ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಋತುಚಕ್ರ ಮೈಲಿಗೆಯಲ್ಲ

Last Updated 26 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಜೋಯಿಡಾ ತಾಲ್ಲೂಕಿನ ಗುಂದ ಎಂಬೊಂದು ಹಳ್ಳಿಯಲ್ಲಿ ದೊಡ್ಡ ಮನೆ. ಜೋಯಿಡಾ ತಾಲ್ಲೂಕೇ ಅರಣ್ಯದ ಮಧ್ಯೆ ವ್ಯಾಪಿಸಿರುವುದರಿಂದ ಗುಂದ ಊರು ಆ ಅರಣ್ಯದ ನಡುವೆ ಹುಲುಸಾದ ಕೃಷಿ, ಜಾನುವಾರು ಚಟುವಟಿಕೆಗಳಿರುವ ಊರು.

ಆನೆಗಳ ದಾಳಿ ಸಾಮಾನ್ಯವಾದ್ದರಿಂದ ಅಲ್ಲಿರುವುದು ಕೇವಲ ಹತ್ತಿಪ್ಪತ್ತು ಕುಟುಂಬಗಳು. ಅಂತಹ ಕೃಷಿ ಚಟುವಟಿಕೆಯ ಮತ್ತು ಪೂಜೆ ಪುನಸ್ಕಾರಗಳನ್ನೆಲ್ಲ ವರ್ಷಾವಧಿಯಾಗಿ ಕಟ್ಟುನಿಟ್ಟಾಗಿ ಆಚರಿಸಿಕೊಂಡು ಬರುವ ಮನೆಯಲ್ಲಿ ಗೀತಕ್ಕ ಇದ್ದಾರೆ. 

ಎರಡು ಕೋಣಗಳು, ದನಕರುಗಳು, ಪ್ರತಿನಿತ್ಯ ಆಳುಗಳು - ಹೀಗೆ ಎಲ್ಲವನ್ನೂ ಸುಧಾರಿಸುತ್ತ ಪ್ರತಿನಿತ್ಯ ಜೀವನ ಮಾಡುವ ಗೀತಕ್ಕ ಯಾವತ್ತೂ ಪ್ಯಾಕೆಟ್ಟು ತಿನಿಸುಗಳನ್ನು ತಿಂದವರಲ್ಲ. ಅಷ್ಟೇಕೆ, ಮನೆಯಲ್ಲೇ ಬೆಳೆದ ಅಕ್ಕಿ, ತರಕಾರಿ, ತೆಂಗಿನ ಕಾಯಿ, ಮನೆಯಲ್ಲೇ ತಯಾರಿಸಿದ ಬೆಲ್ಲ ಬಳಸಿ ಅಡುಗೆ ಪದಾರ್ಥ ಮಾಡುವ ಪರಿಪಾಠ ಆ ಮನೆಯದ್ದು. 

ಅತ್ತೆ-ಮಾವ, ಗಂಡ, ಮತ್ತೆ ಮೂವರು ಮಕ್ಕಳನ್ನು ಸಂಭಾಳಿಸುತ್ತ ಸಾಗುವ ಗೀತಕ್ಕ ಆ ಮನೆಯ ಮುಖ್ಯ ಆಧಾರ ಸ್ತಂಭ. ಆದರೆ ಅವರನ್ನು ತೀವ್ರವಾದ ಗರ್ಭಕೋಶದ ಸಮಸ್ಯೆ ಬಾಧಿಸಲು ಶುರು ಮಾಡಿತು. 

ಶಿವಮೊಗ್ಗ ಜಿಲ್ಲೆಯ ತುಮರಿ ಎಂಬ ಹಳ್ಳಿ ಯಾರಿಗೆ ಗೊತ್ತಿಲ್ಲ? ಶರಾವತಿ ಹಿನ್ನೀರಿನ ನಡುವೆ ಇರುವ  ತುಮರಿ ಹಳ್ಳಿಯಲ್ಲಿಯೂ ಇಂತಹುದೇ ಒಂದು ಬೃಹತ್‌ ಮನೆ. ಮನೆಯಲ್ಲಿ  ಆರು ಮಂದಿ ಗಂಡುಮಕ್ಕಳಿದ್ದಾರೆ. ಎಲ್ಲರೂ ಕೃಷಿ ಕೆಲಸ ಮಾಡಿಕೊಂಡಿದ್ದಾರೆ.

ಕೃಷಿಕ್ಷೇತ್ರದಲ್ಲಿರುವ ಹುಡುಗರನ್ನು ಮದುವೆಯಾಗಲು ಹುಡುಗಿಯರು ನಿರಾಕರಿಸುತ್ತಿರುವುದರಿಂದ ಐವರಿಗೆ ಮದುವೆಯಾಗಿಲ್ಲ. ದೊಡ್ಡಣ್ಣನಿಗೆ ಮದುವೆಯಾಗಿದ್ದು ಅತ್ತಿಗೆ  ಶ್ರೀಲಕ್ಷ್ಮಿಯೇ ಆ ಮನೆಯಲ್ಲಿ ಎಲ್ಲರಿಗೂ ಅನ್ನ ಹಾಕುವವರು. ವಯಸ್ಸಾದ ಅತ್ತೆಯನ್ನು ನೋಡಿಕೊಳ್ಳುವವರು. ಅವರ ಆರೋಗ್ಯವೂ ಬೇಗನೇ ಕುಸಿದು ಹೋಯಿತು.

ನೂರಾರು ಎಕರೆ ಕೃಷಿ ಜಮೀನು ಹೊಂದಿರುವ ಮನೆ ಎಂದ ಮೇಲೆ ಮನೆ ಕೆಲಸ ತುಂಬ ಇರುತ್ತದೆ. ಆಳುಕಾಳು, ಜಾನುವಾರು ಅಂತೆಲ್ಲ ದಿನವಿಡೀ ಬಿಡುವಿಲ್ಲದ ಕೆಲಸ ಮಾಡುವುದು ಅನಿವಾರ್ಯ.

ಅದರೊಂದಿಗೆ ಸಂಕಷ್ಟಹರ ಗಣಪತಿವ್ರತ, ವಾರ್ಷಿಕ ಗಣಹೋಮ ಮತ್ತು ದೇವೀ ಪಾರಾಯಣ, ಮನೆಯ ಹಿರಿಯರ ಶ್ರಾದ್ಧಾದಿ ಕರ್ತವ್ಯಗಳು, ಅದರೊಂದಿಗೆ ನೆರೆಹೊರೆಯವರ ಧಾರ್ಮಿಕ ವಿಧಿಗಳಿಗೆ ನೆರವು, ಅರಿಶಿಣ, ಬಾಗಿನ, ಮದುವೆ ಉಪನಯನಗಳಲ್ಲಿ ಭಾಗವಹಿಸುವ ಅನಿವಾರ್ಯತೆಗಳು – ಇಂತಹ ಮನೆಯಲ್ಲಿ ಬಾಳುವೆ ಮಾಡುವ ಮಹಿಳೆಯರ ಮುಂದೆ ಇವೆ.

‘ವರ್ಷದಲ್ಲಿ ನಾಲ್ಕೈದು ಸಲವಾದರೂ ಮುಟ್ಟು ಮುಂದಕ್ಕೆ ಹೋಗುವ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೆ. ಮನೆಯಲ್ಲಿ ಪಾರಾಯಣ, ಗಣಹೋಮ ಇರುವಾಗ ಮುಟ್ಟು ಅಂತ ದೂರ ಕುಳಿತರೆ ಕೆಲಸ ನಿರ್ವಹಿಸುವುದಕ್ಕಾಗುವುದಿಲ್ಲ. ಹಾಗಾಗಿ ಮುಟ್ಟು ಮುಂದೂಡುವುದು ಅನಿವಾರ್ಯ ಆಗಿಬಿಡುತ್ತದೆ.

ನಮ್ಮ ಮನೆಗೆ ಮುತ್ತೈದೆ ಬಾಗಿನಕ್ಕೆ ಇತರರು ಬಂದಾಗ, ಅವರ ಮನೆಯಲ್ಲಿ ಇರುವ ಕಾರ್ಯಕ್ರಮಕ್ಕೆ ಹೋಗುವುದು ಧರ್ಮ ಅಲ್ವೆ? ಆಪ್ತರ ಮದುವೆ ಎಂದಾದ ಮೇಲೆ ಸಕ್ರಿಯವಾಗಿ ಭಾಗವಹಿಸುವಿಕೆ ಇದ್ದೇ ಇರುತ್ತದೆ. ಹಾಗಾಗಿ ಮುಟ್ಟು ಮುಂದೂಡುವ ಮಾತ್ರೆ ಅನಿವಾರ್ಯವೇ ಆಗಿಬಿಡುತ್ತದೆ’ ಎನ್ನುತ್ತಾರೆ ಗೀತಕ್ಕ.

ಮುಟ್ಟು ಮುಂದೂಡುವ ಮಾತ್ರೆಗಳನ್ನು ಅನೇಕ ಹೆಂಗಸರು, ಅದು ತಪ್ಪು ಎಂದು ಗೊತ್ತಿದ್ದರೂ ಬಳಸುವುದು ಇದೆ. ಆದರೆ ಗೀತಕ್ಕನಂತಹವರ ಪರಿಸ್ಥಿತಿ ಹೇಗಿರುತ್ತದೆ ಎಂದರೆ, ಮಾತ್ರೆ ಸೇವಿಸದೇ ಇರುವುದೇ ಅಪರಾಧವೇನೋ ಎಂಬ ಅಘೋಷಿತ ಬಿಗುವಿನ ವಾತಾವರಣವೊಂದು ಅವರ ಸುತ್ತ ಸೃಷ್ಟಿಯಾಗಿರುತ್ತದೆ.

‘ಮುಟ್ಟಾದಾಗ ದೂರ ಕುಳಿತುಕೊಳ್ಳಬೇಕು ಎಂದರೂ ಪರವಾಗಿಲ್ಲ. ಆದರೆ ಈ ತಿಂಗಳು ಒಂದು ಕಾರಣಕ್ಕೆ ಮುಂದಿನ ತಿಂಗಳು ಮತ್ತೊಂದು ಕಾರಣಕ್ಕೆ ಮಾತ್ರೆ ತೆಗೆದುಕೊಳ್ಳುವ ವಾತಾವರಣ ನಮ್ಮ ಮುಂದೆ ಸೃಷ್ಟಿಯಾಗಿರುತ್ತದೆ’ ಎಂಬ ಅಸಹಾಯಕತೆಯನ್ನು ಶೀಲಕ್ಕ ವ್ಯಕ್ತಪಡಿಸುತ್ತಾರೆ. ‘ಮುಟ್ಟಿನ ಕುರಿತಂತೆ ಭಾರತೀಯ ಪರಿಕಲ್ಪನೆಯೇ ಹೆಣ್ಣನ್ನು ಅಪರಾಧಿಯಂತಹ ಸ್ಥಾನದಲ್ಲಿ ನಿಲ್ಲಿಸುತ್ತದೆ.

ಅದಕ್ಕಾಗಿಯೋ ಏನೋ, ನನ್ನ ಬಳಿಕೆ ಬರುವ ಅನೇಕ ಮಹಿಳೆಯರು ಈ ಮಾತ್ರೆಯನ್ನು ಕೊಡುವಂತೆ ಗುಟ್ಟಾಗಿ ಕೇಳುತ್ತಾರೆ’ ಎಂದು ಮಾತು ಶುರು ಮಾಡುತ್ತಾರೆ ಹೊನ್ನಾವರದಲ್ಲಿರುವ ಡಾ. ಎಚ್‌. ಎಸ್‌. ಅನುಪಮಾ. ಹಿಂದಿನ ಕಾಲದ ನಂಬಿಕೆಗಳು ಯಾವ ಆಧಾರದಲ್ಲಿಯೇ ಆಚರಣೆಗೆ ಬಂದಿರಲಿ.

ಅವು ಇಂದು ಎಷ್ಟು ಪ್ರಸ್ತುತ ಎಂಬುದನ್ನಷ್ಟೇ ನಾವು ಅವಲೋಕಿಸಬೇಕಿದೆ.  ಎಷ್ಟೋ ನಂಬಿಕೆಗಳನ್ನು, ಆಚರಣೆಗಳನ್ನು ಬದಲಾದ ಆಧುನಿಕತೆಗೆ ತಕ್ಕಂತೆ ಬದಲಾಯಿಸಲಾಗಿದೆ. ಆದರೆ ಹೆಣ್ಣಿನ ಋತುಚಕ್ರಕ್ಕೆ ಸಂಬಂಧಿಸಿದಂತೆ ಆಗಬೇಕಾದ ಬದಲಾವಣೆಗೆ ಯಾಕಿಷ್ಟು ನಿಧಾನಗತಿ?

ಮುಟ್ಟು ಮುಂದೂಡುವುದು ಎಂದರೆ ಪ್ರಕೃತಿ ಸಹಜ ಹಾರ್ಮೋನ್‌ಗಳಿಗೆ ತಡೆ ಹಾಕಿದಂತೆ. ಅದರಿಂದ ದೇಹದ ಮೇಲೆ ಮಾತ್ರವಲ್ಲ, ಮಾನಸಿಕತೆಯ ಮೇಲೆಯೂ ಪರಿಣಾಮಗಳು ಬೀರುತ್ತವೆ ಎಂದು ವೈದ್ಯರು ಹೇಳುತ್ತಾರೆ.

ಈ ವಿಚಾರ ಎಲ್ಲರಿಗೂ ಗೊತ್ತಿದ್ದರೂ ಮತ್ತೆ ಮತ್ತೆ ಅದೇ ತಪ್ಪನ್ನು ಮಹಿಳೆಯರು ಮಾಡುತ್ತಾರೆ. ಔಷಧಾಲಯಗಳೂ ವೈದ್ಯರ ಚೀಟಿ ಇಲ್ಲದೇ ಗುಳಿಗೆಗಳನ್ನು ಮಾರುತ್ತಾರೆ. ವೈದ್ಯರೂ ಕೆಲವೊಮ್ಮೆ ಗುಳಿಗೆಗಳನ್ನು ಕೊಡುವ ಇಕ್ಕಟ್ಟಿಗೆ ಸಿಕ್ಕಿಬೀಳುತ್ತಾರೆ.

ಗ್ರಾಮೀಣ ಪ್ರದೇಶದಲ್ಲಿ ಮಾತ್ರವಲ್ಲ, ನಗರ ಪ್ರದೇಶದಲ್ಲಿಯೂ ಮಹಿಳೆಯರು ಪಿಳ್ಳೆ ನೆವಗಳಿಗೆ ಮುಟ್ಟು ಮುಂದೂಡುವ ಮಾತ್ರೆಗಳನ್ನು ತೆಗೆದುಕೊಳ್ಳುವುದುಂಟು. ಶಿಕ್ಷಣಕ್ಕೂ ಅರಿವಿಗೂ ಸಂಬಂಧವೇ ಇಲ್ಲವೆಂಬಂತೆ ಈ ಪ್ರಕ್ರಿಯೆಯೊಂದು ನಡೆದು ಬರುತ್ತಲೇ ಇದೆ.

‘ಮುಟ್ಟು ಎಂದರೆ ಮೈಲಿಗೆ ಅಥವಾ ಪಾಪ ಎಂಬ ನಂಬಿಕೆಯನ್ನು ಹೋಗಲಾಡಿಸುವಲ್ಲಿ ಪುರೋಹಿತರು ಮುಖ್ಯ ಪಾತ್ರ ವಹಿಸಬಲ್ಲರು. ಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆದಾಗ ಮುಟ್ಟಾದವರು ಭಾಗವಹಿಸಬಾರದು ಎನ್ನುವ ನಿಷೇಧ ಇರುವುದರಿಂದಲೇ ಮಾತ್ರೆಗಳನ್ನು ತೆಗೆದುಕೊಳ್ಳಲು ಮಹಿಳೆಯರು ಮುಂದಾಗುತ್ತಾರೆ.

ಹೆಚ್ಚಿನ ಪುರೋಹಿತರೂ ತಲೆತಲಾಂತರದಿಂದ ಬಂದ ನಂಬಿಕೆಯನ್ನೇ ಕಣ್ಣುಮುಚ್ಚಿ ಅನುಸರಿಸುತ್ತಾರೆಯೇ ವಿನಾ ಅದರ ಕಾರಣಗಳನ್ನು ಅನ್ವೇಷಿಸುವ, ವಿಮರ್ಶಿಸುವ ಗೋಜಿಗೇ ಹೋಗುವುದಿಲ್ಲ. ನನ್ನ ಕ್ಲಿನಿಕ್‌ಗೆ ಬಂದ ಮಹಿಳೆಯೊಬ್ಬಳು, ಮನೆಯಲ್ಲಿ ಧಾರ್ಮಿಕ ಕಾರ್ಯ ಇರುವುದರಿಂದ ಮನೆಯ ಎಲ್ಲ ಹೆಣ್ಮಕ್ಕಳಿಗೂ ಒಂದೊಂದು ಮಾತ್ರೆ ಕೊಟ್ಟುಬಿಡಿ... ಎಂದು ಕೇಳಿದ್ದಳು.

ಆಕೆಯ ಮುಗ್ಧತೆ ಹಾಗಿರಲಿ. ಅಂತಹ ಸಲಹೆಗಳನ್ನು ಕೊಡುವವರು,  ತಮ್ಮ ಸಲಹೆಯಿಂದ ಹೆಣ್ಮಕ್ಕಳಿಗೆ ಆಗುವ ತೊಂದರೆಗಳ ಬಗ್ಗೆ ತಿಳಿದುಕೊಳ್ಳಬೇಕು’ ಎಂದು ಪರಿಸ್ಥಿತಿಯ ತೀವ್ರತೆಯನ್ನು ಡಾ. ಅನುಪಮಾ ವಿಶ್ಲೇಷಿಸುತ್ತಾರೆ.

ಪ್ರಖ್ಯಾತ ಜ್ಯೋತಿಷಿ ದೈವಜ್ಞ ಕೆ. ಎನ್‌. ಸೋಮಯಾಜಿ ಅವರು ಹೇಳುವ ಪ್ರಕಾರ ಭಾರತದಿಂದ ವಿದೇಶಗಳಿಗೆ ತೆರಳಿದವರೂ ಅಲ್ಲಿ ಇದೇ ಆಚರಣೆಯನ್ನು ಕಟ್ಟುನಿಟ್ಟಾಗಿ ಮುಂದುವರೆಸಿಕೊಂಡು ಬರುತ್ತಿದ್ದಾರೆ.

ಹಾಗಾಗಿ ಆರ್ಥಿಕ ಅನುಕೂಲತೆ, ಶಿಕ್ಷಣದಿಂದ ಈ ಮೂಢನಂಬಿಕೆಯನ್ನು ತೆಗೆದು ಹಾಕುವುದು ಸುಲಭವಲ್ಲ. ಇಚ್ಛಾಶಕ್ತಿಯಿಂದ ಮತ್ತು ಮನೆಯವರ ಸಲಹೆ ಮತ್ತು ಕಾಳಜಿಯಿಂದ ಮಾತ್ರ ಈ ನಂಬಿಕೆಯಿಂದ ಭಾರತೀಯರು ಹೊರಬರಬಹುದು ಎನಿಸುತ್ತದೆ.

ಮೈಲಿಗೆ ಮುಕ್ತ ಪ್ರಥಮ ದೇವಸ್ಥಾನ ಕುದ್ರೋಳಿ
ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ರೂವಾರಿ, ಕೇಂದ್ರದ ಮಾಜಿ ಸಚಿವರೂ ಆಗಿರುವ ಜನಾರ್ದನ ಪೂಜಾರಿ, ಮುಟ್ಟಿನ ಕಾರಣಕ್ಕೆ ಮಹಿಳೆ ದೇವರಿಂದ ದೂರ ಇರಬೇಕು ಎನ್ನುವುದು ಹಾಸ್ಯಾಸ್ಪದ ಎನ್ನುತ್ತಾರೆ. ದೇವಸ್ಥಾನಕ್ಕೆ ಎಲ್ಲ ಮಹಿಳೆಯರು ಎಲ್ಲ ಕಾಲದಲ್ಲಿಯೂ ಬರಬಹುದು ಎಂದು ಅವರು ಪ್ರತಿಪಾದಿಸುತ್ತಾರೆ.

ದೇವರನ್ನು ಭಜಿಸುವ, ಪೂಜಿಸುವ ಹಕ್ಕು ಎಲ್ಲರಿಗೂ ಇದೆ. ಮುಟ್ಟಾದ ಮಹಿಳೆಯ ಪಾಲಿಗೆ ದೇವರಿಲ್ಲ ಎನ್ನುವುದರಲ್ಲಿ ಅರ್ಥವೇ ಇಲ್ಲ. ಆಕೆ ದೇವಸ್ಥಾನಕ್ಕೆ ಬರಬಾರದು ಎನ್ನುವುದೂ ಸರಿಯಲ್ಲ.  ಎಲ್ಲ ಮಹಿಳೆಯರೂ ಎಲ್ಲ ಕಾಲದಲ್ಲಿಯೂ ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸುವುದಕ್ಕೆ ಅರ್ಹರು. ಮುಟ್ಟಾಗುತ್ತಾರೆ ಎಂಬುದು ಅನರ್ಹತೆಯಲ್ಲ ಎನ್ನುತ್ತಾರೆ ಜನಾರ್ದನ ಪೂಜಾರಿ.

ಋತುಚಕ್ರ ಇರುವುದರಿಂದಲೇ ಈ ಮನುಕುಲ ಮುಂದುವರೆಯುತ್ತಿದೆ. ಆದ್ದರಿಂದ ಮುಟ್ಟು ಎಂಬುದು ಸಂಭ್ರಮದ ವಿಷಯ. ಮನೆಯ ಹೆಂಗಸರು ಮುಟ್ಟು ಮುಂದೂಡುವ ಮಾತ್ರೆ ತೆಗೆದುಕೊಳ್ಳದಂತೆ ಪುರುಷರೂ ಜವಾಬ್ದಾರಿ ವಹಿಸಬೇಕು. ಮಹಿಳೆಯ ಕೆಲಸಗಳ ಜವಾಬ್ದಾರಿ ವಹಿಸಿ ಮೂರು ದಿನಗಳ ಕಾಲ ತುಸು ವಿಶ್ರಾಂತಿ ಸಿಗುವಂತೆ ಮಾಡುವ ಕರ್ತವ್ಯ ಪುರುಷರ ಹೆಗಲ ಮೇಲಿದೆ ಅಲ್ಲವೆ? –  ಎಂದು ಪ್ರಶ್ನಿಸುತ್ತಾರೆ ಡಾ. ಅನುಪಮಾ.

‘ಪ್ರಕೃತಿಗೆ ವಿರುದ್ಧವಾದುದೇ ಅಧರ್ಮ’
ಋತುಚಕ್ರ ಎನ್ನುವುದು ಪ್ರಕೃತಿಯ ಕರೆ. ಅದು ಅಪವಿತ್ರ ಎಂದು ಯಾವುದೇ ವೇದದಲ್ಲಾಗಲೀ, ಶಾಸ್ತ್ರದಲ್ಲಾಗಲೀ ಹೇಳಿಲ್ಲ - ಎನ್ನುತ್ತಾರೆ ಖ್ಯಾತ ಜ್ಯೋತಿಷಿ ದೈವಜ್ಞ ಕೆ. ಎನ್‌. ಸೋಮಯಾಜಿ. ಹಸಿವು, ಬಾಯಾರಿಕೆಗಳು ಅಥವಾ ವಿಸರ್ಜನೆಗಳು ಇದ್ದ ಹಾಗೆಯೇ, ಸ್ತ್ರೀಯರಿಗೆ ಇರುವ ಈ ವಿಶೇಷ ಶಕ್ತಿಯ ದ್ಯೋತಕವೇ ಋತುಚಕ್ರ.

ಆ ಚಕ್ರವನ್ನು ಏರುಪೇರು ಮಾಡುವುದೇ ಧರ್ಮಕ್ಕೆ ವಿರುದ್ಧವಾದುದು. ಅದರಿಂದ ಸ್ತ್ರೀಯ ದೇಹ ಮತ್ತು ಮನಸ್ಸಿನ ಮೇಲಾಗುವ ಪರಿಣಾಮ ಅಗಾಧವಾದುದು ಎನ್ನುವ ಸೋಮಯಾಜಿ ಅವರು, ಮುಟ್ಟಾದ ಹೆಂಗಸು ದೇವಕಾರ್ಯದಲ್ಲಿ ಭಾಗವಹಿಸಬಾರದು ಎಂಬುದಾಗಿ ಯಾವ ಶಾಸ್ತ್ರದಲ್ಲಿಯೂ ಉಲ್ಲೇಖಿಸಿಲ್ಲ. 

ಮುಟ್ಟಾದ ಸಂದರ್ಭದ ಮೂರು ದಿನಗಳಲ್ಲಿ ವಿಶ್ರಾಂತಿ ಸಿಗಲಿ ಎಂಬ ಕಾರಣಕ್ಕಾಗಿ ಸ್ತ್ರೀಗೆ ಮನೆಕೆಲಸ ಮತ್ತು ದೇವರ ಕಾರ್ಯಗಳಿಂದ ಬಿಡುವು ನೀಡಲಾಗಿದೆ. ಪುರುಷರ ಸಾಂಗತ್ಯದ ಒತ್ತಡವೂ ಆಕೆಯ ಮೇಲೆ ಹೇರಿಕೆ ಆಗದೇ ಇರದೇ ಇರಲಿ ಎಂಬ ಕಾರಣಕ್ಕೆ ಆಕೆಯನ್ನು ಪ್ರತ್ಯೇಕವಾಗಿ ಇರುವಂತೆ ಹೇಳಿರಬಹುದು. 

ಎಲ್ಲ ನಿಯಮಗಳಿಗೂ ದೇವರ ಭಯವನ್ನು ಇರಿಸಿ ಮುಂದುವರೆಯುವುದು ಭಾರತೀಯರ ನಂಬಿಕೆ. ಹೀಗೆಯೇ ಪಾಪಪುಣ್ಯದ ಪರಿಕಲ್ಪನೆಗಳು ಸೃಷ್ಟಿಯಾಗಿರಬಹುದು. ಅದಕ್ಕೆ ಪೂರಕವಾದ ಆಚರಣೆಗಳನ್ನೂ ಸೃಷ್ಟಿ ಮಾಡಿರಬಹುದು. ಅನುಕೂಲಕ್ಕೆ ಮಾಡಿಕೊಂಡ ನಿಯಮಗಳೇ ಸಂಪ್ರದಾಯ. 

ಇಂದು ಎಲ್ಲರಿಗೂ ಶಿಕ್ಷಣ–ಅರಿವಿರುವುದರಿಂದ ಋತುಚಕ್ರವನ್ನು ಸಹಜವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳುವುದು ಅಗತ್ಯವಾಗಿದೆ. ಅಜ್ಜಿಯಿಂದ ತಾಯಿಗೆ, ತಾಯಿಯಿಂದ ಮಗಳಿಗೆ ಈ ಸಂಪ್ರದಾಯ ವರ್ಗಾವಣೆ ಆಗುತ್ತಲೇ ಇದೆ.

ಒಂದೊಂದು ಧರ್ಮದಲ್ಲಿ–ಸಮುದಾಯದಲ್ಲಿ ಒಂದೊಂದು ರೀತಿಯ ಆಚರಣೆ, ನಂಬಿಕೆಗಳು ಬೆಳೆದುಬಂದಿವೆ. ಆದರೆ ಜಾಗತಿಕವಾಗಿ ಎಲ್ಲರೂ ಒಂದಾಗಿ ಯೋಚಿಸುವಷ್ಟರ ಮಟ್ಟಿಗೆ ಆಧುನಿಕತೆ ಬೆಳೆದಿರುವಾಗ ಈ ಸಂಪ್ರದಾಯದ ವರ್ಗಾವಣೆಯನ್ನು ನಿಲ್ಲಿಸುವುದು ಕಷ್ಟವಲ್ಲ ಎಂದು ಕೆ.ಎನ್‌. ಸೋಮಯಾಜಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT