ಆಶಯ ಹಾಗೂ ಆಕಾರಗಳ ನಡುವಣ ಬಿರುಕು

ಈ ಬಾರಿ ಧರ್ಮವನ್ನು ಕುರಿತು ಬರೆಯುವವನಿದ್ದೇನೆ. ಯಂತ್ರನಾಗರಿಕತೆಯೊಳಗೆ ಧರ್ಮವು ಎದುರಿಸುತ್ತಿರುವ ತೀವ್ರತರವಾದ ಬಿಕ್ಕಟ್ಟನ್ನು ಅರ್ಥಮಾಡಿಕೊಳ್ಳುವುದು, ಸಾಧ್ಯವಾಗುವುದಾದರೆ ಪರಿಹಾರೋಪಾಯವೊಂದನ್ನು ಕಂಡುಕೊಳ್ಳುವುದು ಲೇಖನದ ಉದ್ದೇಶವಾಗಿದೆ.

ಆಶಯ ಹಾಗೂ ಆಕಾರಗಳ ನಡುವಣ ಬಿರುಕು

ಈ ಬಾರಿ ಧರ್ಮವನ್ನು ಕುರಿತು ಬರೆಯುವವನಿದ್ದೇನೆ. ಯಂತ್ರನಾಗರಿಕತೆಯೊಳಗೆ ಧರ್ಮವು ಎದುರಿಸುತ್ತಿರುವ ತೀವ್ರತರವಾದ ಬಿಕ್ಕಟ್ಟನ್ನು ಅರ್ಥಮಾಡಿಕೊಳ್ಳುವುದು, ಸಾಧ್ಯವಾಗುವುದಾದರೆ ಪರಿಹಾರೋಪಾಯವೊಂದನ್ನು ಕಂಡುಕೊಳ್ಳುವುದು ಲೇಖನದ ಉದ್ದೇಶವಾಗಿದೆ.

ಧರ್ಮವೆಂದರೆ, ಹಿಂದೂಧರ್ಮ ಕ್ರೈಸ್ತಧರ್ಮ ಇತ್ಯಾದಿ ಸಾಂಸ್ಥಿಕ ಧರ್ಮಗಳು ಮಾತ್ರವೇ ಅಲ್ಲ. ಸಭ್ಯತೆಯ ನಿರ್ವಹಣೆಗೆಂದು ಮಾನವನು ರೂಪಿಸಿರುವ ಎಲ್ಲ ಸಂಸ್ಥೆಗಳೂ- ಸಾಂಸ್ಥಿಕಧರ್ಮ, ಸಾಂಸ್ಥಿಕರಾಜಕಾರಣ, ಸಾಮಾಜಿಕಸಂಸ್ಥೆ, ಕುಟುಂಬವ್ಯವಸ್ಥೆ, ವೈಯಕ್ತಿಕತೆ, ಮಾನಸಿಕತೆ– ಎಲ್ಲವೂ ಧರ್ಮದ ಪರಿಧಿಯೊಳಗೆ ಬರುತ್ತವೆ.

ಅರ್ಥಾತ್, ಈ ಎಲ್ಲಾ ಕ್ಷೇತ್ರಗಳೂ ನೀತಿ ನಿಯಮ ಹಾಗೂ ನಿಗ್ರಹಗಳ ಕಟ್ಟುಪಾಡಿಗೆ  ಒಳಪಡುತ್ತವೆ. ಆದರೆ ಚರ್ಚೆಯ ಹಿತದೃಷ್ಟಿಯಿಂದ ನನ್ನನ್ನು ನಾನು ಧಾರ್ಮಿಕ ಕ್ಷೇತ್ರಕ್ಕೆ, ಅದರಲ್ಲೂ ಕರ್ನಾಟಕದ ಹೆಮ್ಮೆಯ ಕೊಡುಗೆಯಾಗಿರುವ ಲಿಂಗಾಯತ ಧರ್ಮಕ್ಕೆ ಸೀಮಿತಗೊಳಿಸಿಕೊಳ್ಳುತ್ತೇನೆ.

ಬಿಕ್ಕಟ್ಟು ಎಲ್ಲ ಧರ್ಮಗಳನ್ನೂ ಕಾಡುತ್ತದೆ. ಎಂಟುನೂರು ವರ್ಷಗಳ ದೀರ್ಘ ಇತಿಹಾಸವಿರುವ ಲಿಂಗಾಯತ ಧರ್ಮವನ್ನು ಅದು ಮತ್ತೆ ಮತ್ತೆ ಕಾಡಿದೆ. ಆದರೆ ನನ್ನ ಗಮನವಿರುವುದು ಲಿಂಗಾಯತವು ಎದುರಿಸಿದ ಬಿಕ್ಕಟ್ಟಿನಲ್ಲಲ್ಲ, ಅದಿರುವುದು ಲಿಂಗಾಯತವು ಬಿಕ್ಕಟ್ಟನ್ನು ನಿರ್ವಹಿಸಿದ ರೀತಿಯಲ್ಲಿ.

ಯಂತ್ರನಾಗರಿಕತೆಯ ಸಂದರ್ಭದಲ್ಲಿ ಧರ್ಮಗಳು, ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕ ಸಂಸ್ಥೆಗಳು, ಈ ರೀತಿಯನ್ನು ಬಳಸಿ ಬಿಕ್ಕಟ್ಟಿನಿಂದ ಹೊರಬರಬಹುದಾಗಿದೆ. ದುರಂತದ ಸಂಗತಿಯೆಂದರೆ ಆಧುನಿಕ ಲಿಂಗಾಯತವೇ ಆ ದಾರಿಯಿಂದ ಹೊರಳಿದೆ ಹಾಗೂ ತೀವ್ರತರ ಬಿಕ್ಕಟ್ಟಿಗೆ ಸಿಲುಕಿದೆ.

ಇರಲಿ ಧರ್ಮವೆಂದರೆ, ಒಳಿತಿನ ಆಶಯ ಹಾಗೂ ಆಶಯವನ್ನು ಸಾಕಾರಗೊಳಿಸಲೆಂದು ರೂಪಿಸಲಾಗುವ ಸಾಂಸ್ಥಿಕ ಆಕಾರ ಇವುಗಳ ಸಂಯುಕ್ತ ಹಾಗೂ ಸಮತೋಲಿತ ರೂಪ. ಕೇವಲ ಆಶಯ ಅಥವಾ ಕೇವಲ ಆಕಾರ ಒಳಿತನ್ನು ಸಾಧಿಸಲಾರದು. ಲಿಂಗಾಯತದ ಪರಿಭಾಷೆಯಲ್ಲಿ ಹೇಳುವುದಾದರೆ, ಕೇವಲ ಜಂಗಮ ಅಥವಾ ಕೇವಲ ಸ್ಥಾವರ ಧರ್ಮವಾಗಲಾರದು. ಹಾಗಾಗಿ, ಧಾರ್ಮಿಕ ಬಿಕ್ಕಟ್ಟೆಂಬುದು ಆಶಯ ಮತ್ತು ಆಕಾರಗಳ ನಡುವಿನ ಬಿರುಕು ಎಂದು ಕರೆಯಬಹುದಾಗಿದೆ.

ಧಾರ್ಮಿಕ ಬಿಕ್ಕಟ್ಟು ಗಂಭೀರವಾದಾಗ ಹೊಸದೊಂದು ಧರ್ಮ ಮೂಡಿಬರುತ್ತದೆ. ರಾಜಕೀಯ ಬಿಕ್ಕಟ್ಟು ಗಂಭೀರವಾದಾಗ ಹೊಸದೊಂದು ಪಕ್ಷ ಮೂಡಿಬರುತ್ತದೆ. ಅದೇನೇ ಇರಲಿ, ಧರ್ಮವು ಸಾಮಾಜಿಕ ಸಂಘರ್ಷವಿಲ್ಲದೆ ಮೂಡಿಬರಲಾರದು. ಏಕೆಂದರೆ ಹೊಸತು ಹಳತಿನ ಜಗಳವು ಕೇವಲ ಸೈದ್ಧಾಂತಿಕ ಜಗಳವಲ್ಲ. ಹಳೆಯ ಸ್ಥಾವರ ಕೆಡವುವ ಹಾಗೂ ಹೊಸ ಸ್ಥಾವರ ನಿರ್ಮಿಸುವ ಕೆಲಸ ಕೂಡ ಹೌದು ಅದು. ಹಾಗಾಗಿ ಸಂಘರ್ಷ!

ಲಿಂಗಾಯತವು ಹುಟ್ಟಿದ್ದು ವೈದಿಕ ಧರ್ಮದ ಬಿಕ್ಕಟ್ಟಿನಿಂದಾಗಿ. ವರ್ಣವ್ಯವಸ್ಥೆಯನ್ನು ಜಾತಿ ವ್ಯವಸ್ಥೆಯನ್ನಾಗಿಸಿ ವೃತ್ತಿಗಳ ನಡುವಿನ ಚಲನಶೀಲತೆಯನ್ನು ಕಳೆದಿತ್ತು ವೈದಿಕಧರ್ಮ. ಆಗ ನಡೆದ, ಶೂದ್ರಜಾತಿಗಳ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಳವಳಿಯೊಂದರ ಮೂಲಕ, ಅದನ್ನು ವಚನ ಚಳವಳಿ ಎಂದು ಕರೆಯಲಾಗುತ್ತದೆ, ಲಿಂಗಾಯತವು ಹುಟ್ಟಿತು.

ನಾವು ಗಮನಿಸಬೇಕಾದ ಮತ್ತೊಂದು ಸಂಗತಿಯಿದೆ. ಲಿಂಗಾಯತದ ತಾತ್ವಿಕತೆ ಮೂಡಿಬಂದದ್ದು ಮೂಗು ಹಿಡಿದು ಕುಳಿತ ಮಹಾತ್ಮನೊಬ್ಬನ ಮೆದುಳಿನಲ್ಲಲ್ಲ. ಅದು ಮೂಡಿಬಂದದ್ದು ಶ್ರಮಜೀವಿಗಳ ಸಾಮಾಜಿಕ ಚಳವಳಿಯೊಂದರ ಅನುಭವದಿಂದ. ಲಿಂಗಾಯತದ ತಾತ್ವಿಕತೆಯನ್ನು ವಚನಕಾರರು ಅನುಭಾವವೆಂದು ಕರೆದರು.

ಅನುಭಾವವೆಂದರೆ ಸಾಮಾಜಿಕ ಚಳವಳಿಯೊಂದರ ಅನುಭವದಿಂದ ಮೂಡಿಬರುವ ಒಳಿತಿನ ಭಾವ ಎಂದರ್ಥ. ವಿಶ್ವದ ಯಾವುದೇ ಧಾರ್ಮಿಕ ಚಳವಳಿಯಲ್ಲೂ ಸಾಧ್ಯವಾಗದೆ ಇದ್ದ ಅಸಾಧಾರಣ ಗ್ರಹಿಕೆಯಿದು. ವಚನಕಾರರು ಬಸವಣ್ಣನ ನೇತೃತ್ವದಲ್ಲಿ ಅತ್ಯಂತ ಸರಳ ರೀತಿಯಲ್ಲಿ ಮಹತ್ತರವಾದ, ಸಾರ್ವಕಾಲಿಕವಾದ ಒಂದು ಸತ್ಯವನ್ನು ಪ್ರಕಾಶಿಸಿದ್ದರು.

ಏನದು ಸತ್ಯ? ಶ್ರಮದ ದುಡಿಮೆಯೇ (ಕಾಯಕ) ಧರ್ಮ (ಕೈಲಾಸ) ಎಂದರು ಶ್ರಮಜೀವಿಗಳು. ಆವರೆಗೆ ಜಾರಿಗೆ ಬಂದಿದ್ದ ಯಾವುದೇ ಮಹಾನ್ ಧರ್ಮವೂ ಶ್ರಮವೇ ಧರ್ಮವೆಂದು ಪ್ರತಿಪಾದಿಸಿರಲಿಲ್ಲ. ಲಿಂಗಾಯತದ ಈ ಪ್ರತಿಪಾದನೆ ಸರಳವಾದದ್ದು ಮಾತ್ರವಾಗಿರಲಿಲ್ಲ, ಸಮಗ್ರವಾದದ್ದು ಕೂಡ ಆಗಿತ್ತು.

ಪ್ರತಿಪಾದನೆಯನ್ನು ಮುಂದುವರೆಸಿದ ಅವರು, ಶ್ರಮದ ದುಡಿಮೆಯು ಧರ್ಮದ ಆಕಾರವಾದರೆ ಸಮಾಜ ಸೇವೆಯು (ದಾಸೋಹ) ಧರ್ಮದ ಆಶಯ ಎಂದು ಅನುಮಾನಾತೀತವಾಗಿ ಹೇಳಿದರು. ಅರ್ಥಾತ್, ಶ್ರಮದ ದುಡಿಮೆಯಿಂದ ಸಿಕ್ಕುವ ಸಂಪತ್ತಿನಲ್ಲಿ ತನ್ನ ಅಂದಿನ ಕನಿಷ್ಠ ಅಗತ್ಯಕ್ಕೆ ಬೇಕಿರುವಷ್ಟನ್ನು ಮಾತ್ರವೇ ಉಳಿಸಿಕೊಂಡು ಮಿಕ್ಕದ್ದನ್ನು ಸಮಾಜ ಸೇವೆಗೆ ವಿನಿಯೋಗಿಸಬೇಕು ಎಂದರು ಶ್ರಮಜೀವಿ ಸಂತರುಗಳು.

ಮಿಗುವ ಸಂಪತ್ತು ಅಥವಾ ಮಿಕ್ಕ ಸಂಪತ್ತು ಅಥವಾ ಆಸ್ತಿಯೆಂಬುದು, ಸಭ್ಯತೆ ನಿರ್ವಹಿಸಬೇಕಿರುವ ನುಂಗಲೂ ಆಗದ ಉಗಳಲೂ ಬಾರದ ಸಂಗತಿಯಾಗಿದೆ. ಉಪಕರಣಗಳ ಬಳಕೆಯಿಂದಾಗಿ ಮಾನವ ಪ್ರಾಣಿಗೆ ಹೆಚ್ಚಿಗೆ ಕೆಲಸ ಮಾಡುವುದು ಸಾಧ್ಯವಾಯಿತು. ಹೀಗೆ, ಹೆಚ್ಚಿದ ಉತ್ಪಾದನೆಯಿಂದ ಹೆಚ್ಚುವ ಗಳಿಕೆಯನ್ನೇ ಮಾರ್ಕ್ಸ್‌ವಾದವು ‘ಸರ್‌ಪ್ಲಸ್ ವ್ಯಾಲ್ಯೂ’ ಎಂದು ನಿರ್ವಚಿಸಿ, ಮಿಗುವ ಸಂಪತ್ತಿನ ನಿರ್ವಹಣೆಯ ಸುತ್ತ ತನ್ನ ಸೈದ್ಧಾಂತಿಕತೆಯನ್ನು ಹೆಣೆಯಿತು. ಆದರೆ ಮಾರ್ಕ್ಸ್‌ವಾದದ ಚರ್ಚೆಗೆ ನಂತರ ಬರೋಣ.

ಲಿಂಗಾಯತದ ಚರ್ಚೆಯನ್ನು ಮೊದಲು ಪೂರ್ಣಗೊಳಿಸೋಣ. ಲಿಂಗಾಯತವು ಪಾರಮಾರ್ಥಿಕತೆ ಯನ್ನು ನಿರ್ವಚಿಸಿದ ರೀತಿ ಕೂಡ ಅಸಾಧಾರಣವಾದದ್ದು. ದೇವರನ್ನು ಅದು ತಿರಸ್ಕರಿಸಲಿಲ್ಲ. ಆದರೆ ದೇವರೆಂಬುವ ಸತ್ಯವು ದೇವಾಲಯದಲ್ಲಿಟ್ಟು ಜೀವನವಿಡೀ ಪೂಜೆ ಮಾಡಿದ ನಂತರ ಸಾವಿನಲ್ಲಿ ಸಿಕ್ಕುತ್ತದೆಯೆಂದು ಲಿಂಗಾಯತವು ಗ್ರಹಿಸಲಿಲ್ಲ.

ಗುದ್ದಲಿ ಸನಿಕೆಗಳಂತೆ ಶ್ರಮಜೀವಿಗಳ ಅಂಗೈ ಹಿಡಿತಕ್ಕೆ ಸಿಲುಕುವವ ಶಿವ, ಸತ್ಯವೆಂಬುದು ಅನುಭವ ಜನ್ಯವಾದದ್ದೂ ಹೌದು, ಕೇವಲ ಬೌದ್ಧಿಕವಾದದ್ದಲ್ಲ ಎಂದರು ಶ್ರಮಜೀವಿ ವಚನಕಾರರು. ಅನುಭವದ ಮೂಲಕವೇ ಆಗುವ ಸತ್ಯದರ್ಶನವನ್ನವರು ಅನುಭಾವವೆಂದು ಕರೆದರು. ಲಿಂಗಾಯತದಲ್ಲಿ ಪಾರಮಾರ್ಥವೂ ಶುಷ್ಕ ಅನುಭವವೂ ಅಲ್ಲ ಅಥವಾ ಒಣವೇದಾಂತವೂ ಅಲ್ಲ.

ಹೀಗೆ, ಭವ ಭಾವ, ಆರ್ಥಿಕ ಪಾರಮಾರ್ಥಿಕ, ಸಾಮಾಜಿಕ ವೈಯಕ್ತಿಕ, ಆಶಯ ಆಕಾರ ಇತ್ಯಾದಿ ವೈರುಧ್ಯಮಯವಾಗಿ ಕಾಣುವ ಸಂಗತಿಗಳನ್ನು ಒಟ್ಟಾಗಿ ಹಿಡಿಯುವಲ್ಲಿ ಲಿಂಗಾಯತವು ಯಶಸ್ವಿಯಾಯಿತು. ಲಿಂಗಾಯತಕ್ಕೆ ಹತ್ತಿರಬರುವ ಮತ್ತೊಂದು ತಾತ್ವಿಕತೆಯೆಂದರೆ ಮಾರ್ಕ್ಸ್‌ವಾದವೇ ಸರಿ.

ಮಾರ್ಕ್ಸ್‌ವಾದವು ಯಂತ್ರ ನಾಗರಿಕತೆಯೊಳಗೆ ಮೂಡಿಬಂದಿತು. ಮಾರ್ಕ್ಸ್‌ವಾದವು ಸಮಾಜ (ಭವ)ವನ್ನು ಶ್ರಮಕೇಂದ್ರಿತವಾಗಿ ಹಾಗೂ ಸಮಾನವಾಗಿ ಸಂಘಟಿಸುವ ಸಮರ್ಥ ಮಾರ್ಗಸೂಚಿಯೊಂದನ್ನು ನೀಡಿತು. ದುರಂತವೆಂದರೆ ಯಂತ್ರನಾಗರಿಕತೆಯೇ ಅದರ ಕೇಂದ್ರವಾಯಿತು. ಅರ್ಥಾತ್, ಭವ ಕೇಂದ್ರಿತವಾದದ್ದರಿಂದಾಗಿ ಮಾರ್ಕ್ಸ್‌ವಾದ ವಿಜ್ಞಾನ ಇತ್ಯಾದಿ ಎಲ್ಲವೂ ಅನುಭಾವವನ್ನು ರೂಢಿಸಿಕೊಳ್ಳುವಲ್ಲಿ ಎಡವುತ್ತಿವೆ.

ಯಂತ್ರನಾಗರಿಕತೆಯೊಳಗೆ ಮಾರ್ಕ್ಸ್‌ವಾದ ಎಡುವುತ್ತಿದೆ, ವಿಜ್ಞಾನ ಎಡವುತ್ತಿದೆ ನಿಜ. ಆದರೆ ಆಧುನಿಕ ಲಿಂಗಾಯತವೂ ಎಡವುತ್ತಿದೆ. ಎಡವಿ ಮಾರ್ಕ್ಸ್‌ವಾದ ಹಾಗೂ ಲಿಂಗಾಯತಗಳು ವಿರುದ್ಧ ದಿಕ್ಕುಗಳಿಗೆ ಮುಗ್ಗರಿಸಿ ಬೀಳುತ್ತಿವೆ. ಯಂತ್ರನಾಗರಿಕತೆಯೇ ಬಿಕ್ಕಟ್ಟಿನ  ಕಾರಣವಾಗಿದೆ. ಹೇಗೆಂದು ಮುಂದೆ ಗಮನಿಸೋಣವಂತೆ.

ಮಾರ್ಕ್ಸ್‌ವಾದ ಹೊಸತು, ಯಂತ್ರನಾಗರಿಕತೆಯ ಕರುಳಬಳ್ಳಿ ಕಳಚಿಕೊಳ್ಳಲಿಕ್ಕೆ ಅದಕ್ಕೆ ಸಮಯಬೇಕಾದೀತು. ಆದರೆ ಲಿಂಗಾಯತ ಹಳತು. ಯಂತ್ರನಾಗರಿಕತೆಯೊಟ್ಟಿಗೆ ಕರುಳಬಳ್ಳಿಯ ಸಂಬಂಧವಿಲ್ಲ, ಅದಕ್ಕೆ, ಕೂಡಿಕೆ ಮಾಡಿಸಿದ ಸಂಬಂಧವಿದೆ. ಈಗಾಗಲೇ ನಾವು ಗಮನಿಸಿರುವ ಹಾಗೆ ಲಿಂಗಾಯತವು ಹಿಂದೆಯೂ ಬಿಕ್ಕಟ್ಟಿಗೆ ಸಿಲುಕಿತ್ತು. ಹಿಂದಿನ ಎಲ್ಲ ಬಿಕ್ಕಟ್ಟುಗಳ ಕಾರಣ ಒಂದೇ ಆಗಿತ್ತು. ಶ್ರಮದ ಆಶಯವನ್ನು ಸಂಘಟಿಸಲೆಂದು ನಿಯುಕ್ತರಾದ ಜಂಗಮರು ಶ್ರಮವನ್ನು ಮರೆತು ನವಬ್ರಾಹ್ಮಣರಾಗುತ್ತಿದ್ದರು. ಹೇಗೆ ಪರಿಹರಿಸಿತು ಲಿಂಗಾಯತವು ಬಿಕ್ಕಟ್ಟನ್ನು?

ಮತ್ತೊಂದು ಸಾಮಾಜಿಕ ಚಳವಳಿ ನಡೆಯುತ್ತಿತ್ತು, ಮತ್ತೆ ಶ್ರಮಜೀವಿಗಳು ಸುಲಭ ಬದುಕಿನ ದಬ್ಬಾಳಿಕೆಯನ್ನು ತಿರಸ್ಕರಿಸುತ್ತಿದ್ದರು. ವಚನಸಾಹಿತ್ಯಕ್ಕೆ ಹೊಸದೊಂದು ಸಂಕಥನ ಸೇರಿಕೊಳ್ಳುತ್ತಿತ್ತು. ಏನದು ಸಂಕಥನ?

ಶ್ರಮಜೀವಿ, ಅರ್ಥಾತ್, ದರಿದ್ರನಾದ ಶೂದ್ರ ಅಲ್ಲಮನ ಹೊಸ ರೂಪವಾಗುತ್ತಿದ್ದನು. ಹೊಸ ರೂಪದೊಂದಿಗೆ ನಿಂತಿರುವ ಹಳೆಯ ಅಲ್ಲಮನನ್ನು ಬಸವಣ್ಣ ಗುರುತಿಸುತ್ತಿದ್ದನು. ಹೀಗೆ ಶ್ರಮದ ಆಶಯವು ಪುನಃ ಸ್ಥಾಪಿತವಾಗುತ್ತಿತ್ತು, ಜಾತಿಯಾಗಿ ಸಂಘಟಿತವಾಗತೊಡಗಿದ್ದ ಬ್ರಾಹ್ಮಣ್ಯವು ಮತ್ತೊಮ್ಮೆ ತಿರಸ್ಕೃತವಾಗುತ್ತಿತ್ತು. ಸಾಮಾಜಿಕ ಚಳವಳಿಗಳು ಚಾರಿತ್ರಿಕ ಘಟನೆಗಳೂ ಹೌದು ರೂಪಕಗಳೂ ಹೌದು. ಚರಿತ್ರೆಯು ಮರೆಯಾಗುತ್ತದೆ ರೂಪಕವು ಉಳಿದು ಬರುತ್ತದೆ.

ಯಂತ್ರನಾಗರಿಕತೆಯು ಶ್ರಮವನ್ನು ತಾತ್ವಿಕವಾಗಿಯೇ ತಿರಸ್ಕರಿಸಿದೆ. ಹಾಗಾಗಿ ಶ್ರಮ ಮೂಲದ ಯಾವ ಸಿದ್ಧಾಂತವೂ ಯಂತ್ರನಾಗರಿಕತೆಯೊಳಗೆ ಯಶಸ್ವಿಯಾಗುವುದು ಸಾಧ್ಯವಿಲ್ಲ. ಮಾರ್ಕ್ಸ್‌ವಾದವಿರಲಿ ಲಿಂಗಾಯತವಿರಲಿ, ಯಂತ್ರನಾಗರಿಕತೆಯನ್ನು ತಿರಸ್ಕರಿಸದೆ ಬೇರೆ ದಾರಿಯಿಲ್ಲ. ಇಲ್ಲ ಯಂತ್ರನಾಗರಿಕತೆಯನ್ನು ತಿರಸ್ಕರಿಸಬೇಕು, ಇಲ್ಲವೇ ಶ್ರಮದ ಆಶಯವನ್ನು ತಿರಸ್ಕರಿಸಬೇಕು. ಸದ್ಯಕ್ಕಂತೂ, ಎರಡೂ ಧರ್ಮಗಳಲ್ಲಿ, ಶ್ರಮದ ಆಶಯ ಕೇವಲ ಆಶಯವಾಗಿ ಉಳಿದಿದೆ.

ತದ್ವಿರುದ್ಧವಾದದ್ದನ್ನು ಮಾಡುತ್ತಿದ್ದೇವೆ ನಾವು. ಸಮತಾವಾದಿ ಚೀನವು ಮಾರುಕಟ್ಟೆಯ ಹಿಂದೆ ಬಿದ್ದಿದ್ದರೆ ಲಿಂಗಾಯತ ಮಠಗಳು ಸ್ಥಾವರದ ಹಿಂದೆ ಬಿದ್ದಿವೆ. ಅಮೆರಿಕೆಯ ಸಾಮ್ರಾಜ್ಯಶಾಹಿ ವ್ಯವಸ್ಥೆಯನ್ನು ಕಾಗದದ ಹುಲಿ ಎಂದು ಹಂಗಿಸಿದ್ದ ಸಮತಾವಾದಿ ಚೀನಾ ದೇಶವೇ ಇಂದು ಅಮೆರಿಕೆಗಿಂತ ಮಿಗಿಲಾದ ಸಾಮ್ರಾಜ್ಯಶಾಹಿಯಾಗಿದೆ. ಜಾತಿವ್ಯವಸ್ಥೆಯನ್ನು ತಿರಸ್ಕರಿಸಿ ಮೇಲೆದ್ದು ಬಂದ ಲಿಂಗಾಯತವೇ ಬಲಿಷ್ಠ ಜಾತಿಯಾಗಿದೆ. ಬ್ರಾಹ್ಮಣ್ಯವನ್ನು ತಿರಸ್ಕರಿಸಿದ ಧರ್ಮವು ನವಬ್ರಾಹಣರ ಕೈಗೊಂಬೆಯಾಗಿದೆ.

ಲಹರಿಗೆ ಬಿದ್ದಾಗ ನಾನು ಯೋಚಿಸುವುದಿದೆ: ಮತ್ತೊಂದು ಸಾಮಾಜಿಕ ಕ್ರಾಂತಿಯಾಗುವುದಿದ್ದರೆ ಅದು ಹೇಗಿದ್ದೀತು? ಮತ್ತೊಮ್ಮೆ ಅಲ್ಲಮನು ಹುಟ್ಟಿ ಬರುವುದಾದರೆ ಅವನ ರೂಪ ಹೇಗಿದ್ದೀತು ಎಂದೆಲ್ಲ ಯೋಚಿಸುವುದಿದೆ. ನನಗನ್ನಿಸುತ್ತದೆ, ಈ ಬಾರಿ ಅಲ್ಲಮನದ್ದು ಹೆಣ್ಣು ರೂಪವಾಗಿರುತ್ತದೆ.

ಇಂದಿನ ಬಸವ ಕಲ್ಯಾಣವೋ ಅಥವಾ ಯಾದಗಿರಿ ಜಿಲ್ಲೆಯ ಕೊಡೆಕಲ್ಲೋ, ಅಂತೂ ವಚನ ಚಳವಳಿ ನಡೆದ ನೆಲದವಳೇ ಆಗಿರುತ್ತಾಳೆ ಆಕೆ. ಈಕೆಯ  ಕಂಕುಳಲ್ಲಿ ಗೊಣ್ಣೆ ಸುರಿಸುತ್ತಿರುವ ಮಗುವೊಂದು ಇರುತ್ತದೆ.

ಅದು ರೋಗಗ್ರಸ್ತವಾಗಿರುತ್ತದೆ. ಹಾಗೂ ಹಸಿದಿರುತ್ತದೆ. ಅವ್ಯಾಹತವಾಗಿ ಅರಚುತ್ತಿರುತ್ತದೆ. ಹಾಲು ನೀಡಬಲ್ಲ ಹೆಣ್ಣು ಮೊಲೆಗಳು ಆಕೆಯಲ್ಲಿ ಸಂಪೂರ್ಣ ಬತ್ತಿ ಹೋಗಿರುತ್ತವೆ. ಕಣ್ಣುಗಳು ಗುಳಿಬಿದ್ದಿರುತ್ತವೆ. ದೇಹವು ದುರ್ನಾತ ಬೀರುತ್ತಿರುತ್ತದೆ. ಬಟ್ಟೆಯ ಗಂಟೊಂದು ಆಕೆಯ ತಲೆಯ ಮೇಲಿರುತ್ತದೆ. ಕೊಂಚ ಉರ್ದು ಕೊಂಚ ತೆಲುಗು ಧಾರಾಳ ಬೈಗುಳಗಳು ಮಿಶ್ರಿತವಾದ ಕ್ಷುದ್ರ ಕನ್ನಡ ನುಡಿಯುತ್ತಾಳೆ ಈಕೆ, ಈಕೆ ಮಹಾಮನೆಗೆ ಗುಳೆ ಬಂದಿದ್ದಾಳೆ.

ಮಹಾಮನೆ ಬೆಂಗಳೂರಿನಲ್ಲಿದೆ. ಸಾಫ್ಟ್‌ವೇರ್ ಕಂಪೆನಿಯೊಂದರ ಬೃಹತ್ ಕಟ್ಟಡವಾಗಿ ಮಹಾಮನೆಯ ವಿಶಾಲ ಅಂಗಳದ ವಿಶಾಲ ದ್ವಾರದ ಮುಂದೆ, ಜಂಗಮರು ಜೀನ್ಸ್ ತೊಟ್ಟುಕೊಂಡು ಜಾಕೆಟ್ ತೊಟ್ಟುಕೊಂಡು, ಇಂಗ್ಲಿಷ್ ಭಾಷೆಯಲ್ಲಿ ವಚನಗಳನ್ನು ಸುಶ್ರಾವ್ಯವಾಗಿ ಗಳುಹುತ್ತ, ಪೆಪ್ಸಿ ಹೀರುತ್ತ, ಸುಖಿಸುತ್ತ ನಿಂತಿರುತ್ತಾರೆ ಜಂಗಮರು.

ದಲಿತ ಮಹಿಳೆ ದಾಸೋಹಕ್ಕೆಂದು ಮಹಾಮನೆ ಪ್ರವೇಶಿಸಬಯಸುತ್ತಾಳೆ. ಜಂಗಮರು ದಂಗುಬಡಿದು ಹೋಗುತ್ತಾರೆ. ನೋ ನೋ... ನೆವರ್! ಎಂದು ಆಕೆಯನ್ನು ಅಟ್ಟಿಬಿಡುತ್ತಾರೆ. ಆಕೆ ಮಹಾಮನೆಯ ಪಕ್ಕದ ಕೊಳೆಗೇರಿ ತಲುಪಿ, ಕುಳಿತು, ಅವ್ಯಾಹತವಾಗಿ ಅರಚುತ್ತಿರುವ ಮಗುವಿಗೆ ಹಾಲುಣಿಸುವ ವ್ಯರ್ಥ ಪ್ರಯತ್ನ ಮಾಡುತ್ತಾಳೆ. ಸಾಧ್ಯವಾಗದೆ ಮಗುವಿಗೆ ಬಡಿಯುತ್ತಾಳೆ.

ಅದು ಹೇಗೋ ವಿಷಯ ತಿಳಿದ ಬಸವಣ್ಣ ಹಾಗೂ ನೀಲಾಂಬಿಕೆಯರು ಮಹಾಮನೆಯಿಂದ ಓಡೋಡಿಬರುತ್ತಾರೆ. ಮಹಾಮನೆಗೆ ಬರಬೇಕೆಂದು ವಿಕಾರರೂಪಿ ಅಲ್ಲಮನಲ್ಲಿ ಬೇಡಿಕೊಳ್ಳುತ್ತಾರೆ. ಅಲ್ಲಮ ಬರಲಾರೆನೆನ್ನುತ್ತಾನೆ. ಬಸವಣ್ಣ ನೀಲಾಂಬಿಕೆಯರು ಮಹಾಮನೆಯನ್ನೇ ತಿರಸ್ಕರಿಸುತ್ತಾರೆ.

ಕೊಳೆಗೇರಿಯನ್ನು ಸ್ವೀಕರಿಸುತ್ತಾರೆ. ಮಹಿಳೆ ಹಾಗೂ ಮಗುವನ್ನು ಸಲಹುತ್ತಾರೆ. ಕೊಳೆಗೇರಿಗಂಟಿದ ಕೊಳೆ, ಮಹಿಳೆಗಂಟಿದ ಕೊಳೆ, ಮಗುವಿಗಂಟಿದ ಕಾಯಿಲೆ... ಎಲ್ಲವನ್ನೂ ತೊಳೆಯುತ್ತ ದಾಸೋಹದಲ್ಲಿ ಮುಳುಗಿ ಹೋಗುತ್ತಾರೆ. ಅಲ್ಲಮನ ಸಿಟ್ಟಿಳಿಯುತ್ತದೆ.

ಮಹಿಳೆ, ಮಗು ಆರೋಗ್ಯದಿಂದ ಬೆಳಗುತ್ತವೆ. ಕೊಳೆಗೇರಿಯು ಆಶ್ರಮರೂಪ ಧರಿಸುತ್ತದೆ. ಸರಳ  ಮಹಾಮನೆಯೊಂದು ರೂಪುಗೊಳ್ಳುತ್ತದೆ. ಅಲ್ಲಮ, ಬಸವಣ್ಣ ಹಾಗೂ ನೀಲಾಂಬಿಕೆಯರ ಪ್ರಯತ್ನ ದಿಂದ ಲಿಂಗಾಯತವು ಪುನಃ ಸ್ಥಾಪಿತವಾಗುತ್ತದೆ. ಆಧುನಿಕ ಎಡಪಂಥವು ಲಿಂಗಾಯತದಿಂದ ಕಲಿಯಬಹುದಾದ ಪಾಠ ಇದೇ ಆಗಿದೆ.

Comments
ಈ ವಿಭಾಗದಿಂದ ಇನ್ನಷ್ಟು
ರಾಮಾಯಣವೆಂಬುದು ಎಡಪಂಥ

ಸಂಭಾಷಣೆ
ರಾಮಾಯಣವೆಂಬುದು ಎಡಪಂಥ

15 Mar, 2018
ವರ್ಗ ಸಂಘರ್ಷ ಹಾಗೂ ಧರ್ಮ

ಸಂಭಾಷಣೆ
ವರ್ಗ ಸಂಘರ್ಷ ಹಾಗೂ ಧರ್ಮ

1 Mar, 2018
ಇದು ಧರ್ಮಯುದ್ಧ... ಸಭ್ಯ ಸಂಸ್ಕೃತಿ

ಸಂಭಾಷಣೆ
ಇದು ಧರ್ಮಯುದ್ಧ... ಸಭ್ಯ ಸಂಸ್ಕೃತಿ

15 Feb, 2018
ಮಂಟೇಸ್ವಾಮಿಗಳ ಸಮಕಾಲೀನ ಮಹತ್ವ

ಸಂಭಾಷಣೆ
ಮಂಟೇಸ್ವಾಮಿಗಳ ಸಮಕಾಲೀನ ಮಹತ್ವ

1 Feb, 2018
ಕೈ ಉತ್ಪನ್ನಗಳ ಪರವಾದ ಚಳವಳಿ ಏಕೆ ಬೇಕು?

ಸಂಭಾಷಣೆ
ಕೈ ಉತ್ಪನ್ನಗಳ ಪರವಾದ ಚಳವಳಿ ಏಕೆ ಬೇಕು?

18 Jan, 2018