ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕತಾನತೆಯ ಪಾತ್ರ ನನಗಿಷ್ಟ ಇಲ್ಲ

Last Updated 24 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

‘ವಜ್ರಕಾಯ’ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶ ಮಾಡಿದವರು ನಭಾ ನಟೇಶ್‌. ಮೊದಲ ಸಿನಿಮಾದಲ್ಲಿ ಉತ್ತಮ ನಟನೆಯ ಮೂಲಕ ಗುರುತಿಸಿಕೊಂಡ ಇವರು, ರಂಗಭೂಮಿಯ ನಂಟನ್ನು ಹೊಂದಿರುವವರು. ಪೌರಾಣಿಕ ಪಾತ್ರಗಳಲ್ಲಿ ನಟಿಸುವ ಹಂಬಲವುಳ್ಳ ನಭಾ ಕಾಮನಬಿಲ್ಲಿನ ಜೊತೆ ಮಾತನಾಡಿದ್ದಾರೆ.

* ಮೊದಲ ಸಿನಿಮಾದ ಅಭಿನಯ ಹೇಗಿತ್ತು? ನೀವು ನಿಜವಾಗಿಯೂ ಗಯ್ಯಾಳಿನಾ?
ಖಂಡಿತಾ ನಾನು ಗಯ್ಯಾಳಿ ಅಲ್ಲ. ಹಾಗಂತ ತುಂಬಾ ಮೃದು ಸ್ವಭಾವದವಳೂ ಅಲ್ಲ. ಆದರೆ ನಾನು ಧೈರ್ಯವಂತೆ. ಕಠಿಣ ಸಂದರ್ಭಗಳನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯವಿದೆ.

ಈ ಸಿನಿಮಾದಲ್ಲಿ ಬೋಲ್ಡ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಜೊತೆಗೆ ಹೆಚ್ಚಾಗಿ ಹಿಂದಿಯಲ್ಲಿಯೇ ಮಾತನಾಡುತ್ತೇನೆ. ನನ್ನ ಉಚ್ಚಾರಣೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗಿತ್ತು.

ನಾನು ರಂಗಭೂಮಿಯ ನಂಟನ್ನು ಹೊಂದಿರುವುದರಿಂದ ನಟನೆ ಕಷ್ಟವೆನಿಸಲಿಲ್ಲ. ಪಾತ್ರಕ್ಕಾಗಿ ಸಾಕಷ್ಟು ತಯಾರಿಯನ್ನು ನಡೆಸಿದ್ದೆ.

* ಮೊದಲ ಸಿನಿಮಾದ ಅನುಭವ ಹೇಗಿತ್ತು?
ಈ ಸಿನಿಮಾ ಸಾಕಷ್ಟು ಅದ್ಭುತವಾದ ಅನುಭವಗಳನ್ನು ನೀಡಿದೆ. ಒಳ್ಳೆಯ ಚಿತ್ರತಂಡ ಇದ್ದುದ್ದರಿಂದ ಸವಾಲು ಎನಿಸುವಂತಹ ಪಾತ್ರವನ್ನು ನಿಭಾಯಿಸುವುದು ಕಠಿಣವಾಗಲಿಲ್ಲ. ಈ ಸಿನಿಮಾದ ಚಿತ್ರೀಕರಣ ಸುಮಾರು ಒಂದು ವರ್ಷ ನಡೆಯಿತು. ಒಬ್ಬರಿಗೊಬ್ಬರು ತಮಾಷೆ ಮಾಡಿಕೊಂಡು, ಕಾಲೆಳೆಯುತ್ತ ಇರುತ್ತಿದ್ದೆವು. ಹೀಗಾಗಿ ಅಷ್ಟು ದಿನ ಕಳೆದದ್ದೇ ತಿಳಿಯಲಿಲ್ಲ.

* ರೌಡಿಯಂತೆ ಮಾತನಾಡುವುದು ನಿಮಗೆ ಕಷ್ಟಎನ್ನಿಸಲಿಲ್ಲವೇ?
ತುಂಬಾ ಕಷ್ಟವಾಗಿತ್ತು. ಆದರೆ ಚಿತ್ರ ತಂಡದ ಬೆಂಬಲವಿದ್ದುದ್ದರಿಂದ ಅದನ್ನು ನಿಭಾಯಿಸುವುದು ಸುಲಭವಾಯಿತು. ಮೈಸೂರಿನಲ್ಲಿ ಚಿತ್ರೀಕರಣ ನಡೆಯಬೇಕಾದರೆ ‘ಒಂದು ವಾರ ಮೇಕಪ್‌ ಮಾಡಿಕೊಂಡು ರೌಡಿ ತರಹವೇ ಚಿತ್ರೀಕರಣದ ಸ್ಥಳದಲ್ಲಿ ತಿರುಗಿಕೊಂಡು ಇರು’ ಎಂದು ನಿರ್ದೇಶಕರು ಕಟ್ಟುನಿಟ್ಟಾಗಿ ನಿರ್ದೇಶನ ನೀಡಿದ್ದರು. ಇಡೀ ದಿನ ಅದೇ ಮೂಡ್‌ನಲ್ಲಿ ಇರುವುದರಿಂದ ಪಾತ್ರದ ನಿರ್ವಹಣೆ ಸುಲಭವಾಗುತ್ತದೆ ಎಂಬುದು ಅವರ ಯೋಚನೆಯಾಗಿತ್ತು. ಮೊದಲು ಚಿಕ್ಕ ಪಾತ್ರಗಳನ್ನು ಮಾತ್ರ ಮಾಡಿಸುತ್ತಿದ್ದರು. ತಪ್ಪುಗಳನ್ನು ತಿದ್ದುತ್ತಿದ್ದರು. ಮೊದಲೇ ಸಿನಿಮಾ ಚಿತ್ರೀಕರಣ ನಡೆದಿದ್ದರಿಂದ ಡಬ್ಬಿಂಗ್‌ ಮಾಡುವುದು ಕಷ್ಟವೆನಿಸಲಿಲ್ಲ.

* ಓದಿದ್ದು ಎಂಜಿನಿಯರಿಂಗ್‌, ನಟನೆ ಕಡೆ ಮನಸ್ಸು ವಾಲಿದ್ದು ಏಕೆ?
ಶಾಲಾ ದಿನಗಳಿಂದಲೂ ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ನಾನು ತುಂಬಾ ಮುಂದಿದ್ದೆ. ಅಲ್ಲದೆ ಒಂದೇ ಕಡೆ ಕುಳಿತುಕೊಂಡು ಕೆಲಸ ಮಾಡುವುದು ನನ್ನಿಂದ ಆಗದ ಕೆಲಸ. ಮಾಡುವ ಕೆಲಸದಲ್ಲಿ ಸೃಜನಶೀಲತೆ ಇರಬೇಕು ಎಂದು ಬಯಸುವವಳು ನಾನು. ನಿಗದಿತ ಸಮಯಕ್ಕೆ ಕಚೇರಿಗೆ ಹೋಗಿ, ಬರುವ ಕೆಲಸ ನನಗೆ ಒಗ್ಗುವುದಿಲ್ಲ ಎಂದು ತಿಳಿದಾಗ ಮನಸ್ಸು ವಾಲಿದ್ದು ನಟನೆಯೆಡೆಗೆ.

* ಚಿತ್ರೋದ್ಯಮದ ಪ್ರಸ್ತುತ ಸ್ಥಿತಿಯಲ್ಲಿ ನಟಿಯಾದವರಿಗೆ ಗ್ಲಾಮರ್ ಮುಖ್ಯವೋ, ನಟನೆ ಮುಖ್ಯವೋ?
ಉತ್ತಮ ನಟಿ ಎನಿಸಿಕೊಳ್ಳಲು ಇವೆರಡೂ ಇರಲೇಬೇಕು.  ನನಗೆ ದೊರಕಿದ ಸಿನಿಮಾದಲ್ಲಿ ಗ್ಲಾಮರ್‌ ಮತ್ತು ನಟನೆ ಎರಡಕ್ಕೂ ಪ್ರಾಶಸ್ತ್ಯವಿತ್ತು. ಡ್ಯಾನ್ಸ್‌ ಮಾಡುವುದು, ಚೆನ್ನಾಗಿ ಡ್ರೆಸ್‌ ಆಗುವುದೆಂದರೆ ನನಗೆ ಇಷ್ಟ. ಅದೇ ಕಾರಣಕ್ಕೆ ರೂಪದರ್ಶಿ ಕೂಡ ಆಗಿದ್ದೆ. ಫ್ಯಾಷನ್‌ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿದ್ದೇನೆ. ಜೊತೆಗೆ ರಂಗಭೂಮಿ ನಂಟು ಇರುವುದರಿಂದ ನಟನೆ ಮತ್ತು ಗ್ಲಾಮರ್‌ ಎರಡೂ ಮುಖ್ಯ ಎನ್ನುವುದು ನನ್ನ ಅನಿಸಿಕೆ.

* ಕಾಲೇಜಿನಲ್ಲಿ ನಿಮ್ಮ ಜೊತೆಗೆ ಲವ್‌ ಸ್ಟೋರಿ ಆರಂಭಿಸಬೇಕು ಎನ್ನುವವರು ಇದ್ದರಾ?
ಅದೇನೋ ಗೊತ್ತಿಲ್ಲ, ಸಾಮಾನ್ಯವಾಗಿ ಎಲ್ಲರೂ ನನಗೆ ಈ ಪ್ರಶ್ನೆ ಕೇಳುತ್ತಾರೆ. ಆದರೆ ಇಲ್ಲಿಯವರೆಗೂ ಒಬ್ಬ ಹುಡುಗ ಕೂಡ ನನಗೆ ಪ್ರೇಮನಿವೇದನೆ ಮಾಡಿಲ್ಲ. ಕಾಲೇಜಿನಲ್ಲಿ ನನ್ನ ಸ್ನೇಹಿತರ ಬಳಗವೂ ದೊಡ್ಡದಾಗಿತ್ತು. ಹಾಗಾಗಿ ಯಾರೂ ಪ್ರೀತಿಸುತ್ತೇನೆ ಎಂದು ಹೇಳಲು ಧೈರ್ಯ ಮಾಡದೇ ಇರಬಹುದು. ಆದರೆ ಈ ಕುರಿತು ನನಗೆ  ಬೇಸರವಿದೆ.

* ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಆಸೆಯಿದೆ?
ಪಾತ್ರಗಳಲ್ಲಿ ಏಕತಾನತೆ ಇರಬಾರದು. ಎಲ್ಲಾ ರೀತಿಯ ಪಾತ್ರಗಳನ್ನೂ ಮಾಡುವ ಆಸೆಯಿದೆ. ಪೌರಾಣಿಕ ಪಾತ್ರಗಳಲ್ಲಿ ನಟಿಸಬೇಕೆಂಬ ಹಂಬಲವಿದೆ.

* ನಿಜ ಜೀವನದಲ್ಲಿ ತುಂಬಾ ಮಾತನಾಡುತ್ತೀರಾ? ಅಥವಾ ಮೌನಿಯಾ?
ತುಂಬಾ ಮಾತನಾಡುವುದಿಲ್ಲ. ಇಷ್ಟವಾಗುವವರಿದ್ದರೆ, ಅವರಿಗೂ ಇಷ್ಟವಿದ್ದರೆ ಮಾತನಾಡುತ್ತೇನೆ. ಅಗತ್ಯವಿದ್ದರೆ  ಸ್ವಲ್ಪ ಹೆಚ್ಚೇ ಮಾತನಾಡುತ್ತೇನೆ. ಕೆಲವೊಮ್ಮೆ ನನ್ನ ಪಾಡಿಗೆ ನನ್ನನ್ನು ಇರಲು ಬಿಡಬೇಕು ಅದೇ ಇಷ್ಟ.

* ಯಾವಾಗಲೂ ನೆನಪಾಗುವ ತಮಾಷೆ ಸಂಗತಿ  ಯಾವುದು?
‘ವಜ್ರಕಾಯ’ ಚಿತ್ರೀಕರಣ ಸಮಯದಲ್ಲಿ ಕುದುರೆ ಸವಾರಿ ಮಾಡುತ್ತಿದುದ್ದರಿಂದ ಹೆಚ್ಚು ಹೊಟ್ಟೆ ಹಸಿವಾಗುತ್ತಿತ್ತು. ಹಾಗಾಗಿ ಚೆನ್ನಾಗಿ ಮೊಟ್ಟೆ ತಿನ್ನುತ್ತಿದ್ದೆ.  ಚಿತ್ರತಂಡದವರಿಗೆ ಇದೊಂದು ತಮಾಷೆ ವಿಷಯವಾಗಿತ್ತು. ಪದೇ ಪದೇ ‘ಮೊಟ್ಟೆ ಕೊಡ್ರಪ್ಪ ಇವರಿಗೆ’ ಅಂತೆಲ್ಲಾ ತಮಾಷೆ ಮಾಡುತ್ತಿದ್ದರು. ಶಿವಣ್ಣ ಸರ್‌ ಕೂಡ ಹೀಗೆ ತಮಾಷೆ ಮಾಡಲು ಆರಂಭ ಮಾಡಿದ್ದರು.

* ಕೆಲಸ ಇಲ್ಲದಾಗ?
ಮನೆಯವರ ಜೊತೆ ಚೆನ್ನಾಗಿ ಹರಟೆ ಹೊಡೆಯುತ್ತೇನೆ. ಬೆಳಿಗ್ಗೆ ಮತ್ತು ಸಂಜೆ ಜಿಮ್‌ನಲ್ಲಿ ದೇಹ ದಂಡಿಸುತ್ತೇನೆ. ನೃತ್ಯವನ್ನು ಅಭ್ಯಾಸವನ್ನು ಮಾಡುತ್ತೇನೆ. ಹೊಸ ಸಿನಿಮಾಗಳನ್ನು ನೋಡುತ್ತೇನೆ. ವ್ಯಕ್ತಿತ್ವ ವಿಕಸನ ಮತ್ತು ಸಾಮಾನ್ಯ ಜ್ಞಾನದ ಪುಸ್ತಕಗಳನ್ನು ಹೆಚ್ಚು ಓದುತ್ತೇನೆ.

- ಸಂದರ್ಶನ:  ವಿದ್ಯಾಶ್ರೀ ಎಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT