ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಕ್ಷ್ಮ ಸಂವೇದನೆಯ ಅರ್ಥಶಾಸ್ತ್ರಜ್ಞ ಉರ್ಜಿತ್‌

ವ್ಯಕ್ತಿ
Last Updated 27 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಗ್ರಾಹಕ ದರ ಹಣದುಬ್ಬರವನ್ನು ಮೂಲವಾಗಿ ಇಟ್ಟುಕೊಂಡೇ ಹಣದುಬ್ಬರ ನಿಯಂತ್ರಿಸುವ ಕ್ರಮಗಳನ್ನು ಕೈಗೊಳ್ಳಬೇಕು, ಹಣಕಾಸು ನೀತಿಯನ್ನು ಆರ್‌ಬಿಐ ಗವರ್ನರ್‌ ಬದಲು ಸಮಿತಿ ನಿರ್ಧರಿಸಬೇಕು ಎಂದು ಬಲವಾಗಿ ಪ್ರತಿಪಾದಿಸಿದ್ದ ವ್ಯಕ್ತಿಯೇ ಇಂದು ಆರ್‌ಬಿಐ ಚುಕ್ಕಾಣಿ ಹಿಡಿದಿದ್ದಾರೆ. ರಘುರಾಂ ರಾಜನ್‌ ಬಳಿಕ ಅಷ್ಟೇ ಸಮರ್ಥವಾಗಿ ಬಿಗಿ ಹಣಕಾಸು ನೀತಿಯನ್ನು ಮುಂದುವರಿಸುವವರು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಉರ್ಜಿತ್‌ ಆರ್. ಪಟೇಲ್‌ ಮುಂದಿನ ಆರ್‌ಬಿಐ ಗವರ್ನರ್‌ ಎಂಬ ಪ್ರಕಟಣೆ ಹೊರಬಿದ್ದಾಗ ‘ಇವರು ಗುಜರಾತ್‌ನವರು, ಮೋದಿಯವರ ಶಿಷ್ಯ ಇರಬೇಕು’ ಎಂದು ತಕ್ಷಣಕ್ಕೆ ಭಾವಿಸಿದವರೇ ಅಧಿಕ. ಏಕೆಂದರೆ ಅವರ ಹೆಸರನ್ನು ಕೇಳಿದವರು ಕಡಿಮೆ. ಒಮ್ಮಿಂದೊಮ್ಮೆಲೆ ‘ಪಟೇಲ್‌’ ಎಂಬ ಶಬ್ದ ಕಿವಿಗೆ ಬಿದ್ದಾಗ ಗುಜರಾತ್‌ನ ನೆನಪು ಬಂದಿತ್ತು. ಆದರೆ ಅವರು ಎಂತಹ ಅರ್ಥಶಾಸ್ತ್ರಜ್ಞ ಎಂಬುದಕ್ಕೆ ಮಾಜಿ ಪ್ರಧಾನಿ ಹಾಗೂ ಆರ್ಥಿಕ ತಜ್ಞ ಡಾ. ಮನಮೋಹನ್‌ ಸಿಂಗ್‌ ಅವರೇ 2013ರಲ್ಲಿ ಸಾಕ್ಷಿ ಹೇಳಿಬಿಟ್ಟಿದ್ದರು. ಉರ್ಜಿತ್‌ ಅವರಿಗೆ ಆರ್‌ಬಿಐ ಡೆಪ್ಯುಟಿ ಗವರ್ನರ್‌ ಹುದ್ದೆ ನೀಡಲು ಮುಂದಾದಾಗ ಅವರ ಪರವಾಗಿ ಶಿಫಾರಸು ಮಾಡಿದವರು ಸ್ವತಃ ಮನಮೋಹನ್‌ ಸಿಂಗ್‌. ‘ದೇಶಕ್ಕೆ ಅವರು ಬಹಳ ಮುಖ್ಯ’ ಎಂಬ ಅವರ ಒಂದು ಸಾಲಿನ ಹೇಳಿಕೆಯಲ್ಲಿ ಎಲ್ಲವೂ ಅಡಗಿತ್ತು.

ಹೆಸರೇ ಕೇಳಿರದ ವ್ಯಕ್ತಿ ನೋಟುಗಳ ಮೇಲೆ ಸಹಿ ಹಾಕುವ ಅಧಿಕಾರ ಪಡೆದಿದ್ದಾರೆ ಎಂದು ಭಾವಿಸಿದರೆ ಅದು ದೊಡ್ಡ ತಪ್ಪು. ಅವರ ಅಗಾಧ ಆರ್ಥಿಕ ಜ್ಞಾನ, ನೀತಿ ರೂಪಿಸುವ ತಾಕತ್ತಿನಿಂದಾಗಿಯೇ ಅವರು ಪಿ.ವಿ.ನರಸಿಂಹ ರಾವ್‌, ಮನಮೋಹನ್ ಸಿಂಗ್ ಮಾತ್ರವಲ್ಲ, ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರಿಂದಲೂ ಪ್ರಶಂಸೆಗೆ ಒಳಗಾದವರು. ‘ಈ ಹುದ್ದೆಗೆ ಏರುವವರಿಗೆ ಬೇಕಾದುದು ರಾಷ್ಟ್ರೀಯತೆಗಿಂತಲೂ ಮಿಗಿಲಾಗಿ ಪ್ರತಿಭೆ’ ಎಂದು ಪ್ರಧಾನಿ ನರೇಂದ್ರ ಮೋದಿ ಷರಾ ಬರೆದಾಗಲೂ ಅಲ್ಲಿ ಕಂಡದ್ದು ಉರ್ಜಿತ್‌ ಅವರ ಸಾಮರ್ಥ್ಯ ಮಾತ್ರ.

ಉರ್ಜಿತ್‌ ಹುಟ್ಟಿದ್ದು 1963ರ ಅಕ್ಟೋಬರ್‌ 28ರಂದು ಕೆನ್ಯಾದ ನೈರೋಬಿಯಲ್ಲಿ. ಅವರದು ಸಣ್ಣ ಉದ್ಯಮಿಗಳ ಕುಟುಂಬ. ಸುಮಾರು 100 ವರ್ಷಗಳ ಹಿಂದೆ ಗುಜರಾತ್‌ನಿಂದ ಕೆನ್ಯಾಗೆ ಬಂದ ಅವರ ತಾತ ನೈರೋಬಿಯಲ್ಲಿ ಬಿಡಿ ಭಾಗಗಳ ವಹಿವಾಟು ಆರಂಭಿಸಿದರು. ಅದರಲ್ಲಿ ಯಶಸ್ವಿಯೂ ಆದರು. ಉರ್ಜಿತ್‌ ಅವರ ತಂದೆ ಸಹ ಹುಟ್ಟಿದ್ದು ಕೆನ್ಯಾದಲ್ಲಿ. ಕೆನ್ಯಾದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ಉರ್ಜಿತ್‌ ಉನ್ನತ ಶಿಕ್ಷಣಕ್ಕೆ ಕಾಲಿಟ್ಟದ್ದು ಬ್ರಿಟನ್‌ಗೆ. ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನಲ್ಲಿ ಪದವಿ ಗಳಿಸಿದ ಅವರು 1986ರಲ್ಲಿ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಿಂದ ಎಂ.ಫಿಲ್. ಪಡೆದರು. ಡಾಕ್ಟರೇಟ್‌ಗಾಗಿ ಅಮೆರಿಕಕ್ಕೆ ತೆರಳಿದ ಅವರು 1990ರಲ್ಲಿ ಯೇಲ್‌ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ. ಪಡೆದರು.

ಉನ್ನತ ವ್ಯಾಸಂಗದ ಬಳಿಕ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಸಂಸ್ಥೆಯಲ್ಲಿ ಉದ್ಯೋಗಕ್ಕೆ ಸೇರಿಕೊಂಡ ಉರ್ಜಿತ್‌ ಪಟೇಲ್‌ ಭಾರತದಲ್ಲಿ ನಡೆಯುತ್ತಿದ್ದ ಆರ್ಥಿಕ ಉದಾರೀಕರಣವನ್ನು ಬಹಳ ಕುತೂಹಲದಿಂದ ಗಮನಿಸುತ್ತ ಬಂದರು. 1995ರವರೆಗೆ ಅವರು ಐಎಂಎಫ್‌ನ ಅಮೆರಿಕ, ಭಾರತ, ಬಹಮಾಸ್‌ ಮತ್ತು ಮ್ಯಾನ್ಮಾರ್‌ ವಿಭಾಗಗಳಲ್ಲಿ ಕೆಲಸ ಮಾಡಿದರು. ಬಳಿಕ ಅವರು ಪದನಿಯೋಜನೆ ಮೇರೆಗೆ ಆರ್‌ಬಿಐಗೆ ಬಂದರು. ಎರಡು ವರ್ಷ ಕೆಲಸ ಮಾಡಿದ ಅವರು ಆಗಲೇ ತಮ್ಮ ಪ್ರತಿಭೆಯನ್ನು ಹೊರಗೆಡಹಿದ್ದರು. ಹೀಗಾಗಿ ಅವರನ್ನು 1998ರಲ್ಲಿ ಹಣಕಾಸು ಸಚಿವಾಲಯದ ಸಲಹೆಗಾರರನ್ನಾಗಿ ನಿಯೋಜಿಸಲಾಯಿತು.

2000ನೇ ಇಸವಿಯಿಂದ 2004ರವರೆಗೆ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಟ್ಟದಲ್ಲಿ ಹಲವಾರು ಉನ್ನತ ಮಟ್ಟದ ಸಮಿತಿಗಳಲ್ಲಿ ಕೆಲಸ ಮಾಡಿದರು. ಬಾಸ್ಟನ್‌ ಕನ್ಸಲ್ಟಿಂಗ್‌ ಗ್ರೂಪ್‌ನ ಇಂಧನ ಮತ್ತು ಮೂಲಸೌಲಭ್ಯ ವಿಭಾಗದ ಸಲಹೆಗಾರರಾಗಿದ್ದ ಉರ್ಜಿತ್‌, 1997ರಿಂದ 2006ರವರೆಗೆ ರಿಲಯನ್ಸ್‌ ಇಂಡಸ್ಟ್ರೀಸ್‌ನ ವಹಿವಾಟು ಅಭಿವೃದ್ಧಿ ವಿಭಾಗದ ಅಧ್ಯಕ್ಷರಾಗಿದ್ದರು. 2005ರಲ್ಲಿ ಗುಜರಾತ್‌ನ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಉರ್ಜಿತ್‌ ಅವರನ್ನು ಗುಜರಾತ್‌ ರಾಜ್ಯ ಪೆಟ್ರೋಲಿಯಂ ನಿಗಮದ ಕಾರ್ಯನಿರ್ವಾಹಕೇತರ ನಿರ್ದೇಶಕರನ್ನಾಗಿ ನಿಯುಕ್ತಿಗೊಳಿಸಿದ್ದರು. 2009ರಲ್ಲಿ ಯುಪಿಎ ಸರ್ಕಾರದ ಎರಡನೇ ಅವಧಿ ಆರಂಭದಲ್ಲಿ 100 ದಿನಗಳ ಕ್ರಿಯಾ ಯೋಜನೆಯ ಪರಿಶೀಲನೆಗಾಗಿ ಪರಿಣತರ ತಂಡವನ್ನು ರಚಿಸಲಾಗಿತ್ತು. ಉರ್ಜಿತ್‌ ಅವರು ಆಗ ಟಿ.ವಿ.ಯಲ್ಲಿ ಸರ್ಕಾರದ ಯೋಜನೆಗಳ ವಿಶ್ಲೇಷಣಕಾರರಾಗಿ ಗಮನ ಸೆಳೆದಿದ್ದರು.

ಉರ್ಜಿತ್‌ ಅವರು ಆರ್‌ಬಿಐಗೆ ಹತ್ತಿರವಾದುದು 2012ರಲ್ಲಿ. ಹಣದುಬ್ಬರ ನಿಯಂತ್ರಿಸುವ ನಿಟ್ಟಿನಲ್ಲಿ ಗಂಗಾಧರ್‌ ದರ್ಭಾ ಅವರೊಂದಿಗೆ ಸೇರಿಕೊಂಡು ಸಿದ್ಧಪಡಿಸಿದ ವರದಿ ಅವರ ಸೂಕ್ಷ್ಮ ಸಂವೇದನೆಗೆ ಸಾಕ್ಷಿಯಾಯಿತು. ಅದುವೇ ಅವರನ್ನು ಆರ್‌ಬಿಐ ಡೆಪ್ಯುಟಿ ಗವರ್ನರ್‌ ಹುದ್ದೆಗೆ ತಂದು ನಿಲ್ಲಿಸಿತು.
2013ರ ಸೆಪ್ಟೆಂಬರ್‌ನಲ್ಲಿ ರಘುರಾಂ ರಾಜನ್‌ ಅವರು ಆರ್‌ಬಿಐ ಗವರ್ನರ್ ಆದ ವಾರದೊಳಗೆ ಭಾರತದ ಹಣಕಾಸು ನೀತಿ ಚೌಕಟ್ಟನ್ನು ಪರಿಷ್ಕರಿಸುವುದಕ್ಕಾಗಿ ಪರಿಣತರ ಸಮಿತಿಯೊಂದನ್ನು ರಚಿಸಿದರು. ಆ ಸಮಿತಿಯ ಅಧ್ಯಕ್ಷರಾಗಿದ್ದವರು ಉರ್ಜಿತ್‌. ಈ ಸಮಿತಿ 2014ರ ಜನವರಿಯಲ್ಲಿ ತನ್ನ ವರದಿ ಸಲ್ಲಿಸಿತ್ತು. ಮುಂದಿನ ಎರಡು ವರ್ಷಗಳಲ್ಲಿ ರಘುರಾಂ ರಾಜನ್ ಜಾರಿಗೆ ತಂದುದು ಈ ಸಮಿತಿಯ ಶಿಫಾರಸುಗಳನ್ನೇ.

ಗ್ರಾಹಕ ದರ ಹಣದುಬ್ಬರ ಆಧರಿಸಿ ಹಣದುಬ್ಬರ ನಿಯಂತ್ರಿಸುವ ಧೋರಣೆಯನ್ನು ಆರ್‌ಬಿಐ ತಳೆಯಬೇಕು ಎಂಬುದು ಸಮಿತಿಯ ಮುಖ್ಯ ಶಿಫಾರಸಾಗಿತ್ತು. ಅದನ್ನು ರಾಜನ್‌ ಜಾರಿಗೆ ತಂದರು. ಉರ್ಜಿತ್‌ ಅವರ ಡೆಪ್ಯುಟಿ ಗವರ್ನರ್ ಅವಧಿ ಇದೇ ಜನವರಿಯಲ್ಲಿ ಕೊನೆಗೊಂಡಿತ್ತು. ಆದರೆ ಅವರ ಸೇವೆಯನ್ನು ವಿಸ್ತರಿಸಲಾಯಿತು. ಗವರ್ನರ್‌ ಹುದ್ದೆಯ ರೇಸ್‌ನಲ್ಲಿದ್ದ ಅರವಿಂದ ಸುಬ್ರಹ್ಮಣ್ಯನ್‌ ಮತ್ತು ಕೌಶಿಕ್‌ ಬಸು ಅವರನ್ನು ಹಿಂದಿಕ್ಕಿ ಉರ್ಜಿತ್ ಈ ಪ್ರತಿಷ್ಠಿತ ಹುದ್ದೆಗೇರಿದ್ದಾರೆ.

ಡೆಪ್ಯುಟಿ ಗವರ್ನರ್‌ ಆಗಿದ್ದು ಗವರ್ನರ್‌ ಆದ ಎಂಟನೇ ವ್ಯಕ್ತಿ ಉರ್ಜಿತ್‌. ಆದರೆ 70 ವರ್ಷಗಳಲ್ಲಿ, ಡೆಪ್ಯುಟಿ ಗವರ್ನರ್‌ ಹುದ್ದೆಯಿಂದ ನೇರವಾಗಿ ಪೂರ್ಣಪ್ರಮಾಣದ ಗವರ್ನರ್‌ ಹುದ್ದೆಗೇರಿದ ಪ್ರಥಮ ಆರ್ಥಿಕ ತಜ್ಞ ಎಂಬ ಹೆಗ್ಗಳಿಕೆ ಇವರದು.

ಉರ್ಜಿತ್‌ ಅವರ ಆಳವಾದ ಆರ್ಥಿಕ ಜ್ಞಾನ ಅವರನ್ನು ಬ್ರಿಕ್ಸ್‌ ಬ್ಯಾಂಕ್‌ನ ಅಧ್ಯಕ್ಷ ಸ್ಥಾನಕ್ಕೆ ಕೈಬೀಸಿ ಕರೆದಿತ್ತು. ಆದರೆ ಅಮ್ಮನ ಸೆಳೆತ ಅವರನ್ನು ಈ ಪ್ರತಿಷ್ಠಿತ ಹುದ್ದೆಯಿಂದ ದೂರ ಇಟ್ಟಿತು. ಕೆಲವು ವರ್ಷಗಳ ಹಿಂದೆ ಅಪ್ಪ ತೀರಿ ಹೋಗಿದ್ದಾರೆ, ಏಕಾಂಗಿಯಾಗಿರುವ ಅಮ್ಮನ ಜತೆಯಲ್ಲಿ ತಾನಿರಬೇಕು ಎಂಬುದು ಅವರ ತುಡಿತವಾಗಿತ್ತು. ಬ್ರಿಕ್ಸ್‌ ಬ್ಯಾಂಕ್‌ ಅಧ್ಯಕ್ಷನಾದರೆ ಚೀನಾದ ಶಾಂಘೈಗೆ ಹೋಗಬೇಕು, ಅಮ್ಮ ಏಕಾಂಗಿಯಾಗುತ್ತಾರೆ, ಹೀಗಾಗಿ ಆ ಹುದ್ದೆಯೇ ಬೇಡ ಎಂದು ಹೇಳಿ ಮುಂಬೈಯಲ್ಲೇ ಉಳಿದರು.

ಅಮ್ಮನ ಕಾಳಜಿ ಅವರನ್ನು ಮತ್ತೆ ಮೂರು ವರ್ಷ ಮುಂಬೈಯಲ್ಲಿ ನೆಲೆಸುವಂತೆ ಮಾಡಿಬಿಟ್ಟಿದೆ. ₹6.3 ಲಕ್ಷ ಕೋಟಿಯಷ್ಟು ಸಾಲದ ಹಣ ವಾಪಸ್‌ ಬಾರದೆ ಬ್ಯಾಂಕ್‌ಗಳು ತಲೆಮೇಲೆ ಕೈಹೊತ್ತು ಕುಳಿತಿರುವ ಹೊತ್ತಿನಲ್ಲೇ, ರಘುರಾಂ ರಾಜನ್‌ ಅವರು ಆರಂಭಿಸಿರುವ ಹಣದುಬ್ಬರ ನಿಯಂತ್ರಣ ಕ್ರಮಗಳನ್ನು ಉರ್ಜಿತ್‌ ಮುಂದುವರಿಸುತ್ತಾರೆ ಎಂಬ ವಿಶ್ವಾಸವನ್ನಂತೂ ದೇಶ ಇಟ್ಟುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT