ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮೂನೆ

ಕಥೆ
Last Updated 27 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಬಂದೊಡನೆ ಅವನು ಗಮನಿಸಿದ್ದು ಒಂದು ವಿಚಿತ್ರ ಶಾಂತವಾದ ಶೂನ್ಯ. ದಾರಿಯಲ್ಲಿ ಹೀಗಿರಲಿಲ್ಲ. ಕಾಲಿಡಲೂ ಜಾಗವಿಲ್ಲದ ಬಸ್ಸಲ್ಲಿ ಕಿಕ್ಕಿರಿದ ಗುಂಪಿಗೆ ಅವನ ಅರಿವು ಇಲ್ಲ ಅಂತ ಕಾಣುತ್ತಿತ್ತು.

ನಿದ್ದೆ ಹೋದ ಮುದುಕರು, ನುಗ್ಗಿ ಬರುವ ಹುಡುಗರು, ಎಣಿಕೆ ಹಾಕುವ ವ್ಯಾಪಾರಿಗಳು, ಅಂಕಿ ನುಂಗಿದ ಲೆಕ್ಕಿಗರು, ಹರಟೆ ಹೊಡೆಯುವ ಹೆಂಗಸರು, ಸಲಾಕಿ ಹಾರೆ ಹಿಡಿದ ಕೂಲಿಗಳು, ಹಗಲುಗನಸು ಕಾಣುವ ಯುವತಿಯರು, ಕಿರುಚಾಡುವ ಕೂಸುಮರಿಗಳು, ತರಕಾರಿ–ಹೂ ತರುವ ಹಳ್ಳಿಗರು, ಕಂದನ ಹೊರೆ ಹೊತ್ತ ತಾಯಿಯರು, ಬೇಸರದ ಶಿಷ್ಯರು, ಬಡಬಡ ಪೆದ್ದರು ಮತ್ತು ಕುದಿಯುವ ಕುಡುಕರು.

ಇವರೆಲ್ಲರಿಂದ ಸುತ್ತುಗಟ್ಟಿದ್ದ, ಸುಮ್ಮನೆ ನಿಂತುಕೊಂಡಿದ್ದ ಅವನಿಗೆ ಊರಿನ ನೆನಪು ಬಂದಿತು. ಅವ್ವ ಸತ್ತುಹೋದ ವರುಷ ಅವನು ಕೇವಲ ಬದುಕಿಗಾಗಿ, ನೊಂದ ಹೃದಯದೊಂದಿಗೆ ಹಳ್ಳಿಯನ್ನು ಬಿಟ್ಟುಬಿಟ್ಟ. ಈಗ ನೆನಪಿಗೆ ಮಾತ್ರ ಉಳಿದ ಊರಿನ ತುಣುಕುತುಂಡುಗಳು ಮನಸ್ಸಿನಲ್ಲೇ ತಿರುಗಿ ತಿರುಗಿ ಸುಳಿಯುತ್ತಿವೆ.

ತೆಂಗಿನ ತೋಪಿನಲ್ಲಿ ಒಂದು ಬಿರುಕು ಬಿಟ್ಟ ಉರುಳಿದ ಮರ. ಅದರ ಬೊಕ್ಕೆ ಬೊಡ್ಡೆಯ ಓರೆಯಿಂದ ಓತಿ ಎದ್ದು ಬರುತ್ತೆ, ತನ್ನ ಎತ್ತಿದ ತಲೆ ಅತ್ತಿಂದಿತ್ತ ಇತ್ತಿಂದತ್ತ ತಿರುಗಿಸುತ್ತಾ, ನನ್ನ ನೋಡಿ, ‘ಈ ಸೀಮೆಯ ಒಡೆಯ ನಾನೇ’ ಅಂತ. ಮೇಯುವ ಮೇಕೆ ಕುರಿಗಳು. ಕೆಂಬೂತದ ಸೊಟ್ಟ ಕುಣಿತ. ಬೆಳಗಿನ ನಸುಕಿನಲ್ಲಿ ಮೇವಿನ ಮೆದೆಯಲ್ಲಿ ನಾಯಿಗಳ ನೆಗೆದಾಟ. ಮುಸ್ಸಂಜೆ ಹೊತ್ತು ಗಣಿಗಾರಲು ಹಕ್ಕಿ ಸುತ್ತು ಹೊಡೆದು ಲಾಲಿತ್ಯದಿಂದ ತೇಲುತ್ತಾ ಜೇನುನೊಣ ಹಿಡಿಯುತ್ತದೆ.

ಬಿಸಿಬಿಸಿ ಮುದ್ದೆ ಕಟ್ಟುವ ಕೈಗಳ ಮಂತ್ರ. ಗಾಳಿಯಲ್ಲಿ ತೊನೆದಾಡುವ ಕಬ್ಬಿನ ತುರಾಯಿಗಳು. ಮಾವಿನ ಮರದಲ್ಲಿ ಹಗ್ಗದಿಂದ ನೇತುಹಾಕಿದ ಕಟ್ಟಿಗೆಯ ತೂಗುಯ್ಯಾಲೆ. ಮುಂಗುಸಿಯ ಸಾಹಸದ ಸುಳಿದಾಟ. ಬೆಂಕಿ ಕಕ್ಕುವ ಮುತ್ತುಗದ ಮರ. ಬಯಲಿನಲ್ಲಿ ಗಿಲ್ಲಿದಾಂಡು ಆಟವಾಡುವ ಬಾಲಕರು. ಕೆರೆಯ ನೀರಲ್ಲಿ ಕೆಂಬಣ್ಣದ ಕೊಂಬಿನ ಬಸವನ ಸ್ನಾನ. ತೀರದಲ್ಲಿ ಮಿಂಚುಳ್ಳಿ ಹೊಂಚುಹಾಕಿ ಕಾಯುತ್ತಾ ತಂತಿ ಮೇಲೆ ಕೂತಿದೆ.

ಕೋಗಿಲೆಯ ಇಂಪಾದ ಕೂಗು ಇಲ್ಲಿ ಕೇಳಿಸುವುದಿಲ್ಲ. ಕಾಲನ ಅವತಾರಗಳೆಂಬಂತೆ ಎಲ್ಲಾ ಕಡೆ ಕಾಕು ಕಾರುವ ಕಾಗೆಗಳು, ಹಾರಾಡುತ್ತ, ಕುಣಿದಾಡುತ್ತ, ಹೊಲಸು ಹೆಕ್ಕುತ್ತ, ಕುಕ್ಕುತ್ತ, ಚುಚ್ಚುತ್ತ, ಚೀರುತ್ತ, ಹೆಗ್ಗಣದ ಹೆಣವನ್ನು ಸೆಳೆಯುತ್ತ, ಸುಲಿಯುತ್ತ, ಸೀಳುತ್ತ, ಕರುಳು ಕೀಳುತ್ತ.

ಮಸಿಯ ನದಿಯಲ್ಲಿ ಗಲೀಜಿನ ನಡುಗಡ್ಡೆಗಳು ಎದ್ದು ಕಾಣುತ್ತಿವೆ. ಕೊಳೆಗಾಲುವೆಯ ಇಬ್ಬದಿ ನಾನಾ ದುರ್ನಾತಗಳ ದಂಡೆ. ಆಕಾಶದಲ್ಲಿ ವೃತ್ತವೃತ್ತ ಸುತ್ತುತ್ತಿರುವ ಹದ್ದುಗಳ ಹಿಂಡು. ಜಲ್ಲಿಜಂಗಲಿನ ಗಲ್ಲಿರಸ್ತೆಗಳಲ್ಲಿ ಜನವಾಹನಗಳ ಮಂದೆ ಇರುವೆ ಗೊದ್ದಗಳಂತೆ ತಂತಮ್ಮ ಗೂಡುಗಳತ್ತ ಸಾಗುತ್ತಿವೆ.

ಕೂಡಲೇ ಗಾಳಿ ಸುಳಿದುಬರುವ ಭಾವನೆ ಅವನನ್ನು ಮುತ್ತಿತ್ತು. ಗರಕ್ಕನೆ ತಿರುಗಿ ಸುತ್ತಲೂ ಕಣ್ಣು ಹಾಯಿಸಿದ. ಯಾರೂ ಕಾಣಿಸಲಿಲ್ಲ. ‘ಸುಸ್ವಾಗತ’ ಎಂದು ದಪ್ಪ ಅಕ್ಷರಗಳಲ್ಲಿ ಆಮಂತ್ರಿಸುವ ಒಂದು ಚಿತ್ರ ಕಣ್ಣಿಗೆ ಬಿತ್ತು. ಅದರ ಕೆಳಗೆ ಸಣ್ಣ ಮೇಜು ಮತ್ತು ಕುರ್ಚಿ. ಇವನ್ನು ಬಿಟ್ಟರೆ ಏನೂ ಇರಲಿಲ್ಲ. ಬರಿಗೋಡೆಗಳು. ಕೆಲ ಹೊತ್ತು ಕಾದು ನಿಂತು ವಿಚಾರ ಮಾಡಿದ. ‘ಯಾರೂ ಇಲ್ಲವಲ್ಲ. ಏನು ಮಾಡೋದು... ಅಲ್ಲಿ ಮೆಟ್ಟಲು ಇದೆ ಅಂತ ಕಾಣುತ್ತೆ... ನೋಡೋಣ’.

ಬೆಕ್ಕಿನ ಹೆಜ್ಜೆ ಇಡುತ್ತಾ ಮೆತ್ತಗೆ ಮೆಟ್ಟಿಲನ್ನು ಹತ್ತಿದ. ಮೇಲೆ ಬಾಗಿಲೊಂದು ಅಡ್ಡ ಬಂದು ದಾರಿ ಕಟ್ಟಿತು. ಅದನ್ನು ತೆಗೆಯಲು ಕೈ ಎತ್ತುವಷ್ಟರಲ್ಲಿ ಬಾಗಿಲು ಕಿರ್ರಾಕಿರ್ರನೆ ತಾನಾಗಿಯೇ ತೆರೆದುಕೊಂಡಿತು. ಬೆರಗಾಗಿ ಒಳಹೊಕ್ಕ.

ನೋಡಿದರೆ ರಾಶಿರಾಶಿಯಾಗಿ ಗುಡ್ಡೆಹಾಕಿದ ಕಡತ ಕಟ್ಟುಗಳು, ತುಕ್ಕು ಹಿಡಿದು ಹೋದ ತಗಡಿನ ಕಪಾಟುಗಳು. ದೊಡ್ಡ ಗೋಲಾಕಾರದ ಗೋಡೆಗಡಿಯಾರದ ಪ್ರಕಾರ ಹತ್ತೂ ಐವತ್ತಾರು. ಮತ್ತೆ ನೋಡಿದ. ಏನಿದು... ಗಾಜಿನ ಹಿಂದೆ ಅದರ ಕೆಂಪು ಮುಳ್ಳು ಟಕ್ ಟಕ್ ಟಕ್ ಎಂದು ನಿಧಾನವಾಗಿ ವಿರುದ್ಧ ದಿಕ್ಕಿನಲ್ಲಿ ಪ್ರದಕ್ಷಿಣೆ ಮಾಡುತ್ತಾ ಇತ್ತು.

ಮುಂದೆ ಸಾಗಿದ. ಐದಾರು ಜನ ಒಬ್ಬರ ಪಕ್ಕ ಒಬ್ಬರು ಸಾಲಾಗಿ ಮೇಜಿನ ಹಿಂದೆ ತಮ್ಮ ತೋಳುಗಳನ್ನು ತಲೆದಿಂಬಿನಂತೆ ಮಾಡಿಕೊಂಡು ಕೂತಲ್ಲೇ ನೆಮ್ಮದಿಯಾಗಿ ನಿದ್ದೆ ಮಾಡುತ್ತಿದ್ದರು. ಸ್ವಲ್ಪ ಹತ್ತಿರ ಹೋದ. ಅವರಲ್ಲಿ ಮೊದಲನೆಯವನು ಒಬ್ಬ ಬೊಜ್ಜುಕಾಯ ಟೊಣಪ.

ಬಟ್ಟೆಯಿಂದ ಮೋರೆ ಮುಚ್ಚಿಕೊಂಡು ಗುಹೆಯಿಂದ ಹೊರಬಂದಂತೆ ಗರಾ ಗರಾ ಎಂದು ಆಳವಾದ ಗೊರಕೆ ಹೊಡೆಯುತ್ತಿದ್ದ. ಉಸಿರಾಟದ ತಾಳದಲ್ಲಿ ಅವನ ಹೊಟ್ಟೆ ಕುಲುಮೆಯ ತಿದಿಯಂತೆ ಊದಿ ಇಳಿದು ಅಲುಗಾಡಿತು.

ಸುಪ್ತರ ಪಂಕ್ತಿಯನ್ನು ದಿಟ್ಟಿಸಿ ನೋಡಿದ. ಈ ಕಣ್ಣಾಮುಚ್ಚಾಲೆ ಸಾಕಾಗಿಹೋಗಿದೆ. ಈಗ ಏನು ಮಾಡಬೇಕೂಂತ ಆ ಡೊಳ್ಳಪ್ಪನ ಹತ್ತಿರ ಕೇಳೋಣಾಂತ ಅವನು ಟೊಣಪನ ಬಳಿ ಹೋಗಬೇಕಾದರೆ ಇದ್ದಕ್ಕಿದ್ದಂತೆ ತನ್ನ ಹಿಂದೆ ಚರಪರ ಸದ್ದು ಕೇಳಿಸಿತು. ತಿರುಗಿ ನೋಡಿದಾಗ ಒಬ್ಬ ವಕೀಲರಂತಹ ಕಾಕಕೋಟಿನ ವ್ಯಕ್ತಿ ತನ್ನತ್ತ ಬರುವುದನ್ನು ಕಂಡ.
‘ಶ್... ಎಬ್ಬಿಸಬೇಡಿ!’ ಎಂದು ಕೋಟಿನವ ಅವಸರವಾಗಿ ನಡುವೆ ಹೊಕ್ಕ.

ಟೊಣಪನ ಬಳಿ ಹೋಗಿ ನಿಂತು ‘ಇವನು ನಮ್ಮ ಮಾದರಿ, ಉತ್ತಮ ಸಾಧಕ, ನಿರ್ವಿವಾದ ನಾಯಕ’ ಎಂದು ಗಾಂಭೀರ್ಯದಿಂದ ಸಾರಿದ. ಟೊಣಪನ ತಲೆಯತ್ತ ಬಗ್ಗಿ ಕೋಟಿನವ ಮೆಲುದನಿಯಲ್ಲಿ ನುಡಿದ. ‘ಕೇಳಿದಿರಾ... ಈ ಸ್ವರವನ್ನಾ... ಅಬ್ಬಾ... ಎಂಥ ಅದ್ಭುತ...’

‘ಇದು... ಬಿಎಂಪಿ ಆಫೀಸು ತಾನೇ?’ ಅವನು ಧೈರ್ಯ ಮಾಡಿ ಕೇಳಿದ.

‘ಹೌದು ಸ್ವಾಮಿ, ಇದೇನೇ... ಇದು ನಿಮ್ಮ ಮೊದಲ ಭೇಟಿ ಅಂತ ಕಾಣುತ್ತೆ. ನಿಮಗೆ ಏನಾಗ್ಬೇಕಿತ್ತು?’
‘ಮ್... ಮರ್...’ ಎಂದು ಅವನು ತೊದಲಿದ.

‘ಮರನಾ... ಆಯ್ತು ಸ್ವಾಮಿ, ಅದಕ್ಕೇನಂತೆ. ಬನ್ನಿ, ದಾರಿ ತೋರಿಸುತ್ತೇನೆ’.

ಹಜಾರದ ಕೊನೆಯೊಂದರಲ್ಲಿ ನಿಂತಿದ್ದರು. ‘ಇದು ನನ್ನ ಚೇಂಬರು’ ಎಂದು ಕೋಟಿನವ ಬಾಗಿಲ ಮೇಲಿನ ಹೆಸರುಹಲಗೆಯನ್ನು ತೋರಿಸುತ್ತಿದ್ದ.
ಡಾ. ಕು. ಗೋರೇಗೌಡ, ಹೆಚ್ಚುವರಿ ಅಯುಕ್ತರು (ವಸೂಲಿ)

‘ನಿಮಗೆ ಯಾವತ್ತೂ ಏನಾದರೂ ಸಹಾಯ ಬೇಕಾದರೆ ನನ್ನ ಹತ್ತಿರ ಬನ್ನಿ. ನಾನು ನನ್ನ ಕೈಲಾದಷ್ಟು ಖಂಡಿತಾ ಮಾಡುತ್ತೇನೆ... ನೋಡಿ, ಪಕ್ಕದ ಕೊಠಡಿ, ಇದು ಸಾರ್ವಜನಿಕ ಸಂಪರ್ಕಾಧಿಕಾರಿಯವರದ್ದು... ಬನ್ನಿ, ಅವರ ಪರಿಚಯ ಮಾಡಿಸುತ್ತೇನೆ’.

‘...ಓಹೋ, ಈಗತಾನೇ ತಿಂಡಿಗೆ ಹೋಗಿದ್ದಾರಂತ ಕಾಣುತ್ತೆ. ಬೇಗ ಬರುತ್ತಾರೆ. ಒಳ್ಳೇ ಅಧಿಕಾರಿ ಅವರು... ನಮ್ಮ ಸೇವಾನಿಯಮ ಪಟ್ಟಿ ನೋಡಿ... ಸರ್ವರೊಂದಿಗೆ ಲಾಭದಾಯಕ ಸಹಕಾರಿ ಸಂಬಂಧಗಳನ್ನು ಉಂಟುಮಾಡುವುದು, ಬೆಳೆಸುವುದು ಮತ್ತು ಉಳಿಸಿಕೊಂಡು ಹೋಗುವುದು ನಮ್ಮ ಸೂತ್ರಗಳಲ್ಲಿ ಒಂದು.

ಈ ತಂತ್ರದ ಪಾಲನೆ ಮಾಡುವುದೇ ಈ ಕಚೇರಿಯ ವಿಶೇಷ ಕರ್ತವ್ಯ. ಆ ಸಂದರ್ಭದಲ್ಲಿ ಏನೇನೋ ನಮ್ಮ ಕೈಗೆ ಬರುವ ಸಾಧ್ಯತೆ ಉಂಟು. ಬಿಟ್ಟಿ ಕೂಳು, ಚಿಲ್ಲರೆ ಕಾಸು... ಏನಾದರೂ ಆಗಲಿ, ಅದನ್ನು ವಿನಯವಾಗಿ ಸ್ವೀಕಾರ ಮಾಡುವುದು ನಮ್ಮ ನೀತಿ. ದಾನ ನೀಡುವವರ ಔದಾರ್ಯ ನೆನಸಿಕೊಂಡು ಪ್ರತಿಕಾರವಾಗಿ ಅವರ ಯೋಗಕ್ಷೇಮವನ್ನೂ ನೋಡಿಕೊಳ್ಳುವುದು’.

‘ಸಲ್ಪ ಕೂತುಕೊಳ್ಳಿ, ಬರುತ್ತಾರೆ ಈಗ... ಆ ಕಂತೆ ನೋಡಿ, ಮೇಜಿನ ಮೇಲೆ... ಈ ವಾರದ ಭಾಗ್ಯ ಇರಬೇಕು... ಓಹೋ, ಇವು ಪ್ರವೇಶ ಚೀಟಿಗಳು, ಬರುವ ಭಾನುವಾರದ ಪಂದ್ಯಕ್ಕೆ ಅಂತ ಕಾಣುತ್ತೆ. ನಮ್ಮ ಸದಸ್ಯರೊಳಗೆ ಹಂಚಿಕೊಳ್ಳುವುದಕ್ಕೆ... ಹುಂ, ಮೇಲ್ನೋಟಕ್ಕೆ ಇದೊಂದು ದೂರುಪತ್ರ.

ಸಾರ್ವಜನಿಕರು ಆಗಾಗ ಗೊಣಗಾಡುತ್ತಾರೆ. ಕಸದ ನಾತ, ಬೀದಿನಾಯಿಗಳ ಕಾಟ ತಾಳಲಾರೆ ಅಂತ. ಬರೀ ಹುಚ್ಚು ಮಾತು. ನಿಮಗೆ ಹೇಳುತೀನಿ. ಬಹುಪಾಲು ಆ ನಾಯಿಗಳೇ ಗಬಗಬನೆ ಗಿಡಿದು ಕಸ ತೊಡೆದುಹಾಕುವುದು. ಸಮಸ್ಯೆಯ ಪರಿಹಾರ ಅವುಗಳೇ. ಆದಕಾರಣ ಆ ಕುನ್ನಿಗಳ ನಿರಂತರ ಕಾಮಾಚಾರ ನಮಗೆ ತೃಪ್ತಿ ತರುವಂತಹದ್ದು.

ನಾಯಿಗಳೇ ಏನನ್ನು ನುಂಗದೆ ಬಿಟ್ಟು ಹೋಗ್ತವೋ ಅದನ್ನು ಹೊರವಲಯಗಳ ಹೊಲಗದ್ದೆಗಳಲ್ಲಿ ಚೆಲ್ಲಿದರಾಯಿತು. ಶುದ್ಧ ಗೊಬ್ಬರ ತಾನೇ?’

‘ಹೋದ ವಾರ ಒಬ್ಬ ನಮ್ಮ ಜಾಹೀರಾತು ವಿಭಾಗದ ವಿರುದ್ಧ ಬೊಬ್ಬೆ ಹಾಕ್ತಾ ಇದ್ದ. ತನ್ನ ಬಿಡಾರದ ಮುಂದೆ ನೆರಳು ನೀಡಿರುವ ಮರವನ್ನು ನಮ್ಮವರು ತುಂಡು ಮಾಡಿ ಅದರ ಬದಲಾಗಿ ಕಬ್ಬಿಣದ ಕಂಬ ನಾಟಿ ಹಾಕಿದ್ದಾರಂತೆ. ಆ ಮನುಷ್ಯನಿಗೆ ಬುದ್ಧಿ ಇಲ್ಲವೇ? ಆ ಮರ ಕೊಡೆಯಂತೆ ಕೈಲಿ ಹಿಡಿದುಕೊಂಡು ಬಿಸಿಲಲ್ಲಿ ಅಡ್ಡಾಡೋಕ್ಕಾಗುತ್ತಾ? ಆ ಕಂಬ ಹಲಗೆಗಳೇ ನಮ್ಮ ಸಮಾಜದ ಆಧಾರ...

ನಮ್ಮ ಏಳಿಗೆ ಮತ್ತು ಲಾಭಕ್ಕಾಗಿ... ಮತ್ತಿನ್ನೊಬ್ಬ ನಮ್ಮನ್ನು ನಿಂದಿಸಿದ, ಪಕ್ಕದ ಕಟ್ಟಡದವನಿಗೆ ಇನ್ನೆರಡು ಅಂತಸ್ತು ಕಟ್ಟಿಸುವ ಪರವಾನಿಗೆ ನೀವು ಹೇಗೆ ಕೊಟ್ಟಿದ್ರಿ ಅಂತ. ಈಗ ನಮಗೆ ಹಗಲಲ್ಲೂ ಬೆಳಕು ಸಿಗುವುದೇ ಇಲ್ಲ ಅಂತ ವಾದ ಮಾಡಿದ್ದ. ಅದೆಲ್ಲಾ ಹೊಟ್ಟೆಕಿಚ್ಚು ಅಷ್ಟೇ. ಖರ್ಚಿಗೆ ಬೇಕಾದ ಕಾಸು ಹೂಡುವಷ್ಟು ಶಕ್ತಿ ತನಗೆ ಇದ್ದಿದ್ದರೆ ನಾವು ಆ ಮನುಷ್ಯನಿಗೂ ಇನ್ನಷ್ಟು ಅಂತಸ್ತು ಹಾಕಲು ಅವಕಾಶ ಯಾಕೆ ನೀಡಬಾರದು?’

‘ಸರಿ ಬಿಡಿ, ಕಿಡಿಗೇಡಿ ನೀಚರು ಇದ್ದೇ ಇರುತ್ತಾರೆ. ಹುಚ್ಚು ಹಿಡಿದ ಮಂಕರಂತೆ ಗಾಡಿ ಓಡಿಸುತ್ತಾರೆ. ಮಂಗಾಟ. ಏನಾದರೂ ಹೆಚ್ಚು ಕಮ್ಮಿ ಆದರೆ ಅವರ ಸೊಕ್ಕಿನಲ್ಲಿ ರಸ್ತೆ ಹೊಂಡ ಗುಂಡಿ ಅಂತ ತಮ್ಮ ತಪ್ಪಿಗೆ ನಮ್ಮನ್ನೇ ಗುರಿ ಮಾಡಿಬಿಡುತ್ತಾರೆ. ನೋಡಿ, ಅವರಿಗೆಷ್ಟು ಧೈರ್ಯ? ವಾರ್ಷಿಕವಾಗಿ ರಸ್ತೆ ನಿರ್ವಹಣೆಗಾಗಿ ನಮಗಿಂತ ಹೆಚ್ಚು ಯಾರೂ ವೆಚ್ಚ ಮಾಡುವುದಿಲ್ಲ. ನಮ್ಮ ಲೆಕ್ಕಾಚಾರ ನೋಡಿದರೆ ಗೊತ್ತಾಗುತ್ತೆ.

ಅಕಸ್ಮಾತ್ ಎಲ್ಲಿಯೋ ಸಣ್ಣ ಗುಂಡಿ ಬಿದ್ದರೂ ಸಲ್ಪ ಬಿಸಿಬಿಸಿ ಡಾಂಬರು ಹಚ್ಚಿದರಾಯಿತು. ಮತ್ತೆ ಮಗು ಕೆನ್ನೆಯಂತೆ ನುಣ್ಣಗೇ ಕಾಣುತ್ತದೆ. ಅಬ್ಬಾ, ನಿಜಕ್ಕೂ ಆ ಟಾರು ಕಪ್ಪು ಚಿನ್ನದಂತೆ, ಬಂಗಾರ... ಓಹೋ, ತುಂಬ ಹೊತ್ತಾಯಿತು. ನಮ್ಮ ಗೆಳೆಯ ಇನ್ನೂ ಬರಲೇ ಇಲ್ಲ. ಏನೋ ಮೀಟಿಂಗು ಇರಬೇಕು. ನೀವು ಬಂದ ಕೆಲಸ ಮುಗಿಸೋಣ. ಬನ್ನಿ’ ಎಂದು ಕೋಟಿನವ ಮೇಲೆದ್ದ.

ನಿರ್ಜನ ಹಜಾರದ ಗುಂಟ ನಡೆಯುತ್ತಿದ್ದರು, ಅವರಿಬ್ಬರೂ, ಕೋಟಿನವ ಒಂದೆರಡು ಹೆಜ್ಜೆ ಅವನ ಮುಂದಾಗಿ, ಆಗೊಮ್ಮೆ ಈಗೊಮ್ಮೆ ಎಡಕ್ಕೆ ಬಲಕ್ಕೆ ತಿರುಗುತ್ತ. ಸುತ್ತುಬಳಸಿನ ಹಾದಿಯುದ್ದಕ್ಕೂ ಹತ್ತಾರು ಬೇರೆ ಬೇರೆ ಬಾಗಿಲುಗಳು ಕದಲದೇ ಕಾವಲು ನಿಂತಿದ್ದವು.

ಜಾಹೀರಾತು ವಿಭಾಗ, ದಾಖಲಾತಿ ಖಾತೆ, ಪರಲೋಕೋಪಯೋಗಿ ಇಲಾಖೆ, ಮೇಲು ಉಸ್ತುವಾರಿ ಮತ್ತು ಸಂಪಾದನಾ ಸಮಿತಿ, ಕೇಂದ್ರ ಉಗ್ರಾಣ, ನಿದ್ರಾಲಯ, ಯೋಜನಾ ನಿಯೋಗ, ನಿಧಾನಮಂಡಲಾಧ್ಯಕ್ಷರ ಆಪ್ತ ಸಹಾಯಕರ ಕೊಠಡಿ... ಕಡೆಗೆ ಕೋಟಿನವ ತಟ್ಟನೆ ನಿಂತುಬಿಟ್ಟ.

‘ಇಲ್ಲೇ... ಇಲ್ಲಿ ನಿಮ್ಮ ಕೆಲಸ ಬೇಗ ಆಗುತ್ತೆ. ಇದು ವೃಕ್ಷಾಧಿಕಾರಿಯವರ ಕಚೇರಿ. ಮರ ಕಡೀಬೇಕಾದರೆ ಎಲ್ಲಾ ವ್ಯವಸ್ಥೆ ಮಾಡುತ್ತಾರೆ’.
‘ಮರಾನಾ... ಏನ್ ಸಾರ್, ನಮ್ಮ ಇಡೀ ಕೇರೀಲಿ ಕಡಿಯೋಕ್ಕೂ ಗಿಡಿಯೋಕ್ಕೂ ಮರ ಗಿಡ ಯಾವುದೂ ಇಲ್ಲ’.

‘ಮತ್ತೆ ಮರ ಅಂತ ಯಾಕೆ ಬಾಯಿ ಬಿಟ್ರಿ?’
‘ಹಂಗಲ್ಲ ಸಾರ್. ಅಪ್ಪ ತೀರ್ಕೊಂಡ್ರು. ಅದಕ್ಕೆ ಆ ಮ್... ಮರ... ಏನೋ ಪತ್ರ...’

‘ಓಹೋ, ಗೊತ್ತಾಯಿತು. ನಿಮಗೆ ಮರಣ ಪ್ರಮಾಣ ಪತ್ರ ಬೇಕಿತ್ತಲ್ಲ?’
‘ಅದೇ ಸಾರ್. ಐದು ವಾರ ಆಯಿತೀಗ. ಅಪ್ಪ ನಮ್ಮನ್ನ ನೋಡಲು ಊರಿಂದ ಬಂದಿದ್ದು. ನಮ್ಮವ್ವ ಹೋದ ಮೇಲೆ ಅಪ್ಪ ಅಕ್ಕನ ಮನೇಲಿ ಇದ್ದರು. ಎಷ್ಟೋ ಸಲ ನಾವು ಅವರನ್ನ ಕರೆದರೂ ಅವರು ಬರಲೇ ಇಲ್ಲ.

ನಾ ಊರ ಬಿಟ್ಟು ಹೋಗಲಾರೆ ಅಂತ. ಆ ದಿವಸ ಬೆಳಗ್ಗೆ ನಮ್ಮತ್ತೆ ಕರೆ ಮಾಡಿ, ಸಂಜೆ ಆರು ಗಂಟೆ ಬಸ್ಸಲ್ಲಿ ನಿಮ್ಮಪ್ಪ ಬರ್ತಾರೆ ಅಂತ ತಿಳಿಸಿದ್ದರು. ತವಕದಿಂದ ನಾನು ಅವರಿಗಾಗಿ ನಿಲ್ದಾಣದಲ್ಲಿ ಕಾಯ್ತಿದ್ದೆ. ಎಡಗೈಲಿ ಸಣ್ಣ ಚೀಲ ಇಟ್ಟುಕೊಂಡು ಬಸ್ ಹಿಂಬಾಗಿಲಿಂದ ಮುಗ್ಗರಿಸುತ್ತ ಇಳಿದಾಗ ಅಪ್ಪ ಹಣ್ಣು ಹಣ್ಣು ಮುದುಕನಂತೆ ಕಾಣುತ್ತಿದ್ದರು.

ಕಷ್ಟಪಟ್ಟು ಮನೆ ಸೇರಿಕೊಂಡು, ಗಂಟುಗಟ್ಟಲೆ ಊರ ಹರಟೆ ಹೊಡೆದು ಊಟ ಮಾಡಿದೀವಿ. ಹಾಸಿಗೆ ಹಾಸಿ ಮಲಗುವಾಗ ಅಪ್ಪನ ಕಣ್ಣಲ್ಲಿ ಒಂಥರಾ ಸಮಾಧಾನದ ಕಾಂತಿ ಹೊಳೀತು. ಮಾರನೇ ದಿವಸ ಅಪ್ಪ ಏಳಲೇ ಇಲ್ಲ. ಡಾಕ್ಟರನ್ನ ಕರೆಸಿದಿವಿ. ಪ್ರಯೋಜನ ಇರಲಿಲ್ಲ. ಇದ್ದಕ್ಕಿದ್ದ ಹಾಗೆ ಹೃದಯ ನಿಂತುಹೋಗಿ ಅಪ್ಪ ಪ್ರಾಣ ಬಿಟ್ಟರು’.

‘ಪಾಪ’.
‘ಡಾಕ್ಟರು ಹೇಳಿದ ಹಂಗೇ ನಾವು ಒಬ್ಬ ಪಾರ್ಟಿ ಮೂಲಕ ಆ ಪತ್ರಕ್ಕಾಗಿ ಅರ್ಜಿ ಹಾಕಿದೀವಿ. ಮಾಮೂಲಿ ಫೀಸೂ ಎಲ್ಲಾ ಕಟ್ಟಿದ್ದಿವಿ. ಮೂರು ವಾರ ಕಾದಿದ್ದೀವಿ. ಯಾವುದೂ ಪತ್ರ ಬರಲೇ ಇಲ್ಲ. ಆ ಪಾರ್ಟಿಗೆ ಮತ್ತೆ ಕಾಸು ಕೊಟ್ಟು ಕಾಯ್ತಾ ಇದ್ದೀವಿ. ಕೊನೆಗೆ ನೆನ್ನೆ ಪತ್ರ ಬಂತು’.

‘ಮತ್ತೀಗ ಯಾಕೆ ಬಂದಿದ್ದೀರಿ?’
‘ಆ... ಆ ಪತ್ರ... ಅಪ್ಪನ ಹೆಸರಿರಬೇಕಾದಲ್ಲಿ ನನ್ನ ಹೆಸರು ಬಂದಿದೆ’.

‘ಹೌದೇ... ಹಾಗಾದರೆ ನಾನು ಏನೂ ಮಾಡಕ್ಕಾಗಲ್ಲ. ಈ ವಿಷಯದಲ್ಲಿ ನೀವು ಮಹಾ ಸಾಹೇಬ್ರ ಹತ್ರಾನೇ ಹೋಗ್ಬೇಕಾಗುತ್ತೆ. ಈಗ ಹೋದರೆ ಅವರು ಸಿಗಬಹುದು, ಆದರೆ ನಿಮ್ಮೊಂದಿಗೆ ಬರಲಿಕ್ಕೆ ನನಗೆ ಸದ್ಯದಲ್ಲಿ ಬಿಡುವೇ ಇಲ್ಲ...

ಒಂದು ಕೆಲಸ ಮಾಡಿ. ನಾವು ಮೊದಲು ಭೇಟಿಯಾದ ಕಚೇರಿಯಲ್ಲಿ ಒಂದು ಬಾಗಿಲು ಸಿಗುತ್ತೆ. ಅದರ ಹಿಂದೆ ನೇರವಾಗಿ ಸಾಹೇಬರ ಚೇಂಬರಿಗೆ ಒಳದಾರಿ ಉಂಟು. ತಪ್ಪಿ ಹೋಗುವ ಸಾಧ್ಯತೆ ಇಲ್ಲ. ಒಂದೇ ದಾರಿ. ನಾನೀಗ ಹೋಗ್ಬೇಕು. ಮತ್ತೆ ಭೇಟಿ ಆಗೋಣ. ನಮಸ್ಕಾರ’ ಎಂದು ಹೇಳಿ ಕೋಟಿನವ ಕಣ್ಮರೆಯಾದ.

ಒಂಟಿಯಾಗಿ ಬಿಟ್ಟು ಹೋದ ಅವನಿಗೆ ಒಂದು ಕ್ಷಣಕ್ಕೆ ಏನು ಮಾಡಬೇಕೋ ತೋಚಲಿಲ್ಲ. ಬಿಟ್ಟುಬಿಡಬೇಕೋ... ಹಿಂದುಮುಂದು ನೋಡುತ್ತ ನಡೆಯಲು ತೊಡಗಿದ. ತಾನು ಬಂದ ದಾರಿ ಹುಡುಕುತ್ತ, ತಡಕುತ್ತ, ಸಿಕ್ಕಾಪಟ್ಟೆ ತಿರುಗುತ್ತ, ಸುತ್ತಲೂ ಕಣ್ಣಾಡಿಸುತ್ತ ಓಡಾಡಿದ.

ಬಿಕೋ ಎನ್ನುವ ಹಜಾರದಲ್ಲಿ ಯಾರೂ ಕಾಣಿಸಲಿಲ್ಲ. ಸಾಕಷ್ಟು ಕಾಲ ಸುತ್ತಿ ಸುಳಿದು ನಡೆದುಕೊಂಡು ಸುಸ್ತಾಗಿ ಇನ್ನೇನು ಕೈಬಿಡಬೇಕೆನ್ನುವಾಗ ಹಠಾತ್ತನೆ ಕಂಡುಬಂದ ಜಾಹೀರಾತು ವಿಭಾಗದ ಬಾಗಿಲು ಅವನನ್ನು ಹುರಿದುಂಬಿಸಿತ್ತು.

ಸದ್ಯ! ಇಲ್ಲೇ. ಇದೇ ಕಚೇರಿ. ಮೆಲ್ಲಗೆ ಬಾಗಿಲು ಮುಚ್ಚಿಕೊಂಡನು. ಇನ್ನು ಮೇಜಿನ ಹಿಂದೆ ಡೊಳ್ಳಪ್ಪನ ತಂಡದವರು ತೀವ್ರವಾಗಿ ತಮ್ಮ ಶ್ರಮದ ಪ್ರಯೋಗದಲ್ಲಿಯೇ ಮಗ್ನರಾದರು. ಸ್ವಲ್ಪ ಮುಂದೆ ಗಡಿಯಾರದ ಕೆಂಪು ಮುಳ್ಳು ಸುತ್ತು ಹಾಕುತ್ತಲೇ ಇತ್ತು.

ಅತ್ತ ಇತ್ತ ಕಣ್ಣು ಹಾಯಿಸಿದ. ಎಲ್ಲೋ ಸಾಹೇಬರ ಒಳದಾರಿ ಸಿಗಬೇಕಲ್ಲ. ಸಿಡಿಮದ್ದಿನ ಬಯಲು ದಾಟುವಂತೆ ಇನ್ನೇನು ಉರುಳುವಂತಿರುವ ಕಡತ ಗುಡ್ಡೆಗಳ ನಡುವೆ ತುದಿಗಾಲಿನಲ್ಲಿ ಹೆಜ್ಜೆ ಮೇಲೆ ಹೆಜ್ಜೆ ಇಡುತ್ತ ತಗಡಿನ ಕಪಾಟುಗಳತ್ತ ನಡೆದ. ಕಣ್ಣಾಡಿಸಿದ.

ಯಾವುದೇ ಬಾಗಿಲು ಕಾಣಿಸಲಿಲ್ಲ. ಇನ್ನೂ ಹತ್ತಿರ ಹೋಗಿ ಗಮನ ಕೊಟ್ಟು ನೋಡಿದಾಗ ಗೋಡೆ ಮತ್ತು ಮೂಲೆಯಲ್ಲಿದ್ದ ಕಪಾಟುಗಳ ನಡುವಿನ ಸಂಧಿ ಕಣ್ಣಿಗೆ ಬಿತ್ತು. ಉದ್ವೇಗದಿಂದ ಇಕ್ಕಟ್ಟಾದ ಕಂಡಿಯೊಳಗೆ ನುಸುಳಿದ. ನಸುಮುಸುಕಿನಲ್ಲಿ ಸಣ್ಣ ಬಾಗಿಲೊಂದರ ಮೇಲೆ ಅಂಟಿಸಿದ ಸೂಚನೆ ಕಂಡುಬಂತು.

ಜನಸಾಮಾನ್ಯರಿಗೆ ಪ್ರವೇಶವಿಲ್ಲ. ನಿಧಾನವಾಗಿ ಬಾಗಿಲು ತಳ್ಳಿ ಹೊಸ್ತಿಲು ದಾಟಿದ. ತುಸು ದೂರದಲ್ಲಿ ಮಬ್ಬುಗತ್ತಲಲ್ಲಿ ಮೆಟ್ಟಿಲು ಕಾಣಿಸಿತು. ನಾಕೈದು ಹೆಜ್ಜೆ ಮುಂದಕ್ಕೆ ಹಾಕಿದ. ಧಡ್ ಎಂದು ಇದ್ದಕ್ಕಿದ್ದಂತೆ ಬಂದ ಸದ್ದಿನಿಂದ ಬೆಚ್ಚಿ ತಿರುಗಿ ನೋಡಿದ.

ಬಾಗಿಲು... ಮುಚ್ಚಿಕೊಂಡ ಕೂಡಲೇ ಕುರುಡು ಮಂಕು ಆವರಿಸಿತು. ಗಾಳಿಯಿಂದಾಗಿರಬೇಕು. ತಡಕಾಡುತ್ತ ಬಾಗಿಲ ಕಡೆ ನಡೆದ. ಕದವನ್ನು ಮುಟ್ಟಿ ಅದರ ಮೇಲೆ ಹಿಡಿಕೆಗಾಗಿ ಕೈಯಾಡಿಸಿದ. ಯಾವುದೂ ಹಿಡಿಕೆ ಸಿಕ್ಕಲಿಲ್ಲ. ಬಾಗಿಲು ತೆಗೆಯಲೂ ಆಗಲಿಲ್ಲ.

ಉಳಿದಿದ್ದು ಈಗ ಒಂದೇ ದಾರಿ. ಮುಂಚೆ ಕಂಡ ಮೆಟ್ಟಿಲುಗಳು ಕ್ರಮೇಣ ಕತ್ತಲೆಗೆ ಒಗ್ಗಿದ ಕಣ್ಣಿಗೆ ಮತ್ತೆ ಬಿದ್ದವು. ಕೈ ಚಾಚಿಕೊಂಡು ಅತ್ತ ಕಡೆಗೆ ಕಾಲು ಹಾಕಿದ. ಹಿಡಿಗಂಬಿಯ ಸೋಕು ಆಸರೆ ನೀಡಿತ್ತು. ಜೋಕೆಯಿಂದ ಎಚ್ಚರದ ಹೆಜ್ಜೆ ಇಡತೊಡಗಿದ. ಮೆಟ್ಟಿಲ ಸಾಲು ಸುರುಳಿ ಸುರುಳಿ ಆಳವಾಗಿ ಇಳಿದಿಳಿದು ಹೋಗುತ್ತಿದ್ದಂತೆ ಕತ್ತಲೆ ದಟ್ಟವಾಗಿ ಹೋಯಿತು. ಈ ತಳಕಾಣದ ಪಾತಾಳಕ್ಕೆ ಎಲ್ಲಿ ಮುಕ್ತಾಯ?

ತಟಕ್ಕನೆ ಬಂತು ಹಿಡಿಗಂಬಿಯ ಕೊನೇ ತುದಿ, ಕಡೇ ಮೆಟ್ಟಿಲು... ಕಗ್ಗತ್ತಲೆ. ತೊಟ್ಟಿಕ್ಕುತ್ತಿರುವ ತಾಳ. ಮೊರೆತ ಮಂದ್ರಶ್ರುತಿ. ಏನೋ ಪಟಪಟ ಸಪ್ಪಳ. ಸೂರೆಗಾಗಿ ಸರ್ರನೆ ಹೊರಟ ಹೆಗ್ಗಣ ಇಲಿಗಳ ಹಾಗೆ. ಮೆಟ್ಟಿನ ಮಾರ್ದನಿ. ಸುರಂಗಮಾರ್ಗದ ಗೋಡೆಗುಂಟ ಮಿಡಿತುಡಿಯುವ ನರನಾಡಿಗಳಂತೆ ತರತರ ನಳತಂತಿಗಳು. ದೂರದಲ್ಲಿ ಕಿಡಿ ಕೆಂಡದಂತೆ ನಿಗಿನಿಗಿ ಕ್ಷೀಣ ಮಿನುಗು. ಹತ್ತಿರ ಹತ್ತಿರ ಬಂದಂತೆ ಸಣ್ಣ ಕೆಂಪುದೀಪ ಕಾಣಿಸಿತು.

ತಟ್ಟಿ, ಕಿವಿಗೊಟ್ಟು ಆಲಿಸಿದ. ನಿರುತ್ತರ. ಮೂರು ಬಾರಿ ಕುಟ್ಟಿದ. ‘ಬನ್ನಿ ಒಳಕ್ಕೆ’ ಎಂದು ಒಡನೆಯೇ ಒಳಗಿಂದ ಬಂದ ಆಳವಾದ ಅಧಿಕಾರವಾಣಿ ಅವನಲ್ಲಿ ಏನೋ ಒಂಥರಾ ಭಾವನೆ ಮೂಡಿಸಿತು.

‘ನಮಸ್ಕಾರ ಸಾರ್’ ಎನ್ನುತ್ತ ಒಳಸೇರಿದ. ಸಾಹೇಬರು ಸೂಟುಬೂಟಿನಲ್ಲಿ ಏನೇನೋ ಓದುತ್ತ ತನ್ನ ಮೇಜಿನ ಹಿಂದೆ ಕೂತಿದ್ದರು. ಮಾಟವಾದ ಮೊಗದಲ್ಲಿದ್ದ ಕಪ್ಪು ಕನ್ನಡಕದ ಕಂಡಿಗಳು ಅವನನ್ನು ನಿಟ್ಟಿಸಿ ನೋಡಿದವು. ಒಂದು ವಿಚಿತ್ರ ನಸುನಗೆ ಬೀರುತ್ತ ತನ್ನ ಎದುರಿದ್ದ ಕುರ್ಚಿಯತ್ತ ಬೊಟ್ಟು ಮಾಡಿ ಸಾಹೇಬರು ಮಾತಾಡಿದರು.
‘ಬನ್ನಿ, ಕೂತುಕೊಳ್ಳಿ... ನಿಮ್ಮ ಭೇಟಿಯ ಉದ್ದೇಶ?’

ಸಾಹೇಬರ ಎದುರಿಗೆ ಕೂತುಕೊಂಡು ಅವನು ನಡೆದುದನ್ನೆಲ್ಲಾ ವಿವರಿಸಿದ. ಅಪ್ಪನ ಸಾವು, ತನ್ನ ಹೆಸರಿಗೆ ತಪ್ಪಾಗಿ ಬರೆದು ಬಂದ ಪತ್ರ, ಕೋಟಿನವ ಕೊಟ್ಟ ಸಲಹೆ.
‘ನೋಡಿ. ನಾನು, ಬೂತಪ್ಪ ಮತ್ತು ಪುಂಡುಪತಿ ಸೇರಿ ನಮ್ಮ ಸಂಘವನ್ನು ಹುಟ್ಟುಹಾಕಿದ್ದಾಗ ನಾವು ಅದನ್ನು ಸಂಕ್ಷಿಪ್ತವಾಗಿ, ಸರಳವಾಗಿ ಬಿಎಂಪಿ ಅಂತ ಕರೆಯುತ್ತಿದ್ದೇವು.

ಬಿಎಂಪಿ ಅಂದರೆ ನಮ್ಮ ಮೂವರ ಹೆಸರಿನ ಮೊದಲಕ್ಷರಗಳು. ಕಾಲ ಉರುಳಿದಂತೆ ಹೊಸ ಹೊಸ ಸದಸ್ಯರು ಸೇರಿದ ಮೇಲೆ ನಮ್ಮ ಸಂಘದ ಹೆಸರನ್ನೂ ವಿಸ್ತರಿಸಿ ಬದಲಾಯಿಸಬೇಕಾಗಿ ಬಂದಿತು’.

‘ಮೊದಲು ನಮ್ಮ ಎಲ್ಲ ವ್ಯವಹಾರಗಳನ್ನೂ ನಾವೇ ನೋಡಿಕೊಂಡು ನಡೆಸಿದ್ದೀವಿ. ಆಗ ಅಷ್ಟೊಂದು ಗೋಜಲು ಆಗಿರಲಿಲ್ಲ. ಆದರೆ ಇಂದಿನ ಸಂತೆ ನೋಡಿ. ಸಂದಣಿ, ಜಂಗುಳಿ, ನೂಕುನುಗ್ಗಲು, ಗದ್ದಲ ಮಾತ್ರ. ಆದ್ರೂನೂ ಇನ್ನೂ ಮುಂದೆ ಉತ್ತಮ ಸೇವೆ ಸಲ್ಲಿಸಬೇಕಲ್ಲ. ಅದಕ್ಕಾಗಿಯೇ ನಮ್ಮ ನೂರಾರು ಗುತ್ತಿಗೆದಾರರು ಮತ್ತು ಒಳಗುತ್ತಿಗೆದಾರರು ನಿತ್ಯ ದುಡಿಯುತ್ತಿರುತ್ತಾರೆ’.

‘ನಮ್ಮ ಸಾರ್ವಜನಿಕ ಸಂಪರ್ಕಾಧಿಕಾರಿಯವರ ಹತ್ತಿರ ಒಂದು ನಮೂನೆ ಸಿಗುತ್ತೆ. ಒಂದು ವೇಳೆ ಯಾವುದಾದರೂ ದೂರು ಇದ್ದರೆ ಅದನ್ನು ತುಂಬಿಸಿಕೊಡಿ. ತಗೊಳ್ಳಿ, ಇದು ನನ್ನ ಕಾರ್ಡು... ಈಗ ಮೀಟಿಂಗಿದೆ. ನೀವು ಹೊರಡಬಹುದು’ ಎಂದು ಹೇಳಿ ಸಾಹೇಬರು ತಲೆಸನ್ನೆಯಿಂದ ತುರ್ತು ನಿರ್ಗಮನದ ಕಡೆ ತೋರಿಸಿದರು.

ಬಾಣದ ಗುಬ್ಬಿ ತಾಕಿದ್ದೇ ತಡ ಡಿಂಗ್ ವುಶ್ ಎಂದು ಬಾಗಿಲು ಜಾರಿ ತೆರೆದುಕೊಂಡಿತು. ಒಳಕ್ಕೆ ಕಾಲಿಟ್ಟು ಒತ್ತುಗುಂಡಿಗಳ ಗುಂಪು ಬೆದಕಿ ನೋಡಿದ. ಅಷ್ಟರಲ್ಲಿ ಬಾಗಿಲು ತಾನಾಗಿ ಮುಚ್ಚಿಕೊಂಡು ಚೌಕಾಕಾರದ ಡಬ್ಬಿ ಸುಯ್ಯೆಂದು ಏರತೊಡಗಿತು.

ಮೇಲೇರುತ್ತಿರಬೇಕಾದರೆ ಮುಚ್ಚಿಗೆಯಲ್ಲಿದ್ದ ದೀಪ ಮಂಕಾಗಿ ಮಿಣುಕಲು ಶುರುಮಾಡಿತು. ತಟಕ್ಕನೆ ಲಿಫ್ಟಿನ ಪೆಟ್ಟಿಗೆ ಉಗ್ರವಾಗಿ ಅದುರಿಕೊಂಡು ಗರ ಗರ ಸದ್ದಿನೊಂದಿಗೆ ಒರಟಾಗಿ ನಿಂತಿತು. ದಿಗಿಲು ಬಿದ್ದು ಅವನು ಕಂಡಾಪಟ್ಟೆ ಒಂದರ ಮೇಲೊಂದು ಗುಂಡಿ ಒತ್ತಿ ಒತ್ತಿ ನೋಡಿದ. ಏನೂ ಆಗಲಿಲ್ಲ. ಆಸರೆಗಾಗಿ ಹುಡುಕಲೆಂಬಂತೆ ಮಿಣಿಮಿಣಿ ಮಸುಕಿನಲ್ಲಿ ತನ್ನ ಕೈಲಿದ್ದ ಸಾಹೇಬರು ಕೊಟ್ಟ ಕಾರ್ಡು ನೋಡಿದ.

ಮಹಾದೆವ್ವಯ್ಯಬೋಳೂರು ಮಹಾನರಕ ಪಾಲಿಕೆ ಸದಾ ನಿಮ್ಮ ಸೇವೆಯಲ್ಲಿ... ಕಕ್ಕಾಬಿಕ್ಕಿಯಾಗಿ ಅವನು ಮಾಸಿಹೋದ ದೀಪದ ಚುಕ್ಕಿ ನೋಡುತ್ತಿದ್ದ. ಏಕಾಏಕಿ ಬೆಳಕು ಪೂರಾ ನಂದಿಹೋಗಿ ಅಗಾಧ ಮೌನದ ಇರುಕು ಕಾರುಗತ್ತಲು ಗವ್ವೆಂದು ಅವನ ಮೇಲೆ ಬಿತ್ತು.


*
ಹೆಂದ್ರಿಕ್‌ರ ಕನ್ನಡಪ್ರೇಮದ ‘ನಮೂನೆ’

ಕನ್ನಡನುಡಿಗೆ ಅಪಾರ ಕೊಡುಗೆ ನೀಡಿದ ಹಾಗೂ ಕನ್ನಡದೊಂದಿಗೆ ಗುರ್ತಿಸಿಕೊಂಡ ವಿದೇಶಿಯರ ಒಂದು ಪರಂಪರೆಯೇ ನಮ್ಮಲ್ಲಿದೆ. ಗ್ರಂಥಸಂಪಾದನೆಯ ಹೊಸ ಮಾರ್ಗವನ್ನು ತೆರೆದ ಹಾಗೂ ಅದ್ಭುತ ನಿಘಂಟು ಸಂಪಾದಿಸಿದ ಫರ್ಡಿನೆಂಡ್‌ ಕಿಟೆಲ್, ಶಾಸನಗಳ ಮೂಲಕ ಕರ್ನಾಟಕ ಇತಿಹಾಸದ ಹೊಸ ಸಾಧ್ಯತೆಗಳನ್ನು ಸೂಚಿಸಿದ ರೈಸ್‌, ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ’ದ ಹರ್ಮನ್ ಮೊಗ್ಲಿಂಗ್‌ ಸೇರಿದಂತೆ ಅನೇಕ ವಿದೇಶಿಯರು ಕನ್ನಡಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ.

ಈ ‘ನುಡಿ ಪರಂಪರೆ’ ವೃಕ್ಷದ ಒಂದು ಚಿಗುರೆಲೆಯ ರೂಪದಲ್ಲಿ ಹೆಂದ್ರಿಕ್‌ ಹರದಮನ್‌ ಅವರನ್ನು ನೋಡಬಹುದು. ಬೆಲ್ಜಿಯಂನಲ್ಲಿ ಹುಟ್ಟಿ ಬೆಳೆದ ಹೆಂದ್ರಿಕ್‌ ಡೆನ್ಮಾರ್ಕ್‌ನ ಪ್ರಜೆ. ಪ್ರಸ್ತುತ ಮೈಸೂರಿನಲ್ಲಿ ನೆಲೆಸಿರುವ ಈ ಡಚ್‌ ಮಾತೃಭಾಷಿಗ ಕನ್ನಡದ ಬಗ್ಗೆ ಅಪಾರ ಒಲವುಳ್ಳವರು.

ಸ್ವಯಂ ಪ್ರಯತ್ನದಿಂದ ಕನ್ನಡ ಕಲಿತಿರುವ ಅವರು, ಕನ್ನಡ ಸಾಹಿತ್ಯ ಕೃತಿಗಳನ್ನು ಓದುವಷ್ಟರಮಟ್ಟಿಗೆ ‘ಕನ್ನಡಿಗ’ರು. ಪೂರ್ಣಚಂದ್ರ ತೇಜಸ್ವಿ ಹಾಗೂ ಜಯಂತ ಕಾಯ್ಕಿಣಿ ಅವರ ಮೆಚ್ಚಿನ ಕನ್ನಡಲೇಖಕರು.

ಲೇಖಕ, ಅನುವಾದಕ, ಮಾಹಿತಿ ತಂತ್ರಜ್ಞ, ಒಗಟು ರಚನಕಾರ, ಓಟಗಾರ – ಹೀಗೆ ಹಲವು ರೂಪಗಳಲ್ಲಿ ಗುರ್ತಿಸಿಕೊಂಡಿರುವ ಅವರು, 2002–2008ರ ಅವಧಿಯಲ್ಲಿ ‘ವರ್ಲ್ಡ್ ಪಸಲ್ ಫೆಡರೇಷನ್‌’ (World Puzzle Federation) ಪ್ರತಿನಿಧಿಯಾಗಿ, ಭಾರತದಲ್ಲಿ ಪಸಲ್ ಹಾಗೂ ಸುಡೊಕು ಪಂದ್ಯಾವಳಿಗಳನ್ನು ರೂಪಿಸಿದರು.

ಗೋವಾದಲ್ಲಿ ನಡೆದ 2008ರ ‘ವಿಶ್ವ ಸುಡೊಕು ಚಾಂಪಿಯನ್‌ಶಿಪ್‌’ನ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಕನ್ನಡ ಸಾಹಿತ್ಯದ ಪ್ರೀತಿಯ ಓದುಗರಾದ ಹೆಂದ್ರಿಕ್‌ ಈಗ ಕನ್ನಡದಲ್ಲೇ ಕಥೆ ಬರೆದಿದ್ದಾರೆ.

ಅವರ ಚೊಚ್ಚಿಲ ಕನ್ನಡ ಕಥೆ ‘ನಮೂನೆ’ ಭಾಷಾಪ್ರೇಮ–ಸೌಹಾರ್ದತೆಯ ನಮೂನೆಯೂ ಹೌದು. ಬೆಂಗಳೂರನ್ನು ‘ಸ್ವಚ್ಛ’ಗೊಳಿಸುವ ಉಮೇದಿನಲ್ಲಿ ತನ್ನದೇ ಯಡವಟ್ಟುಗಳನ್ನು ಅನಾವರಣಗೊಳಿಸುತ್ತಿರುವ ‘ಬೆಂಗಳೂರು ಮಹಾನಗರ ಪಾಲಿಕೆ’ಯನ್ನು ಒಂದು ರೂಪಕದ ರೀತಿಯಲ್ಲಿಯೂ ‘ನಮೂನೆ’ಯಲ್ಲಿ ಕಾಣಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT