ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರದ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ

ಎಸಿಬಿ ಕಾರ್ಯಾಗಾರ, ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಯಲ್ಲಿ ಪೊಲೀಸ್‌ ಅಧೀಕ್ಷಕ ಪುಟ್ಟಮಾದಯ್ಯ ಎಚ್ಚರಿಕೆ
Last Updated 27 ಆಗಸ್ಟ್ 2016, 13:47 IST
ಅಕ್ಷರ ಗಾತ್ರ

ದಾವಣಗೆರೆ: ‘ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿಗಳು ಸ್ವಜನ ಪಕ್ಷಪಾತ ಹಾಗೂ ವಿಳಂಬ ಧೋರಣೆ ಅನುಸರಿಸಿ, ಜನರಿಂದ ಲಂಚ ಪಡೆದಲ್ಲಿ ಅಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು’ ಎಂದು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೂರ್ವ ವಲಯದ ಪೊಲೀಸ್‌ ಅಧೀಕ್ಷಕ ಎಂ.ಪುಟ್ಟಮಾದಯ್ಯ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶನಿವಾರ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್‌ ಠಾಣೆಯಿಂದ ಜಿಲ್ಲಾಮಟ್ಟದ ಅಧಿಕಾರಿಗಳಿಗಾಗಿ ಆಯೋಜಿಸಿದ್ದ ಕಾರ್ಯಾಗಾರ ಹಾಗೂ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಯಲ್ಲಿ ಅವರು ಮಾತನಾಡಿದರು.’‍

‘ಲಂಚ ತೆಗೆದುಕೊಳ್ಳುವುದು ಮಾತ್ರ ಭ್ರಷ್ಟಾಚಾರವಲ್ಲ, ಸ್ವಜನ ಪಕ್ಷಪಾತ ಮತ್ತು ವಿಳಂಬ ಧೋರಣೆ ಅನುಸರಿಸುವುದು ಕೂಡ ಭ್ರಷ್ಟಾಚಾರ ಎಂದ ಅವರು, ಅಧಿಕಾರ ಶಾಶ್ವತವಲ್ಲ. ಹುದ್ದೆಯಲ್ಲಿ ಇರುವಷ್ಟು ದಿನ ಪ್ರಾಮಾಣಿಕವಾಗಿ ಜನರ ಸೇವೆ ಮಾಡುವ ಮೂಲಕ ಸಮಾಜದಲ್ಲಿ ಉತ್ತಮ ಹೆಸರು ಗಳಿಸಬೇಕು’ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

‘ಭ್ರಷ್ಟಾಚಾರಕ್ಕೆ ನೂರಾರು ವರ್ಷಗಳ ಇತಿಹಾಸ ಇದೆ. ಚಾಣುಕ್ಯನ ಅರ್ಥಶಾಸ್ತ್ರದಲ್ಲಿ ಈ ಬಗ್ಗೆ ವಿಸ್ತ್ರತವಾಗಿ ವಿವರಿಸಲಾಗಿದೆ. ಬ್ರಿಟಿಷ್‌ ಆಡಳಿತದಲ್ಲಿಯೂ ಭ್ರಷ್ಟಾಚಾರ ತಾಂಡವಾಡುತ್ತಿತ್ತು. ಅಂತೆಯೇ ಆಧುನಿಕ ತಂತ್ರಜ್ಞಾನ ಯುಗದಲ್ಲಿಯೂ ಅದು ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ ಎಂದು ಪ್ರತಿಪಾದಿಸಿದ ಅವರು, ಇದರ ನಿಗ್ರಹಕ್ಕೆ ಅಧಿಕಾರಿಗಳಲ್ಲಿ ಪ್ರಾಮಾಣಿಕತೆ ಹಾಗೂ ಬದ್ಧತೆ ತುಂಬಾ ಮುಖ್ಯ’ ಎಂದು ಅಭಿಪ್ರಾಯಪಟ್ಟರು.

‘ಸರ್ಕಾರಿ ಸೇವೆ ಹಾಗೂ ಸೌಲಭ್ಯಗಳು ದುರ್ಬಳಕೆಯಾಗುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಜನರಲ್ಲಿಯೂ‌ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಇರಬೇಕು. ಜತೆಗೆ ಅಧಿಕಾರಿಗಳನ್ನು ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಇದರಿಂದ ಅಲ್ಪಮಟ್ಟಿಗಾದರೂ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುತ್ತಾರೆ’ ಎಂದು ಹೇಳಿದರು.

‘ನಾಗರಿಕ ಸೇವೆಯಲ್ಲಿ ನಿರ್ಲಕ್ಷ್ಯ ಸಲ್ಲದು. ಕಚೇರಿಗೆ ಬರುವ ಜನರಿಗೆ ಯಾವುದೇ ಪ್ರತಿಫಲಪೇಕ್ಷೆ ಬಯಸದೇ ‘ಸಕಾಲ’ ವ್ಯಾಪ್ತಿಯೊಳಗೆ ಅವರ ಕೆಲಸ ಮಾಡಿಕೊಡಬೇಕು. ಅಧಿಕಾರಿಗಳ ಕಾರ್ಯವ್ಯಾಪ್ತಿಯ ಮೇಲೆ ವಿಚಕ್ಷಣಾ ದಳ ನಿಗಾ ಇಟ್ಟಿರುತ್ತದೆ. ಎಚ್ಚರಿಂದ ಕಾರ್ಯ ನಿರ್ವಹಿಸಬೇಕು’ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

‘ಭ್ರಷ್ಟಾಚಾರ ಮನಸ್ಥಿತಿಯ ಅಧಿಕಾರಿಗಳು ಕಾನೂನಿನ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು. ಆದರೆ, ಮನೋಧರ್ಮದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಧಿಕಾರಿಗಳಲ್ಲಿ ನೈತಿಕತೆ ಹಾಗೂ ಧಾರ್ಮಿಕ ಚಿಂತನೆಯ ಮನೋಭಾವ ಅವಶ್ಯ’ ಎಂದು ಪ್ರತಿಪಾದಿಸಿದರು.

ಜಿಲ್ಲಾ ಪಂಚಾಯ್ತಿ ಸಿಇಒ ಆರ್‌.ಗಿರೀಶ್‌ ಮಾತನಾಡಿ, ‘ನಾವೇಲ್ಲಾ ಸಾರ್ವಜನಿಕ ಸೇವಕರು. ಜನರ ನಿರೀಕ್ಷೆಗೆ ಹಾಗೂ ಆತ್ಮಸಾಕ್ಷಿಗೆ ವಂಚನೆ ಮಾಡದೇ ಕಾರ್ಯ ನಿರ್ವಹಿಸಿದ್ದಲ್ಲಿ, ಭ್ರಷ್ಟಾಚಾರ ನಿಗ್ರಹ ದಳವಾಗಲಿ ಅಥವಾ ಯಾವುದೇ ಕಾಯ್ದೆಯ ಅಗತ್ಯ ಇರುವುದಿಲ್ಲ’ ಎಂದು ಹೇಳಿದರು.

‘ಹಣ ಸಂಪಾದನೆಯೇ ಮುಖ್ಯವಲ್ಲ. ನಾಗರಿಕರ ಸೇವೆ ಹಾಗೂ ಜವಾಬ್ದಾರಿ ಮುಖ್ಯ. ನಾಲ್ಕು ದಿನದ ಬದುಕಿಗೆ ಸ್ವಾರ್ಥ ಬೇಡ ಎನ್ನುತ್ತಾ, ಚಕ್ರವರ್ತಿ ಅಲೆಂಗ್ಜಾಂಡರ್‌ ಅವರ ಬದುಕು ಹಾಗೂ ಅಂತ್ಯದ ದಿನಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಎಸಿಬಿಯ ಸಬ್‌ಇನ್‌ಸ್ಪೆಕ್ಟರ್‌ ಎಸ್‌.ಕೆ.ಪ್ರಹ್ಲಾದ್‌ ಅವರು, ‘ವಿವಿಧ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ಸಾರ್ವಜನಿಕರಿಂದ ಎಸಿಬಿಗೆ ನೂರಕ್ಕೂ ಅಧಿಕ ದೂರುಗಳು ಬಂದಿವೆ. ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡಿ, ಸಾಬೀತಾದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಎಸಿಬಿಯ ಸಬ್‌ ಇನ್‌ಸ್ಪೆಕ್ಟರ್‌ ಪ್ರಕಾಶ್‌ ಗೌಡ ಪಾಟೀಲ್‌ ಅವರು, ‘ನಾಗರಿಕ ಸೇವೆ ಮಾಡುವಲ್ಲಿ ಅಧಿಕಾರಿಗಳು ಸಾರ್ವಜನಿಕರೊಂದಿಗೆ ನಡೆಸುವ ಸಂಜ್ಞೆಗಳು ಕೂಡ ಅಪರಾಧ ವ್ಯಾಪ್ತಿಯೊಳಗೆ ಬರುತ್ತವೆ. ಆ ಬಗ್ಗೆ ಕೂಡ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು’ ಎಂದು ಹೇಳಿದರು.

ಜಿಲ್ಲಾಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

*
ಅನುದಾನಕ್ಕಾಗಿ ಮನವಿ..
‘ಜಿಲ್ಲಾ ಪಂಚಾಯ್ತಿಯ ಯೋಜನೆ ಅಡಿಯಲ್ಲಿ ಮನೆಯ ಬಳಿ ಶೌಚಾಲಯ ನಿರ್ಮಿಸಿಕೊಂಡು ಒಂದು ವರ್ಷವಾದರೂ ಅದಕ್ಕೆ ಸಂಬಂಧಿಸಿದ ₹ 15 ಸಾವಿರ ಅನುದಾನ ಇದುವರೆಗೂ ಬಿಡುಗಡೆಯಾಗಿಲ್ಲ. ಈ ಬಗ್ಗೆ ಗ್ರಾಮ ಪಂಚಾಯ್ತಿ ಅಧಿಕಾರಿಗಳನ್ನು ವಿಚಾರಿಸಿದರೆ, ಅನುದಾನ ಬಂದಿಲ್ಲ ಎಂದು ನಿರ್ಲಕ್ಷದಿಂದ ಅವರು ಹೇಳುತ್ತಾರೆ.

ಆದಷ್ಟು ಬೇಗ ಅನುದಾನ ಬಿಡುಗಡೆ ಮಾಡಿಸಿಕೊಡಿ’ ಎಂದು  ದಾವಣಗೆರೆ ತಾಲ್ಲೂಕಿನ ಕಾಡಜ್ಜಿ ಗ್ರಾಮದ ಹನುಮಂತಪ್ಪ ಎಸಿಬಿ ಪೊಲೀಸ್‌ ಅಧೀಕ್ಷಕರಿಗೆ ಮನವಿ ಸಲ್ಲಿಸಿದರು.

*
ಮುಖ್ಯಾಂಶಗಳು..
* ಭ್ರಷ್ಟಾಚಾರ ನಿಗ್ರಹ ದಳ ಕಾರ್ಯಾಗಾರ
* ಸ್ವಜನ ಪಕ್ಷಪಾತ, ವಿಳಂಬ ಧೋರಣೆ ಸಲ್ಲದು
* ನಾಗರಿಕ ಸೇವೆಯಲ್ಲಿ ಪ್ರಾಮಾಣಿಕತೆ, ಬದ್ಧತೆ ಇರಲಿ

*
ಭ್ರಷ್ಟಾಚಾರ: ದೂರು ಸಲ್ಲಿಸಲು..
ಸರ್ಕಾರದ ವಿವಿಧ ಇಲಾಖೆಯಲ್ಲಿ ನಡೆಯುವ ಭ್ರಷ್ಟಾಚಾರದ ವಿರುದ್ಧ ಸಾರ್ವಜನಿಕರು ಈ ಕೆಳಗೆ ನಮೂದಿಸಿದ ಎಸಿಬಿ ದೂರವಾಣಿ, ಮೊಬೈಲ್‌ ಸಂಖ್ಯೆಗೆ ಕರೆ ಮಾಡಿ ದೂರ ನೀಡಬಹುದು.
ದೂರವಾಣಿ: 08192 236600. ಮೊ: 94808 06284/ 94808 06283/ 94808 06206.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT