ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು

Last Updated 27 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಜೆನ್‌ ಮಹಾಯಾನ
ಲೇ: ಆರ್‌.ಡಿ. ಹೆಗಡೆ ಆಲ್ಮನೆ
ಪ್ರ: ನವಕರ್ನಾಟಕ ಪ್ರಕಾಶನ, ಎಂಬೆಸಿ ಸೆಂಟರ್‌, ಕ್ರೆಸೆಂಟ್‌ ರಸ್ತೆ, ಬೆಂಗಳೂರು– 560 001


ಬೌದ್ಧಧರ್ಮದ ಒಂದು ಶಾಖೆಯಾದ ಜೆನ್‌ ‘ಧರ್ಮವಲ್ಲದ ಧರ್ಮ’ವಾಗಿ ಗುರುತಿಸಿಕೊಂಡಿದೆ. ಅದೊಂದು ಬದುಕುವ ವಿಧಾನ. ಸಾವಿರಾರು ವರ್ಷಗಳಿಂದ ಬುದ್ಧನಿಂದ ಬೋಧಿಧರ್ಮನವರೆಗೆ ವಿಕಾಸಗೊಳ್ಳುತ್ತ ಬಂದಿರುವ ಜೆನ್‌ ಬಗ್ಗೆ ವಿದ್ವಾಂಸರಾದ ಆರ್‌.ಡಿ. ಹೆಗಡೆ ಆಲ್ಮನೆ ಇಲ್ಲಿ ಬರೆದಿದ್ದಾರೆ.

ಜೆನ್‌ ಅನ್ನು ಅಭ್ಯಾಸ ಮಾಡುತ್ತ, ಅದರೊಂದಿಗೆ ಒಡನಾಡುತ್ತ, ಧೇನಿಸುತ್ತ ಅದರೊಳಗೆ ಮಾಡಿದ ‘ಮಹಾಯಾನ’ದ ಅನುಭವವನ್ನು ಅವರು ಇಲ್ಲಿ ದಾಖಲಿಸಿದ್ದಾರೆ. ಇದು ಮಾತ್ರವಲ್ಲದೇ ಅವರು ಜೆನ್‌ನ ಕಡೆ ತೋರುಬೆರಳು ಇಟ್ಟು ಅದನ್ನು ಅವರಿಗೆ ಹತ್ತಿರವಾಗಿಸಿದ ಜೆನ್‌ ಸಾಧಕ ಚಿನ್ನಪ್ಪ ಅವರ ಬಗ್ಗೆಯೂ ಇಲ್ಲಿ ಬರೆದಿದ್ದಾರೆ. ಇದು ಹೆಗಡೆ ಅವರ ತಾತ್ವಿಕ ಹುಡುಕಾಟದ ಫಲವಾಗಿದೆ.

ಇಲ್ಲಿ ಸ್ಥೂಲವಾಗಿ ಜೆನ್‌ ಬೆಳೆದು ಬಂದ ಬಗೆ ಹಾಗೂ ಬದಲಾದ ಅದರ ಸ್ವರೂಪದ ಅಧ್ಯಯನವನ್ನು ಲೇಖಕರು ಕೊಟ್ಟಿದ್ದಾರೆ. ಜೊತೆಗೆ ಕನ್ನಡಕ್ಕೆ ಅನುವಾದಗೊಂಡ ಜೆನ್‌ ಸಾಹಿತ್ಯದ ಬಗ್ಗೆಯೂ ಅವರು ಅಲ್ಲಲ್ಲಿ ಉಲ್ಲೇಖಿಸಿದ್ದಾರೆ. ಈಗಂತೂ ಜೆನ್‌ ಜಗತ್ತಿನ ಎಲ್ಲ ಕಡೆ, ಹಲವು ರೀತಿಗಳಲ್ಲಿ ಕಾಣಿಸಿಕೊಳ್ಳುತ್ತಿದೆ.

ಅದರ ಕಡೆಗೆ ಜನರು ಆಕರ್ಷಿತರಾಗುವುದೂ ಹೆಚ್ಚಾಗುತ್ತಿದೆ. ಅದು ಹೇಗೆ ಪ್ರಸ್ತುತ ಮತ್ತು ಈ ಕಾಲದ ಅಗತ್ಯ ಎಂಬುದನ್ನು ಈ ಪುಸ್ತಕ ಉದ್ದಕ್ಕೂ ನಿರೂಪಿಸುತ್ತ ಹೋಗುತ್ತದೆ. ಜೆನ್‌ನಲ್ಲಿ ‘ಕೋಅನ್’ಗಳು (ಕತೆ, ಪ್ರಸಂಗ, ಪ್ರಶ್ನೆ, ಸಂವಾದ, ಒಗಟು) ಮುಖ್ಯ.

ಮನುಷ್ಯನ ಅರಿವಿಗೆ ದಾರಿಯಾಗುವ, ಜ್ಞಾನದ ಕಿಡಿಯನ್ನು ಹೊತ್ತಿಸುವ ಈ ಕೋಅನ್‌ಗಳನ್ನು ಇಲ್ಲಿ ಕೊಡಲಾಗಿದೆ. ಒಂದು ಕೋಅನ್‌ ಹೀಗಿದೆ: ‘ಯಾವುದನ್ನು ಲೋಕ ಕಣ್ಣನ್ನು ಅರಳಿಸಿ ನೋಡಿದರೂ ಕಾಣಲರಿಯದೋ ಅದನ್ನು ಸಂತ ಕಣ್ಣು ಮುಚ್ಚಿ ಕಾಣುತ್ತಾನೆ’
(ಪು. 122).

ಯಾವುದೇ ಬೋಧನೆ, ತತ್ವ, ನಿರ್ದಿಷ್ಟ ಸೂತ್ರ, ಕಟ್ಟುಪಾಡುಗಳಿಲ್ಲದ, ಬದುಕಿನಲ್ಲಿ ಮನುಷ್ಯ ಮುಕ್ತವಾಗಿ, ನಿರಾಳವಾಗಿ ಇರುವಂತೆ ಮಾಡುವುದು ಜೆನ್‌ನ ಜನಪ್ರಿಯತೆಗೆ ಕಾರಣವಿರಬಹುದು.

ಮನುಷ್ಯನ ಧ್ಯಾನಸ್ಥ ಬದುಕಿಗೆ ತೀರ ಸಮೀಪವಾದ ಈ ಜೆನ್‌ನ ವಿಮರ್ಶಾತ್ಮಕ, ವಸ್ತುನಿಷ್ಠ ಬರವಣಿಗೆ ಅದರ ಚರಿತ್ರೆಯನ್ನು, ಎಲ್ಲ ಆಯಾಮಗಳನ್ನು, ಕಣ್ಣೆದುರು ಇಡುತ್ತದೆ. ಇಲ್ಲಿ ಲೇಖಕರು ಕೊಟ್ಟಿರುವ ಜೆನ್‌ವಚನ ಒಂದರ ಮಿಂಚು ಮನದಲ್ಲಿ ಬೆಳಕಿನ ಅಲೆಗಳನ್ನು ಮೂಡಿಸಬಹುದು: ‘ಪಾದಕ್ಕೆ ಶೂ ಸರಿಯಾದರೆ ಪಾದ ಮರೆತುಹೋಗುತ್ತದೆ’ (ಪು. 96).

*
ಪಾರಿಜಾತದ ಬಿಕ್ಕಳಿಕೆ
ಲೇ: ಉಷಾ ಕಟ್ಟೆಮನೆ
ಪ್ರ: ಅಹರ್ನಿಶಿ ಪ್ರಕಾಶನ, ಜ್ಞಾನವಿಹಾರ
ಬಡಾವಣೆ, ಕಂಟ್ರಿ ಕ್ಲಬ್‌ ಎದುರು, ವಿದ್ಯಾನಗರ, ಶಿವಮೊಗ್ಗ–577203


ಬದುಕಿನಲ್ಲಿ ಪ್ರತಿನಿತ್ಯ ಬಂದು ಹಾಗೆಯೇ ಹಾದುಹೋಗುವ ಭಾವನೆ, ಸ್ಪಂದನ, ನೆನಪು, ತಲ್ಲಣಗಳನ್ನು ಹಿಡಿದಿಟ್ಟಿವೆ ಉಷಾ ಕಟ್ಟೆಮನೆಯವರ ‘ಪಾರಿಜಾತದ ಬಿಕ್ಕಳಿಕೆ’ಯ ಪ್ರಬಂಧಗಳು.

ಪಾರಿಜಾತ ಹೂವಿನ ಶುಭ್ರ ಬಿಳುಪು, ಅದರ ಹಗುರುತನ ಹಾಗೂ ನೋವು ಎರಡೂ ಒಂದಕ್ಕೊಂದು ಬೆಸೆದು ಬಂದಿರುವ ಇಲ್ಲಿನ ಬರಹಗಳು ಹೆಣ್ಣಿನ ಅಂತಃಕರಣದಿಂದ ಪ್ರತಿಫಲನಗೊಂಡ ಬಿಂಬಗಳಾಗಿ ಮೂಡಿವೆ.

ಇಲ್ಲಿ ಬರಹಗಳು ಹಗುರವಾಗಿವೆ, ನಿಜ. ಆದರೆ ಅವು ಒಳಗೊಂಡ ವಿಷಯಗಳು ಹಗುರವಲ್ಲ. ಪ್ರೀತಿಯ ಬಗ್ಗೆಯೇ ಬರೆಯಲಿ, ಬಾಲ್ಯದ ಕುರಿತು ಹೇಳಿಕೊಳ್ಳಲಿ, ಮಳೆಯ ಅನಂತ ನೆನಪಿನ ಬಗ್ಗೆಯೇ ಬರೆಯಲಿ, ಕೆಂಪಿ ಎಂಬ ದನವನ್ನೇ ಚಿತ್ರಿಸಲಿ - ಅವೆಲ್ಲ ಲೇಖಕಿಯ ಭಾವಜಗತ್ತಿನಿಂದ ಹಾದು ಬಂದು ಓದುಗರ ಮನಸ್ಸನ್ನು ಮುಟ್ಟುವ ಬರಹಗಳಾಗಿವೆ.

ಇಲ್ಲಿನ ಬಹುತೇಕ ಪ್ರಬಂಧಗಳು ಗಂಡುಹೆಣ್ಣಿನ ಸಂಬಂಧ, ಪ್ರೀತಿಯ ಬಗ್ಗೆ ಮಾತನಾಡುತ್ತವೆ. ಅದರ ನಡುವೆ ಲೇಖಕಿಯ ದಟ್ಟ ಹಸುರಿನ ಕಾಡಿನಂತಿರುವ ಬಾಲ್ಯವಿದೆ. ಇವೆಲ್ಲ ಓದುಗರಿಗೆ ಭಾವಪರವಶಗೊಳಿಸುವ, ಮೋಹಕ ವಸ್ತುಗಳು.

ಈ ಪ್ರಬಂಧಗಳದು ಒಂದು ಬಗೆಯ ಸಂಚಾರಿ ಭಾವಗಳ ಸಂಚಾರ. ನಮ್ಮನ್ನು ಆಗಾಗ ಆಕರ್ಷಿಸುವ ಕೆಲವೇ ಸಂಗತಿಗಳ ಸುತ್ತಲೇ ಉಷಾ ಅವರ ಪ್ರಬಂಧಗಳ ಹೆಣಿಗೆ ಇರುವುದನ್ನು ಕಾಣಬಹುದು.

ಅಪ್ಪಟ ಹೆಣ್ಣುತನದ ಸ್ಪರ್ಶವಿರುವ ಉಷಾ ಅವರ ಇಲ್ಲಿನ ಪುಟ್ಟ ಬರಹಗಳು ನಾವು ಕಂಡೇ ಇಲ್ಲದ ಹೊಸ ಜಗತ್ತನ್ನು ಕಾಣಿಸುವುದಿಲ್ಲವಾದರೂ ಕೆಲಕಾಲ ಮುದಗೊಳಿಸುವ, ಉಲ್ಲಸಿತಗೊಳಿಸುವ ಶಕ್ತಿಯನ್ನು ಪಡೆದಿವೆ. ಅದರ ಹಿಂದಿರುವುದು ಅವರ ಸ್ಫಟಿಕದ ಶಲಾಕೆಯಂತಿರುವ ಭಾಷೆ, ಲವಲವಿಕೆಯ
ನಿರೂಪಣೆ.

*
ಅಪರಾಧ ತನಿಖಾ ಮಾರ್ಗದರ್ಶಿ
ಲೇ: ಮಹಮ್ಮದ್‌ ಬುಡಾನ್‌
ಪ್ರ: ಮಹಮ್ಮದ್ ಬುಡಾನ್, ನಂ. 463ಎಂ, ಎಂ.ಜಿ. ಬಡಾವಣೆ, ಮಾಗಡಿ ರಸ್ತೆ, ಬೆಂಗಳೂರು- 560 023


ಪೊಲೀಸ್‌ ನಿರೀಕ್ಷಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವ ಮಹಮ್ಮದ್‌ ಬುಡಾನ್‌ ‘ಅಪರಾಧ ಮಾರ್ಗದರ್ಶಿ’ಯನ್ನು ಬರೆದಿದ್ದಾರೆ. ಇದು ಅಪರಾಧಗಳಿಗೆ ಸಂಬಂಧಿಸಿದ ಕಾನೂನು, ಕಲಂಗಳು ಮತ್ತು ತನಿಖಾ ಪ್ರಕ್ರಿಯೆಗಳನ್ನು ಒಳಗೊಂಡಿದೆ. ಇದರೊಂದಿಗೆ ನ್ಯಾಯಾಲಯದ ತೀರ್ಪುಗಳನ್ನೂ ಇಲ್ಲಿ ಕೊಡಲಾಗಿದೆ.

ಒಂದು ಅಪರಾಧ ನಡೆದ ಬಳಿಕ ತನಿಖಾಧಿಕಾರಿ ನಡೆಸುವ ತನಿಖೆಯ ಆಧಾರದ ಮೇಲೆ ಆರೋಪಿಗೆ ಆಗುವ ಶಿಕ್ಷೆಯ ಸ್ವರೂಪ ನಿರ್ಧರಿತವಾಗುತ್ತದೆ. ಹಾಗಾಗಿ ತನಿಖೆಗೆ ಬಹಳ ಮಹತ್ವವಿದೆ.

ತಮ್ಮ ವೃತ್ತಿ ಅನುಭವ, ಕುಶಲತೆಯನ್ನು ಆಧರಿಸಿ, ಕಾನೂನಿನ ಚೌಕಟ್ಟಿನಲ್ಲಿ ನಡೆಸುವ ತನಿಖೆಯ ಸಮಗ್ರ ನೋಟವನ್ನು ಬುಡಾನರು ಇಲ್ಲಿ ಕೊಟ್ಟಿದ್ದಾರೆ. ಇದು ಅಪರಾಧಗಳ ವಿವರಗಳನ್ನು, ಅವುಗಳ ತನಿಖೆಯ ಹಂತಗಳನ್ನು, ತನಿಖಾಧಿಕಾರಿಯ ಜವಾಬ್ದಾರಿಯನ್ನು ವಿವರವಾಗಿ ತಿಳಿಸುವ ಕೈಪಿಡಿಯಾಗಿದೆ.

ಇದು ಕಾನೂನಿನ ತಾಂತ್ರಿಕ ವಿವರಗಳೊಂದಿಗೇ ಪರಿಪೂರ್ಣ ತನಿಖೆಯನ್ನು ಹೇಗೆ ಮಾಡಬೇಕು ಎಂಬುದನ್ನು ನಿರ್ದೇಶಿಸುವ ಪುಸ್ತಕ. ಇಲ್ಲಿ ಸಾಕ್ಷಿದಾರರು, ಪಂಚನಾಮೆ, ಬಂಧನ ಪ್ರಕ್ರಿಯೆಗಳು, ಅವುಗಳಿಗೆ ಸಂಬಂಧಿಸಿದ ನ್ಯಾಯಾಲಯಗಳ ತೀರ್ಪುಗಳ ಸಾರಾಂಶವಿದೆ.

ಗಂಭೀರ ಪ್ರಕರಣಗಳಾದ ಸುಲಿಗೆ ಮತ್ತು ದರೋಡೆ ಪ್ರಕರಣಗಳು, ಕೊಲೆ, ಅಪಘಾತಗಳು, ಲೈಂಗಿಕ ಹಲ್ಲೆ, ಮಾನವ ಕಳ್ಳ ಸಾಗಾಣಿಕೆ, ಕಳವು, ಹಲ್ಲೆ ಮತ್ತಿತರ ಸಂಗತಿಗಳ ತನಿಖೆಯ ಕ್ರಮದ ಬಗ್ಗೆ ನಿಖರವಾದ ವಿವರಗಳನ್ನು ಕೊಡಲಾಗಿದೆ.

ಇದು ಮಾತ್ರವಲ್ಲ, ಸೈಬರ್‌ ಅಪರಾಧದ ಕುರಿತು, ಮಾಹಿತಿ ತಂತ್ರಜ್ಞಾನವನ್ನು ತನಿಖೆಯಲ್ಲಿ ಬಳಸಿಕೊಳ್ಳುವ ಬಗೆಯನ್ನೂ ಇಲ್ಲಿ ಕೊಡಲಾಗಿದೆ. ಪೊಲೀಸ್‌ ಇಲಾಖೆಗೆ ಅತ್ಯಂತ ಸೂಕ್ತ ಹಾಗೂ ಅಗತ್ಯವಾದ ವಿವರಗಳನ್ನು ಕೊಡುವ ಪುಸ್ತಕವಾಗಿ ಇದು ರೂಪುಗೊಂಡಿದೆ. ಅಪರಾಧ ತನಿಖೆಯಲ್ಲಿ ಆಸಕ್ತಿ ಇರುವ ಓದುಗರೂ ಇದನ್ನು ಒಮ್ಮೆ ಗಮನಿಸಬಹುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT