ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲ್ಮಾನ್ ಕಾರು ಪ್ರೇಮದ ಫಲ

ನೀರು ಕುಡಿದು ವೇಗ ಪಡೆವ ಕಾರಿನ ಆವಿಷ್ಕಾರ
Last Updated 24 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಬಾಲ್ಯದಲ್ಲಿ ಮಕ್ಕಳು ಕಾರುಗಳನ್ನು ಖರೀದಿಸಿ ಸುಂಯ್‌... ಅಂತ ಓಡಿಸಿದರಷ್ಟೇ ಅವರಿಗೆ ತೃಪ್ತಿ ಆಗುವುದಿಲ್ಲ. ಅದನ್ನು ಇಬ್ಭಾಗ ಮಾಡಿ, ವೈರು, ಚಕ್ರ, ಮೋಟಾರುಗಳನ್ನು ಬೇರೆ ಮಾಡಿ, ಕುತೂಹಲವನ್ನು ಅನಾವರಣ ಮಾಡಿದರೇನೆ ತೃಪ್ತಿ. ಇದೇ ಕುತೂಹಲ ಹೈಸ್ಕೂಲು ಮೆಟ್ಟಿಲೇರುವಷ್ಟರಲ್ಲಿ ಕಡಿಮೆಯಾಗಿರುತ್ತದೆ. ಆದರೆ ಮಕ್ಕಳಲ್ಲಿರುವ ಕುತೂಹಲದ ಈ ಪ್ರವೃತ್ತಿ ವಿಕಾಸ ಹೊಂದುತ್ತಾ ಜ್ಞಾನದಾಹವಾಗಿ ಸಂಶೋಧನಾ ಇಚ್ಛೆಯಾಗಿ ಮಾರ್ಪಡುವುದು ಕೆಲವರಲ್ಲಿ ಮಾತ್ರ. ಅಂತಹ ಕೆಲವರ ಪೈಕಿಗೆ ಸೇರುವವರು ಮಂಗಳೂರು ಬ್ಯಾರಿ ಇನ್‌ಸ್ಟಿಟ್ಯೂಷನ್‌ ಆಫ್‌ ಟೆಕ್ನಾಲಜಿಯಲ್ಲಿ ಮೆಕಾನಿಕಲ್‌ ಎಂಜಿನಿಯರಿಂಗ್‌ ಓದುತ್ತಿರುವ ವಿದ್ಯಾರ್ಥಿ ಮೊಹಮ್ಮದ್‌ ಸಲ್ಮಾನ್‌.

ಸಲ್ಮಾನ್‌ಗೆ ಮೊದಲಿನಿಂದಲೂ ಕಾರಿನ ಬಗ್ಗೆ ವಿಪರೀತ ಒಲವು. ಸದಾ ತಲೆಯಲ್ಲಿ ಕಾರಿನ ಬಗೆಗೇ ಕುತೂಹಲ ತುಂಬಿಕೊಂಡಿತ್ತು. ಅದಕ್ಕೆ ಸಂಬಂಧಪಟ್ಟಂತೆ ಏನಾದರೂ ಕಂಡುಹಿಡಿಯಬೇಕೆಂಬ ಆಲೋಚನೆ ಅವರಲ್ಲಿ ನಿರಂತರ ಸಾಗಿತ್ತು. ಅದರ ಫಲವಾಗಿ ಮೊದಲು, ತಮ್ಮ ಮಾರುತಿ 800 ಕಾರನ್ನು ಲಾಕ್‌ ಮಾಡುವ ವ್ಯವಸ್ಥೆಯನ್ನು ವಿಭಿನ್ನವಾಗಿ ವಿನ್ಯಾಸಗೊಳಿಸಿದರು.

ತಾನು ಸಂದೇಶ ಕಳಿಸಿದರೆ ಮಾತ್ರ ಲಾಕ್‌ ಆಗುವ, ತನ್ನ ಸಂದೇಶ ದೊರೆತರೆ ಮಾತ್ರ ಅನ್‌ಲಾಕ್‌ ಆಗುವಂತೆ ಕಾರನ್ನು ವಿನ್ಯಾಸಗೊಳಿಸಿದ್ದಾರೆ. ಹೀಗೆ ತಮ್ಮಷ್ಟಕ್ಕೆ ತಾವೇ ಸಂಶೋಧನೆಯನ್ನು ಮಾಡುತ್ತಿದ್ದ ಸಲ್ಮಾನ್‌ ಕಾಲೇಜಿನಲ್ಲಿ ಪಠ್ಯದ ಸಲುವಾಗಿ ಪ್ರಾಯೋಗಿಕವಾಗಿಯೂ ಕಾರಿಗೆ ಸಂಬಂಧಿಸಿದ ಪ್ರಾಜೆಕ್ಟನ್ನೇ ಆಯ್ದುಕೊಂಡಿದ್ದಾರೆ. ಸ್ನೇಹಿತರ ಗುಂಪೂ ಬೆಂಬಲಿಸಿದ್ದರಿಂದ ಅವರು ಹಳೇ ಆಮ್ನಿ ಕಾರು ಖರೀದಿಸಿ ಪೆಟ್ರೋಲ್‌ ಜೊತೆಗೆ ನೀರನ್ನೂ ಇಂಧನವಾಗಿ ಬಳಸಿಕೊಂಡು ಹೆಚ್ಚು ಮೈಲೇಜ್‌ ಕೊಡುವ ಕಾರೊಂದನ್ನು ರೂಪಿಸಿದ್ದಾರೆ.

ನೀರು ಕುಡಿವ ಕಾರಿನ ಗುಟ್ಟೇನು ?
ನೀರನ್ನು ಇಂಧನವಾಗಿ ಬಳಸಿಕೊಳ್ಳುವ ಕಾರು ರೂಪಿಸುವ ಹಿಂದೆ ಒಂದು ಸಿದ್ಧಾಂತವಿಟ್ಟುಕೊಂಡರು. ಮೂಲ ವಸ್ತುಗಳ ಪೈಕಿ ಹೈಡ್ರೋಜನ್‌ ಅತ್ಯಂತ ಸಮರ್ಥ್ಯ. ನೀರಿನ ಕಣಗಳನ್ನು ವಿಭಜಿಸಿದರೆ ಹೈಡ್ರೋಜನ್‌ ಪಡೆಯುವುದು ಸಾಧ್ಯ ಎಂದು ಅರಿತ ಸಲ್ಮಾನ್‌, ಆ ದಿಕ್ಕಿನಲ್ಲಿ ಕಾರ್ಯಪ್ರವೃತ್ತರಾದರು.

‘ಸ್ವಲ್ಪ ಪೆಟ್ರೋಲ್‌ ಹಾಕಿದರೆ ಮುಂದೆ ಚಲಿಸುವ ಕಾರು, ಬಳಿಕ ನೀರಿನ ಕಣಗಳ ವಿಭಜನೆಯಿಂದ ದೊರೆಯುವ ಹೈಡ್ರೋಜನ್‌ ಅನ್ನು ಬಳಸಿಕೊಂಡು ಮುಂದಕ್ಕೆ ಓಡುತ್ತದೆ. ಈ ವಿಭಜನೆಯ ಪ್ರಕ್ರಿಯೆಗೆ ‘ಎಲೆಕ್ಟ್ರೋಲಿಸಿಸ್‌’ ವಿಧಾನವನ್ನು ಬಳಸಲಾಗುತ್ತದೆ. ಇದರಿಂದ ಪೆಟ್ರೋಲ್‌ ಉಳಿತಾಯ ಆಗುತ್ತದೆ’ ಎಂದು ಇದರ ತಂತ್ರವನ್ನು ವಿವರಿಸುತ್ತಾರೆ ಸಲ್ಮಾನ್‌.

ತಮ್ಮ ಈ ವಿನ್ಯಾಸಿತ ಕಾರಿಗೆ ಸಲ್ಮಾನ್ ಇಟ್ಟಿರುವ ಹೆಸರು ‘ಬಿಐಟಿ ವಾಟರ್‌ ಹೈಬ್ರೀಡ್‌ ಕಾರು’. ಮೆಕಾನಿಕಲ್‌ ಎಂಜಿನಿಯರಿಂಗ್‌ ಓದುತ್ತಿರುವ ಸಲ್ಮಾನ್‌ ಜೊತೆಗೆ ಈ ಪ್ರಾಜೆಕ್ಟ್‌ನಲ್ಲಿ ಮೌಶೀನ್‌, ಅಮೀರ್‌ ಸುಹೇಲ್‌, ಯಹತಾಶ್‌ ಕೂಡ ಕೈ ಜೋಡಿಸಿದ್ದಾರೆ.

‘ಸಿಎನ್‌ಜಿ/ಎಲ್‌ಪಿಜಿ ಇಂಧನವನ್ನು ಬಳಸುವ ಅವಕಾಶ ನಮ್ಮ ಮುಂದಿದೆ. ಅದೇ ರೀತಿಯಲ್ಲಿ ಇನ್ನಷ್ಟು ಅವಕಾಶಗಳ ಹುಡುಕಾಟ ಅನಿವಾರ್ಯವಾಗಿದೆ. ಯಾಕೆಂದರೆ ಪೆಟ್ರೋಲ್‌, ಮುಗಿಯುವ ಸಂಪನ್ಮೂಲವಾದ್ದರಿಂದ ಮುಂದಿನ ದಿನಗಳಲ್ಲಿ ಜೀವನಾವಶ್ಯಕತೆಗೆ ಬೇಕಾಗುವ ಸಂಪನ್ಮೂಲವನ್ನು ಹೊಂದಿಸಿಕೊಳ್ಳಬೇಕಾಗುತ್ತದೆ’ ಎನ್ನುತ್ತಾರೆ.

ಎಲೆಕ್ಟ್ರೋಲಿಸಿಸ್ ಯಂತ್ರವನ್ನು ಅಳವಡಿಸಲು ಆಮ್ನಿ ಕಾರಿಗೆ ಕೆಲವು ಬದಲಾವಣೆ ಮಾಡಲಾಗಿದೆ. ನೀರು ಹೈಡ್ರೋಜನ್‌ ಮತ್ತು ಆಕ್ಸಿಜನ್‌ ಆಗಿ ಬೇರ್ಪಟ್ಟ ಬಳಿಕ ಹೈಡ್ರೋಜನ್‌ ಕಂಬಷನ್‌ ಚೇಂಬರ್‌ಗೆ ತೆರಳುತ್ತದೆ. ಆಕ್ಸಿಜನ್‌ ಉಪ ಉತ್ಪನ್ನವಾಗಿ ಬಿಡುಗಡೆಯಾಗುತ್ತದೆ. ಒಟ್ಟಿನಲ್ಲಿ ಆಮ್ನಿ ಕಾರು ಒಂದು ಲೀಟರ್‌ ಪೆಟ್ರೋಲ್‌ ಮತ್ತು ನೀರಿನ ಹೆಚ್ಚುವರಿ ಇಂಧನದೊಂದಿಗೆ 25ರಿಂದ 26 ಕಿಲೋ ಮೀಟರ್ ದೂರ ಪ್ರಯಾಣಿಸಬಹುದು. ಅಂದರೆ ಶೇ 42ರಷ್ಟು ಓಟದ ಸಾಮರ್ಥ್ಯ ಹೆಚ್ಚಾಗುತ್ತದೆ. ಸಾಮಾನ್ಯ ಆಮ್ನಿ ವಾಹನ ಲೀಟರ್‌ಗೆ 16 ಕಿ.ಮೀ. ದೂರ ಪ್ರಯಾಣಿಸಬಲ್ಲುದು. ಆಮ್ನಿ ಮಾತ್ರವಲ್ಲ, ಇತರ ಡೀಸೆಲ್‌ ಕಾರುಗಳಿಗೂ ಈ ರೀತಿಯ ಬದಲಾವಣೆಯನ್ನು ಮಾಡಬಹುದು ಎನ್ನುತ್ತಾರೆ ಸಲ್ಮಾನ್‌. ಇದರಿಂದ ಮಾಲಿನ್ಯ ಪ್ರಮಾಣವೂ ತಗ್ಗುತ್ತದೆ ಎನ್ನುವುದು ಅವರು ನೀಡುವ ವಿವರಣೆ.

ಬಿಐಟಿಯ ಮೆಕಾನಿಕಲ್‌ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಪ್ರೊ. ರೌನಾಖ್‌ ಅಹ್ಮದ್‌ ಅವರು ಈ ವಿದ್ಯಾರ್ಥಿಗಳಿಗೆ ಹುಮ್ಮಸ್ಸಿನಿಂದ ಮಾರ್ಗದರ್ಶನ ಮಾಡಿದ್ದಾರೆ. ಮೆಕಾನಿಕಲ್‌ ಎಂಜಿನಿಯರಿಂಗ್‌ ವಿಭಾಗದ ಎಲ್ಲರೂ ಕಾರನ್ನು ರೂಪಿಸಲು ಸಹಾಯ ಮಾಡಿದ್ದಾರೆ. ಸ್ನೇಹಿತರು ಹಗಲು ರಾತ್ರಿ ಎನ್ನದೇ ಇದನ್ನು ಸಾಕಾರಗೊಳಿಸಲು ಪ್ರೋತ್ಸಾಹ ನೀಡಿದ್ದಾರೆ, ಸಹಾಯ ಮಾಡಿದ್ದಾರೆ ಎಂದು ಕೃತಜ್ಞತೆಯನ್ನು ಸಲ್ಮಾನ್‌ ಸಲ್ಲಿಸುತ್ತಾರೆ.

ಮನೆಗೆ ಬಂದವರಿಗೆ ಕಾರಿನ ಮೇಲಿರುವ ಹೊದಿಕೆಯನ್ನು ಸರಿಸಿ ಅಪ್ಪ ಅಬ್ದುಲ್‌ ಖಾದರ್‌ ಮಗನ ಸಾಧನೆಯ ಬಗ್ಗೆ ಅಕ್ಕರೆ ವ್ಯಕ್ತಪಡಿಸುತ್ತಾರೆ. ‘ಪ್ರಾಜೆಕ್ಟ್‌ ಮುಗಿದ ಮೇಲೆ ಕಾರನ್ನು ಕಾಲೇಜಿನಲ್ಲಿಯೇ ಇರಿಸಿಕೊಳ್ಳಲು ಹೇಳಿದ್ದರು. ಆದರೆ ಈ ವಿನ್ಯಾಸ ಮತ್ತು ಸಂಶೋಧನೆಗೆ ಸುಮಾರು ₹1 ಲಕ್ಷ ಖರ್ಚು ಮಾಡಿದ್ದೇವೆ. ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸಹಾಯವಿದ್ದಿದ್ದರೆ  ಕಾರನ್ನು ಕಾಲೇಜಿನಲ್ಲಿಯೇ ಇರಿಸಬಹುದಿತ್ತು. ಅನಿವಾರ್ಯವಾಗಿ ಕಾರನ್ನು ಮನೆಯಲ್ಲಿಯೇ ಇರಿಸಬೇಕಾಯಿತು’ ಎಂದು ಮಂಗಳೂರಿನ ಪಾಂಡೇಶ್ವರ ಬಳಿ ಇರುವ ತಮ್ಮ ಮನೆಯ ಅಂಗಳದಲ್ಲಿರುವ ಕಾರನ್ನು ಅವರು ತೋರಿಸುತ್ತಾರೆ.

‘ಕಾರಿಗೆ ಇಷ್ಟೊಂದು ಯಾಕೆ ಖರ್ಚು ಮಾಡುತ್ತೀಯಾ ಎಂದು ಅಪ್ಪ ಬೈತಾರೆ. ಅಮ್ಮನೂ ಈ ಕಾರಿನ ಗೀಳು ಯಾಕೆಂದು ಬೈಯುವುದುಂಟು. ಆದರೆ ನೀರನ್ನು ಬಳಸಿ ಕಾರಿನ ವೇಗ ಹೆಚ್ಚಿಸುವ ಈ ಪ್ರಾಜೆಕ್ಟ್‌ ನೋಡಿ ಅವರಿಗೆ ಖುಷಿಯಾಗಿದೆ. ಅದೇ ನನ್ನಲ್ಲಿ ಇನ್ನಷ್ಟು ಹುರುಪು ತುಂಬಿದೆ. ಈ ಹಾದಿಯಲ್ಲಿ ನನ್ನ ಹುಡುಕಾಟವನ್ನು ಮುಂದುವರೆಸುತ್ತೇನೆ’ ಎಂದು ಸಲ್ಮಾನ್ ಹೇಳುವಾಗ, ಅಮ್ಮ ಮೆಹರುನ್ನೀಸಾ ಕಣ್ಣಲ್ಲಿ ಮಗನ ಸಾಧನೆ ಕಂಡು ತೃಪ್ತಿ ತುಂಬಿತ್ತು.
- ಚಿತ್ರಗಳು: ಗೋವಿಂದ ರಾಜ ಜವಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT