ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇದು ನನ್ನ ಜೀವಮಾನದ ಸಾಧನೆ’

Last Updated 24 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಧಾರವಾಡದ ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನೀಡುವ 2016ರ ಯುವ ಪುರಸ್ಕಾರಕ್ಕೆ ಪಂಡಿತ್ ಬಸವರಾಜ ರಾಜಗುರು ಅವರ ಶಿಷ್ಯೆ, ಗ್ವಾಲಿಯರ್ ಘರಾಣಾದ ಗಾಯಕಿ ರೋಹಿಣಿ ದೇಶಪಾಂಡೆ (ಜೋಶಿ) ಭಾಜನರಾಗಿದ್ದಾರೆ.

ತಮ್ಮ ಮೇಲೆ ಅತೀವ ಪ್ರೀತಿ, ಅಭಿಮಾನ ಇಟ್ಟುಕೊಂಡಿದ್ದ ಗುರುಗಳ ಹೆಸರಿನ ಪ್ರಶಸ್ತಿ ಸ್ವೀಕರಿಸುತ್ತಿರುವುದು ತಮ್ಮ ಜೀವಮಾನದ ಸಾಧನೆ ಎನ್ನುತ್ತಾರೆ ಅವರು. ಹಾವೇರಿ ಜಿಲ್ಲೆ ಶಿಗ್ಗಾವಿಯಲ್ಲಿ ಜನಿಸಿದ ರೋಹಿಣಿ, ಗುರುವನ್ನು ಹುಡುಕಿಕೊಂಡು, ಸಂಗೀತವನ್ನೇ ಉಸಿರಾಡುವ ಧಾರವಾಡ ನೆಲಕ್ಕೆ ಕಾಲಿಟ್ಟವರು. ಪಂ. ಬಸವರಾಜ ರಾಜಗುರು ಅವರ ಶಿಷ್ಯೆಯಾಗಿ ಹೆಸರು ಮಾಡಿದವರು. 

ಶಿಗ್ಗಾವಿಯವರೇ ಆದ, ವಯಲಿನ್ ವಾದಕ ಹನುಮಂತಪ್ಪ ಕಾಮನಹಳ್ಳಿ ಹಾಗೂ ಹುಬ್ಬಳ್ಳಿಯ ಆರ್.ಜಿ. ದೇಸಾಯಿ ಅವರಿಂದ ಆರಂಭಿಕ ಸಂಗೀತ ಶಿಕ್ಷಣ ಪಡೆದ ರೋಹಿಣಿ, ಹೈಸ್ಕೂಲಿನ ಮೆಟ್ಟಿಲು ಹತ್ತುವ ವೇಳೆಗೆ ರಾಜಗುರು ಅವರ ಶಿಷ್ಯೆಯಾಗಿದ್ದರು. ಅವರ ಶಿಷ್ಯವೃಂದದಲ್ಲೇ ಅತ್ಯಂತ ಕಿರಿಯಳಾಗಿದ್ದ ತಮ್ಮ ಮೇಲೆ ಗುರುಗಳಿಗೆ ವಿಶೇಷ ಅಕ್ಕರೆ ಇತ್ತು ಎಂದು ಸ್ಮರಿಸಿಕೊಳ್ಳುತ್ತಾರೆ ರೋಹಿಣಿ.

‘ಭಾಳ್ ಛಲೋ ಹಾಡ್ತಾಳ’ ಎಂದು ಅವರಿಂದ ಸೈ ಎನಿಸಿಕೊಂಡ ಅವರು, ಅದನ್ನು ಹೌದು ಮಾಡಿಯೂ ತೋರಿದವರು. ದಾಸರ ಪದ, ವಚನ ಸಂಗೀತ, ನಾಟ್ಯ ಸಂಗೀತ, ಮರಾಠಿ ಅಭಂಗಗಳ ಕಡೆಗೆ ಹೆಚ್ಚು ಒಲವಿರುವ ಅವರು ಸಂಗೀತದ ಸಾಧನೆಯ ಹಾದಿಯ ಪಯಣವನ್ನು ತುಂಬ ಆನಂದಿಸಿದವರು.

‘ಶಾಸ್ತ್ರೀಯ ಸಂಗೀತ ಅಪಾರ ಶ್ರದ್ಧೆಯನ್ನು ಬೇಡುತ್ತದೆ. ಗುರುವಿನ ಮುಖೇನ ದೀರ್ಘಕಾಲದ ಸಾಧನೆಯನ್ನು ಕೇಳುತ್ತದೆ. ಅಂದಾಗ ಮಾತ್ರ ಸ್ವಲ್ಪವಾದರೂ ನಮಗೆ ಅದರ ಜ್ಞಾನ ದಕ್ಕುತ್ತದೆ’ ಎನ್ನುತ್ತಾರೆ ಅವರು. ಸ್ವತಃ ತಮ್ಮ ಗುರುಗಳೇ ತಾವಿನ್ನೂ ಕಲಿಯುವುದು ಬಹಳಷ್ಟಿದೆ ಎನ್ನುತ್ತಿದ್ದರು ಎಂದು ಹೇಳುವ ಮೂಲಕ ಸಂಗೀತ ಬೇಡುವ ವಿನಯವಂತಿಕೆಯನ್ನೂ ಎದುರಿಗಿಟ್ಟರು.

‘ಹೈಸ್ಕೂಲು ಮುಗಿಯುವವರೆಗೆ ಪ್ರತೀ ಶನಿವಾರ ಧಾರವಾಡಕ್ಕೆ ಹೋಗುತ್ತಿದ್ದೆ. ಅಲ್ಲಿ ಮಾಳಮಡ್ಡಿಯಲ್ಲಿ ಮಹಿಷಿ ಎನ್ನುವ ಸಂಬಂಧಿಕರೊಬ್ಬರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದೆ. ಶನಿವಾರ, ಭಾನುವಾರ ಗುರುಗಳ ಬಳಿ ಅಭ್ಯಾಸ ಮಾಡಿ ಮತ್ತೆ ಊರಿಗೆ ಮರಳುತ್ತಿದ್ದೆ. ಹೈಸ್ಕೂಲು ಮುಗಿಯುತ್ತಲೇ ಧಾರವಾಡದ ಕರ್ನಾಟಕ ಕಾಲೇಜಿನಲ್ಲೇ ಪ್ರವೇಶ ಪಡೆದು, ಸಂಗೀತ ವಿಷಯ ಆಯ್ದುಕೊಂಡೆ. ಅಲ್ಲಿಂದ ಸಂಗೀತದ ಹಾದಿ ನಿಚ್ಚಳವಾಯಿತು. ಮನೆಯಲ್ಲಿ ಮೊದಲಿನಿಂದಲೂ ಸಂಗೀತದ ವಾತಾವರಣ ಇತ್ತು. ಅಪ್ಪ ಶ್ರೀಪಾದ ದೇಶಪಾಂಡೆ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದರು, ಜೊತೆಗೆ ತಬಲಾ ವಾದಕರು ಕೂಡ. ಮನೆಗೆ ಆಗಾಗ ಹಲವಾರು ಸಂಗೀತ ಕಲಾವಿದರು ಭೇಟಿ ನೀಡುತ್ತಿದ್ದರು.

ಗಂಗೂಬಾಯಿ ಹಾನಗಲ್, ಕೃಷ್ಣಾ ಹಾನಗಲ್ ಸಾಕಷ್ಟು ಸಲ ನಮ್ಮ ಮನೆಗೆ ಬಂದಿದ್ದಾರೆ. ಮೊದಲಿನಿಂದಲೂ ಆ ವಾತಾವರಣದಲ್ಲೇ ಬೆಳೆದಿದ್ದರಿಂದ ಸಂಗೀತ ಕಲಿಕೆಗೆ ತುಂಬ ಪ್ರೋತ್ಸಾಹ ಸಿಕ್ಕಿತು’ ಎಂದು ಸಂಗೀತ ಶಿಕ್ಷಣದ ಒಳ್ಳೆಯ ಶುರುವಾತನ್ನು ಸಂಭ್ರಮಿಸಿದರು.

‘ತಂದೆ-ತಾಯಿ, ಅಣ್ಣಂದಿರು ಎಲ್ಲರೂ ಬೆಂಬಲಕ್ಕಿದ್ದರು. ಆರನೇ ತರಗತಿಯಲ್ಲಿದ್ದಾಗ ಹಾವೇರಿಯ ಎಲ್‌ಐಸಿ ವತಿಯಿಂದ ನಡೆದ ಕಾರ್ಯಕ್ರಮವೇ ನನ್ನ ಮೊದಲ ಕಾರ್ಯಕ್ರಮ. ಶ್ರೋತೃಗಳು ತುಂಬು ಮನಸ್ಸಿನಿಂದ ಬೆನ್ನು ತಟ್ಟಿದರು. ಕಲಾವಿದರಿಗೆ, ಅದರಲ್ಲೂ ಹೆಣ್ಣುಮಕ್ಕಳಿಗೆ ಇಂಥದೊಂದು ಪ್ರೋತ್ಸಾಹ, ಬೆಂಬಲ ತುಂಬ ಅಗತ್ಯ. ಕೌಟುಂಬಿಕ ಜವಾಬ್ದಾರಿಯನ್ನು ಪೂರೈಸಿ, ಸಂಗೀತಕ್ಕೂ ಸಮಯ ಮೀಸಲಿರಿಸುವ ಅವರು ಹೆಚ್ಚು ಶ್ರಮ ವಹಿಸುತ್ತಾರೆ’ ಎನ್ನುತ್ತಾರೆ ರೋಹಿಣಿ.

ಮದುವೆಯಾದ ಬಳಿಕ ಗೋವಾದಲ್ಲಿ ನೆಲೆಸಿರುವ ಈ ಕಲಾವಿದೆ, ಆ ಭಾಗದಲ್ಲಿ ತಮ್ಮ ಸಂಗೀತ ಸುಧೆ ಹರಿಸುತ್ತಿದ್ದಾರೆ. ಅದಕ್ಕೆ ಇಂಬಾಗಿ ನಿಂತ ತಮ್ಮ ಪತಿ, ಪೆಥಾಲಜಿಸ್ಟ್ ಡಾ. ಪದ್ಮನಾಭ ಜೋಶಿ, ಬಸವರಾಜ ರಾಜಗುರು ಅವರ ಪತ್ನಿ ಭಾರತೀದೇವಿ, ಪುತ್ರ ನಿಜಗುಣ ರಾಜಗುರು, ಟ್ರಸ್ಟ್‌ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅವರೆಲ್ಲರ ಸಹಕಾರ– ಬೆಂಬಲವನ್ನು ನೆನೆಯುತ್ತಾರೆ. 

ಪಂ. ಎಂ. ವೆಂಕಟೇಶ್ ಕುಮಾರ್, ವಿದುಷಿ ವೀಣಾ ಸಹಸ್ರಬುದ್ಧೆ ಅವರ ಬಳಿಯಲ್ಲಿಯೂ ಎರಡು ವರ್ಷ ಸಂಗೀತ ಅಭ್ಯಾಸ ಮಾಡಿರುವ ರೋಹಿಣಿ, ಸಾಹಿತ್ಯ ಸಮ್ಮೇಳನ, ಕದಂಬೋತ್ಸವ, ಚಾಲುಕ್ಯೋತ್ಸವ, ಆಕಾಶವಾಣಿ ಸಂಗೀತ ಸಭಾ, ಭಾರತೀಯ ವಿದ್ಯಾಭವನ- ಮುಂಬೈ ಮತ್ತು ಬೆಂಗಳೂರು, ಮರಾಠಾ ಮಂಡಳ-ಹೈದರಾಬಾದ್‌ನಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಕುಂದಗೋಳದ ಸವಾಯಿ ಗಂಧರ್ವ ಪುಣ್ಯತಿಥಿ, ಗದುಗಿನಲ್ಲಿ ಪಂ. ಪಂಚಾಕ್ಷರಿ ಗವಾಯಿಗಳ ಪುಣ್ಯತಿಥಿ ಕಾರ್ಯಕ್ರಮದ ವೇದಿಕೆಗಳಲ್ಲಿ ಗಾಯನ ನಡೆಸಿಕೊಟ್ಟಿರುವ ಅವರು, ಮಹಾರಾಷ್ಟ್ರ, ತಮಿಳುನಾಡಿನ ಹಲವೆಡೆ ಹಾಗೂ ಬಳ್ಳಾರಿ, ಸಂಡೂರ, ಚಿಟಗುಪ್ಪ, ಮೈಸೂರು, ಶಿರಸಿ-ಬನವಾಸಿ, ಕೊಪ್ಪಳ, ದಾವಣಗೆರೆ, ಉಡುಪಿ, ಕಾರ್ಕಳ, ಮಂಗಳೂರು ಸೇರಿದಂತೆ ರಾಜ್ಯದ ಉದ್ದಗಲಕ್ಕೂ ಕಾರ್ಯಕ್ರಮ ನೀಡಿದ್ದಾರೆ.

ಕೇಂದ್ರ ಸರ್ಕಾರದ ಪ್ರತಿಭಾನ್ವೇಷಣಾ ಶಿಷ್ಯವೇತನ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಶಿಷ್ಯವೇತನ ಪಡೆದು, ಎಳೆಯ ವಯಸ್ಸಿನಲ್ಲೇ ಪಂ. ಪುಟ್ಟರಾಜ ಗವಾಯಿಗಳು, ಗಂಗೂಬಾಯಿ ಹಾನಗಲ್, ಚಂದ್ರಶೇಖರ ಪುರಾಣಿಕ, ಮಾಲಿನಿ ರಾಜೂರಕರ್‌, ಪಂ.ವಿನಾಯಕ ತೊರವಿ, ಸಿತಾರ್ ವಾದಕ ಬಾಲೇಖಾನ್ ಮುಂತಾದ ಸಂಗೀತ ದಿಗ್ಗಜರಿಂದ ಆಶೀರ್ವಾದಕ್ಕೆ ಭಾಜನರಾದ ಹೆಮ್ಮೆ ಅವರದು. ಡಾ. ರಾಜಕುಮಾರ್, ಮತ್ತೂರು ಕೃಷ್ಣಮೂರ್ತಿ, ಎಂ.ಎಂ. ಕಲಬುರ್ಗಿ ಅವರೂ ರೋಹಿಣಿ ಗಾಯನವನ್ನು ಮೆಚ್ಚಿ, ಹರಸಿದ್ದಾಗಿ ರೋಹಿಣಿ ತಂದೆ ಶ್ರೀಪಾದ ದೇಶಪಾಂಡೆ ನೆನಪಿಸಿಕೊಳ್ಳುತ್ತಾರೆ.

‘ಚೆನ್ನೈನಲ್ಲಿ ಕಾರ್ಯಕ್ರಮವೊಂದನ್ನು ನೀಡಿದಾಗ ವೇದಿಕೆ ಮೇಲಿದ್ದ ಡಾ. ಪಿ.ಬಿ. ಶ್ರೀನಿವಾಸ್ ಅವರು ತುಂಬ ಮೆಚ್ಚಿಕೊಂಡು, ನನ್ನ ಕುರಿತು ಒಂದು ಪದ್ಯವನ್ನೇ ಬರೆದು, ಓದಿದರು! ಅದು ನನ್ನ  ಜೀವನದ ಅವಿಸ್ಮರಣೀಯ ಗಳಿಗೆ’ ಎನ್ನುತ್ತಾರೆ ರೋಹಿಣಿ. ಅವರೆಲ್ಲರ ಹಾರೈಕೆಗಳೇ ತಮ್ಮನ್ನು ಇಲ್ಲಿಗೆ ತಂದು ನಿಲ್ಲಿಸಿದೆ ಎಂದು ಕೃತಜ್ಞತೆ ಸಲ್ಲಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT