ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಂಟಸಿ ಪರದಾಟ

ಫ್ಲೈಯಿಂಗ್‌ ಜಾಟ್‌ (ಹಿಂದಿ)
Last Updated 26 ಆಗಸ್ಟ್ 2016, 10:34 IST
ಅಕ್ಷರ ಗಾತ್ರ

ಚಿತ್ರ: ಫ್ಲೈಯಿಂಗ್‌ ಜಾಟ್‌ (ಹಿಂದಿ)
ನಿರ್ಮಾಣ: ಏಕ್ತಾ ಕಪೂರ್‌, ಶೋಭಾ ಕಪೂರ್‌
ನಿರ್ದೇಶನ: ರೆಮೊ ಡಿಸೋಜ
ತಾರಾಗಣ: ಟೈಗರ್‌ ಶ್ರಾಫ್‌, ಜಾಕ್ವೆಲಿನ್‌ ಫರ್ನಾಂಡಿಸ್‌, ನಥಾನ್‌ ಜೋನ್ಸ್‌, ಕೆಕೆ ಮೆನನ್‌

ಬೆಳದಿಂಗಳ ರಾತ್ರಿ. ಮಹಡಿ ಮೇಲೆ ನಿಂತ ಸೂಪರ್‌ ಹೀರೊ ನಾಯಕಿಯತ್ತ ಕೈಚಾಚುತ್ತಾನೆ. ಅವನ ಪಾದಗಳ ಮೇಲೆ ಪಾದಗಳನ್ನೂರುವ ನಾಯಕಿಯೂ ಅವನೊಟ್ಟಿಗೆ ಹಾರುತ್ತಾಳೆ. ರಾತ್ರಿಯಲ್ಲೂ ಅವಳಿಗೆ ಚಂದಿರನ ಬೆಳಕಿನ ಸುಂದರ ಪ್ರಕೃತಿಯನ್ನು ತೋರುತ್ತಾನೆ, ಪುಷ್ಪವೃಷ್ಟಿ ಸುರಿಸುತ್ತಾನೆ. ರಾಗವಾಗಿ ಹಾಡುತ್ತಾನೆ. ಲೀಲಾಜಾಲವಾಗಿ ಬ್ಯಾಲೆ ಶೈಲಿಯಲ್ಲಿ ಕುಣಿಯುತ್ತಾನೆ. ಅವಳಿಗೆ ರೋಮಾಂಚನ; ನೋಡುಗರಿಗೂ.

ಹಾಡೊಂದರಲ್ಲಿ ಬರುವ ಈ ದೃಶ್ಯವನ್ನು ಇಡೀ ಸಿನಿಮಾಗೆ ಅನ್ವಯಿಸಲು ಸಾಧ್ಯವಿಲ್ಲ. ಅಪ್ಪಟ ಫ್ಯಾಂಟಸಿ ಕಥಾನಕನದ ಮೂಲಕ ರಂಜಿಸುವ ಒಳ್ಳೆಯ ಅವಕಾಶವನ್ನು ನಿರ್ದೇಶಕರೇ ಹಾಳುಗೆಡವಿದ್ದಾರೆ.

ಭಾರತೀಯ ಚಿತ್ರರಂಗಕ್ಕೆ ಅಪರೂಪವೇ ಎನ್ನಬಹುದಾದ ಫ್ಯಾಂಟಸಿಯನ್ನು ತೆರೆಯ ಮೇಲೆ ತೋರಿಸಲು ದೊಡ್ಡ ಬಜೆಟ್‌ ಬೇಕು.  ಮೇಲಾಗಿ ಜನಪದ ಕಥೆಗಳಿಗೆ ಇರುವ ಬೇರುಮಟ್ಟದ ಸಿನಿಮೀಯ ತರ್ಕವೊಂದನ್ನು ದಕ್ಕಿಸಿಕೊಡಬೇಕು. ಈ ಎರಡೂ ಮಿತಿಗಳಲ್ಲಿ ನಿರ್ದೇಶಕರು ಅಡಿಗಡಿಗೂ ಪರದಾಡಿರುವುದಕ್ಕೆ ‘ಫ್ಲೈಯಿಂಗ್‌ ಜಾಟ್‌’ ಉದಾಹರಣೆ.

ಪಂಜಾಬ್‌ನ ಜಾಟ್‌ ಸಮುದಾಯದ ಸರ್ದಾರ್‌ ಒಬ್ಬ ಸೂಪರ್‌ಮ್ಯಾನ್‌ ಆಗುವುದು ಸಿನಿಮಾದ ಮೂಲಎಳೆ. ಅವನು ಸೂಪರ್‌ಮ್ಯಾನ್‌ ಹೇಗಾಗುತ್ತಾನೆ ಎನ್ನುವುದಕ್ಕೆ ಮೌಢ್ಯ, ಪವಾಡದ ದೇಸೀಯತೆಯನ್ನು ದುಡಿಸಿಕೊಂಡಿರುವುದರಲ್ಲಿ ನಿರ್ದೇಶಕರ ಕಸುಬುದಾರಿಕೆ ಕಾಣುವುದಿಲ್ಲ. ಸಿನಿಮಾವನ್ನು ರೋಮಾಂಚನದ ತಿರುವಿಗೆ ತಂದು ನಿಲ್ಲಿಸಿದ ಮೇಲೆ, ಪರಿಸರ ಮಾಲಿನ್ಯ ವಿರುದ್ಧದ ಹೋರಾಟದ ಬೋಧನೆಯ ತಂತ್ರವನ್ನು ತುರುಕಿದ್ದಾರೆ. ಮಲಿನ ಗಾಳಿಯನ್ನು ಕುಡಿಕುಡಿದು ಶಕ್ತಿ ವರ್ಧಿಸಿಕೊಳ್ಳುವ ರಾಕ್ಷಸೀ ಸ್ವರೂಪದ ಖಳನಾಯಕನ ಪಾತ್ರಕ್ಕೆ ರಕ್ತ–ಮಾಂಸ ತುಂಬಲೂ ನಿರ್ದೇಶಕರಿಗೆ ಆಗಿಲ್ಲ. ದೊಡ್ಡ ಮಟ್ಟದಲ್ಲಿ ಯೋಚಿಸಿರುವ ನಿರ್ದೇಶಕರು, ತೆರೆಯ ಮೇಲೆ ಅದನ್ನು ತೋರಲು ಅಗತ್ಯವಿರುವ ಭೂಮಿಕೆಯನ್ನು ಪರಿಕಲ್ಪಿಸಿಕೊಳ್ಳುವುದರಲ್ಲೇ ಎಡವಿದ್ದಾರೆ.

ಭಾವಸ್ಫುರಣೆಯ ವಿಷಯದಲ್ಲಿಯೂ ಆಗಿರುವುದು ಎಡವಟ್ಟುಗಳೇ. ಕೆಲವು ಗಂಭೀರ ದೃಶ್ಯಗಳನ್ನು ನೋಡಿ ಸಹಜವಾಗಿಯೇ ನಗು ಬರುತ್ತದೆ. ಹಾಸ್ಯ ಎಂದು ಕಥನಕಾರ ಭಾವಿಸಿರುವ ಕಡೆ ‘ರಸ’ ಕೈಕೊಡುತ್ತದೆ. ಪಂಜಾಬ್‌ನ ಸರ್ದಾರ್‌ಗಳ ಹೋರಾಟದ ಕಥನವನ್ನು ನಡುವೆ ತುರುಕಿ, ಕಾರ್ಟೂನ್‌ಗಳ ಮೂಲಕ ತೋರಿಸಿರುವುದು ಕೂಡ ಯೋಚನಾ ದಾರಿದ್ರ್ಯಕ್ಕೆ ಸಾಕ್ಷಿ.

ಹಿಂದಿಯಲ್ಲಿ ‘ಕ್ರಿಶ್‌’, ‘ರಾ ಒನ್‌’ ತರಹದ ಅತಿಮಾನವ ಪಾತ್ರ ಪರಿಕಲ್ಪನೆಗಳನ್ನೊಳಗೊಂಡ ಸಿನಿಮಾಗಳು ಸೋತ ಉದಾಹರಣೆ ಎದುರಲ್ಲಿ ಇದೆ. ಅವುಗಳಿಂದಲಾದರೂ ಪಾಠ ಕಲಿಯಬಹುದಿತ್ತು. ರೆಮೊ ಡಿಸೋಜ ದೊಡ್ಡ ವಸ್ತುವಿನ ಸಿನಿಮಾಗೆ ಕೈಹಾಕಿ ಗೊಂದಲದ ಹಗ್ಗದಿಂದ ಕೈಕಟ್ಟಿಸಿಕೊಂಡಿರುವುದಕ್ಕೆ ಸಾಕಷ್ಟು ಉದಾಹರಣೆಗಳು ಸಿನಿಮಾದಲ್ಲಿ ಸಿಗುತ್ತವೆ.

ಟೈಗರ್‌ ಶ್ರಾಫ್‌ ಮೈಕಟ್ಟು, ನೃತ್ಯ ಪ್ರತಿಭೆ, ಲವಲವಿಕೆಯನ್ನು ಮೆಚ್ಚಿಕೊಳ್ಳಬಹುದಾದರೂ ಅಭಿನಯದಲ್ಲಿ ಅವರಿನ್ನೂ ಪಳಗಬೇಕು. ಜಾಕ್ವೆಲಿನ್‌ಗೆ ಭಾವ ತುಳುಕಿಸಲು ಹೆಚ್ಚು ಅವಕಾಶವಿಲ್ಲ. ಪೋಷಣೆ ಸಾಲದೆ ಸೊರಗುವ ಪಾತ್ರದಲ್ಲಿ ಕೆಕೆ ಮೆನನ್‌ ಪರವಾಗಿಲ್ಲ. ರಾಕ್ಷಸೀ ಪಾತ್ರದಲ್ಲಿ ನಥಾನ್‌ ಜೋನ್ಸ್‌ ಪೇಲವವಾಗಿದ್ದಾರೆ. ಸಚಿನ್‌–ಜಿಗರ್‌ ಸಂಗೀತ ಮಾತ್ರ ಸಿನಿಮಾದ ಹಿತಕರವಾದ ಅಂಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT