ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧು ಬ್ರ್ಯಾಂಡ್ ಮೌಲ್ಯ ಹತ್ತು ಪಟ್ಟು ಹೆಚ್ಚಳ

ವಾಣಿಜ್ಯ, ಪ್ರಚಾರ ಒಪ್ಪಂದ ಮಾಡಿಕೊಳ್ಳಲು ಮುಗಿಬಿದ್ದ ಕಂಪೆನಿಗಳು
Last Updated 26 ಆಗಸ್ಟ್ 2016, 19:27 IST
ಅಕ್ಷರ ಗಾತ್ರ

ಹೈದರಾಬಾದ್ (ಪಿಟಿಐ): ರಿಯೊ ಒಲಿಂಪಿಕ್ಸ್‌ನ ವನಿತೆಯರ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ  ಪಿ.ವಿ. ಸಿಂಧು ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲು  ಹಲವು ವಾಣಿಜ್ಯ ಸಂಸ್ಥೆಗಳು ಮುಗಿಬಿದ್ದಿವೆ.  ಮಾರುಕಟ್ಟೆಯಲ್ಲಿ ಅವರ ಬ್ರ್ಯಾಂಡ್ ಮೌಲ್ಯವು ಹತ್ತು ಪಟ್ಟು ಹೆಚ್ಚಳವಾಗಿದೆ.

ಸಿಂಧು ಅವರ ಬ್ರ್ಯಾಂಡ್ ಮಾರ್ಕೆಟಿಂಗ್ ಮಾಡುತ್ತಿರುವ ಬೇಸ್‌ಲೈನ್ ವೆಂಚರ್ಸ್ ಸಂಸ್ಥೆಯ ಸಹ ಸಂಸ್ಥಾಪಕ ಆರ್. ರಾಮಕೃಷ್ಣನ್  ಈ ವಿಷಯವನ್ನು  ತಿಳಿಸಿದ್ದಾರೆ. ‘ಯಾವ ಸಂಸ್ಥೆಗಳು ಸಿಂಧು ಜೊತೆಗೆ ಒಪ್ಪಂದ ಮಾಡಿಕೊಳ್ಳಲು ಮುಂದೆ ಬಂದಿವೆ ಎಂಬುದನ್ನು ಈಗಲೇ ಬಹಿರಂಗಪಡಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಅವರ ಬ್ರ್ಯಾಂಡ್ ಮೌಲ್ಯವು ಇನ್ನೂ ಏರುವ ಸಾಧ್ಯತೆ ಇದೆ. ಒಲಿಂಪಿಕ್ಸ್ ಪದಕದ ವಿಜಯದ ಮುನ್ನ ಅವರ ಬ್ರ್ಯಾಂಡ್ ಮೌಲ್ಯವು ಅಂದಾಜು ₹ 20 ಲಕ್ಷ ಇತ್ತು. ಈಗ ಅದು ₹ 2 ಕೋಟಿಯ ಸಮೀಪ ಬಂದಿದೆ. ಸೆಪ್ಟೆಂಬರ್‌ ಎರಡನೇ ವಾರದಲ್ಲಿ ಸಿಂಧು ಅವರು ಮೊದಲ ಹಸ್ತಾಕ್ಷರ   ಹಾಕುವ ನಿರೀಕ್ಷೆ ಇದೆ’ ಎಂದು ರಾಮಕೃಷ್ಣನ್ ತಿಳಿಸಿದ್ದಾರೆ.

ಬೇಸ್‌ಲೈನ್ ಸಂಸ್ಥೆಯು ಕಿದಂಬಿ ಶ್ರೀಕಾಂತ್ ಅವರ ಮಾರುಕಟ್ಟೆ ವ್ಯವಹಾರವನ್ನೂ ನಿರ್ವಹಿಸುತ್ತದೆ. ‘ಸಿಂಧು ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಹಲವಾರು ಬೇಡಿಕೆಗಳ ಮಹಾಪೂರವೇ ಹರಿದು ಬರುತ್ತಿದೆ. ಆದರೆ ನಾವು ಅವಸರ ಮಾಡುತ್ತಿಲ್ಲ.  ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ವರ್ಚಸ್ಸು ಬೆಳೆಸಲು ವರ್ಷಗಳೇ ಬೇಕಾಗುತ್ತವೆ. ಆದ್ದರಿಂದ ಸೂಕ್ತ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವುದು  ಮುಖ್ಯ. ಅದಕ್ಕಾಗಿ ನಾವು ತಾಳ್ಮೆಯಿಂದ ಹೆಜ್ಜೆ ಇಡುತ್ತಿದ್ದೇವೆ. ಸಿಂಧು ಅವರು ಕೂಡ ನಮ್ಮ ಸಂಸ್ಥೆಯೊಂದಿಗೆ ಕಾರ್ಯ ನಿರ್ವಹಿಸಲು ಉತ್ಸುಕರಾಗಿದ್ದಾರೆ. ಆದ್ದರಿಂದ ಅವರ ಬ್ರ್ಯಾಂಡ್‌ ಮೌಲ್ಯವು ಮತ್ತಷ್ಟು ವೃದ್ಧಿಸಲಿ ಎಂಬುದೇ ನಮ್ಮ ಆಶಯ’ ಎಂದು ರಾಮಕೃಷ್ಣನ್ ಹೇಳಿದ್ದಾರೆ.

ಒಲಿಂಪಿಕ್ಸ್‌ ಬ್ಯಾಡ್ಮಿಂಟನ್‌ನಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಮೊಟ್ಟಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆ ಕೂಡ ಸಿಂಧು ಅವರದ್ದಾಗಿದೆ. ಅವರು ಬೆಳ್ಳಿ ಪದಕ ಪಡೆದ ನಂತರ ತೆಲಂಗಾಣ ಸರ್ಕಾರವು ₹ 5 ಕೋಟಿ, ಆಂಧ್ರಪ್ರದೇಶ ಸರ್ಕಾರ ₹ 3 ಕೋಟಿ ಮತ್ತು ದೆಹಲಿ ಸರ್ಕಾರ ₹ 2 ಕೋಟಿ ಬಹುಮಾನ ಘೋಷಿಸಿದ್ದರು. ಈ ಅಂಶವೂ ಅವರ ಬ್ರ್ಯಾಂಡ್ ಮೌಲ್ಯದ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಸಂಸ್ಥೆಯು ವಿಶ್ಲೇಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT