ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘‘ನಾನು ಮಧ್ಯಮವರ್ಗದ, ಮಧ್ಯಮಸ್ತರದ ಕವಿ...

Last Updated 27 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

‘ನಾನು ಜನಪ್ರಿಯತೆಗಾಗಿ ಬರೆದಿಲ್ಲ; ನಾನು ಬರೆದದ್ದು ಜನಪ್ರಿಯವಾಗಿದೆ. ಇದಕ್ಕೆ ಬಹುಶಃ ನನ್ನ ಬರವಣಿಗೆಯಲ್ಲಿನ ಸ್ವಂತಿಕೆ, ಸಮಕಾಲೀನತೆ ಮತ್ತು ಪ್ರಯೋಗಶೀಲತೆ ಕಾರಣವಿದ್ದೀತು’– ಹೀಗೆಂದು ತಮ್ಮ ‘ಜನಪ್ರಿಯತೆ’ಯನ್ನು ವ್ಯಾಖ್ಯಾನಿಸಿದವರು ಕವಿ ಬಿ.ಆರ್. ಲಕ್ಷ್ಮಣರಾವ್‌.

ಇದೇ ಸೆ. 9ರಂದು ಅವರಿಗೆ 70 ವರ್ಷ ತುಂಬುತ್ತದೆ. ಎಪ್ಪತ್ತರ ಸಂಭ್ರಮದಲ್ಲಿರುವ ಇಪ್ಪತ್ತರ ಹುಮ್ಮಸ್ಸಿನ ಕವಿ, ಬೆಂಗಳೂರಿನ ಪದ್ಮನಾಭನಗರದಲ್ಲಿನ ತಮ್ಮ ಮನೆಯಲ್ಲಿ ಮಾತಿಗೆ ಕೂತರೆ ನಾಲ್ಕೈದು ದಶಕಗಳ ಕನ್ನಡ ಸಾಹಿತ್ಯದ ಒಂದು ಅಧ್ಯಾಯ ಸುಳಿದುಹೋದಂತೆ ಯಾರಿಗಾದರೂ ಅನ್ನಿಸಬೇಕು.

ಅವರೊಂದಿಗೆ ಕೆಲಕಾಲ ಕಳೆದರೆ ಸಾಹಿತ್ಯ, ಸಂಗೀತ, ಹಾಡು, ಕ್ರಿಕೆಟ್‌– ಹೀಗೆ ಹತ್ತಾರು ವಿಷಯಗಳು ಹಾದುಹೋಗುತ್ತವೆ. ಅವರ ‘ವಿಷಯಾಸಕ್ತಿ’ಯಲ್ಲಿ ಯಾವತ್ತೂ ಯಾವುದೇ ಕುಂದಿಲ್ಲ. ಎಲ್ಲ ಸಂಗತಿಗಳ ಬಗೆಗೂ ಅವರಿಗೆ ತೀರದ ಕುತೂಹಲ, ವಿಸ್ಮಯ.

ಅವರ ಮಾತಿನಲ್ಲಿ ಕೆಲವು ನೆನಪಿನ ಚಿತ್ರಗಳಿದ್ದವು, ಚಿಂತನೆಯ ಸೆಳಕಿತ್ತು, ಹತ್ತಾರು ವಿಚಾರಗಳ ಗೊಂಚಲಿತ್ತು. ಪ್ರೇಮಕಾವ್ಯದ ಮಿಂಚು ಹರಿಸಿದ, ಈ ತುಂಟ ಕವಿ ತಮ್ಮ ಎಪ್ಪತ್ತರಲ್ಲೂ ಇಪ್ಪತ್ತರ ಬಿಸುಪನ್ನು, ಹೊಳಪನ್ನು ಉಳಿಸಿಕೊಂಡಿರುವುದು ವಿಶೇಷ.

ಅವರ ಕ್ರಿಯಾಶೀಲತೆ, ಜೀವನೋತ್ಸಾಹ, ಚಿರಯೌವನದ ಹಿಂದಿನ ಗುಟ್ಟಿನ ಬಗ್ಗೆಯೇ ಬಿ.ಆರ್‌.ಎಲ್‌. ಮೊದಲಿಗೆ ಮಾತನಾಡಿದರು. ‘ಅದು ನನ್ನ ಸ್ವಭಾವ ಮತ್ತು ಜೀವನಶೈಲಿ ಇರಬಹುದು. ಮೊದಲಿನಿಂದಲೂ ನಾನು ಜೀವನಲೋಲುಪ.

ಬದುಕಿನ ಯಾವುದೇ ಕಷ್ಟ, ದುಃಖ, ದುರಂತಗಳು ನನ್ನನ್ನು ಅಲ್ಲಾಡಿಸಿಲ್ಲ, ಪ್ರಭಾವ ಬೀರಿಲ್ಲ. ಜೀವನದ ಉದ್ದಕ್ಕೂ ನಾನು ಹಾಗೆಯೇ ಇದ್ದೇನೆ. ಕವಿ ದೇಶಕುಲಕರ್ಣಿ ನನ್ನನ್ನು ‘ಲಕ್ಕಿ ಲಕ್ಷ್ಮಣ’ ಎಂದು ಕರೆಯುತ್ತಿದ್ದರು. ನಾನು ಮಹತ್ವಾಕಾಂಕ್ಷೆ ಇಟ್ಟುಕೊಂಡು ಜೀವವನ್ನು ಸಾಹಿತ್ಯಕ್ಕಾಗಿ ತೇಯ್ದಿಲ್ಲ.

ಸಾಹಿತ್ಯ ನನ್ನ ಜೀವನಾನುಭವದ ಸಹಉತ್ಪನ್ನ ಅಷ್ಟೇ. ನಾನು ಸಾಹಿತ್ಯೋಪಜೀವಿಯಲ್ಲ’ ಎಂದು ತಮ್ಮ ಹೆಚ್ಚಿನ ಮಹಾತ್ವಾಕಾಂಕ್ಷೆ ಇಲ್ಲದ ಬದುಕು, ಅದರ ಹಿಂದಿನ ಜೀವಂತಿಕೆಯ ಬಗ್ಗೆ ಹೇಳಿಕೊಂಡರು. ಜಗತ್ತಿನ ಯಾವುದೇ ಸಂಗತಿಗಳ ಬಗ್ಗೆ ಬೇಕೆಂದೇ ತಲೆಕಡಿಸಿಕೊಳ್ಳದೇ, ಬೇರೆಯವರಿಗೆ ಕಿರಿಕಿರಿ ಮಾಡದೇ, ಬದುಕನ್ನು ಅದರ ಸಂಭ್ರಮ, ಸಂತೋಷಗಳೊಂದಿಗೆ ಹಸನ್ಮುಖರಾಗಿಯೇ ಕಳೆದವರು ಬಿ.ಆರ್‌.ಎಲ್‌.

‘ನನ್ನ ಬಹಳಷ್ಟು ಸಂಘರ್ಷ ತಂದೆಯೊಂದಿಗಿತ್ತು. ಅವರು ಹಳೆಯ ತಲೆಮಾರಿಗೆ ಸೇರಿದವರು. ಜಾತಿ, ಸಂಪ್ರದಾಯ ನಂಬಿಕೊಂಡಿದ್ದರು. ಅದನ್ನು ಪೂರ್ತಿಯಾಗಿ ವಿರೋಧಿಸಿದವನು ನಾನು. ಎಂ.ಎ. ಮಾಡಲು ಅವರು ನನ್ನನ್ನು ಬೆಂಬಲಿಸಲಿಲ್ಲ.

ಆದರೆ, ಮನೆಬಿಟ್ಟು ಹೋಗಿ ಎಂ.ಎ. ಮಾಡದಂತೆ ತಡೆದದ್ದು ಮೂರು ಜನ ತಂಗಿಯರು, ತಾಯಿಯ ಪ್ರೀತಿ. ಅದೇ ಎಂ.ಎ.ಗಿಂತ ದೊಡ್ಡದು ಎಂದು ಚಿಂತಾಮಣಿಯಲ್ಲೇ ಉಳಿದೆ. ಅದರಿಂದ ನಷ್ಟವೇನೂ ಆಗಲಿಲ್ಲ’ ಎನ್ನುವ ಅವರು ಚಿಂತಾಮಣಿಯಲ್ಲೇ ಇದ್ದು ಶಾಲೆಯೊಂದರ ಮಾಸ್ತರಾಗಿ, ಬಳಿಕ ಅಲ್ಲೇ ಟ್ಯುಟೋರಿಯಲ್‌ ತೆರೆದರು.

ಹೆಗ್ಗೋಡಿನ ನೀನಾಸಂನ ಸ್ಫೂರ್ತಿಯಿಂದ ಚಿಂತಾಮಣಿಯಲ್ಲಿ ‘ಗೆಳೆಯರ ಬಳಗ’ವೊಂದನ್ನು ಕಟ್ಟಿದರು. ತಮ್ಮ ಸಂಪರ್ಕದಲ್ಲಿದ್ದ ಸಾಹಿತಿಗಳು, ಕಲಾವಿದರು ಬಂದು, ಗೆಳಯರ ಬಳಗದ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ನೋಡಿಕೊಂಡರು.

ಅವರ ಕಾವ್ಯದ ಮರ ಎಲ್ಲೆಡೆ ತನ್ನ ರೆಂಬೆಕೊಂಬೆಗಳನ್ನು ಚಾಚಲು ಅನುವು ಮಾಡಿಕೊಟ್ಟಿದ್ದು ‘ಪ್ರಜಾವಾಣಿ’. ಬರಹಗಾರರಾಗಿ ಲಕ್ಷ್ಮಣರಾವ್‌ ಹಾಗೂ ‘ಪ್ರಜಾವಾಣಿ’ಯ ಸಂಬಂಧ ಅರ್ಧ ಶತಮಾನದ್ದು. ‘ಕವಿಯಾಗಿ ನನ್ನನ್ನು ಸಾರಸ್ವತಲೋಕಕ್ಕೆ ಪರಿಚಯಿಸಿದ್ದು ‘ಪ್ರಜಾವಾಣಿ’ ಎನ್ನುತ್ತಾರೆ ಅವರು.

ದಾವಣಗೆರೆಯಲ್ಲಿ ನಡೆದ, ಎಲ್ಲ ನವ್ಯಲೇಖಕರು ಭಾಗವಹಿಸಿದ್ದ ಸಮ್ಮೇಳನವೊಂದರಲ್ಲಿ ಕವಿ ಗೋಪಾಲಕೃಷ್ಣ ಅಡಿಗರಿಗೆ ಲಕ್ಷ್ಮಣರಾವ್‌ ಅವರನ್ನು ಪರಿಚಯ ಮಾಡಿಕೊಟ್ಟಾಗ ಅವರು, ‘ಪ್ರಜಾವಾಣಿ’ಯಲ್ಲಿ ಅವರ ಕವಿತೆಗಳನ್ನು ಓದಿರುವುದಾಗಿಯೂ, ‘ಚೆನ್ನಾಗಿ ಬರೆಯುತ್ತೀರಿ’ ಎಂದು ಹೇಳಿದ್ದನ್ನು ಕೇಳಿ ಅವರಿಗೆ ಆ ರಾತ್ರಿ ನಿದ್ದೆಯೇ ಬಂದಿರಲಿಲ್ಲವಂತೆ!

ಅಷ್ಟಕ್ಕೇ ಸುಮ್ಮನಾಗದ ಅಡಿಗರು ಅಕ್ಷರ ಪ್ರಕಾಶನದ ಕೆ.ವಿ. ಸುಬ್ಬಣ್ಣ ಅವರಿಗೆ ಅವರ ಬಗ್ಗೆ ಹೇಳಿ, ಅವರ ಮೊದಲ ಕವನ ಸಂಕಲನ ‘ಗೋಪಿ ಮತ್ತು ಗಾಂಡಲೀನ’ ಪ್ರಕಟವಾಗುವಂತೆ ನೋಡಿಕೊಂಡರು.

ಅವರ ಪ್ರಮುಖ ಕವಿತೆಗಳು ಸೇರಿದಂತೆ ನೂರಕ್ಕೂ ಹೆಚ್ಚು ಕವಿತೆಗಳು ‘ಪ್ರಜಾವಾಣಿ’ ಹಾಗೂ ಅದರ ಸೋದರ ಪತ್ರಿಕೆಗಳಾದ ‘ಮಯೂರ’, ‘ಸುಧಾ’ಗಳಲ್ಲಿ ಪ್ರಕಟವಾಗಿವೆ. ಬಹುಶಃ ಇದೂ ಒಂದು ದಾಖಲೆಯೇ ಇರಬೇಕು! ‘ಸಾಪ್ತಾಹಿಕ ಪುರವಣಿ’ಯಲ್ಲಿ ಪ್ರಕಟವಾಗುತ್ತಿದ್ದ ಅವರ ಕವಿತೆಗಳನ್ನು ನೋಡಿ ಯು.ಆರ್‌. ಅನಂತಮೂರ್ತಿ ಅವರು ಲಕ್ಷ್ಮಣ ರಾವ್‌ ಅವರನ್ನು ‘ಸಂಡೇ ಕವಿ’ ಎಂದು ಕರೆದಿದ್ದರಂತೆ!

ಲಕ್ಷ್ಮಣ ರಾವ್‌ ಅವರ ಮಾತು ಹೊರಳಿದ್ದು ಗುರು–ಮಾರ್ಗದರ್ಶಿಗಳಾಗಿದ್ದ ಕತೆಗಾರ ಪಿ. ಲಂಕೇಶ್‌, ಪತ್ರಕರ್ತ ವೈಎನ್‌ಕೆ ಅವರ ಕಡೆಗೆ. ಲಕ್ಷ್ಮಣರಾವ್‌ ಬಿ.ಎ. ಓದಲು ಬೆಂಗಳೂರಿಗೆ ಬಂದಾಗ ಇವರಿಬ್ಬರ ಸಂಪರ್ಕ ಅವರಿಗೆ ಬಂತು. ‘ಲಂಕೇಶ್‌ ನನ್ನ ಮಾರ್ಗದರ್ಶಿ. ನನ್ನ ಜೀವನದೃಷ್ಟಿಯನ್ನು, ಬರವಣಿಗೆಯ ಶೈಲಿಯನ್ನು ರೂಪಿಸಿದರು.

ಕಾವ್ಯ ಮತ್ತು ಜೀವನಕ್ಕೆ ದಿಕ್ಕುದೆಸೆ ತೋರಿಸಿದರು. ಲಂಕೇಶ್‌ ನನ್ನ ಕಾವ್ಯದ ಬಗ್ಗೆ ಅಭಿಪ್ರಾಯ ಕೊಡದೇನೇ ಅವರು ಸಂಪಾದಿಸಿದ ಕಾವ್ಯಸಂಪುಟ ‘ಅಕ್ಷರ ಹೊಸ ಕಾವ್ಯ’ದಲ್ಲಿ ನನ್ನ ಕವಿತೆಗಳನ್ನು ಪ್ರಕಟಿಸಿದರು. ಹತ್ತು ವರ್ಷಗಳ ಕಾಲ ನಾನು ಲಂಕೇಶರ ಬಾಲವಾಗಿ ಓಡಾಡಿಕೊಂಡಿದ್ದೆ. ನನ್ನನ್ನು ತಮ್ಮ ಜೊತೆಗೇ ತಾವು ಹೋದಲ್ಲೆಲ್ಲಾ ಕರೆದುಕೊಂಡು ಹೋಗುತ್ತಿದ್ದರು.

ನನ್ನಲ್ಲಿ ಉತ್ತಮ ಅಭಿರುಚಿಯನ್ನು ಬೆಳೆಸಿದವರೇ ಲಂಕೇಶರು. ವೈಎನ್‌ಕೆ ಕನ್ನಡ ಮತ್ತು ಇಂಗ್ಲಿಷ್‌ ಸಾಹಿತ್ಯದ ಅಭಿಜಾತ ಕೃತಿಗಳನ್ನು ನಾನು ಬಿ.ಎ.ಯಲ್ಲಿ ಇರುವಾಗಲೇ ಓದಿಸಿದ್ದರು ಎನ್ನುವ ಬಿ.ಆರ್‌.ಎಲ್‌. ತಮ್ಮ ಬದುಕು–ಬರವಣಿಗೆಯ ಮೇಲೆ ಆಗಿರುವ ಈ ಇಬ್ಬರ ಪ್ರಭಾವವನ್ನು ಕೃತಜ್ಞತೆಯಿಂದ ನೆನೆಯುತ್ತಾರೆ; ಹಾಗೆಯೇ ತಮ್ಮ ಕಾವ್ಯಜೀವನದ ನಿಡುಗಾಲದ ಗೆಳೆಯರಾದ ಕವಿ ಎಚ್.ಎಸ್.ವೆಂಕಟೇಶಮೂರ್ತಿ, ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರನ್ನು.

ಇವರ ಜೊತೆಗೆ ಅವರು ನೆನಪಿಸಿಕೊಳ್ಳುವುದು ಕನ್ನಡ ಸುಗಮ ಸಂಗೀತ ಕ್ಷೇತ್ರದ ಮಾಂತ್ರಿಕರಾದ ಸಿ. ಅಶ್ವತ್ಥ್‌, ಮೈಸೂರು ಅನಂತಸ್ವಾಮಿ ಅವರನ್ನು. ಸುಗಮ ಸಂಗೀತದಲ್ಲಿ ತಾವೂ ಬೆಳೆದು ನಮ್ಮನ್ನೂ ಬೆಳೆಸಿದವರು ಸ್ವರಸಂಯೋಜಕ ಸಿ. ಅಶ್ವತ್ಥ್‌. ಅವರ ಪ್ರಯೋಗಶೀಲತೆಯಿಂದ ಅದು ಸಾಧ್ಯವಾಗಿದೆ ಎನ್ನುತ್ತಾರೆ ಬಿ.ಆರ್‌.ಎಲ್‌.

ಗೀತೆರಚನಕಾರರಾಗಿ ಆ ಪ್ರಕಾರದ ಬಗ್ಗೆ ಅವರಿಗೆ ಖಚಿತ ಕಲ್ಪನೆಯಿದೆ. ‘ಮೊದಲು ಒಂದು ಗೀತೆ ಕವಿತೆಯಾಗಿ ಗೆಲ್ಲಬೇಕು. ನನ್ನ ‘ಸುಬ್ಬಾಭಟ್ಟರ ಮಗಳೇ’ ಎಂಬ ಗೀತೆಗಳ ಸಂಕಲನ ಕವಿತೆಯಾಗಿಯೂ ಸಲ್ಲುತ್ತದೆ ಎಂದರೆ ಅದರಲ್ಲಿರುವ ಕಾವ್ಯಗುಣದಿಂದಾಗಿ. ಗೀತೆಯನ್ನು ಮೊದಲೇ ಸಿದ್ಧವಾದ ಒಂದು ರಾಗಕ್ಕೆ ಅನುಗುಣವಾಗಿ ಬರೆಯಲಾಗುವುದಿಲ್ಲ.

ಬರೆದ ಬಳಿಕ ಅದಕ್ಕೆ ಟ್ಯೂನ್‌ ಹಾಕಲಾಗುತ್ತದೆ. ಆದಷ್ಟು ಕವಿತೆಗೆ ಹತ್ತಿರವಾಗಿಯೇ ಅದನ್ನು ಬರೆಯಬೇಕಾಗುತ್ತದೆ. ಗಂಭೀರ ಕಾವ್ಯಕ್ಕೂ ಇದಕ್ಕೂ ಒಂದು ವ್ಯತ್ಯಾಸ ಇದೆ. ಗಂಭೀರ ಕಾವ್ಯದಲ್ಲಿ ಒಂದು ಅನುಭವ ಅಥವಾ ವಿಚಾರ ಬೆಳೆಯುತ್ತಾ ಹೋಗಿ ತನ್ನ ಉತ್ಕಟ ತುದಿಯನ್ನು ಮುಟ್ಟುತ್ತದೆ.

ಆದರೆ, ಗೀತೆಗೆ ವಿಭಿನ್ನ ಸ್ವರೂಪವಿದೆ. ಪಲ್ಲವಿ, ಚರಣಗಳ ಒಂದು ವೃತ್ತಾಕಾರದ ಸಂಯೋಜನೆ ಅದಕ್ಕಿದೆ. ಸಂಗೀತ, ಗಾಯನ ಗೊತ್ತಿದ್ದರೆ ಭಾವಗೀತೆಯನ್ನು ಬರೆಯುವುದು ಸುಲಭ. ನಾನು ಗಾಯಕನಾಗಿದ್ದೆ, ಸಂಗೀತ ಗೊತ್ತಿತ್ತು. ಗೀತೆಗಳಿಗೆ ರಾಗ ಹಾಕಿ ನಾನೇ ಮೊದಲಿನಿಂದಲೂ ಹಾಡುತ್ತಿದ್ದೆ. ಸಂಗೀತವನ್ನು ಶಾಸ್ತ್ರೀಯವಾಗಿ ತಕ್ಕ ಮಟ್ಟಿಗೆ ಅಭ್ಯಾಸ ಸಹ ಮಾಡಿದ್ದೇನೆ.

ಸಂಗೀತದಲ್ಲಿ ಅಭಿರುಚಿ ಇಲ್ಲದೆ ಭಾವಗೀತೆ ಬರೆಯುವುದು ಕಷ್ಟ’ ಎನ್ನುವ ಬಿ.ಆರ್‌.ಎಲ್‌. ಅವರಿಗೆ ಕವಿತೆ, ಗೀತೆಗಳ ಮೂಲಕ ಪಂಡಿತ–ಪಾಮರರನ್ನು ಮುಟ್ಟಿದ ತೃಪ್ತಿ ಇದೆ. ‘ಕಾವ್ಯದಲ್ಲಿ ನಾನು ಮಧ್ಯಮವರ್ಗದ, ಮಧ್ಯಮಸ್ತರದ ಕವಿ. ಅದೇ ನುಡಿಗಟ್ಟನ್ನು ಬಳಸಿ ಬರೆದವನು.

ಈ ನಿಟ್ಟಿನಲ್ಲಿ ಕವಿ ಕೆ.ಎಸ್. ನರಸಿಂಹಸ್ವಾಮಿ ಅವರು ನನಗೆ ಮಾದರಿ’ ಎಂದು ತಮ್ಮ ಕಾವ್ಯವನ್ನು ಬಣ್ಣಿಸುವ ಲಕ್ಷ್ಮಣ ರಾವ್‌, ‘ಕವಿತೆಯನ್ನು ಮಾತ್ರ ನಾನು ನಾನಾಗಿ ಬರೆದವನು. ಬೇರೆ ಬರಹಗಳನ್ನು ಬೇರೆಯವರು ಕೇಳಿದಾಗ ಬರೆದವನು.

ನನ್ನ ಸಾಹಿತ್ಯದ ದಾರಿ ಕಾವ್ಯವೇ. ಜನರು ಗುರುತಿಸುವುದು ಕವಿಯಾಗಿಯೇ. ಒಬ್ಬ ಮನುಷ್ಯನಿಗೆ ಅನೇಕ ಭಾವಲಹರಿಗಳಿರುತ್ತವೆ. ಗಾಂಭೀರ್ಯ, ಸಂತೋಷ, ತುಂಟತನ, ಬೇಸರ, ರಸಿಕತೆ ಹೀಗೆ. ಅವನು ಸದಾ ಧ್ಯಾನಸ್ಥನಾಗಿಯೇ ಇರುವುದಿಲ್ಲ.

ನನ್ನ ಕವಿತೆಗಳು, ಭಾವಗೀತೆಗಳು, ಹನಿಗವನಗಳು ನನ್ನ ವ್ಯಕ್ತಿತ್ವದ ಬೇರೆಬೇರೆ ಮುಖಗಳು. ಎಲ್ಲ ಕಡೆಯೂ ನಾನಿದ್ದೇನೆ’ ಎನ್ನುವ ಅವರು ಕಾವ್ಯಕ್ಕೇ ಬದ್ಧರಾದವರು. ಅವರು ಕಾದಂಬರಿ, ನಾಟಕ, ಕತೆ, ಪ್ರಬಂಧಗಳನ್ನು ಬೇರೆಯವರ ಒತ್ತಾಯಕ್ಕೆ ಬರೆದದ್ದುಂಟು.

ಕ್ರಿಕೆಟ್‌ನಲ್ಲಿ ನಾಡು ಕಂಡ ಕಲಾತ್ಮಕ ಬ್ಯಾಟ್ಸ್‌ಮನ್‌ ಜಿ.ಆರ್‌. ವಿಶ್ವನಾಥ್‌. ಅವರ ಬ್ಯಾಟಿಂಗ್‌ನ ಕಲೆಗಾರಿಕೆ, ವ್ಯಕ್ತಿತ್ವವನ್ನು ಹಿಡಿದಿಡುವ ‘ಗುಂಡಪ್ಪ ವಿಶ್ವನಾಥ್’ ಎಂಬ ಕವಿತೆಯನ್ನು ಲಕ್ಷ್ಮಣರಾವ್‌ ಬರೆದಿದ್ದಾರೆ. ಕನ್ನಡದ ಅತ್ಯುತ್ತಮ ಕವಿತೆಗಳಲ್ಲಿ ಒಂದಾದ ಆ ಕವಿತೆಯನ್ನು ವಿಶ್ವನಾಥ್‌ ಅವರಿಗೇ ಓದಿ ಹೇಳಿದ ಪ್ರಸಂಗವನ್ನು ಲಕ್ಷ್ಮಣರಾವ್‌ ನೆನಪಿಸಿಕೊಳ್ಳುತ್ತಾರೆ.

‘ವಿಶ್ವನಾಥ್‌ ಅವರ ಸರಳ ವ್ಯಕ್ತಿತ್ವ, ಅವರ ಕಲಾತ್ಮಕ ಆಟದ ಬಗ್ಗೆ ಒಂದು ಕವಿತೆ ಬರೆಯಬೇಕು ಎಂದು ಪ್ರಯತ್ನಿಸುತ್ತಲೇ ಇದ್ದೆ. ಅವರ ಆಟ ಎಲ್ಲ ಕಲೆಗಳಿಗೂ ಒಂದು ರೂಪಕ. ಕಲೆಗಾರ ತಾತ್ಕಾಲಿಕ, ಕಲೆ ಶಾಶ್ವತ. ಆ ಹಿನ್ನೆಲೆಯಲ್ಲಿ ಬರೆದ ಕವಿತೆಯನ್ನು ಕೇಳಿಸಿಕೊಂಡು ಮೆಚ್ಚಿದ ನಟ ಶ್ರೀನಾಥ್‌, ವಿಶ್ವನಾಥ್‌ ಭೇಟಿಗೆ ಏರ್ಪಾಟು ಮಾಡಿದರು. ಅದನ್ನು ಅವರ ಮುಂದೆಯೇ ಓದಿದೆ. ಅವರು, ‘ನಾನು ಮಧ್ಯಮಕ್ರಮಾಂಕದ ಬ್ಯಾಟ್ಸ್‌ಮನ್‌.

ನನ್ನ ಹೆಸರನ್ನು ಮೇಲಕ್ಕೆ ಹೆಡ್ಡಿಂಗ್‌ನಲ್ಲಿ ಹಾಕಿದ್ದೀರಲ್ಲ’ ಎಂದರು. ಆಗ ಆ ಕವಿತೆ ಪದವಿ ಹುಡುಗರಿಗೆ ಪಠ್ಯವಾಗಿತ್ತು. ಕಾಲೇಜಿನ ಹುಡುಗರು ಅದನ್ನು ಓದುತ್ತಾರೆ ಎಂದಾಗ ಅವರು ಸಂತೋಷ ವ್ಯಕ್ತಪಡಿಸಿದರು. ಕ್ರಿಕೆಟ್‌ ಆಟಗಾರನೊಬ್ಬನ ಆಟವನ್ನು ಕಲಾತ್ಮಕ ಪ್ರತಿಮೆಯಾಗಿಸಿದವರಲ್ಲಿ ಕನ್ನಡದಲ್ಲಿ ಬಿ.ಆರ್‌.ಎಲ್‌. ಮೊದಲಿಗರು. ಬಹುಶಃ ಕೊನೆಯವರೂ ಇರಬಹುದು.

ಬಳಿಕ ಅವರ ಮಾತು ಸಮಾಕಾಲೀನ ಸಂಗತಿಗಳತ್ತ ಹರಿಯಿತು. ‘ಈಗ ಯಾರಿಗೂ ಬದುಕಿನಲ್ಲಿ ದೀರ್ಘಕಾಲೀನ ಕಾಳಜಿಗಳಿಲ್ಲ. ಸಮಯ ಬದಲಾಗಿದೆ. ಕಳೆದ 50 ವರ್ಷಗಳಲ್ಲಿ ಆದ ಬದಲಾವಣೆ ಈಗಿನ ಐದು ವರ್ಷಗಳಲ್ಲಿ ಆಗಿದೆ.

ನಟರಾದ ದಿಲೀಪಕುಮಾರ್‌, ರಾಜಕುಮಾರ್‌, ಎನ್‌.ಟಿ.ಆರ್‌. 50 ವರ್ಷಗಳ ಕಾಲ ಸಿನಿಮಾಗಳಲ್ಲಿ ನಾಯಕರಾಗಿ ನಟಿಸಿದರು. ಸಂಗೀತಗಾರರು 30 ವರ್ಷಗಳ ಕಾಲ ಚಾಲ್ತಿಯಲ್ಲಿರುತ್ತಿದ್ದರು. ಈಗ ದಾಂಪತ್ಯ, ಗೆಳೆತನ, ಪ್ರೀತಿ ಎಲ್ಲವೂ ಫಾಸ್ಟ್‌ಫುಡ್‌ ಥರ ಆಗಿವೆ.

ಯಾವುದಕ್ಕೂ ಹಿಂದಿದ್ದ ತಾಳಿಕೆ, ಬಾಳಿಕೆ ಇಲ್ಲ. ಯಾರಿಗೇ ಆಗಲೀ ನಟ, ಕವಿ ಅಥವಾ ಕಲಾವಿದ ಆಗಲು ಸಾಕಷ್ಟು ಸಿದ್ಧತೆ ಬೇಕು, ಪರಿಶ್ರಮ ಬೇಕು. ನಾನು ಕವಿಯಾಗಿ ಇಂದಿನ ಸ್ತರಕ್ಕೇರಲು 50 ವರ್ಷ ಬೇಕಾಯಿತು. ಈಗಿನ ಯಾರಿಗೂ ಅಷ್ಟು ವ್ಯವಧಾನ, ಸಾವಧಾನ ಇಲ್ಲ. ಆಗ ಸಾಹಿತಿ ಸಮಾಜಕ್ಕೆ ಐಕಾನ್‌ ಆಗಿದ್ದ.

ಈಗ ಸಾಮಾನ್ಯನಾಗಿದ್ದಾನೆ. ಈಗ ಗಂಭೀರ ಸಾಹಿತ್ಯದ ಓದುಗರು ಕಡಿಮೆ. ಅವರು ಮೊದಲಿನಿಂದಲೂ ಅಷ್ಟೇ ಎಂದು ಕಾಣುತ್ತದೆ. ಆನ್‌ಲೈನ್‌ ಲೈಬ್ರರಿಗಳು ಬರುತ್ತಿವೆ. ಈಗ ಪ್ರಪಂಚದ ಎಲ್ಲೆಡೆ ಕನ್ನಡದ ಹಾಡುಗಳನ್ನು ಕೇಳಬಹುದು, ಪುಸ್ತಕಗಳನ್ನು ಓದಬಹುದು.

ಎಲ್ಲೆಲ್ಲೋ ಇರುವವರು ಹಾಡುಗಳನ್ನು ಕೇಳುತ್ತಾರೆ, ಓದುತ್ತಾರೆ. ಹೀಗಾಗಿ ಪರಿಸ್ಥಿತಿ ನಿರಾಶದಾಯಕವಾಗಂತೂ ಇಲ್ಲ’ ಎನ್ನುವ ಅವರಿಗೆ ಅಂತರ್ಜಾಲದ ಬರವಣಿಗೆ ಒಪ್ಪಿತವಲ್ಲ. ‘ಫೇಸ್‌ಬುಕ್‌, ಬ್ಲಾಗ್‌ ಬರಹಗಳಿಗೆ ವಿಮರ್ಶೆ ಇಲ್ಲ. ಅಲ್ಲಿ ಬೆಳವಣಿಗೆ ಕಡಿಮೆ. ಯಾವತ್ತೂ ಸಾಹಿತ್ಯ ಸಮಕಾಲೀನತೆಯ ಪ್ರತಿಬಿಂಬ. ಆಟ, ಊಟ, ನೋಟ– ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಆಗುತ್ತಿರುವ ಕ್ಷಿಪ್ರ ಬದಲಾವಣೆ ಸಾಹಿತ್ಯದಲ್ಲೂ ಆಗುತ್ತಿದೆ...’ ಎನ್ನುವ ಅವರು ‘ಭರವಸೆಯನ್ನೇ ನಂಬಿ’ ತಮ್ಮ ದಾರಿಯನ್ನು ಸವೆಸಿದ ಕವಿ.

ಅಂದಹಾಗೆ, ಎಪ್ಪತ್ತರ ಪಕ್ವ ವಯಸ್ಸಿನಲ್ಲಿ ಅವರು ಹೆಣ್ಣನ್ನು ಹೇಗೆ ನೋಡುತ್ತಾರೆ?

‘ಪ್ರೀತಿ ಎನ್ನುವುದು ನಮ್ಮ ಒಳಗೇ ಇರುತ್ತದೆ. ಪ್ರೀತಿಯೆಂಬ ಸುಮಧುರ ಭಾವನೆ ಮನುಷ್ಯನಿಗೆ ಬೇಕು. ಬಾಲ್ಯದಲ್ಲಿ ಹೆಣ್ಣನ್ನು ನೋಡುವ ರೀತಿ ತಾಯಿ ಮತ್ತು ಸೋದರಿಯರ ಸೀಮಿತ ವಲಯದಲ್ಲಿರುತ್ತದೆ. ಯೌವನದಲ್ಲಿ ನೋಡುವ ರೀತಿ ಬೇರೆ.

ಅದರ ಪರಿಧಿ ವಿಸ್ತರಿಸುತ್ತ ಹೋದಂತೆ ಹೆಣ್ಣನ್ನು ವ್ಯಕ್ತಿಯಾಗಿ, ಸರಿಸಮಾನಳಾಗಿ, ತನ್ನಂತೆಯೇ ಎಂಬಂತೆ ನೋಡುತ್ತೇವೆ. ಅದು ಪಕ್ವತೆ. ದೇಹದ ಮೂಲಕ ಗಂಡು, ಹೆಣ್ಣು ಪಡೆಯುವ ಅನುಭವಗಳು ಬೇರೆ, ಆಲೋಚನೆಗಳು ಬೇರೆ. ಸಂತೋಷ, ನೋವು ಅವಳಿಗೂ ಆಗುತ್ತದೆ.

ಹೆಣ್ಣು ಒಂದು ವಿಸ್ಮಯ, ಅವಳಿಲ್ಲದೆ ಬದುಕೂ ಇಲ್ಲ, ಸೃಷ್ಟಿಯೂ ಇಲ್ಲ. ಜೊತೆಗೆ ಸ್ವಾರಸ್ಯ, ಅರ್ಥವೂ ಇಲ್ಲ. ಬದುಕಿಗೆ ರುಚಿಯನ್ನು ಕೊಟ್ಟಿರುವುದೇ ಹೆಣ್ಣು’ ಎನ್ನುವ ಈ ಕವಿಯ ಮಾತಿನಲ್ಲಿ ಬದುಕನ್ನು ನೋಡುವ ಸಮತೋಲಿತ ದೃಷ್ಟಿಕೋನವಿತ್ತು.

‘ಅಮ್ಮ, ನಿನ್ನ ಎದೆಯಾಳದಲ್ಲಿ’, ‘ಬಾರೇ ರಾಜಕುಮಾರಿ’, ‘ಜಾಲಿಬಾರಿನಲ್ಲಿ’, ‘ಬಾ ಮಳೆಯೇ ಬಾ’ ಮುಂತಾದ ತಮ್ಮ ಭಾವಗೀತೆಗಳಿಂದ ಜನಪ್ರೀತಿಯ ಕವಿಯಾಗಿರುವ ಲಕ್ಷ್ಮಣರಾವ್, ‘ಫೋಟೋಗ್ರಾಫರ್’, ‘ಟುವಟಾರ’, ‘ಸಂವಾದ’, ಕೊಲಂಬಸ್’, ‘ಗುಂಡಪ್ಪ ವಿಶ್ವನಾಥ್’ ಮುಂತಾದ ತಮ್ಮ ಘನವಾದ ಗಂಭೀರ ಕವಿತೆಗಳಿಂದ ವಿಮರ್ಶಕರ ಮನವನ್ನೂ ಗೆದ್ದಿದ್ದಾರೆ. ಇದೇ ಈ ಕವಿಯ ವೈಶಿಷ್ಟ್ಯ.

***
ನಾನು ಮಹತ್ವಾಕಾಂಕ್ಷೆ ಇಟ್ಟುಕೊಂಡು ಜೀವವನ್ನು ಸಾಹಿತ್ಯಕ್ಕಾಗಿ ತೇಯ್ದಿಲ್ಲ. ಸಾಹಿತ್ಯ ನನ್ನ ಜೀವನಾನುಭವದ ಸಹಉತ್ಪನ್ನ ಅಷ್ಟೇ. ನಾನು ಸಾಹಿತ್ಯೋಪಜೀವಿಯಲ್ಲ...

*
ಸಾಹಿತಿ ಸಮಾಜಕ್ಕೆ ಐಕಾನ್‌ ಆಗಿದ್ದ. ಈಗ ಸಾಮಾನ್ಯನಾಗಿದ್ದಾನೆ...

*
ಈಗ ದಾಂಪತ್ಯ, ಗೆಳೆತನ, ಪ್ರೀತಿ ಎಲ್ಲವೂ ಫಾಸ್ಟ್‌ಫುಡ್‌ ಥರ ಆಗಿವೆ. ಯಾವುದಕ್ಕೂ ಹಿಂದಿದ್ದ ತಾಳಿಕೆ, ಬಾಳಿಕೆ ಇಲ್ಲ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT