ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಐಸಿ ಋಣಮುಕ್ತ

Last Updated 23 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

‘ಭಾರತೀಯ ರೇಷ್ಮೆಗಳ ಮಹಾರಾಣಿ’ ಎಂದೇ ಖ್ಯಾತವಾಗಿರುವ ಮೈಸೂರು ರೇಷ್ಮೆ ಸೀರೆಗಳ ಅಂದಕ್ಕೆ ಮನಸೋಲದ ಹೆಂಗಳೆಯರಿಲ್ಲ. ಜಾಗತಿಕ ಜವಳಿ ಉದ್ಯಮದಲ್ಲಿ ಅಪರೂಪದ ರೇಷ್ಮೆ ಸೀರೆಯ ಪರಂಪರೆಯನ್ನು ಉಳಿಸಿಕೊಂಡು ಬಂದಿರುವ ಕೀರ್ತಿ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದ್ದು (ಕೆಎಸ್‌ಐಸಿ). ಇಂಥ ಕೀರ್ತಿಯ ಹಿಂದಿರುವುದು ಕೆಎಸ್‌ಐಸಿಯ ಸಿಬ್ಬಂದಿ ತ್ಯಾಗ ಮತ್ತು ಪರಿಶ್ರಮ.

ದಶಕಗಳ ಕಾಲ ನಷ್ಟದಲ್ಲಿದ್ದ ಕೆಎಸ್ಐಸಿಗೆ ಇನ್ನೇನು ಅಂತಿಮ ಮೊಳೆ ಜಡಿಯಬೇಕೆನ್ನುವ ಸಮಯದಲ್ಲಿ ಶಕ್ತಿಮದ್ದು ಒದಗಿಸಿದ್ದು ನಿಗಮದ ಕಾರ್ಮಿಕರು. ಅದರ ಫಲವಾಗಿಯೇ  ಕನ್ನಡಿಗರ ಹೆಮ್ಮೆಯ ಕೆಎಸ್‌ಐಸಿ ಇಂದು ಸರ್ಕಾರದ ಸಾಲದಿಂದ  ಮುಕ್ತಗೊಂಡಿದೆ. ಸತತ ಆರು ವರ್ಷಗಳ ಕಾಲ ಅರ್ಧ ಸಂಬಳದಲ್ಲೇ ಜೀವನ ಸಾಗಿಸಿ, ಕೆಎಸ್‌ಐಸಿಗೆ ಮರುಜೀವ ನೀಡಿರುವ ಕಾರ್ಮಿಕರು, ಸರ್ಕಾರದಿಂದ ಪಡೆದಿದ್ದ ₹ 22 ಕೋಟಿ ಸಾಲವನ್ನು ತೀರಿಸಿ ಋಣ ಸಂದಾಯ ಮಾಡಿದ ತೃಪ್ತಿಯಲ್ಲಿದ್ದಾರೆ.

ಆಡಳಿತ ಮಂಡಳಿ ಮತ್ತು ಕಾರ್ಮಿಕ ವರ್ಗವೊಂದು ಮನಸು ಮಾಡಿದಲ್ಲಿ ನಷ್ಟಕ್ಕೀಡಾದ ಕಾರ್ಖಾನೆಯನ್ನು ಲಾಭದ ಹಳಿಗೆ ತರಬಹುದು ಎನ್ನುವುದಕ್ಕೆ ಕೆಎಸ್‌ಐಸಿಯೇ ಉದಾಹರಣೆಯಾಗಿದೆ.

ಇತಿಹಾಸ
ಆರಂಭದಲ್ಲಿ ರಾಜಮನೆತನಕ್ಕೆ ವಸ್ತ್ರ ಒದಗಿಸುವ ಸಲುವಾಗಿ ರೂಪುಗೊಂಡ ಮೈಸೂರು ರೇಷ್ಮೆ ಉದ್ಯಮಕ್ಕೆ ಸರ್ಕಾರಿ ಉದ್ದಿಮೆಯ ಸ್ವರೂಪ ನೀಡಿದ್ದು ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು.  ಒಡೆಯರ್ ಅವರ ದೂರದೃಷ್ಟಿಯ ಫಲವಾಗಿ 1912ರಲ್ಲಿ ಮೈಸೂರಿನಲ್ಲಿ ರೇಷ್ಮೆ ನೇಯ್ಗೆ ಕಾರ್ಖಾನೆ ಪ್ರಾರಂಭವಾಯಿತು.

1947ರಿಂದ 1980ರ ತನಕ ಮೈಸೂರು ರಾಜ್ಯ ಸರ್ಕಾರದ ಒಡೆತನದಲ್ಲಿದ್ದ ಕಾರ್ಖಾನೆ, 1980ರಲ್ಲಿ ಅಂದಿನ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ದೆಸೆಯಿಂದಾಗಿ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮವಾಗಿ  (ಕೆಎಸ್‌ಐಸಿ) ಮೈದೆಳೆಯಿತು.

ನಷ್ಟದ ಹಾದಿ
ನಿಗಮವಾಗಿ ರೂಪುಗೊಂಡರೂ ಅಷ್ಟಾಗಿ ಲಾಭದ ಹಾದಿ ಹಿಡಿಯಲಿಲ್ಲ. 90ರ ದಶಕದಲ್ಲಿ ಕಾಶ್ಮೀರವನ್ನೇ ಕೆಎಸ್‌ಐಸಿ ತನ್ನ ಪ್ರಮುಖ ಮಾರುಕಟ್ಟೆಯನ್ನಾಗಿಸಿಕೊಂಡಿತ್ತು. ಆದರೆ, ಕಾಶ್ಮೀರದ ರಾಜಕೀಯ ಪಲ್ಲಟ, ಚೀನಾ ರೇಷ್ಮೆಯ ಪ್ರವಾಹದಲ್ಲಿ  ಕೆಎಸ್‌ಐಸಿ ದಿನೇದಿನೇ ನಷ್ಟದ ಹಾದಿ ಹಿಡಿಯುವಂತಾಯಿತು.

ಸತತ ಹತ್ತು ವರ್ಷಗಳ ನಷ್ಟದ ನಂತರ ಸರ್ಕಾರ, ಕೆಎಸ್ಐಸಿಯ ಮೂರೂ ಕಾರ್ಖಾನೆಗಳನ್ನು ಮುಚ್ಚಲು ತೀರ್ಮಾನಿಸಿತ್ತು. ಆದರೆ, ಆ ಸಮಯದಲ್ಲಿ ನಿಗಮದ ಆಡಳಿತ ಮಂಡಳಿ, ಅಧಿಕಾರಿ ವರ್ಗ ಮತ್ತು ಸಿಬ್ಬಂದಿ ಅರ್ಧ ಸಂಬಳಕ್ಕೆ ದುಡಿಯುವ ಮಹತ್ವದ ತೀರ್ಮಾನ ಕೈಗೊಂಡರು.

ಆಗ ಚನ್ನಪಟ್ಟಣ, ಕನಕಪುರ ಕಾರ್ಖಾನೆಗಳನ್ನಷ್ಟೇ ಮುಚ್ಚಿ, ಮೈಸೂರಿನ ಮುಖ್ಯ ಕಾರ್ಖಾನೆಯನ್ನು ಉಳಿಸಿಕೊಳ್ಳಲಾಯಿತು. ಅಷ್ಟೇ ಅಲ್ಲ, ಈ ಕಾರ್ಖಾನೆಗೆ ಗುಣಮಟ್ಟದ ನೂಲು ಸರಬರಾಜು ಮಾಡುವ ಸಲುವಾಗಿ ತಿ. ನರಸೀಪುರದ  ನೂಲು ಕಾರ್ಖಾನೆಯನ್ನೂ ಉಳಿಸಿಕೊಳ್ಳಲಾಯಿತು.  ಮುಚ್ಚಿದ ಕಾರ್ಖಾನೆಗಳ 961 ಸಿಬ್ಬಂದಿಗೆ ಬಾಕಿ ಹಣ ಪಾವತಿಗೆ ನಿಗಮ ಸರ್ಕಾರದಿಂದ ₹ 22 ಕೋಟಿ ಸಾಲವನ್ನೂ ಪಡೆಯಿತು.

1982ರಿಂದ 2003ರ ತನಕ ನಷ್ಟಕ್ಕೆ ಮುಖ್ಯ ಕಾರಣವಾಗಿದ್ದು ಡೀಲರ್ಸ್‌ಗಳು ಎನ್ನುತ್ತಾರೆ ನಿಗಮದ ಪ್ರಧಾನ ವ್ಯವಸ್ಥಾಪಕರು. ಆಗ ನಿಗಮದಿಂದಲೇ 55 ಅಧಿಕೃತ ಡೀಲರ್ಸ್‌ಗಳನ್ನು ನೇಮಕ ಮಾಡಲಾಗಿತ್ತು. ಆದರೆ, ಅವರು ನಮ್ಮ ಬ್ರ್ಯಾಂಡ್‌ ಅನ್ನು ದುರ್ಬಳಕೆ ಮಾಡಿಕೊಂಡರು.

ಕಳಪೆ ಗುಣಮಟ್ಟದ ರೇಷ್ಮೆ ಸೀರೆಗಳಿಗೆ ಮೈಸೂರು ಸಿಲ್ಕ್‌ನ ಲೇಬಲ್‌ ಹಚ್ಚಿದ್ದರಿಂದ ಗ್ರಾಹಕರು ಮೋಸಕ್ಕೆ ಒಳಗಾದರು. ಇದರಿಂದ ಕೆಎಸ್ಐಸಿಗೆ ನಷ್ಟವುಂಟಾಗತೊಡಗಿತು.  ಇದರಿಂದ ಎಚ್ಚೆತ್ತ ನಿಗಮ 2003ರಲ್ಲಿ ಎಲ್ಲಾ 55 ಡೀಲರ್ಸ್‌ಗಳನ್ನು ತೆಗೆದು ಹಾಕಿತು ಎನ್ನುತ್ತಾರೆ ಅವರು.

ಅರ್ಧ ಸಂಬಳ ತಂದ ಲಾಭ
ನಿಗಮದ ಉಳಿವಿಗಾಗಿ ಪಣ ತೊಟ್ಟಿದ್ದ ಕಾರ್ಮಿಕರು ಸತತ ಆರು  ವರ್ಷಗಳ ಕಾಲ ಅರ್ಧ ಸಂಬಳವನ್ನಷ್ಟೇ ಪಡೆದರು. ನಷ್ಟದ ಹಾದಿಯನ್ನು ಪತ್ತೆಹಚ್ಚಿ, ಗುಣಮಟ್ಟದ ರೇಷ್ಮೆಗೆ ಆದ್ಯತೆ ನೀಡಿ, ತಯಾರಿಕಾ ವೆಚ್ಚವನ್ನು ನಿಯಂತ್ರಣಕ್ಕೆ ತರಲಾಯಿತು. ತಯಾರಿಕೆಯಲ್ಲಿ ಸುಧಾರಣೆ ತರಲು ಕಾರ್ಮಿಕರಿಗೆ ಉಲ್ಲಾಸದಾಯಕ ತರಬೇತಿ, ಹೊಸ ಮಗ್ಗಗಳ ಸ್ಥಾಪನೆ, ಗ್ರಾಹಕ ಸ್ನೇಹಿ ವರ್ತನೆ, ವಸ್ತ್ರವಿನ್ಯಾಸದಲ್ಲಿ ನಾವೀನ್ಯತೆ, ಮಾರುಕಟ್ಟೆಯ ಅಗತ್ಯಕ್ಕನುಸಾರವಾಗಿ ತಯಾರಿಕೆ...

ಹೀಗೆ ಆಡಳಿತ ಮಂಡಳಿ, ಅಧಿಕಾರಿ ವರ್ಗ ಮತ್ತು ಕಾರ್ಮಿಕರ ತ್ಯಾಗ ಮತ್ತು ಪರಿಶ್ರಮದಿಂದ ಕೆಎಸ್‌ಐಸಿ ಕೆಲವೇ ವರ್ಷಗಳಲ್ಲಿ ಲಾಭದ ಹಳಿಗೆ ಮರಳಿತು ಎನ್ನುತ್ತಾರೆ ಕೆಎಸ್‌ಐಸಿಯ ಅಧ್ಯಕ್ಷ ಡಿ. ಬಸವರಾಜ.

ಪಾರದರ್ಶಕ ಆಡಳಿತ, ತಾಂತ್ರಿಕ ಉನ್ನತೀಕರಣ, ಹೊಸ ವಿನ್ಯಾಸಗಳ ಆಸಕ್ತಿ, ಮಾರ್ಕೆಟಿಂಗ್, ಅಂತರ ರಾಷ್ಟ್ರೀಯ ಪ್ರದರ್ಶನ ಹೀಗೆ ಅನೇಕ ಕಾರಣಗಳಿಂದ ನಿಗಮವು ಈಗ ಅಭಿವೃದ್ಧಿಯ ಪಥಕ್ಕೆ ಒಗ್ಗಿಕೊಂಡಿದೆ.

ಸಿಬ್ಬಂದಿ ನಿವೃತ್ತಿ ನಂತರ ಹೊಸ ನೇಮಕಾತಿ ಆಗಿಲ್ಲ. ಆದರೆ, ಈಗ ಸಿಬ್ಬಂದಿ ಕೊರತೆ ಆಗಿದೆ. 1981ರಲ್ಲೇ ನೇಮಕಾತಿ ನಿಲ್ಲಿಸಲಾಗಿದೆ. ಆಡಳಿತದಲ್ಲಿ ಗುತ್ತಿಗೆ ಆಧಾರಿತದಲ್ಲಿ ಸಿಬ್ಬಂದಿ ನೇಮಕಾತಿ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಇದಕ್ಕೆ ಸರ್ಕಾರದಿಂದ ಶೀಘ್ರದಲ್ಲೇ  ಹಸಿರು ನಿಶಾನೆ ದೊರೆಯುವ ನಿರೀಕ್ಷೆ ಇದೆ ಎಂದೂ ಅವರು ಆಶಾಭಾವ ವ್ಯಕ್ತಪಡಿಸುತ್ತಾರೆ.

ನಿಗಮದಲ್ಲಿ ಇರುವ 980ರಲ್ಲಿ 590 ಕಾರ್ಮಿಕರು ಮಾತ್ರ ಕಾಯಂ ಉದ್ಯೋಗ ಹೊಂದಿದ್ದಾರೆ. ಉಳಿದವರು ಅರೆಗುತ್ತಿಗೆಯಲ್ಲಿದ್ದಾರೆ ಎಂದು ಮಾಹಿತಿ ನೀಡುತ್ತಾರೆ ಅವರು. ಶಿಡ್ಲಘಟ್ಟ ಮತ್ತು ರಾಮನಗರದ ರೈತರಿಂದಲೇ ನೇರವಾಗಿ ಆನ್‌ಲೈನ್ ರೇಷ್ಮೆಗೂಡುಗಳನ್ನು ಖರೀದಿಸಲಾಗುತ್ತಿದೆ. ಮಾರುಕಟ್ಟೆ ದರಕ್ಕೆ ಸ್ಪರ್ಧಾತ್ಮಕ ದರವನ್ನು ರೇಷ್ಮೆ ಬೆಳೆಗಾರರಿಗೆ ನೀಡಲಾಗುತ್ತಿದೆ. ಹೀಗಾಗಿ, ಕೆಎಸ್‌ಐಸಿ ರೇಷ್ಮೆ ಗೂಡು ಖರೀದಿಸುತ್ತದೆ ಎಂದರೆ ಅಲ್ಲಿನ ರೈತರು ಸಂಭ್ರಮಿಸುತ್ತಾರೆ ಎನ್ನುತ್ತಾರೆ ಬಸವರಾಜ.

ಗುಣಮಟ್ಟಕ್ಕೆ ಆದ್ಯತೆ
ಮೈಸೂರು ಸಿಲ್ಕ್ ಜಿಯೋಗ್ರಾಫಿಕಲ್‌ ಇಂಡಿಕೇಷನ್ (ಜಿಐ–11) ಆಗಿ ನೋಂದಾಯಿಸಲ್ಪಟ್ಟಿದೆ. ಇದರಿಂದ ವರ್ತಕರು, ಮರ್ಚಂಟ್ಸ್‌ ಅಥವಾ ನೋಂದಾಯಿಸಲ್ಪಡದ ತಯಾರಕರು ಮೈಸೂರು ಸಿಲ್ಕ್ ಬ್ರಾಂಡ್ ಹೆಸರು ಬಳಸುವುದನ್ನು ನಿಷೇಧಿಸಲಾಗಿದೆ.

ಕೆಎಸ್‌ಐಸಿ ನೇರವಾಗಿ ಗ್ರಾಹಕರೊಂದಿಗೆ ವ್ಯವಹಾರ ನಡೆಸುತ್ತದೆ. ಹೀಗಾಗಿ, ಪ್ರತಿ ಸೀರೆಗೂ ಎಂಬ್ರಾಯ್ಡರಿ ಕೋಡ್ ನಂಬರ್ ಹಾಕಲಾಗಿರುತ್ತದೆ. ಇದರಿಂದ ಅಸಲಿ ಮೈಸೂರು ಸಿಲ್ಕ್ ಸೀರೆಯನ್ನು ಗುರುತಿಸಬಹುದು.

ಕೆಎಸ್‌ಐಸಿಯು ಕರ್ನಾಟಕ ಹಳೆ ಮೈಸೂರು ಪ್ರದೇಶಗಳಲ್ಲಿನ ಅಪರೂಪದ ರೇಷ್ಮೆ ಹುಳಗಳ ಮೊಟ್ಟೆಗಳಿಂದ ತೆಗೆದ ಕಚ್ಚಾ ನೂಲನ್ನು ಮಾತ್ರ ಬಳಸುತ್ತದೆ. ಇದು ಗುಣಮಟ್ಟಕ್ಕೆ ಸಹಕಾರಿ.

ಅಧಿಕೃತ ಮಳಿಗೆಗಳು ಹೊರತುಪಡಿಸಿದರೆ ಬೇರೆಲ್ಲೂ ಮಾರಾಟ ಮಾಡುವುದಿಲ್ಲ. ಕೆಎಸ್‌ಐಸಿಯೇ ಎಲ್ಲಾ ಜಿಲ್ಲೆಗಳಲ್ಲೂ ಮಾರಾಟ ಮೇಳಗಳನ್ನು ಆಯೋಜಿಸುತ್ತದೆ. ಹೀಗೆ ಪರಂಪರೆಯೊಂದಿಗೆ ಆಧುನೀಕರಣ, ತಾಂತ್ರಿಕ ನೈಪುಣ್ಯ ಮತ್ತು ಕಾರ್ಮಿಕರ ತ್ಯಾಗದ ಫಲವಾಗಿ ಕೆಎಸ್ಐಸಿ ಇಂದು ಮತ್ತೆ ತನ್ನ ಗತವೈಭವ ಮೆರೆಯುವಂತಾಗಿದೆ.

ಮುಂದಿನ ಯೋಜನೆಗಳು
* ₹ 6ಕೋಟಿ ವೆಚ್ಚದಲ್ಲಿ ಚನ್ನಪಟ್ಟಣ ಮೃದು ರೇಷ್ಮೆ ನೇಯ್ಗೆ ಕಾರ್ಖಾನೆ ಪುನಶ್ಚೇತನ
* ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಮಳಿಗೆಗಳನ್ನು ಆರಂಭಿಸಲು ಚಿಂತನೆ ನಡೆದಿದೆ.
* ಹೊರಗುತ್ತಿಗೆ ಕಾರ್ಮಿಕರ ನೇಮಕ
* ಹೊಸ ಯಂತ್ರೋಪಕರಣ ಖರೀದಿ
* ಹೊಸ ಆಧುನಿಕ ವಿನ್ಯಾಸಗಳ ಪ್ರಯೋಗ

*
ಕೆಎಸ್‌ಐಸಿ ಕಾರ್ಖಾನೆ
: ಮೈಸೂರು ಮತ್ತು  ತೀ.ನರಸೀಪುರ
ರೇಷ್ಮೆ ಗೂಡು ಖರೀದಿ: ಶಿಡ್ಲಘಟ್ಟ, ರಾಮನಗರ,
ಅಂಗಡಿಗಳು: ಬೆಂಗಳೂರು (8),  ಮೈಸೂರು (6), ಮೈಸೂರು–ಬೆಂಗಳೂರು  ಕಾರಿಡಾರ್, ಚನ್ನಪಟ್ಟಣ  ಹೆದ್ದಾರಿ, ದಾವಣಗೆರೆ, ಹೈದರಾಬಾದ್, ಚೆನ್ನೈ
ಆನ್‌ಲೈನ್‌ನಲ್ಲೂ ಸೀರೆಗಳನ್ನು ಖರೀದಿಸಬಹುದು. 
ವೆಬ್‌ಸೈಟ್‌ ವಿಳಾಸ: www.ksicsi*k.com
*
ಬಾನಲ್ಲೂ–ಭುವಿಯಲ್ಲೂ ಮೈಸೂರು ಸಿಲ್ಕ್ ಖದರು!

ಏರ್ ಇಂಡಿಯಾ ಜತೆಗೆ ನಿಗಮ ಒಪ್ಪಂದ ಮಾಡಿಕೊಂಡು ಹತ್ತು ಸಾವಿರ ಸೀರೆಗಳನ್ನು ಮಾರಾಟ ಮಾಡಲಾಗಿದೆ. 6 ಸಾವಿರ ಗಗನ ಸಖಿಯರು ದಿನನಿತ್ಯವೂ ಮೈಸೂರು ಸಿಲ್ಕ್‌ ಸೀರೆಯನ್ನೇ ಧರಿಸುತ್ತಾರೆ. ಏರ್ ಇಂಡಿಯಾದ ಇತರ 4 ಸಾವಿರ ಸಿಬ್ಬಂದಿಯೂ ಸಮವಸ್ತ್ರವಾಗಿ ಮೈಸೂರು ಸಿಲ್ಕ್‌ ಸೀರೆಯನ್ನೇ ಧರಿಸುತ್ತಾರೆ.

ಏರ್ ಇಂಡಿಯಾದಿಂದ ಆರೂವರೆ ಕೋಟಿ ರೂಪಾಯಿಗಳಷ್ಟು ವಹಿವಾಟು ನಡೆದಿದೆ. ಕೆಎಸ್‌ಐಸಿ ಲಾಭದ ಹಣದಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ₹ 90ಲಕ್ಷ ದೇಣಿಗೆ ಹಾಗೂ ಸರ್ಕಾರಕ್ಕೆ ₹ 6.5 ಕೋಟಿ ಲಾಭಾಂಶ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT