ಕೈಮಗ್ಗ ವಲಯದ ಕಾಯಕಲ್ಪಕ್ಕೆ ಕಸುವು

ಕಳೆದ ವಾರ ಕೇಂದ್ರದ ನೂತನ ಜವಳಿ ಸಚಿವೆ ಸ್ಮೃತಿ ಇರಾನಿ ಆರಂಭಿಸಿದ ‘ನಾನು ಕೈಮಗ್ಗ ಬಟ್ಟೆ ಧರಿಸುತ್ತೇನೆ’  ಟ್ವಿಟರ್ ಪ್ರಚಾರಾಂದೋಲನ ದೊಡ್ಡ ಸದ್ದು ಮಾಡಿದೆ.

ಕೈಮಗ್ಗ ವಲಯದ ಕಾಯಕಲ್ಪಕ್ಕೆ ಕಸುವು

ಕಳೆದ ವಾರ ಕೇಂದ್ರದ ನೂತನ ಜವಳಿ ಸಚಿವೆ ಸ್ಮೃತಿ ಇರಾನಿ ಆರಂಭಿಸಿದ ‘ನಾನು ಕೈಮಗ್ಗ ಬಟ್ಟೆ ಧರಿಸುತ್ತೇನೆ’  ಟ್ವಿಟರ್ ಪ್ರಚಾರಾಂದೋಲನ ದೊಡ್ಡ ಸದ್ದು ಮಾಡಿದೆ.

ಬಿಹಾರದ  ರೇಷಿಮೆ ಸೀರೆ ಧರಿಸಿದ ತಮ್ಮ ಚಿತ್ರದ ಜೊತೆಗೆ    # ಐ ವೇರ್ ಹ್ಯಾಂಡ್‌ಲೂಮ್    (ನಾನು ಕೈಮಗ್ಗ ಬಟ್ಟೆ ಧರಿಸುತ್ತೇನೆ)  ಎಂದು ಟ್ವೀಟ್ ಮಾಡಿದ  ಸಚಿವೆ, ‘ಕೈಮಗ್ಗ ಬಟ್ಟೆ ಧರಿಸಿದ ಚಿತ್ರಗಳನ್ನು ಪೋಸ್ಟ್ ಮಾಡಿ ಐದು ಮಂದಿಯನ್ನು ಟ್ಯಾಗ್ ಮಾಡಿ’ ಎಂದು ಜನರಿಗೆ  ಕರೆ ನೀಡಿದ್ದರು.

ಕಳೆದ ವರ್ಷದಿಂದ  ಪ್ರತಿ ವರ್ಷ ಆಗಸ್ಟ್ 7ರಂದು  ರಾಷ್ಟ್ರೀಯ ಕೈಮಗ್ಗ ದಿನ ಆಚರಿಸಲಾಗುತ್ತಿದೆ. ಇದಕ್ಕೆ ಪೂರ್ವಭಾವಿಯಾಗಿ ಒಂದು ವಾರ ಮೊದಲೇ ಸ್ಮೃತಿ ಇರಾನಿ ಅಂತರ್ಜಾಲದಲ್ಲಿ ನಡೆಸಿದ ಈ ಅಭಿಯಾನಕ್ಕೆ  ವ್ಯಕ್ತವಾದ ಬೆಂಬಲ ಅಪಾರ. ಫ್ಯಾಷನ್ ವಿನ್ಯಾಸಕಾರ ಮಿಲಿಂದ್ ಸೋಮನ್, ನಿವೃತ್ತ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್,  ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ಹಿಂದಿನ  ಸಮತಾ ಪಕ್ಷದ ನಾಯಕಿ ಜಯಾ ಜೇಟ್ಲಿ ಸೇರಿದಂತೆ  ಹಲವು ಖ್ಯಾತನಾಮರು ಹಾಗೂ ಜನಸಾಮಾನ್ಯರು ಕೈಮಗ್ಗ ಬಟ್ಟೆಗಳನ್ನು ಧರಿಸಿದ  ತಂತಮ್ಮ ಚಿತ್ರಗಳನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿ ಸ್ಪಂದಿಸಿದರು.

ಖಾದಿಯೂ ಅಂತರ್ಗತವಾಗಿರುವ ಕೈಮಗ್ಗ, ರಾಷ್ಟ್ರೀಯ ಚಳವಳಿಯಾಗಿ ವ್ಯಾಪಿಸುವುದಾದಲ್ಲಿ ಅದು ನಿಜಕ್ಕೂ ಅಭಿನಂದನೀಯ. ಆದರೆ  ಬದಲಾಗುತ್ತಿರುವ ಹೊಸ ಭಾರತಕ್ಕೆ ಕೈಮಗ್ಗವನ್ನು ಪರಿಚಯಿಸುವ ಆಂದೋಲನ ಹ್ಯಾಷ್‌ಟ್ಯಾಗ್ ಟ್ವಿಟರ್ ಆಂದೋಲನಕ್ಕಷ್ಟೇ ಸೀಮಿತವಾಗಿ ಉಳಿಯಬಾರದೆಂಬ ಕಾಳಜಿಯೂ ಮುಖ್ಯ.

ರಾಷ್ಟ್ರದ 5000 ವರ್ಷಗಳ ಹಿಂದಿನ ಪರಂಪರೆಯನ್ನು ಮೆಲುಕು ಹಾಕಲು ಸಿಕ್ಕ ಅವಕಾಶ ಇದು ಎಂದು ಹೇಳಬಹುದು. ಭಾರತದ ಕೈಮಗ್ಗ ವಲಯದ ಮೇಲೆ ಇಂಗ್ಲೆಂಡ್‌ನ ಕೈಗಾರಿಕಾ ಕ್ರಾಂತಿ ನಕಾರಾತ್ಮಕ ಪರಿಣಾಮ ಬೀರಿದ್ದುದನ್ನು ಇಲ್ಲಿ  ಸ್ಮರಿಸಬಹುದು. ಕಾರ್ಲ್ ಮಾರ್ಕ್ಸ್ (1853) ಈ ವಿದ್ಯಮಾನವನ್ನು ವ್ಯಾಖ್ಯಾನಿಸುವುದು ಹೀಗೆ:   ‘ಭಾರತೀಯ ಕೈಮಗ್ಗವನ್ನು ಮುರಿದು ಚರಕವನ್ನು ನಾಶಪಡಿಸಿದ್ದು ‘ಬ್ರಿಟಿಷ್ ಅತಿಕ್ರಮಣಕಾರ’. ಯುರೋಪಿಯನ್ ಮಾರುಕಟ್ಟೆಯಲ್ಲಿ ಭಾರತೀಯ ಹತ್ತಿಯನ್ನು ಇಂಗ್ಲೆಂಡ್ ನಿರ್ಬಂಧಿಸಿತು. ನಂತರ ಹತ್ತಿಯ ತಾಯ್ನೆಲವೇ ಇಂಗ್ಲೆಂಡ್‌ನ  ಹತ್ತಿಯ ರಫ್ತಿನ ಮಹಾಪೂರದಲ್ಲಿ ಮುಳುಗಿತು.’

ರಾಷ್ಟ್ರಕ್ಕೆ ಸ್ವಾತಂತ್ರ್ಯ ಲಭಿಸಿದ ನಂತರವೂ  ಕೈಮಗ್ಗ ಹಿನ್ನಡೆ ಅನುಭವಿಸಿತು. ನಮ್ಮ ಪಂಚವಾರ್ಷಿಕ ಯೋಜನೆಗಳು ಕೃಷಿ ಹಾಗೂ ಕೈಗಾರಿಕೀಕರಣದತ್ತ ಗಮನ ಕೇಂದ್ರೀಕರಿಸಿದ್ದವು. ಈ ಮಧ್ಯೆ ಹೆಚ್ಚಿನ ಶ್ರಮಶಕ್ತಿ ಅಗತ್ಯವಿಲ್ಲದ ಪವರ್ ಲೂಮ್ ಜನಪ್ರಿಯತೆ ಗಳಿಸಿಕೊಂಡಿತು.  ಖರೀದಿ ದೃಷ್ಟಿಯಿಂದ ಇದು ಹೆಚ್ಚು ಅಗ್ಗವಾಯಿತು. ಈಗಲೂ ರಾಷ್ಟ್ರದಲ್ಲಿ ಬಟ್ಟೆಗಳ ತಯಾರಿಕೆಯಲ್ಲಿ ಸುಮಾರು ಶೇ 60ರಷ್ಟು ಪ್ರಮಾಣ ಪವರ್ ಲೂಮ್ ವಲಯಕ್ಕೆ ಸೇರಿದೆ. 

ಇಂತಹ ದಿನಗಳಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯ ಹಾಗೂ  ಪುಪುಲ್ ಜಯಕರ್  ಅವರಂತಹ ವ್ಯಕ್ತಿಗಳ ಪರಿಶ್ರಮ ಹಾಗೂ ಸರ್ಕಾರ ಪ್ರಕಟಿಸಿದ  ಕೆಲವು ನೀತಿಗಳಿಂದ ರಾಷ್ಟ್ರದಲ್ಲಿ ಕೈಮಗ್ಗ ಕ್ಷೇತ್ರ  ಪುನರುಜ್ಜೀವನವನ್ನು ಕಂಡುಕೊಂಡಿತು. ಇತ್ತೀಚಿನ ದಶಕಗಳಲ್ಲಿ  ಲೈಲಾ ತ್ಯಾಬ್ಜಿ ಹಾಗೂ ಜಯಾ ಜೇಟ್ಲಿ ಅವರಂತಹವರು ಕೈಮಗ್ಗದ ಪರವಾದ ದೀವಿಗೆಯನ್ನು ಎತ್ತಿ ಹಿಡಿದವರಲ್ಲಿ ಮುಖ್ಯರು.

ಕೈಮಗ್ಗ ರಫ್ತಿಗೆ ಉತ್ತೇಜನ ನೀಡುವುದಕ್ಕಾಗಿ 1958ರಲ್ಲಿ  ಭಾರತ ಕೈಮಗ್ಗ ಹಾಗೂ ಕರಕುಶಲ ವಸ್ತು ರಫ್ತು ನಿಗಮವನ್ನು ಸ್ಥಾಪಿಸಲಾಯಿತು. ರಾಜ್ಯ ಕೈಮಗ್ಗ ಸಂಸ್ಥೆಗಳಿಗೆ ನೂಲು, ಬಣ್ಣ ಹಾಗೂ  ರಾಸಾಯನಿಕಗಳಂತಹ ಕಚ್ಚಾ ವಸ್ತುಗಳ ನಿರಂತರ ಸರಬರಾಜಿಗಾಗಿ 1983ರಲ್ಲಿ ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಗಮ (ಎನ್ಎಚ್‌ಡಿಸಿ)  ಸ್ಥಾಪಿಸಲಾಯಿತು. 

ಆದರೆ ಹೆಚ್ಚಿನ   ಬದಲಾವಣೆಗಳನ್ನು ತರಲು ಈ ಯೋಜನೆಗಳು ಸಾಕಾಗಲಿಲ್ಲ. ನಂತರ, ಕೈಮಗ್ಗ ಉದ್ಯಮದ ವೈಜ್ಞಾನಿಕ ಬೆಳವಣಿಗೆಗಾಗಿ 1976ರಲ್ಲಿ ಕೇಂದ್ರದಲ್ಲಿ  ಕೈಮಗ್ಗ ಅಭಿವೃದ್ಧಿ ಕಮಿಷನರ್ ಕಚೇರಿಯನ್ನು ಸ್ಥಾಪಿಸಲಾಯಿತು. ಆಗಿನಿಂದಲೂ  ಕೈಮಗ್ಗ ನೇಕಾರರ ಅನುಕೂಲಕ್ಕಾಗಿ ವಿವಿಧ ಕ್ಷೇಮಾಭಿವೃದ್ಧಿ ಯೋಜನೆಗಳನ್ನು ಕೈಮಗ್ಗ ಅಭಿವೃದ್ಧಿ ಕಮಿಷನರ್ ಕಚೇರಿ ಅನುಷ್ಠಾನಗೊಳಿಸುತ್ತಿದೆ. ಕಚ್ಚಾವಸ್ತು ಸರಬರಾಜು, ತಯಾರಿಕೆ, ಮಾರಾಟ, ಕ್ಷೇಮಾಭಿವೃದ್ಧಿ ಪ್ಯಾಕೇಜ್, ತರಬೇತಿ  ಹಾಗೂ 1985ರ ಕೈಮಗ್ಗ (ಮೀಸಲು) ಕಾಯಿದೆ ಜಾರಿ ಇತ್ಯಾದಿ ಪ್ರಮುಖ ಕಾರ್ಯಕ್ರಮಗಳು ಇದರಡಿ ಬರುತ್ತವೆ.

8ನೇ ಪಂಚವಾರ್ಷಿಕ ಯೋಜನೆ ಸಂದರ್ಭದಲ್ಲಿ (1992-97),  ಕೈಮಗ್ಗ ನೇಕಾರರಿಗೆ ಅನುಕೂಲಮಾಡಿಕೊಡುವುದಕ್ಕಾಗಿ ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರಗಳು ಮತ್ತಿತರ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ₹1098.8 ಕೋಟಿ ಬಿಡುಗಡೆ ಮಾಡಿತು.  ಇದರಿಂದಾಗಿ ಕೈಮಗ್ಗ ಬಟ್ಟೆಗಳ ತಯಾರಿಕೆ 50ರ ದಶಕದ ಆರಂಭದಲ್ಲಿ 50 ಕೋಟಿ ಚದರ ಮೀಟರ್  ಇದ್ದದ್ದು  1996-97ಕ್ಕೆ 723 ಕೋಟಿ ಚದರ ಮೀಟರ್ ಗೆ 14 ಪಟ್ಟು ಏರಿಕೆ ಕಂಡಿತ್ತು.

ಕೈಮಗ್ಗ ನೇಕಾರಿಕೆ, ಕೃಷಿ ನಂತರ ಅತಿ ದೊಡ್ಡ ಆರ್ಥಿಕ ಚಟುವಟಿಕೆ ಎಂಬುದನ್ನು ಮರೆಯಲಾಗದು. ರಾಷ್ಟ್ರದ ಒಟ್ಟು ಬಟ್ಟೆ ತಯಾರಿಕೆಗೆ  ಕೈಮಗ್ಗ ವಲಯದ ಪಾಲು ಸುಮಾರು ಶೇ 15ರಷ್ಟಿದೆ. 2015ರ ಜವಳಿ ಸಚಿವಾಲಯದ ಟಿಪ್ಪಣಿ ಪ್ರಕಾರ,  ಭಾರತದಲ್ಲಿ ಅಂದಾಜು 43 ಲಕ್ಷ ಕೈಮಗ್ಗ ನೇಕಾರರಿದ್ದಾರೆ. 1995-96ರ ಗಣತಿಯಲ್ಲಿ 65 ಲಕ್ಷ ಮಂದಿ ಇದ್ದದ್ದನ್ನು ಗಣನೆಗೆ ತೆಗೆದುಕೊಂಡಲ್ಲಿ ಇದು ತೀವ್ರ ಕುಸಿತವನ್ನು ತೋರುತ್ತಿದೆ.

ಕಾಂಚೀಪುರಂ ಸೇರಿದಂತೆ ಪ್ರಸಿದ್ಧ ಕೈಮಗ್ಗ ಕೇಂದ್ರಗಳಿಂದ ನಗರಗಳಿಗೆ ಬದುಕು ಅರಸಿ  ನೇಕಾರರು ವಲಸೆ ಹೋಗುತ್ತಿದ್ದಾರೆ. ಕೈಮಗ್ಗ  ಉದ್ಯಮಕ್ಕೆ ಪೂರೈಕೆಯಾಗುತ್ತಿದ್ದ  ನಿರ್ದಿಷ್ಟ ಪ್ರದೇಶದ ಹತ್ತಿ ತಳಿ ವೈವಿಧ್ಯಗಳು ವಿನಾಶದ ಅಂಚಿಗೆ ಸರಿದಿವೆ. ಕೈಮಗ್ಗ  ಉತ್ಪನ್ನಗಳ  ಯಾಂತ್ರೀಕೃತ ಅನುಕರಣೆಯ ಉತ್ಪನ್ನಗಳ ವಿವೇಚನಾರಹಿತ ಆಮದು ಹಾಗೂ ಕಡಿಮೆ ಸುಂಕಗಳ ಇತ್ತೀಚಿನ ಡಬ್ಲ್ಯುಟಿಒ ವ್ಯಾಪಾರ ಯುಗದಲ್ಲಿ, ನೈಜ ಕೈಮಗ್ಗ ನೇಕಾರರಿಗೆ ಮಾರುಕಟ್ಟೆ ಕುಸಿತವಾಗುತ್ತಿರುವ ಸ್ಥಿತಿ ಆತಂಕಕಾರಿಯಾಗೇ ಇದೆ.

ಇಂತಹ ಸಂದರ್ಭದಲ್ಲಿ, ಕೈಮಗ್ಗ ಕಾಯಕಲ್ಪಕ್ಕೆ ಉತ್ತಮ ಕೈಮಗ್ಗ ನೀತಿ ಬೇಕು.  ಸಾಲಸೌಲಭ್ಯ ಹಾಗೂ ಮಾರುಕಟ್ಟೆ ನೀತಿ ಸುಧಾರಿಸುವುದೂ ಅವಶ್ಯ. ಕೈಮಗ್ಗವನ್ನು ‘ವಿದ್ಯುತ್ ಮಗ್ಗಕ್ಕಿಂತ ಬೇರೆಯಾದ ಮಗ್ಗ ’ ಎಂದು   1985ರ ಕೈಮಗ್ಗ (ತಯಾರಿಕೆಗೆ ಮೀಸಲಾದ  ಉತ್ಪನ್ನಗಳು) ಕಾಯಿದೆ ವಿವರಿಸುತ್ತದೆ.

ಈ ಕಾಯಿದೆಯಡಿ  ಶುದ್ಧ ರೇಷ್ಮೆ  ಹಾಗೂ ಹತ್ತಿಯ  ಸೀರೆ, ಲುಂಗಿ, ಡ್ರೆಸ್ ಮೆಟೀರಿಯಲ್, ಟವೆಲ್‌ಗಳಂತಹ  22 ಉತ್ಪನ್ನಗಳನ್ನು ಸೇರಿಸಲಾಗಿದೆ.  ಆದರೆ 90ರ ದಶಕದ ಮಧ್ಯಭಾಗದಲ್ಲಿ  ಇದು 11 ವಸ್ತುಗಳಿಗೆ ಕುಸಿಯಿತು. 2012ರಲ್ಲಿ ಹೊಸದೊಂದು ವಿವರಣೆಯನ್ನೂ ಮುಂದಿಡಲಾಯಿತು. ಕೈಮಗ್ಗ ಎಂದರೆ  ವಿದ್ಯುತ್ ಮಗ್ಗವಲ್ಲದ ಯಾವುದೇ ಮಗ್ಗ.  ನೇಯ್ಗೆಯ ಪ್ರಕ್ರಿಯೆಯಲ್ಲಿ ಕನಿಷ್ಠ ಒಂದು ಹಂತದಲ್ಲಾದರೂ ಮಾನವ  ಶಕ್ತಿ  ಒಳಗೊಳ್ಳುವಂತಹ ಯಾವುದೇ ಮಿಶ್ರ  (ಹೈಬ್ರಿಡ್)  ಮಗ್ಗವನ್ನೂ  ಇದು ಒಳಗೊಳ್ಳುತ್ತದೆ.

ಕೈಮಗ್ಗ ಉತ್ಪನ್ನಗಳಿಗೆ ನೀಡಿರುವ ಈ ರಕ್ಷಣೆ ಪ್ರಮಾಣವನ್ನು ಇನ್ನೂ ಕಡಿಮೆ ಮಾಡಬೇಕೆಂದು ಪವರ್‌ಲೂಮ್  ಸಂಘ ಒತ್ತಾಯಿಸುತ್ತಲೇ ಬಂದಿದೆ. ಆದರೆ ಈಗಾಗಲೇ ಈ ಕಾಯಿದೆ ಕಟ್ಟುನಿಟ್ಟಾಗಿ ಜಾರಿಯಾಗದೇ ಇರುವುದರಿಂದ ಪವರ್ ಲೂಮ್ ಉತ್ಪನ್ನಗಳನ್ನು ಕೈಮಗ್ಗ ಉತ್ಪನ್ನಗಳೆಂದು  ಮಾರಾಟ ಮಾಡುವ ಪ್ರವೃತ್ತಿಯೂ ಇದೆ. ಇದರಿಂದಾಗಿ ಕೈಮಗ್ಗ ಉತ್ಪನ್ನಗಳಿಗೆ ಮಾರುಕಟ್ಟೆ ಮತ್ತಷ್ಟು ಕುಸಿಯುತ್ತಿರುವುದು ಕಹಿವಾಸ್ತವ.

ಕೈಮಗ್ಗ ಕ್ಷೇತ್ರದಲ್ಲಿ  ಕೆಲಸ ಮಾಡುವವರಲ್ಲಿ ಶೇ 77. 90ರಷ್ಟು ಮಂದಿ ಮಹಿಳೆಯರು. ಶೇ 10.13 ರಷ್ಟು ಮಂದಿ ಪರಿಶಿಷ್ಟ ಪಂಗಡಗಳಿಗೆ ಸೇರಿದವರಾದರೆ  ಶೇ 18.12  ರಷ್ಟು ಮಂದಿ  ಪರಿಶಿಷ್ಟ ಜಾತಿಗಳವರು. ಹಾಗೆಯೇ  ಶೇ 45.18 ರಷ್ಟು ಮಂದಿ ಓಬಿಸಿ ಮತ್ತು ಉಳಿದ ಶೇ 26.57ರಷ್ಟು ಮಂದಿ ಇತರ ಜಾತಿಗಳಿಗೆ ಸೇರಿದವರು ( ಕೈಮಗ್ಗ ಗಣತಿ 2013)ಎಂಬುದನ್ನು ಗಮನಿಸಬೇಕು.

ಕೈಮಗ್ಗ ನೇಯ್ಗೆ ಎಂಬುದು ಕೌಶಲವನ್ನು ಒಳಗೊಳ್ಳುವ  ಅಸಾಧಾರಣ ಚಟುವಟಿಕೆ ಎಂಬುದರಲ್ಲಿ ಎರಡು ಮಾತಿಲ್ಲ. ಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆಗೊಳ್ಳುವ ಕಲೆಗಾರಿಕೆ ಇದು. ಆದರೆ ಭಾರತದ ಸಾಂಸ್ಕೃತಿಕ  ಪರಂಪರೆಯನ್ನು ಪೋಷಿಸಿ ಬೆಳೆಸುವ ಈ ಕುಶಲಕರ್ಮಿಗಳ ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳು ಮಾತ್ರ  ಸುಧಾರಣೆ ಕಂಡಿಲ್ಲ.

ಈ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಮಹಿಳಾ ಸಬಲೀಕರಣಕ್ಕೆ ಕೈಮಗ್ಗ ವಲಯದ ಬೆಳವಣಿಗೆ ಮುಖ್ಯವಾದದ್ದು ಎಂದಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ನಿಜ. ನೇಯ್ಗೆ ಎನ್ನುವುದು ಮಹಿಳೆಯರ ಅಪಾರ ಶ್ರಮ ಒಳಗೊಳ್ಳುವ ಉದ್ದಿಮೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ನೇಕಾರ್ತಿ ಅಗೋಚರಳಾಗಿದ್ದಾಳೆ ಎಂಬುದು ವಿಪರ್ಯಾಸ.

‘ನೇಕಾರನ ಹೆಂಡತಿ ಬೆತ್ತಲೆ’ಎಂಬ ಗಾದೆ, ನೇಕಾರರ ಸಂಕಷ್ಟಗಳನ್ನು ಧ್ವನಿಪೂರ್ಣವಾಗಿ ಹೇಳುವ ಮಾತಾಗಿದೆ. ಜೊತೆಗೆ, ಪುರುಷರ ಪರಿಶ್ರಮವನ್ನು ಮಾತ್ರವೇ ಈ ಗಾದೆ ಧ್ವನಿಸುತ್ತದೆ. ಹೆಣ್ಣುಮಕ್ಕಳನ್ನು ನೇಕಾರರು ಎಂಬುದಕ್ಕಿಂತ ಸಹಾಯಕರು ಎಂದಷ್ಟೇ ಪರಿಗಣಿಸುವ ಧೋರಣೆ ಬದಲಾಗಬೇಕಾಗಿರುವುದು ಮುಖ್ಯ.

ವೈವಿಧ್ಯಮಯ ಅಗತ್ಯಗಳ ಪೂರೈಕೆಗೆ ಜವಳಿ ಕ್ಷೇತ್ರದಲ್ಲಿ ಮಿಲ್‌ಗಳು, ವಿದ್ಯುತ್ ಮಗ್ಗಗಳಷ್ಟೇ ಅಲ್ಲ  ಕೈಮಗ್ಗ ಹಾಗೂ ಖಾದಿ ವಲಯವೂ ಬೇಕು ಎಂಬಂತಹ ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕು. ಆದರೆ ಕೈಮಗ್ಗಕ್ಕೆ ಅಗತ್ಯ  ಪ್ರಾಶಸ್ತ್ಯವೂ ಸಿಗಬೇಕು. ಸೂಕ್ಷ್ಮ ಕಲೆಗಾರಿಕೆ ಸಾಧ್ಯವಾಗುವುದು ಕೈಮಗ್ಗದಲ್ಲಿ ಮಾತ್ರ.

‘ಕೈಮಗ್ಗದ ಸೌಂದರ್ಯ  ಪ್ರಜ್ಞೆಯನ್ನು  ಮಾಜಿ ಪ್ರಧಾನಿ ಇಂದಿರಾಗಾಂಧಿ ಕಂಡುಕೊಂಡಿದ್ದರು’   ಎಂಬಂತಹ ಪತ್ರಕರ್ತೆ ಸಾಗರಿಕಾ ಘೋಷ್ ಟ್ವೀಟ್‌ಗೆ  ಅವಹೇಳನಕಾರಿ ಮಾತುಗಳು ಅಂತರ್ಜಾಲದಲ್ಲಿ ಹರಿದಾಡಿದವು. ಆದರೆ,   ಕೈಮಗ್ಗ ಬಟ್ಟೆಗಳನ್ನು ಫ್ಯಾಷನ್ ಆಗಿಸುವಲ್ಲಿ  ಹಿಂದಿನ ಪ್ರಧಾನಿ ಇಂದಿರಾಗಾಂಧಿ ಅವರ ಪ್ರಯತ್ನಗಳನ್ನು ಸಾಗರಿಕಾ ಘೋಷ್ ನೆನಪಿಸಿಕೊಂಡಿದ್ದು ಸರಿಯಾಗಿಯೇ ಇತ್ತು.

ಇದರಲ್ಲಿ ಯಾವುದೇ ಉತ್ಪ್ರೇಕ್ಷೆ  ಇಲ್ಲ. ಇಂದಿರಾ ಗಾಂಧಿಯವರು ಸುಂದರವಾದ ಕೈಮಗ್ಗದ ಸೀರೆ, ಶಾಲುಗಳನ್ನು ತೊಡುತ್ತಿದ್ದದ್ದು ನಿಜವೇ. ಇಂದಿರಾಗಾಂಧಿಯವರ ಬಹುತೇಕ ಸೀರೆಗಳನ್ನು ಆಯ್ಕೆ ಮಾಡಿ ತರಿಸುತ್ತಿದ್ದವರು ಅವರ ಒಳ್ಳೆಯ ಸ್ನೇಹಿತೆ ಪುಪುಲ್ ಜಯಕರ್. ಪುಪುಲ್ ಜಯಕರ್, ಕರಕುಶಲ ಹಾಗೂ ಕೈಮಗ್ಗ ರಫ್ತು ನಿಗಮದ ಅಧ್ಯಕ್ಷೆಯೂ ಆಗಿದ್ದರು. ಸೋನಿಯಾ ಗಾಂಧಿ ಹಾಗೂ ಮೇನಕಾ ಗಾಂಧಿ ಅವರಲ್ಲೂ ಕೈಮಗ್ಗ ಬಟ್ಟೆಗಳ ಕುರಿತಾದ ಅಭಿರುಚಿ ಇರುವುದು ಎದ್ದು ಕಾಣಿಸುತ್ತದೆ.

ಕೈಮಗ್ಗದ ಬಟ್ಟೆಗಳು ಸಮಾಜದ ಒಂದು ವರ್ಗದ ಜನರಿಗಷ್ಟೇ ಆಪ್ಯಾಯಮಾನ ಎಂಬ ಭಾವನೆ  ಇದೆ.  ಆದರೆ ಜನಸಾಮಾನ್ಯರಿಗೂ  ಕೈಮಗ್ಗದ ಉತ್ಪನ್ನಗಳು ಎಟುಕುವಂತಾದರೆ ‘ಮೇಕ್ ಇನ್ ಇಂಡಿಯಾ’ದಂತಹ ಪ್ರಚಾರಾಂದೋಲನ ಅರ್ಥಪೂರ್ಣವಾಗುತ್ತದೆ.

‘ಕೈಮಗ್ಗದ ಬಟ್ಟೆಗಳ ಹಿಂದಿರುವ ಪರಿಶ್ರಮ ಹಾಗೂ ಅದರ ಕಲಾತ್ಮಕತೆಯನ್ನು ಖರೀದಿದಾರರು ಅರ್ಥ ಮಾಡಿಕೊಳ್ಳಬೇಕು. ಹಾಗಾದಾಗ ಗ್ರಾಮೀಣ ಭಾರತ ಎಂದರೆ ಏನು ಎಂಬುದು ನಮಗೆ ಅರ್ಥವಾಗುತ್ತದೆ. ಕೈಮಗ್ಗದ ಉದ್ದಿಮೆಯನ್ನು ಪುನರುಜ್ಜೀವಗೊಳಿಸಲು ಇದು ಸಹಕಾರಿಯಾಗುತ್ತದೆ.

ಆಗ ನೈಸರ್ಗಿಕ ಬಣ್ಣಗಾರಿಕೆಯ ವಿಧಾನ, ಟೈ ಅಂಡ್ ಡೈ, ಮರದಚ್ಚಿನ ಮುದ್ರಣದ ವಿಧಾನ, ಆಪ್ಲಿಕ್ ವರ್ಕ್ ( ಬಟ್ಟೆಯ ಮೇಲೆ ಬಟ್ಟೆ ಹೊಲಿಯುವುದು), ಕಲಂಕಾರಿ – ಇತ್ಯಾದಿ ಕುಶಲಕಲೆಗಳು ಮರುಜೀವ ಪಡೆಯುವುದು ಸಾಧ್ಯ ’ ಎಂದು ರಾಜ್ಯದಲ್ಲಿ ತಮ್ಮದೇ ಪರಿಕಲ್ಪನೆಯೆ ‘ದೇಸಿ’ ಕೈಮಗ್ಗ ಉತ್ಪನ್ನಗಳ ಅಂಗಡಿಗಳನ್ನು ಪರಿಚಯಿಸಿರುವ ಲೇಖಕ ಹಾಗೂ ರಂಗಕರ್ಮಿ ಪ್ರಸನ್ನ ಹಿಂದೊಮ್ಮೆ ಈ  ಲೇಖಕಿಗೆ ನೀಡಿದ ಪತ್ರಿಕಾ ಸಂದರ್ಶನದಲ್ಲಿ ಹೇಳಿದ್ದರು.

ಈ ಕೊಳ್ಳುಬಾಕ ಯುಗದಲ್ಲಿ ವ್ಯಾಪಾರ ವ್ಯವಹಾರಗಳೂ ಚಳವಳಿಯಾಗಬಹುದು. ಮಾರುಕಟ್ಟೆಯೆಂಬುದು ಇಲ್ಲದ ಬೇಡಿಕೆ ಪೂರೈಸುವ ತಾಣವಾಗಬಾರದು. ಇರುವ ವಾಸ್ತವಿಕ ಬೇಡಿಕೆಯ ಸಮರ್ಥ ನಿರ್ವಹಣೆ ಮಾಡಬೇಕು ಎಂಬುದು  ಅವರ ವ್ಯಾಖ್ಯಾನ.

ಜಾಗತಿಕ ಸಂಸ್ಕೃತಿಗೆ ತೆರೆದುಕೊಂಡಿರುವ ಆಧುನಿಕೋತ್ತರ ಸಮಾಜದಲ್ಲಿ  ಪರಿಸರ ಸ್ನೇಹಿ, ಸಾವಯವ ಹಾಗೂ ಸುಸ್ಥಿರವಾದ ಕೈಮಗ್ಗ ಪರಂಪರೆ ಉಳಿಸುವ ಅಭಿಯಾನಕ್ಕೆ ಕೇಂದ್ರ ಸರ್ಕಾರ ನೀಡಿರುವ ಚಾಲನೆ, ಕೈಮಗ್ಗ ದಿನದ ಆಚರಣೆಗಷ್ಟೇ ಸೀಮಿತವಾಗದಿರಲಿ.

Comments
ಈ ವಿಭಾಗದಿಂದ ಇನ್ನಷ್ಟು
ಯಥಾಸ್ಥಿತಿ ಬದಲಿಸಲು ಮುನ್ನುಡಿಯಾಗಲಿ

ಕಡೆಗೋಲು
ಯಥಾಸ್ಥಿತಿ ಬದಲಿಸಲು ಮುನ್ನುಡಿಯಾಗಲಿ

7 Mar, 2018
ಲಿಂಗತ್ವ ಸಂವೇದನಾಶೀಲ ನೀತಿಯ ಜೊತೆಗೆ ಹಣಹೂಡಿಕೆಯ ಅಗತ್ಯ

ಕಡೆಗೋಲು
ಲಿಂಗತ್ವ ಸಂವೇದನಾಶೀಲ ನೀತಿಯ ಜೊತೆಗೆ ಹಣಹೂಡಿಕೆಯ ಅಗತ್ಯ

21 Feb, 2018
ಗುಲಾಬಿ ಬಣ್ಣದ ಸಾಂಕೇತಿಕತೆ ಆಚೆಗೆ ದಕ್ಕಿದ್ದು ಏನು?

ಕಡೆಗೋಲು
ಗುಲಾಬಿ ಬಣ್ಣದ ಸಾಂಕೇತಿಕತೆ ಆಚೆಗೆ ದಕ್ಕಿದ್ದು ಏನು?

7 Feb, 2018
‘ದಿ ಪೋಸ್ಟ್’ ನೀಡುವ ಚೈತನ್ಯಶೀಲ ಸಂದೇಶ

ಕಡೆಗೋಲು
‘ದಿ ಪೋಸ್ಟ್’ ನೀಡುವ ಚೈತನ್ಯಶೀಲ ಸಂದೇಶ

24 Jan, 2018
ತಲಾಖ್ ಮಸೂದೆ: ನ್ಯಾಯ ದಕ್ಕುವುದೇ?

ಕಡೆಗೋಲು
ತಲಾಖ್ ಮಸೂದೆ: ನ್ಯಾಯ ದಕ್ಕುವುದೇ?

26 Dec, 2017