ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿಯುತವಾಗಿ ಗಣೇಶ, ಬಕ್ರೀದ್‌ ಹಬ್ಬ ಆಚರಿಸಿ

ಸೌಹಾರ್ದ ಮತ್ತು ಸಮನ್ವಯ ಸಭೆಯಲ್ಲಿ ಐಜಿಪಿ ನಂಜುಂಡಸ್ವಾಮಿ
Last Updated 27 ಆಗಸ್ಟ್ 2016, 15:25 IST
ಅಕ್ಷರ ಗಾತ್ರ

ದಾವಣಗೆರೆ: ‘ಸಾರ್ವಜನಿಕವಾಗಿ ಗಣಪತಿ ಪ್ರತಿಷ್ಠಾಪಿಸುವವರು ತಪ್ಪದೇ ಸಮೀಪದ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು. ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೇ ಶಾಂತಿಯುತವಾಗಿ ಹಬ್ಬವನ್ನು ಆಚರಿಸಬೇಕು’ ಎಂದು ಪೂರ್ವ ವಲಯದ ಪೊಲೀಸ್ ಮಹಾನಿರೀಕ್ಷ ಎಂ. ನಂಜುಂಡಸ್ವಾಮಿ ಹೇಳಿದರು.

ಗಣೇಶ ಚತುರ್ಥಿ ಮತ್ತು ಬಕ್ರೀದ್ ಹಬ್ಬದ ಅಂಗವಾಗಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ನಾಗರಿಕ ಸೌಹಾರ್ದ ಮತ್ತು ಸಮನ್ವಯ ಸಭೆಯಲ್ಲಿ ಮಾತನಾಡಿದರು.

‘ಸಾರ್ವಜನಿಕವಾಗಿ ಗಣೇಶ ಕೂರಿಸುವವರು ಪೊಲೀಸ್ ಇಲಾಖೆ ಮತ್ತು ಮಹಾನಗರ ಪಾಲಿಕೆ ನೀಡುವ ಸಲಹೆ-ಸೂಚನೆಗಳನ್ನು ಪಾಲಿಸಬೇಕು. ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಕಿಡಿಗೇಡಿಗಳ ಮೇಲೆ ನಿಗಾ ವಹಿಸಬೇಕು. ಮೆರವಣಿಗೆ ಸಾಗುವ ಮುಖ್ಯದಾರಿಯಲ್ಲಿರವ ಅಂಗಡಿ ಮಾಲೀಕರು ಹೊರಗಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು’ ಎಂದು ಹೇಳಿದರು.

‘ಪೆಂಡಾಲ್‌ನಲ್ಲಿ ಮುಂಜಾಗ್ರತಾ ಕ್ರಮವಾಗಿ ಮರಳು, ನೀರನ್ನು ಇರಿಸಬೇಕು. ಇದು ಭಕ್ತಿಯ ಹಬ್ಬವಾಗಿದ್ದು, ಅಶ್ಲೀಲ ಹಾಡುಗಳ ಡಿಜೆ ಸೆಟ್ ಬಳಸುವುದು ಬೇಡ. ಧ್ವನಿವರ್ಧಕ ಬಳಸಲು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಿರಿ. ಕೆಇಬಿ ಮತ್ತು ಅಗ್ನಿಶಾಮಕ ದಳದಿಂದ ನಿರಾಕ್ಷೇಪಣಾ ಪತ್ರ ಪಡೆಯಿರಿ. ಫ್ಲೆಕ್ಸ್‌, ಬ್ಯಾನರ್‌ ಅಳವಡಿಸಲು ಸ್ಥಳೀಯ ದಂಡಾಧಿಕಾರಿಯಿಂದ ಅನುಮತಿ ಪಡೆಯಿರಿ’ ಎಂದು ಅವರು ಸೂಚಿಸಿದರು.

ಹಿಂದೂ ಸಂಘಟನೆ ಮುಖ್ಯಸ್ಥ ಕೆ.ಪಿ. ಶಂಕರನಾರಾಯಣ, ‘ನಗರದ ಬೆಳವಣಿಗೆ ದೃಷ್ಟಿಯಿಂದ ಹಿಂದೂ, ಮುಸ್ಲಿಂ ಸೇರಿದಂತೆ ಎಲ್ಲ ಸಮುದಾಯಗಳ ಸಮನ್ವಯತೆ ಅಗತ್ಯವಿದೆ. ಬಕ್ರೀದ್ ಹಬ್ಬವನ್ನೂ ಶಾಂತಿಯುತವಾಗಿ ಆಚರಿಸೋಣ. ವರ್ಷದಲ್ಲಿ ಒಂದೆರಡು ಬಾರಿ ಸೌಹಾರ್ದ ಔತಣಕೂಟ ಏರ್ಪಡಿಸುವುದು ಉತ್ತಮ’ ಎಂದು ಹೇಳಿದರು.

ಮುಖಂಡ ಶ್ರೀನಿವಾಸ್, ‘ಎಂಸಿಸಿ ‘ಬಿ’ ಬ್ಲಾಕ್‌ನಲ್ಲಿ 28 ವರ್ಷಗಳಿಂದ ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸಲಾಗುತ್ತಿದೆ. ಈ ಬಾರಿ 35 ಕೆ.ಜಿ. ಬೆಳ್ಳಿ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತಿದೆ’ ಎಂದರು.

ಮುಖಂಡ ವೈ. ಮಲ್ಲೇಶ್, ‘ಪೊಲೀಸ್ ಇಲಾಖೆ ಮತ್ತು ಪಾಲಿಕೆ ಅನುಮತಿ ನೀಡುವ ನಿಯಮವನ್ನು ಸರಳೀಕರಿಸಬೇಕು’ ಎಂದು ಆಗ್ರಹಿಸಿದರು.

ಮುಸ್ಲಿಂ ಸಮಾಜದ ಮುಖಂಡ ಸಾದಿಕ್ ಬಾಷಾ, ‘ಗಣೇಶ ಹಬ್ಬ ಮತ್ತು ಬಕ್ರೀದ್ ಹಬ್ಬಗಳಲ್ಲಿ ಸಮನ್ವಯತೆ ಸಾಧಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸಣ್ಣ ಪುಟ್ಟ ತಪ್ಪಾದರೆ ಸಂಧಾನ, ಸಮನ್ವಯತೆಯಿಂದ ಬಗೆಹರಿಸಿಕೊಳ್ಳೋಣ. ಗಣೇಶ ಹಬ್ಬದಲ್ಲಿ ಇದುವರೆಗೆ ಯಾರೂ ಸೌಹಾರ್ದವನ್ನು ಕದಡಿಲ್ಲ’ ಎಂದು ತಿಳಿಸಿದರು.

ಜೆ. ಅಮಾನುಲ್ಲಾ ಖಾನ್, ‘ಬಕ್ರೀದ್ ಹಬ್ಬ ತ್ಯಾಗ, ಬಲಿದಾನದ ಸಂಕೇತ. ಈ ಹಬ್ಬದ ಪದ್ಧತಿಯಲ್ಲಿ ಪ್ರಾಣಿಬಲಿ ಇದೆ. ಇದರಿಂದ ನೋವಾದರೆ ಪೊಲೀಸರ ಗಮನಕ್ಕೆ ತನ್ನಿ. ಅನೈತಿಕ ಪೊಲೀಸ್‌ಗಿರಿ ಮಾಡಬಾರದು’ ಎಂದು ಕೋರಿದರು.

ಯಶವಂತ ಜಾಧವ್, ರಜ್ವೀಕ್ ಖಾನ್, ಪಾಲಿಕೆಯ ಸಾರ್ವಜನಿಕ ಆರೋಗ್ಯ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಹಾಲೇಶ್, ಪಾಲಿಕೆ ಸದಸ್ಯ ಉಮೇಶ್ ಮಾತನಾಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ಪಾಲಿಕೆ ಆಯುಕ್ತ ಬಿ.ಎಚ್‌. ನಾರಾಯಣಪ್ಪ, ಉಪ ಮೇಯರ್‌ ಗೌಡ್ರ ರಾಜಶೇಖರಪ್ಪ, ಉಪವಿಭಾಗಾಧಿಕಾರಿ ಕುಮಾರಸ್ವಾಮಿ, ತಹಶೀಲ್ದಾರ್ ಮಂಜುನಾಥ ಬಳ್ಳಾರಿ, ಡಿವೈಎಸ್‌ಪಿ ನಾಗರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT