ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾತ್ರಗಳ ಮೂಲಕ ಜೀವಿಸುವ ಖುಷಿ

Last Updated 25 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಹೊಸ ಮುಖಗಳಿಗೆ ಭಿನ್ನ ಅವಕಾಶಗಳು ಸಿಗುವುದಿಲ್ಲ ಎಂಬ ಮಾತಿಗೆ ಅಪವಾದ ನಟ ಧನಂಜಯ್. ‘ಡೈರೆಕ್ಟರ್‍ಸ್ ಸ್ಪೆಷಲ್’ನ ಪಾತ್ರದಿಂದ ಹಿಡಿದು ಮೊನ್ನೆಯಷ್ಟೇ ಮುಹೂರ್ತ ಆಚರಿಸಿಕೊಂಡ ‘ಟಗರು’ ಸಿನಿಮಾದಲ್ಲಿ ಖಳನಾಗಿ ಕಾಣಿಸಿಕೊಳ್ಳುತ್ತಿರುವವರೆಗೆ ಅವರ ವೃತ್ತಿಜೀವನದ ಒಂದೊಂದು ಹೆಜ್ಜೆಯೂ ಭಿನ್ನವಾಗಿಯೇ ಇದೆ.

‘ವ್ಯಾವಹಾರಿಕವಾಗಿ ದೊಡ್ಡ ಮಟ್ಟದಲ್ಲಿ ಹಿಟ್‌ ಆಗದಿದ್ದರೂ ಇಷ್ಟೊಂದು ವಿಭಿನ್ನ ಅವಕಾಶಗಳು ಸಿಗುತ್ತಿರುವುದು ನಿಜಕ್ಕೂ ಸಂತೋಷದ ವಿಷಯ’ ಎನ್ನುವ ಧನಂಜಯ್‌, ‘ಇದರಲ್ಲಿ ಅದೃಷ್ಟಕ್ಕಿಂತ ಪರಿಶ್ರಮದ ಪಾಲೇ ಹೆಚ್ಚಿದೆ’ ಎನ್ನಲು ಮರೆಯುವುದಿಲ್ಲ.

‘ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗಿಲ್ಲದಿದ್ದರೂ ಜನರು ನನ್ನನ್ನು ಇಷ್ಟಪಟ್ಟಿದ್ದಾರೆ. ನಿರ್ದೇಶಕರೂ ನನ್ನನ್ನು ಮೆಚ್ಚಿ ಬೇರೆ ಬೇರೆ ಪಾತ್ರಗಳಲ್ಲಿ ನಟಿಸುವ ಅವಕಾಶ ಕೊಟ್ಟಿದ್ದಾರೆ. ನಿರ್ದೇಶಕರೇ ನನ್ನನ್ನು ಕಾಪಾಡಿರುವುದು’ ಎನ್ನುವ ಧನಂಜಯ್‌ಗೆ ನಾಗಾಭರಣ ನಿರ್ದೇಶನದ ‘ಅಲ್ಲಮ’ ಚಿತ್ರದ ಪಾತ್ರವಂತೂ ಅಭಿನಯದ ಪಾಠಶಾಲೆಯಂತೆ ಕಂಡಿದೆ. ‘ಅಲ್ಲಮ’ ಸಿನಿಮಾ ಪಾತ್ರದ ಮೂಲಕ ಅವರ ಎರಡು ಕನಸು ಈಡೇರಿದೆ.

‘‘ನಾಗಾಭರಣ ಅವರ ಜತೆ ಕೆಲಸ ಮಾಡಬೇಕು ಎನ್ನುವುದು ನನ್ನ ಹಳೆಯ ಕನಸಾಗಿತ್ತು. ಹಾಗೆಯೇ ಪೂರ್ಣ ಪ್ರಮಾಣದ ಐತಿಹಾಸಿಕ ಸಿನಿಮಾದಲ್ಲಿ ನಟಿಸಬೇಕು ಎಂಬ ಕನಸೂ ಇತ್ತು. ‘ಅಲ್ಲಮ’ದ ಮೂಲಕ ಇವೆರಡೂ ಒಂದೇ ಸಲ ಈಡೇರಿವೆ’’ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಧನಂಜಯ್‌.

‘ಅಲ್ಲಮ’ ಚಿತ್ರದ ಕೆಲಸ ಬಹುತೇಕ ಮುಗಿದಿದ್ದು, ಕಳೆದ ವಾರ ಒಂದು ನಿಮಿಷದ ಟೀಸರ್‌ ಕೂಡ ಬಿಡುಗಡೆ ಮಾಡಲಾಗಿದೆ. ಈ ಟೀಸರ್‌ಗೆ ಸಿಕ್ಕಿದ ಒಳ್ಳೆಯ ಪ್ರತಿಕ್ರಿಯೆಯೂ ಅವರ ವಿಶ್ವಾಸವನ್ನು ಹೆಚ್ಚಿಸಿದೆ. ‘ಆ ಒಂದು ನಿಮಿಷ ಟೀಸರ್‌ನಷ್ಟೇ ಎರಡು ಗಂಟೆಗಳ ಸಿನಿಮಾವೂ ಚೆನ್ನಾಗಿದೆ’ ಎಂದು ಹೇಳುತ್ತಾರೆ ಧನಂಜಯ್‌.

ಈ ಚಿತ್ರದ ಪಾತ್ರಕ್ಕಾಗಿ ಅವರು ಸಾಕಷ್ಟು ಸಿದ್ಧತೆಯನ್ನೂ ಮಾಡಿಕೊಂಡಿದ್ದಾರೆ. ಇದಕ್ಕಾಗಿಯೇ ಮೃದಂಗ ವಾದನದ ಪ್ರಾಥಮಿಕ ಪಾಠಗಳನ್ನು ಕಲಿತಿರುವ ಅವರು ಅಲ್ಲಮನ ಕುರಿತು ಸಾಕಷ್ಟು ಓದಿಕೊಂಡಿದ್ದಾರೆ. ಯೋಗಾಭ್ಯಾಸವನ್ನೂ ಮಾಡಿದ್ದಾರೆ.

‘ಒಬ್ಬ ನಟನಾಗಿ ಅಲ್ಲಮನ ಪಾತ್ರ ಮತ್ತು ನಾಗಾಭರಣ ಅವರಿಂದ ಸಾಕಷ್ಟು ಕಲಿತುಕೊಂಡಿದ್ದೇನೆ’ ಎನ್ನುವ ಅವರ ಪರಿಶ್ರಮಕ್ಕೆ ತಕ್ಕ ಪ್ರಶಂಸನೆ ದೊರೆಯುವ ಲಕ್ಷಣಗಳೂ ಕಾಣಿಸುತ್ತಿವೆ. ಇತ್ತೀಚೆಗೆ ಸಂಕಲನದ ಹಂತದಲ್ಲಿ ಈ ಚಿತ್ರವನ್ನು ನೋಡಿರುವ ಜಯಂತ ಕಾಯ್ಕಿಣಿ  ಮೆಚ್ಚುಗೆಯ ಮಾತನಾಡಿದ್ದು ಧನಂಜಯ್‌ ಅವರ ಖುಷಿಯನ್ನು ಇಮ್ಮಡಿಗೊಳಿಸಿದೆ.

ಅವರು ‘ಅಲ್ಲಮ’ನ ಗುಂಗಿನಲ್ಲಿ ಇರುವಾಗಲೇ ಸೂರಿ ನಿರ್ದೇಶನದ, ಶಿವರಾಜಕುಮಾರ್‌ ನಾಯಕನಾಗಿ ನಟಿಸುತ್ತಿರುವ ‘ಟಗರು’ ಸಿನಿಮಾದಲ್ಲಿ ಖಳಪಾತ್ರದಲ್ಲಿ ನಟಿಸುವ ಅವಕಾಶ ಅರಸಿ ಬಂದಿದೆ. ನಾಯಕನಾಗಿ ಕಾಣಿಸಿಕೊಂಡ ಮೇಲೆ ಖಳನಾಗಿ ನಟಿಸುವುದು ಕಷ್ಟವಲ್ಲವೆ ಎಂದು ಪ್ರಶ್ನಿಸಿದರೆ ‘ಖಂಡಿತ ಇಲ್ಲ’ ಎಂದು ತಲೆಯಾಡಿಸುತ್ತಾರೆ ಧನಂಜಯ್‌.

‘ನಾಯಕನಾಗಿ ನಟಿಸುವವನು ಬೇರೆ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ವೃತ್ತಿಬದುಕಿನ ದೃಷ್ಟಿಯಲ್ಲಿ ಅಪಾಯಕಾರಿ ಎಂಬೆಲ್ಲ ಯಾವ ಭಯವೂ ನನಗಿಲ್ಲ. ನಾನೊಬ್ಬ ನಟ. ನನಗೆ ಒಳ್ಳೊಳ್ಳೆ ಪಾತ್ರಗಳು ಕಿಕ್‌ ಕೊಡುತ್ತವೆ. ಅದರಲ್ಲಿಯೂ ಸೂರಿ ನಾನು ಅತಿಯಾಗಿ ಮೆಚ್ಚುವ ನಿರ್ದೇಶಕರಲ್ಲೊಬ್ಬರು.

ಅವರ ನಿರ್ದೇಶನದಲ್ಲಿ ಶಿವಣ್ಣ ಅವರೊಂದಿಗೆ ನಟಿಸುವ ಅವಕಾಶ ಸಿಕ್ಕಾಗ ಅದನ್ನು ಕಳೆದುಕೊಳ್ಳಲು ನಾನು ಖಂಡಿತ ಸಿದ್ಧನಿಲ್ಲ’ ಎಂದು ಖಚಿತವಾಗಿ ನುಡಿಯುವ ಅವರು ‘ಯಾಕೆ ಮಾಡಬಾರದು?’ ಎಂದು ಮರುಪ್ರಶ್ನಿಸುತ್ತಾರೆ.

‘ಮುಂದೆಯೂ ನಾಯಕನಾಗಿ ನಟಿಸುತ್ತೇನೆ. ನನಗೂ ಸ್ಟಾರ್‌ ಆಗಬೇಕು ಎಂಬ ಆಸೆಯಿದೆ. ಆದರೆ  ಅದೇ ಸಮಯದಲ್ಲಿ ನಾನು ಒಬ್ಬ ನಟನಾಗಿರಬೇಕು. ಅಲ್ಲಮನ ವೇಷ ಹಾಕಿದಾಗ ನಾನೇ ಅವನಾದ ಭಾವ, ಲಾಂಗ್‌ ಹಿಡಿದು ಖಳನ ಪಾತ್ರದಲ್ಲಿ ನಿಂತಾಗ ಆ ಪಾತ್ರದ ಆತ್ಮ ನನ್ನೊಳಗೆ ಸುಳಿದ ಅನುಭವ– ಹೀಗೆ ಆಯಾ ಪಾತ್ರಗಳ ಮೂಲಕ ನಾನು ಬದುಕುತ್ತಿರುತ್ತೇನೆ. ಅದೇ ನನಗೆ ಹೆಚ್ಚು ತೃಪ್ತಿ ನೀಡುತ್ತದೆ’ ಎನ್ನುವ ಧನಂಜಯ್‌ ‘ಟಗರು’ ಸಿನಿಮಾದಲ್ಲಿ ಪಕ್ಕಾ ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಧನಂಜಯ್‌ ನಟನೆಯ ‘ಬದ್ಮಾಶ್‌’ ಬಿಡುಗಡೆಗೆ ಸಿದ್ಧವಾಗಿದೆ. ‘ಅಲ್ಲಮ’ ಕೂಡ ಬಹುತೇಕ ಪೂರ್ಣಗೊಂಡಿದೆ. ‘ಟಗರು’ ಸೆಟ್ಟೇರಿದೆ. ನಂತರ ಪನ್ನಗಾಭರಣ ನಿರ್ದೇಶನದ ‘ಹ್ಯಾಪಿ ನ್ಯೂ ಇಯರ್‌’ ಎಂಬ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

ನಟನಾಗಿ ಇಷ್ಟೆಲ್ಲ ಬ್ಯುಸಿಯಾಗಿದ್ದರೂ ಕೊಂಚ ವಿರಾಮ ದೊರೆತರೆ ಸಾಕು ಧನಂಜಯ್‌ ಒಳಗಿನ ನಿರ್ದೇಶಕ ಎಚ್ಚರಗೊಳ್ಳುತ್ತಾನೆ. ಬಿಡುವಿನ ವೇಳೆಯನ್ನು ಬರವಣಿಗೆಗೆ ಮೀಸಲಿಡುವ ಅವರು ‘ಮುಂದೊಂದು ದಿನ ಸಿನಿಮಾ ನಿರ್ದೇಶಿಸುತ್ತೇನೆ. ಒಳ್ಳೆಯ ಸಿನಿಮಾವನ್ನೇ ಮಾಡುತ್ತೇನೆ’ ಎಂದು ತುಂಬ ವಿಶ್ವಾಸದಿಂದ ನುಡಿಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT