ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾದ್ಯ ತಯಾರಿಕೆಯಲ್ಲಿ ಬದಲಾವಣೆಯ ತಂಗಾಳಿ

Last Updated 23 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ದುಡ್ಡೊಂದಿದ್ದರೆ ಕೆ.ಜಿ.ಗಟ್ಟಲೆ ಗುಣಮಟ್ಟದ ಚಿನ್ನ ಕೊಳ್ಳಬಹುದು, ಆದರೆ ಎಷ್ಟೇ ಹಣ ಕೊಟ್ಟರೂ ಅತ್ಯುತ್ತಮ ಗುಣಮಟ್ಟದ ಪೀಠೋಪಕರಣ ಕೊಳ್ಳುವುದು ಕಷ್ಟ. ಟೀಕ್‌ವುಡ್‌ನಲ್ಲಿ ಮಂಚ ಮಾಡಿಸಿಕೊಂಡರೂ ಮಧ್ಯರಾತ್ರಿಯಲ್ಲಿ ಮಂಚ ಕೊರೆಯುವ ಹುಳುವಿನ ಸದ್ದು ಕೇಳಿಸದೇ ಇರದು.

ಪೀಠೋಪಕರಣಗಳ ಮಾತು ಹಾಗಿರಲಿ,  ಸಂಗೀತಗಾರನ ಮನದಾಳದ ಸ್ವರಧಾರೆಗೆ ಮರದ ವಾದ್ಯ ಸಹಕರಿಸದೆ ಅಪಶ್ರುತಿ ಬಂದಾಗ ಅವನು ಅನುಭವಿಸುವ ಯಾತನೆ ಅಷ್ಟಿಷ್ಟಲ್ಲ.  ಇತ್ತೀಚೆಗೆ ಸಂಗೀತಗಾರರಿಗೆ ಮರದ ವಾದ್ಯಗಳದ್ದು ಒಂದು ದೊಡ್ಡ ಸಮಸ್ಯೆಯಾಗಿದೆ. ಇದಕ್ಕೆಲ್ಲ ಹದವಿಲ್ಲದ ಮರದಿಂದ ತಯಾರಾದ ಕಳಪೆ ಗುಣಮಟ್ಟದ ಚೀನಾ ವಾದ್ಯಗಳೇ ಕಾರಣ.


ಸಾಂಪ್ರದಾಯಿಕವಾಗಿ ವಾದ್ಯ ತಯಾರಿಸುತ್ತಿದ್ದ ಕುಶಲಕರ್ಮಿಗಳು ಈಗ ನೇಪಥ್ಯಕ್ಕೆ ಸರಿದಿದ್ದಾರೆ. ಚೀನಾ ವಾದ್ಯಗಳು ವಿಶ್ವ ಮಾರುಕಟ್ಟೆಗೆ ಲಗ್ಗೆ ಹಾಕಿವೆ. ಅವು ಮಕ್ಕಳಾಟಿಕೆಗಳಷ್ಟೇ ಕಳಪೆ. ಕಛೇರಿ ನುಡಿಸುವಷ್ಟು ಯೋಗ್ಯತೆ ಇಲ್ಲದ ಚೀನಾ ವಾದ್ಯಗಳನ್ನು ಸಂಗೀತ ಕಲಿಕಾ ಹಂತದಲ್ಲಿರುವ ಮಕ್ಕಳು ಬಳಸುತ್ತಾರಷ್ಟೆ.
ವೀಣೆಯೊಂದನ್ನು ತಯಾರಿಸಲು ತುಂಬ ಹಳೆಯದಾದ ಹಲಸಿನ ಮರ ಬೇಕು.

15 ವರ್ಷ ಮರವನ್ನು ಒಣಗಿಸಿ ಹದ ಮಾಡಿ ವೀಣೆ ತಯಾರಿಸಬೇಕು. ವಯಲಿನ್‌, ಮ್ಯಾಂಡಲಿನ್‌, ಗಿಟಾರ್‌, ದುಲ್‌ರುಬಾ, ತಬಲಾ, ಮೃದಂಗ ಸೇರಿ ಎಲ್ಲ ವಾದ್ಯಗಳನ್ನೂ ಹತ್ತಾರು ವರ್ಷ ಹದ ಮಾಡಿದ ಮರದಿಂದ ತಯಾರಿಸಬೇಕು. ಆದರೆ, ಮರವನ್ನು ತಾಳ್ಮೆಯಿಂದ ಹದ ಮಾಡುವ ಕುಶಲಗಾರರು ಈಗ ಯಾರೂ ಇಲ್ಲ. ಚೀನಾದ ಹದವಿಲ್ಲದ ವಾದ್ಯ ನುಡಿಸಿದರೆ ಕೇಳುವುದು ಕಷ್ಟ.

ಹೀಗಾಗಿ ವಾದ್ಯ ಸಂಗೀತಗಾರರು ವಿದೇಶಿ (ಚೀನಾ ಬಿಟ್ಟು) ವಾದ್ಯಗಳತ್ತ ಮುಖ ಮಾಡಿದ್ದಾರೆ. ಲಕ್ಷಾಂತರ ರೂಪಾಯಿ ಬೆಲೆ, ತೆರಿಗೆ ಕಟ್ಟಿ ವಾದ್ಯಗಳನ್ನು ಆಮದು ಮಾಡಿಸಿಕೊಳ್ಳುತ್ತಿದ್ದಾರೆ. ವಿದೇಶಿ ವಾದ್ಯಗಳ ಬೆಲೆ ದುಬಾರಿ. ಜೊತೆಗೆ ವೈವಿಧ್ಯಮಯ ತೆರಿಗೆ ಕಟ್ಟಿ ಭಾರತಕ್ಕೆ ತರಿಸಿಕೊಳ್ಳಬೇಕಾಗಿದೆ.

ಚೀನಾ ವಯಲಿನ್‌, ಗಿಟಾರ್‌, ಕೀಬೋರ್ಡ್‌ ಮುಂತಾದ ವಾದ್ಯಗಳ ಹಾವಳಿಯಿಂದ ಭಾರತೀಯ ಸಂಗೀತ ವಾದ್ಯಗಳ ಸಾಂಪ್ರದಾಯಿಕ ಕುಶಲಕರ್ಮಿಗಳು ಈಗ ಜೀವನೋಪಾಯ ಕಳೆದುಕೊಂಡಿದ್ದಾರೆ. ಕೆಲವರು  ವಿದೇಶಿ ವಾದ್ಯಗಳ  ಹಂಚಿಕೆದಾರರಾಗಿದ್ದಾರೆ. ವಾದ್ಯದ ನಿಜವಾದ ಬೆಲೆ ತಿಳಿಯದೆ ದುಬಾರಿ ಹಣ ಪೀಕುತ್ತಿದ್ದಾರೆ. ಇದರಿಂದಾಗಿ ಬಡ ಸಂಗೀತ ಕಲಾವಿದ ವಾದ್ಯಸಂಗೀತದತ್ತ ಮುಖಮಾಡದ ಸ್ಥಿತಿಯಲ್ಲಿದ್ದಾನೆ.

ಮರ ಕಡಿಯಬೇಕಾ?
ಮರದ ಬೆಲೆಯೂ ಕಮ್ಮಿ ಇಲ್ಲ. ವೀಣೆ ತಯಾರಿಸಲು ಹಲಸಿನ ಮರ ಕಡಿಯಬೇಕು, ಸಿತಾರ್‌ಗೆ ಟೀಕ್‌, ಅಗರ್‌ವುಡ್‌, ವಯಲಿನ್‌ಗೆ ದೇವದಾರು ಜಾತಿಯ ಮರ, ಮೇಪಲ್‌ ವುಡ್‌, ಬಾಕ್‌ ವುಡ್‌, ಕೊಳಲಿಗೆ ಬಿದಿರು ಬೇಕು. ಸಂಗೀತ ವಾದ್ಯಗಳ ತಯಾರಿಕೆಯಿಂದ ಅರಣ್ಯ ನಾಶವಾಗುವುದಿಲ್ಲವೆ? ಸಂಗೀತಗಾರರಲ್ಲಿ ಸಹಜವಾಗಿ ಈ ಪ್ರಶ್ನೆ ಕಾಡುತ್ತಿದೆ. ಹೀಗಾಗಿ ಅವರು ಬದಲಿ ವಾದ್ಯಗಳತ್ತ ಮುಖ ಮಾಡಿದ್ದಾರೆ.

ಆಪತ್ಬಾಂಧವ ಅರಣ್ಯಕುಮಾರ...
ಧಾರವಾಡದ ಡಾ. ಅರಣ್ಯಕುಮಾರ  ಅವರು ಸಿತಾರ್‌ನಲ್ಲಿ ವಿಶ್ವದೆಲ್ಲೆಡೆ ಹೆಸರು ಮಾಡಿರುವ ಯುವ ಸಂಗೀತಗಾರ. ಪ್ರಯೋಗಗಳಿಗೆ ಹೆಸರುವಾಸಿಯಾಗಿರುವ ಅವರು ಹಿಂದೂಸ್ತಾನಿ ಸಂಗೀತದಲ್ಲಿ ಪಿಎಚ್‌.ಡಿ ಪಡೆದಿದ್ದಾರೆ. ಈಗ  ಹೊಸದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ.

ಧಾರವಾಡದಲ್ಲಿ ಈಚೆಗೆ ‘ಸರಸ್ವತಿ ಮ್ಯೂಸಿಕಲ್ಸ್‌’ ಸ್ಥಾಪಿಸಿರುವ ಅವರು ಬದಲಿ ಸಂಗೀತ ವಾದ್ಯ ತಯಾರಿಕೆಯತ್ತ ಸಂಶೋಧನೆ ಕೈಗೊಂಡಿದ್ದಾರೆ. ಹೆಸರಲ್ಲೇ ಅರಣ್ಯ ಕಟ್ಟಿಕೊಂಡಿರುವ ಅವರು ಅರಣ್ಯ ಸಂರಕ್ಷಣಾ ಜಾಗೃತಿಯನ್ನೂ ತಮ್ಮ ಕೇಂದ್ರದ ಮೂಲಕ ಮೂಡಿಸುತ್ತಿದ್ದಾರೆ. ವಾದ್ಯಕ್ಕೆ ಮರ ಬಳಸದೇ ಬದಲಿ ವಸ್ತುವಿನ ಹುಡುಕಾಟ ಸರಸ್ವತಿ ಮ್ಯೂಸಿಕಲ್ಸ್‌ನಲ್ಲಿ ನಡೆಯುತ್ತಿದೆ.

ಈಗಾಗಲೇ ಫೈಬರ್‌ನಿಂದ ಅತಿ ಹಗುರವಾದ ಸಿತಾರ್‌ ತಯಾರಿಸಿದ್ದು ಇಷ್ಟರಲ್ಲೇ ಕಛೇರಿಯಲ್ಲಿ ನುಡಿಸುವ ತಯಾರಿಯಲ್ಲಿದ್ದಾರೆ. ಫೈಬರ್‌ನಲ್ಲೇ ಅಪರೂಪದ ದಿಲ್‌ರುಬಾ ಹಾಗೂ ಮ್ಯಾಂಡಲಿನ್‌ ಕೂಡ ತಯಾರಿಸಿದ್ದಾರೆ. ಪ್ರಯಾಣಕ್ಕೂ ಅನುಕೂಲವಾಗುವ ರೀತಿಯಲ್ಲಿ ತಯಾರಿಸಿರುವ ಅವರು ಶೀಘ್ರದಲ್ಲಿಯೇ ಅದನ್ನು ಪ್ರದರ್ಶಿಸಿ  ಮಾರಾಟಕ್ಕೆ ಇಡಲಿದ್ದಾರೆ. ಅದಕ್ಕೂ ಮೊದಲು ತಮ್ಮದೇ ಆದ ಹಕ್ಕು ಪಡೆಯುವ ಸಿದ್ಧತೆಯಲ್ಲಿದ್ದಾರೆ. ಜೊತೆಗೆ ಅಪರೂಪದ ವಾದ್ಯಗಳಾದ ಇಸ್ರಾಜ್‌, ಸುರ್‌ಸಿಂಗಾರ, ಸುರ್‌ಬಹರ್‌ ವಾದ್ಯಗಳಿಗೆ ಹೊಸ ರೂಪ ಕೊಡುತ್ತಿದ್ದಾರೆ.

ದೇಶದಲ್ಲೇ ಮೊದಲು...
ಫೈಬರ್‌ನಿಂದ ತಯಾರಿಸಿದ ಸಾಕಷ್ಟು ವಾದ್ಯಗಳು ಮಾರುಕಟ್ಟೆಯಲ್ಲಿವೆ. ಆದರೆ ಅವೆಲ್ಲವೂ ಆಮದು ಮಾಡಿಕೊಂಡ ವಿದೇಶಿ ವಾದ್ಯಗಳು. ಭಾರತದ ಕುಶಲಕರ್ಮಿಗಳಾರೂ ಫೈಬರ್‌ನಿಂದ ವಾದ್ಯ ತಯಾರಿಸುತ್ತಿಲ್ಲ. ದೇಶದಲ್ಲೇ ಮೊದಲ ಬಾರಿಗೆ ಅರಣ್ಯ ಕುಮಾರ್‌ ಅವರು, ಫೈಬರ್‌ನಿಂದ ವಾದ್ಯ ತಯಾರಿಕೆ ಕಾಯಕಕ್ಕೆ ಮುನ್ನುಡಿ ಬರೆದಿದ್ದು ಮೊದಲ ಯತ್ನದಲ್ಲೇ ಯಶಸ್ವಿಯೂ ಆಗಿದ್ದಾರೆ.

ಅದೂ ಅಲ್ಲದೆ ಭಾರತದಲ್ಲಿ ಪ್ರದರ್ಶನ ಕಲಾವಿದನೊಬ್ಬ ಈ ರೀತಿ ವಾದ್ಯ ತಯಾರಿಕಾ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಇದೇ ಮೊದಲು. ಕಲಾವಿದನೊಬ್ಬ ತನಗೆ ಬೇಕಾದ ವಾದ್ಯವನ್ನು ತಾನೇ ತಯಾರಿಸಿಕೊಂಡು ನುಡಿಸಿದ ಉದಾಹರಣೆ ಬೇರೆಡೆ ಇಲ್ಲ. ಈ ನಿಟ್ಟಿನಲ್ಲಿ ಅರಣ್ಯಕುಮಾರ್‌ ದಾಖಲೆ ಬರೆಯುತ್ತಿದ್ದಾರೆ.

ವಿದೇಶಿ ಫೈಬರ್‌ ವಾದ್ಯಗಳನ್ನು ನುಡಿಸಿರುವ ಅವರು ಕೆಲ ತಾಂತ್ರಿಕ ಸಮಸ್ಯೆಗಳನ್ನು ಗುರುತಿಸಿದ್ದಾರೆ. ಅವುಗಳನ್ನು ಸರಿ ಮಾಡಿಕೊಂಡು ತಾವು ತಯಾರಿಸಿದ ವಾದ್ಯಕ್ಕೆ ಹೊಸ ರೂಪ ಕೊಟ್ಟಿದ್ದಾರೆ.

‘ಕಳಪೆ ವಾದ್ಯಗಳು ವಾತಾವರಣಕ್ಕೆ ತನ್ನ ಸ್ಥಿತಿ ಕಳೆದುಕೊಳ್ಳುತ್ತವೆ. ಆ ವೇಳೆ ಅಪಸ್ವರ ಬಂದಾಗ ಆಭಾಸವಾಗುತ್ತದೆ.  ಹೀಗಾಗಿ ಬದಲಿ ಮಾಧ್ಯಮ ಬಳಸಿ ವಾದ್ಯ ತಯಾರಿಸುವ ತುಡಿತ ನನಗೆ ಮೊದಲಿನಿಂದಲೂ ಇತ್ತು. ಈಗ ಕನಸು ನನಸಾಗಿದೆ. ಫೈಬರ್‌ ಮಾತ್ರವಲ್ಲದೆ ಬೇರೆ ಬೇರೆ ಮಾಧ್ಯಮಗಳ ಬಳಕೆಯಿಂದ ವಾದ್ಯ ತಯಾರಿಕೆಯ ಸಾಧ್ಯತೆ ಬಗ್ಗೆ ಹುಡುಕಾಟ ನಡೆಸುತ್ತಿದ್ದೇನೆ’ ಎನ್ನುವ ಅರಣ್ಯಕುಮಾರ್‌, ನಿತ್ಯ ಕಛೇರಿಗಳ ನಡುವೆಯೂ ತಮ್ಮ ಸಂಶೋಧನಾ ಕಾರ್ಯಕ್ಕೆ ಪ್ರಾಮುಖ್ಯ ಕೊಟ್ಟಿದ್ದಾರೆ.

ವಾದ್ಯ ಸಂಗೀತಗಾರನಿಗೂ, ವಾದ್ಯ ತಯಾರಿಸುವ ಕುಶಲಕರ್ಮಿಗೂ ಸಂಬಂಧವೇ ಇಲ್ಲ. ಕುಶಲಕರ್ಮಿಗೆ ಸ್ವರ ಜ್ಞಾನ ಇರುವುದಿಲ್ಲ. ಆದ್ದರಿಂದ ಸಂಗೀತಗಾರನಿಗೆ ಬೇಕಾದ ಉತ್ತಮ ವಾದ್ಯ ಅವನ ಜೀವನವಿಡೀ ಸಿಗುವುದೇ ಇಲ್ಲ. ಆದರೆ ಅರಣ್ಯ ಕುಮಾರ್‌ ಈ ನಂಬಿಕೆಯನ್ನು ಸುಳ್ಳಾಗಿಸುವ ಹೆಜ್ಜೆ ಇಟ್ಟಿದ್ದಾರೆ.

ವಾದ್ಯ ಮಾರಾಟ ಕೇಂದ್ರ...
ಉತ್ತರ ಕರ್ನಾಟಕ ಭಾಗದಲ್ಲಿ ಹಲವಾರು ದಿಗ್ಗಜ ಸಂಗೀತಗಾರರಿದ್ದಾರೆ. ಆದರೆ ವಾದ್ಯಗಳನ್ನು ತಯಾರಿಸುವವರು ಹಾಗೂ ದುರಸ್ತಿ ಮಾಡಿಕೊಡುವವರು ಯಾರೂ ಇಲ್ಲ. ಒಂದು ಸಣ್ಣ ತಂತಿ ಬೇಕಾದರೂ ಪುಣೆ, ಮುಂಬೈ ಅಥವಾ ಬೆಂಗಳೂರಿಗೆ ಹೋಗಬೇಕು.

ಅಲ್ಲದೆ ‘ಆಮದು ವಾದ್ಯ’ದ (Imported Instruments) ಹೆಸರಿನಲ್ಲಿ ಮಧ್ಯವರ್ತಿಗಳು ವಾದ್ಯದ ನಿಜವಾದ ಬೆಲೆಗಿಂತಲೂ ನಾಲ್ಕುಪಟ್ಟು ಹೆಚ್ಚು ಹಣ ವಸೂಲಿ ಮಾಡುವ ವಿಷಯ ಎಲ್ಲರಿಗೂ ಗೊತ್ತಿದೆ. ಇದನ್ನು ಅರಿತಿದ್ದ ಅರಣ್ಯಕುಮಾರ್‌, ಸರಸ್ವತಿ ಮ್ಯೂಸಿಕಲ್ಸ್‌ ಮೂಲಕ ಮಧ್ಯವರ್ತಿಗಳ ಹಾವಳಿ ತಡೆಯಲು ಯತ್ನಿಸುತ್ತಿದ್ದಾರೆ. ಜೊತೆಗೆ ಎಲ್ಲದಕ್ಕೂ ಪುಣೆ, ಬೆಂಗಳೂರಿಗೆ ಹೋಗುವ ಅನಿವಾರ್ಯತೆ ತಪ್ಪಿಸಿದ್ದಾರೆ.

ಹೊಸದಾಗಿ ಸಂಗೀತ ಕಲಿಯುವ ಮಕ್ಕಳು ಚೀನಾ ವಾದ್ಯಗಳಿಗೆ ಮಾರು ಹೋಗುತ್ತಿರುವ ಪರಿಯನ್ನೂ ಅರಣ್ಯಕುಮಾರ್‌ ಕಂಡಿದ್ದರು. ದೇಶದಲ್ಲೇ ಸಿಗುವ ಉತ್ತಮ ಗುಣಮಟ್ಟದ ವಾದ್ಯಗಳನ್ನು ಖರೀದಿಸಿ ಅದನ್ನು ಕೆಲ ಮಾರ್ಪಾಡುಗಳೊಂದಿಗೆ ಮಾರಾಟಕ್ಕಿಟ್ಟಿದ್ದಾರೆ. ಬದಲಿ ವಾದ್ಯಗಳ ಸಂಶೋಧನೆ ಜೊತೆಯಲ್ಲೇ ದೇಶೀಯ ವಾದ್ಯಗಳನ್ನೂ ಮಾರಾಟ ಮಾಡುತ್ತಿದ್ದಾರೆ. ಅವುಗಳ ಬೆಲೆ ಕೂಡ ಕಮ್ಮಿ ಇದೆ. ಮೀರಜ್‌, ದೆಹಲಿ, ಕೋಲ್ಕತ್ತ, ಮುಂಬೈಗಳಲ್ಲಿ ವಾದ್ಯ ಖರೀದಿಸಿ ಕೆಲ ಮಾರ್ಪಾಡುಗಳೊಂದಿಗೆ ಹೊಸ ಮಾಧುರ್ಯ ತುಂಬಿ ಮಾರಾಟ ಮಾಡುತ್ತಿದ್ದಾರೆ.

ಏಕಸ್ವಾಮ್ಯಕ್ಕೆ ಸವಾಲು...
ಸಂಗೀತವಾದ್ಯಗಳ ಮಾರಾಟ ವಿಷಯದಲ್ಲಿ ಇನ್ನೂ ಸಾಕಷ್ಟು ಏಕಸ್ವಾಮ್ಯವಿದೆ. ಪ್ರತಿಸ್ಪರ್ಧಿಗಳಿಲ್ಲದ ಕಾರಣ ಮಾರಾಟಗಾರರು, ದಲ್ಲಾಳಿಗಳು ಹೇಳಿದ್ದೇ ಬೆಲೆಯಾಗಿದೆ. ವಾದ್ಯದ ಬೆಲೆ ಕೇಳಿದರೆ ಸಂಗೀತ ಕಲಿಯುವುದೇ ಬೇಡ ಎನ್ನುವ ವಾತಾವರಣವೂ ಇದೆ. ಇಂತಹ ಪರಿಸ್ಥಿತಿಯಲ್ಲಿ ಏಕಸ್ವಾಮ್ಯಕ್ಕೆ ಸವಾಲೊಡ್ಡುವ ರೀತಿಯಲ್ಲಿ  ಅರಣ್ಯಕುಮಾರ್‌ ಸರಸ್ವತಿ ಮ್ಯೂಸಿಕಲ್ಸ್‌ ಸ್ಥಾಪಿಸಿದ್ದಾರೆ. 

ಹಳೆಯ ವಾದ್ಯಗಳಿಗೆ ಮರುಜೀವ ನೀಡುತ್ತಿರುವ ಅರಣ್ಯಕುಮಾರ್‌,  ನುಡಿಸದೇ ಇಟ್ಟಿರುವ ಅಪರೂಪದ ವಾದ್ಯಗಳನ್ನು ಖರೀದಿಸಿ ಅವುಗಳನ್ನು ಸಂರಕ್ಷಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಅಪರೂಪದ ರುದ್ರವೀಣೆ, ಸಾರಂಗಿ, ಸ್ವರಂಗಿನಿ, ದಿಲ್‌ರುಬಾಗಳಿಗೆ ಅವರು ಮರುಜೀವಕೊಟ್ಟಿದ್ದಾರೆ.  ಅರಣ್ಯಕುಮಾರ್‌ ಅವರ ಕಾರ್ಯಕ್ಕೆ ರಾಜಶೇಖರ್‌, ಗೋಪಿಕೃಷ್ಣ, ಶಂಕರ್‌, ಈರಣ್ಣ ಸಾಥಿಯಾಗಿದ್ದಾರೆ. ಡಾ. ಅರಣ್ಯಕುಮಾರ್‌ ಅವರನ್ನು ಸಂಪರ್ಕಿಸಲು: 9449021157

ಸರಸ್ವತಿ ಮ್ಯೂಸಿಕಲ್ಸ್‌ನಲ್ಲಿರುವ ವಾದ್ಯಗಳ ಬೆಲೆ ಹೀಗಿದೆ:
* ವಯಲಿನ್‌:
₹2,500– 25,000
* ಸಿತಾರ್‌: ₹ 9000ದಿಂದ
* ತಬಲಾ (ಪೂರ್ತಿ ಸೆಟ್‌): ₹ 4,000ದಿಂದ
* ಮೃದಂಗ: 8,000ದಿಂದ
* ಗಿಟಾರ್‌: 3000ದಿಂದ
* ಮ್ಯಾಂಡಲಿನ್‌: ₹ 3000ದಿಂದ
* ಕೀಬೋರ್ಡ್‌: 2,500ದಿಂದ
* ಕೊಳಲು: ₹ 800ನಿಂದ
* ದಿಲ್‌ರುಬಾ: ₹ 10,000ದಿಂದ
* ಹಾರ್ಮೋನಿಯಂ: ₹ 6,500 ದಿಂದ
* ತಾನ್‌ಪುರ: ₹12,000ದಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT