ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿ ಸೂರು, ಸಮಸ್ಯೆಗಳು ನೂರು!

ಅಕ್ಷರ ಗಾತ್ರ

ದಾವಣಗೆರೆ: ಕುಡಿಯಲು ಶುದ್ಧ ನೀರು ಇಲ್ಲ. ವಿದ್ಯುತ್‌ ಸಂಪರ್ಕವಿಲ್ಲ. ಕಿತ್ತುಹೋದ ನೆಲಹಾಸು, ಶಿಥಿಲ ಕಟ್ಟಡ, ಬಿರುಕು ಬಿಟ್ಟ ಗೋಡೆ, ಬೀಳುವ ಸ್ಥಿತಿಯಲ್ಲಿರುವ ಕಿಟಕಿ– ಬಾಗಿಲು. ಬಯಲಲ್ಲೇ ಶೌಚಾಲಯ... ಇದು ಜಿಲ್ಲೆಯ ಬಹುತೇಕ ಅಂಗನವಾಡಿ  ಕೇಂದ್ರಗಳ ಪ್ರಸ್ತುತ ಸ್ಥಿತಿ–ಗತಿ! ಜಿಲ್ಲೆಯ ಅಂಗನವಾಡಿಗಳು ಇಂದಿಗೂ ಸ್ವಂತ ಸೂರಿನ ಸಮಸ್ಯೆಯನ್ನು ಎದುರಿಸುತ್ತಿವೆ.

ಬಾಡಿಗೆ ಕಟ್ಟಡ, ಪಂಚಾಯ್ತಿಗೆ ಸೇರಿದ ಕಟ್ಟಡ, ಸಮುದಾಯ ಭವನ ಸೇರಿದಂತೆ ಪರ್ಯಾಯ ವ್ಯವಸ್ಥೆ (ಅಂಗನವಾಡಿ ಕಾರ್ಯಕರ್ತೆಯರ ಮನೆ, ಖಾಸಗಿ ಕಟ್ಟಡ, ಸಹಾಯಕಿಯರ ಮನೆ)ಯಲ್ಲಿ ನೂರಾರು ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿವೆ.

‘ಜಿಲ್ಲೆಯ ನಗರ ಪ್ರದೇಶ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಸೂಕ್ತ ನಿವೇಶನ ದೊರೆಯದ ಕಾರಣ, 657 ಅಂಗನವಾಡಿ ಕೇಂದ್ರಗಳನ್ನು ಪರ್ಯಾಯ ವ್ಯವಸ್ಥೆಯಲ್ಲಿ ನಡೆಸಲಾಗುತ್ತಿದೆ. ಕೆಲ ಅಂಗನವಾಡಿಗಳಲ್ಲಿ ಮೂಲಸೌಲಭ್ಯಗಳ ಕೊರತೆ ಇದ್ದು, ನರೇಗಾ ಯೋಜನೆಯಡಿ ಕ್ರಿಯಾ ಯೋಜನೆ ರೂಪಿಸಿ ಹಂತ ಹಂತವಾಗಿ ಸೌಲಭ್ಯ ಒದಗಿಸಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಭಾರ ಉಪ ನಿರ್ದೇಶಕ ಕೆ.ಎಸ್‌.ವಿಜಯಕುಮಾರ್‌ ಮಾಹಿತಿ ನೀಡಿದರು.

‘ದಾವಣಗೆರೆ ನಗರ ಪ್ರದೇಶದಲ್ಲಿಯೂ ಅಂಗನವಾಡಿಗಳಿಗೆ ನಿವೇಶನದ ಕೊರತೆ ಇದ್ದು, ಸಮುದಾಯ ಭವನಗಳಲ್ಲಿ ಹಾಗೂ ಬಾಡಿಗೆ ಕಟ್ಟಡಗಳಲ್ಲಿ ಅವುಗಳನ್ನು ನಡೆಸಲಾಗುತ್ತಿದೆ. ಪಾಲಿಕೆ ಅಧಿಕಾರಿಗಳು ನಗರ ವ್ಯಾಪ್ತಿಯಲ್ಲಿ ಸೂಕ್ತ ನಿವೇಶನ ನೀಡಿದ್ದಲ್ಲಿ ಸ್ವಂತ ಕಟ್ಟಡ ನಿರ್ಮಿಸಲಾಗುವುದು’ ಎಂದು ಅವರು ಪ್ರತಿಕ್ರಿಯಿಸಿದರು.

‘ಚನ್ನಗಿರಿ, ಹರಪನಹಳ್ಳಿ, ಹರಿಹರ, ಜಗಳೂರು, ನ್ಯಾಮತಿ, ಬಸವಾಪಟ್ಟಣ ಸೇರಿದಂತೆ ಕೆಲ ತಾಲ್ಲೂಕು ಹಾಗೂ ಹೋಬಳಿ ವ್ಯಾಪ್ತಿಯಲ್ಲಿನ ಸ್ವಂತ ಅಂಗನವಾಡಿಗಳ ನಿರ್ಮಾಣ ಹಾಗೂ ಇರುವ ಕೇಂದ್ರಗಳ ದುರಸ್ತಿ ಕಾರ್ಯ ಸೇರಿದಂತೆ ಮೂಲಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿಯೂ ಅನುದಾನದ ಕೊರತೆ ಇದೆ. ಹೆಚ್ಚಿನ ಅನುದಾನಕ್ಕಾಗಿ ಮನವಿ ಸಲ್ಲಿಸಲಾಗಿದೆ.

ಬಂದ ನಂತರ ಕ್ರಿಯಾ ಯೋಜನೆ ರೂಪಿಸಿ ಉಳಿದ ಕಾಮಗಾರಿಗಳನ್ನು ಮುಗಿಸಲಾಗುವುದು. ಸ್ವಂತ ಕಟ್ಟಡ ಇರುವ ಕಡೆ ನೀರಿನ ಸೌಲಭ್ಯ ಮತ್ತು ಶೌಚಾಲಯ ಕಟ್ಟಿಸಲು ತೊಂದರೆ ಆಗುವುದಿಲ್ಲ. ಆದರೆ, ಬಾಡಿಗೆ ಕಟ್ಟಡ ಮತ್ತು ಇತರೆಡೆ ಕಾರ್ಯ ನಿರ್ವಹಿಸುತ್ತಿರುವ ಅಂಗನವಾಡಿಗಳಲ್ಲಿ ಸಮಸ್ಯೆ ಎದುರಾಗುತ್ತಿದೆ. ಆದರೂ ಸಂಬಂಧಪಟ್ಟ ಎಲ್ಲಾ ಸಿಡಿಪಿಒ ಗಳೊಂದಿಗೆ ಚರ್ಚೆ ನಡೆಸಿ ಸಮಸ್ಯೆ ಸರಿಪಡಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

₹ 8 ಲಕ್ಷ ವೆಚ್ಚ: ಬಡತನ ರೇಖೆಗಿಂತ ಕೆಳಗಿರುವ, ಕನಿಷ್ಠ 300 ಜನಸಂಖ್ಯೆ ಹೊಂದಿರುವ ಪರಿಶಿಷ್ಟ ಜಾತಿ/ ಪಂಗಡ ಹಾಗೂ ತಾಂಡಾ ಪ್ರದೇಶಗಳಲ್ಲಿ 26ರಿಂದ 40 ಮಕ್ಕಳಿಗೆ ಒಂದು ಅಂಗನವಾಡಿ ತೆರೆಯಬೇಕು ಎಂಬ ನಿಮಯವಿದೆ. ಜತೆಗೆ ಒಬ್ಬ ಕಾರ್ಯಕರ್ತೆ ಹಾಗೂ ಒಬ್ಬ ಸಹಾಯಕರೂ ಇರಬೇಕು. ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ₹ 8 ಲಕ್ಷ ವೆಚ್ಚವಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಹೆಚ್ಚಿನ ಅಂಗನವಾಡಿಗಳ ಅವಶ್ಯಕತೆ ಇದೆ ಎಂದು ವಿಜಯಕುಮಾರ್‌ ಹೇಳುತ್ತಾರೆ.

ಜಿಲ್ಲೆಯಲ್ಲಿ ಒಟ್ಟು ಅಂಗನವಾಡಿಗಳ ಅಂಕಿ ಅಂಶಗಳು:

ಕ್ರ.ಸಂಖ್ಯೆ ತಾಲ್ಲೂಕು  ಸ್ವಂತ  ಪರ್ಯಾಯ ವ್ಯವಸ್ಥೆ
1 ದಾವಣಗೆರೆ 259         233
2 ಜಗಳೂರು 185         62
3 ಹರಿಹರ 163         89
4 ಹರಪನಹಳ್ಳಿ 301         80
5 ಹೊನ್ನಾಳಿ 196         87
6 ಚನ್ನಗಿರಿ 284         106
  ಒಟ್ಟು 1388 657

(ಜಿಲ್ಲೆಯಲ್ಲಿ ಒಟ್ಟು 2045 ಅಂಗನವಾಡಿಗಳು).
(ಪರ್ಯಾಯ ವ್ಯವಸ್ಥೆ: ಪಂಚಾಯ್ತಿ ಕಟ್ಟಡ, ಸಮುದಾಯ ಭವನ, ಯುವಕ ಮಂಡಳಿ, ಮಹಿಳಾ ಮಂಡಳಿ, ದೇವಸ್ಥಾನ ಹಾಗೂ ಬಾಡಿಗೆ ಕಟ್ಟಡ.)

*
ಸ್ಥಗಿತಗೊಂಡ ಕಾಮಗಾರಿ

ಚನ್ನಗಿರಿ, ಹರಪನಹಳ್ಳಿ, ಜಗಳೂರು, ಹರಿಹರ, ಮಾಯಕೊಂಡ, ತ್ಯಾವಣಿಗೆ, ನವಿಲೇಹಾಳ್‌ ಗ್ರಾಮ, ನ್ಯಾಮತಿ ಸೇರಿದಂತೆ ಜಿಲ್ಲೆಯ ಕೆಲವೆಡೆ ಅನುದಾನದ ಕೊರತೆಯಿಂದಾಗಿ ಅಂಗನವಾಡಿ ಕಟ್ಟಡ ಕಾಮಗಾರಿ ಹಾಗೂ ದುರಸ್ತಿ ಕಾರ್ಯ ಸೇರಿದಂತೆ ಮೂಲ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗಿಲ್ಲ.

ಚನ್ನಗಿರಿ ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಹೈಟೆಕ್‌ ಅಂಗನವಾಡಿ ಕಟ್ಟಡ ಕಾಮಗಾರಿ ಆರಂಭಗೊಂಡು ಎರಡು ವರ್ಷಗಳಾದರೂ ಪೂರ್ಣಗೊಳ್ಳದೆ ಸ್ಥಗಿತಗೊಂಡಿವೆ.

ತ್ಯಾವಣಿಗೆ ಸಮೀಪದ ನವಿಲೇಹಾಳ್‌ ಗ್ರಾಮದ ಎರಡು ಅಂಗನವಾಡಿಗಳಿಗೆ ಮೂಲಸೌಕರ್ಯಗಳೇ ಇಲ್ಲ. ಇನ್ನು ತ್ಯಾವಣಿಗೆಯಲ್ಲಿನ 2 ಅಂಗನವಾಡಿಗಳ ಗೋಡೆಗಳು ಶಿಥಿಲಗೊಂಡಿವೆ. ಶೌಚಾಲಯದ ಗೋಡೆ ಬಿರುಕು ಬಿಟ್ಟಿದ್ದು, ಕುಸಿದು ಬೀಳುವ ಸಾಧ್ಯತೆ ಇದೆ.

*
ಕಲಿಕಾ ಸಾಮಗ್ರಿಗೆ ಸಮಸ್ಯೆ ಇಲ್ಲ
ಬಹುತೇಕ ಅಂಗನವಾಡಿಗಳಲ್ಲಿ ಮಕ್ಕಳಿಗೆ ಅವಶ್ಯಕ ಕಲಿಕಾ ಹಾಗೂ ಆಟಿಕೆ ಸಾಮಗ್ರಿ, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಶಾಲಾ ಪೂರ್ವ ಶಿಕ್ಷಣ ಕಿಟ್‌್, ಪಿಠೋಪಕರಣ ಹಾಗೂ ಅಗತ್ಯ ಪೌಷ್ಟಿಕ ಆಹಾರದ ಸೌಲಭ್ಯವಿದೆ.

*
ದಾಖಲಾತಿ ಕ್ಷೀಣ
‘ಮಕ್ಕಳ ಪ್ರಾಥಮಿಕ ಶಿಕ್ಷಣದ ಮೆಟ್ಟಿಲು ಅಂಗನವಾಡಿ ಕೇಂದ್ರ. ಆದರೆ, ಕಾನ್ವೆಂಟ್‌ ಶಾಲೆಗಳ ಹಾವಳಿಯಿಂದಾಗಿ ಅಂಗನವಾಡಿಗಳಲ್ಲಿ ಮಕ್ಕಳ ದಾಖಲಾತಿ ತುಂಬಾ ಕಡಿಮೆಯಾಗಿದೆ. ಸ್ಥಿತಿವಂತರು ಮಕ್ಕಳನ್ನು ಕಾನ್ವೆಂಟ್‌ಗೆ ಸೇರಿಸುತ್ತಾರೆ.

ಕೆಲವರು ಸರ್ಕಾರಿ ಸೌಲಭ್ಯ ಪಡೆಯುವ ಉದ್ದೇಶಕ್ಕಾಗಿ ಅಂಗನವಾಡಿ ಕೇಂದ್ರಕ್ಕೆ ಬರುತ್ತಾರೆ. ಕೇಂದ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ’ ಎಂದು ಕೆಬಿ ಬಡಾವಣೆಯ ಅಂಗನವಾಡಿ ಕೇಂದ್ರದ ಶಿಕ್ಷಕಿ ಟಿ.ವಿಜಯಾ ಅಸಮಾಧಾನ ವ್ಯಕ್ತಪಡಿಸಿದರು.

*
ಶೌಚಾಲಯ, ಅಡುಗೆ ಮನೆ, ವಿದ್ಯುತ್‌ ಸಮಸ್ಯೆ
ಅಂಕಿಅಂಶಗಳು:

* ಶೌಚಾಲಯ ಹೊಂದಿರದ ಕೇಂದ್ರಗಳು 830      
* ನೀರಿನ ಸಮಸ್ಯೆ ಇರುವ ಕೇಂದ್ರಗಳು 882
* ಅಡುಗೆ ಮನೆ ಇಲ್ಲದ ಕೇಂದ್ರಗಳು 598        
* ವಿದ್ಯುತ್‌ ಸೌಲಭ್ಯವಿಲ್ಲದ ಕೇಂದ್ರಗಳು 695

(* ಮೂಲಸೌಕರ್ಯ ಸಮಸ್ಯೆ * ನಿವೇಶನದ ಕೊರತೆ * ಕೆಲವೆಡೆ ಹೈಟೆಕ್‌ ಅಂಗನವಾಡಿ * ಮಕ್ಕಳ ದಾಖಲಾತಿ ಕ್ಷೀಣ * ಅಧಿಕಾರಿಗಳಲ್ಲಿ ಸಂವಹನ ಕೊರತೆ)

*
ಸೆ.2ಕ್ಕೆ ಪ್ರತಿಭಟನೆ..
ಜಿಲ್ಲೆಯಲ್ಲಿ ಬಹುತೇಕ ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿಲ್ಲ. ನಿವೇಶನದ ಕೊರತೆ ಇದೆ. ಜತೆಗೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಸೌಲಭ್ಯಗಳ ಸಮಸ್ಯೆ ಇದೆ. ಇದಕ್ಕಾಗಿ 10 ವರ್ಷಗಳಿಂದ ನಮ್ಮ ಸಂಘಟನೆಯಿಂದ ಹೋರಾಟ ನಡೆಸುತ್ತಾ ಬಂದಿದ್ದೇವೆ.

ಪ್ರಯೋಜನವಾಗಿಲ್ಲ. ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಕೇಂದ್ರಗಳಿಗೆ ಸ್ವಂತ ಕಟ್ಟಡ ನಿರ್ಮಾಣ, ಮೂಲಸೌಲಭ್ಯ ಒದಗಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸೆ. 2ರಂದು ದೇಶದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಅಂಗನವಾಡಿ  ಕಾರ್ಯಕರ್ತೆಯರ, ಸಹಾಯಕಿಯರ ಎಐಟಿಯುಸಿ ಫೇಡರೆಷನ್‌ ರಾಜ್ಯಾಧ್ಯಕ್ಷ ಎಚ್‌.ಕೆ.ರಾಮಚಂದ್ರಪ್ಪ ತಿಳಿಸಿದರು.

*
ರಾಜ್ಯ ಪ್ರಶಸ್ತಿ

ಜಿಲ್ಲೆಯ ಹರಿಹರ ತಾಲ್ಲೂಕಿನ ಬೆಳ್ಳೂಡಿ–ಸಿ ಕೇಂದ್ರದ ಕಾರ್ಯಕರ್ತೆ ಪಿ.ಎನ್‌.ಸುಜಾತಾ ಅವರು ಉತ್ತಮ ಅಂಗನವಾಡಿ ಕಾರ್ಯಕರ್ತೆ ಎಂದು 2014–15ನೇ ಸಾಲಿನಲ್ಲಿ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2015–16ನೇ ಸಾಲಿನಲ್ಲಿ ಪ್ರಸ್ತಾವ ಸಲ್ಲಿಸಲಾಗಿದ್ದು, ಮಂಜೂರಾತಿ ಬಂದಿಲ್ಲ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

*
ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳು ಹೀಗಂತಾರೆ...
ದಾವಣಗೆರೆ ಪಾಲಿಕೆ ವ್ಯಾಪ್ತಿಯ ಯರಗುಂಟೆ, ಆವರಗೆರೆ, ಶಾಮನೂರು ಮತ್ತು ಶಿರಮಗೊಂಡನಹಳ್ಳಿ ಸೇರಿದಂತೆ ವಿವಿಧೆಡೆ 492 ಅಂಗನವಾಡಿಗಳು ಕಾರ್ಯ ನಿರ್ವಹಿಸುತ್ತಿದ್ದು, ಇವುಗಳಲ್ಲಿ 259 ಸ್ವಂತ ಕಟ್ಟಡ ಹೊಂದಿವೆ.

ಉಳಿದಂತೆ 233ಕ್ಕೆ ಸ್ವಂತ ಕಟ್ಟಡದ ಸಮಸ್ಯೆ ಇದೆ. ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿದ್ದರೆ ಮೂಲಸೌಲಭ್ಯ ಒದಗಿಸಲು ಅನುಕೂಲವಾಗುತ್ತದೆ. ಪಾಲಿಕೆ ಅಧಿಕಾರಿಗಳು ನಿವೇಶನ ನೀಡಿದರೆ, ಕಟ್ಟಡ ನಿರ್ಮಿಸಲಾಗುವುದು. ಕೆಲವೆಡೆ ವಿದ್ಯುತ್‌ ಹಾಗೂ ಕುಡಿಯುವ ನೀರಿನ ಸಮಸ್ಯೆ ಇದೆ. ಜತೆಗೆ ಸಣ್ಣಪುಟ್ಟ ದುರಸ್ತಿ ಇದ್ದು, ಸರಿಪಡಿಸಲಾಗುವುದು.
–ಚಂದ್ರಪ್ಪ, ಸಿಡಿಪಿಒ, ದಾವಣಗೆರೆ

***
ಹೊಸ ಕಟ್ಟಡಗಳ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆಯಾಗಿದೆ. ಕಾಮಗಾರಿಗೆ ಅವಶ್ಯಕವಾದ ಹೊಂದಾಣಿಕೆ ಅನುದಾನವನ್ನು ಆಯಾ ಗ್ರಾಮ ಪಂಚಾಯ್ತಿ ಬಿಡುಗಡೆ ಮಾಡದೇ ಇರುವುದರಿಂದ ಈ ಕಟ್ಟಡಗಳ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಳ್ಳುವಂತಾಗಿದೆ. ಈ ಬಗ್ಗೆ ತಾಲ್ಲೂಕು ಪಂಚಾಯ್ತಿ ಇಒ ಅವರ ಗಮನಕ್ಕೆ ತಂದಿದ್ದು, ಗ್ರಾಮ ಪಂಚಾಯ್ತಿಗಳಿಂದ ಅನುದಾನ ಬಿಡುಗಡೆ ಮಾಡಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ 
–ಸದಾನಂದ, ಸಿಡಿಪಿಒ, ಚನ್ನಗಿರಿ.

***
ಹರಪನಹಳ್ಳಿ ತಾಲ್ಲೂಕಿನಲ್ಲಿ ಒಟ್ಟು 381 ಅಂಗನವಾಡಿ ಕೇಂದ್ರಗಳಿದ್ದು, ಅವುಗಳಲ್ಲಿ 29 ಕಟ್ಟಡಗಳು ಬೀಳುವ ಸ್ಥಿತಿಯಲ್ಲಿವೆ. ಅವುಗಳನ್ನು ನೆಲಸಮಗೊಳಿಸಲು ಪರವಾನಗಿ ಪಡೆಯಲು ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿದೆ. ಈ 29 ಕಟ್ಟಡಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ಮುಚ್ಚಲಾಗಿದೆ. ಲೋಕೋಪಯೋಗಿ ಇಲಾಖೆಯಿಂದ ಪರವಾನಗಿ ನೀಡಿದಲ್ಲಿ ಅವುಗಳನ್ನು ನೆಲಸಮಗೊಳಿಸಲಾಗುವುದು.
–ಡಿ.ಪ್ರಫುಲ್ಲಾರಾವ್‌, ಸಿಡಿಪಿಒ, ಹರಪನಹಳ್ಳಿ.

***
ಹೊನ್ನಾಳಿ ತಾಲ್ಲೂಕಿನಲ್ಲಿ ಒಟ್ಟು 283 ಅಂಗನವಾಡಿ ಕೇಂದ್ರಗಳಿದ್ದು, 196 ಅಂಗನವಾಡಿಗಳು ಸ್ವಂತ ಕಟ್ಟಡಗಳನ್ನು ಹೊಂದಿವೆ. ಉಳಿದ 87 ಕೇಂದ್ರಗಳು ಪರ್ಯಾಯ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಸ್ವಂತ ಕಟ್ಟಡಗಳನ್ನು ಹೊಂದಿರುವ ಅಂಗನವಾಡಿಗಳು ಶಿಥಿಲಗೊಂಡಿದ್ದು, ಶೀಘ್ರದಲ್ಲಿ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು.
–ಜಫ್ರುನ್ನಿಸಾ, ಸಿಡಿಪಿಒ, ಹೊನ್ನಾಳಿ.

***
ಹರಿಹರ ನಗರ ಪ್ರದೇಶಗಳಲ್ಲಿ ಅಂಗನವಾಡಿ ಆರಂಭಿಸಲು ಬಾಡಿಗೆಗೆ ಉತ್ತಮ ಕಟ್ಟಡ ದೊರೆಯುತ್ತಿಲ್ಲ. ನಗರಸಭೆಯು ಕೇಂದ್ರಗಳ ಬಾಡಿಗೆಗೆ ₹ 3ಸಾವಿರ  ನಿಗದಿ ಮಾಡಿದೆ. ಆದರೆ, ಈ ಹಣಕ್ಕೆ ಉತ್ತಮ ಕಟ್ಟಡ ದೊರೆಯುತ್ತಿಲ್ಲ. ಹೀಗಾಗಿ ಇರುವ ಕಟ್ಟಡಗಳಲ್ಲಿಯೇ ಅಂಗನವಾಡಿಗಳನ್ನು ನಡೆಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಕಟ್ಟಡಗಳಿವೆ.
–ರಾಮಲಿಂಗಪ್ಪ, ಸಿಡಿಪಿಒ, ಹರಿಹರ.

***
ಜಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿ 185 ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳಿವೆ. ಇವುಗಳಲ್ಲಿ 29 ಕಟ್ಟಡಗಳು ಶಿಥಿಲವಾಗಿದ್ದು, 10 ಕಟ್ಟಡಗಳನ್ನು ಪುನರ್‌ ನಿರ್ಮಿಸಲು ಜಿಲ್ಲಾ ಪಂಚಾಯ್ತಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ತಾಲ್ಲೂಕಿನ ಬಹುತೇಕ ಅಂಗನವಾಡಿಗಳಲ್ಲಿ ಶೌಚಾಲಯ ಹಾಗೂ ಕುಡಿಯುವ ನೀರಿನ ಸಮಸ್ಯೆ ಇದೆ. 
–ಭಾರತಿ ಭಣಕಾರ್‌, ಸಿಡಿಪಿಒ, ಜಗಳೂರು.

***
ಇವರೇನು ಹೇಳುತ್ತಾರೆ?
ಜಿಲ್ಲೆಯಲ್ಲಿ 97 ನಿವೇಶನಗಳನ್ನು ಗುರುತಿಸಲಾಗಿದ್ದು, ಈಗಾಗಲೇ ನರೇಗಾ ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿ 25 ಅಂಗನವಾಡಿ ಕಟ್ಟಡಗಳ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೆಲವೆಡೆ ನಿವೇಶನ ಕೊರತೆ ಇದ್ದು, ಊರೊಳಗಿನ ಶಾಲೆಯ ಬಳಿಯೇ ನಿವೇಶನ ಗುರುತಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.
–ಡಿ.ಎಸ್‌. ರಮೇಶ್‌, ಜಿಲ್ಲಾಧಿಕಾರಿ.

***
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸ್ವಂತ ಕಟ್ಟಡ ಇಲ್ಲದ ಅಂಗನವಾಡಿಗಳಿಗೆ ಕಟ್ಟಡ ನಿರ್ಮಿಸುವ ಸಲುವಾಗಿ ನಿವೇಶನ ಗುರುತಿಸುವ ಕಾರ್ಯ ನಡೆಯುತ್ತಿದ್ದು, ನಿವೇಶನಗಳು ದೊರೆತ ಕೂಡಲೇ ಉದ್ಯೋಗ ಖಾತ್ರಿ ಯೋಜನೆಯಡಿ ಕಟ್ಟಡ ನಿರ್ಮಿಸಲಾಗುವುದು.

ಗ್ರಾಮೀಣ ಪ್ರದೇಶಗಳಲ್ಲಿ 62 ಅಂಗನವಾಡಿಗಳು ಶೀಥಿಲಗೊಂಡಿವೆ. ದುರಸ್ತಿ ಮಾಡಲಾಗುವುದು. ಜತೆಗೆ ಪ್ರಸಕ್ತ ಸಾಲಿನಲ್ಲಿ ನೂತನವಾಗಿ 100 ಕಟ್ಟಡಗಳನ್ನು ನಿರ್ಮಿಸಲು ಸೂಚಿಸಲಾಗಿದ್ದು,ಈಗಾಗಲೇ 25 ಕಟ್ಟಡಗಳು ಕಾಮಗಾರಿ ಹಂತದಲ್ಲಿವೆ.
–ಆರ್‌.ಗಿರೀಶ್‌, ಸಿಇಒ, ಜಿ.ಪಂ.

***
ಪಾಲಿಕೆ ವ್ಯಾಪ್ತಿಯಲ್ಲಿ ಅಗತ್ಯ ಇರುವ ಕಡೆ ಅಂಗನವಾಡಿ ತೆರೆಯಲು ನಿವೇಶನದ ಸಮಸ್ಯೆ ಇಲ್ಲ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಪಾಲಿಕೆಯ ಅಧಿಕಾರಿಗಳನ್ನು ಮನವಿ ಮಾಡಿದರೆ ಸ್ವಂತ ನಿವೇಶನ ಅಥವಾ ಬಾಡಿಗೆ ಕಟ್ಟಡದ ವ್ಯವಸ್ಥೆಯನ್ನಾದರೂ ಮಾಡಿಕೊಡುತ್ತೇವೆ.
–ಬಿ.ಎಚ್‌.ನಾರಾಯಣಪ್ಪ, ಆಯುಕ್ತರು, ಮಹಾನಗರ ಪಾಲಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT