ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾರಿ ಮಾಲೀಕರ ನೆರವಿಗೆ ಬ್ಲ್ಯಾಕ್‌ಬಕ್‌ ಆ್ಯಪ್‌ 

Last Updated 23 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಂತೆಯೇ, ಆ್ಯಪ್‌ಗಳ ಆವಿಷ್ಕಾರ, ಬಳಕೆಯೂ ಹೆಚ್ಚುತ್ತಿದೆ. ಇದರಿಂದ ಜನರ ಜೀವನ ಶೈಲಿಯಲ್ಲಿಯೂ ಬದಲಾವಣೆಯಾಗುತ್ತಿದೆ.

ಮಹಾನಗರಗಳ ಜನಜೀವನ ಆ್ಯಪ್‌  ಆಧಾರಿತ ಸೇವೆಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ.  ಆಟೊ, ಟ್ಯಾಕ್ಸಿ ಬುಕ್‌ ಮಾಡುವುದರಿಂದ ಹಿಡಿದು, ಆಹಾರ, ಬಟ್ಟೆ ಹೀಗೆ ದಿನನಿತ್ಯದ ಅಗತ್ಯ ವಸ್ತುಗಳನ್ನು ಆ್ಯಪ್‌ ಮೂಲಕವೇ ಮನೆಬಾಗಿಲಿಗೆ ತರಿಸಿಕೊಳ್ಳುವ ಜಾಯಮಾನಕ್ಕೆ  ಒಗ್ಗಿಕೊಂಡಿದೆ.

ಬೆಂಗಳೂರು ಮೂಲದ ಬ್ಲ್ಯಾಕ್‌ಬಕ್‌  ಸ್ಟಾರ್ಟ್‌ಅಪ್‌ ಕಂಪೆನಿಯು ಲಾಜಿಸ್ಟಿಕ್‌ ವಲಯದಲ್ಲಿ  (ಸರಕು ಸಾಗಣೆ)   ಲಾರಿ ಮಾಲೀಕರಿಗೆ ಅನುಕೂಲವಾಗುವಂತಹ ಆ್ಯಪ್‌ ಅಭಿವೃದ್ಧಿಪಡಿಸಿದೆ.

ಭಾರತದಲ್ಲಿ ಟ್ರಕ್‌ ಸೇವೆಗಳ ಉದ್ಯಮವು ಅಸಂಘಟಿತವಾಗಿದೆ. ಹೀಗಾಗಿ, ಸರಕು ಸಾಗಣೆ ರವಾನೆಗೆ ಮಧ್ಯವರ್ತಿಗಳನ್ನು ಅವಲಂಬಿಸಬೇಕಾಗಿದೆ. ಇಂಧನ ಬೆಲೆ ಹೆಚ್ಚಿರುವುದು ಮತ್ತು ಕಾರ್ಯಾಚರಣೆ ನಡೆಸುವ ಮಾರ್ಗಗಳ ಮೇಲೆ ನಿಯಂತ್ರಣ ಇಲ್ಲದೇ ಇರುವುದರಿಂದ ಸಮಸ್ಯೆ ಎದುರಿಸುವಂತಾಗಿದೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿ  ಬ್ಲ್ಯಾಕ್‌ಬಕ್‌ ಕೆಲಸ ಮಾಡುತ್ತದೆ.

ವರದಿಗಳ ಪ್ರಕಾರ, ಭಾರತದ ಸರಕು ಸಾಗಣೆ ಉದ್ಯಮವು 2020ರ ವೇಳೆಗೆ ₹2.01 ಲಕ್ಷ ಕೋಟಿ ಮೊತ್ತದ ವಹಿವಾಟು ನಡೆಸಲಿದೆ. ಶೇಕಡಾವಾರು ಲೆಕ್ಕದಲ್ಲಿ ಹೇಳುವುದಾದರೆ ಶೇ 12.17ರಷ್ಟು ಪ್ರಗತಿ ಕಾಣಲಿದೆ.

ಅನುಕೂಲಗಳೇನು
ಗೂಗಲ್‌ ಪ್ಲೇ ಸ್ಟೋರ್‌ನಿಂದ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಆ್ಯಪ್‌ಗೆ ಲಾಗಿನ್‌ ಆಗುವ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ವಿಶ್ವಾಸಾರ್ಹತೆ ಕಾಯ್ದುಕೊಳ್ಳುವ ದೃಷ್ಟಿಯಿಂದ ನೋಂದಣಿ ಮಾಡಿಕೊಳ್ಳುವವರ ಮಾಹಿತಿಯನ್ನು (ಕೆವೈಸಿ) ಪಡೆಯಲಾಗುತ್ತದೆ.

ಆ್ಯಪ್‌ ಮೂಲಕ ಕಾರ್ಪೊರೇಟ್‌ ಕಂಪೆನಿಗಳು, ಮಧ್ಯಮ ಮತ್ತು ಸಣ್ಣ ಪ್ರಮಾಣದ ಉದ್ದಿಮೆಗಳಿಂದ ಸರಕು ಸಾಗಣೆಯ ಆರ್ಡರ್‌ ಪಡೆಯಬಹುದು. ಕೇವಲ ಒಂದು ಲಾರಿ ಹೊಂದಿರುವ ಮಾಲೀಕರಿಂದ ಹಿಡಿದು 300 ರಿಂದ 400 ಲಾರಿ ಹೊಂದಿರುವವರೂ ಈ ಆ್ಯಪ್‌ ಬಳಸಬಹುದು.

ಆ್ಯಪ್ ಮೂಲಕವೇ ಹೊಸ ಆರ್ಡರ್‌ಗಳನ್ನು ಪಡೆಯಬಹುದು. ಸ್ಪರ್ಧಾತ್ಮಕ ದರದಲ್ಲಿ ಬುಕಿಂಗ್‌ಗೆ ಅವಕಾಶವಿದೆ. ನಗದು ರಹಿತ ವಹಿವಾಟಿಗೆ ಉತ್ತೇಜನ. ಆ್ಯಪ್‌ ಮೂಲಕವೇ ಪಾವತಿಗೆ ಅವಕಾಶ. ನಗರಗಳ ಮಧ್ಯೆ ಸರಕು ಮತ್ತು ಲಾರಿಗಳಿಗೆ ಇರುವ ಬೇಡಿಕೆ ಮತ್ತು ಪೂರೈಕೆಯ ಬಗ್ಗೆ ತಕ್ಷಣದ ಮಾಹಿತಿ ನೀಡುತ್ತದೆ.

ಸ್ಥಳೀಯ ಹೋಟೆಲ್‌ಗಳೊಂದಿಗೆ ಒಪ್ಪಂದ. ಸಬ್ಸಿಡಿ ದರದಲ್ಲಿ ಚಾಲಕರಿಗೆ ಆಹಾರ ವಿತರಣೆ. ಆ್ಯಪ್‌ ಬಳಸುವವರು ಇಂಡಿಯನ್‌ ಆಯಿಲ್‌ ಮತ್ತು ಭಾರತ್‌ ಪೆಟ್ರೋಲಿಯಂ  ಬಂಕ್‌ಗಳಲ್ಲಿ ರಿಯಾಯ್ತಿ ದರದಲ್ಲಿ ಇಂಧನ ಪಡೆಯಬಹುದಾಗಿದೆ.  ಖಾಸಗಿ ವಲಯದ ಬ್ಯಾಂಕ್‌ಗಳು ಹಣಕಾಸಿನ ನೆರವನ್ನೂ ನೀಡುತ್ತವೆ.

ಲಾರಿ ಚಾಲನಾ ಸ್ಥಿತಿಯಲ್ಲಿದೆಯೇ ಎನ್ನುವುದನ್ನು ಪರಿಶೀಲಿಸಬಹುದು. ಅಲ್ಲದೆ, ಲಾರಿ ಯಾವ ದಿಕ್ಕಿನಲ್ಲಿ ಚಲಿಸುತ್ತಿದೆ. ಯಾವ ದಿನ ಆರ್ಡರ್‌ ವಿತರಿಸಲಿದೆ ಎನ್ನುವ ಎಲ್ಲಾ ಮಾಹಿತಿಗಳನ್ನೂ  ಮಾಲೀಕರು ಆ್ಯಪ್‌ ಮೂಲಕವೇ ಪಡೆದುಕೊಳ್ಳಬಹುದು. ಜಿಪಿಎಸ್‌ ಆಧಾರಿತ ನಿರ್ವಹಣೆಯಲ್ಲದೆ, ಆ್ಯಪ್ ಹೊಂದಿರುವ ಎಲ್ಲಾ ಲಾರಿಗಳ ಜತೆ ಗ್ರಾಹಕರು ಸಂಪರ್ಕದಲ್ಲಿರಬಹುದು. ಬಳಕೆದಾರರು ತಮ್ಮ ಸರಕುಗಳಿಗೆ ವಿಮೆ ಖರೀದಿಸುವ ಆಯ್ಕೆಯನ್ನೂ ಈ ಆ್ಯಪ್‌ ಒದಗಿಸುತ್ತದೆ.

ಹಿಂದೂಸ್ತಾನ್‌ ಯೂನಿಲಿವರ್‌, ಜ್ಯೋತಿ ಲಾಬೊರೇಟರೀಸ್‌, ಕೋಕಕೋಲಾ, ಅಮೂಲ್‌, ಏಷ್ಯನ್‌ ಪೈಂಟ್ಸ್‌, ಐಟಿಸಿ, ಬ್ರಿಟಾನಿಯಾ ಸೇರಿದಂತೆ ಮುಂತಾದ ಕಂಪೆನಿಗಳು ಈ ಸೇವೆಯನ್ನು ಬಳಸಿಕೊಳ್ಳುತ್ತಿವೆ.

2015ರ ಏಪ್ರಿಲ್‌ನಲ್ಲಿ ಈ ಕಂಪೆನಿ ಸ್ಥಾಪನೆಯಾಗಿದ್ದು, ಜುಲೈನಿಂದ ಕಾರ್ಯಾಚರಣೆ ಆರಂಭಿಸಿದೆ. ಖರಗ್​ಪುರ್​ ಐಐಟಿಯಲ್ಲಿ ಪದವಿ ಪಡೆದಿರುವ ರಾಜೇಶ್, ಐಟಿಸಿಯಲ್ಲಿ ಕೆಲಸ ಮಾಡುತ್ತಿದ್ದರು. ಹೊಸ ಉದ್ಯಮ ಸ್ಥಾಪಿಸುವ ಉದ್ದೇಶದಿಂದ ಕೆಲಸಕ್ಕೆ ರಾಜೀನಾಮೆ ನೀಡಿದರು.

ಸ್ಟಾರ್ಟ್​ಅಪ್​​ ಅಭಿವೃದ್ಧಿಗೊಳಿಸುವ ಬಗ್ಗೆ ಲಾಜಿಸ್ಟಿಕ್ ಉದ್ಯಮದಲ್ಲಿ ಸುಮಾರು 17 ವರ್ಷ ಅನುಭವ ಹೊಂದಿದ್ದ ರಾಮ ಸುಬ್ರಮಣಿಯಂ ಅವರ ಜತೆ ಚರ್ಚೆ ನಡೆಸಿದರು. ಮತ್ತೊಬ್ಬ ಗೆಳೆಯ ಚಾಣಕ್ಯ ಅವರನ್ನೂ ಸೇರಿಸಿಕೊಂಡು ಬ್ಲ್ಯಾಕ್‌ಬಕ್‌ ಆರಂಭಿಸಿದರು.

ಫ್ಲಿಪ್‌ಕಾರ್ಟ್‌, ಟೈಗರ್‌ ಗ್ಲೋಬಲ್‌, ಅಪೋಲೆಟ್‌, ಡಿಎಸ್‌ಟಿ ಗ್ಲೋಬಲ್‌ ಸೇರಿದಂತೆ ಹಲವು ಕಂಪೆನಿಗಳು ಹೂಡಿಕೆ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT