ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗತ್ಯಕ್ಕೆ ತಕ್ಕಂತೆ ಕ್ರಮ

Last Updated 26 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

* ಸಂಗೀತ ಹಾಗೂ ಲಲಿತಕಲಾ ವಿಶ್ವವಿದ್ಯಾಲಯಗಳನ್ನು ವಿಲೀನಗೊಳಿಸುವುದರ ಹಿಂದಿನ ಆಶಯ ಏನು?
ಈ ಎರಡೂ ವಿಶ್ವವಿದ್ಯಾಲಯಗಳು ಸೀಮಿತ ಉದ್ದೇಶದಿಂದ ಕಾರ್ಯ ನಿರ್ವಹಿಸುತ್ತಿವೆ. ಅವುಗಳ ಮೇಲಿನ ಕಾರ್ಯಭಾರ ಹೆಚ್ಚಿಲ್ಲ. ಆದರೆ ಎರಡನ್ನೂ ಹೀಗೇ ಇರಿಸಿಕೊಂಡರೆ ಸರ್ಕಾರಕ್ಕೆ ಹಣಕಾಸಿನ ಹೊರೆ ಬೀಳುತ್ತದೆ. ಪ್ರತ್ಯೇಕ ಕುಲಪತಿಗಳು, ರಿಜಿಸ್ಟ್ರಾರ್‌ಗಳು, ಸಿಬ್ಬಂದಿ ನೇಮಿಸಿ, ಅವರಿಗೆ ವೇತನ ಕೊಡುವುದರಿಂದ ಸಾರ್ವಜನಿಕರ ಹಣ ಹೆಚ್ಚು ವೆಚ್ಚ ಮಾಡಬೇಕಾಗುತ್ತದೆ. ಒಂದು ವಿಶ್ವವಿದ್ಯಾಲಯಕ್ಕೆ ವಾರ್ಷಿಕ ಅಂದಾಜು ₹ 8 ಕೋಟಿಯಿಂದ ₹ 10 ಕೋಟಿ ಖರ್ಚು ಮಾಡಬೇಕಾಗುತ್ತದೆ.

ಸಂಗೀತ ಮತ್ತು ಲಲಿತಕಲಾ ವಿಶ್ವವಿದ್ಯಾಲಯಗಳ ವ್ಯಾಪ್ತಿ ಚಿಕ್ಕದು. ಅಲ್ಲದೆ, ಅವುಗಳ ಕಾರ್ಯ–ಉದ್ದೇಶಗಳಲ್ಲಿ ಸಾಮ್ಯತೆ ಇದೆ. ಹಾಗಾಗಿ ಇವುಗಳನ್ನು ವಿಲೀನ ಮಾಡಲು ಉನ್ನತ ಶಿಕ್ಷಣ ಪರಿಷತ್ತು ತೀರ್ಮಾನಿಸಿದೆ. ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳು ಸದಸ್ಯರಾಗಿರುವ ಪರಿಷತ್ತು ವಿಲೀನದ ಪ್ರಸ್ತಾಪಕ್ಕೆ ಸಮ್ಮತಿ ಸೂಚಿಸಿದೆ.

* ಹಿಂದಿನ ಸರ್ಕಾರ ಒಂದೊಂದು ವಿಷಯಕ್ಕೆ ಒಂದೊಂದು ವಿಶ್ವವಿದ್ಯಾಲಯ ಆರಂಭಿಸುವ ತೀರ್ಮಾನ ತೆಗೆದುಕೊಂಡಿತು. ಯಾವ ಚಿಂತನೆಯ ನೆಲೆಗಟ್ಟಿನಲ್ಲಿ ಇಂಥದ್ದೊಂದು ತೀರ್ಮಾನ ಕೈಗೊಂಡಿದ್ದಿರಬಹುದು?
ಹಿಂದಿನ ಸರ್ಕಾರ ಕೈಗೊಂಡ ವಿಷಯವಾರು ವಿಶ್ವವಿದ್ಯಾಲಯ ಸ್ಥಾಪನೆ ತೀರ್ಮಾನ ತಪ್ಪು ಎಂದು ಹೇಳಲಾಗದು. ಇದಕ್ಕೆ ಕಾನೂನು ವಿಶ್ವವಿದ್ಯಾಲಯ ಉತ್ತಮ ಉದಾಹರಣೆ. ರಾಜ್ಯದಲ್ಲಿ ಹತ್ತಾರು ಕಾನೂನು ಕಾಲೇಜುಗಳಿವೆ. ಕಾನೂನು ಅಧ್ಯಯನಕ್ಕೆ, ಸಂಶೋಧನೆಗೆ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸಲಾಯಿತು. ಇದು ತಪ್ಪಲ್ಲ.

ವೈದ್ಯಕೀಯ, ಎಂಜಿನಿಯರಿಂಗ್‌ಗೂ ಪ್ರತ್ಯೇಕ ವಿಶ್ವವಿದ್ಯಾಲಯಗಳು ಇವೆಯಲ್ಲವೇ? ಆದರೆ ಈಗ ಜಿಲ್ಲೆಗೊಂದು ವಿಶ್ವವಿದ್ಯಾಲಯ ಆರಂಭಿಸಬೇಕೆಂಬ ಚಿಂತನೆ ಮೂಡಿದೆ.ಅದಕ್ಕೆ ಸಂಬಂಧಿಸಿದ ನೀತಿಯೊಂದು ಜಾರಿಗೆ ಬರುತ್ತಿದೆ. ಅವಶ್ಯಕತೆಗೆ ಅನುಗುಣವಾಗಿ ವಿಶ್ವವಿದ್ಯಾಲಯಗಳನ್ನು ಕಟ್ಟುವುದು ಸೂಕ್ತ. ಪ್ರತಿ ಜಿಲ್ಲೆಗೆ ಒಂದು ವಿಶ್ವವಿದ್ಯಾಲಯ ಇರಲೇಬೇಕು ಎಂಬ ನಿಲುವು ಬೇಕಾಗಿಲ್ಲ. ನಿರ್ದಿಷ್ಟ ಜಿಲ್ಲೆಯೊಂದರಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಲು ಅಗತ್ಯವಿರುವಷ್ಟು  ಕಾಲೇಜುಗಳೇ ಇರದಿದ್ದರೆ ಏನು ಮಾಡುವುದು?

* ಉದ್ದೇಶದಲ್ಲಿ ಸಾಮ್ಯತೆ ಇರುವ ಹೈನುಗಾರಿಕೆ, ತೋಟಗಾರಿಕೆ ಮತ್ತು ಕೃಷಿ ವಿಶ್ವವಿದ್ಯಾಲಯಗಳು ಪ್ರತ್ಯೇಕವಾಗಿಯೇ ಮುಂದುವರಿಯಬೇಕೆ?
ಇವು ಮೂರೂ ತಾಂತ್ರಿಕ ವಿಷಯಗಳು. ಆದರೆ, ಕೃಷಿ, ಹೈನುಗಾರಿಕೆ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳನ್ನು ಒಂದುಗೂಡಿಸಲು ಸಾಧ್ಯ ಇದೆ. ಕೃಷಿ ಜೊತೆ ನೇರ ಸಂಬಂಧ ಹೊಂದಿರುವ ವಿಶ್ವವಿದ್ಯಾಲಯಗಳನ್ನು ವಿಲೀನಗೊಳಿಸುವುದು ತಪ್ಪಲ್ಲ. ಹಾಗೆ ಮಾಡಿದಾಗ ಸಾರ್ವಜನಿಕರ ಹಣದ ಮಿತವ್ಯಯವೂ ಸಾಧ್ಯವಾಗುತ್ತದೆ.

* ಗ್ರಾಮೀಣಾಭಿವೃದ್ಧಿ ವಿಷಯಕ್ಕೆ ಪ್ರತ್ಯೇಕ ವಿಶ್ವವಿದ್ಯಾಲಯ ಆಗಬೇಕು ಎಂಬ ವಿಚಾರ ವಿಧಾನಸಭೆಯಲ್ಲಿ ಚರ್ಚೆಯಾಗಿದೆ. ಈ ವಿಷಯಕ್ಕೆ ಪ್ರತ್ಯೇಕ ವಿಶ್ವವಿದ್ಯಾಲಯ ಏಕೆ ಬೇಕು? ಈಗಿರುವ ವಿಶ್ವವಿದ್ಯಾಲಯಗಳಲ್ಲೇ ಪ್ರತ್ಯೇಕ ಅಧ್ಯಯನ ಪೀಠ ಆರಂಭಿಸಿದರಾಗದೇ?
ಇಂಥ ಚಿಂತನೆಯ ಹಿಂದೆ ಆ ವಿಷಯದಲ್ಲಿ ಸಮಗ್ರ ಸಂಶೋಧನೆಗಳು ಆಗಬೇಕು ಎಂಬ ಉದ್ದೇಶ ಇದೆ. ಯಾವುದೇ ಕಾಲೇಜು ಈ ವಿಶ್ವವಿದ್ಯಾಲಯದ ಸಂಯೋಜನೆಗೆ ಒಳಪಡುವುದಿಲ್ಲ. ಸಂಶೋಧನೆಗೆ ಮಾತ್ರ ಸೀಮಿತವಾದ ವಿಶ್ವವಿದ್ಯಾಲಯ ಇದಾಗಿರುತ್ತದೆ.

ಈಗಿರುವ ವಿಶ್ವವಿದ್ಯಾಲಯಗಳಲ್ಲೇ ಪ್ರತ್ಯೇಕ ಅಧ್ಯಯನ ಪೀಠ ಆರಂಭಿಸಿ ಈ ವಿಷಯದ ಬಗ್ಗೆ ಸಂಶೋಧನೆ ಕೈಗೊಳ್ಳಲು ಸಾಧ್ಯವಿದೆ. ಆದರೆ, ಇದಕ್ಕೊಂದು ಪ್ರತ್ಯೇಕ ವಿಶ್ವವಿದ್ಯಾಲಯ ಇರಲಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ತೀರ್ಮಾನಿಸಿದೆ. ಇದರಿಂದ ತುಸು ಹೆಚ್ಚಿನ ಖರ್ಚು ಬರಬಹುದು. ಆದರೆ ಒಟ್ಟು ಜನಸಂಖ್ಯೆಯ ಶೇ 69ರಷ್ಟಿರುವ ಗ್ರಾಮವಾಸಿಗಳಿಗೆ ಅನುಕೂಲ ಆಗಬಹುದೆಂಬ ನಿರೀಕ್ಷೆ ಇದೆ. ವಿಷಯ ಆಧಾರಿತ ವಿಶ್ವವಿದ್ಯಾಲಯದ ಅವಶ್ಯಕತೆಯೂ ನಮಗೆ ಇದೆ. ಆದರೆ ಅಂಥವುಗಳ ವ್ಯಾಪ್ತಿ ಹೆಚ್ಚಿರಬೇಕು. ಇಲ್ಲದಿದ್ದರೆ ಅವನ್ನು ಬೇರೊಂದರ ಜೊತೆ ವಿಲೀನ ಮಾಡುವುದೇ ಉತ್ತಮ.

* ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದಂತೆ ಒಂದೊಂದು ಸರ್ಕಾರ ಒಂದೊಂದು ತೀರ್ಮಾನ ಕೈಗೊಳ್ಳುತ್ತದೆ. ಏಕೆ ಹೀಗೆ? ನೀತಿ ನಿರೂಪಣೆ ಹಾಗೂ ತೀರ್ಮಾನದ ವಿಚಾರದಲ್ಲಿ ಏಕರೂಪತೆ ಸಾಧ್ಯವಿಲ್ಲವೇ?
ನಮ್ಮ ಸರ್ಕಾರ ಅಥವಾ ಹಿಂದಿನ ಸರ್ಕಾರ ಎಂಬುದು ಇಲ್ಲಿ ಮುಖ್ಯವಲ್ಲ. ಸಾಂದರ್ಭಿಕ ಅಗತ್ಯಗಳಿಗೆ ಅನುಗುಣವಾಗಿ ತೀರ್ಮಾನ ಕೈಗೊಳ್ಳಲಾಗುತ್ತದೆ.ವಿಶ್ವವಿದ್ಯಾಲಯಗಳನ್ನು ತೆರೆಯುವುದು ಅಥವಾ ವಿಲೀನ ಮಾಡುವುದು ಆ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಇರಬೇಕು.

ತೀರಾ ಸೀಮಿತ ಉದ್ದೇಶದ, ಸಣ್ಣ ವ್ಯಾಪ್ತಿಯ ವಿಶ್ವವಿದ್ಯಾಲಯಗಳನ್ನು ಆರ್ಥಿಕ ಮಿತವ್ಯಯದ ಉದ್ದೇಶದಿಂದ ವಿಲೀನ ಮಾಡಿದರೆ ತಪ್ಪಿಲ್ಲ. ಯಾವುದೇ ಹೊಸ ವಿಶ್ವವಿದ್ಯಾಲಯ ಸ್ಥಾಪಿಸುವ ಮೊದಲು ಅದರಿಂದ ಸಂಶೋಧನೆಗೆ ಎಷ್ಟು ನೆರವಾಗುತ್ತದೆ ಎಂಬುದನ್ನು ಗಮನಿಸಿಕೊಳ್ಳಬೇಕು. ಹಲವು ವಿಷಯಗಳನ್ನು ಒಂದೇ ವಿಶ್ವವಿದ್ಯಾಲಯದಲ್ಲಿ  ಕಲಿಯುವ ಅವಕಾಶ ಕಲ್ಪಿಸುವುದರಿಂದಲೂ ವಿದ್ಯಾರ್ಥಿಗೆ ಅನುಕೂಲ ಇದೆ. ಬೇರೆ ಬೇರೆ ಜ್ಞಾನಶಾಖೆಗಳನ್ನು ಒಂದೇ ಸೂರಿನಡಿ ಕಲಿಯಲು ಸಾಧ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT