ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ಶಿಕ್ಷಣ ನೀತಿ ತಿರಸ್ಕರಿಸಿ

ಶಿಕ್ಷಣ ತಜ್ಞರು, ಕಾನೂನು ಪಂಡಿತರು ಒಳಗೊಂಡ ಆಯೋಗ ರಚಿಸಿ: ಪ್ರೊ. ರವಿವರ್ಮ
Last Updated 27 ಆಗಸ್ಟ್ 2016, 14:09 IST
ಅಕ್ಷರ ಗಾತ್ರ

ದಾವಣಗೆರೆ: ‘ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆ ಹಾಗೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸದೇ ಕೇಂದ್ರ ಸರ್ಕಾರವು ರಹಸ್ಯವಾಗಿ ರೂಪಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ–2016 ಅನ್ನು ವಿದ್ಯಾರ್ಥಿಗಳು ಸಾರಾಸಗಟಾಗಿ ತಿರಸ್ಕರಿಸಿ, ಅವರ ವಿರುದ್ಧ ಪ್ರತಿಭಟಿಸಬೇಕು’ ಎಂದು ರಾಜ್ಯದ ಮಾಜಿ ಅಡ್ವೊಕೇಟ್‌ ಜನರಲ್‌ ಪ್ರೊ. ರವಿವರ್ಮ ಕುಮಾರ್‌ ಹೇಳಿದರು.

ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಸ್ಟೂಡಂಟ್‌ ಆರ್ಗನೈಜೇಷನ್‌ (ಎ.ಐ.ಡಿ.ಎಸ್‌.ಒ) ನಗರದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ 6ನೇ ವಿದ್ಯಾರ್ಥಿ ಸಮ್ಮೇಳನದ ‘ರಾಷ್ಟ್ರೀಯ ಶಿಕ್ಷಣ ನೀತಿ’ ವಿಚಾರ ಸಂಕಿರಣದಲ್ಲಿ ಅವರು ಉಪನ್ಯಾಸ ನೀಡಿದರು.

‘ಕೇಂದ್ರ ಸರ್ಕಾರ ರೂಪಿಸಿರುವ ಶಿಕ್ಷಣ ನೀತಿಯು ಸಂವಿಧಾನ ದ್ವೇಷಿಯಾಗಿದೆ. ಇದರಲ್ಲಿ ಸಂವಿಧಾನದ ಆಶಯಗಳನ್ನು ಉಲ್ಲೇಖಿಸಿಲ್ಲ. ಹೀಗಾಗಿ ಶಿಕ್ಷಣ ತಜ್ಞರು, ಪ್ರಾಧ್ಯಾಪಕರು, ವಿಶ್ವವಿದ್ಯಾಲಯಗಳ ಕುಲಪತಿಗಳು, ಕಾನೂನು ಪಂಡಿತರು, ವಿದ್ಯಾರ್ಥಿಗಳ ಪೋಷಕರು ಒಳಗೊಂಡ ಆಯೋಗವನ್ನು ರಚಿಸಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಣ ನೀತಿಯನ್ನು ಬರೆಯಲು ಇವರಿಗೆ ಅಧಿಕಾರ ಕೊಟ್ಟವರ್‍ಯಾರು? ಇದು ಶಿಕ್ಷಣ ತಜ್ಞರು ರೂಪಿಸಿದ ವರದಿಯಲ್ಲ ಎಂಬ ಕಾರಣಕ್ಕೆ ಪ್ರಕಟಿಸಲು ಸರ್ಕಾರಕ್ಕೆ ನಾಚಿಕೆಯಾಗುತ್ತಿದೆ. ಹೀಗಾಗಿ ನೀತಿಯ ಆಯ್ದ ಭಾಗಗಳನ್ನು ಮಾತ್ರ ಪ್ರಕಟಿಸಿದೆ’ ಎಂದು ಅವರು ದೂರಿದರು.

‘ದೇಶದ ಶಿಕ್ಷಣದ ಭವ್ಯ ಪರಂಪರೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಬೇಕು ಎಂದು ನೂತನ ಶಿಕ್ಷಣ ನೀತಿಯಲ್ಲಿ ಉಲ್ಲೇಖಿಸಲಾಗಿದೆ. ದಲಿತರು, ಶೂದ್ರರು, ಮಹಿಳೆಯರು, ಅಲ್ಪಸಂಖ್ಯಾತರನ್ನು ಹೊರಗಿಟ್ಟು ಕೇವಲ ಬ್ರಾಹ್ಮಣ ಮತ್ತು ಕ್ಷತ್ರೀಯರಿಗೆ ಮಾತ್ರ ಶಿಕ್ಷಣ ನೀಡಿರುವುದು ಭವ್ಯ ಪರಂಪರೆಯೇ?

ಏಕಲವ್ಯನಿಂದ ಹೆಬ್ಬೆರಳು ಪಡೆದ ದ್ರೋಣಾಚಾರ್ಯರು, ಸೂತಪುತ್ರನೆಂಬ ಕಾರಣಕ್ಕೆ ಕರ್ಣನಿಗೆ ಕಲಿತ ವಿದ್ಯೆ ಮರೆಯುವಂತೆ ಗುರು ಶಾಪ ನೀಡಿರುವುದು ಭವ್ಯ ಪರಂಪರೆಯೇ?’ ಎಂದು ಪ್ರೊ. ರವಿವರ್ಮ ಪ್ರಶ್ನಿಸಿದರು.


‘ಬುದ್ಧನ ಕಾಲದಲ್ಲಿ ನಳಂದಾ, ತಕ್ಷಶಿಲೆ ವಿಶ್ವವಿದ್ಯಾಲಯ ನಿರ್ಮಿಸಿರುವುದು; ಸಾವಿತ್ರಿಬಾಯಿ ಫುಲೆ ಹೆಣ್ಣು ಮಕ್ಕಳಿಗಾಗಿ ಶಾಲೆ ತೆರೆದಿರುವುದು ದೇಶದ ಭವ್ಯ ಪರಂಪರೆಯಾಗಿದೆ. ಸಾಂಪ್ರದಾಯ ಶಿಕ್ಷಣದಿಂದ ನಿರುದ್ಯೋಗ ಸೃಷ್ಟಿಯಾಗಿದ್ದರಿಂದ ಬ್ರಿಟಿಷರು ಸಾರ್ವತ್ರಿಕ ಶಿಕ್ಷಣದ ಪರಿಕಲ್ಪನೆಯನ್ನು ಜಾರಿಗೆ ತಂದರು. ಬ್ರಿಟಿಷರಿಗೆ ಶಿಕ್ಷಣದ ಬಗ್ಗೆ ಇರುವ ಕಾಳಜಿಯನ್ನೂ ಈಗಿನ ಸರ್ಕಾರಗಳು ತೋರಿಸುತ್ತಿಲ್ಲ’ ಎಂದು ದೂರಿದರು.

‘ಭಾರತದ ಶಿಕ್ಷಣ ಸಂಪೂರ್ಣ ವ್ಯಾಪಾರೀಕರಣಗೊಂಡಿದೆ. ಓದುವ ವಿದ್ಯಾರ್ಥಿಗಳಿಗೆ ಮೂಲಭೂತ ಸ್ವಾತಂತ್ರ್ಯವಿಲ್ಲ; ಆದರೆ, ವೈದ್ಯಕೀಯ ಕಾಲೇಜುಗಳನ್ನು ತೆರೆಯಲು ಸ್ವಾತಂತ್ರ್ಯ ಇದೆ. ಪರಿಶಿಷ್ಟ ಜಾತಿ, ಪಂಗಡದವರಿಗೆ ಮೀಸಲಾತಿ ನೀಡುವ ಬಗ್ಗೆ ಉಲ್ಲೇಖಿಸಿಲ್ಲ. ಸರ್ಕಾರ ಶಾಲೆಗಳನ್ನು ಉಳಿಸುವ ಬಗ್ಗೆ ಇರಲ್ಲಿಲ್ಲ. ಕನ್ನಡ ಮಾಧ್ಯಮ ಶಾಲೆಗಳನ್ನು ರಕ್ಷಿಸುವ ಬಗ್ಗೆ ಉಲ್ಲೇಖವಿಲ್ಲ.

ಹೀಗಾಗಿ ನೂತನ ಶಿಕ್ಷಣ ನೀತಿಯು ಸಂವಿಧಾನ ವಿರೋಧಿಯಾಗಿದೆ’ ಎಂದು ಪ್ರೊ. ರವಿವರ್ಮ ಹೇಳಿದರು.

ಶಿಕ್ಷಣ ಉಳಿಸಿ ಸಮಿತಿ ರಾಜ್ಯ ಕಾರ್ಯದರ್ಶಿ ಕೆ. ಉಮಾ, ‘ಅತ್ಯಾಚಾರಕ್ಕೆ ಒಳಗಾಗಿ ಮಗುವನ್ನು ಪಡೆದ ಬಾಲಕಿಯನ್ನು ಮನೆಯಿಂದ ಹೊರಗೆ ಹಾಕುವ ಅಮಾನುಷ ಮನಸ್ಥಿತಿಯನ್ನು ಇಂದಿನ ಶಿಕ್ಷಣ ವ್ಯವಸ್ಥೆ ಸೃಷ್ಟಿಸುತ್ತಿದೆ. ಸ್ವತಂತ್ರ ಚಿಂತನೆ, ದೀನ– ದುಃಖಿಗಳ ಬಗ್ಗೆ ಅನುಕಂಪ, ಉತ್ತಮ ಚಾರಿತ್ರ್ಯ ನೀಡುವ ಬದಲು ಸ್ವಾರ್ಥ ಕೇಂದ್ರಿತ ಯಂತ್ರ ಮಾನವರನ್ನಾಗಿಸುತ್ತಿವೆ’ ಎಂದು ವಿಷಾದಿಸಿದರು.

ಎ.ಆರ್‌.ಜಿ. ಕಾಲೇಜಿನ ಉಪನ್ಯಾಸಕ ಮಲ್ಲಿಕಾರ್ಜುನ ಹಲಸಂಗಿ, ‘ಪ್ರಸಕ್ತ ಶಿಕ್ಷಣ ನೀತಿ ಉದ್ಯಮಪತಿಗಳ ಹಿತಾಸಕ್ತಿಗೆ ಅನುಗುಣವಾಗಿ ತಯಾರಿಸಲಾಗಿದೆ. ತಾರ್ಕಿಕ ಚಿಂತನೆ, ವಿಮರ್ಶಾತ್ಮಕ ಮನೋಭಾವ, ಅನ್ಯಾಯವನ್ನು ಪ್ರಶ್ನಿಸುವ ಸ್ಥೈರ್ಯವಿರದ ಶಿಕ್ಷಣ ನೀತಿ ಇದಾಗಿದೆ’ ಎಂದರು.

ಎಐಡಿಎಸ್‌ಒ ರಾಜ್ಯ ಅಧ್ಯಕ್ಷ ವಿ.ಎನ್‌. ರಾಜಶೇಖರ್‌ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಅಧ್ಯಕ್ಷ ಕಮಲ್‌ ಸೈನ್ ಹಾಜರಿದ್ದರು.

*
ಮುಖ್ಯಾಂಶಗಳು
* ನೂತನ ಶಿಕ್ಷಣ ನೀತಿ ಸಂವಿಧಾನ ವಿರೋಧಿ
* ಸರ್ಕಾರ ಶಾಲೆ ಉಳಿಸುವ ಬಗ್ಗೆ ಪ್ರಸ್ತಾಪವಿಲ್ಲ
* ಶಿಕ್ಷಣದಿಂದ ಸ್ವಾರ್ಥ ಕೇಂದ್ರಿತ ಯಂತ್ರಮಾನವರ ಸೃಷ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT