ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಐ: ಮೊಬೈಲ್‌ ಬ್ಯಾಂಕಿಂಗ್‌ ಸುಲಭ

ನಗದು ರಹಿತ ಅರ್ಥವ್ಯವಸ್ಥೆಗೆ ಉತ್ತೇಜನ ನೀಡುವ ವಿಶಿಷ್ಟ ಆ್ಯಪ್‌ ಬಿಡುಗಡೆ
Last Updated 26 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಸ್ಮಾರ್ಟ್‌ಫೋನ್‌ಗಳ ಮೂಲಕ ಹಣ ರವಾನೆ ಮತ್ತು  ಸ್ವೀಕೃತಿಯನ್ನು  ತುಂಬ ಸುಲಭಗೊಳಿಸಲಿರುವ ಮತ್ತು ನಗದುರಹಿತ ವರ್ಗಾವಣೆ ಸೌಲಭ್ಯ ವಿಸ್ತರಣೆಗೆ  ಹೊಸ ಬ್ಯಾಂಕಿಂಗ್‌ ಆ್ಯಪ್‌ ಸೌಲಭ್ಯ ಶೀಘ್ರದಲ್ಲಿಯೇ ಕಾರ್ಯರೂಪಕ್ಕೆ ಬರಲಿದೆ.

ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು (ಎನ್‌ಪಿಸಿಐ), ಈ ವಿಶಿಷ್ಟ ಯುನಿಫೈಡ್‌ ಪೇಮೆಂಟ್ಸ್‌ ಇಂಟರ್‌ಫೇಸ್‌ (ಯುಪಿಐ)  ಸೌಲಭ್ಯವನ್ನು ಅಭಿವೃದ್ಧಿಪಡಿಸಿದೆ.  ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಯುಪಿಐ ಆ್ಯಪ್‌ ಅನ್ನು ಗೂಗಲ್‌ನ ಪ್ಲೇ ಸ್ಟೋರ್‌ನಲ್ಲಿ   ಸದ್ಯದಲ್ಲಿಯೇ ಒದಗಿಸಲಿವೆ.

‘ಮೂರ್ನಾಲ್ಕು ದಿನಗಳಲ್ಲಿ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ  ಈ ಆ್ಯಪ್‌ ದೊರೆಯುವಂತೆ ಕ್ರಮ ಕೈಗೊಳ್ಳಲು ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ. ಬಹುಶಃ ಶನಿವಾರದ ಹೊತ್ತಿಗೆ ಈ ಸೇವೆ ದೊರೆಯುವ ನಿರೀಕ್ಷೆ ಇದೆ.  ಇದರಿಂದಾಗಿ ಸ್ಮಾರ್ಟ್‌ಫೋನ್‌ಗಳ ಮೂಲಕ ಹಣ ಪಾವತಿ ವ್ಯವಸ್ಥೆ  ತುಂಬ ಸರಳಗೊಳ್ಳಲಿದೆ. ಎಸ್‌ಎಂಎಸ್‌  ಕಳಿಸಿದಷ್ಟೇ ಸರಳವಾಗಿ ಹಣ ಪಾವತಿ ಮಾಡಬಹುದಾಗಿದೆ’ ಎಂದು  ಎನ್‌ಪಿಸಿಐ ವ್ಯವಸ್ಥಾಪಕ ನಿರ್ದೇಶಕ ಎ. ಪಿ. ಹೋಟಾ ತಿಳಿಸಿದ್ದಾರೆ.

ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಈಗಾಗಲೇ ಕೆಲ ಬ್ಯಾಂಕ್‌ಗಳ ‘ಯುಪಿಐ ಆ್ಯಪ್‌’  ಲಭ್ಯ ಇದೆ. ಮೊಬೈಲ್‌ ಆ್ಯಪ್‌ ಮೂಲಕವೇ ಬಳಕೆದಾರರು  ಹಣ ಪಾವತಿ ಮಾಡಬಹುದು ಮತ್ತು ಹಣ  ಸ್ವೀಕರಿಸಬಹುದು. ಇಷ್ಟು ವ್ಯಾಪಕ ಪ್ರಮಾಣದಲ್ಲಿ ಹಣ ಪಾವತಿ ವ್ಯವಸ್ಥೆಯ ಪ್ರಯತ್ನವು ವಿಶ್ವದಲ್ಲಿ ಇದುವರೆಗೂ ಎಲ್ಲಿಯೂ ಕಾರ್ಯಗತಗೊಳಿಸಲಾಗಿಲ್ಲ ಎನ್ನುವುದು ಇದರ ಇನ್ನೊಂದು ಹೆಗ್ಗಳಿಕೆಯಾಗಿದೆ.

ಕೆನರಾ ಬ್ಯಾಂಕ್‌, ವಿಜಯ ಬ್ಯಾಂಕ್‌, ಪಂಜಾಬ್‌ ನ್ಯಾಷನಲ್  ಬ್ಯಾಂಕ್‌, ಯೂನಿಯನ್ ಬ್ಯಾಂಕ್‌ ಆಫ್‌ ಇಂಡಿಯಾ, ಆಂಧ್ರಾ ಬ್ಯಾಂಕ್‌, ಬ್ಯಾಂಕ್‌ ಆಫ್‌ ಮಹಾರಾಷ್ಟ್ರ, ಆಕ್ಸಿಸ್‌ ಬ್ಯಾಂಕ್‌, ಫೆಡರಲ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌ ಮುಂತಾದವು ಈ ಸೌಲಭ್ಯ ಆರಂಭಿಸಲಿವೆ.

ಈ ಯೋಜನೆಯು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಹುದ್ದೆಯಿಂದ ನಿರ್ಗಮಿಸಲಿರುವ ರಘುರಾಂ ರಾಜನ್‌ ಅವರ ಕನಸಿನ ಕೂಸು. ಈ ಹೊಸ ಸೌಲಭ್ಯವನ್ನು ಜಾರಿಗೆ ತರುವುದಾಗಿ ಅವರು ಏಪ್ರಿಲ್‌ನಲ್ಲಿಯೇ ಪ್ರಕಟಿಸಿದ್ದರು. ಇದುವರೆಗೆ ಇದರ ಪ್ರಾಯೋಗಿಕ  ಪರೀಕ್ಷೆ ನಡೆದಿತ್ತು. ಅದನ್ನು ಈಗ  ಬ್ಯಾಂಕ್‌ ಗ್ರಾಹಕರ ಬಳಕೆಗೆ ಬಿಡುಗಡೆ ಮಾಡಲು ಆರ್‌ಬಿಐ ಸಮ್ಮತಿಸಿದೆ.

ಅಂತರ್ಜಾಲ ತಾಣದ ಇ–ಕಾಮರ್ಸ್‌ ಮಳಿಗೆಗಳಿಂದ ಖರೀದಿಸಿದ ಸರಕು ಮನೆ ಬಾಗಿಲಿಗೆ ಬಂದಾಗ ನಗದು ಪಾವತಿಸುವ ಬದಲಿಗೆ ಈ ಆ್ಯಪ್‌ ಬಳಸಿಯೇ ಹಣ ಪಾವತಿಸಬಹುದು. ನಾಗರಿಕ ಸೇವೆಗಳ ಬಿಲ್‌, ಬಾರ್‌ಕೋಡ್‌ ಆಧಾರಿತ ಸರಕು ಖರೀದಿ, ದೇಣಿಗೆ, ಶಾಲಾ ಶುಲ್ಕ ಸೇರಿದಂತೆ ವಿವಿಧ ಬಗೆಯ ಹಣ ಪಾವತಿಗಳನ್ನೂ ಇದರ ನೆರವಿನಿಂದ ಸುಲಭವಾಗಿ ನಿರ್ವಹಿಸಬಹುದಾಗಿದೆ.

ವಿಜಯಾ ಬ್ಯಾಂಕ್  ಚಾಲನೆ:  ರಾಷ್ಟ್ರೀಕೃತ ವಿಜಯಾ ಬ್ಯಾಂಕ್‌, ಯುಪಿಐ ಸೇವೆಗೆ ಚಾಲನೆ ನೀಡಿದೆ. ಇದೊಂದು ನಗದು ಚಲಾವಣೆ ಕಡಿಮೆ ಮಾಡುವ ಮತ್ತು ಡಿಜಿಟಲ್‌ ಸಮಾಜ ನಿರ್ಮಾಣ ಉದ್ದೇಶದ ಸೌಲಭ್ಯವಾಗಿದೆ.  ಹಣ ಪಾವತಿಯ ಕ್ರಾಂತಿಕಾರಿ ವಿಧಾನವೂ ಆಗಿದೆ ಎಂದು ಬ್ಯಾಂಕ್‌ ತಿಳಿಸಿದೆ.

ಸುರಕ್ಷಿತ – ಸರಳ ವಿಧಾನ
* ಸುರಕ್ಷಿತ ಮತ್ತು ಸರಳ ವಿಧಾನದಲ್ಲಿ ತಕ್ಷಣಕ್ಕೆ ಹಣ ವರ್ಗಾವಣೆ
* ಯುಪಿಐ ಹಣಕಾಸು ವಿಳಾಸದ ದುರ್ಬಳಕೆ ಸಾಧ್ಯತೆ ಇಲ್ಲ
* ನಗದುರಹಿತ ಆರ್ಥಿಕತೆಗೆ ಪೂರಕ
* ಹಣ ವರ್ಗಾಯಿಸಬೇಕಾದ ವ್ಯಕ್ತಿಯ ಹೆಸರು, ಬ್ಯಾಂಕ್‌ ಖಾತೆ ಸಂಖ್ಯೆ, ಐಎಫ್‌್ಎಸ್‌ಸಿ ಸಂಖ್ಯೆ ದಾಖಲಿಸಬೇಕಾದ ರಗಳೆ ಇಲ್ಲ
* ಖಾತೆದಾರನ ಹೆಸರು ಅಥವಾ ಮೊಬೈಲ್‌ ಸಂಖ್ಯೆ@ಬ್ಯಾಂಕ್‌ಹೆಸರು (xyz@vijb or 1234567890@vijb) ಒಳಗೊಂಡ ವಿಳಾಸಕ್ಕೆ ಸುಲಭವಾಗಿ ಹಣ ರವಾನೆ
* ಬ್ಯಾಂಕ್‌ ಖಾತೆಯಿಂದ ಇನ್ನೊಂದು ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ
* ಮೊಬೈಲ್‌ ವಾಲೆಟ್‌ ಸೇರ್ಪಡೆಯಾಗಿಲ್ಲ
* ಸ್ಮಾರ್ಟ್‌ಫೋನ್‌ನಲ್ಲಿ ಬ್ಯಾಂಕ್‌ನ ಯುಪಿಐ ಜತೆ ನೋಂದಣಿ ಮಾಡಿಕೊಳ್ಳಬೇಕು
* ₹ 50ರಿಂದ ಗರಿಷ್ಠ ₹ 1 ಲಕ್ಷದವರೆಗೆ ಹಣ ರವಾನಿಸಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT