ಕಲಬುರ್ಗಿ ರಂಗಾಯಣ ಮರುಹುಟ್ಟು ಪಡೆಯಲಿ

ಕಲಬುರ್ಗಿ ರಂಗಾಯಣದ ಚರಿತ್ರೆಯ ಮೊದಲ ಅಧ್ಯಾಯವೇ ವೈಫಲ್ಯ ಮತ್ತು ಸಂಘರ್ಷದ ಕತೆ ಹೇಳುತ್ತದೆ. ಈ ಕತೆಯ ಪಾತ್ರಧಾರಿಗಳು ರಂಗ ಸಮಾಜ, ಸರ್ಕಾರ, ನಿರ್ದೇಶಕ, ಕಲಾವಿದರು, ತಂತ್ರಜ್ಞರು, ನಿರ್ದೇಶಕ ಮತ್ತು ಕಲಾವಿದರ ಪರ–ವಿರುದ್ಧ ಗುಂಪುಗಳು, ಪ್ರಜ್ಞಾವಂತರು, ಸಾಹಿತಿಗಳು, ಹವ್ಯಾಸಿ ಕಲಾವಿದರು, ಜನಪ್ರತಿನಿಧಿಗಳು...ರಂಗ ಸಮಾಜ ಇಲ್ಲಿಗೆ ನಿರ್ದೇಶಕರನ್ನು ನೇಮಿಸುವಾಗ ಪ್ರಾದೇಶಿಕ ಬೇಲಿಯಲ್ಲಿ ಬಂದಿ ಆಯಿತು

ಕಲಬುರ್ಗಿ ರಂಗಾಯಣದ ಚರಿತ್ರೆಯ ಮೊದಲ ಅಧ್ಯಾಯವೇ ವೈಫಲ್ಯ ಮತ್ತು ಸಂಘರ್ಷದ ಕತೆ ಹೇಳುತ್ತದೆ. ಈ ಕತೆಯ ಪಾತ್ರಧಾರಿಗಳು ರಂಗ ಸಮಾಜ, ಸರ್ಕಾರ, ನಿರ್ದೇಶಕ, ಕಲಾವಿದರು, ತಂತ್ರಜ್ಞರು, ನಿರ್ದೇಶಕ ಮತ್ತು ಕಲಾವಿದರ ಪರ–ವಿರುದ್ಧ ಗುಂಪುಗಳು, ಪ್ರಜ್ಞಾವಂತರು, ಸಾಹಿತಿಗಳು, ಹವ್ಯಾಸಿ ಕಲಾವಿದರು, ಜನಪ್ರತಿನಿಧಿಗಳು...ರಂಗ ಸಮಾಜ ಇಲ್ಲಿಗೆ ನಿರ್ದೇಶಕರನ್ನು ನೇಮಿಸುವಾಗ ಪ್ರಾದೇಶಿಕ ಬೇಲಿಯಲ್ಲಿ ಬಂದಿ ಆಯಿತು. ಮೊದಲ ಅವಧಿಗಾದರೂ ‘ಈ ಮಿತಿ’ಯನ್ನು ಮೀರಬೇಕಿತ್ತು.

ಯಾವುದೇ ಸಂಸ್ಥೆಯನ್ನು ಕಟ್ಟುವ ವ್ಯಕ್ತಿಯೊಬ್ಬರು ಸಮರ್ಥರು, ಮುನ್ನೋಟ ಮತ್ತು ನಾಯಕತ್ವ ಗುಣಉಳ್ಳವರು, ಎಲ್ಲರೊಂದಿಗೆ ಬೆರೆಯುವ, ಕಾಯಕದಲ್ಲಿ ನಂಬಿಕೆ ಇರುವ, ಕಣ್ಣುಗಳ ತುಂಬ ಕನಸುಗಳನ್ನು ಹೊಂದಿರುವವರು ಆಗಿರಬೇಕು. ಆದರೆ ಕಲಬುರ್ಗಿ ರಂಗಾಯಣದಲ್ಲಿ ಇವುಗಳ ಕೊರತೆ ದೊಡ್ಡದಾಗಿತ್ತು.
ಎರಡೇ ವರ್ಷಗಳಲ್ಲಿ ಕಲಬುರ್ಗಿ ರಂಗಾಯಣ ಹೀಗೆ ಮಗ್ಗಲು ಬದಲಿಸುತ್ತದೆ ಎಂದು ಬಹುತೇಕರು ನಿರೀಕ್ಷಿಸಿರಲಿಲ್ಲ. ಆದರೆ ನಿರ್ದೇಶಕ ಮತ್ತು ಕಲಾವಿದರು, ತಂತ್ರಜ್ಞರ ಆಯ್ಕೆ ಬಳಿಕ ರಂಗಾಯಣದ ಪ್ರತಿ ಹೆಜ್ಜೆಯನ್ನೂ ಹತ್ತಿರದಿಂದ ಗಮನಿಸುತ್ತಿದ್ದವರಿಗೆ ‘ಈ ಕೂಸು’ ಪದೇಪದೇ ಬೀಳುತ್ತದೆ. ರಣಗಾಯ ಮಾಡಿಕೊಳ್ಳುತ್ತದೆ ಎನ್ನುವ ಸೂಚನೆ ಸಿಕ್ಕಿತ್ತು. ಅದು ನಿಜವಾಯಿತು.

ಜಾತಿ ನಿಂದನೆ ಆರೋಪ ಹೊತ್ತ ನಿರ್ದೇಶಕ ಪ್ರೊ.ಆರ್.ಕೆ.ಹುಡಗಿ ಹಾಗೂ ಅಶಿಸ್ತು ವರ್ತನೆ ಮೇಲೆ ಕಲಾವಿದರು, ತಂತ್ರಜ್ಞರನ್ನು ರಂಗಾಯಣದಿಂದ ವಜಾ ಮಾಡಲಾಗಿದೆ.
ಈಗ ರಂಗ ಸಮಾಜವು ಹಿಂದೆ ಮಾಡಿದ ತಪ್ಪನ್ನು ಪ್ರಜ್ಞಾ­ಪೂರ್ವಕವಾಗಿಯೇ ಸರಿಪಡಿಸಬೇಕಿದೆ. ಏಕೆಂದರೆ ರಂಗಾಯಣ ಎನ್ನುವುದು ಸಾಂಸ್ಕೃತಿಕ ಮಹತ್ವ ಹೊಂದಿರುವ ಸಂಸ್ಥೆ.

ಈ ಭಾಗದಲ್ಲಿ ರಂಗಾಯಣ ಸಮೃದ್ಧವಾದರೆ ರಂಗಭೂಮಿ ಮತ್ತು ಸಾಂಸ್ಕೃತಿಕ ವಲಯಕ್ಕೆ ಚೈತನ್ಯ ಬರುತ್ತದೆ. ಇಲ್ಲಿನ ಸಂಸ್ಕೃತಿ, ಕಲೆ ಮತ್ತು ಭಾಷೆ ಸೊಗಡು ರಾಜ್ಯದ ಬೇರೆ ಕಡೆಗೂ ಪಸರಿಸುತ್ತದೆ.
ಪ್ರತಿಯೊಂದು ಭಾಷೆ, ಸಂಸ್ಕೃತಿಯಲ್ಲಿಯೂ ವ್ಯಕ್ತಗೊಂಡ ರಂಗಭೂಮಿ ಕೆಲವು; ಅವ್ಯಕ್ತವಾಗಿರುವ ರಂಗಭೂಮಿ ಹಲವು. ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿ ರಂಗಸ್ಥಳಕ್ಕೆ ಬರುತ್ತಲೇ ‘ಹೊಸ ರಂಗಭೂಮಿ’ಯೊಂದು ಸೃಷ್ಟಿ ಆಯಿತು. ಕಾಡು, ಮೇಡು ರಂಗಮಂದಿರವಾಗಿ ಪರಿವರ್ತನೆಗೊಂಡವು.

ಹೈದರಾಬಾದ್‌ ಕರ್ನಾಟಕದ ಸೂಫಿ ಸಂತ ಖ್ವಾಜಾ ಬಂದೇನವಾಜ್‌ ಅವರನ್ನು ರಂಗಭೂಮಿಗೆ ತಂದರೆ ಹೊಸ ಪ್ರಕಾರವೇ ರೂಪುಗೊಳ್ಳುತ್ತದೆ. ಸೂಫಿ ಸಾಹಿತ್ಯ, ಸಂಗೀತ ರಂಗಭೂಮಿಗೆ ಬರುತ್ತವೆ. ಇವನ್ನು ಹೊಸ ಬಗೆಯಲ್ಲಿ ಮಂಡಿಸುವ ವಿಧಾನವೂ ಸಹ ಬರುತ್ತದೆ. ಇದೇ ರೀತಿ ತತ್ವಕಾರರ, ದಾಸರ, ಶರಣ–ಶರಣೆಯರ ಬದುಕು, ತತ್ವಪದಗಳು, ಪದಗಳು, ವಚನಗಳನ್ನು ರಂಗಭೂಮಿಗೆ ತರಬಹುದು. ಹೀಗೆ ಮಾಡುವುದರಿಂದ ರಂಗಭೂಮಿಯ ವ್ಯಾಪ್ತಿಯನ್ನು ವಿಸ್ತರಿಸಬಹುದು. ಪ್ರತಿಭಾವಂತ ನಾಟಕಕಾರರು, ಸಮರ್ಥ ನಿರ್ದೇಶಕರು, ಕಲಾವಿದರು, ತಂತ್ರಜ್ಞರು, ಅಭಿರುಚಿಯುಳ್ಳ ಪ್ರೇಕ್ಷಕರು ಇದ್ದಾಗ ಹೊಸ ಪ್ರಯೋಗಗಳು ಸಾಧ್ಯವಾಗುತ್ತದೆ. ಇಂಥ ವಾತಾವರಣವನ್ನು ಸೃಷ್ಟಿಸುವುದು ರಂಗಾಯಣದ ಜವಾಬ್ದಾರಿ.

ಹಿಂದುಳಿಯುವಿಕೆಯಲ್ಲೂ ಸಾಂಸ್ಕೃತಿಕ ಹಿಂದುಳಿಯುವಿಕೆ ಅತ್ಯಂತ ಅಪಾಯಕಾರಿ. ಏಕೆಂದರೆ ಕಲೆ, ಜಾನಪದ ಮತ್ತು ಸಾಹಿತ್ಯವನ್ನು ಹೊಸ ತಲೆಮಾರಿನ ಅವಶ್ಯಕತೆಗೆ ಅನುಗುಣವಾಗಿ ಪ್ರಸ್ತುತಪಡಿಸದೇ ಹೋದರೆ ನಾಶವಾಗುತ್ತವೆ. ಸ್ಥಳೀಯ ಜ್ಞಾನ, ಕಲೆ, ಸಾಹಿತ್ಯವನ್ನು ಹಾಳಾಗಲು ಬಿಡುವುದು ಸಾಂಸ್ಕೃತಿಕವಾಗಿ ಹಿಂದುಳಿಯುವಿಕೆಯೇ ಆಗುತ್ತದೆ.

ಈಗ ನಮ್ಮ ಮುಂದೆ ಇಪ್ಪತ್ತೈದು ವರ್ಷಗಳನ್ನು ಪೂರೈಸಿರುವ ಮೈಸೂರು ರಂಗಾಯಣದ ‘ಮಾದರಿ’ ಇದೆ. ಅಲ್ಲಿ ರಂಗಭೂಮಿಯ ದಿಗ್ಗಜರು ಕೆಲಸ ಮಾಡಿದ್ದಾರೆ. ಮೈಸೂರು ರಂಗಾಯಣದ ‘ಒಳ್ಳೆಯ ಅಂಶ’ಗಳನ್ನು ಹೀರಿಕೊಂಡು ಹೊಸ ರಂಗಾಯಣ ಬೆಳೆಯಬೇಕಾಗುತ್ತದೆ.
ಸರ್ಕಾರ ಮತ್ತು ರಂಗ ಸಮಾಜ ಕಲಬುರ್ಗಿ ರಂಗಾಯಣಕ್ಕೆ ಶೀಘ್ರವೇ ನಿರ್ದೇಶಕ ಮತ್ತು ಕಲಾವಿದರು, ತಂತ್ರಜ್ಞರನ್ನು ನೇಮಕ ಮಾಡಬೇಕು. ಅವರನ್ನು ಒಂದು ತಿಂಗಳ ಮಟ್ಟಿಗಾದರೂ ಮೈಸೂರು ರಂಗಾಯಣದಲ್ಲಿ ತರಬೇತಿಗೆ ಬಿಡಬೇಕು. ಅವರು ಅಲ್ಲಿರುವ ಅನುಭವಿ ಕಲಾವಿದರು, ತಂತ್ರಜ್ಞರ ಜೊತೆ ಒಡನಾಡಿ, ಸಂವಾದಿಸಬೇಕು, ರಂಗಭೂಮಿಯ ಶಿಸ್ತನ್ನು ಕಲಿಯುವಂತಾಗಬೇಕು.

ಸರ್ಕಾರವೂ ಆಸಕ್ತಿ ವಹಿಸಿ ರಂಗಾಯಣಕ್ಕೆ ಕ್ರಿಯಾಶೀಲ ಅಧಿಕಾರಿಯನ್ನು ನೇಮಿಸಬೇಕು. ಅವರು ನಿರ್ದೇಶಕ, ಕಲಾವಿದರು, ತಂತ್ರಜ್ಞರು ಮತ್ತು ಸರ್ಕಾರದ ನಡುವೆ ಸಮನ್ವಯ ಸಾಧಿಸುವಂತಿರಬೇಕು.
ಕಲಬುರ್ಗಿ ರಂಗಾಯಣ ಕಾರ್ಯ ಆರಂಭಿಸಲು ಅಗತ್ಯವಾದ ರಂಗಸ್ಥಳ, ಕಲಾವಿದರಿಗೆ ವಸತಿ ನಿಲಯ, ಗ್ರಂಥಾಲಯ, ಆಡಿಯೊ, ವಿಡಿಯೊ ಕೊಠಡಿ, ಕ್ಯಾಂಟೀನ್‌ ವ್ಯವಸ್ಥೆ ಮಾಡಬೇಕು. ಹೈದರಾಬಾದ್‌ ಕರ್ನಾಟಕ ಅಭಿವೃದ್ಧಿ ಮಂಡಳಿಯೂ ಬೆಂಬಲವಾಗಿ ನಿಲ್ಲಬೇಕು. ಇಲ್ಲಿ ಉತ್ತಮ ರೆಪರ್ಟರಿ ಸಿದ್ಧವಾದರೆ ರಾಷ್ಟ್ರೀಯ ನಾಟಕೋತ್ಸವಗಳನ್ನು ಸಂಘಟಿಸಬಹುದು. ಇಲ್ಲಿಗೆ ದೇಶ, ವಿದೇಶಗಳ ತಂಡಗಳು ಬರುತ್ತವೆ. ಇದರಿಂದ ನಮ್ಮ ಪ್ರೇಕ್ಷಕರಲ್ಲಿ ಲೋಕ ದೃಷ್ಟಿಯೂ ಬೆಳೆಯುತ್ತದೆ.

ರಂಗಾಯಣವು ಸ್ಥಳೀಯ ಹವ್ಯಾಸಿ ಕಲಾವಿದರು, ಲಲಿತಕಲೆಗಳ ಕಲಾವಿದರು, ವಿದ್ಯಾರ್ಥಿಗಳು, ಸಾಹಿತಿಗಳು, ರಂಗಾಸಕ್ತರು, ಪ್ರೇಕ್ಷಕರ ನೆಚ್ಚಿನ ತಾಣವಾಗಬೇಕು.

ನನಗೆ ಮೈಸೂರು ರಂಗಾಯಣದ ಕ್ಯಾಂಟೀನ್‌ ನೆನಪಿಗೆ ಬರುತ್ತದೆ. ಅದು ಸದಾ ಕ್ರಿಯಾಶೀಲವಾಗಿರುತ್ತದೆ. ಉತ್ಸಾಹಿ ತರುಣ, ತರುಣಿಯರು ಅಲ್ಲಿ ಹಿರಿಯ ಕಲಾವಿದರು, ನಿರ್ದೇಶಕರು, ಸಾಹಿತಿಗಳು, ವಿಚಾರವಾದಿಗಳು, ಹೋರಾಟಗಾರರು, ಸಂಘಟಕರು, ರಂಗ ನಿರ್ದೇಶಕರು, ಸಿನಿಮಾ ನಿರ್ದೇಶಕರು, ತಂತ್ರಜ್ಞರು, ನಾಟಕಕಾರರು, ಪತ್ರಕರ್ತರೊಂದಿಗೆ ಚರ್ಚೆಯಲ್ಲಿ ಮುಳುಗಿರುತ್ತಾರೆ. ಇಡೀ ಆವರಣ ಕ್ರಿಯಾಶೀಲರು, ಹವ್ಯಾಸಿ ಕಲಾವಿದರಿಂದ ಜೀವಪಡೆದಿರುತ್ತದೆ. ರಂಗಾಯಣದ ಪ್ರಭಾವದಿಂದ ಮೈಸೂರಿನಲ್ಲಿ ಹತ್ತಾರು ಅತ್ಯುತ್ತಮ ಹವ್ಯಾಸಿ ರಂಗ ತಂಡಗಳು ಸೃಷ್ಟಿಯಾಗಿವೆ. ಇದು ಕಲಬುರ್ಗಿಯಲ್ಲೂ ಸಾಧ್ಯವಾಗಬೇಕು.

ಚರಿತ್ರೆಗೆ ವರ್ತಮಾನವನ್ನು ಸದೃಢಗೊಳಿಸುವ ಅಂತಃಶಕ್ತಿ ಇದೆ. ಗತಕಾಲದಿಂದ ಏನನ್ನೂ ಕಲಿಯದೇ ಹೋದರೆ ಭವಿಷ್ಯ ಅರ್ಥಪೂರ್ಣವಾಗುವುದಿಲ್ಲ.

Comments
ಈ ವಿಭಾಗದಿಂದ ಇನ್ನಷ್ಟು
ಕಾವೇರಿಯಷ್ಟೇ ಜೀವನದಿಯೇ? ಕೃಷ್ಣಾ ಅಲ್ಲವೇ?

ಈಶಾನ್ಯ ದಿಕ್ಕಿನಿಂದ
ಕಾವೇರಿಯಷ್ಟೇ ಜೀವನದಿಯೇ? ಕೃಷ್ಣಾ ಅಲ್ಲವೇ?

8 Dec, 2017
ಕೂಡಿ ಬಾಳುವುದನ್ನು ಕಲಿಸಿದ ಸಂಕರ ಭಾಷೆಗಳು

ಈಶಾನ್ಯ ದಿಕ್ಕಿನಿಂದ
ಕೂಡಿ ಬಾಳುವುದನ್ನು ಕಲಿಸಿದ ಸಂಕರ ಭಾಷೆಗಳು

24 Nov, 2017
ಹಾ.ಮಾ.ನಾಯಕ ಮತ್ತು ರಾಜ್ಯೋತ್ಸವ ಪ್ರಶಸ್ತಿ

ಈಶಾನ್ಯ ದಿಕ್ಕಿನಿಂದ
ಹಾ.ಮಾ.ನಾಯಕ ಮತ್ತು ರಾಜ್ಯೋತ್ಸವ ಪ್ರಶಸ್ತಿ

10 Nov, 2017
ಕೊಟ್ರೇಶಿ ಮಾಸ್ತರರ ಸಮುದಾಯಮುಖಿ ಪರಸಂಗ

ಈಶಾನ್ಯ ದಿಕ್ಕಿನಿಂದ
ಕೊಟ್ರೇಶಿ ಮಾಸ್ತರರ ಸಮುದಾಯಮುಖಿ ಪರಸಂಗ

27 Oct, 2017
ಬಹುಭಾಷೆ, ಸಂಸ್ಕೃತಿಗಳ ಸಂಗಮ ‘ಔರಾದ್‌’

ಈಶಾನ್ಯ ದಿಕ್ಕಿನಿಂದ
ಬಹುಭಾಷೆ, ಸಂಸ್ಕೃತಿಗಳ ಸಂಗಮ ‘ಔರಾದ್‌’

28 Sep, 2017