ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾ ಕವಿತಾ...

Last Updated 26 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಶುಕ್ರವಾರದ ಪೂಜೆಯ ವೇಳೆಗೆ ಬಾ ಎಂದು ಲಕ್ಷ್ಮಿಯನ್ನು ಕರೆಯುವುದು ಈಗ ಹಳೆಯ ಶೈಲಿ. ಈಗೇನಿದ್ದರೂ ಪ್ರತಿರಾತ್ರಿ ಏಳೂ ಮೂವತ್ತಕ್ಕೆ ‘ಲಕ್ಷ್ಮೀ ಬಾರಮ್ಮ’ ಎನ್ನುವ ಆಲಾಪ. ಹಾಂ, ಇದು ಕಿರುತೆರೆಯ ಲಕ್ಷ್ಮಿಯ ಕಥೆ; ‘ಕಲರ್ಸ್‌ ಕನ್ನಡ’ ವಾಹಿನಿಯಲ್ಲಿ ಪ್ರಸಾರವಾಗುವ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯ ಕಥೆ.

‘ಲಕ್ಷ್ಮೀ ಬಾರಮ್ಮ’ ಎಂದಕೂಡಲೇ ಪ್ರೇಕ್ಷಕರ ಮನಸ್ಸಿನಲ್ಲಿ ಸುಳಿಯುವುದು ಚಿನ್ನು ಎನ್ನುವ ತರುಣಿಯ ಪೆದ್ದು–ಮುದ್ದು ಮುಖ. ತೆರೆಯ ಮೇಲೆ ಅತಿ ಮುಗ್ಧಳಂತೆ, ಮಿದುಭಾಷಿಯಾಗಿ ಕಾಣುವ ಈ ನಟಿಯದು, ಪರದೆಯಾಚೆ ಅದಕ್ಕೆ ತದ್ವಿರುದ್ಧ ಸ್ವಭಾವ.

ಎದುರಿಗಿದ್ದವರು ಬೇಸರ ಪಟ್ಟುಕೊಂಡರೂ ತೊಂದರೆಯಿಲ್ಲ ಎಂಬಂತೆ ಸರಿ ಕಾಣದ್ದನ್ನು ತಪ್ಪು ಎಂದು ನಿಷ್ಠುರವಾಗಿ ಹೇಳಿಬಿಡುವ ವ್ಯಕ್ತಿತ್ವ. ತಮ್ಮದಲ್ಲದ ಸ್ವಭಾವವೇ ಅವರಿಗೆ ಜನಪ್ರಿಯತೆ ತಂದುಕೊಟ್ಟಿರುವುದು. ಅಂದಹಾಗೆ, ‘ಕಿರುತೆರೆಯ ಲಕ್ಷ್ಮಿ’ ಚಿನ್ನುವಿನ ನಿಜವಾದ ಹೆಸರು ಕವಿತಾ.

ಬೆಂಗಳೂರಲ್ಲೇ ಹುಟ್ಟಿ ಬೆಳೆದ ಕವಿತಾ ಮೂಲತಃ ಭರತನಾಟ್ಯ ಕಲಾವಿದೆ. ಶಮಾ ಕೃಷ್ಣ ಅವರ ನೃತ್ಯಗುರು. ಒಮ್ಮೆ ಭರತನಾಟ್ಯ ಪ್ರದರ್ಶನ ನೀಡುವಾಗ ನಿರ್ಮಾಪಕಿ ಶ್ರುತಿ ನಾಯ್ಡು ಭೇಟಿ ಆಯಿತು. ‘ನಟಿಸಲು ಆಸಕ್ತಿ ಇದೆಯೇ?’ ಎಂದು ಅವರು ಕೇಳಿದಾಗ, ಹಿಂದೆಮುಂದೆ ನೋಡದ ಕವಿತಾ ‘ಯಾಕಿಲ್ಲ’ ಎಂದರು. ಆದರೆ, ಆಡಿಷನ್‌ ನಡೆದಾಗ, ಪಾತ್ರಕ್ಕೆ ತುಂಬಾ ಚಿಕ್ಕವಳಂತೆ ಕಾಣಿಸುತ್ತಿದ್ದರಿಂದ ಅವಕಾಶ ದೊರೆಯಲಿಲ್ಲ. 

ಆ ನಿರಾಸೆಯನ್ನು ಮರೆತು ಓದಿನಲ್ಲಿ ಮುಳುಗಿದ್ದವರಿಗೆ ಮತ್ತೆ ನಟನೆಯ ಆಹ್ವಾನ ಬಂತು. ಆಡಿಷನ್ ನೀಡಿದ ಮೂರನೇ ದಿನವೇ ಒಪ್ಪಂದಕ್ಕೆ ಸಹಿಯನ್ನೂ ಹಾಕಿದರು. ಅಲ್ಲಿಂದ ಕವಿತಾ, ‘ಚಿನ್ನು’ ಎಂಬ ಹೆಸರಿನಿಂದಲೇ ಜನಪ್ರಿಯರಾದುದು ಈಗ ಮನೆ ಮನೆ ಮಾತು.

ಕಿರುತೆರೆಯಲ್ಲಿ ತಮ್ಮದೇ ಆದ ಜನಪ್ರಿಯತೆ ಕಂಡುಕೊಂಡಿರುವ ಕವಿತಾ ಈಗ ಬೆಳ್ಳಿತೆರೆಯನ್ನೂ ಪ್ರವೇಶಿಸುತ್ತಿದ್ದಾರೆ. ಧಾರಾವಾಹಿಯಲ್ಲಿ ಅವರ ಮುಗ್ಧತೆಯ ಅಭಿನಯ ಕಂಡಿದ್ದ ಶ್ರೀನಿವಾಸ್‌, ಅವರನ್ನು ತಮ್ಮ ಸಿನಿಮಾಕ್ಕೆ ಕರೆತಂದರು.

‘ಟೋಪಿವಾಲಾ’ ಖ್ಯಾತಿಯ ಶ್ರೀನಿವಾಸ್‌ ನಿರ್ದೇಶನ–ನಟನೆಯ ‘ಶ್ರೀನಿವಾಸ ಕಲ್ಯಾಣ’ ಚಿತ್ರದಲ್ಲಿ ಕವಿತಾ ನಾಯಕಿ. ಚಿತ್ರದಲ್ಲವರದು ಹೈಸ್ಕೂಲು ವಿದ್ಯಾರ್ಥಿನಿಯ ಪಾತ್ರ; ಕಥಾನಾಯಕನ ಮೊದಲ ಪ್ರೇಯಸಿ. ‘ಫಸ್ಟ್‌ ಲವ್‌’ ಚಿತ್ರದಲ್ಲೂ ಕವಿತಾ ನಟಿಸುತ್ತಿದ್ದು, ಆ ಚಿತ್ರದಲ್ಲಿ ಅವರಿಗೆ ಕಾಲೇಜು ವಿದ್ಯಾರ್ಥಿನಿ ಪಾತ್ರದ ರೂಪದಲ್ಲಿ ಬಡ್ತಿ ದೊರೆತಿದೆ.

ಧಾರಾವಾಹಿಯಿಂದ ವೃತ್ತಿ ಬದುಕು ಆರಂಭಿಸಿ, ಈಗ ಸಿನಿ ಪಯಣವನ್ನೂ ಶುರುಮಾಡಿರುವ ಕವಿತಾ ಅವರಿಗೆ ಎರಡೂ ಕ್ಷೇತ್ರಗಳು ಖುಷಿ ನೀಡಿವೆಯಂತೆ. ‘ನಟನೆ ನನ್ನ ಪ್ಯಾಷನ್‌. ಒಬ್ಬ ನಟಿಯಾಗಿ ಎರಡೂ ಪರದೆಗಳನ್ನು ಇಷ್ಟಪಡುತ್ತೇನೆ. ಒಳ್ಳೆಯ ಅನುಭವ, ಕಲಿಕೆ ದೊರೆತಿದೆ’ ಎನ್ನುತ್ತಾರೆ.

‘ಎರಡೂ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳುವಾಗ ವೈಯಕ್ತಿಕ ಬದುಕು ಮತ್ತು ಸಮಯವನ್ನು ತ್ಯಾಗ ಮಾಡಲೇಬೇಕು. ಇದು ಜೀವನದ ಮಹತ್ವದ ಘಟ್ಟ. ನನಗೆ ಅವಕಾಶಗಳು ಸಿಗುತ್ತಿವೆ ಎಂದರೆ, ನಾನು ಅದೃಷ್ಟವಂತೆಯೇ ಸರಿ. ಎಷ್ಟೋ ಮಂದಿ ಅವಕಾಶ ಮತ್ತು ಜನಪ್ರಿಯತೆಗೆ ಕಷ್ಟಪಡುವುದನ್ನು ನೋಡಿದ್ದೇನೆ. ಹೀಗಾಗಿ ನನ್ನ ಈಗಿನ ಬದುಕಿನ ಪ್ರತಿ ಗಳಿಗೆಯೂ ಅಮೂಲ್ಯ ಎಂದು ಭಾವಿಸುತ್ತೇನೆ. ಇದನ್ನು ಎಂಜಾಯ್ ಮಾಡುತ್ತಿದ್ದೇನೆ’ ಎನ್ನುತ್ತಾರೆ ಅವರು.

ನಟನಾ ಕ್ಷೇತ್ರಕ್ಕೆ ಬಾರದಿದ್ದರೆ ನೃತ್ಯಗಾತಿಯಾಗಿರುತ್ತಿದ್ದೆ ಇಲ್ಲವೇ, ಯಾವುದಾದರೂ ಕಾರ್ಪೊರೇಟ್‌ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುತ್ತಿದ್ದೆ ಎನ್ನುವ ಅವರು, ಸಿನಿಮಾ ಮತ್ತು ಧಾರಾವಾಹಿಗಳ ನಡುವೆ ದೊಡ್ಡ ವ್ಯತ್ಯಾಸವನ್ನೇನೂ ಕಂಡಿಲ್ಲ.

ಧಾರಾವಾಹಿಯಲ್ಲಿನ ಪಾತ್ರಗಳು ಜನರನ್ನು ಬೇಗ ತಲುಪುತ್ತವೆ. ಧಾರಾವಾಹಿಯಲ್ಲಿನ ಪಾತ್ರ, ಅವರ ಪಾಲಿಗೆ ನಿಜ ಬದುಕಿನ ‘ಚಿನ್ನು’ವೇ ಆಗಿರುತ್ತೇನೆ. ಸಿನಿಮಾದಲ್ಲಿ ಅದು ಸಾಧ್ಯವಿಲ್ಲ. ಸಿನಿಮಾ ನಟಿಯರು ಎಂದಾಗ ಒಂದು ಅಂತರದಿಂದ ಮಾತನಾಡಿಸುತ್ತಾರೆ ಎಂದು ತಾವು ಕಂಡ ಅನುಭವದ ವ್ಯತ್ಯಾಸವನ್ನು ವಿವರಿಸುತ್ತಾರೆ ಕವಿತಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT