ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಾನದಿ’ಯ ರಾಜಕಾರಣಿ

Last Updated 23 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಚಲನಚಿತ್ರಗಳಲ್ಲಿ ನಾಯಕನಟನಾಗಿಯೇ ಅಭಿನಯಿಸಿಕೊಂಡು ಬರುತ್ತಿದ್ದ ನಾಗಕಿರಣ್‌ ಈಗ ಧಾರಾವಾಹಿಯಲ್ಲೂ ನಾಯಕನಾಗಿದ್ದಾರೆ.

ಅವರ ಬೆಳ್ಳಿತೆರೆ ಪ್ರವೇಶವೂ ರೋಚಕ. ಅದೂ ತೆಲುಗು ಚಿತ್ರದ ಮೂಲಕ. ತೆಲುಗಿನ ಚಿತ್ರವೊಂದರಲ್ಲಿ ನಾಯಕನಾಗಿ   ಮಿಂಚುತ್ತೇನೆ ಎಂದು ಅವರು  ಅಂದುಕೊಂಡಿರಲಿಲ್ಲ. ಆದರೆ, ಅವರ ಚೊಚ್ಚಲ ಪ್ರವೇಶದ ಸಿನಿಮಾ ಕೈ ಹಿಡಿಯಲಿಲ್ಲ. ಆಗ ಅವರಲ್ಲಿ ಅಂತಹ ಮಹತ್ವಾಕಾಂಕ್ಷೆಯಾಗಲೀ ಇರಲಿಲ್ಲ. ಬಣ್ಣದ ಲೋಕ ಅವರ ಪಾಲಿಗೆ ಆಕಸ್ಮಿಕವಾಗಿ ಅವಕಾಶಗಳನ್ನು ಒದಗಿಸಿಕೊಡುತ್ತಾ ಬಂದರೂ ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುತ್ತಾ ಬಂದರು.

ಏನಾದರೂ ನಾನು ಇಲ್ಲಿ ಸಾಧಿಸಿಯೇ ತೀರಬೇಕು ಎಂಬ ಗುರಿ ಇಟ್ಟುಕೊಂಡಿದ್ದರು. ಮಾಡೆಲಿಂಗ್‌ನಿಂದ ಚಲನಚಿತ್ರಕ್ಕೆ ಅಲ್ಲಿಂದ ಧಾರಾವಾಹಿಗೆ ಜಿಗಿದ ಇವರು ಸದ್ಯ ಝೀ ಕನ್ನಡ ವಾಹಿನಿಯಲ್ಲಿ ಶ್ರುತಿ ನಾಯ್ಡು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಮಹಾನದಿ’ ಧಾರಾವಾಹಿಯಲ್ಲಿ ಯುವ ರಾಜಕಾರಣಿಯಾಗಿದ್ದಾರೆ.

ತಮ್ಮ ವೃತ್ತಿಜೀವನದಲ್ಲಿ ಕಂಡು ಕೊಂಡ ಅನುಭವ, ಅವಕಾಶಗಳ ಕುರಿತು ನಾಗಕಿರಣ್‌ ಇಲ್ಲಿ ಮಾತನಾಡಿದ್ದಾರೆ.

* ಓದುತ್ತಿದ್ದಾಗಲೇ ಮಾಡೆಲಿಂಗ್‌ ಮಾಡಿದೋರು ನೀವು ಅಲ್ವಾ?
ಹೌದು ನಾನು ಬಿ.ಕಾಂ ಓದುತ್ತಿದ್ದಾಗಲೇ ಮಾಡೆಲಿಂಗ್‌ ಮಾಡ್ತಾ ಇದ್ದೆ. ಸದಾಶಿವನಗರದ ವೀರೇಂದ್ರ ಪಾಟೀಲ್‌ ಕಾಲೇಜಿನಲ್ಲಿದ್ದಾಗಲೇ ರ್‍್ಯಾಂಪ್‌ ಮೇಲೆ ನಡೆದಿದ್ದೆ.

* ತೆಲುಗು ಚಿತ್ರಕ್ಕೆ  ಪ್ರವೇಶ ಪಡೆದಿದ್ದು ಹೇಗೆ?
‘ಸಮ್‌ಥಿಂಗ್ ಸ್ಪೆಷಲ್‌’ ಚಿತ್ರಕ್ಕೆ ನಾನು ಆಯ್ಕೆಯಾದೆ. ಅದರಲ್ಲಿ ನಾಯಕ ನಟನಾಗಿದ್ದೆ. 2004ರಲ್ಲಿ ಚಿತ್ರ ಬಿಡುಗಡೆಯಾಗಿತ್ತು. ಮೇಕಪ್‌ ಮ್ಯಾನ್‌ ಶಿವರಾಜ್‌ ಅವರು ತೆಲುಗು ಚಿತ್ರಕ್ಕೆ ಅವಕಾಶ ಕೊಡಿಸಿದರು.

ಆಸಕ್ತಿ ಇದ್ದರೆ ಫೋಟೊ ಕೊಡಿ ಎಂದು ಹೇಳಿದ್ದರು. ಕೊಟ್ಟೆ, ಅದೃಷ್ಟಕ್ಕೆ ಆಯ್ಕೆಯಾದೆ. ಹೈದರಾಬಾದ್ ಮತ್ತು ಬ್ಯಾಂಕಾಕ್‌ನಲ್ಲಿ ಚಿತ್ರೀಕರಣವಾಗಿತ್ತು. ಈ ಚಿತ್ರಕ್ಕೆ ಸುನೈನಾ ನಾಯಕಿಯಾಗಿದ್ದರು. ಆದರೆ, ಈ ಚಿತ್ರ ಅಷ್ಟಾಗಿ ಓಡಲಿಲ್ಲ. ಅದರಲ್ಲಿ ಯಾವುದೇ ನಿರೀಕ್ಷೆ ಇಲ್ಲದೆ ಅಭಿನಯಿಸಿದ್ದೆ ಅಷ್ಟೆ.  

* ಆನಂತರ ಕನ್ನಡ ಚಿತ್ರಗಳಿಗೆ ಹೇಗೆ ಪ್ರವೇಶ?
2005ರಲ್ಲಿ ಬಿಡುಗಡೆಯಾದ ‘ಮರುಜನ್ಮ’ದಲ್ಲಿ ನಾಯಕನಟನಾದೆ.  ವಸಂತಕಾಲ, ಪಲ್ಲವಿ ಇಲ್ಲದ ಚರಣ,  ಮಹಾಜನ್ಮ ನಕ್ಷತ್ರ, ಪರಿ, ಮಳೆ ಬರಲಿ ಮಂಜೂ ಇರಲಿ, ಮಸ್ತ್‌ ಮಜಾ ಮಾಡಿ, ಲಹರಿ, ತಮಿಳಿನ ಯಾರಿಂದ ದೇವಥೈ, ತಲೆ ಕುಳ್ಳೈ ಹಾಗೂ ಇನ್ನೂ ಬಿಡುಗಡೆಯಾಗಬೇಕಿರುವ ಆದರ್ಶ್‌   ಸೇರಿ ಒಟ್ಟು 12  ಚಿತ್ರಗಳಲ್ಲಿ ಹೀರೊ ಆಗಿದ್ದೇನೆ.

* ಇಷ್ಟು ಚಿತ್ರಗಳಲ್ಲಿ ನಿಮಗೆ  ತುಂಬಾ ಖುಷಿ ಕೊಟ್ಟ ಚಿತ್ರ ಯಾವುದು?
ಎಲ್ಲವೂ ಖುಷಿ ಕೊಟ್ಟಿವೆ. ಆದರೆ ‘ಮಸ್ತ್ ಮಜಾ ಮಾಡಿ’ ‘ಮಳೆ ಬರಲಿ ಮಂಜೂ ಇರಲಿ’ ಹೆಚ್ಚು ಖುಷಿ ಕೊಟ್ಟಿದೆ.    

* ಧಾರಾವಾಹಿ ಪ್ರವೇಶ ಹೇಗೆ?
ಒಮ್ಮೆ ಶ್ರುತಿನಾಯ್ಡು ಕರೆಸಿದ್ದರು. ಇದಕ್ಕೂ ಮೊದಲು ಹಲವು ಧಾರಾವಾಹಿಗಳಿಗೆ ಅವಕಾಶ ಬಂದಿತ್ತು. ಅವೆಲ್ಲ ಹೀರೊಯಿನ್‌ ಇಲ್ಲವೇ ಫ್ಯಾಮಿಲಿ ಕಥೆಗಳು.  ‘ಮಹಾನದಿ’ ಕಥೆ ಇಷ್ಟವಾಯಿತು. ಪೂರ್ತಿ ಹೀರೊ ಮುಖ್ಯ ಭೂಮಿಕೆಯ ಧಾರಾವಾಹಿ. ಇದೊಂದು ಸ್ಟ್ರಾಂಗ್‌ ಕ್ಯಾರೆಕ್ಟರ್.

*ಚಿತ್ರದಲ್ಲಿ ನಾಯಕನಾಗಿದ್ದವರು ಕಿರುತೆರೆಗೆ ಬಂದಿರಿ?
ಈಗಲೂ ಚಲನಚಿತ್ರಗಳಲ್ಲಿ ಅವಕಾಶವಿದೆ. ಎರಡು ಚಿತ್ರ ಸಿದ್ಧವಾಗಿವೆ. ‘ಮಹಾನದಿ’ಯಲ್ಲಿ ಒಳ್ಳೆಯ ಪಾತ್ರ ಅನ್ನೊ ಕಾರಣಕ್ಕೆ ಒಪ್ಪಿಕೊಂಡೆ.

*ಕಲರ್‌ಫುಲ್‌ ಹೀರೊ ಆಗಿದ್ದವರು ರಾಜಕಾರಣಿಯಾಗಿ ಬಿಟ್ರಿ?
ಸಾಮಾನ್ಯವಾಗಿ ಧಾರಾವಾಹಿಗಳಲ್ಲಿ ಹೀರೊ ಮುಖ್ಯಪಾತ್ರದ ಕಥೆಗಳು ತುಂಬಾ ಕಡಿಮೆ. ಇದು ಮಾತ್ರ ಬೇರೆ ರೀತಿಯದು. ಇಡೀ ಧಾರಾವಾಹಿ ಆವರಿಸಿಕೊಳ್ಳೊ ಪಾತ್ರ.

*ರಿಯಲ್‌ ರಾಜಕಾರಣ, ರಾಜಕಾರಣಿಗಳ ಬಗ್ಗೆ ಏನು ಹೇಳ್ತೀರಿ?
ನನಗೆ ರಾಜಕಾರಣದ ಬಗ್ಗೆ ಆಸಕ್ತಿ ಇದೆ. ನಾನು ಆರ್‌ಎಸ್‌ಎಸ್‌ನಿಂದ ಬಂದವನು. ಒಳ್ಳೆ ಪಾತ್ರ ಸಿಕ್ಕಿದೆ. ಆದ್ದರಿಂದ ಖುಷಿಯಿಂದ ಅಭಿನಯಿಸುತ್ತೇನೆ. ಇಲ್ಲೊಬ್ಬ ಆದರ್ಶ ರಾಜಕಾರಣಿ ಇದ್ದಾನೆ. ಹೀಗೂ ರಾಜಕೀಯ ಮಾಡಬಹುದಾ  ಎಂದು ಜನ ಅಂದು ಕೊಳ್ಳುವ ಪಾತ್ರವಿದು.

* ಮುಂದಿನ ಯೋಜನೆ ಏನು?
ಈಗಾಗಲೇ ಎರಡು ಚಿತ್ರ ಬಿಡುಗಡೆಗೆ ಕಾದಿವೆ. ಮುಂದೆ ನನ್ನದೇ ಹೋಂ ಪ್ರೊಡಕ್ಷನ್‌ನಲ್ಲಿ ಚಿತ್ರ ಮಾಡಬೇಕು ಎಂದುಕೊಂಡಿದ್ದೇನೆ. ಮಾತುಕತೆ ನಡೆಯುತ್ತಿದೆ. ಸದ್ಯ ಧಾರಾವಾಹಿ ಮಾತ್ರ ಮಾಡ್ತಾ ಇದ್ದೇನೆ.

*ಚಿತ್ರಗಳ ಆಯ್ಕೆ ಯಾವ ರೀತಿ ಮಾಡ್ತೀರಿ?
ಕಥೆ, ಹೀರೊಗೆ ಯಾವ ರೀತಿ ಅವಕಾಶ ಇದೆ. ನಿರ್ದೇಶಕರು ಯಾರು ಮತ್ತು ಯಾವ ಬ್ಯಾನರ್ ಅಡಿ ಚಿತ್ರ ಇದೆ ಎನ್ನುವುದರ ಮೇಲೆ ಚಿತ್ರಗಳನ್ನು ಒಪ್ಪಿಕೊಳ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT