ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊಗಡಿನ ಬಿರಿಯಾನಿ ಸವಿ

ನಳಪಾಕ
Last Updated 26 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ದೇಶ ವಿದೇಶಗಳಲ್ಲಿ ಕೆಲಸ ಮಾಡಿ ಅನುಭವವಿರುವ ಸಚಿನ್‌ ತಲ್ವಾರ್ ಮೂಲತಃ ಪಶ್ವಿಮ ಬಂಗಾಳದವರು. ಕೊಲ್ಕತ್ತಾದ ಇಂಟರ್‌ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟಿನಲ್ಲಿ ಅಧ್ಯಯನ ಮಾಡಿರುವ ಅವರು ಪ್ರಸ್ತುತ ಬೆಂಗಳೂರಿನ ರೆಸಿಡೆನ್ಸಿ ರಸ್ತೆಯಲ್ಲಿರುವ ಐಟಿಸಿ ಮೈ ಫಾರ್ಚುನ್‌ನಲ್ಲಿ ಕಾರ್ಯನಿರ್ವಾಹಕ ಬಾಣಸಿಗರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಬಿರಿಯಾನಿಯ ಕೆಲವು ವಿಧಗಳನ್ನು ವಿವರಿಸಿದ್ದಾರೆ.

ಮೋಟಿಯಾ ಬಿರಿಯಾನಿ
ಬೇಕಾಗುವ ಸಾಮಗ್ರಿಗಳು

ಬಾಸುಮತಿ ಅಕ್ಕಿ 2 ಕೆ.ಜಿ., ಲವಂಗ 5 ಗ್ರಾಂ, ಏಲಕ್ಕಿ 10 ಗ್ರಾಂ, ಲವಂಗದ ಎಲೆ ಸ್ವಲ್ಪ, ನಿಂಬೆರಸ ಸ್ವಲ್ಪ, ಎಣ್ಣೆ 2 ಟೇಬಲ್ ಚಮಚ, ಕೆಂಪು ಮೆಣಸು, ಧನಿಯಾ ಪುಡಿ, ಉಪ್ಪು ರುಚಿಗೆ ತಕ್ಕಷ್ಟು.

ಮಾಡುವ ವಿಧಾನ
ಅಕ್ಕಿಯನ್ನು ಅರ್ಧಗಂಟೆ ನೀರಿನಲ್ಲಿ ನೆನೆಸಿಡಿ. ನಂತರ ಕುದಿಯುತ್ತಿರುವ ನೀರಿಗೆ ಲವಂಗ, ಏಲಕ್ಕಿ, ಲವಂಗದ ಎಲೆ, ಉಪ್ಪು, ನಿಂಬೆರಸ ಹಾಕಿ ಕುದಿಸಿ. ನಂತರ ಆ ನೀರಿಗೆ ಎಣ್ಣೆ ಹಾಗೂ ಅಕ್ಕಿ ಹಾಕಿ ಮುಕ್ಕಾಲು ಭಾಗ ಬೇಯಿಸಿ.

ನಂತರ ಅರ್ಧ ಬೆಂದ ಅನ್ನಕ್ಕೆ ಮೇಸ್‌, ಕೊತ್ತಂಬರಿ ಪುಡಿ, ಕೇಸರಿ ಹಾಕಿ  ಸ್ವಿಲರ್ ಹಾಳೆಯಿಂದ ಮುಚ್ಚಿ ದಮ್‌ ಬರಿಸಿ.

ನಂತರ ಪಾತ್ರೆಯೊಂದರಲ್ಲಿ ಎಣ್ಣೆ, ಸಾಸಿವೆ, ಜೀರಿಗೆ, ಶುಂಠಿ, ಬೆಳ್ಳುಳ್ಳಿ ಪೇಸ್ಟ್‌ ಮಿಕ್ಸ್ ಮಾಡಿ ಸ್ವಲ್ಪ ಹೊತ್ತು ಇಡಿ. ಈ ಒಗ್ಗರಣೆಗೆ ತರಕಾರಿ, ಕೆಂಪು ಮೆಣಸು, ಧನಿಯಾಪುಡಿ ಸೇರಿಸಿ 2ರಿಂದ 3 ನಿಮಿಷ ಬೇಯಿಸಿ. ನಂತರ ಗರಂಮಸಾಲಾ, ಏಲಕ್ಕಿಪುಡಿ, ಮೇಸ್‌ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಒಂದೆಡೆ ಇಡಿ.

ನಂತರ ರೋಸ್‌ ವಾಟರ್, ಏಲಕ್ಕಿಪುಡಿ, ಪುದೀನ, ನಿಂಬೆರಸ, ಎಣ್ಣೆಯಲ್ಲಿ ಬೇಯಿಸಿದ ಈರುಳ್ಳಿ, ಕೇಸರಿನೀರು ಹಾಕಿ ಅದಕ್ಕೆ ಅನ್ನವನ್ನು ಮಿಶ್ರಣ ಮಾಡಿ. ಇವೆಲ್ಲವನ್ನೂ ಸೇರಿಸಿ 7ರಿಂದ 8 ನಿಮಿಷ ದಮ್‌ ಬರಿಸಿದರೆ ಮೋಟಿಯಾ ಬಿರಿಯಾನಿ ರೆಡಿ.

*
ಮುರ್ಗ್‌ ಬಿರಿಯಾನಿ
ಬೇಕಾಗುವ ಸಾಮಗ್ರಿಗಳು

ಬಾಸುಮತಿ ಅಕ್ಕಿ 2ಕೆಜಿ, ಏಲಕ್ಕಿ 5ಗ್ರಾಂ, ಲವಂಗ 5ಗ್ರಾಂ, ಲವಂಗದ ಎಲೆ ಸ್ವಲ್ಪ, ನಿಂಬೆ ರಸ ಸ್ವಲ್ಪ, ಬೆಣ್ಣೆ, ಫ್ರೆಶ್‌ ಕ್ರೀಮ್‌, ರೋಸ್ ವಾಟರ್‌,  ಉಪ್ಪು, ನೀರು, ಚಿಕನ್‌, ಕೊತ್ತಂಬರಿ ಸೊಪ್ಪು.

ಮಾಡುವ ವಿಧಾನ
ಅಕ್ಕಿಯನ್ನು ನೀರಿನಲ್ಲಿ ನೆನೆಸಿಡಿ, ಪಾತ್ರೆಯೊಂದರಲ್ಲಿ ಏಲಕ್ಕಿ, ಲವಂಗ, ಲವಂಗದ ಎಲೆ, ನಿಂಬೆರಸ ಹಾಕಿ ಕುದಿಸಿ.  ನಂತರ ಸ್ವಲ್ಪ ಎಣ್ಣೆ ಹಾಗೂ ಅಕ್ಕಿ ಸೇರಿಸಿ ಸಣ್ಣ ಉರಿಯಲ್ಲಿ ಬೇಯಿಸಿ. ಮುಕ್ಕಾಲು ಭಾಗ ಬೆಂದ ಅಕ್ಕಿಯನ್ನು ತೆಗೆದಿಡಿ. ನಂತರ ಇದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ ಪಾತ್ರೆಯನ್ನು ಪೂರ್ತಿ ಮುಚ್ಚಿ ದಮ್‌ ಬರಿಸಿ.

ನಂತರ ಬೇರೆ ಪಾತ್ರೆಯೊಂದರಲ್ಲಿ ಬೆಣ್ಣೆ ಹಾಕಿ ಅದಕ್ಕೆ ಕತ್ತರಿಸಿದ ಚಿಕನ್‌ ತುಂಡು, ಉಪ್ಪು, ಗರಂ ಮಸಾಲ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ ಹಾಕಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ ಕುದಿಸಿ. ನಂತರ ಇದಕ್ಕೆ ಕೊತ್ತಂಬರಿ ಸೊಪ್ಪು, ಹಳದಿ ಮೆಣಸಿನ ಪುಡಿ, ಕೆಂಪು ಮೆಣಸಿನ ಪುಡಿ, ಮೊಸರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಬೇಯಿಸಿ. ಇದರೊಂದಿಗೆ ರೋಸ್ ವಾಟರ್‌ ನಿಂಬೆ ರಸ ಮಿಶ್ರಣ ಮಾಡಿ ಒಂದೆಡೆ ಇರಿಸಿಕೊಳ್ಳಿ.

ನಂತರ ಅಗಲವಾದ ಪಾತ್ರೆಯೊಂದರಲ್ಲಿ ರೋಸ್‌ ವಾಟರ್, ಪುದಿನಾ, ನಿಂಬೆರಸ, ಶುಂಠಿ ಬೆಳುಳ್ಳಿ ಪೇಸ್ಟ್‌, ಕೊತ್ತಂಬರಿ ಸೊಪ್ಪು, ಈರುಳ್ಳಿ, ಕೇಸರಿ ರಸ ಮತ್ತು ಅಕ್ಕಿ ಸೇರಿಸಿ ಬೇಯಿಸಿ.

ನಂತರ ತಯಾರಿಸಿದ ಚಿಕನ್‌ ಅನ್ನು ರೆಡಿಯಾದ ಅನ್ನದ ಮಿಶ್ರಣದೊಂದಿಗೆ ಸೇರಿಸಿ ಮಿಶ್ರ ಮಾಡಿ. ನಂತರ ಏಳರಿಂದ ಎಂಟು ನಿಮಿಷ ದಮ್ ಬರಿಸದರೆ ಮುರ್ಗ್‌ ಬಿರಿಯಾನಿ ರೆಡಿ.

*
ಕೋಫ್‌ತೇ ಬಿರಿಯಾನಿ
ಬೇಕಾಗುವ ಸಾಮಗ್ರಿ

ಬಾಸುಮತಿ ಅಕ್ಕಿ 2 ಕೆ.ಜಿ., ಲವಂಗ, ಏಲಕ್ಕಿ 10 ಗ್ರಾಂ, ಲವಂಗದ ಎಲೆ ಸ್ವಲ್ಪ, ನಿಂಬೆ ರಸ ಸ್ವಲ್ಪ, ಎಣ್ಣೆ 2 ಟೇಬಲ್ ಚಮಚ, ಉಪ್ಪು ರುಚಿಗೆ ತಕ್ಕಂತೆ.

ಮಾಡುವ ವಿಧಾನ
ಅಕ್ಕಿಯನ್ನು ಅರ್ಧಗಂಟೆ ನೀರಿನಲ್ಲಿ ನೆನೆಸಿಡಿ. ನಂತರ ಪಾತ್ರೆಗೆ ನೀರು ಹಾಕಿ, ಆ ನೀರಿಗೆ ಏಲಕ್ಕಿ, ಲವಂಗ, ಲವಂಗದ ಎಲೆ, ನಿಂಬೆರಸ ಹಾಕಿ, ಇದು ಕುದಿ ಬಂದ ನಂತರ ಇಳಿಸಿ ಬದಿಗಿರಿಸಿ. ನಂತರ ಇನ್ನೊಂದು ಪಾತ್ರೆಯಲ್ಲಿ ಎಣ್ಣೆ ಹಾಗೂ ಅಕ್ಕಿ ಹಾಕಿ ಮುಕ್ಕಾಲು ಭಾಗ ಬೇಯಿಸಿ. ನಂತರ ಇದಕ್ಕೆ ರೋಸ್ ವಾಟರ್, ಕೇಸರಿ, ಕೊತ್ತಂಬರಿ ಪುಡಿ ಸೇರಿಸಿ. ನಂತರ ಅದನ್ನು ಸಿಲ್ವರ್ ಹಾಳೆಯಿಂದ ಮುಚ್ಚಿ ದಮ್ ಬರಿಸಿ.

ಬೌಲ್‌ ಒಂದರಲ್ಲಿ ಗರಂ ಮಸಾಲ, ಬಿಳಿ ಪೆಪ್ಪರ್ ಪುಡಿ, ಉಪ್ಪು, ಶುಂಠಿ, ಬೆಳ್ಳುಳ್ಳಿಪೇಸ್ಟ್‌, ಹೆಚ್ಚಿದ ಹಸಿಮೆಣಸಿನಕಾಯಿ ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರ ಮಾಡಿ.

ನಂತರ ಪಾತ್ರೆಯೊಂದರಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಂಡು ಸೊಂಪು, ಹೆಚ್ಚಿದ ಈರುಳ್ಳಿ, ಶುಂಠಿ, ಬೆಳ್ಳುಳ್ಳಿಪೇಸ್ಟ್‌ ಹಾಕಿ ಮಿಶ್ರ ಮಾಡಿ ಪಾತ್ರೆಯನ್ನು ಮುಚ್ಚಿ ಕುದಿಯಲು ಬಿಡಿ. ಮೇಲೆ ತಯಾರಿಸಿದ ಮಿಶ್ರಣ ಹಾಗೂ ಒಗ್ಗರಣೆಯನ್ನು ಮಿಶ್ರ ಮಾಡಿಕೊಂಡು ಗ್ರೇವಿ ತಯಾರಿಸಿಕೊಳ್ಳಿ.

ದಮ್‌ ಮಾಡುವ ವಿಧಾನ
ಪಾತ್ರೆಗೆ ನೀರು, ಕೇಸರಿದಳ, ಪುದೀನ, ಶುಂಠಿ, ಬೆಳ್ಳುಳ್ಳಿಪೇಸ್ಟ್‌, ಧನಿಯಾ ಮತ್ತು ಮೇಸ್ ಪುಡಿ, ನಿಂಬೆ ರಸ, ಎಣ್ಣೆಯಲ್ಲಿ ಬೇಯಿಸಿದ ಈರುಳ್ಳಿ ಹಾಗೂ ಅರ್ಧಬೆಂದ ಅನ್ನ ಹಾಕಿ ಇವೆಲ್ಲವನ್ನೂ ಮಿಶ್ರ ಮಾಡಿ, ನಂತರ ಮೇಲೆ ಪುದಿನ, ಕೊತ್ತಂಬರಿ ಸೊಪ್ಪು ಇಟ್ಟು 7ರಿಂದ 8 ನಿಮಿಷಗಳವರೆಗೆ ದಮ್ ಬರಿಸಿದರೆ ಕೋಫ್‌ತೇ ಬಿರಿಯಾನಿ ರೆಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT