ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ-ವಾಹನಗಳ ಸಾಲಿಗೆ ಹೊಸ ಸೈಕಲ್, ಸ್ಕೂಟರ್

Last Updated 24 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ನಮ್ಮಲ್ಲಿ ವಿದ್ಯುತ್‌ ಚಾಲಿತ ವಾಹನಗಳ ಮಾರುಕಟ್ಟೆ ನಿಧಾನವಾಗಿ ಬೆಳೆಯುತ್ತಿದೆ. ಮಾರುಕಟ್ಟೆಯಲ್ಲಿ ಹತ್ತಾರು ಮಾದರಿಯ ಇ- ಸೈಕಲ್‌ಗಳು, ಸ್ಕೂಟರ್‌ಗಳು, ಬೈಕ್‌ಗಳು, ಒಂದು ಕಾರೂ ಲಭ್ಯವಿದೆ. ಇ-ವಾಹನಗಳ ತಯಾರಕರಿಂದ ಉತ್ತಮ ಸರ್ವಿಸ್‌ ಲಭ್ಯವಿದ್ದರೂ ಈ ವಾಹನಗಳು ಬಳಕೆದಾರರ ಪ್ರಾಥಮಿಕ ವಾಹನಗಳಾಗಿದ್ದು ಕಡಿಮೆ.

ಕೊಯಮತ್ತೂರು ಮೂಲದ ಆಂಪೆರ್ ವೆಹಿಕಲ್ಸ್ ಪ್ರೈವೇಟ್‌ ಲಿಮಿಟೆಡ್‌ ಹಲವು ವರ್ಷಗಳಿಂದ ಇ–ವಾಹನಗಳನ್ನು ತಯಾರಿಸುತ್ತಿದೆ. ಕಂಪೆನಿಯ ಮಡಿಲಲ್ಲಿ ದ್ವಿಚಕ್ರ ವಾಹನಗಳು, ಇ–ಆಟೊಗಳು ಮತ್ತು ಇ–ಸೈಕಲ್‌ ಸಹ ಇದೆ. ಕಂಪೆನಿಯ ಆಹ್ವಾನದ ಮೇರೆಗೆ ಈಚೆಗೆ ಇ-ಸೈಕಲ್‌ ಮತ್ತು
ಇ-ಸ್ಕೂಟರ್‌ನ ಪರೀಕ್ಷಾರ್ಥ ಚಾಲನೆ ನಡೆಸಲಾಗಿತ್ತು.

ಆಂಪೆರ್‌ ‘ಏಂಜಲ್‌’ ಎಂಬ ಸೈಕಲ್‌ ಅನ್ನು ಅಭಿವೃದ್ಧಿಪಡಿಸಿದೆ. ಮೊದಲ ನೋಟಕ್ಕೆ ಏಂಜಲ್‌ ಸಾಮಾನ್ಯ ಸೈಕಲ್‌ನಂತೆಯೇ ಭಾಸವಾಗುತ್ತದೆ. ಆದರೆ ಅದರ ಸೀಟ್‌ ಅಡಿಯಲ್ಲಿ ಕೂರಿಸಿರುವ ಬ್ಯಾಟರಿ ಮತ್ತು ಹಿಂಬದಿಯ ಚಕ್ರದಲ್ಲಿರುವ ಹಬ್‌ ಮೋಟಾರ್‌ ಅನ್ನು ನೋಡಿದಾಗ ವ್ಯತ್ಯಾಸ ಕಾಣುತ್ತದೆ.

ಎಲ್ಲಾ ಇ-ವಾಹನಗಳಂತೆ ಇದು ಬ್ಯಾಟರಿಯ ಶಕ್ತಿಯನ್ನು ಬಳಸಿಕೊಂಡು ಸಾಗುವ ಸೈಕಲ್‌. ಬ್ಯಾಟರಿಯ ವಿದ್ಯುತ್‌ಶಕ್ತಿ ಕಂಟ್ರೋಲರ್‌ಗೆ ಹರಿಯುತ್ತದೆ. ಥ್ರೋಟಲ್‌ (ಆಕ್ಸಿಲೇಟರ್‌) ತಿರುಗಿಸುವ ಮೂಲಕ ಕಂಟ್ರೋಲರ್‌ನಿಂದ ಮೋಟಾರ್‌ಗೆ ಹರಿಯುವ ವಿದ್ಯುತ್‌ ಅನ್ನು ನಿಯಂತ್ರಿಸಬಹುದು. ವಿದ್ಯುತ್‌ ಹರಿವನ್ನು ಆಧರಿಸಿ ಮೋಟಾರ್‌ನ ವೇಗ ಬದಲಾಗುತ್ತದೆ.

ಇದರಲ್ಲಿರುವುದು ಲೆಡ್‌ ಆಸಿಡ್ ಬ್ಯಾಟರಿ. ಇದು ಪೂರ್ಣ ಚಾರ್ಜ್ ಆಗಲು ಎಂಟು ತಾಸು ಬೇಕಾಗುತ್ತದೆ. ಜತೆಗೆ ಒಮ್ಮೆ ಪೂರ್ಣ ಚಾರ್ಜ್ ಆಗಲು ಒಂದು ಯುನಿಟ್‌ ವಿದ್ಯುತ್‌  ಕಬಳಿಸುತ್ತದೆ. ಒಮ್ಮೆ ಚಾರ್ಜ್ ಮಾಡಿದರೆ ಗರಿಷ್ಠ 40 ಕಿ.ಮೀ ಕ್ರಮಿಸಬಹುದು ಎಂದು ಕಂಪೆನಿ ಹೇಳುತ್ತದೆ.

ಆದರೆ ಮೋಟಾರ್‌ ಜತೆಗೆ ಪೆಡಲ್‌ ಅನ್ನೂ ನೀಡಿರುವುದರಿಂದ ಏಂಜಲ್‌ ಅನ್ನು ಬೇರೆ ರೀತಿಯಲ್ಲಿ ಬಳಸಬಹುದು. ಮೋಟಾರ್‌ ಮೂಲಕ ಚಲಾಯಿಸುವಾಗ ಅದರ ವೇಗ ಗರಿಷ್ಠ 25 ಕಿ.ಮೀ. ಕಂಪೆನಿಯೂ ಅದನ್ನೇ ಹೇಳುತ್ತದೆ.

ಜಿಪಿಎಸ್‌ ಸಾಧನದಲ್ಲಿ ದಾಖಲಾದ ವೇಗವೂ 25 ಕಿ.ಮೀ. ಆದರೆ ಪೆಡಲ್‌ ಮಾಡುತ್ತಾ ಸೈಕಲ್‌ ಅನ್ನು ಇನ್ನೂ ಹೆಚ್ಚಿನ ವೇಗದಲ್ಲಿ ಓಡಿಸಬಹುದು. ಸಪಾಟಾದ ದಾರಿಯಲ್ಲಿ, ತಗ್ಗಿನಲ್ಲಿ ಥ್ರೋಟಲ್‌ ಅನ್ನು ಬಿಟ್ಟು ಪೆಡಲ್‌ ಮಾಡಬಹುದು.

ಆ ಮೂಲಕ ವಿದ್ಯುತ್‌ ಉಳಿಸಬಹುದು ಅಥವಾ ಬ್ಯಾಟರಿ ಸಂಪೂರ್ಣ ಡಿಸ್‌ಚಾರ್ಜ್‌ ಆದರೆ, ಪೆಡಲ್ ಮಾಡುತ್ತಾ ಮನೆ ತಲುಪಬಹುದು. ಬ್ಯಾಟರಿ ಸೈಕಲ್‌ ಇದ್ದಂತೆಯೇ ಅದನ್ನು ಚಾರ್ಜ್ ಮಾಡಬಹುದು. ಇಲ್ಲದಿದ್ದಲ್ಲಿ ಬ್ಯಾಟರಿಯನ್ನು ಸೈಕಲ್‌ನಿಂದ ಬೇರ್ಪಡಿಸಿ ಮನೆಯಲ್ಲಿಟ್ಟು ಚಾರ್ಜ್ ಮಾಡಬಹುದು. ಬ್ಯಾಟರಿಯನ್ನು ತೆಗೆದಿರಿಸಿ ಬರೀ ಸೈಕಲ್‌ ಅನ್ನು ಪೆಡಲ್‌ ಮಾಡುತ್ತಾ ಚಲಾಯಿಸಬಹುದು.

ಬ್ಯಾಟರಿ ತೂಕ 7 ಕೆ.ಜಿ ಇದ್ದು, ಒಟ್ಟಾರೆ ಸೈಕಲ್‌ನ ತೂಕ ಹೆಚ್ಚಿದೆ. ಮುಂಬದಿಯಲ್ಲಿ ಟೆಲಿಸ್ಕೋಪಿಕ್‌ ಸಸ್ಪೆನ್ಷನ್ ಇದೆ. ಜತೆಗೆ ಸಣ್ಣ, ಆದರೆ ಅಗಲವಾದ ಟೈರ್‌ಗಳನ್ನು ನೀಡಿರುವುದರಿಂದ ಚಾಲನೆ ಆರಾಮದಾಯಕವಾಗಿದೆ. ಹಿಂಬದಿ ಮತ್ತು ಮುಂಬದಿಯಲ್ಲಿ ಡ್ರಮ್‌ ಬ್ರೇಕ್‌ ನೀಡಲಾಗಿದೆ. ಒಟ್ಟಾರೆ ಚಾಲನೆಯ ಅನುಭವ ಚೆನ್ನಾಗಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಸೈಕಲ್‌ನಲ್ಲಿ ಒಂದು ಅತ್ಯಾಧುನಿಕ ಸೌಲಭ್ಯ ಇದೆ. ಅದು ಸ್ಪೀಡ್‌ ಲಾಕ್‌. ಇದನ್ನು ಕಾರ್‌ ಮತ್ತು ಅತ್ಯಾಧುನಿಕ ಬಸ್‌ಗಳಲ್ಲಿ ಲಭ್ಯವಿರುವ ಕ್ರೂಸ್‌ ಕಂಟ್ರೋಲ್‌ ತಂತ್ರಜ್ಞಾನಕ್ಕೆ ಹೋಲಿಸಬಹುದು. ಅಂದರೆ ಸೈಕಲ್‌ ಅನ್ನು ಒಂದು ವೇಗದಲ್ಲಿ ಚಲಾಯಿಸುವಾಗ, ಅದೇ ವೇಗದಲ್ಲಿ ಮುಂದುವರೆಯಲು ಥ್ರೋಟಲ್‌ ಬಳಿ ಇರುವ ಗುಂಡಿಯನ್ನು ಒತ್ತಿದರೆ ಆ ವೇಗ ಲಾಕ್‌ ಆಗುತ್ತದೆ.

ಆಗ ಸೈಕಲ್‌ ಥ್ರೋಟಲ್‌ ವೇಗ ಬದಲಿಸುವವರೆಗೂ ಮತ್ತು ಬ್ರೇಕ್‌ ಒತ್ತುವವರೆಗೂ ಅದೇ ವೇಗದಲ್ಲಿ ಓಡುತ್ತದೆ. ದೂರದ, ಹೆಚ್ಚು ದಟ್ಟಣೆ ಇಲ್ಲದ ರಸ್ತೆಗಳಲ್ಲಿ ಇದನ್ನು ಬಳಸಬಹುದು. ಈ ಸೌಲಭ್ಯದ ಚಾಲನೆ ನಿಜಕ್ಕೂ ಖುಷಿ ಕೊಡುತ್ತದೆ.

ಇದರಲ್ಲಿರುವ ಬ್ಯಾಟರಿಯ ಬಾಳಿಕೆ ಅವಧಿ 600 ಸೈಕಲ್. ಅಂದರೆ ಇದನ್ನು 600ನೇ ಬಾರಿ ಚಾರ್ಜ್ ಮಾಡಿದ ನಂತರ ಅದರ ಆಯಸ್ಸು ಮುಗಿಯುತ್ತದೆ. ಆಗ ಬ್ಯಾಟರಿ ಬದಲಿಸಬೇಕು. ಅರ್ಧ ಡಿಸ್‌ಚಾರ್ಜ್ ಆಗಿರುವ ಬ್ಯಾಟರಿಯನ್ನು

ಟಾಪ್‌ಅಪ್ ಚಾರ್ಜ್ ಮಾಡಿದರೂ ಒಂದು ಸೈಕಲ್‌ ಮುಗಿಯುತ್ತದೆ. ಹೀಗಾಗಿ ಬ್ಯಾಟರಿ ಪೂರ್ತಿ ಡಿಸ್‌ಚಾರ್ಜ್ ಆದ ಬಳಿಕವೇ ಚಾರ್ಜ್‌ ಮಾಡುವುದು ಹೆಚ್ಚು ಲಾಭಕರ. ಸರ್ಕಾರದ ಸಹಾಯಧನ ಹೊರತುಪಡಿಸಿ ಇದರ ಬೆಲೆ ₹ 23,500. ತೀರಾ ಅಪರೂಪಕ್ಕೆ ಸ್ಕೂಟರ್‌ ಬಳಸುವವರು, ಮನೆಯ ಬಳಿಯೇ ಓಡಾಡಲು ವಾಹನ ಅಗತ್ಯವಿರುವವರು ಏಂಜಲ್‌ ಅನ್ನು ಕೊಳ್ಳಬಹುದು. ಕಂಪೆನಿ ಅದಕ್ಕೆ ಒಂದು ವರ್ಷದ ವಾರೆಂಟಿ ಕೊಡುತ್ತದೆ.

ವಿ48 ಸ್ಕೂಟರ್‌
ಇದು ಥೇಟ್‌ ಸ್ಕೂಟಿಯಂತೆ ಕಾಣುತ್ತದೆ. ಆದರೆ ಸ್ಕೂಟಿಗಿಂತಲೂ ತೂಕ ಕಡಿಮೆ. ಸಾಮಾನ್ಯ ಸ್ಕೂಟರ್‌ನಲ್ಲಿರುವಂತೆ ಸೀಟಿನ ಕೆಳಗೆ ಸ್ಟೋರೇಜ್ ಬಾಕ್ಸ್‌ ಇದೆ. ಅದರ ಕೆಳಗೆ ಬ್ಯಾಟರಿ ಇದೆ. ಇದರಲ್ಲೂ ಬ್ಯಾಟರಿಯನ್ನು ಹೊರಗೆ ತೆಗೆದು ಚಾರ್ಜ್ ಮಾಡಲು ಅವಕಾಶ ಇದೆ.

ಈ ಸ್ಕೂಟರ್‌ನಲ್ಲಿ ಎರಡು ಚಾಲನಾ ಆಯ್ಕೆಗಳಿವೆ. ಒಂದು ಎಕಾನಮಿ ಮತ್ತೊಂದು ಸ್ಪೀಡ್‌. ಎಕಾನಮಿಯಲ್ಲಿ ವಿ48 ಗರಿಷ್ಠ 25 ಕಿ.ಮೀ ವೇಗದಲ್ಲಿ ಓಡುತ್ತದೆ. ಸ್ಪೀಡ್‌ ಆಯ್ಕೆಯಲ್ಲಿ 35 ಕಿ.ಮೀ ವೇಗದಲ್ಲಿ ಓಡುತ್ತದೆ. ಆದರೆ ಪರೀಕ್ಷಾರ್ಥ ಚಾಲನೆ ವೇಳೆ ತಗ್ಗಿನಲ್ಲಿ 39 ಕಿ.ಮೀ ವೇಗದಲ್ಲಿ ಓಡಿತು (ಜಿಪಿಎಸ್‌ ಸಾಧನದಲ್ಲಿ ದಾಖಲಾದದ್ದು).

ಒಮ್ಮೆ ಚಾರ್ಜ್ ಮಾಡಿದರೆ ಗರಿಷ್ಠ 50 ಕಿ.ಮೀ ಚಲಾಯಿಸಬಹುದು ಎಂದು ಕಂಪೆನಿ ಹೇಳುತ್ತದೆ. ಇದರ ಬ್ಯಾಟರಿಯ ಚಾರ್ಜಿಂಗ್‌ ಸೈಕಲ್‌ ಸಹ 600. ಮಕ್ಕಳನ್ನು ಶಾಲೆಗೆ ಬಿಡಲು, ಮನೆಗೆ ಕರೆತರಲು, ತರಕಾರಿ ತರಲು, ಮಾರುಕಟ್ಟೆಗೆ ಹೋಗಿಬರಲು ಇದನ್ನು ಬಳಸಲು ಅಡ್ಡಿಯಿಲ್ಲ. ಅಂದಹಾಗೆ ಸಹಾಯಧನ ಹೊರತುಪಡಿಸಿ ಇದರ ಬೆಲೆ ₹ 38,500.

ಹೆಲ್ಮೆಟ್‌ ಬಳಸಿ
35ಕಿ.ಮೀಗಿಂತ ಕಡಿಮೆ ವೇಗದ ವಾಹನಗಳನ್ನು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೋಂದಣಿ ಮಾಡಿಸುವ ಅಗತ್ಯ ಇಲ್ಲ. ಈ ಇ-ವಾಹನಗಳನ್ನು ಚಲಾಯಿಸುವಾಗ ಹೆಲ್ಮೆಟ್ ಧರಿಸುವುದು ಕಡ್ಡಾಯವಲ್ಲ. ಆದರೆ ಹೆಲ್ಮೆಟ್‌ ಧರಿಸುವುದು ಸೂಕ್ತ ಎಂದು ಕಂಪೆನಿ ಹೇಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT