ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿವರ್ತನೆಯೊಂದಿಗೆ ಪ್ರವಹಿಸುವುದೇ ಜೀವನನದಿ

Last Updated 23 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಪ್ರಸ್ತುತ ದಿನಗಳಲ್ಲಿ ಹಿಂದೆಂದಿಗಿಂತಲೂ ಪೀಳಿಗೆ ಅಂತರದಿಂದಾಗಿ ಹಲವಾರು ಸಮಸ್ಯೆಗಳು ತಲೆದೋರುತ್ತಿರುವುದು ಸಾಮಾನ್ಯವಾಗಿದೆ. ಬಹುತೇಕ ಕುಟುಂಬಗಳಲ್ಲಿ  ತಲೆಮಾರಿನಿಂದ ತಲೆಮಾರಿಗೆ ಉಂಟಾಗುವ ಬದಲಾವಣೆಗಳನ್ನು ಗಮನಿಸದೆ,  ಹಿರಿಯರು ತಮ್ಮ ಬದುಕಿನ ಗತವೈಭವವನ್ನು ಮೆಲುಕು ಹಾಕುತ್ತಿರುತ್ತಾರೆ.

ಈ  ಪ್ರವೃತಿಯ  ಕಾರಣದಿಂದಾಗಿ ಹಿರಿಯರ ಮತ್ತು ಕಿರಿಯರ ನಡುವೆ ಬಹಳಷ್ಟು ಗೊಂದಲ–ಅಂತರಗಳು ಸೃಷ್ಟಿಯಾಗುತ್ತಿವೆ. ನಮ್ಮ ಮನಸ್ಸಿಗೆ ಒಪ್ಪಿದ ತೀರ್ಮಾನಗಳು ಯಾವಾಗಲೂ ನಮಗೆ ಪ್ರೀತಿಪಾತ್ರವಾಗಿರುವುದು ಸಹಜವೇ ಆಗಿದೆ. ನಾವು ಮೆಚ್ಚಿದ ಸಂಗತಿಗಳೇ ಸತ್ಯವಾಗಿಯೂ, ಉಳಿದೆಲ್ಲ ವಿಚಾರಗಳು ಅರ್ಥವಿಲ್ಲದವೂ ಅಸತ್ಯವಾಗಿಯೂ ತೋರುತ್ತವೆ. ನಾವು ಮೆಚ್ಚಿಕೊಂಡ, ಅಥವಾ ನಮ್ಮನ್ನು ಪ್ರಭಾವಿಸಿದ ತೀರ್ಮಾನಗಳನ್ನು ಉದ್ವೇಗಭಾವದಿಂದ ವ್ಯಾಮೋಹಿಸುತ್ತೇವೆ.

ಓಬಿರಾಯನ ಕಾಲದ ನಂಬಿಕೆಗಳಲ್ಲಿಯೇ ಬಂಧಿತರಾಗಿಬಿಡುತ್ತೇವೆ. ಇದರಿಂದಾಗಿ ವರ್ತಮಾನದ ಆರ್ತನಾದ ನಮಗೆ ನೋವು, ಹತಾಶೆ, ಭಯ, ಆತಂಕಗಳನ್ನು ತಂದಿತ್ತು ಬದುಕಿನ ವಿಶಾಲತೆಯನ್ನೂ ವಾಸ್ತವಿಕತೆಯ ಸಂತಸವನ್ನೂ ಕಿರಿದುಗೊಳಿಸುತ್ತವೆ.

ಝೆನ್‌ಗುರುಗಳೊಬ್ಬರು ತಮ್ಮ ಆಶ್ರಮದಲ್ಲಿ  ಮುದ್ದಾದ ಬೆಕ್ಕೊಂದನ್ನು ಅತ್ಯಂತ ಪ್ರೀತಿಯಿಂದ ಸಾಕಿದ್ದರು. ಬೆಕ್ಕು ಅತ್ತಿಂದಿತ್ತ ಸುತ್ತಾಡುತ್ತಲೇ ಎಲ್ಲರ ಪ್ರೀತಿಗೆ ಪಾತ್ರವಾಗಿತ್ತು. ಆದರೆ ಗುರುಗಳು ಪ್ರತಿದಿನ ಸತ್ಸಂಗ ನಡೆದಿರುವಾಗ ಅದು ಎಲ್ಲಿಬೇಕೆಂದರಲ್ಲಿ ಓಡಾಡುತ್ತ ಎಲ್ಲರ ಗಮನ ತನ್ನೆಡೆಗೆ ಸೆಳೆದು ಏಕಾಗ್ರತೆಗೆ ಭಂಗ ತರುತ್ತಿತ್ತು. ಇದರ ಕಾಟಕ್ಕೆ ಬೇಸತ್ತು ಗುರುಗಳು ಪ್ರತಿದಿನ ಸತ್ಸಂಗ ನಡೆಯುವಾಗ ಬೆಕ್ಕನ್ನು ಒಂದೆಡೆ ಕಟ್ಟಿ ಹಾಕಲು ಹೇಳಿದರು.

ಅದರಂತೆಯೇ ಪ್ರತಿದಿನ ಸತ್ಸಂಗ ನಡೆಯುವ ಸಂದರ್ಭದಲ್ಲಿ ಬೆಕ್ಕನ್ನು ಕಟ್ಟಿಹಾಕುವುದು ಸಾಮಾನ್ಯವಾಗಿತ್ತು. ಕೆಲವು ವರ್ಷಗಳು ಗತಿಸಿದ ನಂತರ ಆ ಝೆನ್‌ಗುರುಗಳು ತೀರಿಹೋದರು. ಅವರ ಶಿಷ್ಯರೊಬ್ಬರು ಸತ್ಸಂಗ ಮುಂದುವರೆಸಿಕೊಂಡು ಹೋಗುತ್ತಿದ್ದರು. ಆಗಲೂ ಬೆಕ್ಕನ್ನು ಕಟ್ಟಿ ಹಾಕುವುದು ಪದ್ಧತಿಯಾಯಿತು.

ಕೆಲವು ದಿನಗಳ ನಂತರ ಬೆಕ್ಕು ಕೂಡ ಸತ್ತುಹೋಯಿತು. ಆಗ ಶಿಷ್ಯರು ಮತ್ತೊಂದು ಬೆಕ್ಕನ್ನು ತಂದು ಸಾಕಿ, ಸತ್ಸಂಗ ನಡೆಯುವಾಗ ಅದನ್ನು ಕಟ್ಟಿಹಾಕುವ ಪದ್ಧತಿಯನ್ನು ಮುಂದುವರೆಸಿದರು.

ಹೀಗೆ ನಾವು ಕೂಡ ಅನೇಕ ಬಾರಿ ಬದುಕಿನಲ್ಲಿ ವಾಸ್ತವಿಕತೆಯ ಅರಿವಿಲ್ಲದೆ, ಹಳೆಯದೆಲ್ಲ ಹೊನ್ನು ಎಂಬ ಭ್ರಾಮಕತೆಯಲ್ಲಿ ಪ್ರಾಚೀನ ಭಾವನೆಗಳ ಮೂಟೆಗಳನ್ನು ಹೊತ್ತು ತರುತ್ತೇವೆ. ಇದು ಪ್ರಗತಿಗೆ ಮಾರಕವಾಗಬಲ್ಲದು; ಇದಕ್ಕೆ ಹೊರತಾಗಿ ಬದುಕು ನಿರಂತರವಾಗಿ ಪರಿವರ್ತನೆಗೆ ಒಳಪಡುತ್ತಲೇ ಸಾಗುತ್ತದೆ ಎಂಬ ಸತ್ಯದ ಅರಿವು ನಮಗಾಗಬೇಕಿದೆ.

ಪೊಸರಸಂ ಬೇರಿಗನುದಿನಮೊದವಿ ಧರೆಯಿಂದ I
ಸಸಿಗೆ ಹೂತಳಿರ ತಲೆಯಲಿ ಮುಡಿಸುವಂತೆ II
ಹೊಸ ಸೃಷ್ಟಿಸತ್ತ್ವಮೆತ್ತಣಿನೊ ಬರುತನುದಿನಂ I
ಪೊಸತಾಗಿಪುದು ಜಗವ – ಮಂಕುತಿಮ್ಮ II

ಡಿ.ವಿ.ಜಿ. ಅವರೆನ್ನುವಂತೆ, ಹೊಸದೊಂದು ರಸಭೂಮಿಯಿಂದ ಬೇರಿಗೆ ಸಾಗಿ ಸಸಿಗೆ ಹೊಸ ತಳಿರು ತರುವಂತೆ ಹೊಸ ಸೃಷ್ಟಿಸತ್ತ್ವಗಳು ಪ್ರತಿ ದಿನ ಈ ಜಗತ್ತನ್ನು ಹೊಸದಾಗಿ ಮಾಡುತ್ತವೆ. ಬದುಕು ನಿಂತ ನೀರಲ್ಲ; ಅದು ನಿರಂತರ ಚಲನಶೀಲ. ಇದರಿಂದಾಗಿಯೇ ಅದು ನಿತ್ಯನೂತನ; ಅದಕ್ಕಿದೆ ಪಾವಿತ್ರ್ಯದ ಸಿಂಚನ.

ಹೀಗೆಯೇ ನಮ್ಮ ನಂಬಿಕೆಗಳು, ಮನೋಧರ್ಮಗಳು, ಆಚಾರ–ವಿಚಾರಗಳು, ಚಿಂತನೆಗಳು, ನಿಲುವುಗಳು ಸಾಂದರ್ಭಿಕವಾಗಿ ಬದಲಾವಣೆಗೆ ಒಳಪಡಬೇಕು. ಪರಿವರ್ತನೆ ಜಗದ ನಿಯಮ. ಕಾಲದಿಂದ ಕಾಲಕ್ಕೆ ಜನಜೀವನದಲ್ಲಾದ ಧಾರ್ಮಿಕ, ಸಾಮಾಜಿಕ, ರಾಜಕೀಯ ಹಾಗೂ ವೈಜ್ಞಾನಿಕ ಬದಲಾವಣೆಗಳು ವಿಭಿನ್ನ ವೈಚಾರಿಕ ಕ್ರಾಂತಿಯನ್ನು ಉಂಟುಮಾಡುತ್ತವೆ. ಇದರ ಹಿನ್ನೆಲೆಯಲ್ಲಿ ಹೊಸ ಮೌಲ್ಯಗಳು, ಹೊಸ ಜೀವನದೃಷ್ಟಿಗಳು ರೂಪ ತಾಳುತ್ತವೆ. ಇದಕ್ಕೆ ಹೊರತಾದ ಬದುಕು ಅರ್ಥಹೀನ ಕೂಡ.

ಹಾಗಾಗಿಯೇ ನಾವು ಪರಿವರ್ತನೆಯೊಂದಿಗೆ ಪ್ರವಹಿಸಿ, ವಿವೇಕಪ್ರಜ್ಞೆಯ ಬೆಳಕಿನಲ್ಲಿ ನಮ್ಮ ಸುತ್ತಣ ಸಮಾಜದ ಆಶೋತ್ತರಗಳನ್ನು, ಮಿಡಿತಗಳನ್ನು ಮತ್ತು ನಂಬಿಕೆಗಳನ್ನು ಒಳಹೊಕ್ಕು ನೋಡಬೇಕು. ಸಾಮಾಜಿಕ ಬದುಕನ್ನು, ಅದರ ವಿಸ್ತಾರ ಮತ್ತು ಸಮಗ್ರತೆಯೊಳಗೆ ಗ್ರಹಿಸುವ ಪ್ರಯತ್ನ ಮಾಡಬೇಕು.

ಸಾಮಾಜಿಕ ವಾಸ್ತವಗಳಿಗೆ ನಾವು ನಮ್ಮನ್ನು ಎಚ್ಚರಗೊಳಿಸಬೇಕು. ಕಾಲಕ್ಕೆ ತಕ್ಕಂತೆ ಬದುಕಿನ ಆಚಾರ ವಿಚಾರಗಳು ಬದಲಾವಣೆಗಳಿಗೆ ಒಳಪಡುತ್ತಲೇ ಸಾಗಬೇಕು. ಬದುಕು ಇಂತಹ ಹಿನ್ನೆಲೆಯಲ್ಲಿ  ಯಶಸ್ವಿ ಹಾಗೂ ಅರ್ಥಪೂರ್ಣವಾಗಬಲ್ಲದು. ಹಾಗಾಗಿಯೇ ನಮ್ಮ ವಿಚಾರಗಳು–ಮನೋಧರ್ಮಗಳು

ಕಪ್ಪು ಮೋಡದಲಿ ಸಿಕ್ಕಿ,
ಕಪ್ಪಾಗಿ ಬಿಡುವ ಸೂರ್ಯನಾಗದೆ,
ಅದನ್ನು ಸೀಳಿ ಹೊರ ಬರುವಂತಾಗಲಿ,
ನಮ್ಮ ನಿಲುವು
– ಎಂಬ ಕವಿವಾಣಿಯಂತೆ ಪ್ರವಹಿಸಬೇಕು.

ನಮ್ಮ ನಡೆ ನುಡಿಗಳು ನಮ್ಮ ಹಿಂದಣ ಹೆಜ್ಜೆಯಲ್ಲಿನ ನಂಬಿಕೆ, ಆಚಾರ–ವಿಚಾರಗಳ ನೆರಳು ನಮ್ಮನ್ನು ಪ್ರಭಾವಿಸಿದರೂ, ಸಮಕಾಲೀನ ಪ್ರಜ್ಞೆಯ ಬೆಳಕಿನಲ್ಲಿ ಮುಂದಣ ಹೆಜ್ಜೆಯಿಡಬೇಕಿರುವುದು ಅನಿವಾರ್ಯವಾಗಿದೆ.

ಹಳೆಯದೆಲ್ಲವನ್ನೂ ಶ್ರೇಷ್ಠವೆಂದೂ, ಹೊನ್ನೆಂದೂ ಮತ್ತೆಮತ್ತೆ ಭ್ರಾಂತರಾಗುವುದು ಸಮರ್ಥನೀಯವೆನಿಸುವುದಿಲ್ಲ. ನಾವೆಲ್ಲರೂ ಪರಿವರ್ತನೆಯೊಂದಿಗೆ ಪ್ರವಹಿಸಬೇಕಾದ ಅನಿವಾರ್ಯತೆ ನಮ್ಮ ಬದುಕಿನ ಮೊದಲ ಆದ್ಯತೆಯಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT