ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ಶ್ರಾವಣ ಸಾಧಕರಿಗೆ ಸದ್ಗುರುಶ್ರೀ ಪ್ರಶಸ್ತಿ

Last Updated 26 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಶ್ರಾವಣ ಮಾಸದಲ್ಲಿ ಒಂದೆಡೆ ಹಬ್ಬಗಳ ಸಡಗರವಾದರೆ ಸಂಗೀತ ರಸಿಕರಿಗೆ ‘ಸಂಗೀತೋತ್ಸವ’ಗಳ ರಸದೂಟ. ಹಬ್ಬಗಳು, ಸಂಗೀತೋತ್ಸವಗಳ ಸಮಾಗಮದಿಂದ ಇಡೀ ಶ್ರಾವಣ ಮಾಸ ಎಂದರೆ ಕಲಾರಸಿಕರಿಗೆ ಸದಾ ಹೋಳಿಗೆಯೂಟದ ಜತೆಗೆ ಸಂಗೀತದ ರಸಪಾಕ ಉಣ್ಣುವ ಸುಯೋಗ..!

ಹಿರಿಯ ತಬಲಾ ವಾದಕರಾದ ಪಂ. ಸತೀಶ್‌ ಹಂಪಿಹೊಳಿ ಸಂಗೀತದಲ್ಲಿ ಹಲವು ವಿಶೇಷಣ ಮೆರೆದವರು. ಶ್ರೀ ಸದ್ಗುರು ಸಂಗೀತ ಅಕಾಡೆಮಿ ಸ್ಥಾಪಿಸಿ ಕಳೆದ 24 ವರ್ಷಗಳಿಂದ ತಬಲಾ ಆಸಕ್ತ ಮಕ್ಕಳಿಗೆ ಪಾಠ ಹೇಳಿಕೊಡುತ್ತಾ, ಸಂಗೀತ ಕಾರ್ಯಕ್ರಮಗಳ ಆಯೋಜನೆ ಮಾಡುತ್ತಾ ಸಂಗೀತ ವಲಯದಲ್ಲಿ ಚಿರಪರಿಚಿತರಾಗಿ ಗುರುತಿಸಿಕೊಂಡವರು. 

ಸಂಗೀತದ ಮಟ್ಟಿಗೆ ವಿರಳಾತಿ ವಿರಳವೇ ಎನ್ನಬಹುದಾದ ‘ಶತ ತಬಲಾ ವಾದನ’, ಶತ ಗಾಯನ, 12 ಗಂಟೆಗಳ ವಚನ ನಿರಂತರ, ದಾಸ ನಿರಂತರ ಸಂಗೀತೋತ್ಸವಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಅಗ್ಗಳಿಕೆ ಇವರದು.

ಪ್ರತಿವರ್ಷ ‘ಸಂಗೀತ ಶ್ರಾವಣ’ ಎಂಬ ವಿಶಿಷ್ಟ ಸಂಗೀತ ಕಾರ್ಯಕ್ರಮ ಏರ್ಪಡಿಸಿ ಸಾಧಕರಿಗೆ ‘ಸದ್ಗುರುಶ್ರೀ’ ಪ್ರಶಸ್ತಿಯನ್ನೂ ನೀಡುತ್ತಾ ಬರುತ್ತಿರುವ ಪಂ. ಸತೀಶ್‌ ಹಂಪಿಹೊಳಿ ಅವರು ನಾಡಿನಾದ್ಯಂತ ಹಲವಾರು ಶಿಷ್ಯವರ್ಗವನ್ನೂ ತಯಾರು ಮಾಡಿದ್ದಾರೆ. ಇವರಲ್ಲಿ ಕೆಲವು ತಬಲಾ ವಾದಕರು ತಮ್ಮದೇ ಆದ ಸಂಸ್ಥೆಯನ್ನೂ ನಡೆಸಿಕೊಂಡು ಬರುತ್ತಿದ್ದಾರೆ.

ಪಖವಾಜ್‌ ಲಯ
ಅವನದ್ಧ ವಾದ್ಯ ಪ್ರಕಾರಕ್ಕೆ ಸೇರಿದ ಪಖವಾಜ್‌ ವಾದ್ಯ ತಬಲಾದಂತೆಯೇ ಲಯ ಕೊಡುವ ವಿಶಿಷ್ಟ ವಾದ್ಯ. ಮೇಲ್ನೋಟಕ್ಕೆ ಕರ್ನಾಟಕ ಸಂಗೀತದ ಪ್ರಮುಖ ಪಕ್ಕವಾದ್ಯ ಮೃದಂಗದಂತೆ ಇದ್ದರೂ ಲಯ ಮಾತ್ರ ಹಿಂದೂಸ್ತಾನಿ ಸಂಗೀತಕ್ಕೆ ಸೂಕ್ತವಾದಂತದ್ದು.

ಪಖವಾಜ್‌ನಲ್ಲಿ ಸಾಧನೆ ಮಾಡಿದ ಕಲಾವಿದರು ನಮ್ಮಲ್ಲಿ ವಿರಳಾತಿ ವಿರಳವೇ. ಬೆಳಗಾವಿಯಲ್ಲಿ ಜುಲೈ 17, 1951ರಂದು ಜನಿಸಿದ ಪಂ. ಯಶವಂತ ಪಾಂಡುರಂಗ ಬೋಂದ್ರೆ ಅವರು ಎಳೆಯ ವಯಸ್ಸಿನಲ್ಲೇ ಈ ವಾದ್ಯದಲ್ಲಿ ಪಳಗಲಾರಂಭಿಸಿದವರು.

ಆಕಾಶವಾಣಿ ಹಾಗೂ ದೂರದರ್ಶನದ ಕಲಾವಿದರಾದ ಬೋಂದ್ರೆ ಅವರು ತಂದೆ ದಿ.ಪಾಂಡುರಂಗ ಬುವಾ ಬೋಂದ್ರೆ ಅವರ ಬಳಿ ಆರಂಭಿಕ ಸಂಗೀತಾಭ್ಯಾಸ ಮಾಡಿದವರು. ಹೆಚ್ಚಿನ ಅಭ್ಯಾಸವನ್ನು ಪುಣೆಯ ಪಂ. ವಸಂತರಾವ ಘೋರ್ಪಡೆ ಅವರಲ್ಲಿ ಮಾಡಿದರು.

ಇದರ ಜತೆಗೆ ತಬಲಾ ವಾದನನ್ನೂ ಕಲಿತ ಬೋಂದ್ರೆ ಅವರು ತಬಲಾವನ್ನು ಪ್ರೊ. ನಾರಾಯಣರಾವ್ ಚಿಕ್ಕೋಡಿ ಹಾಗೂ ಪಂ. ಹಯವದನ ಜೋಶಿ ಅವರಲ್ಲಿ ಕಲಿತವರು. ನಾಡಿನಾದ್ಯಂತ ನೂರಾರು ಕಛೇರಿ ನೀಡಿದ ಹೆಗ್ಗಳಿಕೆ ಇವರ ಬೆನ್ನಿಗಿದೆ.

ಸಂಗೀತ ದಿಗ್ಗಜರಾದ ಪಂ. ಭೀಮಸೇನ್ ಜೋಶಿ, ಉಸ್ತಾದ ಪರೀದುದ್ದೀನ್‌ ಡಾಗರ,  ವಿದುಷಿ ಕೀರ್ತಿ ಶಿಲ್ಲೇದಾರ, ಪಂ. ಮಾಧವ ಗುಡಿ, ಪಂ. ಉಪೇಂದ್ರ ಭಟ್, ಪಂ. ವೆಂಕಟೇಶ ಕುಮಾರ, ಪಂ. ಪ್ರಭಾಕರ ಕಾರೇಕರ ಮುಂತಾದ ಕಲಾವಿದರಿಗೆ ಪಖವಾಜ್ ಸಾಥಿ ನೀಡಿ ಸೈ ಎನಿಸಿದವರು.

ಇವರ ಸಂಗೀತ ಸೇವೆಗೆ ಪುಣೆಯ ಹರಿ ಕೀರ್ತನೋತ್ತೇಜಕ ಸಂಸ್ಥೆ ‘ತಾಲಭೂಷಣ’ ಪ್ರಶಸ್ತಿ ನೀಡಿ ಗೌರವಿಸಿದೆ.

ಬಹುಶ್ರುತ ಕಲಾವಿದ
ಸಂಗೀತ ಪ್ರೇಮಿಗಳಿಗೆ ಚಿರಪರಿಚಿತರಾದ ಪಂ. ವಿಶ್ವನಾಥ ನಾಕೋಡ ಅವರು ತಬಲಾ ವಾದನದ ಮಟ್ಟಿಗೆ ‘ಗಟ್ಟಿ ಕುಳ’. ಅಂತರರಾಷ್ಟ್ರೀಯ ಮಟ್ಟದಲ್ಲಿ ತಬಲಾ ನಾದವನ್ನು ಪಸರಿಸಿದ ಈ ವಿದ್ವಾಂಸರು ಸಂಗೀತ ಕುಟುಂಬದಿಂದಲೇ ಬಂದವರು.

ತಂದೆ ಖ್ಯಾತ ಕಲಾವಿದರಾಗಿದ್ದ ಧಾರವಾಡದ ಪಂ. ಅರ್ಜುನಸಾ ನಾಕೋಡ. ತಂದೆಯವರಿಂದಲೇ ಸಂಗೀತದ ತಾಲೀಮು ಆರಂಭಿಸಿದ ಪಂ. ವಿಶ್ವನಾಥ್‌, ತಬಲಾ ವಾದನದ ಮೂಲಕ ಕೇಳುಗರಲ್ಲಿ ಸಂಚಲನ ಮೂಡಿಸುವುದು ಮಾತ್ರವಲ್ಲದೆ ಲಘು ಶಾಸ್ತ್ರೀಯ ಗಾಯನದ ಮೂಲಕವೂ ಸಂಗೀತ ರಸಿಕರ ಮನಗೆದ್ದವರು. ಇವರರಿಗೆ ಸುಗಮ ಸಂಗೀತವನ್ನು ನೀರೆರೆದು ಪೋಷಿಸಿದವರು ಖ್ಯಾತ ಹಾರ್ಮೋನಿಯಂ ವಾದಕರಾದ ಪಂ.ವಸಂತ ಕನಕಾಪುರ ಅವರು.

ಆಕಾಶವಾಣಿಯ ಸುಗಮ ಸಂಗೀತದ ‘ಎ’ ಶ್ರೇಣಿಯ ಗಾಯಕರಾದ ಇವರು ನಾಡಿನಾದ್ಯಂತ ಹಲವಾರು ಕಾರ್ಯಕ್ರಮ ನೀಡಿದ್ದಾರೆ. ಹಲವಾರು ದೇವರನಾಮಗಳಿಗೆ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ. ದೇವರನಾಮದ ಧ್ವನಿಸುರುಳಿಯನ್ನೂ ಬಿಡುಗಡೆ ಮಾಡಿದ್ದಾರೆ.

ದೇಶದ ಹಲವಾರು ಸುಪ್ರಸಿದ್ಧ ಗಾಯಕರಿಗೆ ಸಮರ್ಥವಾಗಿ ತಬಲಾ ಸಾಥಿ ನೀಡಿದ ಹೆಗ್ಗಳಿಕೆ ಇವರ ಬೆನ್ನಿಗಿದೆ. ತಮ್ಮಲ್ಲಿನ ಸಂಗೀತ ವಿದ್ಯೆಯನ್ನು ನೂರಾರು ಶಿಷ್ಯವರ್ಗಕ್ಕೆ ನಿಸ್ವಾರ್ಥವಾಗಿ ಧಾರೆಯೆರೆಯುವ ವಿಶ್ವನಾಥ ನಾಕೋಡ ಅವರು ತಮ್ಮ ತಂದೆಯ ಸವಿನೆನಪಿಗಾಗಿ ರೇಣುಕಾ ಸಂಗೀತ ಸಭಾ ಸ್ಥಾಪಿಸಿ ಪ್ರತಿವರ್ಷ ಅಹೋರಾತ್ರಿ ಸಂಗೀತೋತ್ಸವವನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಆ ಮೂಲಕ ನಾಡಿನ ಹಿರಿಯ ಕಿರಿಯ ಗಾಯಕ, ವಾದಕರಿಗೆ ಅವಕಾಶ ನೀಡುತ್ತಿದ್ದಾರೆ.

ಸದ್ಯ ಆಕಾಶವಾಣಿಯಲ್ಲಿ ನಿಲಯದ ಕಲಾವಿದರಾಗಿ ಸೇವೆ ಸಲ್ಲಿಸುವ ಪಂ. ವಿಶ್ವನಾಥ್‌ ನಾಕೋಡ್‌ ನಾಡಿನ ‘ಸಂಗೀತ ಆಸ್ತಿ’ ಎಂದರೆ ತಪ್ಪಿಲ್ಲ.
ಈ ಇಬ್ಬರು ಅಪರೂಪದ ಕಲಾವಿದರಿಗೆ ಇದೀಗ ಪ್ರತಿಷ್ಠಿತ ಸದ್ಗುರುಶ್ರೀ ಪ್ರಶಸ್ತಿಯ ಗರಿ..!

ಸದ್ಗುರುಶ್ರೀ ಪ್ರಶಸ್ತಿ
ಸದ್ಗುರು ಸಂಗೀತ ಅಕಾಡೆಮಿ ಆಗಸ್ಟ್‌ 28ರಂದು ನಯನ ಸಭಾಂಗಣದಲ್ಲಿ ಸಂಗೀತ ಶ್ರಾವಣ ಕಾರ್ಯಕ್ರಮ ಏರ್ಪಡಿಸಿದೆ. ಕನ್ನಡ ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತರಾವ ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು.

ಕೆನರಾ ಬ್ಯಾಂಕಿನ ನಿರ್ದೇಶಕ ರವೀಂದ್ರ ಭಂಡಾರಿ ಹಾಗೂ ಎಚ್.ಎಸ್. ಕೇಶವಕುಮಾರ್  ಅತಿಥಿಗಳಾಗಿ ಭಾಗವಹಿಸುವರು. ಸುಗಮ ಸಂಗೀತ ಗಾಯಕಿ ಬಿ.ಕೆ. ಸುಮಿತ್ರಾ ಅವರು ಅಧ್ಯಕ್ಷತೆ ವಹಿಸಲಿದ್ದು, ಸಾಧಕರಿಗೆ ಸದ್ಗುರುಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
*
ಸ್ಥಳ:
ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ.
ಭಾನುವಾರ ಬೆಳಿಗ್ಗೆ 10.00 ಗಂಟೆಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT