ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣ: ಬದುಕಿನ ಕತ್ತಲೆಗೆ ಅರಿವಿನ ಬೆಳಕು

Last Updated 23 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಶ್ರೀಕೃಷ್ಣನನ್ನು ಪೂರ್ಣಾವತಾರೀ ಎನ್ನುವುದುಂಟು. ‘ಅವತಾರ’ ಎಂದರೆ ಇಳಿದು ಬರುವುದು ಎಂದರ್ಥ. ನಮಗಿಂತ ಹಿರಿದಾದ ತತ್ತ್ವವೊಂದು ನಮ್ಮ ಬಗ್ಗೆ ಕನಿಕರಿಸಿ ನಮ್ಮತ್ತ ಬರುವುದೇ ಅವತಾರ. ಗಂಗೆ ಹೀಗೆ ಮೇಲಿಂದ ಇಳಿದು ಬರುವುದು ಕೂಡ ಅವತಾರವೇ; ಇದೇ ಗಂಗಾವತರಣ. ಕೃಷ್ಣ ಹೀಗೆ ನಮ್ಮನ್ನು ಉದ್ಧರಿಸಲು, ನಮ್ಮ ಕಡೆಗೆ ನಡೆದುಬಂದವನು.

ನಮ್ಮ ಯೋಗಕ್ಷೇಮಗಳನ್ನು ಕಾಪಾಡಲು ನಮ್ಮೊಂದಿಗೆ ನಮ್ಮಂತೆಯೇ ಇದ್ದವನು ಅವನು. ಮಹಾಭಾರತ–ಭಾಗವತ–ಹರಿವಂಶಗಳನ್ನು ನೋಡಿದಾಗ ಶ್ರೀಕೃಷ್ಣನ ಜೀವನದ ಸ್ವಾರಸ್ಯಕರವಾದ ನಿಲುವೊಂದು ನಮ್ಮ ಗಮನ ಸೆಳೆಯದಿರದು; ಮನುಷ್ಯನಾಗಲು  ಜೀವನದುದ್ದಕ್ಕೂ ಪ್ರಯತ್ನಿಸಿದ ದೇವರು ಅವನು.

ಇಷ್ಟಾದರೂ ಕೃಷ್ಣನ ವ್ಯಕ್ತಿತ್ವ ನಮಗೆ ಪೂರ್ಣವಾಗಿ ಅರ್ಥವಾಗದು. ಅವನದ್ದು ತುಂಬ ಸಂಕೀರ್ಣವಾದ ಜೀವನ. ಅವನು ಪೂರ್ಣಾವತಾರೀ ಎಂಬ ಎಣಿಕೆಯೂ ಸ್ವಾರಸ್ಯಕರವಾದದು. ಮಗುವಾಗಿ, ಸ್ನೇಹಿತನಾಗಿ, ಅಣ್ಣನಾಗಿ, ಶಿಷ್ಯನಾಗಿ, ಗುರುವಾಗಿ, ಪ್ರೇಮಿಯಾಗಿ, ಯೋಗಿಯಾಗಿ, ಕೊನೆಗೆ ದೇವರಾಗಿಯೂ  ಅವನು ಹಲವರ ಜೀವನದಲ್ಲಿ ಬೆರೆತುಕೊಂಡಿದ್ದವನು.

ಆದರೆ ಎಲ್ಲೂ ಕೂಡ ಸ್ವಾರ್ಥದ ನೆಲೆಯಿಂದ ಈ ಯಾವುದೇ ಸಂಬಂಧವನ್ನು ಅವನು ಬಳಸಿಕೊಳ್ಳಲಿಲ್ಲ. ಅವನ ಇಂಥ ವಿಸ್ತಾರ ಜೀವನದ ಆಳದಲ್ಲಿ ಬೇರೂರಿದ್ದು ಎಲ್ಲರ ಬದುಕನ್ನೂ ಬೆಳಗಿಸಬೇಕೆಂಬ ತವಕ. ಅದೂ ಕೂಡ ಅವರವರ ಮಾರ್ಗದಲ್ಲಿಯೇ ಕಾಣಿಸಬೇಕೆಂಬ ಔದಾರ್ಯ ಅವನಲ್ಲಿದ್ದಿತೆ ಹೊರತು, ‘ನನ್ನದೇ ದಾರಿಯಲ್ಲಿ ನಡೆಯಿರಿ’ ಎನ್ನುವ ಹಟವನ್ನು ಕೃಷ್ಣನಲ್ಲಿ ಕಾಣಲಾರೆವು. ಆದುದರಿಂದಲೇ ಅವನು ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಕಾಣುತ್ತಾನೆ.

ಅವನದ್ದು ಧರ್ಮದ ದಾರಿಯೋ, ಅಧರ್ಮದ ದಾರಿಯೋ ಹೇಳುವುದು ಸುಲಭವಲ್ಲ; ಅವನು ‘ಇಂಥ ಸಂದರ್ಭದಲ್ಲಿ ಹೀಗೇಕೆ ನಡೆದುಕೊಂಡ’ ಎಂದು ನಿರ್ಣಯಮಾಡಿ ಹೇಳುವುದು ಕಷ್ಟ; ಅವನು ಮಾಡಿರುವ ಕೆಲಸಗಳಲ್ಲಿ ತಪ್ಪು ಯಾವುದು, ಸರಿ ಯಾವುದು ತೂಗಿ ಹೇಳುವುದು ನಮ್ಮ ಅರಿವಿಗೆ ಮೀರಿದ್ದು. ‘ಕೃಷ್ಣ’ ಎಂದರೆ ಕಪ್ಪು, ಕತ್ತಲೆ ಎನ್ನುವ ಅರ್ಥವೂ ಇದೆ; ಕಪ್ಪು ನಿಗೂಢತೆಯನ್ನು ಪ್ರತಿನಿಧಿಸುವುದು; ಕತ್ತಲು ನಮ್ಮ ಅರಿವುಗಿರುವ ಮಿತಿಯನ್ನು ಸೂಚಿಸುತ್ತದೆ.

ಎಲ್ಲರ ಜೀವನದ ನಿಗೂಢತೆಗೆ ಸಂಕೇತವೇ ಕೃಷ್ಣ. ಡಿವಿಜಿಯವರು ಕೃಷ್ಣನನ್ನು ‘ಪ್ರಸಿದ್ಧ ರಹಸ್ಯ’ ಎಂದು ಕರೆದಿರುವುದು ಮಾರ್ಮಿಕವಾಗಿದೆ. ನಮ್ಮ ಜೀವನ ನಮಗೆ ತಿಳಿದಿದ್ದರೂ ‘ತಿಳಿದಿಲ್ಲ’.  ಅಂತೆಯೇ ಕೃಷ್ಣ ಎಲ್ಲರಿಗೂ ಗೊತ್ತಿದ್ದರೂ ಅವನನ್ನು ಪೂರ್ಣವಾಗಿ ತಿಳಿದವರು ಯಾರೂ ಇಲ್ಲ.

ಹೀಗಿಯೇ ನಮ್ಮಲ್ಲಿಯೇ ಇರುವ ನಮ್ಮದೇ ಜೀವನದ ನಿಗೂಢತೆಯ ಕತ್ತಲೆಯ ಬಲೆಯಲ್ಲಿ ಕಾಣಿಸುವ ಬೆಳಕಿನ ಮೂರ್ತರೂಪವೇ ಕೃಷ್ಣ. ಈ ಬೆಳಕು ಅರಿವಿನ ರೂಪದಲ್ಲಿ ನಿಂತು ಹಾಡಿದ ಜೀವನರಾಗವೇ ಭಗವದ್ಗೀತೆ. ಆದುದರಿಂದಲೇ ಭಗವದ್ಗೀತೆ ಸಾವಿರಾರು ವರ್ಷಗಳಿಂದ ಹಲವು ಸ್ತರದ, ಹಲವು ವಿಧದ, ಹಲವು ನೆಲೆಗಳ ಜನರ ಜೀವನಕ್ಕೆ ಒದಗಿದ ಕೈಪಿಡಿಯಾಗಿದೆ.

ಕೃಷ್ಣ ಹೇಗೆ ಸಂಕೀರ್ಣವೋ ಅವನು ಉಪದೇಶಿಸಿದ ಗೀತೆಯೂ ಅಷ್ಟೇ ಸಂಕೀರ್ಣ. ಇಡಿಯ ಗೀತೆಯಲ್ಲಿ ಏಕಸೂತ್ರತೆ ಇಲ್ಲ – ಎಂಬ ಕೊರತೆಯೊಂದು ನಮಗೆ ಕಾಣುವುದಾದರೂ ಈ ಕಾರಣದಿಂದಲೇ. ಗೀತೆಯ ಉಪದೇಶವೆಲ್ಲವೂ ಒಬ್ಬನೇ ವ್ಯಕ್ತಿಗೆ ಒಂದೇ ಸಂದರ್ಭಕ್ಕೆಂದು ಮಾಡಿದ ಉಪದೇಶವೂ ಅಲ್ಲ.

ಕುರುಕ್ಷೇತ್ರದ ಯುದ್ಧ ಎನ್ನುವುದು ಒಂದು ರೂಪಕ. ಜೀವನಸಂಗ್ರಾಮ ಎನ್ನುವುದು ಒಂದು ಬಾರಿ ಆರಂಭವಾಗಿ ಹದಿನೆಂಟು ದಿನಗಳಲ್ಲಿ ಮುಗಿಯುವಂಥದ್ದಲ್ಲವಷ್ಟೆ. ನಮ್ಮ ಜೀವನದುದ್ದಕ್ಕೂ ನಿರಂತರವಾಗಿ ಈ ಯುದ್ಧ ನಡೆಯುತ್ತಲೇ ಇರುತ್ತದೆಯಲ್ಲವೆ? ಹೀಗೆ ನಮ್ಮ ಬದುಕು ಹಗರಣವಾಗಿ ಮಾರ್ಪಟ್ಟಾಗ, ಕದನವಾಗಿ ಎದುರಾದಾಗ, ಬಿಕ್ಕಟ್ಟು ತಲೆದೋರಿದಾಗ ನಮ್ಮ ಕೈ ಹಿಡಿದು ಮುನ್ನಡೆಸಬಲ್ಲದ್ದೇ ಗೀತೆ.

ಕೃಷ್ಣ ಗೀತೆಯನ್ನು ಉಪದೇಶಿಸಿದ್ದು ಅರ್ಜುನನಿಗೆ. ಆದರೆ ಅರ್ಜುನ ಒಂದು ನೆಪವಷ್ಟೆ; ನಮ್ಮ ಜೀವನಸಾಗರದುದ್ದಕ್ಕೂ ಏಳುವ ಸಂಶಯಗಳು, ಆತಂಕಗಳು, ಅಂಜಿಕೆಗಳು ಎಂಬ ಅಲೆಗಳ ಪ್ರತಿನಿಧಿ ಅವನು. ಎಲ್ಲ ಮನುಷ್ಯರ ಸಹಜವಾದ ಬಯಕೆ ಎಂದರೆ ಜೀವನ ಚೆನ್ನಾಗಿರಬೇಕು; ಸುಖವಾಗಿರಬೇಕು ಎಂದೇ ಅಲ್ಲವೆ? ಆದರೆ ಈ ‘ಚೆನ್ನಾಗಿ’, ‘ಸುಖ’ವಾಗಿ ಎಂಬುದರ ಅರ್ಥವೇನು? ಅವು ಹೇಗಿರುತ್ತವೆ? ಹೇಳುವುದು ಕಷ್ಟ. 

ಭಗವದ್ಗೀತೆ ನಮ್ಮ ಬದುಕಿಗೆ ಬೇಕಾದ  ಚೆನ್ನಾದುದೂ ಸುಖವಾದುದೂ ಯಾವುದೆಂದು ಹೇಳುತ್ತದೆ. ಡಿವಿಜಿಯವರ ಮಾತುಗಳಿಲ್ಲಿ ಮನನೀಯವಾಗಿವೆ:

‘ಪ್ರತಿಯೊಬ್ಬ ಮನುಷ್ಯನಲ್ಲಿಯೂ ತಾನು ಚೆನ್ನಾಗಿ ಬದುಕಬೇಕು, ತನ್ನ ಬದುಕನ್ನು ಚೆನ್ನಾಗಿ ನಡಸಬೇಕು – ಎಂಬ ಆಶೆ ಸ್ವಾಭಾವಿಕವಾಗಿ ಇರುತ್ತದಲ್ಲವೆ? ನಮ್ಮ ಬದುಕಿನಲ್ಲಿ ಯಾವುದು ಚೆನ್ನ? ಯಾವುದು ಸೊಗಸು? ಯಾವುದು ಬೆಲೆಬಾಳತಕ್ಕದ್ದು? ಚೆನ್ನ ಎಂದರೆ ಏನು? ಬೆಲೆ ಗೊತ್ತುಮಾಡುವುದು ಹೇಗೆ? ಬದುಕನ್ನು ಚೆನ್ನ ಮಾಡುವುದು ಹೇಗೆ? ಇಂಥ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕೆಂದು ಯಾರಿಗೆ ಮನಸ್ಸುಂಟೋ ಅಂಥವರು ಅಕ್ಕರೆಯಿಂದ ಓದಿ ತಿಳಿದುಕೊಳ್ಳಬೇಕಾದ ಗ್ರಂಥ ಭಗವದ್ಗೀತೆ.’

ಭಗವದ್ಗೀತೆಯ ಬಗ್ಗೆ ಭಾಷ್ಯ–ವಿವರಣೆಗಳನ್ನು ಬರೆದವರಲ್ಲಿ ಹೆಚ್ಚಿನವರು ಸನ್ಯಾಸಿಗಳು, ಸಂತರು. ಹೀಗಾಗಿ ಗೀತೆ ಇರುವುದು ಸನ್ಯಾಸಿಗಳಿಗೆ, ವಿರಕ್ತರಿಗೆ, ನಿತ್ಯಜೀವನಕ್ಕೆ ಬೆನ್ನು ತಿರುಗಿಸಿದ ವಿರಕ್ತರಿಗೆ ಎಂಬಂಥ ಮನೋಧರ್ಮವೊಂದು ಕೆಲವರಲ್ಲಿ ಇದ್ದೀತು.

ಆದರೆ ಅದು ಯಾವುದೋ ಒಂದು ಪಂಗಡ, ಗುಂಪು, ಜಾತಿ, ವಯಸ್ಸು, ಲಿಂಗವನ್ನು ಉದ್ದೇಶಿಸಿ ಹೊರಟ ಗ್ರಂಥವಲ್ಲ. ಹೌದು, ಅದರಲ್ಲಿಯ ಕೆಲವೊಂದು ಮಾತುಗಳನ್ನು ಆ ಕೃತಿಯ ಐತಿಹಾಸಿಕ ಹಿನ್ನೆಲೆಯಲ್ಲಿಯೇ ವಿಮರ್ಶಿಸಬೇಕಾಗುತ್ತದೆ. ಹೀಗೆ ಇತಿಹಾಸದ ಹಂಗಿರದೆ ಎಲ್ಲ ಕಾಲಕ್ಕೂ ಸಲ್ಲುವ ಮಾತುಗಳೇ ಗೀತೆಯಲ್ಲಿ ಹೆಚ್ಚಿರುವುದು.

ಗೀತೆಯನ್ನು ಕುರಿತು ಆಳವಾಗಿ ಅಧ್ಯಯನ ಮಾಡಿದ್ದ ನಮ್ಮ ಕಾಲದವರೇ ಆದ ಸಾ. ಕೃ. ರಾಮಚಂದ್ರರಾಯರು ಗೀತೆಯನ್ನು ಕುರಿತಂತೆ ಆಡಿರುವ ಈ ಮಾತುಗಳು ಮನನೀಯವಾಗಿವೆ:

‘ಭಗವದ್ಗೀತೆಯಲ್ಲಿ ಏನಿದೆ? ಭಗವದ್ಗೀತೆಯನ್ನೊಮ್ಮೆ ಓದಿ ಮುಗಿಸಿದರೆ ಮನವರಿಕೆಯಾಗುವುದು ಇದು – ಚೆನ್ನಾಗಿ ಬದುಕಲು ಬೇಕಾದುದೆಲ್ಲ ಇಲ್ಲಿದೆ, ಎಂಬುದು. ಚೆನ್ನಾಗಿ ಬದುಕುವುದೆಂದರೆ ಏನು ಎಂಬುದೂ ತಿಳಿಯುತ್ತದೆ... ಬದುಕಿನ ಬವಣೆಗಳಿಗೆ ಮನಸ್ಸು ಮುದುಡಿಕೊಳ್ಳದೆ, ಗುಂಡಿಗೆ ಸೊರಗದೆ, ಮನುಷ್ಯ ಗೆಲುವಾಗಿರುವುದು ಹೇಗೆಂಬುದನ್ನು ತಿಳಿಸುವುದೇ ಗೀತೆಯ ಉದ್ದೇಶ... ಗೀತೆಯನ್ನು ಹೇಳಿದ ಕೃಷ್ಣ, ಕೇಳಿದ ಅರ್ಜುನ ಇಬ್ಬರೂ ಗೃಹಸ್ಥರೇ; ಗೃಹಸ್ಥರಾಗಿಯೇ ಉಳಿದವರು, ತೀರಿಕೊಂಡರು.

ಇಬ್ಬರೂ ಕ್ಷತ್ರಿಯರು... ಕೃಷ್ಣನ ಅಧ್ಯಾತ್ಮ ಉಪದೇಶ, ಅರ್ಜುನನ ಜಿಜ್ಞಾಸೆ ಎರಡೂ ಲೋಕವ್ಯವಸ್ಥೆಯಲ್ಲಿ ಸೋಜಿಗವಾದುದೇ. ಆದರೆ ಇಬ್ಬರೂ ದಿಟವಾದ ಅರ್ಥದಲ್ಲಿ ಮನುಷ್ಯರಾಗಿದ್ದುದರಿಂದ, ಮನುಷ್ಯಸಹಜವಾದ ಉದಾತ್ತ ನೆಲೆಯ ಸಂವಾದ ಅವರಿಬ್ಬರ ನಡುವೆ ನಡೆಯಿತು.

ಮನುಷ್ಯಮಾತ್ರದವರಿಗೆ ಪ್ರಸಕ್ತವಾದ ವಿಚಾರವಾಗಿ ನಡೆದದ್ದು ಅವರಿಬ್ಬರ ಮಾತುಕತೆ. ಮೇಲಾಗಿ, ಹೇಳುವವನಿಗೆ ತಾನು ಹೇಳಿದ್ದೇ ಸರಿಯೆಂಬ ಹಟವಿರಲಿಲ್ಲ; ಕೇಳುವವನು ತಾನು ತೋರಿದ ದಾರಿಯಲ್ಲೇ ನಡೆಯಬೇಕೆಂಬ ಆಗ್ರಹವಾಗಲಿ ಹೇಳಿದವನಿಗೆ ಇರಲಿಲ್ಲ. ಗ್ರಂಥ ಮುಗಿಯುವುದು – ‘‘ನಾನು ಹೇಳಿದುದನ್ನೆಲ್ಲ ಚೆನ್ನಾಗಿ ವಿಚಾರಮಾಡಿ ನೋಡು; ನಿನಗೆ ಸರಿಯೆಂದು ತೋರಿದ ರೀತಿಯಲ್ಲಿ ನಡೆದುಕೋ!’’ ಎಂಬ ಮಾತಿನಿಂದ.’

ಭಗವದ್ಗೀತೆಯಲ್ಲಿ ಕೃಷ್ಣನೇ ಕೊಟ್ಟಿರುವ ಮಾತು  – ‘ಯೋಗ–ಕ್ಷೇಮ’ಗಳನ್ನು ನಾನು ನೋಡಿಕೊಳ್ಳುತ್ತೇನೆ (ಯೋಗಕ್ಷೇಮಂ ವಹಾಮ್ಯಹಮ್‌). ‘ಯೋಗ’ ಎಂದರೆ ನಮ್ಮಲ್ಲಿ ಇಲ್ಲದಿರುವ, ಆದರೆ ನಮಗೆ ಬೇಕಾಗಿರುವುದನ್ನು ಪಡೆಯುವುದು; ‘ಕ್ಷೇಮ’ ಎಂದರೆ ಪಡೆದುಕೊಂಡದ್ದನ್ನು ಕಾಪಾಡಿಕೊಳ್ಳುವುದು. ಯೋಗ ಮತ್ತು ಕ್ಷೇಮ – ಎರಡಕ್ಕೂ ಬೇಕಾಗಿರುವುದೇ ಕುಶಲತೆ. ಗೀತೆ ಅಂಥ ಕುಶಲತೆಯನ್ನು ನಮಗೆ ಕಲಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT