ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೃಪಾಮಯಿ’ ಈ ಮಹಾತಾಯಿ

Last Updated 26 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಹೆತ್ತಮಕ್ಕಳಿಗೆ ತಾಯಿ ಆಗುವುದು ಪ್ರಕೃತಿ ಸಹಜ. ಆದರೆ, ಸಮಾಜದ ಎಲ್ಲಾ ಮಕ್ಕಳು ನಮ್ಮ ಮಕ್ಕಳೆಂದು, ಆ ಮಕ್ಕಳ ಭವ್ಯ ಭವಿಷ್ಯಕ್ಕಾಗಿ ಶ್ರಮಿಸುತ್ತಾ ಜೀವನ ಸವೆಸುತ್ತಿರುವ ಮಹಿಳೆಯೊಬ್ಬರು ಮಹಾತಾಯಿಯಾಗಿ ನಮ್ಮ ಮುಂದೆ ನಿಂತು ಕೊಂಡಿದ್ದಾರೆ. ಆ ತಾಯಿ ಮಾಡುತ್ತಿರುವ ಮಕ್ಕಳಸೇವೆಗೆ ಬೆನ್ನೆಲುಬಾಗಿ ನಿಂತಿರುವ ಪತಿ ಮತ್ತವರ ಮಕ್ಕಳ ತ್ಯಾಗಕ್ಕೀಗ ದಶಕದ ಸಂಭ್ರಮ.

ನಮ್ಮ ಮಕ್ಕಳು ಯಾವ ದಾರಿಯಲ್ಲಿ ನಡೆಯುತ್ತಿದ್ದಾರೆ, ಆ ದಾರಿ ಸರಿಯಾಗಿದೆಯಾ? ಸರಿಯಿಲ್ಲದಿದ್ದರೆ ಮಕ್ಕಳಿಗೆ ತಿದ್ದಿ ಬುದ್ಧಿವಾದ ಹೇಳಲು ಬಹುತೇಕ ಪಾಲಕರಿಗೆ ಇಂದು ಸಮಯವಿಲ್ಲ. ಮಕ್ಕಳು ವಯಸ್ಸಿಗೆ ಬಂದ ನಂತರ ಹೆತ್ತವರ ಮಾತು ಮೀರಿ ನಡೆದು ಕೊಳ್ಳಲು ಆರಂಭಿಸಿದಾಗ ಕಣ್ಣು ತೆರೆದು ಕೊಳ್ಳುತ್ತವೆ.

ಆಗ ಮಗ/ಮಗಳು ಮಾತು ಕೇಳುವ ಹಂತ ಮೀರಿ ತಾನು ಮಾಡಿದ್ದೆ ಸರಿ ಎಂದು ವಾದಿಸಿ ಸುಂದರವಾದ ಹೂವಿನಂತಹ ಬದುಕನ್ನು ಕಲ್ಲು–ಮುಳ್ಳಿನ ದಾರಿಯನ್ನಾಗಿ ಮಾಡಿಕೊಳ್ಳುತ್ತಾರೆ.

ಈ ಕಟು ಸತ್ಯ ಅರಿತು ಕೊಂಡ ಸುನಂದಮ್ಮ ರಂಗನಾಥ್ ಇಂದಿಗೆ ಸರಿಯಾಗಿ ಹತ್ತು ವರ್ಷಗಳ ಹಿಂದೆ 2006ರಲ್ಲಿ ತುಮಕೂರಿನ ಮುಕಾಂಬಿಕಾ ನಗರದಲ್ಲಿ ‘ಕೃಪಾಮಯಿ ಮಕ್ಕಳ ಬಳಗ’ ಎಂಬ ಸಂಸ್ಥೆ ಹುಟ್ಟು ಹಾಕಿ ಅಂದಿನಿಂದ ಇಂದಿನವರೆಗೆ ಮಕ್ಕಳ ಸೇವೆಯಲ್ಲಿ ತೊಡಗಿದ್ದಾರೆ.

ಆರಂಭದಲ್ಲಿ ಮನೆ ಮನೆಗೆ ತೆರಳಿ ನಿಮ್ಮ ಮಕ್ಕಳನ್ನು ಸಂಸ್ಥೆಯ ತರಗತಿಗೆ ಕಳುಹಿಸಿ ಕೊಡುವಂತೆ ಪಾಲಕರಲ್ಲಿ ಮನವಿ ಮಾಡಿಕೊಳ್ಳುತ್ತಾ ಓಣಿ ಓಣಿ ಸುತ್ತಾಡುತ್ತಿದ್ದರು. ಪ್ರತಿ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಆಂಜನೇಯ ದೇವಸ್ಥಾನದಲ್ಲಿ ಪಠ್ಯೇತರ ಚಟುವಟಿಕೆಗಳನ್ನು ಹೇಳಿ ಕೊಡಲು ಆರಂಭಿಸಿದ ಪಯಣ, ಇಂದಿಗೂ ಮುಂದುವರೆದು ಹೆಮ್ಮರವಾಗಿ ಬೆಳೆದಿದೆ.

ಬಳಗದ ಚಟುವಟಿಕೆ
ಯಾಂತ್ರಿಕ ಶಿಕ್ಷಣ, ಹೆಚ್ಚು ಅಂಕ, ಉನ್ನತ ಹುದ್ದೆ, ಕೈ ತುಂಬ ಸಂಬಳ ಇದ್ದರೂ ಹೆತ್ತವರನ್ನೇ ಅನಾಥರನ್ನಾಗಿ ಮಾಡುವ ಹೃದಯಹೀನ ಮಕ್ಕಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ನಮ್ಮ ಭಾರತೀಯ ಸಂಸ್ಕೃತಿಯನ್ನೇ ಮರೆತು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ.

ನಮ್ಮ ನಾಡು ನುಡಿ, ದೇಶಭಕ್ತಿ, ಗುರು ಹಿರಿಯರಿಗೆ ಗೌರವ, ಒಬ್ಬ ಪರಿಪೂರ್ಣ ವ್ಯಕ್ತಿಯ ಜವಾಬ್ದಾರಿ ಅರಿತು ಜೀವನ ನಡೆಸುವ ಭಾವಿ ಪ್ರಜೆಗಳನ್ನು ರೂಪಿಸುವ ಕೆಲಸ ‘ಕೃಪಾಮಯಿ ಮಕ್ಕಳ ಬಳಗ’ ಮಾಡಿಕೊಂಡು ಬರುತ್ತಿದೆ.

ರಾಮಾಯಣ, ಮಹಾಭಾರತದಲ್ಲಿ ಬರುವ ಹಲವು ಕಥೆಗಳನ್ನು ಮಕ್ಕಳ ಕಣ್ಣಿಗೆ ಕಟ್ಟಿದಂತೆ ಹೇಳಿಕೊಡುತ್ತಾರೆ. ನಮ್ಮ ಭಾರತೀಯ ಸಂಸ್ಕೃತಿಯ ಮಹತ್ವ. ಹಿಂದೆ ಆಗಿ ಹೋಗಿರುವ ಇತಿಹಾಸದ ಘಟನೆಗಳನ್ನು ತಿಳಿಸಿಕೊಟ್ಟು. ಮುಂದೆ ನಾವು ಹೇಗೆ ಬದುಕಬೇಕು ಎಂಬುದನ್ನು ಮನವರಿಕೆಯಾಗುವಂತೆ ನೀತಿ ಕಥೆಗಳ ಮೂಲಕ ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವ ಕೆಲಸ ನಡೆಯುತ್ತಿದೆ.

ಮಕ್ಕಳನ್ನು ಪ್ರವಾಸಿ ತಾಣಗಳಿಗೆ ಕೆರೆದುಕೊಂಡು ಹೋಗುವುದು, ಪ್ರತಿವರ್ಷ ವಾರ್ಷಿಕ ಸಭೆಯಲ್ಲಿ ಮಕ್ಕಳ ಮೂಲಕವೇ, ನಾಟಕ, ನೃತ್ಯ, ಪೌರಾಣಿಕನಾಟಕ – ಹೀಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಕ್ಕಳ ಬೌದ್ಧಿಕ ಮಟ್ಟವನ್ನು ಹೆಚ್ಚಿಸುವ ಕೆಲಸಗಳು ಬಳಗದಿಂದ ನಡೆಯುತ್ತವೆ.

ಪರಿಪೂರ್ಣ ವ್ಯಕ್ತಿತ್ವ ರೂಪುಗೊಳ್ಳಬೇಕಾದರೆ, ಎಲ್ಲಾ ವಿಷಯವನ್ನು ಒಬ್ಬ ವ್ಯಕ್ತಿಯಿಂದ ಸಂಪೂರ್ಣವಾಗಿ ತಿಳಿದು ಕೊಳ್ಳುವುದು ಕಷ್ಟಸಾಧ್ಯ. ಹಾಗಾಗಿ ಹಲವು ಸಾಧಕರು, ವಿಷಯ ಪರಿಣಿತರ ಮನೆಗೆ ತೆರಳಿ ಅವರ ಮನವೊಲಿಸುವ ಮೂಲಕ ಕೃಪಾಮಯಿ ಮಕ್ಕಳ ಬಳಗದ ಮುಂದೆ ಆ ಸಾಧಕರನ್ನು ಕರೆತಂದು ಅವರ ಮೂಲಕವೂ ಮಕ್ಕಳ ವ್ಯಕ್ತಿತ್ವ ರೂಪಿಸುವ ಕೆಲಸ ಸುನಂದಮ್ಮಾ ಮಾಡುತ್ತಿದ್ದಾರೆ.

ವ್ಯಾವಹಾರಿಕ ದೃಷ್ಟಿಯುಳ್ಳ ಹಲವು ಸಂಸ್ಥೆಗಳು ವ್ಯಕ್ತಿತ್ವ ವಿಕಸನ ಕೇಂದ್ರಗಳನ್ನು ಹಣಸಂಪಾದನೆಯ ದೃಷ್ಟಿಯಿಂದಲೇ ನಡೆಸುತ್ತವೆ; ಇಂಥ ಕೇಂದ್ರಗಳು ಅಗಣಿತ. ಆದರೆ, ಮಕ್ಕಳ ಬಳಗ ಹಣ ಪಡೆಯುವುದಿಲ್ಲ, ಹಣವೇ ಜೀವನದಲ್ಲಿ ಮುಖ್ಯ ಎನ್ನುವ ವ್ಯಕ್ತಿತ್ವ ವನ್ನು ರೂಪಿಸುವುದೂ ಇಲ್ಲ. ಇಲ್ಲಿ ಆದರ್ಶ, ಸದ್ಗುಣ, ಸಚ್ಚಾರಿತ್ರ್ಯಯುಳ್ಳ, ಸಹೃದಯಸಂಪನ್ನ ಮಕ್ಕಳನ್ನು ರೂಪಿಸುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ.

ಶಿಸ್ತು, ಸಮಯಪಾಲನೆ, ಗುರು–ಹಿರಿಯರಿಗೆ ಗೌರವ, ಇಂಥ  ನಾವು ನಗಣ್ಯ ಎಂದು ಭಾವಿಸುವ ಸಣ್ಣ ಸಣ್ಣ ವಿಷಯಗಳೇ ನಮ್ಮ ಜೀವನದಲ್ಲಿ ಎಷ್ಟೋ ಬದಲಾವಣೆಗಳನ್ನು ತರುತ್ತವೆ ಎಂಬ ಸತ್ಯ ಮಕ್ಕಳ ಗಮನಕ್ಕೆ ತರುತ್ತಿದ್ದಾರೆ.

ಮಕ್ಕಳ ಹಿಂಡು ಕಂಡರೆ ಸಾಕು ಆ ಮಕ್ಕಳಲ್ಲಿ ಒಂದಾದರೂ ಸದ್ಗುಣದ ಬೀಜವನ್ನು ಬಿತ್ತಿಯೇ ತೀರುತ್ತಾರೆ ಸುನಂದಮ್ಮ. ಬಳಗದ ತರಬೇತಿಗೆ ಬರುವ ಮಕ್ಕಳನ್ನಷ್ಟೆ ಅಲ್ಲದೆ, ಆಗಾಗ ಜಿಲ್ಲೆಯ ಹಲವು ಶಾಲೆಗಳಿಗೆ ತೆರಳಿ ನೈತಿಕ ಮೌಲ್ಯಗಳನ್ನು ಕುರಿತು ಕಥೆಗಳ ಮೂಲಕ ಮಕ್ಕಳ ಮೇಲೆ ಛಾಪು ಮೂಡಿಸುತ್ತಾರೆ. ಹಲವು ಶಾಲೆಗಳು ಸುನಂದಮ್ಮನವರ ಬರುವಿಕೆಗಾಗಿ ಕಾತರದಿಂದ ಕಾಯುತ್ತಿರುತ್ತವೆ.

ಹಣದ ಹಂಗಿಲ್ಲ
ಮಕ್ಕಳ ಶಿಬಿರಗಳ ಹೆಸರಲ್ಲಿ ಹಣ ಮಾಡುವ ಯೋಜನೆಗಳು ಎಷ್ಟೋ ನಡೆಯುತ್ತಿರುತ್ತವೆ. ಆದರೆ, ’ಕೃಪಾಮಯಿ ಮಕ್ಕಳ ಬಳಗ’ ಎಂದು ಹಣದ ಹಿಂದೆ ಬಿದ್ದಿಲ್ಲ. ಯಾವ ಒಂದು ಮಕ್ಕಳಿಂದ ಶುಲ್ಕ ಪಡೆಯದೇ ತರಬೇತಿ ನೀಡುತ್ತಾ ಬಂದಿದ್ದಾರೆ.

ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸ್ವಾಮಿಗಳ ಮಾರ್ಗದರ್ಶನದಲ್ಲಿ ಫಲಾಪೇಕ್ಷೆ ಇಲ್ಲದೆ ಮಕ್ಕಳ ಸೇವೆ ಮಾಡುತ್ತಿದೆ. ಸಾಮಾಜಿಕ ಕಳಕಳಿ ಮೆಚ್ಚಿ ಮಕ್ಕಳಿಗೆ ಅನುಕೂಲವಾಗಲಿ ಎಂದು ಕೆಲವು ಪಾಲಕರು ವಾರ್ಷಿಕ ಸಮಾರಂಭಗಳ ಖರ್ಚುವೆಚ್ಚ ನೋಡಿಕೊಳ್ಳುತ್ತಾರೆ ಅಷ್ಟೆ.

ಸುನಂದಮ್ಮ ಈಗ ಬರಿಯ ಮಕ್ಕಳ ಮನಸ್ಸನ್ನಷ್ಟೆ ಅಲ್ಲದೇ ತುಮಕೂರಿನ ಸಾವಿರಾರು ಪಾಲಕರ ಪಾಲಿನ ನೆಚ್ಚಿನ ತಾಯಿಯಾಗಿ ರೂಪುಗೊಂಡಿದ್ದಾರೆ. ತಾವು ಕಂಡುಕೊಂಡ ಹಣತೆಯ ಬೆಳಕನ್ನು ಹತ್ತಾರು ಮನೆಗಳಲ್ಲಿ ಹಚ್ಚಿ, ಆ ಮನೆ ಮನಗಳನ್ನು ಬೆಳಗುವ ಮೂಲಕ ಹೆಸರಾಗಿದ್ದಾರೆ. ಇಂತಹ ತಾಯಿಯಂದಿರು ಲಕ್ಷ ಲಕ್ಷವಾಗಲಿ, ಮತ್ತೆ ಮತ್ತೆ ಹುಟ್ಟಿ ಬರಲಿ – ಎಂದು  ಜನರು ಹಾರೈಸುತ್ತಿದ್ದಾರೆ.

ಸುನಂದಮ್ಮ ಅವರ ಇಬ್ಬರು ಮಕ್ಕಳು ಎಂಜಿನಿಯರ್‌ಗಳಾಗಿ ವಿದೇಶದಲ್ಲಿ ಕೆಲಸದಲ್ಲಿದ್ದರು. ಉಪನ್ಯಾಸಕರಾಗಿದ್ದ ಪತಿ ಎಚ್‌.ಆರ್‌. ರಂಗನಾಥ್ ಅವರ ನಿವೃತ್ತಿವೇತನ ಬರುತ್ತದೆ. ಇಳಿ ವಯಸ್ಸಿನಲ್ಲಿ ನೆಮ್ಮದಿಯಾಗಿರಬಹುದಿತ್ತು. ಆದರೆ, ಸುನಂದಮ್ಮ ರಂಗನಾಥ್ ದಂಪತಿ ಎಂದು ಆ ಮಾರ್ಗದಲ್ಲಿ ಚಿಂತಿಸಿಲ್ಲ. ಮಕ್ಕಳನ್ನು ಸ್ವದೇಶಕ್ಕೆ ಕರೆಸಿ ಇಲ್ಲಿಯೇ ಕೆಲಸ ಮಾಡುವಂತೆ ಹೇಳಿ, ಬಿಡುವಿನ ಸಮಯದಲ್ಲಿ ಅವರನ್ನು ಮಕ್ಕಳ ಬಳಗದ ಕೆಲಸದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ್ದಾರೆ.

ಜಗತ್ತಿನ ಇತಿಹಾಸವನ್ನು ಬರೆದಿರುವ ವಿಲ್‌ಡ್ಯೂರೆಂಟ್ ‘ಇತಿಹಾಸದ ಪಾಠಗಳು’ ಎಂಬ ಗ್ರಂಥದಲ್ಲಿ ‘ನಿಜವಾದ ಕ್ರಾಂತಿ ಎಂದರೆ ನಮ್ಮ ಮನಸ್ಸು ದಿವ್ಯತೆಯ ಬೆಳಕಿನಿಂದ ಬೆಳಗುವುದು, ಅದರಿಂದಲೇ ಚಾರಿತ್ರ್ಯದ ಬಲ ಸಂವರ್ಧನೆಯಾಗುವುದು’ ಎಂದಿದ್ದಾರೆ. ಅಂಥ ಬೆಳಕನ್ನೂ, ಚಾರಿತ್ರ್ಯಬಲದ ಸಂವರ್ಧನೆಯನ್ನೂ ಮಕ್ಕಳಿಗೆ ನೀಡುವ ಕೆಲಸವನ್ನು  ಬಳಗ ಮಾಡಿಕೊಂಡು ಬರುತ್ತಿದೆ.

ನಾವು ನಮ್ಮ ನೆಲದ ಸತ್ವವನ್ನು ಮರೆತು ಪಾಶ್ಚಾತ್ಯ ಸಂಸ್ಕೃತಿಗೆ ಮಾರಿ ಹೋಗುತ್ತಿದ್ದೇವೆ. ನಮ್ಮ ದೇಶದ, ಸಂಸ್ಕೃತಿಯ ಸತ್ವವನ್ನೂ ಸೊಬಗನ್ನೂ ಮಕ್ಕಳಿಗೆ ಪರಿಚಯಿಸುವ ಸಮಾಜನಿರ್ಮಾಣದ ಕೆಲಸವನ್ನು ಬಳಗ ಯಶಸ್ವಿಯಾಗಿ ನಡೆಸುತ್ತಿದೆ.

‘ಪಶುವಿನಂತಿರುವ ಶಿಶುವು ಸಂಸ್ಕಾರದಿಂದ ಮನುಷ್ಯ ಎಂದೆನಿಸಿಕೊಳ್ಳುತ್ತದೆ. ಮನುಷ್ಯ ವಿಕಾಸವಾಗಿ ಮಹಾಮಾನವನಾಗಬಲ್ಲ, ದೇವಮಾನವನೂ ಆಗಬಲ್ಲ; ಆಗಿಯೂ ಇದ್ದಾನೆ’ ಎಂಬ ಸ್ವಾಮಿ ವಿವೇಕಾನಂದರ ಮಾತಿನಂತೆ ‘ಕೃಪಾಮಯಿ’ ಮಕ್ಕಳ ಬಳಗ ಮಕ್ಕಳಿಗೆ ಸಂಸ್ಕಾರ ಕೊಟ್ಟು ಮಹಾಮಾನವರನ್ನಾಗಿ ಮಾಡಲು ಹೊರಟಿರುವುದು ನಿಜಕ್ಕೂ ಅಭಿನಂದನಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT