ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿ ಬಳಗಕ್ಕೆ ಜಯದ ಕಾತರ

ಅಮೆರಿಕದಲ್ಲಿ ಅರಳಲಿದೆ ಚುಟುಕು ಕ್ರಿಕೆಟ್; ವಿಂಡೀಸ್ ವಿರುದ್ಧದ ಮೊದಲ ಹಣಾಹಣಿಗೆ ವೇದಿಕೆ ಸಿದ್ಧ
Last Updated 26 ಆಗಸ್ಟ್ 2016, 20:31 IST
ಅಕ್ಷರ ಗಾತ್ರ

ಪೋರ್ಟ್ ಲಾಡ್ರೆಡಲ್, ಅಮೆರಿಕ (ಪಿಟಿಐ):  ಅಮೆರಿಕದಲ್ಲಿ ಕ್ರಿಕೆಟ್ ಆಟ ವನ್ನು ಜನಪ್ರಿಯಗೊಳಿಸುವ ಅಭಿಯಾ ನಕ್ಕೆ ಶನಿವಾರ ಚಾಲನೆ ದೊರೆಯಲಿದೆ. ಭಾರತ ಮತ್ತು ವೆಸ್ಟ್‌ ಇಂಡೀಸ್ ತಂಡಗಳು ಅಮೆರಿಕದಲ್ಲಿ ಇದೇ ಮೊದಲ ಬಾರಿಗೆ ಎರಡು ಟ್ವೆಂಟಿ–20 ಪಂದ್ಯಗಳ ಸರಣಿ ಆಡಲಿವೆ.  ಅಂತರ ರಾಷ್ಟ್ರೀಯ ಕ್ರಿಕೆಟ್ ಸಮಿತಿಗೆ (ಐಸಿಸಿ)  ತನ್ನ ಮಾರುಕಟ್ಟೆಯನ್ನು ಅಮೆರಿಕ ವಿಸ್ತರಿಸುವ ಪ್ರಯತ್ನವೂ ಇದಾಗಿದೆ.

ಕಳೆದ ವರ್ಷ ಮಾಜಿ ಕ್ರಿಕೆಟಿಗರಾದ ಭಾರತದ ಸಚಿನ್ ತೆಂಡೂಲ್ಕರ್ ಮತ್ತು ಆಸ್ಟ್ರೇಲಿಯಾದ ಶೇನ್ ವಾರ್ನ್ ಅವರು  ಆಲ್ ಸ್ಟಾರ್ ಸೀರಿಸ್ ಟೂರ್ನಿಯನ್ನು ಆಯೋಜಿಸಿದ್ದರು. ಆ ಸ್ನೇಹಪರ ಟೂರ್ನಿ ಯಲ್ಲಿ  ವಿಶ್ವದ ಮಾಜಿ ಕ್ರಿಕೆಟಿಗರು ಆಡಿ ಗಮನ ಸೆಳೆದಿದ್ದರು. ಆದರೆ, ದ್ವಿಪಕ್ಷೀಯ ಟೂರ್ನಿ ನಡೆಯುತ್ತಿರುವುದು ಇದೇ ಮೊದಲ ಬಾರಿ. 

ಕೆರಿಬಿಯನ್ ನೆಲದಲ್ಲಿ 2–0ಯಿಂದ ಟೆಸ್ಟ್ ಸರಣಿ ಗೆದ್ದಿರುವ ಭಾರತ ತಂಡವು ಭರ್ಜರಿ ಆತ್ಮವಿಶ್ವಾಸದಲ್ಲಿದೆ.  ನಾಲ್ಕು  ಪಂದ್ಯಗಳ ಸರಣಿಯಲ್ಲಿ ಎರಡು ಮಳೆಗೆ ಆಹುತಿಯಾಗಿದ್ದರಿಂದ ಫಲಿತಾಂಶ ಹೊರಹೊಮ್ಮಿರಲಿಲ್ಲ.  ಆದರೆ, ತಂಡದ ಸಂಘಟಿತ ಹೋರಾಟವು ಗಮನ ಸೆಳೆದಿತ್ತು. ವಿರಾಟ್ ಕೊಹ್ಲಿ ನಾಯಕತ್ವದ ಬಳಗವು ಐತಿಹಾಸಿಕ ಸರಣಿ ಜಯ ದಾಖಲಿಸಿತ್ತು. 

ಅಮೆರಿಕದ ಚುಟುಕು ಸರಣಿಯಲ್ಲಿ ತಂಡವನ್ನು ಮಹೇಂದ್ರ ಸಿಂಗ್ ದೋನಿ  ಮುನ್ನಡೆಸಲಿದ್ದಾರೆ.  ಕಳೆದ ತಿಂಗಳು ಜಿಂಬಾಬ್ವೆಯಲ್ಲಿ ನಡೆದಿದ್ದ ಏಕದಿನ ಸರಣಿಯಲ್ಲಿ ದೋನಿ ಆಡಿದ್ದರು. ಅದರ ನಮತರ ಈಗ ಕಣಕ್ಕಿಳಿಯುತ್ತಿದ್ದಾರೆ. ಅವರು 2014ರಲ್ಲಿ ಟೆಸ್ಟ್‌ ಮಾದರಿ ಯಿಂದ ನಿವೃತ್ತಿ ಪಡೆದಿದ್ದರು.

ತಂಡದ 14 ಆಟಗಾರರು ಶುಕ್ರವಾರ  ಇಲ್ಲಿಯ  ಸೆಂಟ್ರಲ್ ಬ್ರೊವಾರ್ಡ್ ರೀಜ ನಲ್ ಪಾರ್ಕ್‌ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದರು.  ಅಂತರರಾಷ್ಟ್ರೀಯ ಕ್ರಿಕೆಟ್ ಆಯೋಜನೆಗೆ ಅಭಿವೃದ್ದಿಪಡಿಸ ಲಾಗಿರುವ  ಮತ್ತು ಐಸಿಸಿಯ ಪ್ರಮಾಣಿಕೃತಗೊಂಡಿರುವ  ಕ್ರೀಡಾಂಗಣ ಇದಾಗಿದೆ. 
ಹಾಲಿ ಚಾಂಪಿಯನ್ನರ ಸವಾಲು

ಟ್ವೆಂಟಿ–20 ಮಾದರಿಯಲ್ಲಿ ಹಾಲಿ ವಿಶ್ವ ಚಾಂಪಿಯನ್ ಆಗಿರುವ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸುವುದು ಭಾರತಕ್ಕೆ ಕಠಿಣ ಸವಾಲಾಗುವ ನಿರೀಕ್ಷೆ ಇದೆ. ಫೆಬ್ರುವರಿಯಲ್ಲಿ ಭಾರತದಲ್ಲಿ ನಡೆದಿದ್ದ ವಿಶ್ವ ಟ್ವೆಂಟಿ–20 ಟೂರ್ನಿಯಲ್ಲಿ ಮಿಂಚಿದ್ದ ಕಾರ್ಲೋಸ್ ಬ್ರಾಥ್‌ವೈಟ್  ಅವರು ವಿಂಡೀಸ್ ತಂಡವನ್ನು ಮುನ್ನಡೆಸಲಿದ್ದಾರೆ.  ವಿಶ್ವ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಭಾರತವು ವಿಂಡೀಸ್ ವಿರುದ್ಧ ಸೋಲಲು ಕಾರ್ಲೋಸ್ ಅವರೇ ಕಾರಣರಾಗಿದ್ದರು. ಇದೀಗ ದೋನಿ ಬಳಗಕ್ಕೆ ಮುಯ್ಯಿ ತೀರಿಸಿಕೊಳ್ಳುವ ಅವಕಾಶ ಇದೆ.

ವಿಶ್ವಕಪ್ ಗೆದ್ದ ತಂಡದ ನಾಯಕ ರಾಗಿದ್ದ ಡರೆನ್ ಸಾಮಿ  ತಂಡದಲ್ಲಿ ಸ್ಥಾನ ಪಡೆದಿಲ್ಲ. ವಿಂಡೀಸ್ ಕ್ರಿಕೆಟ್ ಆಡಳಿತ ಮಂಡಳಿ ಮತ್ತು ಆಟಗಾರರ ನಡುವಣ ಜಟಾಪಟಿಯಿಂದಾಗಿ ಸಾಮಿ ಸ್ಥಾನ ಕಳೆದುಕೊಂಡಿದ್ದಾರೆ. ಬಾಂಗ್ಲಾದಲ್ಲಿ ನಡೆದಿದ್ದ ಏಷ್ಯಾ ಕಪ್ ಟ್ವೆಂಟಿ–20,  ಆಸ್ಟ್ರೇಲಿಯಾ, ಶ್ರೀಲಂಕಾ ಮತ್ತು ಜಿಂಬಾಬ್ವೆ ಎದುರಿನ ಸರಣಿಗಳಲ್ಲಿ  ಭಾರತ ತಂಡವು ಗೆದ್ದಿತ್ತು.

ವಾರಾಂತ್ಯದ ರಜೆ ದಿನದಂದು ನಡೆಯಲಿರುವ ಪಂದ್ಯವು ಅಮೆರಿಕದ ಕ್ರಿಕೆಟ್‌ಪ್ರೇಮಿಗಳಲ್ಲಿ ಕುತೂಹಲ ಕೆರಳಿಸಿದೆ.  ಮೊದಲ ಪಂದ್ಯಕ್ಕೆ  15 ಸಾವಿರ ಪ್ರೇಕ್ಷಕರು ಸೇರುವ ನಿರೀಕ್ಷೆ ಇದೆ.

ತಂಡಗಳು ಇಂತಿವೆ
ಭಾರತ:  ಮಹೇಂದ್ರಸಿಂಗ್ ದೋನಿ (ನಾಯಕ), ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಅಮಿತ್ ಮಿಶ್ರಾ,  ಭುವನೇಶ್ವರ್ ಕುಮಾರ್, ಜಸ್‌ಪ್ರೀತ್ ಬೂಮ್ರಾ, ಕೆ.ಎಲ್. ರಾಹುಲ್,  ಮೊಹಮ್ಮದ್ ಶಮಿ,  ಆರ್. ಅಶ್ವಿನ್,  ರವೀಂದ್ರ ಜಡೇಜ, ರೋಹಿತ್ ಶರ್ಮಾ, ಶಿಖರ್ ಧವನ್, ಸ್ಟುವರ್ಟ್ ಬಿನ್ನಿ, ಉಮೇಶ್ ಯಾದವ್ . ಮುಖ್ಯ ಕೋಚ್: ಅನಿಲ್ ಕುಂಬ್ಳೆ

ವೆಸ್ಟ್ ಇಂಡೀಸ್:  ಕಾರ್ಲೋಸ್ ಬ್ರಾಥ್‌ವೈಟ್ (ನಾಯಕ),  ಆ್ಯಂಡ್ರೆ ಫ್ಲೆಚರ್,  ಆ್ಯಂಡ್ರೆ ರಸೆಲ್, ಕ್ರಿಸ್ ಗೇಲ್, ಡ್ವೇನ್ ಬ್ರಾವೊ, ಇವಿನ್ ಲೂಯಿಸ್, ಜೇಸನ್ ಹೋಲ್ಡರ್, ಜಾನ್ಸನ್ ಚಾರ್ಲ್ಸ್, ಕೀರನ್ ಪೊಲಾರ್ಡ್, ಲೆಂಡ್ಲ್ ಸಿಮನ್ಸ್,  ಮರ್ಲಾನ್ ಸ್ಯಾಮುಯೆಲ್ಸ್ ಸ್ಯಾಮುಯೆಲ್ ಬದ್ರಿ, ಸುನಿಲ್ ನಾರಾಯಣ್.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ:ಸ್ಟಾರ್‌ ಸ್ಪೋರ್ಟ್ಸ್‌

ದೋನಿ ನಾಯಕತ್ವ; ಕುಂಬ್ಳೆ ಮಾರ್ಗದರ್ಶನ
ಅನಿಲ್ ಕುಂಬ್ಳೆ ಅವರು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕವಾದ ನಂತರ ಇದೇ ಮೊದಲ ಬಾರಿಗೆ ಮಹೇಂದ್ರಸಿಂಗ್ ದೋನಿ ನಾಯಕತ್ವದ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.ಅವರು ಕೋಚ್ ಆಗಿ ನೇಮಕವಾದ ನಂತರ ವಿಂಡೀಸ್  ಟೆಸ್ಟ್ ಸರಣಿಯಲ್ಲಿ ಆಡಿದ ವಿರಾಟ್ ಕೊಹ್ಲಿ ನಾಯಕತ್ವದ ತಂಡಕ್ಕೆ  ಮಾರ್ಗದರರ್ಶನ ನೀಡಿದ್ದರು. 

‘ನಾನು ಮತ್ತ ದೋನಿ ಒಂದೇ ತಂಡದಲ್ಲಿ ಜೊತೆಗೂಡಿ ಆಡಿದ್ದೇವೆ. ಆದರೆ, ಕೋಚ್ ಮತ್ತು ನಾಯಕರಾಗಿ  ತಂಡದಲ್ಲಿರುವುದು ಇದೇ ಮೊದಲ ಸಲ.   ಕಳೆದ ಎರಡು ದಿನಗಳಿಂದ ಇಬ್ಬರೂ ಪಂದ್ಯದ ಯೋಜನೆಗಳ ಕುರಿತು ಚರ್ಚೆ ಮಾಡಿದ್ದೇವೆ’ ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ.
‘ಬೌಲರ್ ಜಸ್‌ಪ್ರೀತ್ ಬೂಮ್ರಾ ಅವರಿಗೆ ಐಪಿಎಲ್‌ನಲ್ಲಿ ಮಾರ್ಗ ದರ್ಶನ ನೀಡಿದ್ದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಈಗ ಅವರೊಂದಿಗೆ ಕಾರ್ಯನಿರ್ವಹಿಸು ತ್ತಿದ್ದೇನೆ. ಅವರು ಪ್ರತಿಭಾವಂತ ಬೌಲರ್’  ಎಂದು ಕುಂಬ್ಳೆ ಹೇಳಿದ್ದಾರೆ.

ಅಮೆರಿಕದಲ್ಲಿ ಕ್ರಿಕೆಟ್ ಆಯೋಜನೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಕ್ರಿಕೆಟ್ ಬೆಳವಣಿಗೆಯ ದೃಷ್ಟಿಯಿಂದ ಇದು ಮಹತ್ವದ ಹೆಜ್ಜೆಯಾಗಿದೆ.  ನೂತನ ಅಧ್ಯಾಯದ ಆರಂಭ ಇದಾಗಿದೆ. ಹಿಂದೊಮ್ಮೆ ನಾವು ವಿಂಡೀಸ್‌ನಲ್ಲಿ ಆಡುವ ಸಂದರ್ಭದಲ್ಲಿ  ಅಮೆರಿಕದಲ್ಲಿ ನೆಲೆಸಿದ್ದ ಭಾರತೀಯರು ಪಂದ್ಯ ವೀಕ್ಷಿಸಲು ಬಂದಿದ್ದರು. ಇದೀಗ ಅವರು ಅಮೆರಿಕದಲ್ಲಿಯೇ ಕ್ರಿಕೆಟ್ ನೋಡಲು ಅವಕಾಶ ಸಿಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT