ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಾಂತರ್ಗಾಮಿ ದತ್ತಾಂಶ ಸೋರಿಕೆ ಆತಂಕಕಾರಿ ಬೆಳವಣಿಗೆ

Last Updated 26 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಭಾರತದ ಅತ್ಯಂತ ಮಹತ್ವಾಕಾಂಕ್ಷಿ ಸ್ಕಾರ್ಪೀನ್‌ ಶ್ರೇಣಿಯ ಆರು ಜಲಾಂತರ್ಗಾಮಿ ನಿರ್ಮಾಣ ಯೋಜನೆಯ ತಾಂತ್ರಿಕ ಮತ್ತು ರಹಸ್ಯ ಸಾಮರ್ಥ್ಯದ ಬಗೆಗಿನ ಮಾಹಿತಿ ಸೋರಿಕೆ ಆಘಾತಕಾರಿಯಾದುದು. ಸ್ಕಾರ್ಪೀನ್‌  ಜಲಾಂತರ್ಗಾಮಿ,  ಭಾರತದ ಭವಿಷ್ಯದ ನೌಕಾಪಡೆಯ ಪ್ರಮುಖ ಅಸ್ತ್ರ ಎಂದು ಭಾವಿಸಲಾಗಿದೆ.

ಮುಂಬೈನ ಮಜಗಾಂವ್‌ ಡಾಕ್‌ನಲ್ಲಿ  ಫ್ರಾನ್ಸ್‌ನ ಡಿಸಿಎನ್‌ಎಸ್ ಸಂಸ್ಥೆ ಈ ಆರು ಜಲಾಂತರ್ಗಾಮಿಗಳನ್ನು ನಿರ್ಮಿಸುತ್ತಿದೆ. 2005ರಲ್ಲೇ ₹ 23,562 ಕೋಟಿ  ವ್ಯವಹಾರದ ಈ ಒಪ್ಪಂದವನ್ನು  ಈ ಫ್ರೆಂಚ್ ಕಂಪೆನಿ ಜೊತೆ ಮಾಡಿಕೊಳ್ಳಲಾಗಿದೆ. ಈಗ, ಇಷ್ಟೊಂದು ವಿಳಂಬದ ನಂತರ ಈ ವರ್ಷಾಂತ್ಯಕ್ಕೆ ಒಂದು ಜಲಾಂತರ್ಗಾಮಿ  (ಐಎನ್ಎಸ್ ಕಲವರಿ) ನೌಕಾಪಡೆಗೆ  ಸೇರ್ಪಡೆಯಾಗಲು ಸನ್ನದ್ಧವಾಗುತ್ತಿದೆ.

ಇಂತಹ ಸಂದರ್ಭದಲ್ಲಿ 22,000 ಪುಟಗಳ ಮಾಹಿತಿ ಆಸ್ಟ್ರೇಲಿಯಾದ ಪತ್ರಿಕೆಯಲ್ಲಿ ಬಹಿರಂಗಗೊಂಡಿರುವುದು ವಿಪರ್ಯಾಸ. ಈ ಮಾಹಿತಿಗಳನ್ನು ಫ್ರಾನ್ಸ್‌ನ ಡಿಸಿಎನ್‌ಎಸ್ ಸಂಸ್ಥೆಯಿಂದಲೇ ಕದಿಯಲಾಗಿದೆ ಎಂಬಂತಹ ಮಾಹಿತಿ ಇನ್ನೂ   ಆತಂಕಕಾರಿಯಾದುದು. ಈ ಬೆಳವಣಿಗೆ,  ಭಾರತದ ರಕ್ಷಣಾ ಸನ್ನದ್ಧತೆಗೆ ದೊಡ್ಡ ಪೆಟ್ಟು ನೀಡಿದೆ.  

ಜಲಾಂತರ್ಗಾಮಿಯ ಸಮರ ನಿರ್ವಹಣೆ ವ್ಯವಸ್ಥೆಗೆ ಸಂಬಂಧಿಸಿದ 4000 ಪುಟಗಳೂ ಸೋರಿಕೆಯಾದ ಮಾಹಿತಿಯಲ್ಲಿ ಸೇರಿದೆ ಎಂದು ಪಿಟಿಐ ವರದಿ ಹೇಳಿದೆ.ಜಲಾಂತರ್ಗಾಮಿಯ ಸಮರ ಸಾಮರ್ಥ್ಯ, ವಿಶೇಷವಾಗಿ ಶತ್ರು ಕಣ್ಣಿಗೆ ಬೀಳದೆ ರಹಸ್ಯವಾಗಿ ಇರುವಂತಹ ಜಲಾಂತರ್ಗಾಮಿ ಸಾಮರ್ಥ್ಯದ ವಿವರಗಳೂ ಬಯಲಾಗಿವೆ ಎಂಬುದು ಆತಂಕಕಾರಿ.

ಹಳತಾದ ರಷ್ಯನ್ ಹಾಗೂ ಜರ್ಮನ್ ಜಲಾಂತರ್ಗಾಮಿಗಳನ್ನು ಬದಲಿಸಿ ಅತ್ಯಾಧುನಿಕ ಜಲಾಂತರ್ಗಾಮಿಗಳನ್ನು ನಿಯೋಜಿಸಲು   ಫ್ರಾನ್ಸ್‌ನ ಡಿಸಿಎನ್‌ಎಸ್ ಸಂಸ್ಥೆ ಜೊತೆ  ಈ ಒಪ್ಪಂದ ಮಾಡಿಕೊಳ್ಳಲಾಗಿತ್ತು. ನೂರಾರು ಕೋಟಿ ರೂಪಾಯಿಗಳ ವ್ಯವಹಾರ ಒಳಗೊಳ್ಳುವ ರಕ್ಷಣಾ ಇಲಾಖೆಯ ಪ್ರತೀ ದೊಡ್ಡ ಖರೀದಿಯೂ ವಿವಾದಾತ್ಮಕವಾಗುತ್ತದೆ ಎಂಬುದು ವಿಪರ್ಯಾಸ.

ಈ ಹಿಂದೆ ಜರ್ಮನ್ ಜಲಾಂತರ್ಗಾಮಿ ತಯಾರಿಕಾ ಸಂಸ್ಥೆ ಎಚ್‌ಡಿಡಬ್ಲ್ಯು, ಲಂಚದ ಆರೋಪದ ಮೇಲೆ ಹೊರನಡೆಯಬೇಕಾಗಿ ಬಂದಿದ್ದರಿಂದ ಭಾರತಕ್ಕೆ ನಷ್ಟವಾಗಿತ್ತು ಎಂಬುದನ್ನು ಸ್ಮರಿಸಬಹುದು. ಈಗ, ವಿವಿಧ ಕಂಪೆನಿಗಳ ತೀವ್ರ ಪೈಪೋಟಿಯ ನಡುವೆ ಡಿಸಿಎನ್‌ಎಸ್ ಈ ಒಪ್ಪಂದವನ್ನು  ಗೆದ್ದುಕೊಂಡಿತ್ತು. ನಂತರ,  ಆಸ್ಟ್ರೇಲಿಯಾಗೂ  ಜಲಾಂತರ್ಗಾಮಿಗಳನ್ನು ಪೂರೈಸುವ ಬಗ್ಗೆ ಡಿಸಿಎನ್‌ಎಸ್ ಕಂಪೆನಿ ಒಪ್ಪಂದ ಮಾಡಿಕೊಂಡಿತ್ತು.

ಹೀಗಾಗಿ ಪ್ರತಿಸ್ಪರ್ಧಿ ಕಂಪೆನಿಗಳು ಈ ಸೋರಿಕೆ ವಿದ್ಯಮಾನದ ಹಿಂದಿರಬಹುದು ಎಂಬಂತಹ ವಿಶ್ಲೇಷಣೆಗಳೂ ಇವೆ.  ಈಗ  ಈ ರಹಸ್ಯ ಮಾಹಿತಿಗಳ  ಬಹಿರಂಗದ ನಂತರ  ಡಿಸಿಎನ್‌ಎಸ್ ಜೊತೆ ಆದ ಭಾರತದ ಒಡಂಬಡಿಕೆ ಗತಿ ಏನು ಎಂಬುದು ಪ್ರಶ್ನಾರ್ಥಕ ಸಂಗತಿಯಾಗಿದೆ. ‘ಸೂಕ್ಷ್ಮ ಎಂದು ಪರಿಗಣಿಸಿದ ವಿಚಾರಗಳನ್ನು ಪ್ರಕಟಿಸಿಲ್ಲ’ ಎಂದು ಆಸ್ಟ್ರೇಲಿಯಾ ಪತ್ರಿಕೆಯೇನೊ  ಹೇಳಿಕೊಂಡಿದೆ.

ಆದರೆ ಇದರಿಂದಾದ ಹಾನಿಯ ವ್ಯಾಪಕತೆ ಎಷ್ಟು  ಎಂಬುದು ಮೌಲ್ಯಮಾಪನವಾಗಬೇಕು. ಈಗಾಗಲೇ ಮೊದಲ ಜಲಾಂತರ್ಗಾಮಿ ನೌಕಾಪಡೆ ಸೇರ್ಪಡೆಗೆ ಸಿದ್ಧವಾಗಿರುವುದರಿಂದ ಈ ಪರಿಸ್ಥಿತಿಯನ್ನು ಹೇಗೆ ನಿರ್ವಹಿಸಬಹುದೆಂಬುದನ್ನು ಪರಿಶೀಲಿಸಬೇಕು. ಹಾನಿ ಎಷ್ಟರಮಟ್ಟಿಗೆ ಆಗಿದೆ ಎಂಬುದು ನಿರ್ಧಾರವಾಗಬೇಕು. ಮಿಲಿಟರಿ ಒಪ್ಪಂದಗಳಲ್ಲಿ ದತ್ತಾಂಶ ರಹಸ್ಯ ಕಾಪಾಡುವಿಕೆ ಹಾಗೂ ಸೈಬರ್ ಭದ್ರತೆ ವಿಚಾರಕ್ಕೆ ಸಂಬಂಧಿಸಿದಂತೆ ಈ ಪ್ರಕರಣ  ಎಚ್ಚರಿಕೆಯ ಗಂಟೆಯಾಗಬೇಕು.

ಭ್ರಷ್ಟಾಚಾರ ಆರೋಪಗಳು, ನಿರ್ದಿಷ್ಟ ತಾಂತ್ರಿಕ ವಿವರಗಳಲ್ಲಿ ಭಿನ್ನಾಭಿಪ್ರಾಯಗಳು ಇತ್ಯಾದಿ ಕಾರಣಗಳಿಂದ ಅನೇಕ ರಕ್ಷಣಾ ಸಾಮಗ್ರಿ ಖರೀದಿ ಒಪ್ಪಂದಗಳು ಬಿಕ್ಕಟ್ಟುಗಳಿಗೆ ಸಿಲುಕಿಕೊಂಡಿವೆ. ಈ ಕಷ್ಟಗಳಿಗೆ ಬೊಫೋರ್ಸ್, ಅಗಸ್ಟಾ ವೆಸ್ಟ್‌ಲ್ಯಾಂಡ್, ಎಚ್‌ಡಿಡಬ್ಲ್ಯು  ಖರೀದಿ ಒಪ್ಪಂದಗಳು ದೊಡ್ಡ   ಉದಾಹರಣೆಗಳು.  ಇದರಿಂದಾಗಿ ಸಶಸ್ತ್ರಪಡೆಗಳು ಹಳತಾದ ಶಸ್ತ್ರಾಸ್ತ್ರಗಳೊಂದಿಗೆ ನಿಭಾಯಿಸಬೇಕಾದ ಸ್ಥಿತಿ ಏರ್ಪಡುವುದು ನಮ್ಮ ಆಯಕಟ್ಟಿನ ಹಿತಾಸಕ್ತಿಯನ್ನು ಅಪಾಯಕ್ಕೆ ಸಿಲುಕಿಸುವಂತಾಗುತ್ತದೆ ಎಂಬುದನ್ನು ನಿರ್ಲಕ್ಷಿಸುವಂತಿಲ್ಲ.

ಹೀಗಾಗಿ ರಾಷ್ಟ್ರದಲ್ಲಿ ಅಸ್ತಿತ್ವದಲ್ಲಿರುವ 2005ರ ರಕ್ಷಣಾ ಸಾಮಗ್ರಿ ಖರೀದಿ ನೀತಿಯನ್ನು  ಕಾಲಕ್ಕೆ ತಕ್ಕಂತೆ ಪುನರ್‌ವಿಮರ್ಶೆ ಮಾಡಬೇಕಾದುದೂ ಅಗತ್ಯ. ಈಗಿನ ಡಿಜಿಟಲ್ ಯುಗದ ಅನುಭವಗಳು ಹಾಗೂ ಕಾರ್ಪೊರೆಟ್ ಬೇಹುಗಾರಿಕೆಯನ್ನು ನಿರ್ವಹಿಸಲು  ಈ ನೀತಿ ಸಶಕ್ತವಾಗಬೇಕು. 

ಭಾರತೀಯ ಖಾಸಗಿ ಕಂಪೆನಿಗಳೂ ರಕ್ಷಣಾ ಸಾಮಗ್ರಿ ತಯಾರಿಕೆಗೆ ದೊಡ್ಡ ಪ್ರಮಾಣದಲ್ಲಿ ಈಗ ಮುಂದಾಗುತ್ತಿವೆ.  ಇಂತಹ ಸಂದರ್ಭದಲ್ಲಿ ಈ ಬಗೆಯ ಸೂಕ್ಷ್ಮಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸುವುದು ಅಗತ್ಯ ಎಂಬುದನ್ನು ಮನಗಾಣಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT