ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷಾದ ವ್ಯಕ್ತಪಡಿಸಿದ ಪಾಕಿಸ್ತಾನ

ಕಾಶ್ಮೀರ ವಿಷಯ ಚರ್ಚೆಗೆ ಭಾರತದ ನಿರಾಕರಣೆ
Last Updated 26 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್(ಪಿಟಿಐ): ಕಾಶ್ಮೀರ ವಿಚಾರವಾಗಿ ದ್ವಿಪಕ್ಷೀಯ ಮಾತುಕತೆ ನಡೆಸಲು ಪಾಕಿಸ್ತಾನ ಇಟ್ಟಿದ್ದ ಪ್ರಸ್ತಾವವನ್ನು ಭಾರತ ನಿರಾಕರಿಸಿದ್ದಕ್ಕೆ  ಪಾಕ್‌ ವಿಷಾದ ವ್ಯಕ್ತಪಡಿಸಿದೆ. ಈ ಮೂಲಕ ವಿವಾದವನ್ನು ಮತ್ತೊಮ್ಮೆ ಅಂತರರಾಷ್ಟ್ರೀಯ ಮಟ್ಟದಲ್ಲಿ  ಜೀವಂತವಾಗಿರಿಸಲು ಪಾಕ್‌ ಯತ್ನಿಸಿದೆ.

ಭಾರತದ ಕ್ರಮದ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರಗಳಾದ ಚೀನಾ, ಫ್ರಾನ್ಸ್‌, ರಷ್ಯಾ, ಬ್ರಿಟನ್‌ ಮತ್ತು ಅಮೆರಿಕದ ರಾಯಭಾರಿಗಳು ಮತ್ತು ಐರೋಪ್ಯ ಒಕ್ಕೂಟದ ಸದಸ್ಯ ರಾಷ್ಟ್ರಗಳಿಗೆ  ಪಾಕಿಸ್ತಾನ ಪ್ರಧಾನಿಯ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್‌ ಅಜೀಜ್‌  ವಿವರಿಸಿದ್ದಾರೆ.

‘ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಮತ್ತು ಅಮಾಯಕರ ಹತ್ಯೆ ನಡೆಯುತ್ತಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆರೋಪಿಸಿದೆ.ಮಾತುಕತೆ ನಿರಾಕರಣೆ ಬಗ್ಗೆ ತನ್ನ ದೇಶದ ವಿದೇಶಾಂಗ ಕಾರ್ಯದರ್ಶಿ ಐಜಾಜ್ ಅಹ್ಮದ್ ಚೌಧರಿ ಮತ್ತು ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್‌.ಜೈಶಂಕರ್ ಅವರೊಂದಿಗೆ ಮಾಡಿ ಕೊಂಡ ಪತ್ರವ್ಯವಹಾರವನ್ನು ವಿವರಿಸಿದ್ದಾರೆ.

ಕಾಶ್ಮೀರ ಬಗ್ಗೆ ಮಾತುಕತೆ ನಡೆಸಬೇಕೆಂಬ ಪಾಕಿಸ್ತಾನದ ಪ್ರಸ್ತಾಪವನ್ನು ಭಾರತ ಈಚೆಗೆ ನಿರಾಕರಿಸಿತ್ತು. ‘ಕಾಶ್ಮೀರ ಭಾರತದ ಆಂತರಿಕ ವಿಚಾರ, ಗಡಿ ಭಯೋತ್ಪಾದನೆ ಬಗ್ಗೆ ಮಾತುಕತೆ ನಡೆಯಬೇಕು’ ಎಂದು ಹೇಳಿತ್ತು.

ಮಾನವ ಹಕ್ಕುಗಳ ರಕ್ಷಣೆ ಮತ್ತು ಅಂತರರಾಷ್ಟ್ರೀಯ ಮಾನವೀಯ ಕಾನೂನುಗಳನ್ನು ಎತ್ತಿಹಿಡಿಯುವಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರಗಳು ಹಾಗೂ ಐರೋಪ್ಯ ಒಕ್ಕೂಟದ ದೇಶಗಳು ಪ್ರಮುಖ ಪಾತ್ರ ವಹಿಸುತ್ತವೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳ ಅನುಸಾರ ಜಮ್ಮು ಮತ್ತು  ಕಾಶ್ಮೀರಿ ಜನರ ನೆರವಿಗೆ ಈ ದೇಶಗಳು ತಮ್ಮ ಬದ್ಧತೆಯನ್ನು ಪ್ರದರ್ಶಿಸಬೇಕು ಎಂದು ಅಜೀಜ್‌ ಪ್ರತಿಪಾದಿಸಿದ್ದಾರೆ.

ಉಗ್ರ ಸಂಘಟನೆಗಳಲ್ಲಿ ಪಕ್ಷಪಾತ ಬೇಡ: ಅಮೆರಿಕ
ವಾಷಿಂಗ್ಟನ್‌ (ಪಿಟಿಐ): 
‘ಚಿಂತನೆ ಹಾಗೂ ತತ್ವಗಳ ಆಧಾರದಲ್ಲಿ ಭಯೋತ್ಪಾದಕ ಸಂಘಟನೆಗಳ ಮಧ್ಯೆ ಭೇದಭಾವ ಮಾಡಬಾರದು’ ಎಂದು ಅಮೆರಿಕ ಪಾಕಿಸ್ತಾನಕ್ಕೆ ಸೂಚನೆ ನೀಡಿದೆ.

‘ತಮಗೆ ಅನುಕೂಲವಾಗುವಂಥ ಧೋರಣೆ ತಳೆದ ಸಂಘಟನೆಗಳಿಗೆ ದೇಶದೊಳಗೆ ಸುರಕ್ಷಿತ ನೆಲೆ ಕಲ್ಪಿಸಿ, ಅವುಗಳ ಶಕ್ತಿ ವರ್ಧಿಸಲು ಅವಕಾಶ ಕೊಡಬಾರದು ಎಂದು ನಾವು ಪಾಕಿಸ್ತಾನಕ್ಕೆ ಸ್ಪಷ್ಟ ಸೂಚನೆ ನೀಡಿದ್ದೇವೆ’ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರ  ಎಲಿಜಬೆತ್‌ ಟ್ರುಡೆಯೊ ಗುರುವಾರ ಹೇಳಿದ್ದಾರೆ. ಆಫ್ಘಾನಿಸ್ತಾನದ ಅಮೆರಿಕನ್‌ ವಿಶ್ವವಿದ್ಯಾಲಯದಲ್ಲಿ ಗುರುವಾರ ದಾಳಿ ನಡೆಸಿದ್ದ  ಭಯೋತ್ಪಾದಕರನ್ನು ಪಾಕಿಸ್ತಾನದಿಂದ ಕಳುಹಿಸಲಾಗಿತ್ತು ಎಂದು ಶಂಕಿಸಲಾಗಿದೆ.

***
ಕಾಶ್ಮೀರದಲ್ಲಿ ಜುಲೈ 8ರಿಂದ ನಡೆಯುತ್ತಿರುವ ಹಿಂಸಾಚಾರದಲ್ಲಿ 80ಕ್ಕೂ ಹೆಚ್ಚು ಅಮಾಯಕರು ಮೃತ ಪಟ್ಟಿದ್ದಾರೆ. ಏಳು ಸಾವಿರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
-ಐಜಾಜ್ ಅಹ್ಮದ್ ಚೌಧರಿ,ಪಾಕ್‌ ವಿದೇಶಾಂಗ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT