ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಸಳೆ ದೇವತೆಯ ಕೊಮ್ ಒಂಬೋ

Last Updated 27 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಈಜಿಪ್ಟ್‌ನ ಆಸ್ವಾನ್‌ನಿಂದ ಉತ್ತರ ದಿಕ್ಕಿಗೆ 50 ಕಿ.ಮೀ. ದೂರದಲ್ಲಿ ನೈಲ್‌ ನದಿಯ ದಂಡೆಯಲ್ಲಿರುವ ಪುರಾತನ ನಗರ ಕೊಮ್‌ ಒಂಬೋ. ಇದು ಮೊಸಳೆ ದೇವತೆಯ ದೇವಾಲಯಕ್ಕೆ ಪ್ರಸಿದ್ಧವಾದುದು. ಹಿಂದೆ ಉನ್ನತ ಸ್ಥಿತಿಯಲ್ಲಿದ್ದ ನಗರ ಹಾಗೂ ದೇವಾಲಯದ ಅವಶೇಷಗಳು ಮಾತ್ರ ಈಗ ಅಲ್ಲಿ ಉಳಿದಿವೆ.

ಹಿಂದೆ ಸಾಕಷ್ಟು ಸಂಖ್ಯೆಯಲ್ಲಿ ನದಿ ದಂಡೆಯಲ್ಲಿ ಬಿಸಿಲು ಕಾಯಿಸಿಕೊಳ್ಳುತ್ತಿದ್ದ ಮೊಸಳೆಗಳನ್ನೂ ಬೇಟೆಯಾಡಿ ಮುಗಿಸಲಾಗಿದೆ. ಈಗ ಪ್ರವಾಸಿಗರ ಪಾಲಿಗೆ ಉಳಿದಿರುವುದು ಪುರಾತನ ದೇವಾಲಯದ ಉಳಿದ ಭಾಗ ಮತ್ತು ‘ಮಮ್ಮೀ’ಕರಿಸಿರುವ ಮೊಸಳೆಗಳ ಸಂಗ್ರಹಾಲಯ!

ಈ ದೇವಾಲಯವು ಟಾಲೆಮಿಗಳ ಕಾಲದ್ದು. ಈಜಿಪ್ಟ್‌ನ ಫೆರೋಗಳ ನಂತರ ಅಧಿಕಾರದಲ್ಲಿದ್ದ ಗ್ರೀಕ್‌ ಮೂಲದ ಆರನೇ ಟಾಲೆಮಿ (ಕ್ರಿ.ಪೂ. 180–145) ನಿರ್ಮಿಸಲು ಪ್ರಾರಂಭಿಸಿದ ಈ ದೇವಾಲಯ ರೋಮನ್ನರ ಕಾಲದಲ್ಲಿ ಮುಕ್ತಾಯವಾಯಿತು. ಜೋಡಿ ದೇವಾಲಯ ಎನ್ನುವುದು ಇದರ ವಿಶೇಷಗಳಲ್ಲೊಂದು.

ಅದಕ್ಕಾಗಿಯೇ ಇದನ್ನು ‘ಟೆಂಪಲ್ ಆಫ್ ಟೂ ಗಾಡ್ಸ್’ ಎನ್ನುತ್ತಾರೆ. ಮೊಸಳೆ ರೂಪದ ದೇವರಾದ ಸೋಬೆಕ್‌ ಮತ್ತು ಗಿಡುಗನ ಮುಖದ ಹೋರಸ್‌ ದೇವರುಗಳ ಜಂಟಿ ದೇವಾಲಯವನ್ನು ತದ್ರೂಪವಾಗಿ ನಿರ್ಮಿಸಲಾಗಿದೆ.

ದೇವಾಲಯವನ್ನು ಎರಡು ಭಾಗಗಳಾಗಿ ವಿಂಗಡಿಸಿದ್ದು – ಒಂದೇ ರೀತಿಯ ವಿನ್ಯಾಸ, ಕೆತ್ತನೆ, ಕಂಬ, ತೊಲೆ, ದ್ವಾರ ಎರಡೂ ಭಾಗಗಳಲ್ಲಿದೆ. ನೈಲ್‌ ನದಿಯ ದಂಡೆಯಲ್ಲಿರುವುದು ಕೂಡ ಈ ದೇವಾಲಯದ ಸೌಂದರ್ಯ ಇಮ್ಮಡಿಯಾಗಲು ಕಾರಣವಾಗಿದೆ.

ಬಾನು ಮತ್ತು ಭೂಮಿ
ಭಾರತದ ಸಂಸ್ಕೃತಿಯಲ್ಲಿ ವೈವಿಧ್ಯಮಯ ದೇವದೇವತೆಗಳಿರುವಂತೆ ಪುರಾತನ ಈಜಿಪ್ಟ್ ಸಂಸ್ಕೃತಿಯಲ್ಲೂ ಹಲವಾರು ದೇವದೇವತೆಗಳನ್ನು ಕಾಣಬಹುದು. ‘ನಿನ್ನದೆ ನೆಲ ನಿನ್ನದೆ ಜಲ, ನಿನ್ನದೆ ಆಕಾಶ, ಕಿಂಚಿತ್ತೂ ಅನುಮಾನಕೆ ಇಲ್ಲವೊ ಅವಕಾಶ’ ಎಂಬ ಜಿ.ಎಸ್‌. ಶಿವರುದ್ರಪ್ಪನವರ ಕವನದಂತೆ, ಬಾನು ಮತ್ತು ಭೂಮಿಯ ಸಂಯುಕ್ತ ಆಶಯವನ್ನು ಪ್ರತಿನಿಧಿಸುವ ದೇವಾಲಯದ ಪಶ್ಚಿಮ ಭಾಗ ಬಾನಿನ ದೇವತೆ ಗಿಡುಗನ ಮುಖದ ಹೋರಸ್‌ಗೆ ಸಮರ್ಪಿತವಾದರೆ, ಪೂರ್ವ ಭಾಗ ನೆಲದೊಡೆಯ ಮೊಸಳೆ ಮುಖದ ಸೋಬೆಕ್‌ಗೆ ಅರ್ಪಿತವಾಗಿದೆ.

ಫಲವತ್ತಾದ ಮಣ್ಣನ್ನು ಹೊತ್ತು ತರುತ್ತಿದ್ದ ನೈಲ್‌ ನದಿಯ ಕಾರಣದಿಂದ ಈ ಪ್ರದೇಶವು ಹಿಂದೆ ಕೃಷಿಕರಿಗೆ ಅನುಕೂಲಕರವಾಗಿತ್ತು. ಆಸ್ವಾನ್‌ನ ಡ್ಯಾಂ ಎತ್ತರವಾಗುತ್ತಿದ್ದಂತೆ ನೈಲ್‌ ಸಾಕಷ್ಟು ಪ್ರದೇಶವನ್ನು ಅತಿಕ್ರಮಿಸಿತು.

ದೇವಾಲಯದ ಪ್ರವೇಶ ಭಾಗವು ಉಕ್ಕೇರುತ್ತಿದ್ದ ನೈಲ್‌ ನದಿ ಹಾಗೂ ಕಾಲನ ಹೊಡೆತಕ್ಕೆ ಸಿಕ್ಕು ಮುಕ್ಕಾಗಿದೆ. ಭವ್ಯವಾದ ಹೈಪೋಸ್ಟೈಲ್ ಹಜಾರವಿದ್ದು, ಬೃಹತ್‌ ಕೆತ್ತನೆಗಳುಳ್ಳ ಕಂಬಗಳು ಬೆರಗುಂಟು ಮಾಡುತ್ತವೆ. ಕಂಬಗಳ ತುದಿಯನ್ನು ಕಮಲದ ಆಕೃತಿಯಂತೆ ಕೆತ್ತಲಾಗಿದೆ.

ನವ ನುಬಿಯಾ
1971ರಲ್ಲಿ ಆಸ್ವಾನ್‌ನಲ್ಲಿ ಹೈಡ್ಯಾಮ್‌ ನಿರ್ಮಾಣ ಕಾಮಗಾರಿ ಪ್ರಾರಂಭಿಸಿದಾಗ, ನುಬಿಯಾದ ನೈಲ್‌ ದಂಡೆಯ ಹಳ್ಳಿಗಳು ಮುಳುಗಡೆಯ ಆತಂಕ ಎದುರಿಸಿದವು. ಮುಳುಗಡೆ ಪ್ರದೇಶದ ಸುಮಾರು 50 ಸಾವಿರ ಜನರಿಗೆ ಈಜಿಪ್ಟ್‌ ಸರ್ಕಾರ ಕೊಮ್‌ ಒಂಬೋ ಸುತ್ತಮುತ್ತ ವಾಸಿಸಲು ಅನುಕೂಲ ಮಾಡಿಕೊಟ್ಟಿತು. ಆ ಪ್ರದೇಶವನ್ನು ‘ನವ ನುಬಿಯಾ’ (ನ್ಯೂ ನುಬಿಯಾ) ಎನ್ನುತ್ತಾರೆ.

ನುಬಿಯನ್ನರ ಕಲಾಕೃತಿಗಳು, ವಸ್ತ್ರಗಳು ಮುಂತಾದವುಗಳನ್ನು ಪ್ರವಾಸಿಗರಿಗೆ ಮಾರಲು ದೇವಾಲಯದ ಬಳಿ ಅಂಗಡಿಗಳನ್ನು ಸರ್ಕಾರ ನಿರ್ಮಿಸಿಕೊಟ್ಟಿದೆ. ಈಜಿಪ್ಟ್‌ ಸರ್ಕಾರದ ಆಂತರಿಕ ಸಂಘರ್ಷದಿಂದ ಪ್ರವಾಸಿಗರ ಸಂಖ್ಯೆ ಇಳಿಮುಖಗೊಂಡಿರುವುದರಿಂದ, ಕ್ರೂಸ್‌ ಆಗಮಿಸುತ್ತಿದ್ದಂತೆಯೇ ದಂಡೆಯಲ್ಲಿ ತಮ್ಮ ವಸ್ತುಗಳೊಂದಿಗೆ ಕಾದುನಿಂತ ನುಬಿಯನ್ನರು ಕೊಳ್ಳುವಂತೆ ಕೂಗಿ ಕೂಗಿ ಪ್ರದರ್ಶಿಸುತ್ತಿರುತ್ತಾರೆ.

ನದಿಯ ಹರಿವಿನ ಅಳತೆ!
ದೇವಾಲಯದ ಆವರಣದಲ್ಲಿ ನೈಲ್‌ ನದಿಯ ಹರಿವನ್ನು, ಉಬ್ಬರ ಇಳಿತಗಳನ್ನು ಅಳೆಯುವ ನೈಲೋಮೀಟರ್‌ ಇದೆ. ಇದೊಂದು ಮೆಟ್ಟಿಲುಗಳುಳ್ಳ ಬಾವಿಯಂತಿದ್ದು, ಅದರಲ್ಲಿ ನೀರು ಎಷ್ಟು ಎತ್ತರದಲ್ಲಿದೆ ಎಂಬ ಲೆಕ್ಕಾಚಾರವನ್ನು ಪರಿಗಣಿಸಿ ಕೃಷಿಯ ಕಾರ್ಯವನ್ನು ನಡೆಸಲಾಗುತ್ತಿತ್ತು.

ಸುಮಾರು ಆರೂವರೆ ಸಾವಿರ ಕಿ.ಮೀ. ದೂರ ಹರಿದು ಬರುವ ನೈಲ್ ನದಿಯ ಕೊನೆಯ ತಾಣವೇ ಈಜಿಪ್ಟ್. ಅಷ್ಟು ದೂರದಿಂದ ತಾನು ಅಡಿ ಇಟ್ಟಲ್ಲೆಲ್ಲಾ ಹಸಿರು ಸಮೃದ್ಧಿಯನ್ನು ಚಿಮ್ಮಿಸುತ್ತಾ ಬರುವ ನೈಲ್‌ನದಿ ಕೈರೋದ ಬಳಿ ನಾಲ್ಕಾರು ಕವಲುಗಳಾಗಿ ಒಡೆದು ಅಲೆಗ್ಸಾಂಡ್ರಿಯಾ, ರೊಸೆಟ್ಟಾ, ಸೂಯಜ್‌, ಟ್ಯಾಸಿಸ್‌, ಬುಬುಸ್ಟಾ ಮುಂತಾದ ನಗರಗಳತ್ತ ಪಯಣ ಬೆಳೆಸಿ ಕಡೆಗೆ ಮೆಡಿಟರೇನಿಯನ್‌ ಸಮುದ್ರವನ್ನು ಸೇರುತ್ತದೆ.

ಆದರೆ ಒಂದು ಕಾಲದಲ್ಲಿ ನೈಲ್‌ ಇಷ್ಟು ಶಾಂತವಾಗಿರಲಿಲ್ಲ. ಅದಕ್ಕೆ ಅಡೆತಡೆಗಳೇ ಇರಲಿಲ್ಲ. ತನ್ನ ಮಾರ್ಗವನ್ನು ತಾನೇ ಕಂಡುಕೊಳ್ಳುತ್ತಿತ್ತು. ಇಂದು ಆಸ್ವಾನ್‌ ಬಳಿ ಹೈಡ್ಯಾಮ್‌ ಎಂಬ ಬೃಹತ್‌ ಜಲಾಶಯ ನೈಲ್‌ ಪ್ರವಾಹವನ್ನು ನಿಯಂತ್ರಿಸುತ್ತದೆ.

ಹಿಂದೆ ಸಾವಿರಾರು ವರ್ಷಗಳ ಹಿಂದೆ ನೈಲ್‌ ಹರಿವಿಗೆ, ರುದ್ರನರ್ತನಕ್ಕೆ, ಮನೋಗುಣಕ್ಕೆ ಅನುಗುಣವಾಗಿ ಈಜಿಪ್ಟಿನ ಋತುಮಾನಗಳು, ವ್ಯವಸಾಯ, ವಾಸಸ್ಥಾನ ಬದಲಾಗುತ್ತಿದ್ದವು. ಇಥಿಯೋಪಿಯಾ ಹಾಗೂ ದಕ್ಷಿಣ ಸೂಡಾನ್‌ನಲ್ಲಿ ಬೀಳುತ್ತಿದ್ದ ಮಾನ್ಸೂನ್‌ ಮಳೆಯಿಂದ ನೈಲ್‌ನದಿ ಉಕ್ಕುತ್ತಿತ್ತು.

ಈಜಿಪ್ಟಿನ ಮರಳುಗಾಡಿಗೆ ಉಕ್ಕಿ ಹರಿವ ನೈಲ್‌ ಫಲವತ್ತಾದ ಕಪ್ಪುಮಣ್ಣನ್ನು ಹೊತ್ತು ತರುತ್ತಿತ್ತು. ಪ್ರತಿವರ್ಷ ಸೆಪ್ಟೆಂಬರ್‌ ಸುಮಾರಿನಲ್ಲಿ ಬರುತ್ತಿದ್ದ ಪ್ರವಾಹ ಅಕ್ಟೋಬರ್‌ ಅಂತ್ಯದಲ್ಲಿ ತಗ್ಗುತ್ತಿತ್ತು. ಆ ಮಣ್ಣಿನಲ್ಲಿ ಹಿಡಿದಿಡಲ್ಪಟ್ಟ ನೈಲ್‌ ನದಿ ನೀರು ಒಂದು ಬೆಳೆಗಾಗುತ್ತಿತ್ತು.

ಕಾಲ ಕ್ರಮೇಣ ಈಜಿಪ್ಟಿನ ಜನತೆ ನೈಲ್‌ನ ಪ್ರವಾಹವನ್ನು ಅಳೆಯಲು ಆರಂಭಿಸಿದರು. ಅದಕ್ಕೆ ಅನುಗುಣವಾಗಿ ಕಾಲುವೆಗಳನ್ನು ಸಣ್ಣಪುಟ್ಟ ಕೆರೆಗಳನ್ನು ನಿರ್ಮಿಸಿ ನೀರನ್ನು ಶೇಖರಿಸುತ್ತಿದ್ದರು. ನೈಲ್‌ ಪ್ರವಾಹವನ್ನು ಅಳೆಯುತ್ತಿದ್ದ ನೈಲೋ ಮೀಟರ್‌ಗಳನ್ನು ಇಂದಿಗೂ ಈಜಿಪ್ಟ್‌ನಾದ್ಯಂತ ಅಲ್ಲಲ್ಲಿ ಕಾಣಬಹುದು.

ಕಲ್ಲಿನ ಬಾವಿಗಳನ್ನು ನಿರ್ಮಿಸಿ ಅದರಲ್ಲಿ ಗೆರೆಗಳನ್ನು ಕೊರೆದು ನೈಲ್‌ ನದಿ ಪ್ರವಾಹ ಯಾವ್ಯಾವ ತಿಂಗಳಿನಲ್ಲಿ ಎಷ್ಟೆಷ್ಟು ಇರುತ್ತದೆ ಎಂಬುದರ ಆಳವಾದ ಅಧ್ಯಯನ ನಡೆಸುತ್ತಿದ್ದರು.

ನೈಲ್‌ನದಿಯ ತುಂಬು ಪ್ರವಾಹದ ಸಮಯದಲ್ಲಿಯೇ ಪಿರಮಿಡ್‌ಗಳ ಕಲ್ಲುಗಳನ್ನು, ಲಕ್ಸರ್‌, ಕಾರ್ನಾಕ್‌, ಅಲೆಗ್ಸಾಂಡ್ರಿಯಾ, ಮೆಂಫಿಸ್‌, ಸಕಾರ ಮುಂತಾದೆಡೆ ನಿರ್ಮಿಸಿರುವ ಬೃಹತ್‌ ವಾಸ್ತುಶಿಲ್ಪದ ಶಿಲೆಗಳನ್ನು ಸಾಗಿಸಿದ್ದರು.

ಕೆತ್ತನೆಗಳ ಆಗರ
ಕೊಮ್‌ ಒಂಬೋ ದೇವಾಲಯದ ಗೋಡೆಗಳ ಮೇಲೆ ರಾಜದೇವರುಗಳಾದ ಹೋರಸ್‌ ಮತ್ತು ಸೋಬೆಕ್‌ಗೆ ವಿವಿಧ ಕಾಣಿಕೆಗಳನ್ನು ನೀಡುತ್ತಿರುವುದನ್ನು ಬಗೆಬಗೆಯಲ್ಲಿ ಕೆತ್ತಲಾಗಿದೆ.

‘ರಾ’ ದೇವತೆ ರಾಜ ರಾಣಿಯರನ್ನು ಮುಂದಿಟ್ಟುಕೊಂಡು ಪ್ಯಾಪಿರಸ್‌ ಕಾಗದದ ಮೇಲೆ ಬರೆಯುತ್ತಿರುವುದು, ಮಗುವನ್ನು ಹೆರುತ್ತಿರುವ ಹೆಣ್ಣು, ಬುದ್ಧಿ, ಬದುಕು, ಸಾವು ಮತ್ತು ಪುನರ್ಜನ್ಮವನ್ನು ಪ್ರತಿನಿಧಿಸುವ ಪ್ರಾಣಿಗಳ ಚಿತ್ರಣ, ಈಜಿಪ್ಟ್‌ ಅರಸರಂತೆ ತಮ್ಮ ಹೆಸರನ್ನು ದೇವನಾಮದೊಂದಿಗೆ ಗ್ರೀಕ್‌ ಮೂಲದ ಟಾಲೆಮಿ ರಾಜ ಕಾರ್ತೂಷ್‌ನಲ್ಲಿ ಕೆತ್ತಿಸಿಕೊಂಡಿರುವುದು, ವೈದ್ಯಕೀಯ ಶಸ್ತ್ರ ಚಿಕಿತ್ಸೆಯ ಉಪಕರಣಗಳು, ನೈಲ್‌ ನದಿಯ ಅಳತೆಯ ಗಣಿತದ ಲೆಕ್ಕಾಚಾರಗಳು, ಚಿತ್ರಣ ರೂಪದ ಹೈರೋಗ್ರಫಿಕ್‌ ಬರಹಗಳು ಕಲ್ಲಿನ ಗೋಡೆಗಳಲ್ಲಿ ಕೆತ್ತಲ್ಪಟ್ಟಿದೆ.

ನೈಲ್‌ ನದಿಯಿಂದಾಗಿ ನಡೆಯುತ್ತಿದ್ದ ಜನರ ಬದುಕು, ಬವಣೆ, ಲೆಕ್ಕಾಚಾರ, ದೈವ ನಂಬಿಕೆ, ಭಾಷೆ, ಆಚಾರ, ವಿಚಾರ, ಸಂಸ್ಕೃತಿ, ಆಡಳಿತ ಮುಂತಾದವುಗಳನ್ನು ತಿಳಿಸುತ್ತಾ ಇತಿಹಾಸದ ಪ್ರಮುಖ ಸ್ಥಳವಾಗಿದೆ ಕೊಮ್‌ ಒಂಬೋ.

ಮಾನವನ ಅಪಾರ ಸಾಧ್ಯತೆಗಳನ್ನು ಬೃಹತ್‌ ದೇವಾಲಯ ಪ್ರತಿನಿಧಿಸಿದರೆ, ನೀರಿನಲ್ಲಿದ್ದ ಮೊಸಳೆ ಮ್ಯೂಸಿಯಂ ಸೇರಿರುವುದು ಮನುಷ್ಯನ ದುರಾಸೆಯನ್ನು ಸೂಚಿಸುವಂತಿದೆ.

ಮಮ್ಮಿ ಮೊಸಳೆ!
ದೇವಾಲಯದ ಹೊರಗೆ ಮೊಸಳೆಗಳ ಮ್ಯೂಸಿಯಂ ಇದೆ. ಅಲ್ಲಿ ಸುಮಾರು 40 ಮಮ್ಮೀಕರಿಸಿರುವ ಮೊಸಳೆಗಳನ್ನು ನೋಡಬಹುದು. ಹದಿನಾರು ಅಡಿಗಳಷ್ಟು ಉದ್ದವಿರುವ ಮೊಸಳೆಗಳನ್ನಿಲ್ಲಿ ಮಮ್ಮೀಕರಿಸಿ ಇಡಲಾಗಿದೆ.

ಹಿಂದೆ ಮೊಸಳೆಯ ಮುಖದ ಸೋಬೆಕ್‌ ದೇವರ ಅಂಶವೆಂದು ದೇವಾಲಯದಲ್ಲಿದ್ದ ಕೊಳದಲ್ಲಿ ಮೊಸಳೆಗಳನ್ನು ಸಾಕಲಾಗುತ್ತಿತ್ತಂತೆ. ನದಿಯ ದಂಡೆಯಲ್ಲೂ ಸಾಕಷ್ಟು ಮೊಸಳೆಗಳಿದ್ದವು. ಆದರೆ ಮನುಷ್ಯನ ಬೇಟೆಯಿಂದ ಅವುಗಳೆಲ್ಲ ನಿರ್ನಾಮವಾಗಿ ಕೇವಲ ಮ್ಯೂಸಿಯಂ ಮತ್ತು ದೇಗುಲದ ಗೋಡೆಗಳ ಮೇಲಿನ ಕೆತ್ತನೆಗಳಲ್ಲಿ ಮಾತ್ರ ಉಳಿದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT