ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರಾಧ ಒಪ್ಪಿಕೊಂಡರೂ ನಿರಪರಾಧಿಯಾದ!

ಕಟಕಟೆ–30
Last Updated 27 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಸುಮಾರು 15-20 ವರ್ಷಗಳ ಹಿಂದಿನ ಘಟನೆಯಿದು. ಆತನ ಹೆಸರು ರಾಜಪ್ಪ. ಬೆಂಗಳೂರಿನ ಪ್ರತಿಷ್ಠಿತ ಕಾನೂನು ಕಾಲೇಜೊಂದರಲ್ಲಿ ಅಟೆಂಡರ್ ಆಗಿದ್ದ. ಅದೊಂದು ದಿನ ತನ್ನ ಕಾಲೇಜಿನ ಆವರಣದಲ್ಲಿ ಸುಮಾರು ಆರು ಅಡಿ ಆಳದ ಗುಂಡಿ ತೆಗೆಯುತ್ತಿದ್ದ. ಅದನ್ನು ನೋಡಿದವರೆಲ್ಲಾ ಇಷ್ಟು ಆಳದ ಗುಂಡಿ ತೆಗೆಯುತ್ತಿರುವುದು ಏಕೆ ಎಂದು ಪ್ರಶ್ನಿಸಿದರು. ಕಾಲೇಜಿನ ಸುತ್ತಮುತ್ತ ಇರುವ ಕಸಕಡ್ಡಿಗಳನ್ನು ಅದರಲ್ಲಿ ಹಾಕಲು ಈ ಗುಂಡಿ ಎಂದ. ಆತನ ‘ಪರಿಸರ ಪ್ರೇಮ’ ಕಂಡು ಹಲವರು ಕೊಂಡಾಡಿ ಹೋದರು.

ಈ ರಾಜಪ್ಪನ ಬಗ್ಗೆ ಹೇಳುವುದಾದರೆ, ಈತ ವಿವಾಹಿತನಾಗಿದ್ದ. ಹೆಂಡತಿ ಲಕ್ಷ್ಮಿ ಹಾಗೂ 18 ತಿಂಗಳ ಮಗುವಿನ ಜೊತೆಗೆ ನೆಲೆಸಿದ್ದ. ರಾಜಪ್ಪನಿಗೆ ಬೇರೊಂದು ಹೆಣ್ಣಿನ ಸಹವಾಸವಿತ್ತು. ಆಕೆಯ ಮೇಲಿನ ವ್ಯಾಮೋಹದಿಂದ ಅವನಿಗೆ ಪತ್ನಿ ಹಾಗೂ ಮಗಳು ಹೊರೆ ಎನಿಸತೊಡಗಿದರು. ಹೇಗಾದರೂ ಅವರಿಂದ ‘ಮುಕ್ತಿ’ ಪಡೆಯಬೇಕೆಂದುಕೊಂಡು ನಿರ್ಧರಿಸಿದ ಆತ. ಅದಕ್ಕಾಗಿ ಸಾಕಷ್ಟು ಯೋಚನೆ ಮಾಡಿದ ಅವನಿಗೆ ಹೊಳೆದದ್ದು ಇಬ್ಬರನ್ನೂ ಮುಗಿಸಿಬಿಡುವ ಯೋಚನೆ. ಇಬ್ಬರನ್ನೂ ಸಾಯಿಸಬೇಕೆಂದು ನಿರ್ಧರಿಸಿದ ಆತ.

ಸಾಯಿಸಿದ ಮೇಲೆ ಶವಗಳನ್ನು ಏನು ಮಾಡುವುದು ಎಂದೂ ದೂರಾಲೋಚನೆ ಮಾಡಿದ ಅವನು ಪೂರ್ವ ಸಿದ್ಧತೆಯಾಗಿ ಇಬ್ಬರನ್ನು ಹೂಳಲು ಸಾಕಾಗುವಷ್ಟು ಗುಂಡಿಯನ್ನು ತೋಡಿದ್ದ! ಎಲ್ಲವೂ ಅಂದುಕೊಂಡಂತೇ ಆಯಿತು. ಅದೊಂದು ದಿನ ತನ್ನ ಪ್ರೇಯಸಿ ಜೊತೆಗೂಡಿ ಹೆಂಡತಿ ಹಾಗೂ ಮಗುವಿನ ಕುತ್ತಿಗೆಗೆ ಹಗ್ಗ ಕಟ್ಟಿ ಉಸಿರುಗಟ್ಟಿಸಿ ಸಾಯಿಸಿದ. ಶವಗಳನ್ನು ಗುಂಡಿಗೆ ಹಾಕಿ ಮುಚ್ಚಿ ಕೈತೊಳೆದುಕೊಂಡ. ಅವನ ಅಕ್ರಮ ಸಂಬಂಧಕ್ಕೆ ಎರಡು ಜೀವಗಳು ಬಲಿಯಾದವು.

ಲಕ್ಷ್ಮಿಯ ಮನೆಯವರಿಗೆ ಆಕೆ ಕೊಲೆಯಾದದ್ದು ತಿಳಿಯಬಾರದು ಎನ್ನುವ ಕಾರಣಕ್ಕೆ ಆಗಾಗ್ಗೆ ಅವರಿಗೆ ಲಕ್ಷ್ಮಿಯ ಹೆಸರಿನಲ್ಲಿ ಪತ್ರ ಬರೆಯುತ್ತಿದ್ದ. ತಾನು ಗಂಡ ಹಾಗೂ ಮಗುವಿನ ಜೊತೆ ಕ್ಷೇಮದಿಂದ ಇರುವುದಾಗಿ ಅದರಲ್ಲಿ ಉಲ್ಲೇಖಿಸುತ್ತಿದ್ದ. ಕುಗ್ರಾಮದಲ್ಲಿ ನೆಲೆಸಿದ್ದ ಲಕ್ಷ್ಮಿಯ ಪೋಷಕರಿಗೆ ಇದು ತಮ್ಮ ಮಗಳ ಪತ್ರ ಅಲ್ಲ ಎಂದು ತಿಳಿಯಲೇ ಇಲ್ಲ. ಅನಕ್ಷರಸ್ಥರಾಗಿದ್ದ ಅವರಿಗೆ ಪತ್ರದಲ್ಲಿ ಇರುವುದು ಮಗಳ ಕೈಬರಹವೇ ಅಥವಾ ಅಲ್ಲವೇ ಎಂಬುದು ತಿಳಿಯುವುದಾದರೂ ಹೇಗೆ? ಮಗಳ ಪತ್ರವನ್ನು, ಓದಲು ಬಲ್ಲವರಿಂದ ಓದಿಸಿ ಖುಷಿಪಡುತ್ತಿದ್ದರು. ತಮ್ಮ ಮಗಳು ಗಂಡ, ಮಗುವಿನ ಜೊತೆ ಸಂತಸದಿಂದ ಇದ್ದಾಳೆಂದೇ ತಿಳಿದುಕೊಂಡರು.

ಹೀಗೆ 8-10 ತಿಂಗಳು ಮುಂದುವರಿಯಿತು. ಆದರೆ ಸತ್ಯ ಎಂದಾದರೂ ಹೊರಕ್ಕೆ ಬರಲೇಬೇಕಲ್ಲವೇ? ಇಲ್ಲೂ ಹಾಗೆಯೇ ಆಯಿತು. ಲಕ್ಷ್ಮಿಯ ಹೆಸರಿನಲ್ಲಿ ರಾಜಪ್ಪ ಬರೆದ ಪತ್ರ ಆಕೆಯ ಮಾವನ ಕೈಸೇರಿತು. ಪತ್ರ ಓದುತ್ತಿದ್ದಂತೆಯೇ ಅವರಿಗೆ ಅದರ ಬಗ್ಗೆ ಸಂದೇಹ ಮೂಡಿತು. ಆದರೆ ವಿಚಾರಿಸಲು ಈಗಿನಂತೆ ಆಗ ಮೊಬೈಲ್‌ ಫೋನ್‌ ಇರಲಿಲ್ಲವಲ್ಲ! ಎಲ್ಲವೂ ಪತ್ರ ಮುಖೇನವೇ ನಡೆಯಬೇಕಿತ್ತು. ಆದ್ದರಿಂದ ಲಕ್ಷ್ಮಿಯನ್ನು ನೋಡಲು ಬೆಂಗಳೂರಿಗೆ ಬರುವುದಾಗಿ ಮಾವ ಪತ್ರ ಬರೆದಾಗ, ರಾಜಪ್ಪ ಅದರಿಂದ ತಪ್ಪಿಸಿಕೊಳ್ಳಲು ಏನೇನೋ ಸಬೂಬು ಹೇಳಿ ಮರುಪತ್ರ ಬರೆದ.

ಇದರಿಂದ ಲಕ್ಷ್ಮಿಯ ಮಾವನವರಿಗೆ ಸಂದೇಹ ಇನ್ನಷ್ಟು ಬಲವಾಯಿತು. ಅವರು ಈ ಬಗ್ಗೆ ವಿಚಾರಣೆ ನಡೆಸಿದಾಗ ಲಕ್ಷ್ಮಿ ಹಾಗೂ ಆಕೆಯ ಮಗು ನಾಪತ್ತೆಯಾಗಿರುವುದಾಗಿ ತಿಳಿಯಿತು. ಆದರೆ ಕೊಲೆಯಾಗಿದ್ದು ತಿಳಿಯಲಿಲ್ಲ. ಆದ್ದರಿಂದ ಅವರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದರು.

ತನಿಖೆ ನಡೆಸಿದ ಪೊಲೀಸರಿಗೆ ಲಕ್ಷ್ಮಿ ಹಾಗೂ ಮಗುವಿನ ಕೊಲೆಯಾಗಿರುವ ಸಂದೇಹ ಬಂತು. ರಾಜಪ್ಪನನ್ನು ಬಂಧಿಸಿ ವಿಚಾರಿಸಿದಾಗ ತಾನು ತಪ್ಪು ಮಾಡಿದ್ದನ್ನು ಆತ ಒಪ್ಪಿಕೊಂಡ. ತನ್ನ ಪ್ರೇಯಸಿಯ ಸಲುವಾಗಿ ಹೀಗೆ ಮಾಡಿದೆ ಎಂದೂ ಹೇಳಿದ. ಅಷ್ಟೇ ಅಲ್ಲದೆ, ಹೆಂಡತಿ ಮತ್ತು ಮಗುವನ್ನು ಹೂತಿಟ್ಟ ಜಾಗವನ್ನೂ ಪೊಲೀಸರಿಗೆ ತೋರಿಸಿದ.

ಪೊಲೀಸರು ಹಾಗೂ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಅವನು ತೋರಿಸಿದ ಜಾಗವನ್ನು ಅಗೆಯಲಾಯಿತು. ನಾಲ್ಕೈದು ಅಡಿಗಳವರೆಗೆ ಏನೂ ಕಾಣಿಸಲಿಲ್ಲ. ಆನಂತರ ಮೃತರ ಬಟ್ಟೆ ಕಾಣಿಸಿತು. ಶವಗಳ ವೈದ್ಯಕೀಯ ಪರೀಕ್ಷೆ ಮಾಡಲಾಯಿತು. ಅವರನ್ನು ಉಸಿರುಗಟ್ಟಿಸಿ ಸಾಯಿಸಿರುವ ಬಗ್ಗೆ ವೈದ್ಯಕೀಯ ವರದಿಯೂ ಬಂತು.

ಸರಿ, ರಾಜಪ್ಪನ ವಿರುದ್ಧ ಪೊಲೀಸರು ‘ಜೋಡಿ ಕೊಲೆ’ ಪ್ರಕರಣದ ಅಡಿ ದೋಷಾರೋಪ ಪಟ್ಟಿಯನ್ನು ಸಿದ್ಧಪಡಿಸಿ ಕೋರ್ಟ್‌ಗೆ ಸಲ್ಲಿಸಿದರು. ಸೆಷನ್ಸ್ ಕೋರ್ಟ್‌ನಲ್ಲಿ ವಿಚಾರಣೆ ಆರಂಭವಾಯಿತು. ನಾನು ರಾಜಪ್ಪನ ಪರ ವಕಾಲತ್ತು ವಹಿಸಿದ್ದೆ.

ರಾಜಪ್ಪ ತಾನೇ ಕೊಲೆ ಮಾಡಿದ್ದು ಎಂದು ಪೊಲೀಸರ ಎದುರು ಒಪ್ಪಿಕೊಂಡ ಮಾತ್ರಕ್ಕೆ, ಅವನೇ ಅಪರಾಧಿ ಎಂದು ನಮ್ಮ ಕಾನೂನು ಒಪ್ಪಿಕೊಳ್ಳುವುದಿಲ್ಲ. ಕಾನೂನಿಗೆ ಬೇಕಿರುವುದು ಸಾಕ್ಷ್ಯಾಧಾರ ಅಷ್ಟೆ. ಹಲವು ಸಂದರ್ಭಗಳಲ್ಲಿ ಪೊಲೀಸರ ಒತ್ತಾಸೆಗಳಿಗೆ ಮಣಿದು ಆರೋಪಿಗಳು ತಾವೇ ಕೊಲೆ ಮಾಡಿದ್ದು ಎಂದು ಸುಳ್ಳು ಹೇಳುವ ಸಾಧ್ಯತೆ ಇದೆ ಎನ್ನುವ ಕಾರಣವೂ ಒಂದು. ಆದ್ದರಿಂದ ಸಾಕ್ಷ್ಯಾಧಾರ ಸಿಕ್ಕಿಲ್ಲದಿದ್ದರೆ ಅಲ್ಲಿಗೆ ಅಪರಾಧಿಯೂ ನಿರಪರಾಧಿಯೆ. (ಪೊಲೀಸರ ಎದುರು ಆರೋಪಿ ತಪ್ಪು ಒಪ್ಪಿಕೊಂಡರೂ ಕೋರ್ಟ್‌ನಲ್ಲಿ ಹೇಗೆ ಉತ್ತರ ಕೊಡಬೇಕು ಎಂದು ಆತನ ಪರ ವಕೀಲರು ವ್ಯವಸ್ಥೆ ಮಾಡಿರುತ್ತಾರೆ!)

ಇಲ್ಲೂ ಹಾಗೇ ಆಯಿತು. ರಾಜಪ್ಪ ಗುಂಡಿ ತೋಡಿದ್ದ ಬಗ್ಗೆಯಷ್ಟೇ ಸಾಕ್ಷ್ಯಾಧಾರ ಸಿಕ್ಕಿತ್ತು. ಅದನ್ನು ನೋಡಿದ ಕೆಲವರು ಕೋರ್ಟ್‌ನಲ್ಲಿ ಸಾಕ್ಷ್ಯ ಹೇಳಿದರು. ಆದರೆ ರಾಜಪ್ಪನೇ ಕೊಲೆ ಮಾಡಿದ್ದಾನೆ ಎಂಬುದಕ್ಕೆ ಯಾವುದೇ ಪ್ರತ್ಯಕ್ಷ ಸಾಕ್ಷಿಗಳು ಇರಲಿಲ್ಲ. ಸಾಂದರ್ಭಿಕ ಸಾಕ್ಷ್ಯಾಧಾರಗಳ ಮೇಲೆ ಇಡೀ ಪ್ರಕರಣ ನಿಂತಿತ್ತು.  ರಾಜಪ್ಪನೇ ಕೊಲೆ ಮಾಡಿರುವುದು ಪೊಲೀಸರಿಗೆ ಸಂಪೂರ್ಣ ಮನದಟ್ಟಾಗಿದ್ದ ಕಾರಣ, ಪ್ರಕರಣದ ಆಳಕ್ಕೆ ಹೋಗಿದ್ದರೆ ಸರಿಯಾದ ಸಾಂದರ್ಭಿಕ ಸಾಕ್ಷ್ಯಾಧಾರಗಳನ್ನು ಕಲೆ ಹಾಕಬಹುದಿತ್ತೇನೊ.

ಆದರೆ ಹಲವು ಪ್ರಕರಣಗಳಲ್ಲಿ ಆಗುವಂತೆ ಇಲ್ಲೂ ಆಯಿತು. ಪೊಲೀಸರು ಸಾಂದರ್ಭಿಕ ಸಾಕ್ಷ್ಯಾಧಾರಗಳನ್ನು ಕಲೆ ಹಾಕುವಲ್ಲಿ ವಿಫಲರಾದರು. ಹೀಗೆ ಪ್ರಾಸಿಕ್ಯೂಷನ್ ತನ್ನ ವೈಫಲ್ಯ ತೋರಿತ್ತು. ಆದರೆ ಅಲ್ಲಿಗೆ ಸುಮ್ಮನಾಗದಿದ್ದ ಪೊಲೀಸರು ರಾಜಪ್ಪನೇ ಕೊಲೆ ಮಾಡಿದ್ದಾನೆ ಎಂದು ಎತ್ತಿತೋರಿಸುವ ಉತ್ಸಾಹದಿಂದ ಹಲವು ಜನರನ್ನು ಸಾಕ್ಷಿಗಳ ರೂಪದಲ್ಲಿ ಕೋರ್ಟ್‌ಗೆ ಹಾಜರುಪಡಿಸಿದ್ದರು.

ತಮ್ಮ ಕಕ್ಷಿದಾರರನ್ನು ಬಚಾವು ಮಾಡಲು ಇಂಥ ಪ್ರಕರಣಗಳಲ್ಲಿ ಆರೋಪಿಗಳ ಪರ ವಕೀಲರು ಪ್ರಾಸಿಕ್ಯೂಷನ್‌ಗಿಂತ ಹೆಚ್ಚಿಗೆ ಹುಷಾರಾಗಿ ಇರಬೇಕಾಗುತ್ತದೆ. ಪ್ರಾಸಿಕ್ಯೂಷನ್‌ ಪರ ವಕೀಲರು ಚಾಪೆ ಕೆಳಗೆ ನುಸುಳಿದರೆ, ಆರೋಪಿ ಪರ ನಮ್ಮಂಥ ವಕೀಲರು ರಂಗೋಲಿ ಕೆಳಗೆ ನುಸುಳುತ್ತೇವೆ. ಇದು ಪೊಲೀಸರಿಗೆ ತಿಳಿದೇ ಇರುತ್ತದೆ. ಅಂಥ ಸಂದರ್ಭಗಳಲ್ಲಿ ಅವರು ಇನ್ನಷ್ಟು ಜಾಗರೂಕರಾಗಿ ಇರಬೇಕಾಗುತ್ತದೆ. ಆದರೆ ಹೆಚ್ಚಿನ ಪ್ರಕರಣಗಳಲ್ಲಿ ಹಾಗೆ ಆಗುತ್ತಿಲ್ಲ.

ಈ ಘಟನೆಗೆ ಬರುವುದಾದರೆ, ಪೊಲೀಸರ ಅತ್ಯುತ್ಸಾಹದ ಎಡವಟ್ಟುಗಳನ್ನು ಅನೇಕ ಪ್ರಕರಣಗಳಲ್ಲಿ ಕಂಡುಕೊಂಡ ರಾಜಪ್ಪನ ವಿರುದ್ಧ ಅವರು ಕರೆತಂದಿದ್ದ ಸಾಕ್ಷಿಗಳ ಪೈಕಿ ಕೆಲವು ಸುಳ್ಳು ಸಾಕ್ಷಿಗಳು ಎಂದು ಕಂಡುಹಿಡಿಯಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಅವರನ್ನು ಪಾಟಿ ಸವಾಲಿಗೆ ಒಳಪಡಿಸಿದೆ.

ಒಂದರ ಮೇಲೊಂದರಂತೆ ಕೇಳಿದ ಪ್ರಶ್ನೆಗಳಿಗೆ ಅವರು ಸರಿಯಾದ ಉತ್ತರ ನೀಡಲಿಲ್ಲ. ಇಂಥ ಪ್ರಕರಣಗಳಲ್ಲಿ, ಘಟನೆ ನಡೆಯುವುದಕ್ಕೆ ಕಾರಣಗಳಿಂದ ಹಿಡಿದು ಘಟನೆ ನಡೆದ ನಂತರದ ಎಲ್ಲಾ ವಿಷಯಗಳಲ್ಲಿಯೂ ಕೊಂಡಿ ಬೆಸೆದುಕೊಂಡಿರಬೇಕು. ಒಂದೇ ಒಂದು ಕೊಂಡಿ ಕಳಚಿದಂತೆ ತೋರಿದರೂ ಆರೋಪಿಗಳಿಗೆ  ಕೋರ್ಟ್‌ ಶಿಕ್ಷೆ ವಿಧಿಸುವುದಿಲ್ಲ. ಹಾಗೆಯೇ, ಈ ಪ್ರಕರಣದಲ್ಲಿ ನಾನು ಪಾಟಿ ಸವಾಲು ಮಾಡಿದ ಕೆಲವು ಸಾಕ್ಷಿಗಳು ಸುಳ್ಳು ಹೇಳುತ್ತಿದ್ದಾರೆ ಎಂದು ಕೋರ್ಟ್‌ಗೆ ತಿಳಿಯಿತು.

ನಮಗೆ ನಮ್ಮ ಕಕ್ಷಿದಾರರನ್ನು ಬಚಾವು ಮಾಡಬೇಕು ಅಷ್ಟೆ. ಉಳಿದಿದ್ದೆಲ್ಲ ಗೌಣ. ಆದ್ದರಿಂದ ರಾಜಪ್ಪ ಕೊಲೆ ಮಾಡಿರುವುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದ ಬಗ್ಗೆ ಕೋರ್ಟ್‌ಗೆ ಮನವರಿಕೆ ಮಾಡಿದೆ. ಕೋರ್ಟ್ ನನ್ನ ವಾದವನ್ನು ಒಪ್ಪಿ ರಾಜಪ್ಪ ನಿರಪರಾಧಿ ಎಂದು ಆದೇಶಿಸಿತು.

ಈ ಆದೇಶವನ್ನು ಸರ್ಕಾರ (ಪ್ರಾಸಿಕ್ಯೂಷನ್) ಹೈಕೋರ್ಟ್‌ನಲ್ಲಿ ಪ್ರಶ್ನಿಸಿತು. ರಾಜಪ್ಪನ ಮೇಲೆ ಪೊಲೀಸರಿಗೆ ಸಂದೇಹವಿತ್ತೇ ವಿನಾ ಅವನ ವಿರುದ್ಧ ಸೂಕ್ತ ಸಾಕ್ಷ್ಯಾಧಾರ ಇಲ್ಲದೇ ಇದ್ದುದರಿಂದ ಇಲ್ಲಿಯೂ ಅವರಿಗೆ ಸೋಲು ಆಯಿತು. ರಾಜಪ್ಪ ಅಗೆದ ಗುಂಡಿಯಲ್ಲಿ ಶವ ಸಿಕ್ಕ ಮಾತ್ರಕ್ಕೆ ಅವನೇ ಕೊಲೆ ಮಾಡಿದ್ದಾನೆ ಎಂಬ ಬಗ್ಗೆ ಊಹಿಸಲು ಸಾಧ್ಯವಿಲ್ಲ. ರಾಜಪ್ಪನೇ ಹೇಳಿರುವಂತೆ ಆತ ಗುಂಡಿಯನ್ನು ಅಗೆದಿದ್ದು ಕಸ ತುಂಬಲು ಮಾತ್ರ ಎಂಬುದಾಗಿ ಕೋರ್ಟ್‌ಗೆ ತಿಳಿಸಿದೆ.

ರಾಜಪ್ಪನೇ ಕೊಲೆ ಮಾಡಿರುವ ಬಗ್ಗೆ ತಮಗೆ ಸಿಕ್ಕ ಸಾಕ್ಷ್ಯಾಧಾರಗಳ ಮೇಲೆಯೇ ಪ್ರಾಸಿಕ್ಯೂಷನ್‌ ಪರ ವಕೀಲರು ವಾದಿಸಿದರು. ವಾದ, ಪ್ರತಿವಾದ ಆಲಿಸಿದ ಹೈಕೋರ್ಟ್‌ ವಿಭಾಗೀಯ ಪೀಠಕ್ಕೆ ರಾಜಪ್ಪನೇ ಕೊಲೆ ಮಾಡಿದ್ದು ಎಂಬ ಬಗ್ಗೆ ಬಹುತೇಕ ಖಚಿತವಾಗಿತ್ತು. ಆದರೆ ಮೊದಲೇ ಹೇಳಿದಂತೆ ಖಚಿತ ಸಾಕ್ಷ್ಯಾಧಾರ ಇರಲಿಲ್ಲ. ಕೇವಲ ಊಹೆಯ ಆಧಾರದ ಮೇಲೆ ಆರೋಪಿಗೆ ಶಿಕ್ಷೆ ವಿಧಿಸುವುದು ಉಚಿತವಲ್ಲ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟು, ಸೆಷನ್ಸ್ ಕೋರ್ಟ್ ಆದೇಶವನ್ನು ಎತ್ತಿಹಿಡಿದರು. ಇಲ್ಲಿಯೂ ರಾಜಪ್ಪನಿಗೆ ಜಯವಾಯಿತು. ಪ್ರಾಸಿಕ್ಯೂಷನ್ ಅಷ್ಟಕ್ಕೇ ಸುಮ್ಮನಾಗಲಿಲ್ಲ.

ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತು. ಆದರೆ ಅಲ್ಲಿಯೂ ಅಪಜಯವನ್ನೇ ಎದುರಿಸಬೇಕಾಯಿತು. ರಾಜಪ್ಪ ‘ನಿರಪರಾಧಿ’ಯಾದ. ‘ಜೋಡಿ ಕೊಲೆ’ ಪ್ರಕರಣ ಅಲ್ಲಿಗೆ ಮುಗಿಯಿತು.

ಇಲ್ಲಿ ಒಂದು ಮಾತನ್ನು ಹೇಳಲೇಬೇಕು. ಸಾಮಾನ್ಯವಾಗಿ ಇಂಥ ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್ ವೈಫಲ್ಯ ಎಂದು ಹೇಳಿಬಿಡುತ್ತೇವೆ. ಆದರೆ ಅವರಿಗೂ ಅವರದ್ದೇ ಆದ ವ್ಯಾಪ್ತಿ ಇರುತ್ತದೆ. ಅದೇನೆಂದರೆ ಕಾನೂನಿನ ಪ್ರಕಾರ, ಜೀವಾವಧಿ ಶಿಕ್ಷೆ ಅಥವಾ ಗಲ್ಲು ಶಿಕ್ಷೆಯಾಗುವಂಥ ಪ್ರಕರಣಗಳಲ್ಲಿ, ಆರೋಪಿಯ ವಿರುದ್ಧ ಘಟನೆ ನಡೆದ 90 ದಿನಗಳ ಒಳಗೆ ದೋಷಾರೋಪ ಪಟ್ಟಿ ಸಿದ್ಧಪಡಿಸಬೇಕು (ಉಳಿದ ಪ್ರಕರಣಗಳಲ್ಲಿ 60 ದಿನಗಳ ಒಳಗೆ ಸಿದ್ಧಪಡಿಸಬೇಕು).

ಒಂದು ವೇಳೆ ಈ ಅವಧಿಯ ಒಳಗೆ ದೋಷಾರೋಪ ಪಟ್ಟಿಯನ್ನು ಸಿದ್ಧಪಡಿಸದೇ ಹೋದರೆ, ಕೋರ್ಟ್‌ನಿಂದ ಆರೋಪಿ ಜಾಮೀನು ಪಡೆದುಕೊಳ್ಳಬಹುದು. ಆದ್ದರಿಂದ ಎದ್ದೆನೋ ಬಿದ್ದೆನೋ ಎಂದು ಪೊಲೀಸರು ಆ ಸಂದರ್ಭದಲ್ಲಿ ಸಿಕ್ಕಷ್ಟು ಸಾಕ್ಷ್ಯಾಧಾರಗಳನ್ನು ಕಲೆಹಾಕಿ ಕೋರ್ಟ್‌ನಲ್ಲಿ ಆರೋಪಿ ವಿರುದ್ಧ ದೋಷಾರೋಪ ಪಟ್ಟಿಯನ್ನು ಸಲ್ಲಿಸುತ್ತಾರೆ.

ಅವರು ಇಚ್ಛೆ ಪಟ್ಟಲ್ಲಿ ಪ್ರಕರಣದ ಆಳಕ್ಕೆ ಹೋಗಿ ಆರೋಪಿ ತಪ್ಪಿಸಿಕೊಳ್ಳದ ರೀತಿಯಲ್ಲಿ ಸಾಕ್ಷ್ಯಾಧಾರಗಳನ್ನು ಕಲೆಹಾಕಬಹುದು. ತಮ್ಮ ಅನುಭವದ ಆಧಾರದ ಮೇಲೆ ಅವರು ಹೆಚ್ಚು ಜಾಗರೂಕರಾಗಿ ಇರಬೇಕಾಗುತ್ತದೆ. ಆದರೆ ಅದು ಆಗುತ್ತಿಲ್ಲ. ಪ್ರಕರಣಗಳ ಆಳಕ್ಕೆ ಹೋಗದೆ ಸಿಕ್ಕ ಸಾಕ್ಷ್ಯಾಧಾರಗಳ ಮೇಲೆಯೇ ಕೇಸನ್ನು ಮುಂದುವರಿಸುತ್ತಾರೆ, ತಮ್ಮ ಕೇಸನ್ನು ಬಲಪಡಿಸಲು ಈ ಪ್ರಕರಣದಲ್ಲಿ ಆದಂತೆಯೇ ಒಂದಿಷ್ಟು ಸುಳ್ಳು ಸಾಕ್ಷ್ಯ ಹಾಗೂ ಸಾಕ್ಷಿಗಳನ್ನು ಸೃಷ್ಟಿಸುತ್ತಾರೆ. ಅಂಥ ಎಡವಟ್ಟುಗಳೇ ನಮ್ಮಂಥ ವಕೀಲರಿಗೆ ವರದಾನವಾಗುತ್ತವೆ.

ರಾಜಪ್ಪ ಕೊಲೆ ಮಾಡಿದ್ದಾನೆ ಎಂದು ಯಾವ ದಿಕ್ಕಿನಿಂದ ನೋಡಿದರೂ ತಿಳಿಯುತ್ತಿತ್ತು. ಆದರೆ ಪೊಲೀಸರು ವಿಫಲರಾದರು. ಅಪರಾಧಿ (ಕಾನೂನು ಭಾಷೆಯಲ್ಲಿ ಆರೋಪಿ ಅಷ್ಟೆ) ತಪ್ಪಿಸಿಕೊಂಡ.  ಪೊಲೀಸರು ಜಾಗೃತರಾಗದ ಹೊರತು, ಸೆಷನ್ಸ್‌ ಕೋರ್ಟ್‌ನಿಂದ ಸುಪ್ರೀಂ ಕೋರ್ಟ್‌ವರೆಗೆ ಹತ್ತಾರು ವರ್ಷ ಪ್ರಕರಣಗಳನ್ನು ಎಳೆದಾಡಿದರೂ  ಅಪರಾಧಿಗಳು ನಿರಪರಾಧಿಗಳಾಗಿಯೇ ಉಳಿಯುತ್ತಾರೆ ಎನ್ನುವುದಕ್ಕೆ ಇಂಥ ಪ್ರಕರಣ ಸಾಕ್ಷಿಯಾಗಿ ಉಳಿಯುತ್ತದೆ.

ಎಲ್ಲರ ಹೆಸರು ಬದಲಾಯಿಸಲಾಗಿದೆ
(ಲೇಖಕ ಹೈಕೋರ್ಟ್‌ ವಕೀಲ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT