ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರುತೆರೆಯಲ್ಲಿ ಫ್ಯಾಂಟಸಿಯ ಹೊಸ ತೊರೆ

Last Updated 24 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಕನ್ನಡ ಕಿರುತೆರೆಯಲ್ಲಿ ಪುರಾಣ– ಫ್ಯಾಂಟಸಿ ಧಾರಾವಾಹಿಗಳಿಗಿದು ಉಬ್ಬರದ ಕಾಲ. ಸಂಖ್ಯೆಯಲ್ಲಿ ಹೆಚ್ಚುತ್ತಲೇ ಇರುವ ಇಂಥ ಧಾರಾವಾಹಿಗಳು ಯಶಸ್ಸಿನ ದೃಷ್ಟಿಯಲ್ಲಿಯೂ ಮೇಲಕ್ಕೇರಿವೆಯೇ? ಅಥವಾ ಇದೊಂದು ಅರೆಕಾಲಿಕ ಉಬ್ಬರ ಮಾತ್ರವೇ? ಎಂಬುದನ್ನು ಪದ್ಮನಾಭ ಭಟ್‌ ಇಲ್ಲಿ ವಿಶ್ಲೇಷಿಸಿದ್ದಾರೆ.

ನಾಗಿಣಿ, ಆನಂದಭೈರವಿ, ಹರಹರ ಮಹದೇವ, ಗಿರಿಜಾ ಕಲ್ಯಾಣ,  ಮಹಾದೇವಿ, ಜನುಮದ ಜೋಡಿ ಹೀಗೆ ಈಗ ಕನ್ನಡ ಕಿರುತೆರೆಯ ವಿವಿಧ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಕಾಲ್ಪನಿಕ– ಪೌರಾಣಿಕ– ಅತೀಂದ್ರಿಯ ಕಥನಗಳ ಧಾರಾವಾಹಿಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಹಾಗಾದರೆ ಇದೊಂದು ಟ್ರೆಂಡ್‌ ಆಗಿ ರೂಪುಗೊಂಡಿದೆಯೇ? ಹೌದು ಎನ್ನುವುದಾದರೆ ಅದಕ್ಕೆ ಕಾರಣ–ಪ್ರೇರಣೆಗಳೇನು? ಜನರು ಇಂಥ ಧಾರಾವಾಹಿಗಳನ್ನು ಎಷ್ಟು ಮೆಚ್ಚಿಕೊಳ್ಳುತ್ತಿದ್ದಾರೆ? ಈ ಎಲ್ಲ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಕನ್ನಡ ಕಿರುತೆರೆ ವಾಹಿನಿಗಳ  ಅನುಭವಿಗಳನ್ನು ಮಾತನಾಡಿಸಿದಾಗ ಕುತೂಹಲಕಾರಿ ಅಭಿಪ್ರಾಯಗಳು ವ್ಯಕ್ತವಾದವು.

ಉದಯ ವಾಹಿನಿಯ ಪ್ರೋಗ್ರಾಮಿಂಗ್‌ ಹೆಡ್‌ ಸುಧೀಂದ್ರ ಭಾರದ್ವಾಜ್‌ ಅವರ ಪ್ರಕಾರ ಫ್ಯಾಂಟಸಿ ಕಥನಗಳ ಟ್ರೆಂಡ್‌ ನಿಧಾನವಾಗಿ ಬೆಳೆಯುತ್ತಿದೆ. ‘ಹೊಸತನದ ಹುಡುಕಾಟವೇ ಇದಕ್ಕೆ ಕಾರಣ’ ಎನ್ನುತ್ತಾರೆ ಅವರು.

‘ಕನ್ನಡದ ಕಿರುತೆರೆ ಮಾರುಕಟ್ಟೆಯನ್ನು ನೋಡಿದರೆ ಬೇರೆ ಯಾವುದೇ ದಕ್ಷಿಣ ಭಾರತದ ಭಾಷೆಗಳಲ್ಲಿ ಕಾಣದಷ್ಟು ಚಟುವಟಿಕೆಗಳು ನಮ್ಮಲ್ಲಿ ನಡೆಯುತ್ತಿವೆ. ಹೊಸ ಪರಿಕಲ್ಪನೆ, ಕಥನವಸ್ತುಗಳನ್ನು ಧಾರಾವಾಹಿ ಮಾಡಲಾಗುತ್ತಿದೆ. ಈ ಹೊಸತನದ ಹುಡುಕಾಟದ ಭಾಗವಾಗಿಯೇ ಫ್ಯಾಂಟಸಿ ಧಾರಾವಾಹಿಗಳು ಮುನ್ನೆಲೆಗೆ ಬರುತ್ತಿವೆ’ ಎಂದು ಅವರು ವಿವರಿಸುತ್ತಾರೆ.

‘ಇಂಥ ಧಾರಾವಾಹಿಗಳು ಉತ್ತರ ಭಾರತದ ಕಿರುತೆರೆಯಲ್ಲಿ ಯಶಸ್ವಿಯಾಗಿದ್ದೂ ಕನ್ನಡದಲ್ಲಿ ಈ ಟ್ರೆಂಡ್‌ ಹುಟ್ಟಿಕೊಳ್ಳಲು ಕಾರಣವಾಗಿರಬಹುದು’ ಎನ್ನುವ ಅವರು ಇನ್ನೂ ಒಂದು ಕುತೂಹಲಕಾರಿ ಅಂಶವನ್ನು ಮುಂದಿಡುತ್ತಾರೆ.

‘ಕಳೆದ ಎಂಟು ಹತ್ತು ವರ್ಷಗಳಿಂದ ಹಿಂದೆ ಜನಪ್ರಿಯವಾದ ಪೋಗೊ, ಕಾರ್ಟೂನ್‌ ನೆಟ್‌ವರ್ಕ್‌ ವಾಹಿನಿಗಳಲ್ಲಿ ಛೋಟಾ ಭೀಮ್‌ನಂಥ ಕಥನಗಳನ್ನು ಕಿರಿಯರಷ್ಟೇ ಅಲ್ಲ, ದೊಡ್ಡವರೂ ನೋಡುತ್ತಾರೆ. ಫ್ಯಾಂಟಸಿಯ ಕುರಿತಾದ ಈ ಕುತೂಹಲವೇ ಮಾರುವೇಷ ತಾಳಿ ಅತೀಂದ್ರಿಯ ಕಥನಗಳ ಟ್ರೆಂಡ್‌ ಆಗಿ ಕನ್ನಡಕ್ಕೆ ಬಂದಿರಬಹುದು’ ಎಂಬುದು ಅವರ ಅನಿಸಿಕೆ. ‘ಈ ಟ್ರೆಂಡ್‌ ಇನ್ನೂ ಎರಡು ಮೂರು ವರ್ಷ ಹೀಗೆಯೇ ಮುಂದುವರಿಯುತ್ತದೆ’ ಎಂದು ಭವಿಷ್ಯವನ್ನೂ ಅವರು ನುಡಿಯುತ್ತಾರೆ.

ಸವಾಲುಗಳು ಹಲವು
ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ನಾಗರಹಾವಿನ ಕಥನದ ‘ನಾಗಿಣಿ’ ಧಾರಾವಾಹಿಯ ನಿರ್ದೇಶಕ ಮತ್ತು ನಿರ್ಮಾಪಕ ಹಯವರ್ಧನ ಅವರೂ ಇಂಥದ್ದೊಂದು ಟ್ರೆಂಡ್‌ ಸೃಷ್ಟಿಯಾಗಿದೆ ಎನ್ನುವುದನ್ನು ಒಪ್ಪುತ್ತಾರೆ.

‘ಜನರಿಗೆ ಒಂದೇ ರೀತಿಯ ಕಥೆಗಳಿರುವ ಧಾರಾವಾಹಿಗಳನ್ನು ನೋಡಿ ನೋಡಿ ಬೇಸರವಾಗಿತ್ತು. ಬದಲಾವಣೆ ಬಯಸುತ್ತಿದ್ದರು. ಇದನ್ನು ಗುರ್ತಿಸಿ ನಾವು ‘ನಾಗಿಣಿ’ ಧಾರಾವಾಹಿ ಆರಂಭಿಸಿದೆವು. ಅದು ಜನರಿಗೆ ಇಷ್ಟ ವಾಯಿತು. ‘ನಾಗಿಣಿ’ ವ್ಯವಹಾರಿಕವಾಗಿಯೂ ಕ್ಲಿಕ್‌ ಆಯಿತು’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಹಯವರ್ಧನ ಇಂಥ ಧಾರಾವಾಹಿಯ ನಿರ್ದೇಶನದಲ್ಲಿ ಇರುವ ಸವಾಲುಗಳ ಕುರಿತೂ ಗಮನ ಸೆಳೆಯುತ್ತಾರೆ.

‘ಇಂಥದ್ದೊಂದು ಧಾರಾವಾಹಿ ಮಾಡಬೇಕಾದರೆ ಎಲ್ಲವನ್ನೂ ಹೊಸದಾಗಿಯೇ ಯೋಜಿಸಬೇಕಾಗುತ್ತದೆ. ಗ್ರಾಫಿಕ್‌, ವಸ್ತ್ರವಿನ್ಯಾಸ, ಬೆಳಕು, ಛಾಯಾಗ್ರಹಣ, ಸಂಭಾಷಣೆ, ಅಭಿನಯ ಹೀಗೆ ಪ್ರತಿಯೊಂದು ವಿಭಾಗದಲ್ಲಿಯೂ ಹೊಸದಾಗಿಯೇ ಯೋಚಿಸಬೇಕಾಗುತ್ತದೆ. ಜನರ ಮನಸ್ಸಿನಲ್ಲಿ ಫ್ಯಾಂಟಸಿ ಪಾತ್ರಗಳ ಕುರಿತು ಒಂದು ಕಲ್ಪನೆ ಇರುತ್ತದೆ. ಆ ಕಲ್ಪನೆಯನ್ನು ನಾವು ತಲುಪಲು ಸಾಧ್ಯವಾಗದಿದ್ದರೆ ನಗೆಪಾಟಲಿಗೀಡಾಗಿಬಿಡುತ್ತೇವೆ’ ಎನ್ನುತ್ತಾರೆ.
‘ಬಜೆಟ್‌ನ ವಿಷಯದಲ್ಲಿಯೂ ಫ್ಯಾಂಟಸಿ ಧಾರಾವಾಹಿಗಳು ಹಲವು ಸವಾಲುಗಳನ್ನೊಡ್ಡುತ್ತವೆ. ಹಾಗೆಯೇ ಇವು ತೆಗೆದುಕೊಳ್ಳುವ ಸಮಯವೂ ಅಷ್ಟೇ ದುಬಾರಿಯದು’ ಎನ್ನುತ್ತಾರೆ ಹಯವರ್ಧನ.

ತಾತ್ಕಾಲಿಕ ಉಬ್ಬರವಷ್ಟೆ
ಆದರೆ ಝೀ ವಾಹಿನಿಯಲ್ಲಿಯೇ ಪ್ರಸಾರವಾಗುವ ‘ಮಹಾದೇವಿ’ ಧಾರಾವಾಹಿಯ ನಿರ್ದೇಶಕ ರಮೇಶ ಇಂದ್ರ ಅವರು ಹಯವರ್ಧನ ಅವರಿಗಿಂತ ಭಿನ್ನವಾದ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ‘ಇದೊಂದು ತಾತ್ಕಾಲಿಕ ಉಬ್ಬರವಷ್ಟೆ’ ಎನ್ನುವುದು ಅವರ ಅಭಿಪ್ರಾಯ.
‘ಕನ್ನಡದಲ್ಲಿ ಈಗ ದಿನವೊಂದಕ್ಕೆ ನಲವತ್ತೈದಕ್ಕೂ ಹೆಚ್ಚು ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಅವುಗಳಲ್ಲಿ ನಾಲ್ಕೈದು ಹಾಸ್ಯ ಧಾರಾವಾಹಿಗಳು ಬರುತ್ತವೆ. ಉಳಿದವೆಲ್ಲವೂ ಅವವೇ ಅತ್ತೆ –ಸೊಸೆ ಜಗಳ, ಗಂಡ–ಹೆಂಡತಿ ವೈಮನಸ್ಸು, ವಿವಾಹೇತರ ಸಂಬಂಧಗಳು ಇಂಥ ವಿಷಯಗಳ ಸುತ್ತಲೇ ಸುತ್ತುತ್ತಿತ್ತು. ಇದರಿಂದ ಜನರು ಬೇಸರಗೊಂಡಿದ್ದರು. ಅದೇ ಸಮಯಕ್ಕೆ ಬಂದ ಫ್ಯಾಂಟಸಿ ಧಾರಾವಾಹಿಗಳು ಜನರಿಗೆ ಇಷ್ಟವಾದವು. ಇದರಿಂದ ಎಲ್ಲ ವಾಹಿನಿಗಳೂ ಅವುಗಳನ್ನೇ ಅನುಸರಿಸಲು ಶುರುಮಾಡಿವೆ’ ಎನ್ನುವ ಅವರು ‘ಇನ್ನು ಸ್ವಲ್ಪ ದಿನಗಳ ನಂತರ ಈ ಉಬ್ಬರ ಇಳಿದು ಮತ್ತೆ ಸಾಮಾಜಿಕ ಕಥನಗಳ ಹಳಿಗೆ ಮರಳುತ್ತದೆ’ ಎಂದೂ ಹೇಳುತ್ತಾರೆ.

ಸಂಖ್ಯೆಯಲ್ಲಷ್ಟೇ ಹೆಚ್ಚು; ಯಶಸ್ಸಿನಲ್ಲಲ್ಲ
ಪೌರಾಣಿಕ– ಅತೀಂದ್ರಿಯ ಶಕ್ತಿಗಳ ಕತೆಗಳಿರುವ ಧಾರಾವಾಹಿಗಳ ಸಂಖ್ಯೆ ಹೆಚ್ಚಿದೆ ಎಂದ ಮಾತ್ರಕ್ಕೆ ಅದೊಂದು ಟ್ರೆಂಡ್‌ ಆಗಿದೆ ಎಂಬುವುದನ್ನು ಕಲರ್ಸ್‌ ಕನ್ನಡ ಮತ್ತು ಕಲರ್ಸ್‌ ಸೂಪರ್‌ ವಾಹಿನಿಗಳ ಬ್ಯುಸಿನೆಸ್‌ ಹೆಡ್‌ ಪರಮೇಶ್ವರ ಗುಂಡ್ಕಲ್‌ ಅವರು ಒಪ್ಪುವುದಿಲ್ಲ. ತಮ್ಮ ವಾದಕ್ಕೆ ಅವರು ಸಾಕಷ್ಟು ಆಧಾರವನ್ನೂ ನೀಡುತ್ತಾರೆ.

‘ಟ್ರೆಂಡ್‌ಗಳನ್ನು ವಾಹಿನಿಗಳು ಸೃಷ್ಟಿಸಲು ಸಾಧ್ಯವಿಲ್ಲ. ಅದು ಜನರಿಂದ ರೂಪುಗೊಳ್ಳುವಂಥದ್ದು. ಮೂರು ನಾಲ್ಕು ಜನ ಮಾಡಿದರು ಎಂಬ ಕಾರಣಕ್ಕೇ ಅದನ್ನು ಟ್ರೆಂಡ್‌ ಎಂದು ಹೇಳಲು ಸಾಧ್ಯವಿಲ್ಲ. ಕನ್ನಡದ್ದಷ್ಟೇ ಅಲ್ಲ, ಇಡೀ ದೇಶದ ಕಿರುತೆರೆ ಧಾರಾವಾಹಿಗಳನ್ನು ಗಮನಿಸಿದರೂ ಅತೀಂದ್ರಿಯ, ಪೌರಾಣಿಕ, ಫ್ಯಾಂಟಸಿ ಧಾರಾವಾಹಿಗಳಿಗಿಂತ ದೊಡ್ಡ ವೀಕ್ಷಕವರ್ಗ ಕುಟುಂಬ ಕಥನದ ಧಾರಾವಾಹಿಗಳಿಗೇ ಇದೆ’ ಎನ್ನುವ ಪರಮೇಶ್ವರ ಅವರು ಕನ್ನಡ ಕಿರುತೆರೆ ನಿದರ್ಶನಗಳ ಮೂಲಕವೂ ತಮ್ಮನ್ನು ಸಮರ್ಥಿಸಿಕೊಳ್ಳುತ್ತಾರೆ.

‘ಕನ್ನಡ ಕಿರುತೆರೆಯಲ್ಲಿಯೂ ಈಗ ಅತೀಂದ್ರಿಯ, ಪೌರಾಣಿಕ, ಫ್ಯಾಂಟಸಿ ಧಾರಾವಾಹಿಗಳು ಬರುತ್ತಿವೆ. ಆದರೆ ಇಂದಿಗೂ ಇಲ್ಲಿ ಹೆಚ್ಚು ಜನಪ್ರಿಯವಾಗಿರುವುದು ಫ್ಯಾಮಿಲಿ ಡ್ರಾಮಾಗಳೇ. ಒಟ್ಟಾರೆ ವೀಕ್ಷಕವರ್ಗವನ್ನು ಗಮನಿಸಿದರೆ ಕನ್ನಡದ ಅತಿ ಜನಪ್ರಿಯ ಆರು ಧಾರಾವಾಹಿಗಳಲ್ಲಿ ಒಂದೂ ಅತೀಂದ್ರಿಯ, ಪೌರಾಣಿಕ ಕಥನಗಳಿಲ್ಲ. ನಮ್ಮ ಕಲರ್ಸ್‌ ಕನ್ನಡದ ನಂಬರ್‌ ಒನ್‌ ಧಾರಾವಾಹಿ ‘ಅಗ್ನಿಸಾಕ್ಷಿ’, ನಂತರದ ‘ಲಕ್ಷ್ಮೀ ಬಾರಮ್ಮ’, ‘ಪುಟ್ಟಗೌರಿ ಮದುವೆ’, ‘ಅಕ್ಕ’, ಇವೆಲ್ಲವೂ ಕೌಟುಂಬಿಕ, ಸಾಮಾಜಿಕ ಕಥನಗಳೇ ಆಗಿವೆ. ಹೀಗಿರುವಾಗ ಪೌರಾಣಿಕ ಧಾರಾವಾಹಿಗಳ ಟ್ರೆಂಡ್‌ ಸೃಷ್ಟಿಯಾಗಿದೆ ಎಂದು ಹೇಗೆ ಹೇಳಲು ಸಾಧ್ಯ?’ ಎಂದು ಅವರು ಪ್ರಶ್ನಿಸುತ್ತಾರೆ.

ಆದರೆ, ಹಿಂದಿಗಿಂತಲೂ ಈಗ ಇಂಥ ಧಾರಾವಾಹಿಗಳ ಸಂಖ್ಯೆ ಹೆಚ್ಚಾಗಿದೆ ಎಂಬುದನ್ನು ಅವರು ಒಪ್ಪುತ್ತಾರೆ. ಅಷ್ಟೊಂದು ಜನಪ್ರಿಯತೆ ಇಲ್ಲದಿದ್ದರೂ ಅಂಥ ಧಾರಾವಾಹಿಗಳ ಸಂಖ್ಯೆ ಯಾಕೆ ಹೆಚ್ಚುತ್ತಿದೆ ಎಂಬ ಪ್ರಶ್ನೆಗೂ ಅವರ ಬಳಿ ಉತ್ತರವಿದೆ. 

‘ಈಗೊಂದು ವರ್ಷದ ಹಿಂದೆ ವೀಕ್ಷಕವರ್ಗವನ್ನು ಅಳತೆ ಮಾಡಲು ಇದ್ದ ಸಂಸ್ಥೆ ಟ್ಯಾಮ್‌ (ಟೆಲಿವಿಷನ್‌ ಆಡಿಯನ್ಸ್‌ ಮೇಜರ್‌ಮೆಂಟ್‌ ಇಂಡಿಯಾ). ಅದು ಗ್ರಾಮೀಣ ಭಾಗದ ವೀಕ್ಷಕರನ್ನು ಗಮನಕ್ಕೇ ತೆಗೆದುಕೊಳ್ಳುತ್ತಿರಲಿಲ್ಲ. ಕೇವಲ ನಗರ ಮತ್ತು ಮಹಾನಗರದ ವೀಕ್ಷಕರನ್ನು ಮಾತ್ರ ಪರಿಗಣಿಸುತ್ತಿತ್ತು. ಆದರೆ ಈಗ ಬಾರ್ಕ್‌ ಎಂಬ ಸಂಸ್ಥೆ ವೀಕ್ಷಕವರ್ಗದ ಅಳತೆ ಮಾಡುತ್ತಿದೆ. ಇದು ಗ್ರಾಮೀಣ ಪ್ರದೇಶದ ವೀಕ್ಷಕರ ಕಡೆಗೂ ಸಾಕಷ್ಟು ಗಮನ ಕೊಡುತ್ತಿದೆ. ಆದ್ದರಿಂದ ರೇಟಿಂಗ್‌ ವ್ಯವಸ್ಥೆ ಬದಲಾಗಿದೆ. ಈ ಬದಲಾದ ವ್ಯವಸ್ಥೆಯಲ್ಲಿ ಗ್ರಾಮೀಣ ಭಾಗದ ವೀಕ್ಷಕರು ಅತೀಂದ್ರಿಯ, ಪೌರಾಣಿಕ ಕಥನಗಳನ್ನೂ ಇಷ್ಟಪಡುತ್ತಿರುವುದು ವಾಹಿನಿಗಳ ಗಮನಕ್ಕೆ ಬಂದಿದೆ. ಆದ್ದರಿಂದ  ಅಂಥ ಧಾರಾವಾಹಿಗಳ ಸಂಖ್ಯೆ ಹೆಚ್ಚಾಗಿದೆ’ ಎನ್ನುವುದು ಅವರ ವಿವರಣೆ.

‘ಇತ್ತೀಚೆಗೆ ಕನ್ನಡದಲ್ಲಿ ಮನರಂಜನಾ ವಾಹಿನಿಗಳ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ವಿಭಿನ್ನ ವಿಷಯಗಳ ಧಾರಾವಾಹಿಗಳನ್ನು ಮಾಡುವುದು ಅನಿವಾರ್ಯವಾಗಿದೆ. ಇಂಥ ಧಾರಾವಾಹಿಗಳು ಹೆಚ್ಚಲು ಇದೂ ಒಂದು ಕಾರಣ’ ಎನ್ನುತ್ತಾರೆ ಅವರು.

‘ಇಷ್ಟಾಗಿಯೂ ಕೊನೆಗೂ ಉಳಿದುಕೊಳ್ಳುವುದು, ಜನರು ನೋಡುವುದು ಕೌಟುಂಬಿಕ ಕಥನಗಳು ಮತ್ತು ಸಾಮಾಜಿಕ ಕಥಾನಕಗಳೇ. ಆದ್ದರಿಂದ ಯಶಸ್ಸಿನ ದೃಷ್ಟಿಯಿಂದ ನೋಡುವುದಾದರೆ ಅವೇ ಇಂದಿನ ಟ್ರೆಂಡ್‌’’ ಎನ್ನುವುದು ಪರಮೇಶ್ವರ್‌ ಅವರ ಅನುಭವದ ಮಾತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT