ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಶೀರ್ಷಿಕೆ ಬಳಸಿ

Last Updated 26 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಆಧುನಿಕ ಡಿಜಿಟಲ್ ತಂತ್ರಜ್ಞಾನದಿಂದಾಗಿ ಜಗತ್ತಿನ ಯಾವುದೇ ಸಿನಿಮಾಕ್ಕೂ ಕನ್ನಡದಲ್ಲಿ ಉಪಶೀರ್ಷಿಕೆಗಳನ್ನು (subtitles) ನೀಡುವುದು ಬಹುಸುಲಭದ ಕೆಲಸವಾಗಿದೆ.ಇಂಗ್ಲಿಷ್‌ ಭಾಷೆಯಲ್ಲಿ ಉಪಶೀರ್ಷಿಕೆಗಳಿದ್ದರೆ, ಆ ಕಡತವನ್ನು ಬಳಸಿಕೊಂಡು, ಯೂನಿಕೋಡಿನಲ್ಲಿ ಕನ್ನಡೀಕರಿಸಿದರೆ ಸಾಕು; ಉಳಿದೆಲ್ಲ ಸಂಗತಿಗಳನ್ನು ಡಿಜಿಟಲ್‌ ಪ್ಲೇಯರ್‌ಗಳು ನಿರ್ವಹಿಸುತ್ತವೆ. ನಾನು ಎರಡು ವರ್ಷದ ಹಿಂದೆ ಸ್ಪ್ಯಾನಿಷ್ ಭಾಷೆಯ ಸಿನಿಮಾವೊಂದಕ್ಕೆ ಕನ್ನಡ ಉಪಶೀರ್ಷಿಕೆಗಳನ್ನು ಬರೆದು ಪ್ರದರ್ಶಿಸಿದ್ದೆ.

ಅದರಿಂದ ಪ್ರೋತ್ಸಾಹಗೊಂಡ ಹಲವಾರು ಕನ್ನಡ ಆಸಕ್ತರು ಇನ್ನಷ್ಟು ಅಂತರರಾಷ್ಟ್ರೀಯ ಸಿನಿಮಾಗಳಿಗೆ ಕನ್ನಡ ಉಪಶೀರ್ಷಿಕೆಗಳನ್ನು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಕನ್ನಡದ ಉಪಶೀರ್ಷಿಕೆಗಳನ್ನು ಕಂಡ ವೀಕ್ಷಕರು ತುಂಬಾ ಸಂತಸಪಟ್ಟಿದ್ದಾರೆ.

ಬೆಂಗಳೂರು ಸಿನಿಮೋತ್ಸವ ಮತ್ತೊಮ್ಮೆ ಜನವರಿಯಲ್ಲಿ ಬರಲಿದೆ. ವರ್ಷದಿಂದ ವರ್ಷಕ್ಕೆ ಅದು ಪ್ರಸಿದ್ಧಿಯನ್ನು ಪಡೆಯುತ್ತಿದೆ. ಆದರೆ ಅಲ್ಲಿ ತೋರಿಸುವ ಎಲ್ಲಾ ಸಿನಿಮಾಗಳಲ್ಲೂ ಇಂಗ್ಲಿಷ್‌ನಲ್ಲಿ ಮಾತ್ರ ಉಪಶೀರ್ಷಿಕೆಗಳನ್ನು ನೀಡಲಾಗುತ್ತದೆ. ಈ ಕಾರಣದಿಂದಾಗಿ ಇಂಗ್ಲಿಷ್ ಬಾರದ ಬಹಳಷ್ಟು ಕನ್ನಡಿಗರು ಜಗತ್ತಿನ ಬಹು ಒಳ್ಳೆಯ ಸಿನಿಮಾಗಳನ್ನು ನೋಡುವ ಅವಕಾಶವನ್ನು ತಪ್ಪಿಸಿಕೊಳ್ಳುತ್ತಾರೆ. ಸಿನಿಮೋತ್ಸವ ಎನ್ನುವುದು ಬರೀ ಉನ್ನತ ಶಿಕ್ಷಣ ಪಡೆದ, ಮೇಲ್ವರ್ಗದ ಜನರಿಗೆ ಸೀಮಿತವಾದದ್ದು ಎನ್ನುವಂತಾಗಿಬಿಟ್ಟಿದೆ.

2017ರ ಬೆಂಗಳೂರು ಸಿನಿಮೋತ್ಸವದಲ್ಲಿ ಪ್ರದರ್ಶನಗೊಳ್ಳುವ ಪ್ರತಿಯೊಂದು ಸಿನಿಮಾದ ಒಂದು ಅಥವಾ ಎರಡು ಪ್ರದರ್ಶನವನ್ನು ಕಡ್ಡಾಯವಾಗಿ ಕನ್ನಡ ಉಪಶೀರ್ಷಿಕೆಯಲ್ಲಿ ಪ್ರದರ್ಶಿಸುವ ಮನಸ್ಸು ನಾವು ಮಾಡಬೇಕಿದೆ. ಇದರಿಂದಾಗಿ ನಾಡಿನ ಮೂಲೆ ಮೂಲೆಯಿಂದಲೂ ಕನ್ನಡದ ಜನರು ಉತ್ಸಾಹದಿಂದ ಬಂದು ಸಿನಿಮಾಗಳನ್ನು ನೋಡುವುದಕ್ಕೆ ಸಹಾಯವಾಗುತ್ತದೆ. ಜಿಲ್ಲಾ ಕೇಂದ್ರಗಳಲ್ಲೂ ಸಿನಿಮಾ ಪ್ರದರ್ಶನಕ್ಕೆ ಕನ್ನಡ ಉಪಶೀರ್ಷಿಕೆಗಳೇ ಹೆಚ್ಚು ಪರಿಣಾಮಕಾರಿ. ಜೊತೆಗೆ ಜಗತ್ತಿನ ಒಳ್ಳೆಯ ಸಿನಿಮಾಗಳಿಗೆ ಕನ್ನಡ ಉಪಶೀರ್ಷಿಕೆಯ ಕಡತಗಳ ಸಂಗ್ರಹದ ಕೆಲಸವೂ ಪ್ರಾರಂಭವಾಗುತ್ತದೆ.

ಜನವರಿಗೆ ಇನ್ನೂ ಐದು ತಿಂಗಳ ಕಾಲಾವಕಾಶವಿದೆ. ಈಗಿನಿಂದಲೇ ಸಂಬಂಧಪಟ್ಟವರು ಸಜ್ಜಾದರೆ ಖಂಡಿತವಾಗಿಯೂ ಈ ಸರಳ ಯೋಜನೆಯನ್ನು ಕಾರ್ಯರೂಪಗೊಳಿಸಬಹುದು. ಬೇಕಾದ ತಾಂತ್ರಿಕ ಸಹಾಯವನ್ನು ನೀಡಲು ಕನ್ನಡದ ಟೆಕಿಗಳು ಯಾವತ್ತೂ ಸಿದ್ಧರಾಗಿರುತ್ತಾರೆ. ಉಪಶೀರ್ಷಿಕೆಗಳನ್ನು ಅನುವಾದ ಮಾಡಿಕೊಡಲು ಕನ್ನಡ ಸಾಹಿತ್ಯಾಸಕ್ತರು ಉತ್ಸಾಹದಿಂದ ಮುಂದೆ ಬರುತ್ತಾರೆ. ಒಂದು ಸಿನಿಮಾದ ಉಪಶೀರ್ಷಿಕೆಯನ್ನು ಪೂರ್ತಿಯಾಗಿ ಕನ್ನಡಕ್ಕೆ ತರಲು ನಾಲ್ಕು ಗಂಟೆ ಕಾಲ ಸಾಕು.  ಸಂಬಂಧಪಟ್ಟವರು ಈ ವಿಷಯದ ಬಗ್ಗೆ ಗಮನ ಹರಿಸುತ್ತಾರೆಯೆ?
-ವಸುಧೇಂದ್ರ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT