ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಕ್ರಾಂತಿಕಾರಿ

ಮಿನುಗು ಮಿಂಚು
Last Updated 27 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಭಾರತದ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಅನೇಕ ದೇಶಭಕ್ತರು ಬ್ರಿಟಿಷರ ವಿರುದ್ಧ ತಮ್ಮ ಜೀವವನ್ನೂ ಲೆಕ್ಕಿಸದೆ ಹೋರಾಡಿದರು.

ಹತ್ತೊಂಬತ್ತನೇ ಶತಮಾನದ ಕೊನೆಯಲ್ಲಿ ಡೆಕ್ಕನ್‌ ಪ್ರಾಂತದಲ್ಲಿ ತೀವ್ರ ಬರಗಾಲ ಉಂಟಾಯಿತು. ಕ್ಷಾಮದಿಂದಾಗಿ ಅನೇಕ ಕೃಷಿಕರು ಹೊಟ್ಟೆಗೆ ತಿನ್ನಲು ಏನೂ ಇಲ್ಲದೆ ಪರದಾಡಿದರು. ವಾಸುದೇವ್‌ ಬಲವಂತ್‌ ಫಡ್ಕೆ ಈ ಪರಿಸ್ಥಿತಿ ಕಂಡು ನೊಂದಿದ್ದಷ್ಟೇ ಅಲ್ಲ; ಕೆಚ್ಚಿನಿಂದ ಹೋರಾಟಕ್ಕೆ ಮುಂದಾದರು.

ಬ್ರಿಟಿಷ್‌ ಸರ್ಕಾರದಲ್ಲಿ ಕಾರಕೂನನಾಗಿ ಕೆಲಸ ಮಾಡಿದ ಅನುಭವ ಇದ್ದ ಅವರು ಮಹಾದೇವ್‌ ಗೋವಿಂದ್‌ ರಾನಡೆ ನೀಡಿದ ಭಾಷಣಗಳಿಂದ ಸ್ಫೂರ್ತಿಗೊಂಡಿದ್ದರು. ಬ್ರಿಟಿಷರು ಭಾರತದ ಮೇಲೆ ಯಾವ ರೀತಿ  ಶೋಷಣೆ ನಡೆಸುತ್ತಿದ್ದಾರೆ ಎನ್ನುವುದರ ಕುರಿತು ಅವರ ಭಾಷಣಗಳು ಬೆಳಕು ಚೆಲ್ಲಿದ್ದವು.

ಫಡ್ಕೆ ಸಶಸ್ತ್ರ ಹೋರಾಟದಲ್ಲಿ ನಂಬಿಕೆ ಇಟ್ಟವರು. 300 ಪುರುಷರ ತಂಡವೊಂದನ್ನು ಕಟ್ಟಿಕೊಂಡರು. ರಾಮೋಶಿ, ಕೋಲೀಗಳು, ಭಿಲ್‌ಗಳು, ಢಂಗಾರರು ಮೊದಲಾದ ಜಾತಿಯವರನ್ನು ಸೇರಿಸಿಕೊಂಡು ಅವರಿಗೆ ಗೆರಿಲ್ಲಾ ಯುದ್ಧದ ತರಬೇತಿ ನೀಡಿದರು. ಬ್ರಿಟಿಷರ ಖಜಾನೆಗಳು, ಅವರಲ್ಲಿನ ಶ್ರೀಮಂತರು. ಲೇವಾದೇವಿದಾರರ ಮನೆಗಳಿಗೆ ದಾಳಿ ಇಟ್ಟು, ಸಂಪತ್ತನ್ನು ಲೂಟಿ ಮಾಡಿದರು.

ಫಡ್ಕೆ ಹಾಗೂ ಅವರು ಕಟ್ಟಿದ ತಂಡದ ದಾಳಿಗಳಿಂದ ಬ್ರಿಟಿಷರು ಕಂಗಾಲಾದರು. ಹಿಡಿದುಕೊಟ್ಟವರಿಗೆ ಸೂಕ್ತ ಬಹುಮಾನ ಕೊಡಲಾಗುವುದಾಗಿ ಘೋಷಿಸಿದರು. ಹಳ್ಳಿಯಿಂದ ಹಳ್ಳಿಗೆ ಹೋಗುತ್ತಾ ಅಲೆಮಾರಿಯಂತೆ ಬದುಕಿದ ಫಡ್ಕೆ, ಅರಣ್ಯ ಪ್ರದೇಶದಲ್ಲಿ ತಂಗುತ್ತಿದ್ದುದೂ ಉಂಟು.

ಗುಹೆಗಳು, ದೇವಾಲಯಗಳಲ್ಲಿ ರಾತ್ರಿಗಳನ್ನು ಕಳೆದಿದ್ದೂ ಇದೆ. ಒಬ್ಬ ಅನುಯಾಯಿಯೇ ಮಾಡಿದ ಮೋಸದಿಂದ ಅವರನ್ನು ಹಿಡಿದುಕೊಟ್ಟ. 1879ರ ಜುಲೈ 20ರಂದು ಫಡ್ಕೆಯವರು ಬಾಗಲಕೋಟೆಯ ದೇವಸ್ಥಾನವೊಂದರಲ್ಲಿ ಸೆರೆಸಿಕ್ಕರು.

ಫಡ್ಕೆ ಹಾಗೂ ಅವರ ಸಹಚರರನ್ನು ವಿಚಾರಣೆಗೆ ಒಳಪಡಿಸಿ, ಬ್ರಿಟಿಷ್‌ ಸರ್ಕಾರದ ವಿರುದ್ಧ ಯುದ್ಧದ ಹುನ್ನಾರ ನಡೆಸಿದ್ದಾರೆ ಎಂದು ತೀರ್ಪು ನೀಡಲಾಯಿತು. ಜೀವಾವಧಿ ಶಿಕ್ಷೆ ಅನುಭವಿಸಬೇಕಾಯಿತು. ಭಾರತದ ಸೆರೆಮನೆಯಲ್ಲಿ ಫಡ್ಕೆ ಇರುವುದು ಅಪಾಯ ಎಂದು ಭಾವಿಸಿದ ಬ್ರಿಟಿಷರು ಯೆಮನ್‌ನ ಸೆರೆಮನೆಗೆ ಕಳುಹಿಸಿದರು.

ಬಾಗಿಲನ್ನೇ ಮುರಿದು ಅಲ್ಲಿಂದ ಪರಾರಿಯಾಗಲು ಫಡ್ಕೆ ಒಮ್ಮೆ ಯತ್ನಿಸಿದ್ದರು. ಆದರೆ, ಅವರನ್ನು ಮತ್ತೆ ಬಂಧಿಸಿದರು. ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ ಫಡ್ಕೆ ಯಾವ ಹಿಂಸೆಗೂ ಮಣಿಯಲಿಲ್ಲ. 1883ರ ಫೆಬ್ರುವರು 17ರಂದು ಅವರು ಕೊನೆಯುಸಿರೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT