ಪ್ರಾಯೋಗಿಕ ಪರೀಕ್ಷೆ ನಡೆಯಿತು. ಸಂಚಾರ ತಂತ್ರಜ್ಞಾನದ ಈಗಿನ ಎಲ್ಲ ಸಿದ್ಧಸೂತ್ರಗಳನ್ನೂ ಬದಿಗೊತ್ತಿ ಹೊಸ ವಿಧಾನವನ್ನು ಕೈಗೆತ್ತಿಕೊಂಡ ಯೋಜನೆ ಇದು.

ಹೇಗೆಂದರೆ, ಹೊರಗಿನ ಗಾಳಿಗಿಂತ ಕಡಿಮೆ ಒತ್ತಡ ಇರುವ ಉದ್ದನ್ನ ಕೊಳವೆ ಬೆಂಗಳೂರಿನಿಂದ ಮೈಸೂರಿನವರೆಗೂ ಮಲಗಿರುತ್ತದೆ. ಅದರೊಳಕ್ಕೆ ಹಳಿ ಮೇಲೆ 20-30 ಪ್ರಯಾಣಿಕರಿರುವ ಅಧಿಕ ಒತ್ತಡದ ಪುಟ್ಟ ಕೊಳವೆಯಂಥ ಬಂಡಿ ಕೂರಿಸಿರುತ್ತಾರೆ. ವಿದ್ಯುತ್ ಶಕ್ತಿಯಿಂದ ಚಾಲನೆ ಪಡೆಯುವ ಆ ಬಂಡಿ ಬುಲೆಟ್‌ನ ಹಾಗೆ ಧಾವಿಸುತ್ತದೆ. ಹಳಿಯನ್ನು ಸ್ಪರ್ಶಿಸದೆ, ಅದಕ್ಕಿಂತ ಎರಡು ಬೆರಳು ಎತ್ತರದಲ್ಲಿ ಸಾಗುವುದರಿಂದ ಘರ್ಷಣೆ ಇರದು.

ಬೆಂಗಳೂರಿನಿಂದ ಹೊರಟ ಹೈಪರ್ ಬಂಡಿ ಹತ್ತು ನಿಮಿಷಗಳಲ್ಲೇ ಮೈಸೂರು ತಲುಪುತ್ತದೆ. ದಾರಿಗುಂಟ ಆ ಉದ್ದಕೊಳವೆ ಬಿಸಿಲನ್ನು ಹೀರಿಕೊಂಡು ಅದನ್ನೇ ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವುದರಿಂದ ಇಂಧನ ವೆಚ್ಚ ಇಲ್ಲ, ಹೊಗೆಮಾಲಿನ್ಯ ಇಲ್ಲ. ಸದ್ದುಗದ್ದಲವೂ ಇಲ್ಲ. ಮದ್ದೂರಿನ ಎತ್ತಿನ ಬಂಡಿಗಳಿಗೆ ಡಿಕ್ಕಿ ಹೊಡೆಯುವ ಅಪಾಯವೂ ಇಲ್ಲ. ಮೇಲಾಗಿ ಈ ಪ್ರಯಾಣ ಭಾರೀ ವೆಚ್ಚದ್ದೂ ಅಲ್ಲ.

‘ಭವಿಷ್ಯದ ದಂತಕತೆ’ ಎಂತಲೇ ಪ್ರಸಿದ್ಧಿ ಪಡೆದ ಕನಸುಗಾರ ಸಂಶೋಧಕ, ಉದ್ಯಮಿ ಈಲಾನ್ ಮಸ್ಕ್ (Elon Musk) ಹೆಣೆಯುವ ಕನಸು ಇಷ್ಟಕ್ಕೇ ನಿಲ್ಲುವುದಿಲ್ಲ. ಆತನ ಪ್ರಕಾರ, ಮಾನವ ಸಮಾಜದ ಮುಂದಿನ ಹಂತದ ಸುಧಾರಣೆ ಏನೆಂದರೆ ಯಾರ ಬಳಿಯೂ ಕಾರು ಇರಬೇಕಾಗಿಯೇ ಇಲ್ಲ. ಕರೆ ಮಾಡಿದರೆ ನೀವಿದ್ದಲ್ಲಿಗೆ ಸುಸಜ್ಜಿತ ಸ್ವಯಂಚಾಲಿತ ಕಾರು ಬಂದು ನಿಲ್ಲುತ್ತದೆ. ನೀವು ಕೂತಿದ್ದಷ್ಟು ಹೊತ್ತೂ ಅದು ನಿಮ್ಮ ಸ್ವಂತದ ಕಾರೇ ಆಗಿರುತ್ತದೆ.

ಪಾರ್ಕಿಂಗ್ ರಗಳೆ ಇಲ್ಲ. ಬಿಸಿಲಿಗೆ ಕಾರು ಕಾದೀತೆಂಬ ಚಿಂತೆಯಿಲ್ಲ. ಯಾರಾದರೂ ಕದ್ದೊಯ್ದಾರೆಂಬ ಚಿಂತೆಯಿಲ್ಲ. ಕಾಲಕಾಲಕ್ಕೆ ರಿಪೇರಿಯ ರಗಳೆ ಇಲ್ಲ. ನೋಂದಣಿ, ವಿಮೆ, ದಾಖಲಾತಿಯ ಕಾಗದ ಪತ್ರಗಳ ರಗಳೆ ಇಲ್ಲ. ಎಲ್ಲಕ್ಕಿಂತ ವಿಶೇಷ ಎಂದರೆ ಡ್ರೈವರನ್ನು ಇಟ್ಟುಕೊಳ್ಳಬೇಕಿಲ್ಲ. ನೀವೂ ಚಾಲಕರಾಗಬೇಕಿಲ್ಲ. ನಿಮ್ಮ ಖಾತೆಯಲ್ಲಿ ಸಾಕಷ್ಟು ಹಣ ಇದ್ದರೆ ಸಾಕು. ಅದೇ ಎಲ್ಲವನ್ನೂ ನೋಡಿಕೊಳ್ಳುತ್ತದೆ.

ಹಣ ಇದ್ದವರಿಗಾಗಿ ಸೃಷ್ಟಿಯಾಗುವ ಇಂಥ ವೈಭೋಗಗಳಿಂದಾಗಿಯೇ ಭೂಮಿ ಸಂಕಟದ ಪ್ರಪಾತದತ್ತ ಉರುಳುತ್ತಿದೆ. ಉಳ್ಳವರ ಇಂಥ ಭೋಗಲಾಲಸೆಯಿಂದಾಗಿ ಕೆಳಸ್ತರದ ಜನಸಾಮಾನ್ಯರ ಬದುಕು, ಭೂಮಿಯ ಇತರ ಜೀವಪ್ರಭೇದಗಳ ಬದುಕು ದಿನದಿನಕ್ಕೆ ಇನ್ನಷ್ಟು ದುಸ್ತರವಾಗುತ್ತ ಹೋಗುತ್ತದೆ. ಸಂಶೋಧಕ ಈಲಾನ್ ಮಸ್ಕ್‌ಗೆ ಈ ವಾಸ್ತವಗಳೆಲ್ಲ ಗೊತ್ತು.

ಆತ ಎಲ್ಲ ಉದ್ಯಮಿಗಳಂತೆ ಕೇವಲ ಲಾಭಕ್ಕಾಗಿ ಬಂಡವಾಳ ಹೂಡುವ ಸಾಧಕ ಅಲ್ಲ. ಅವನ ಕನಸುಗಳು ಭೂಮಿಯ ಆಚೆಗೂ ವಿಸ್ತರಿಸಿವೆ. ಮಸ್ಕ್ ಪ್ರಕಾರ ಮನುಷ್ಯ ಜೀವಿಗಳು ಭೂಮಿಯೆಂಬ ಒಂದೇ ಗ್ರಹದಲ್ಲಿದ್ದಷ್ಟು ಕಾಲವೂ ಈ ಪ್ರಭೇದಕ್ಕೆ ಹಾಗೂ ಇತರ ಜೀವಿಗಳಿಗೆ ಅಪಾಯ ತಪ್ಪಿದ್ದಲ್ಲ.

ಅವನದೇ ಭಾನಗಡಿಯಿಂದ ಅಥವಾ ಕ್ಷುದ್ರಗ್ರಹ ಅಪ್ಪಳಿಸುವುದರಿಂದ ಅಥವಾ ಇನ್ನೇನೋ ಪ್ರಳಯದಿಂದ ಇಡೀ ಭೂಮಿ ನಾಶವಾದರೆ ಮನುಷ್ಯನೆಂಬ ಈ ಅದ್ಭುತ ಜೀವಿ ನಿರ್ವಂಶವಾಗುವ ಸಂಭವ ಇದೆ. ಆದ್ದರಿಂದ ನಾವು ಬಹುಗ್ರಹವಾಸಿ ಪ್ರಭೇದವಾಗಿ ವಿಕಾಸಗೊಳ್ಳಬೇಕು.

ಅದನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ನಾವು ಶ್ರಮಿಸಬೇಕು. ಅದು ಸಾಧ್ಯವಾಗುವವರೆಗೆ ಈ ಭೂಮಿಯ ನಾಳೆಗಳು ಸುರಕ್ಷಿತವಾಗಿ, ಸುಸ್ಥಿರವಾಗಿ ಅರಳುತ್ತ ಹೋಗಬೇಕು.

ಇಂಥ ಆದರ್ಶಗಳನ್ನು ಈಲಾನ್ ಮಸ್ಕ್ ಒಬ್ಬನೇ ಏಕೆ, ನಾವೂ ಹೆಣೆಯುತ್ತ ಹೋಗಬಹುದು. ನಮಗೆ ಕನಸುಗಳು ಇರುತ್ತವೆ; ಆದರೆ ಅವನ್ನು ನನಸಾಗಿಸಲು ಬೇಕಾದ ಎಂಜಿನಿಯರಿಂಗ್ ಜ್ಞಾನ ಇರುವುದಿಲ್ಲ. ಇದ್ದರೂ ಅದಕ್ಕಾಗಿ  ಬೇಕಾದ ಯುವ ಪರಿಣತರ ಸೈನ್ಯ ಕಟ್ಟುವ ಕೌಶಲ ಇರುವುದಿಲ್ಲ.

ಅಂಥ ಕೌಶಲ ಇದ್ದರೂ ಅದಕ್ಕೆ ಬೇಕಾದ ಅಪಾರ ಬಂಡವಾಳ ಆಕರ್ಷಿಸುವ ಜಾಣ್ಮೆ ಇರುವುದಿಲ್ಲ. ಮಸ್ಕ್‌ಗೆ ಇವೆಲ್ಲವೂ ಇವೆ. ದಕ್ಷಿಣ ಆಫ್ರಿಕಾದ ಬ್ರಿಟಿಷ್ ಕುಟುಂಬದಲ್ಲಿ ಹುಟ್ಟಿ, ಕೆನಡಾದಲ್ಲಿ ಓದಿ, ಅಮೆರಿಕದಲ್ಲಿ ಉದ್ಯಮ ಹೂಡಿ ಯುರೋಪ್,

ಜಪಾನ್, ರಷ್ಯ, ಚೀನಾಗಳಿಂದಲೂ ಹೂಡಿಕೆದಾರರನ್ನು ಆಕರ್ಷಿಸಿದ ಆತನ ಒಂದೊಂದು ಹೆಜ್ಜೆಯೂ ಒಂದೊಂದು ಸಾಧನೆಯೂ ಎಳೆ ಪೀಳಿಗೆಗೆ ಅಚ್ಚರಿಯಾಗಿ ಕಾಣುತ್ತಿದೆ. ಮನುಕುಲಕ್ಕೆ ದಾರಿ ತೋರಿಸಲೆಂದೇ ಅನ್ಯಗ್ರಹದಿಂದ ಬಂದಿಳಿದ ವ್ಯಕ್ತಿ ಎಂಬಂತೆ ಸುಶಿಕ್ಷಿತ ಯುವಕರು ಅವನನ್ನು ಆರಾಧಿಸುತ್ತಿದ್ದಾರೆ.

ಮಸ್ಕ್ ಈ ಮೊದಲು ಎಲ್ಲ ಟೆಕಿಗಳಂತೆ ಹೊಸ ಸಾಫ್ಟ್‌ವೇರ್ ಕಂಪನಿ ಆರಂಭಿಸಿ (ಝಿಪ್2, ಪೇಪಾಲ್ ಇತ್ಯಾದಿ) ಅದು ಅಪಾರ ಜನಪ್ರಿಯತೆ ಪಡೆಯುತ್ತಲೇ ಭಾರೀ ಲಾಭಕ್ಕೆ ಬೇರೊಬ್ಬರಿಗೆ ಮಾರಿ ಆ ಹಣದಿಂದ ಇನ್ನೊಂದು ಕಂಪನಿಆರಂಭಿಸುತ್ತಿದ್ದಾಗ ಅದೇಕೋ ಮಂಗಳ ಲೋಕ ಕೈಬೀಸಿ ಕರೆದಂತಾಯಿತು.

ಎಲ್ಲ ಬಿಟ್ಟು ಸ್ಪೇಸ್‌ಎಕ್ಸ್ ಎಂಬ ಕಂಪನಿ ಸ್ಥಾಪಿಸಿ ರಾಕೆಟ್ ನಿರ್ಮಾಣಕ್ಕೆ ಕೈ ಹಾಕಿದ. ಮಾಮೂಲು ವೆಚ್ಚಕ್ಕಿಂತ ಹತ್ತು ಪಟ್ಟು ಕಡಿಮೆ ವೆಚ್ಚದಲ್ಲಿ ರಾಕೆಟ್ ನಿರ್ಮಿಸಿ ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಕಳಿಸಿದ ಮೊದಲ ಖಾಸಗಿ ಕಂಪನಿ ಎನ್ನಿಸಿತು, ಸ್ಪೇಸ್‌ಎಕ್ಸ್. ನಾಲ್ಕೇ ವರ್ಷಗಳ ತಾಲೀಮು ಮುಗಿಸಿ ಬಾಹ್ಯಾಕಾಶ ಅಟ್ಟಣಿಗೆಯನ್ನೂ ಮುಟ್ಟಿ ಬಂತು.

ಕಳೆದ ಡಿಸೆಂಬರಿನಲ್ಲಿ ಈತನ ರಾಕೆಟ್ ಮೇಲಕ್ಕೆ ಚಿಮ್ಮಿ ಹೋಗಿ ಮತ್ತೆ ತಾನು ಹೊರಟ ಸ್ಥಳಕ್ಕೇ ಬಂದಿಳಿಯಿತು. ಜಗತ್ತಿನಲ್ಲೇ ಅದು ಮೊದಲ ಮರುಬಳಕೆಯ ಕ್ಷಿಪಣಿ ಎನಿಸಿತು. (ನಮ್ಮ ಇಸ್ರೊ ಕೂಡ ಕಳೆದ ಮೇ ತಿಂಗಳಲ್ಲಿ ಇಂಥ ಸಾಧನೆ ಮಾಡಿದೆ). ಆತನ ಮುಂದಿನ ಗುರಿ: ಮಂಗಳಲೋಕದಲ್ಲಿ ಮನುಷ್ಯರನ್ನು ಇಳಿಸುವುದು.

ಮನುಷ್ಯ ಪ್ರಭೇದವನ್ನು ಭೂಗ್ರಹದಿಂದ ಆಚೆ ಸಾಗಿಸುವಷ್ಟೇ ಮುಖ್ಯವಾದ ಇನ್ನೊಂದು ಕೆಲಸ ಏನೆಂದರೆ ಭೂಗ್ರಹವನ್ನು ಪೆಟ್ರೋಲ್, ಡೀಸೆಲ್ ಹಾವಳಿಯಿಂದ ಬಚಾವು ಮಾಡುವುದು. ಬ್ಯಾಟರಿ ಶಕ್ತಿಯಿಂದಲೇ ಓಡಬಲ್ಲ ಕಾರುಗಳನ್ನು ತಯಾರಿಸಲೆಂದು ಈತ ಟೆಸ್ಲಾ ಕಂಪನಿಯ ಮುಖ್ಯಸ್ಥನಾದ.

ಪೆಟ್ರೊದೊರೆಗಳನ್ನು ಎದುರು ಹಾಕಿಕೊಂಡೂ ಯುವಕರನ್ನು ಸೆಳೆಯಬಲ್ಲ ಸ್ಪೋರ್ಟ್ಸ್ ಕಾರುಗಳನ್ನು (ರೋಡ್‌ಸ್ಟರ್) ಮೊದಲು ಜನಪ್ರಿಯಗೊಳಿಸಿದ. ನಂತರ ಶೋಕಿಲಾಲರಿಗೆ ಮತ್ತೊಂದು (ಮಾಡೆಲ್ ಎಸ್) ಕಾರನ್ನು ಬೀದಿಗಿಳಿಸಿದ. ಆಮೇಲೆ ‘ಮಾಡೆಲ್ ಎಕ್ಸ್’ ಹೆಸರಿನ ಎಸ್‌ಯುವಿಯನ್ನು ರಸ್ತೆಗಿಳಿಸಿದ. ಬ್ಯಾಟರಿ ಚಾಲಿತ ಕಾರೆಂದರೆ ಮೂಗು ಮುರಿಯುವ ಜನರೇ ಅಂಥ ಕಾರುಗಳಿಗಾಗಿ ಕ್ಯೂನಿಂತು ಕಾಯುವಂತೆ ಮಾಡಿದ.

ಇಡೀ ಅಮೆರಿಕಕ್ಕೆ ಸೌರಶಕ್ತಿಯ ಸಾಧನಗಳನ್ನು ಸರಬರಾಜು ಮಾಡಲೆಂದು ಸೋಲಾರ್ಸಿಟಿ ಹೆಸರಿನ ಡಬ್ಬಾ ಕಂಪನಿ ಖರೀದಿಸಿ ಅದಕ್ಕೆ ಹೊಳಪು ಕೊಟ್ಟ ಮಸ್ಕ್, ತನ್ನೆಲ್ಲ ಟೆಸ್ಲಾ ಕಾರುಗಳಿಗೆ ಲೀಥಿಯಮ್ ಅಯಾನ್ ಬ್ಯಾಟರಿ ಒದಗಿಸಲೆಂದು ಇದೀಗ ನೆವಾಡಾದಲ್ಲಿ ‘ಗಿಗಾ ಫ್ಯಾಕ್ಟರಿ’ ಆರಂಭಿಸಿದ್ದಾನೆ.

126 ಎಕರೆ ವಿಸ್ತೀರ್ಣದ ಈ ಕಟ್ಟಡಕ್ಕೆ ಭೂಕಂಪನ ತಡೆಯಬಲ್ಲ ಮೂರು ಸ್ವತಂತ್ರ ಅಡಿಪಾಯಗಳಿವೆ. ಜಗತ್ತಿನ ಅತಿ ವಿಸ್ತಾರದ ಕಟ್ಟಡವೆಂಬ ಶ್ರೇಯದೊಂದಿಗೆ ನಾಳೆ (ಜುಲೈ 29) ಇದರ ಉದ್ಘಾಟನೆಯಾಗಲಿದೆ.

ಈಗಿನ ಯುಗದ ಮಹಾನ್ ಉದ್ಯಮಶೀಲರೆನಿಸಿದ ಬಿಲ್ ಗೇಟ್ಸ್, ಸ್ಟೀವ್ ಜಾಬ್ಸ್, ಝಕರ್‌ಬರ್ಗ್, ರಾಬಿನ್ ಲಿ, ಮೈಕೆಲ್ ಬ್ಲೂಮ್‌ಬರ್ಗ್ ಮುಂತಾದವರಿಗೆ ಹೋಲಿಸಿದರೆ 42ರ ಹರಯದ ಈಲಾನ್ ಮಸ್ಕ್ ತುಸು ಭಿನ್ನವಾಗಿ ಕಾಣುತ್ತಾನೆ.

ಆತನ ಕನಸುಗಳಲ್ಲಿ ಇಡೀ ಭೂಮಿಯ, ಇಡೀ ಮನುಕುಲದ ಕ್ಷೇಮಚಿಂತನೆ ಕಾಣುತ್ತದೆ. ಇಷ್ಟಕ್ಕೂ ಕಾರ್ಪೊರೇಟ್ ಶಕ್ತಿಗಳ ಮುಷ್ಟಿಯಲ್ಲಿ ಸಿಲುಕಿರುವ ಜಗತ್ತನ್ನು ಸುರಕ್ಷಿತ, ಸುಸ್ಥಿರ ನಾಳೆಗಳತ್ತ ಒಯ್ಯುವುದು ಸುಲಭದ ಕೆಲಸವಲ್ಲ. ಅದರಲ್ಲೂ ಲಾಭವಿದೆ ಎಂಬುದನ್ನು ಹೂಡಿಕೆದಾರರಿಗೆ ಮನದಟ್ಟು ಮಾಡಬೇಕು. ಅದರಲ್ಲಿ ಥ್ರಿಲ್ ಇದೆ ಎಂಬುದನ್ನು ಯುವವಿಜ್ಞಾನಿಗಳಿಗೆ, ಟೆಕಿಗಳಿಗೆ ತೋರಿಸಬೇಕು. ಮಸ್ಕ್ ಅದನ್ನೇ ಮಾಡುತ್ತಿದ್ದಾನೆ.

ಆತನ ಹೈಪರ್ ಲೂಪ್ ಕನಸನ್ನು ನಿಜಗೊಳಿಸಲು ಜಗತ್ತಿನ ವಿವಿಧ ಭಾಗಗಳಿಂದ 115 ತಂಡಗಳು ಪೈಪೋಟಿಯಲ್ಲಿ ಮುಂದೆ ಬಂದಿದ್ದವು. ಅಂತಿಮವಾಗಿ ಆಯ್ಕೆಗೊಂಡ 29 ತಂಡಗಳಲ್ಲಿ ಕೆಲವಕ್ಕೆ ಕೊಳವೆಯ ಒಳವಿನ್ಯಾಸ ತಯಾರಿಸುವ ಕೆಲಸ ಸಿಕ್ಕಿದೆ.

ಮತ್ತೆ ಕೆಲವು ತಂಡಗಳು ವಿದ್ಯುತ್ ಕಾಂತೀಯ ಗಾಲಿಗಳಿಗೆ, ಬ್ರೇಕ್‌ಗಳಿಗೆ ಹೊಸ ರೂಪ ಕೊಡುತ್ತಿವೆ. ಇನ್ನು ಕೆಲವು ಉತ್ಸಾಹಿಗಳು ಪ್ರಯಾಣಿಕರ ಬಂಡಿಯ ವಿನ್ಯಾಸಕ್ಕೆ ಅಂತಿಮ ರೂಪ ಕೊಡುತ್ತಿದ್ದಾರೆ. ಅಂತೂ ಚಲನೆಯ ತಂತ್ರಜ್ಞಾನಕ್ಕೇ ಈಗ ಹೊಸ ಚಾಲನೆ ಸಿಗತೊಡಗಿದೆ.

ಸ್ವಯಂಚಾಲಿತ ಬಸ್ ಬರಲಿ, ಆಕಾಶಮಾರ್ಗದಲ್ಲಿ ಊಟತಿಂಡಿ ಬರಲಿ, ಚಾಲಕರಿಲ್ಲದ ಕಾರು ಬರಲಿ- ಆದರೆ 460 ಕೋಟಿ ವರ್ಷಗಳಿಂದ ಚಾಲಕನಿಲ್ಲದೆ ತನ್ನಷ್ಟಕ್ಕೆ ಚಲಿಸುತ್ತಿರುವ ಈ ಭೂಮಿಯ ಭ್ರಮಣಕ್ಕೆ ಆ ಯಾವುದೂ ಧಕ್ಕೆ ತಾರದಿರಲಿ; ಅದೇ ನಮ್ಮ ಆಶಯ ತಾನೆ?

Comments
ಈ ವಿಭಾಗದಿಂದ ಇನ್ನಷ್ಟು
ಅವಳ ದೇಹದಲ್ಲಿ ರೂಪುಗೊಂಡ ಅಮರ ಕೋಶ

ವಿಜ್ಞಾನ ವಿಶೇಷ
ಅವಳ ದೇಹದಲ್ಲಿ ರೂಪುಗೊಂಡ ಅಮರ ಕೋಶ

8 Mar, 2018
ಕಾರ್ಬನ್ ಮಸಿಯಲ್ಲೇ ಮಿನುಗುವ ವಜ್ರ

ವಿಜ್ಞಾನ ವಿಶೇಷ
ಕಾರ್ಬನ್ ಮಸಿಯಲ್ಲೇ ಮಿನುಗುವ ವಜ್ರ

22 Feb, 2018
ಹಸುರಿನ ಲೋಕದಲ್ಲಿ ಪ್ರಜ್ಞೆಯ ಪ್ರಶ್ನೆ

ವಿಜ್ಞಾನ ವಿಶೇಷ
ಹಸುರಿನ ಲೋಕದಲ್ಲಿ ಪ್ರಜ್ಞೆಯ ಪ್ರಶ್ನೆ

8 Feb, 2018
ಧರ್ಮಕ್ಷೇತ್ರಕ್ಕೆ ಕಾಲಿಟ್ಟ ಮಂಗನ ಕಾಯಿಲೆ

ವಿಜ್ಞಾನ ವಿಶೇಷ
ಧರ್ಮಕ್ಷೇತ್ರಕ್ಕೆ ಕಾಲಿಟ್ಟ ಮಂಗನ ಕಾಯಿಲೆ

25 Jan, 2018
ಕಂಪನಿಗಳ ಮುಷ್ಟಿಯಲ್ಲಿ ಸಕ್ಕರೆ, ಸೀರಿಯಲ್

ವಿಜ್ಞಾನ ವಿಶೇಷ
ಕಂಪನಿಗಳ ಮುಷ್ಟಿಯಲ್ಲಿ ಸಕ್ಕರೆ, ಸೀರಿಯಲ್

11 Jan, 2018