ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ ಶಬ್ದ, ಆ ಹಸಿರು, ಈ ಉಸಿರು

ಸಂಭ್ರಮದ ಶ್ರಾವಣ
Last Updated 24 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ನಮ್ಮ ಊರಿನಲ್ಲಿ ಪ್ರಾಥಮಿಕ ಹಂತ ಕಲಿತ ಮೇಲೆ ಪಕ್ಕದ ಊರಾದ ಮಾಕಳಿಗೆ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿದೆ. ಮಾಕಳಿ ಸಮೀಪದಲ್ಲೇ ಇರುವ ಕೃಷ್ಣಗಿರಿ ಬೆಟ್ಟಕ್ಕೆ ಶ್ರಾವಣದ ತಿಂಗಳಲ್ಲಿ ಮೇಷ್ಟ್ರುನಮ್ಮನ್ನೆಲ್ಲಾ ಕರೆದುಕೊಂಡು ಹೋಗುತ್ತಿದ್ದರು. ಮಧ್ಯೆ ಮಧ್ಯೆ ಮೇಷ್ಟ್ರು ಕಣ್ತಪ್ಪಿಸಿ ರಸ್ತೆ ಪಕ್ಕದ ನೇರಳೆ ಮರದಿಂದ ಬಿದ್ದಿದ್ದ ಹಣ್ಣುಗಳನ್ನು ತಿಂದು ಮುಂದೆ ಸಾಗುತ್ತಿದ್ದೆವು. ಆ ಬೆಟ್ಟ ಶ್ರಾವಣದ ನಾಲ್ಕೂ ವಾರಗಳಲ್ಲಿ ಜನರಿಂದ ಗಿಜಿಗುಡುತ್ತಿತ್ತು. ದಾಸಯ್ಯಗಳು ತಮ್ಮ ಬೌನಾಶಿಯೊಂದಿಗೆ ಬೆಟ್ಟದ ತಪ್ಪಲಲ್ಲಿ ಕುಳಿತು ಬಂದವರಿಗೆಲ್ಲಾ ನಾಮ ಹಾಕುತ್ತಿದ್ದರು. ಅವರನ್ನು ನೋಡುವ ಕುತೂಹಲ ನಮಗೆ. ಬೆಟ್ಟ ಹತ್ತಿ ಇಳಿದರೆ ಏನೋ ಗೆದ್ದಂಥ ಸಂಭ್ರಮ  ನಮ್ಮದು. ಇದೆಲ್ಲಾ ಆದ ಮೇಲೆ ದಾಸಯ್ಯರು ಮತ್ತು ಹರಕೆ ಹೊತ್ತ ಭಕ್ತರು ಸಕ್ಕರೆ ಹುರಿಗಡಲೆ ಹಂಚುತ್ತಿದ್ದರು. ಅದನ್ನು ಮೆಲ್ಲುತ್ತಲೇ ಬೆಟ್ಟದ ಸೌಂದರ್ಯವನ್ನು ಆಸ್ವಾದಿಸುತ್ತಿದ್ದೆವು.

ಶ್ರಾವಣದ ತಿಂಗಳಲ್ಲಿ ನಮ್ಮೂರಲ್ಲಿ ಪ್ರತಿ ಶನಿವಾರವೂ ಒಂದಲ್ಲಾ ಒಂದು ಮನೆಯಲ್ಲಿ ಶ್ರಾವಣದ ಆಚರಣೆ ನಡೆಯುತ್ತದೆ. ಶ್ರಾವಣಕ್ಕೆ ಸಾಮಾನ್ಯವಾಗಿ ಮಾಂಸದೂಟ ಇರುತ್ತಿತ್ತು. ಶ್ರಾವಣ ಮಾಡುವ ಮನೆಯವರು ಅಕ್ಕಪಕ್ಕದ ಮನೆಯವರನ್ನೆಲ್ಲಾ ಕರೆದು ಊಟ ಹಾಕುವುದು ಪದ್ಧತಿ. ನಾವು ಸಣ್ಣ ಹುಡುಗರಾಗಿದ್ದಾಗ ಶ್ರಾವಣದಲ್ಲಿ ಮಾಡುವ ಆ ಕೋಳಿ ಸಾರಿನ ಘಮಕ್ಕೆ ಕಾಯುತ್ತಿದ್ದೆವು. ಎಷ್ಟೊತ್ತಿಗೆ ಸಂಜೆಯಾಗ್ತದೆ, ಯಾವಾಗ ಊಟಕ್ಕೆ ಕರೀತಾರೆ ಎಂದು ಕಾಯುತ್ತಿದ್ದೆವು. ಕರೆದ ಮೇಲೆ ಚಡ್ಡಿಗೆ ಪೇರಿಸಿದ್ದ ಉಡದಾರ ಸಡಿಲ ಮಾಡಿ ಸರಿಯಾಗಿ ಹೊಟ್ಟೆ ತುಂಬಾ ಪೇರಿಸುತ್ತಿದ್ದೆವು.

ಶ್ರಾವಣದ ಹೊತ್ತಿಗೆಲ್ಲಾ ಊರ ರಾಗಿ ಪೈರುಗಳು ಬೆಳೆದು ನಿಲ್ಲುತ್ತಿದ್ದವು. ರಾಗಿ ಪೈರು, ಹೊಲಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಸಿಂಗರಿಸಿಕೊಂಡ ಹೆಣ್ಣಂತೆ ಕಂಗೊಳಿಸುತ್ತಿದ್ದವು ಅವು. ಅಲ್ಲಿ ಬೆರಕೆ ಸೊಪ್ಪು ತಿನ್ನುವುದೆಂದರೆ ಬಲು ಸಂತೋಷದ ಸಂಗತಿ ಮತ್ತು ಅಷ್ಟೇ ಬಡತನವೂ ಇತ್ತು. ಸಕಲ ಜೀವಕ್ಕೆ ಶ್ರಾವಣದ ತಿಂಗಳು ಸೌಂದರ್ಯ ಕೊಡುವ ಮಾಸ. ಚಿಗುರೊಡೆದ ಹಸಿರು ಹುಲ್ಲುಗಾವಲಿನ ಮೇಲೆ ಕೂರುವುದು, ಮಲಗುವುದು ಒಂದು ರೀತಿ ಸುಖಾನುಭವ. ಎಲ್ಲೇ ಹಸಿರು ಹುಲ್ಲು ಕಂಡರೂ ಒಂದಿಷ್ಟು ಸಮಯ ಕೂತು, ಮಲಗಿದರೆ ಸಿಗುವ ಸಮಾಧಾನವೇ ಬೇರೆ. ಶ್ರಾವಣದ ಸಂಜೆಯ ಹೊತ್ತಿಗೆಲ್ಲಾ ಶುರುವಾಗುವ ಪೂಜೆಗಳು, ಬಾಂಕಿಯ ನಾದ, ಜಾಗಟೆಯ ಶಬ್ದ ಕಿವಿಗೆ ಹಿತಕರವಾಗಿ ಕೇಳಿಸುತ್ತಿತ್ತು. ಪಚ್ಚೆ ಪೈರುಗಳ ಹಿತಾನುಭವ, ಆಗ ತಾನೆ ಮೊಳಕೆಯೊಡೆದು ಭೂಮಿ ಸೀಳಿಕೊಂಡು ಬರುವ ಕಾಳುಗಳು ಮುಂಗಾರಿನ ಮಳೆಯ ಬೇಡುತ್ತಾ ಬಾಗಿ ಬಳುಕುವ ಸುಂದರ ಸೊಬಗಿನ ಚಿತ್ರ ಶ್ರಾವಣದಲ್ಲಿ ಮಾತ್ರ ಸಿಗುತ್ತದೆ. ಇವೆಲ್ಲಾ ನನ್ನ ಅನುಭವಕ್ಕೆ ದಕ್ಕುತ್ತವೆ.
- ಶಿವರಾಜ ಬ್ಯಾಡರಹಳ್ಳಿ ಬೆಂಗಳೂರು

ಧೋ ಎಂದು ಸುರಿವ ಮಳೆಯೊಂದಿಗೆ

ಶ್ರಾವಣ ಎಂದ ಕೂಡಲೇ ನೆನಪಾಗುವುದು, ಹಸಿರು ವಾತಾವರಣದ ನಡುವೆ ಧೋ ಎಂದು ಸುರಿಯುವ ಮುಂಗಾರು ಮಳೆಯ ಮಧ್ಯ ನಮ್ಮ ಮನೆಯಲ್ಲಿ ನಡೆಯುತ್ತಿದ್ದ ‘ಮಂಗಳ ಗೌರಿ ಪೂಜೆ. ಅಷ್ಟೇನೂ ಉತ್ತಮವಾಗಿರದಿದ್ದ ಹಣಕಾಸಿನ ಸ್ಥಿತಿ ಮಧ್ಯೆಯೂ ಅಪ್ಪ ಕೊಟ್ಟ ಐವತ್ತು ರೂಪಾಯಿಗಳಲ್ಲೇ ಅಮ್ಮ ಮತ್ತು ನಾವು ಮೂವರು ಮಕ್ಕಳು ಸೋಮವಾರ ಸಂಜೆಯೇ ಪೂಜಾ ಸಾಮಗ್ರಿಗಳನ್ನು ಖರೀದಿಸಿ ತರುತ್ತಿದ್ದೆವು. ಮಂಗಳವಾರ ಶಾಲೆ ಮುಗಿಸಿ ಬರುವಷ್ಟರಲ್ಲಿ ಶೋಭಾಯಮಾನಳಾದ ‘ಮಂಗಳ ಗೌರಿ’ ಮನೆಯಲ್ಲಿ ರಾರಾಜಿಸುತ್ತಿದ್ದಳು. ನನ್ನ ತಮ್ಮನಿಗೆ ದೇವರಿಗಿಂತ ದೇವರ ಮುಂದಿರುವ ಹಣ್ಣುಗಳ ಮೇಲೇ ಪ್ರೀತಿ ಜಾಸ್ತಿ! ಪೂಜೆ ಇಳಿಸುವುದನ್ನೇ ಕಾಯುತ್ತಿದ್ದ! ಕನಿಷ್ಠ ಪಕ್ಷ ಈ ನೆಪದಿಂದಾದರೂ ತಿನ್ನಲು ಹಣ್ಣು, ಪಾಯಸ, ಕೋಸಂಬರಿಗಳು ಸಿಗುತ್ತಿದ್ದವು. ಅಮ್ಮನಿಗೆ ಕೊನೇ ವಾರ ದೇವರಿಗೆ ಏರಿಸಿದ್ದ ಹೊಸಾ ಸೀರೆ! 

ಅಂದು ಸಂಜೆ ನಮ್ಮ ನೆರೆಕೆರೆಯವರನ್ನು ಕರೆಸಿ ಉಡಿ ತುಂಬಿ ಪ್ರಸಾದ, ಪಾನಕಗಳನ್ನು ಕೊಟ್ಟು ಉಪಚರಿಸುತ್ತಿದ್ದೆವು. ಹೀಗೆ ಶ್ರಾವಣ ಪೂರ್ತಿ ಪೂಜೆ, ಆರತಿ, ಕಥಾಶ್ರವಣ, ಪ್ರಸಾದ ಎಂದು ಕಳೆಯುತ್ತಿದ್ದ ನಮಗೆ ಶ್ರಾವಣ ಮಾಸ ಮುಗಿದಿದ್ದೇ ಗೊತ್ತಾಗುತ್ತಿರಲಿಲ್ಲ. ಅಮ್ಮನ ಪೂಜೆ, ಸಂತೃಪ್ತತೆ, ಸೌಹಾರ್ದತೆ, ಸಂತೋಷ ಕಂಡುಕೊಳ್ಳಲು ನಾನಿನ್ನೂ ಪ್ರಯತ್ನಿಸುತ್ತಿರುವೆ. ಪ್ರತಿ ಶ್ರಾವಣವೂ ಮಳೆಯೊಂದಿಗೆ ಈ ನೆನಪುಗಳನ್ನೂ ಹೊತ್ತು ತರುತ್ತದೆ.
- ಅನುಪಮಾ. ಆರ್‌. ಶಹಾಪುರ

ಕುರುಕಲು ತಿಂಡಿಗಳ ಮೆಲ್ಲುತ್ತಾ...

ಶ್ರಾವಣ ಬರುತ್ತಿದ್ದಂತೆ ಜಿಟಿಜಿಟಿ ಮಳೆ; ಕುರುಕುರು ತಿಂಡಿ; ಹೊಸ ಹೊಸ ಬಟ್ಟೆ. ಶ್ರಾವಣದ ಮಳೆ ಒಮ್ಮೆ ಪ್ರಾರಂಭವಾದರೆ ಜೋಗುಳ ಹಾಡಿದಂತೆ ಬರುತ್ತಾ ಇರುತ್ತದೆ. ನಿಂತರೂ ಮೋಡ ಕವಿದಿರುತ್ತದೆ. ಅದೊಂದು ಹಿತವಾದ ವಾತಾವರಣ.

ನಾನು ಚಿಕ್ಕವಳಿದ್ದಾಗ ಧಾರವಾಡದಲ್ಲಿದ್ದದ್ದು. ಶ್ರಾವಣದ ಮೊದಲ ಹಬ್ಬ ನಾಗರ ಪಂಚಮಿಗೆ ನೈವೇದ್ಯಕ್ಕೆಂದು ಥರಥರದ ಉಂಡೆಗಳು ತಯಾರಾಗುತ್ತಿದ್ದವು. ತಂಬಿಟ್ಟಿನ ಉಂಡೆ, ರವೆ ಉಂಡೆ, ಚುರುಮುರಿ ಉಂಡೆ, ಹೀಗೆ. ಆಗ ನಾವು ಆಡುತ್ತಿದ್ದ ಜೋಕಾಲಿ ಆಟ, ಹಾಕುತ್ತಿದ್ದ ಝರಿ ಲಂಗಗಳು ಇವೆಲ್ಲವೂ ನೆನಪಲ್ಲಿವೆ. ನಮ್ಮ ಚಾಳಿನ ಎದುರು ಸಾಲಾಗಿ ಹುಣಿಸೆ ಮರಗಳಿದ್ದವು. ಅವುಗಳಲ್ಲಿ ಮಜಬೂತಾದ ಒಂದು ಮರ ಆರಿಸಿ, ಅದರ ಒಂದು ಕೊಂಬೆಗೆ ಬಾವಿ ಹಗ್ಗ ಕಟ್ಟಿದರೆ ಜೋಕಾಲಿ ತಯಾರು. ನಾವೆಲ್ಲಾ ಒಬ್ಬೊಬ್ಬರಾಗಿ ಜೋಕಾಲಿ ಆಡಲು ಶುರು. ಜೋಕಾಲಿ ಹತ್ತಿ ಜೀಕುತ್ತಿದ್ದರೆ, ಗಾಳಿಯಲ್ಲಿ ಹಾರಾಡುವ ಅನುಭವ; ಅದರ ಮಜವೇ ಮಜ. ಯಾರು ಹೆಚ್ಚು ಮೇಲೆ ತೂಗುತ್ತಾರೋ ಅವರಿಗೆ ಬಹುಮಾನಗಳೂ ಇದ್ದವು. ಒಮ್ಮೆ ನನ್ನ ತಮ್ಮ ಬಹುಮಾನದ ಆಸೆಗೆ ಮೇಲೇರಿ ಜೋಕಾಲಿ ಆಡುತ್ತಿರುವಾಗ ಹೇಗೋ ಜಾರಿ ಬಿದ್ದ. ಆದರೂ ತನಗೇನೂ ಆಗಿಲ್ಲ ಎಂದು ತೋರಿಸಿಕೊಳ್ಳಲು ಅವನು ನಕ್ಕರೆ, ಅವನಿಗಿಂತ ಜೋರು ನಾವು ನಕ್ಕದ್ದೇ ನಕ್ಕದ್ದು. ನೋಡಿದರೆ, ಅವನ ಮುಂದಿನ ಎರಡು ಹಲ್ಲುಗಳು ನಾಪತ್ತೆ! ಅಂತೂ ಎರಡು ಲಡ್ಡು ಬಹುಮಾನ ಗಳಿಸಿದ.

ಶ್ರಾವಣದಲ್ಲಿನ ಸಾಲು ಸಾಲು ಹಬ್ಬಗಳಿಗೆ ರೆಡಿಯಾಗುತ್ತಿದ್ದ ಕುರುಕಲು ತಿಂಡಿಗಳೇ ನಮಗೆಲ್ಲಾ ಅಚ್ಚುಮೆಚ್ಚು. ಶ್ರಾವಣ ಬಂದರೆ ತಿಂಡಿಗಳ ನೆನೆದು ಈಗಲೂ ಬಾಯಿ ನೀರೂರುತ್ತದೆ.
- ಮುಳಿಯ ಸರಸ್ವತಿ ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT